Tuesday, June 30, 2009

ಮಹಾನ್ ಪತ್ರಕರ್ತರಿಂದ ಯೂಟ್ಯೂಬಲ್ಲಿ ವರದಿಗಾರಿಕೆ ಟಿಪ್ಸ್


ತನಿಖಾ ವರದಿಯ 3 ಮೂಲಗಳ ಕುರಿತು ಮಾತನಾಡುತ್ತಿರುವ, ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯ ಸಹ ಸಂಪಾದಕ ಬಾಬ್ ವುಡ್‌ವರ್ಡ್. ಜಗತ್ಪಸಿದ್ಧ ವಾಟರ್‌ಗೇಟ್ ಹಗರಣ ಬಹಿರಂಗ ಮಾಡಿದ ಇಬ್ಬರು ವರದಿಗಾರರಲ್ಲಿ ಇವರೂ ಒಬ್ಬರು.
---------------------

ನಿಖಾ ವರದಿ ಮಾಡುವುದು ಹೇಗೆ? ಅಂತಾರಾಷ್ಟ್ರೀಯ ವರದಿಗಳನ್ನು ನಿಭಾಯಿಸುವ ಪರಿಯೇನು? ಸಂದರ್ಶನ ತಂತ್ರಗಳು... ಹೀಗೆ ಅನೇಕ ವರದಿಗಾರಿಕೆ ವಿಷಯಗಳ ಕುರಿತು ಅಮೆರಿಕದ ಶ್ರೇಷ್ಠ ಪತ್ರಕರ್ತರು ಪುಟ್ಟ ಪುಟ್ಟ ಟಿಪ್ಸ್ ನೀಡುತ್ತಾರೆ. ಎಲ್ಲಿ?

ಇಂಟರ್ನೆಟ್ಟಿನ ವಿಡಿಯೋ ಸೈಟ್ "ಯೂಟ್ಯೂಬ್" ಜೂನ್ 29ರಿಂದ ವರದಿಗಾರರ ಆನ್‌ಲೈನ್ ಚಾನಲ್ ಆರಂಭಿಸಿದೆ. http://www.youtube.com/reporterscenter ಇಲ್ಲಿ ಪುಟ್ಟ ಪುಟ್ಟ ವಿಡಿಯೋಗಳಿವೆ. ಪರಿಣತ ಪತ್ರಕರ್ತರಿಗೆ ಈ ಟಿಪ್ಸ್ ಹೆಚ್ಚು ಪ್ರಯೋಜನಕ್ಕೆ ಬರಲಾರದೇನೋ! ಆದರೆ, ಉದಯೋನ್ಮುಖ ಪತ್ರಕರ್ತರಿಗೆ ಖಂಡಿತ ಉಪಯುಕ್ತ.

"ಸಿಟಿಝನ್ ಜರ್ನಲಿಸ್ಟ್" ಕಾನ್ಸೆಪ್ಟ್ ತಕ್ಕಮಟ್ಟಿಗೆ ಯಶಸ್ವಿಯಾಗಿದೆ. ಇಂತಹ ಹವ್ಯಾಸಿ ಪತ್ರಕರ್ತರಿಗೆ ಹಾಗೂ ಸಾರ್ವಜನಿಕರಿಗೆ ವರದಿಗಾರಿಕೆಯ ತಂತ್ರಗಳ ಕುರಿತು ಮಾರ್ಗದರ್ಶನ ನೀಡಿ ಸಿಟಿಝನ್ ಜರ್ನಲಿಸಂಗೆ ಉತ್ತೇಜನ ನೀಡುವುದು ಯೂಟ್ಯೂಬಿನ "ರಿಪೋರ್ಟರ್ಸ್ ಸೆಂಟರಿನ" ಉದ್ದೇಶ. ಅಂದರೆ, ಯೂಟ್ಯೂಬಿನಲ್ಲಿ 24 ಗಂಟೆ ಸಿಟಿಝನ್ ಜರ್ನಲಿಸ್ಟ್ ನ್ಯೂಸ್ ಚಾನಲ್ ಆರಂಭಿಸುವ ಉದ್ದೇಶ ಗೂಗಲ್‌ಗೆ ಇದ್ದಿರಬಹುದು.

