ಇ-ಪುಸ್ತಕಗಳು ಹತ್ತು ವರ್ಷಗಳ ಹಿಂದೆಸುದ್ದಿ ಮಾಡಲಾರಂಭಿಸಿದಾಗ...‘ಅವೆಲ್ಲ ಯಶಸ್ವಿಯಾಗಲ್ಲ, ಬಿಡಿ.ಗಂಟೆಗಟ್ಟಲೆ ಕಾದಂಬರಿ ಓದೋಕೆಯಾರು ಕಂಪ್ಯೂಟರ್ ಮುಂದೆ ಗೂಬೆಯ ಥರ ಕೂತಿರ್ತಾರೆ?ನಾವೇನು ಟಾಯ್ಲೆಟ್ಟಲ್ಲಿ ಕೂತು ಇ-ಪುಸ್ತಕ ಓದೋಕಾಗುತ್ತಾ?ಬೆಡ್ ಮೇಲೆ ಮಲಕ್ಕೊಂಡು,ರೈಲಿನಲ್ಲಿ ಹೋಗೋವಾಗ ಇ-ಪುಸ್ತಕ ಓದೋಕಾಗುತ್ತಾ?ಇ-ಪುಸ್ತಕ ಕಾಗದದ ಪುಸ್ತಕಕ್ಕೆ ಯಾವತ್ತೂ ಪರ್ಯಾಯವಾಗೋಲ್ಲ’ಎನ್ನುವ ಅಭಿಪ್ರಾಯವಿತ್ತು...
ಆ ಪುಸ್ತಕದ eಥರ್ ಯಾರು? eಥರ್ ಬರೆದ ಆ ಪುಸ್ತಕ ಬಂದಿದೆಯಾ? ಓಹ್... ಈ eಥರ್ ಯಾವ್ ಥರ ಬರೀತಾನೆ ಗೊತ್ತಾ? ನಾನು ಈ eಥರ್‌ನ ಫ್ಯಾನ್ -ಎಂದು ಕೇಳುವ ಕಾಲ ಕೊನೆಗೂ ಸನ್ನಿಹಿತವಾಗಿದೆ. ಆಥರ್‌ಗಳು e-ಥರ್‌ಗಳಾಗುತ್ತಿದ್ದಾರೆ. ಪುಸ್ತಕಲೋಕದಲ್ಲೂ ಡಿಜಿಟಲ್ ಗಾಳಿ ಜೋರಾಗಿಯೇ ಬೀಸಲಾರಂಭಿಸಿದೆ. e-ಪುಸ್ತಕಗಳ ಜಮಾನಾ ಆರಂಭವಾಗಿದೆ.
e-ಪುಸ್ತಕಗಳೆಂದರೆ ಎಲೆಕ್ಟ್ರಾನಿಕ್ ಪುಸ್ತಕಗಳು. ಅಂದರೆ, ಕಾಗದದ ಪುಸ್ತಕದ ಯಥಾವತ್ ಡಿಜಿಟಲ್ ರೂಪ. e-ಪುಸ್ತಕಗಳನ್ನು ಕಂಪ್ಯೂಟರ್ ಅಥವಾ ಡಿಜಿಟಲ್ ಸಾಧನಗಳಲ್ಲಿ ಮಾತ್ರ ಓದಲು ಸಾಧ್ಯ. ಈ e-ಪುಸ್ತಕ ಬರೆಯುವ ಲೇಖಕರನ್ನು ‘ಆಥರ್ ಬದಲು ಇ-ಥರ್’ ಎಂದು ಪನ್ ಮಾಡಬಹುದೇನೋ!
ಇ-ಪುಸ್ತಕಗಳು ಹತ್ತು ವರ್ಷಗಳ ಹಿಂದೆ ಸುದ್ದಿ ಮಾಡಲಾರಂಭಿಸಿದಾಗ... ‘ಅವೆಲ್ಲ ಯಶಸ್ವಿಯಾಗಲ್ಲ, ಬಿಡಿ. ಯಾರು ಗಂಟೆಗಟ್ಟಲೆ ಕಾದಂಬರಿ ಓದೋಕೆ ಕಂಪ್ಯೂಟರ್ ಮುಂದೆ ಗೂಬೆಯ ಥರ ಕೂತಿರ್ತಾರೆ? ನಾವೇನು ಟಾಯ್ಲೆಟ್ಟಲ್ಲಿ ಕೂತು e-ಪುಸ್ತಕ ಓದೋಕಾಗುತ್ತಾ? ಬೆಡ್‌ಮೇಲೆ ಮಲಕ್ಕೊಂಡು, ರೈಲಿನಲ್ಲಿ ಹೋಗೋವಾಗ e-ಪುಸ್ತಕ ಓದೋಕಾಗುತ್ತಾ? e-ಪುಸ್ತಕ ಕಾಗದದ ಪುಸ್ತಕಕ್ಕೆ ಯಾವತ್ತೂ ಪರ್ಯಾಯವಾಗೋಲ್ಲ’ ಎನ್ನುವ ಅಭಿಪ್ರಾಯವಿತ್ತು.
ಆದರೆ, ಈಗ ಪರಿಸ್ಥಿತಿ ಹಾಗಿಲ್ಲ. ಹೈಟೆಕ್ ಮೊಬೈಲ್ ಫೋನುಗಳು, ಅಂಗೈ ಅಗಲದ ಪಿಡಿಎಗಳು, e-ಪುಸ್ತಕ ರೀಡರ್‌ಗಳು ಬಂದಾಗಿನಿಂದ e-ಪುಸ್ತಕದ ಭರಾಟೆ ಜೋರಾಗಿದೆ.
ಅದರಲ್ಲೂ, ‘ಅಮೇಝಾನ್ ಕಿಂಡಲ್’ ಎಂಬ e-ಬುಕ್ ರೀಡರ್, ಪುಸ್ತಕ ಲೋಕದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದೆ. ಸಂಗೀತ ಕ್ಷೇತ್ರದಲ್ಲಿ ಐಪೋಡ್ ಸೃಷ್ಟಿಸಿದ ‘ಕೇಳಾಹಲ’ವನ್ನು ಪುಸ್ತಕ ಪ್ರಪಂಚದಲ್ಲಿ ಕಿಂಡಲ್ ಉಂಟು ಮಾಡಿದೆ. ಐಪೋಡ್ ಹೇಗೆ ಯುವ ಜನರ ಫ್ಯಾಷನ್ ಸ್ಟೇಟ್‌ಮೆಂಟ್ ಆಯಿತೋ, ಕಿಂಡಲ್ ಕೂಡ ಸ್ಟೈಲ್ ಐಕಾನ್ ಆಗಿದೆ. ಐಪೋಡ್ ಹೇಗೆ ಮಕ್ಕಳು ಹಾಗೂ ವಯಸ್ಕರಿಗೂ ಇಷ್ಟವಾಯಿತೋ ಹಾಗೇ ಕಿಂಡಲ್ ಕೂಡ ಎಲ್ಲ ವಯಸ್ಸಿನವರಿಗೂ ಇಷ್ಟವಾಗುತ್ತಿದೆ. ಐಪೋಡ್‌ನಿಂದ ಪ್ರಭಾವಿತವಾಗಿ ಹೇಗೆ ಹಲವಾರು ಕಂಪನಿಗಳು ಬೇರೆ ಬೇರೆ ರೀತಿಯ ಎಂಪಿ-ಥ್ರಿ ಸಂಗೀತ ಕೇಳಿಸುವ ಸಾಧನಗಳನ್ನು ಬಿಡುಗಡೆ ಮಾಡಿದವೋ ಹಾಗೇ, ಕಿಂಡಲ್‌ನಿಂದ ಪ್ರಬಾವಿತವಾಗಿ ಅನೇಕ ಕಂಪನಿಗಳು ಬೇರೆ ಬೇರೆ ರೀತಿಯ ಇ-ಪುಸ್ತಕ ಓದುವ ಸಾಧನಗಳನ್ನು ಬಿಡುಗಡೆ ಮಾಡುತ್ತಿವೆ. ರೈಲು, ಬಸ್ಸು, ವಿಮಾನ, ಕಚೇರಿ, ಮನೆ... ಹೀಗೆ ಎಲ್ಲೆಂದರಲ್ಲಿ ಐಪೋಡ್ ಹೇಗೆ ಕಾಣಿಸುತ್ತಿದೆಯೋ ಅದೇ ರೀತಿ ಕಿಂಡಲ್ ಎಲ್ಲೆಂದರಲ್ಲಿ ಕಾಣಿಸಲು ಆರಂಭಿಸಿದೆ. ಅಷ್ಟರ ಮಟ್ಟಿಗೆ ಕಿಂಡಲ್ಲನ್ನು ಪುಸ್ತಕ ಲೋಕದ ಐಪೋಡ್ ಅಂತ ಕರೆಯಬಹುದು.