ಕಪಿಲ್ ಸಿಬಲ್ ಕಪಿ-ಚೇಷ್ಟೆ!

ನಾನು ಸಜೀವ ಗಿನಿ ಪಿಗ್‌ಗಳನ್ನು ಎಂದೂ ನೋಡಿಲ್ಲ. ಆದರೆ, ನಾನು 7ನೇ ತರಗತಿಯಲ್ಲಿದ್ದಾಗ, ವಿಜ್ಞಾನ ಪುಸ್ತಕದಲ್ಲಿ ಆನುವಂಶಿಯತೆ ಕುರಿತ ಪಾಠದಲ್ಲಿ 'ಗಿನಿ ಪಿಗ್' ಎಂಬ ಮೊಲದಂತೆ ಕಾಣುವ, ಹಂದಿಗಳ ಚಿತ್ರ ನೋಡಿದ ನೆನಪು ಇನ್ನೂ ಇದೆ. ಇಲಿಗಳು ಹಾಗೂ ಗಿನಿ ಪಿಗ್‌ಗಳನ್ನು ವಿಜ್ಞಾನಿಗಳು ತಮ್ಮ ಪ್ರಯೋಗಕ್ಕೆ ಬಳಸಿಕೊಳ್ಳುವುದು ವಾಡಿಕೆ. ಆದ್ದರಿಂದ, 'ಗಿನಿ ಪಿಗ್' ಎಂದರೆ 'ಪ್ರಯೋಗ ಪಶು' ಎಂಬ ಅರ್ಥ ಹುಟ್ಟಿಕೊಂಡಿದ್ದು ನಿಮಗೂ ಗೊತ್ತಿರಬಹುದು. ಅದು ಸರಿ... ಈಗ ನನಗೆ ಧಡಕ್ಕಂತ ಗಿನಿ ಪಿಗ್ ನೆನಪಾದದ್ದು ಏಕೆ?

ಏಕೆಂದರೆ, ನನಗೆ ಹತ್ತನೇ ತರಗತಿ ವಿದ್ಯಾರ್ಥಿಗಳೆಲ್ಲ ಈಗ 'ಗಿನಿ ಪಿಗ್ಗುಗಳಂತೆ' ಕಾಣುತ್ತಿದ್ದಾರೆ. ಪಾಪ ಪ್ರಯೋಗ ಪಶುಗಳು!

ಶಿಕ್ಷಣ ಕ್ಷೇತ್ರದಲ್ಲಿ, ನಮ್ಮ ಮಕ್ಕಳ ಮೇಲೆ ನಡೆಯುತ್ತಿರುವ ಪ್ರಯೋಗಗಳನ್ನು ನೋಡಿದಾಗ ನನಗೆ ಅಯ್ಯೋ ಅನ್ನಿಸುತ್ತದೆ. ನಮ್ಮ ದೇಶದಲ್ಲಿ, ನಮ್ಮ ರಾಜ್ಯದಲ್ಲಿ ಅದೆಷ್ಟು ಶಿಕ್ಷಣ ತಜ್ಞರು! ಅದೆಂಥ ಪ್ರಯೋಗಗಳು! ಒಬ್ಬರು ಮಾತೃಭಾಷೆಯಲ್ಲಿ ಶಿಕ್ಷಣ ಅಂದರೆ, ಇನ್ನೊಬ್ಬರು ಆಂಗ್ಲ ಮಾಧ್ಯಮ ಅನ್ನುತ್ತಾರೆ. ಇನ್ನೊಬ್ಬರು ಟ್ರೈಮಿಸ್ಟರ್ ಅಂದರೆ ಇನ್ನೊಬ್ಬರು ಸೆಮಿಸ್ಟರ್ ಅಂತಾರೆ. ಒಬ್ಬರು ಸೆಂಟ್ರಲ್ ಸಿಲಬಸ್ ಅಂದರೆ ಮಗದೊಬ್ಬರು ಸ್ಟೇಟ್ ಸಿಲಬಸ್ ಅಂತಾರೆ. ಸಾಲದೂ ಅಂತ ಈಗ ಈ ತಜ್ಞರ ಪೀಳಿಗೆಗೆ ಹೊಸ ಪಂಡಿತರೊಬ್ಬರ ಸೇರ್ಪಡೆಯಾಗಿದೆ.