ಥೇಟ್ ಪುಸ್ತಕ: ನೂರು ಪೇಜಿನ ಸಾಮಾನ್ಯ ಕವನ ಸಂಕಲನದಷ್ಟು ಗಾತ್ರದ ವಿದ್ಯುನ್ಮಾನ ಸಾಧನ ಈ ಕಿಂಡಲ್. ಪುಸ್ತಕದ ಹಾಳೆಗಿಂತ ತುಸು ಚಿಕ್ಕ ಪರದೆಯಲ್ಲಿ ಅಕ್ಷರ ಹಾಗೂ ಚಿತ್ರಗಳು ಕಾಣಿಸುತ್ತವೆ. ಒಂದು ಕಿಂಡಲ್‌ನಲ್ಲಿ ಸುಮಾರು ೨೦೦ ಕಾದಂಬರಿಗಳನ್ನು ತುಂಬಿಟ್ಟುಕೊಳ್ಳಬಹುದು. ಯಾವಾಗ ಬೇಕಾದರೂ, ಯಾವ ಪುಸ್ತಕ ಬೇಕೋ ಅದನ್ನು ‘ಓಪನ್’ ಮಾಡಿಕೊಂಡು ಮಾಮೂಲಿ ಪುಸ್ತಕದ ರಿತಿಯೇ ಓದಬಹುದು. ಟಾಯ್ಲೆಟ್ಟಲ್ಲೂ, ಹಾಸಿಗೆಯಲ್ಲೂ, ಬಸ್ಸು-ರೈಲಿನಲ್ಲೂ... ಎಲ್ಲೆಲ್ಲೂ ಥೇಟ್ ಪುಸ್ತಕ ಓದಿದ ರೀತಿಯೇ ಓದಬಹುದು.
Prev Page ಎಂಬ ಬಟನ್ ಒತ್ತಿದರೆ ಪುಟ ಮುಗುಚಿ ಹಿಂದಿನ ಪುಟ ತೆರೆದುಕೊಳ್ಳುತ್ತದೆ. Next Page ಎಂಬ ಬಟನ್ ಒತ್ತಿದರೆ, ಮುಂದಿನ ಪುಟ ತೆರೆದುಕೊಳ್ಳುತ್ತದೆ. ಹಾಗಾಗಿ, ಕಾಗದದ ಪುಸ್ತಕ ಓದಿದ ಸುಖವೇ ಸಿಗುತ್ತದೆ.
ಪುಸ್ತಕಕ್ಕಿಂತ ಉತ್ತಮ:
ಹಾಗೆ ನೋಡಿದರೆ, ಕಿಂಡಲ್‌ನಲ್ಲಿ ಕಾಗದದ ಪುಸ್ತಕಕ್ಕಿಂತ ಹೆಚ್ಚು ಅನುಕೂಲವಿದೆ. ಕನ್ನಡಕದ ಸಮಸ್ಯೆಯಿರುವವರು ಅಕ್ಷರ ಗಾತ್ರವನ್ನು ಹಿಗ್ಗಿಸಿಕೊಂಡು ಓದಬಹುದು.ಸರ್ಚ್ ಬಟನ್ ಒತ್ತಿ ಯಾವುದೋ ಒಂದು ಶಬ್ದಕ್ಕಾಗಿ ಇಡೀ ಪುಸ್ತಕವನ್ನು ಕ್ಷಣ ಮಾತ್ರದಲ್ಲಿ ಹುಡುಕಬಹುದು. ಯಾವುದೋ ಒಂದು ಶಬ್ದ ಅರ್ಥವಾಗದಿದ್ದರೆ ಕಿಂಡಲ್‌ನಲ್ಲೇ ನಿಘಂಟು ನೆರವು ಲಭ್ಯ. ಬ್ಯಾಕ್ ಲೈಟ್ ಆನ್ ಮಾಡಿ ಸಂಪೂರ್ಣ ಕತ್ತಲೆಯಲ್ಲೂ ಪುಸ್ತಕ ಓದಬಹುದು. ಓದಲು ಬೇಜಾರಾದರೆ, text-to-speech ಬಟನ್ ಒತ್ತಿದರೆ ಸಾಕು... ಕಿಂಡಲ್ ತಾನೇ ಪುಸ್ತಕವನ್ನು ಓದಿ ಹೇಳುತ್ತದೆ. ಪುಸ್ತಕ ಖರೀದಿಗೆ ಅಂಗಡಿಗೆ ಹೋಗುವ ಅಗತ್ಯವಿಲ್ಲ. ವೈರ್‌ಲೆಸ್ ಸಂಪರ್ಕದ ಮೂಲಕ ಒಂದೇ ನಿಮಿಷದಲ್ಲಿ ಇಡೀ ಪುಸ್ತಕವನ್ನು ಅಮೇಜಾನ್ ಕಿಂಡಲ್ ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. (ಸದ್ಯ ಈ ಉಚಿತ ವೈರ್‌ಲೆಸ್ ಸೌಲಭ್ಯ ಅಮೆರಿಕ, ಯೂರೋಪ್‌ನಲ್ಲಿ ಮಾತ್ರ ಇದೆ.)
ಒಮ್ಮೆ ೨ ಗಂಟೆ ಬ್ಯಾಟರಿ ಚಾರ್ಜ್ ಮಾಡಿದರೆ ವಾರಗಟ್ಟಲೇ ಓದಬಹುದು. ಪುಸ್ತಕಕ್ಕಿಂತ ಹಗುರ. ಕೇವಲ ೩೦೦ ಗ್ರಾಂ ತೂಕ. ಒಂದು ವೇಳೆ ಮೇಜಿನ ಮೇಲಿಂದ ಬಿದ್ದರೂ ಒಡೆಯದಷ್ಟು ಮಜಬೂತಾಗಿದೆ. ಇದರಲ್ಲಿ ಎಲ್‌ಸಿಡಿ ಅಥವಾ ಪ್ಲಾಸ್ಮಾ ತಂತ್ರಜ್ಞಾನದ ಬದಲು ‘ಇ-ಪೇಪರ್’ ತಂತ್ರಜ್ಞಾನವಿದೆ. ಹಾಗಾಗಿ, ಕಣ್ಣಿಗೆ ಸ್ವಲ್ಪವೂ ಹಾನಿಯಿಲ್ಲ. ಇದೆಲ್ಲ ಕಾರಣದಿಂದ ಮಾಮೂಲಿ ಪುಸ್ತಕ ಓದುವುದಕ್ಕಿಂತ ಕಿಂಡಲ್‌ನಲ್ಲಿ ಇ-ಪುಸ್ತಕ ಓದುವುದೇ ಒಂದು ಮಣ ಹೆಚ್ಚು ಸುಖ.