ಮೀಟ್ ಮಿಸ್ಟರ್ ಕಪಿ ಸಿಬಲ್.. ಸಾರಿ... ಕಪಿಲ್ ಸಿಬಲ್

ಇವರು ಇದೀಗ ಭಾರತದ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಲು ಹೊರಟಿದ್ದಾರೆ. ಅದಕ್ಕಾಗಿ ಈ ಕೆಳಗಿನ ಪ್ರಯೋಗ ಮಾಡುವ ಪ್ರಸ್ತಾವನೆ ಮುಂದಿಟ್ಟಿದ್ದಾರೆ.

1. SSLC ಪಬ್ಲಿಕ್ ಪರೀಕ್ಷೆ ರದ್ದು ಮಾಡುವ ಪ್ರಯೋಗ.
2. SSLC, CBSE, ICSE ಮುಂತಾದ ಮಂಡಳಿಗಳನ್ನೆಲ್ಲಾ ವಿಸರ್ಜಿಸಿ ದೇಶಾದ್ಯಂತ ಒಂದೇ ಪ್ರೌಢ ಶಿಕ್ಷಣ ಮಂಡಳಿ ಸ್ಥಾಪಿಸುವ ಪ್ರಯೋಗ.
3. ದಿಲ್ಲಿಯಿಂದ ಹಳ್ಳಿವರೆಗೆ ಏಕರೂಪ ಪಠ್ಯ ತರುವ ಪ್ರಯೋಗ.

ಈಗಿನ ಶಿಕ್ಷಣ ಪದ್ಧತಿಯಲ್ಲಿ, ಪರೀಕ್ಷೆಗಳಿಂದ ವಿದ್ಯಾರ್ಥಿಗಳಿಗೆ ಸಿಕ್ಕಾಪಟ್ಟೆ ಟೆನ್‌ಶನ್ ಇದೆ. ಈ ಟೆನ್‌ಶನ್ನಿಂದ ಅನೇಕ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳಲೂ ಮುಂದಾಗುತ್ತಿದ್ದಾರೆ. ಆದ್ದರಿಂದ ಮಕ್ಕಳ ಟೆನ್‌ಶನ್ ಕಡಿಮೆ ಮಾಡಲು ಪರೀಕ್ಷೆಗಳನ್ನೇ ರದ್ದು ಮಾಡಬೇಕು ಎಂಬುದು ಅವರ ಆಲೋಚನೆ. ಒಂದುವೇಳೆ, ಕಪಿಲ್ ಸಿಬಲ್ ವೈದ್ಯರಾಗಿದ್ದರೆ ಡೇಂಜರ್ ಆಗಿತ್ತು. ಯಾರಾದರೂ ನೆಗಡಿ ಅಂತ ಅವರ ಬಳಿ ಹೋದರೆ, ಡಾಕ್ಟರ್ ಸಿಬಲ್ ಮೂಗು ಕತ್ತರಿಸುತ್ತಿದ್ದರು! ತಲೆ ನೋವು ಅಂದರೆ, ತಲೆ ತೆಗೆದುಹಾಕುತ್ತಿದ್ದರು!