ಆದರೂ, ಕಿಂಡಲ್‌ನ ದೊಡ್ಡ ಸಮಸ್ಯೆ ಎಂದರೆ, ಬಣ್ಣಗಳದ್ದು. ಈ ಉಪಕರಣದಲ್ಲಿ ಇ-ಪೇಪರ್ ತಂತ್ರಜ್ಞಾನ ಇರುವುದರಿಂದ ಉತ್ಕೃಷ್ಟ ಬಣ್ಣಗಳನ್ನು ತೋರಿಸಲು ಸಾಧ್ಯವಿಲ್ಲ. ಅದಕ್ಕಾಗಿ ಸದ್ಯ ಕಿಂಡಲ್ ಕಪ್ಪು-ಬಿಳುಪು ಪುಸ್ತಕಗಳಿಗೆ ಮಾತ್ರ ಯೋಗ್ಯ. ಮುಂದೆ, ಇ-ಪೇಪರ್ ತಂತ್ರಜ್ಞಾನ ಅಭಿವೃದ್ಧಿಯಾಗೇ ಆಗುತ್ತದೆ. ಆಗ ನೈಜವರ್ಣದ ಪುಸ್ತಕಗಳನ್ನು ಕಿಂಡಲ್‌ನಲ್ಲಿ ಓದಬಹುದು.
ಕಾಲು ಕಿಮ್ಮತ್ತಿಗೆ ಲಕ್ಷಾಂತರ ಇ-ಪುಸ್ತಕಗಳು :
ಇಂದು ಎಲ್ಲಾ ಪುಸ್ತಕಗಳೂ ಡಿಜಿಟಲ್ ರೂಪದಲ್ಲಿ ಲಭ್ಯವಿಲ್ಲ. ಆದರೂ, ಹಲವಾರು ಲಕ್ಷ ಪುಸ್ತಕಗಳು ಇ-ಪುಸ್ತಕ ರೂಪದಲ್ಲಿ ಲಭ್ಯ. ಇ-ಪುಸ್ತಕಗಳ ಬೆಲೆ ಮಾಮೂಲಿ ಪುಸ್ತಕಗಳಿಗಿಂತ ಸಿಕ್ಕಾಪಟ್ಟೆ ಕಡಿಮೆ. ಅಲ್ಲದೇ ಹತ್ತಾರು ಸಾವಿರ ಉಚಿತ ಇ-ಪುಸ್ತಕಗಳು ಅಂತರ್ಜಾಲದಲ್ಲಿ ಲಭ್ಯ. (ಕನ್ನಡದಲ್ಲಿ ಇನ್ನೂ ಇ-ಪುಸ್ತಕ ಬಂದಿಲ್ಲ. ಕನ್ನಡದ ಮೊಟ್ಟ ಮೊದಲ ಇ-ಥರ್ ಯಾರಾಗಬಹುದು ಎನ್ನುವ ಕುತೂಹಲ ನನಗಿದೆ.)
ಅಮೆರಿಕದ ‘ಅಮೇಝಾನ್ ಡಾಟ್ ಕಾಮ್’ ಅಂತರ್ಜಾಲ ಆಧಾರಿತ ವಿಶ್ವದ ಅತಿದೊಡ್ಡ ಪುಸ್ತಕದ ಅಂಗಡಿ. ಅದು ಒಂದು ದಶಕದಿಂದ ಪುಸ್ತಕ ವ್ಯಾಪಾರ ಉದ್ದಿಮೆಯಲ್ಲಿ ಕ್ರಾಂತಿಯನ್ನೇ ಉಂಟುಮಾಡಿದೆ. ಒಂದಲ್ಲ ಒಂದು ದಿನ ಡಿಜಿಟಲ್ ಕ್ರಾಂತಿ ಪುಸ್ತಕ ಲೋಕದಲ್ಲೂ ಆಗುತ್ತದೆ ಎಂಬ ನಂಬಿಕೆ ಅದಕ್ಕಿತ್ತು. ಅದಕ್ಕೇ, ಐದಾರು ವರ್ಷಗಳಿಂದ ಇ-ಪುಸ್ತಕ ಸಾಧ್ಯತೆಯ ಬಗ್ಗೆ ಅನೇಕ ಪ್ರಯೋಗಗಳನ್ನು ಮಾಡಿದೆ. ೨೦೦೭ರಲ್ಲಿ ‘ಕಿಂಡಲ್’ ಎಂಬ ಇ-ಬುಕ್ ರೀಡರ್ ಬಿಡುಗಡೆಯಾದಾಗಿನಿಂದ ಅಮೇಝಾನ್‌ನ ನಂಬಿಕೆ ನಿಜವಾಗುತ್ತಿದೆ. ನಾಡಿದ್ದು, ಕಿಂಡಲ್‌ನ ಸುಧಾರಿತ ಮಾದರಿ ಕಿಂಡಲ್ ೨.೦ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದೆ.
ಇಲ್ಲೊಂದು ಕಿಂಡಲ್ ಕುರಿತ ವಿಡಿಯೋ ಇದೆ ನೋಡಿ:
ಕಿಂಡಲ್‌ಗೆ ಪರ್ಯಾಯ :
ಮಾಮೂಲಿ ಕಂಪ್ಯೂಟರ್, ಲ್ಯಾಪ್‌ಟಾಪ್, ಐಪೋಡ್, ಹೈಟೆಕ್ ಮೊಬೈಲ್ ಫೋನು, ಅಂಗೈ ಕಂಪ್ಯೂಟರು ಹಾಗೂ ಪಿಡಿಎಗಳಲ್ಲೂ ಇ-ಪುಸ್ತಕ ಓದಲು ಸಾಧ್ಯ. ಆದರೆ, ಪುಸ್ತಕ ಓದಿದ ಸುಖ ಸಿಗುವುದಿಲ್ಲ. ಆದ್ದರಿಂದ, ಅವುಗಳನ್ನು ಕಿಂಡಲ್‌ಗೆ ಪರ್ಯಾಯ ಎಂದು ಹೇಳಲಾಗದು. ಉದಾಹರಣೆಗೆ ಮೊಬೈಲ್ ಫೋನಿನಲ್ಲಿ ಕ್ಯಾಮರಾ ಇದೆ. ಹಾಗಂತ, ಅದನ್ನು ಡಿಜಿಟಲ್ ಕ್ಯಾಮೆರಾಗೆ ಪರ್ಯಾಯ ಎಂದು ಹೇಳಲಾದೀತೇ?
ಆ ದೃಷ್ಟಿಯಲ್ಲಿ, ಕಿಂಡಲ್‌ಗಿಂತ ಮೂರು ವರ್ಷ ಮೊದಲೇ ಮಾರುಕಟ್ಟೆಗೆ ಬಂದಿದ್ದ ಸೋನಿ ಕಂಪನಿಯ ಲೈಬ್ರೀ ಹಾಗೂ ಸೋನಿ ಇ-ರೀಡರ್ ಕಿಂಡಲ್‌ಗೆ ಇಂದೂ ದೊಡ್ಡ ಪ್ರತಿಸ್ಪರ್ಧಿಗಳು. ಕಿಂಡಲ್‌ಗೆ ಮಾರುಕಟ್ಟೆಯಲ್ಲಿ ಮೊದಲ ಸ್ಥಾನವಾಗಿದ್ದರೆ, ಸೋನಿ ಇ-ರೀಡರ್‌ಗೆ ಎರಡನೇ ಸ್ಥಾನ. ಈಗ ಇ-ಪುಸ್ತಕ ವ್ಯವಹಾರ ಹೆಚ್ಚುತ್ತಿರುವುದರಿಂದ, ಒಂದು ಡಜನ್ ಇ-ರೀಡರ್‌ಗಳೂ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಐರೆಕ್ಸ್, ಐಲಿಯಾಡ್, ಬಿಬುಕ್, ಸೈಬುಕ್, ಪ್ಲಾಸ್ಟಿಕ್ ಲಾಜಿಕ್, ಎಸ್ಟೀನಿಯಾ, ಪಿಕ್ಸೆಲಾರ್ ಇ-ರೀಡರ್, ಹೆನ್‌ಲಿನ್ ಇ-ರೀಡರ್... ಇತ್ಯಾದಿ.
ಕಿಂಡಲ್‌ನ ಇ-ಪುಸ್ತಕ ಫೈಲ್ ಫಾರ್ಮಾಟ್ ಬೇರೆ ಇ-ರೀಡರ್‌ಗೆ ಹೊಂದಿಕೆಯಾಗುವುದಿಲ್ಲ. ಬೇರೆ ಇ-ಪುಸ್ತಕಗಳ ಫಾರ್ಮಾಟ್ ಕಿಂಡಲ್‌ಗೆ ಹೊಂದಿಕೆಯಾಗುವುದಿಲ್ಲ. ಇದೀಗ ಕಿಂಡಲ್‌ನ ಇ-ಪುಸ್ತಕಗಳು ಎಲ್ಲಾ ಬ್ರಾಂಡ್‌ನ ಮೊಬೈಲ್ ಫೋನ್‌ಗೂ ಹೊಂದಿಕೆಯಾಗುವಂತೆ ಮಾಡಲು ಅಮೇಝಾನ್ ಉದ್ದೇಶಿಸಿದೆ. ಈ ನಡುವೆ, ಕಿಂಡಲ್‌ಗೆ ಅಡೋಬಿ ಕಂಪನಿಯ ಪಿಡಿಎಫ್ ಫಾರ್ಮಾಟ್ ತೀವ್ರ ಸ್ಪರ್ಧೆ ಒಡ್ಡುತ್ತಿದೆ. ಪಿಡಿಎಫ್ ಇ-ಪುಸ್ತಕಗಳು ಅನೇಕ ರೀಡರ್‌ಗಳಿಗೆ ಹೊಂದಿಕೆಯಾಗುತ್ತದೆ. ಆದರೆ, ಆ ರೀಡರ್‌ಗಳು ಕಿಂಡಲ್‌ನಷ್ಟು ಉತ್ತಮವಾಗಿಲ್ಲ. ಸ್ಪರ್ಧೆ ತುರುಸಿನಿಂದ ನಡೆದಿದೆ. ಜಜಯ ಯಾರಿಗೋ ಗೊತ್ತಿಲ್ಲ.
ಇದು ಇ-ಜಮಾನಾ
ಅಮೇಝಾನ್ ಡಾಟ್ ಕಾಮ್‌ನಲ್ಲಿ ಕಾಗದದ ಪುಸ್ತಕ ಕೊಂಡರೆ ಕೇವಲ ೩-೪ ಡಾಲರ್ ಹೆಚ್ಚು ಶುಲ್ಕಕ್ಕೆ ಇ-ಪುಸ್ತಕವೂ ದೊರೆಯುತ್ತದೆ.
ಗೂಗಲ್ ಬುಕ್ಸ್ ಹುಡುಕಿದರೆ ಅನೇಕ ಉಚಿತ ಇ-ಪುಸ್ತಕಗಳು ಆನ್‌ಲೈನ್‌ಲ್ಲೇ ಓದಲು ಲಭ್ಯ.
ಕಿಂಡಲ್‌ನ ಬೆಲೆ ೩೫೦ ಡಾಲರ್. ಆದರೆ ಇ-ಪುಸ್ತಕದ ಬೆಲೆ ಸಾಮಾನ್ಯ ಪುಸ್ತಕಕ್ಕಿಂತ ಶೇ.೭೫ರಷ್ಟು ಸೋವಿ. ಆದ್ದರಿಂದ ಕಿಂಡಲ್ ಓದಾಳಿಗಳಿಗೆ ಒಟ್ಟಾರೆ ಸಾಕಷ್ಟು ಲಾಭವಾಗುತ್ತದೆ.
ಕಿಂಡಲ್ ಪತ್ರಿಕೆಗಳು
ಕಿಂಡಲ್‌ನಲ್ಲಿ ಉಚಿತ ವೈರ್‌ಲೆಸ್ ಇಂಟರ್‌ನೆಟ್ ಲಭ್ಯವಿದ್ದು, ಕಂಪ್ಯೂಟರ್‌ನ ನೆರವಿಲ್ಲದೇ, ನೇರವಾಗಿ ಪುಸ್ತಕಗಳನ್ನು ಲೋಡ್ ಮಾಡಿಕೊಳ್ಳಬಹುದು. ಪೋಡ್‌ಕಾಸ್ಟ್‌ಗಳನ್ನು ಕಿಂಡಲ್‌ನಲ್ಲೇ ನೋಡಬಹುದು. ಇನ್ನಿತರ ಬಹುತೇಕ ಇ-ರೀಡರ್‌ಗಳಲ್ಲಿ ಈ ಸೌಲಭ್ಯವಿಲ್ಲ.
ಇದಕ್ಕಿಂತ ಹೆಚ್ಚಾಗಿ, ಇದೀಗ ಅಮೇರಿಕದ ಅನೇಕ ಪತ್ರಿಕೆಗಳು ತಮ್ಮ ಕಿಂಡಲ್ ಆವೃತ್ತಿಗಳನ್ನು ಬಿಡುಗಡೆ ಮಾಡಿವೆ. ಅಂದರೆ, ಮುದ್ರಿತ ಪ್ರತಿಗಳಿಗೆ ಬೇಡಿಕೆ ಕಡಿಮೆಯಾಗುತ್ತಿರುವ ಈ ದಿನಗಳಲ್ಲಿ, ಓದುಗರು ಅಂತರ್ಜಾಲದಲ್ಲಿ ಪತ್ರಿಕೆ ಓದುತ್ತಿದ್ದಾರೆ. ಈ ಹಂತದಲ್ಲಿ, ಕಿಂಡಲ್ಲಿನಲ್ಲಿ ಓದಬಹುದಾದ ಡಿಜಿಟಲ್ ಆವೃತ್ತಿಯನ್ನು ಪತ್ರಿಕೆಗಳು ಅಂತರ್ಜಾಲದಲ್ಲಿ ನೀಡುತ್ತವೆ. ಈ ಆವೃತ್ತಿಯ ಮೂಲಕ ಕ್ಷಣ ಕ್ಷಣಕ್ಕೂ ಬ್ರೇಕಿಂಗ್ ನ್ಯೂಸ್ ನೀಡಲು ಪತ್ರಿಕೆಗಳಿಗೂ ಸಾಧ್ಯವಾಗುತ್ತದೆ. ಅದಕ್ಕಾಗಿ, ವಾಷಿಂಗ್‌ಟನ್ ಪೋಸ್ಟ್, ನ್ಯೂಯಾರ್ಕ್ ಟೈಮ್ಸ್‌ನಂಥ ಪತ್ರಿಕೆಗಳೂ ಕಿಂಡಲ್ ಆವೃತ್ತಿ ಆರಂಭಿಸಿವೆ. ಈ ಆವೃತ್ತಿ ವ್ಯಾವಹಾರಿಕವಾಗಿಯೂ ಯಶಸ್ವಿಯಾಗುವ ಸಾಧ್ಯತೆಯಿದೆ. ಆ ದೃಷ್ಟಿಯಲ್ಲಿ ಈಗ ಸಾಯುತ್ತಿರುವ ಅಮೆರಿಕದ ಪತ್ರಿಕೆಗಳಿಗೆ ಕಿಂಡಲ್ ನಿಜಕ್ಕೂ ‘ಜೀವರಕ್ಷಕ’ ಸಾಧನವೇ ಸರಿ.