ಆದರೂ, ಪರೀಕ್ಷೆ ರದ್ದು ಮಾಡುವ ಯೋಜನೆ ಪ್ರಕಟಿಸುವಾಗ ಕಪಿಲ್‌ರನ್ನು ಟೀವಿಯಲ್ಲಿ ನೋಡಬೇಕಿತ್ತು! ತಾನೇ ಮಹಾಬುದ್ಧಿವಂತ ಎಂಬಂತೆ ಅವರು ಬೀಗುತ್ತಿದ್ದರು. ಸಾಲದು ಎಂಬಂತೆ, ಅದ್ಯಾರೋ ಪೋದ್ದಾರ್ ಎಂಬ ಮಹರಾಯ್ತಿ ಸಿಬಲ್ ಅವರನ್ನ ಶಿಕ್ಷಣ ಕ್ಷೇತ್ರದ ಸ್ಯಾಮ್ ಪಿತ್ರೋಡಾ ಅಂತಲೂ ಬಣ್ಣಿಸಿದಳು. ಓ ಗಾಡ್!

ಹಾಗಾದರೆ, SSLC ಪರೀಕ್ಷೆ ರದ್ದು ಮಾಡಿದರೆ, ವಿದ್ಯಾರ್ಥಿಗಳ ಮೇಲಿನ ಒತ್ತಡ ನಿಜವಾಗಲೂ ಕಡಿಮೆಯಾಗುತ್ತಾ? ನನ್ನ ಪ್ರಕಾರ ಇಲ್ಲ. ಕಪಿಲ್ ಪ್ರಯೋಗ ಒಂದು ಕಪಿಚೇಷ್ಟೇಯಾಗುತ್ತದೆ ಅಷ್ಟೇ. ಇದಕ್ಕೆ ನನ್ನ 6 ಫಂಡಾ ಇದೆ, ನೋಡಿ.

ಫಂಡಾ 1: SSLC ಪರೀಕ್ಷೆ ರದ್ದಾಗುವುದರಿಂದ ವಿದ್ಯಾರ್ಥಿಗಳ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ ಎಂಬುದು ಸುಳ್ಳು. ಒತ್ತಡ ಒಂದು ಪಾಯಿಂಟಲ್ಲಿ ಕಡಿಮೆಯಾಗಿ ಇನ್ನೊಂದು ಪಾಯಿಂಟಿಗೆ ಶಿಫ್ಟ್ ಆಗುತ್ತದೆ. ಅಷ್ಟೇ.

ಮೊಟ್ಟ ಮೊದಲನೇಯದಾಗಿ ಮಕ್ಕಳ ಮೇಲೆ ಮಾನಸಿಕ ಒತ್ತಡ ಏಕೆ ಉಂಟಾಗುತ್ತದೆ ಎಂಬುದನ್ನು ಗಮನಿಸಬೇಕು. ಇದಕ್ಕೆ ಶಿಕ್ಷಣದ ಗ್ರಾಫಿನಲ್ಲಿ ಹಿಮ್ಮುಖವಾಗಿ ಯೋಚಿಸಬೇಕು.a) ಇದು ಶಿಕ್ಷಣದ ಗ್ರಾಫ್. ಎಲ್ಲ ಪಾಲಕ ಪೋಷಕರ ಉದ್ದೇಶವೇನು? ತಮ್ಮ ಮಕ್ಕಳು ಚೆನ್ನಾಗಿ ಓದಿ-ಕಲಿತು ಉತ್ತಮ ಉದ್ಯೋಗ ಪಡೆಯಬೇಕು. ಕೈತುಂಬಾ ಸಂಬಳ ಪಡೆದು ಸುಖವಾಗಿ ಬದುಕಬೇಕು ಎಂಬುದು ತಾನೆ? ಅಂದರೆ, ಈ ಗ್ರಾಫಿನ 5ನೇ ಹಂತ ತಲುಪುವುದು ಎಲ್ಲ ಪಾಲಕ-ಪೋಷಕರ ಗುರಿ. ಈ ಹಂತ ತಲುಪುವ ಸಲುವಾಗಿ ಎಲ್ಲ ಒತ್ತಡ ಇರುತ್ತದೆ. ಒಮ್ಮೆ ಈ ಹಂತ ತಲುಪಿದರೆ ಒತ್ತಡ ನಿವಾರಣೆಯಾಗುತ್ತದೆ ಹಾಗೂ ಪಾಲಕರು ತಮ್ಮ ಜೀವನ ಧನ್ಯವಾಯಿತು ಎಂದುಕೊಳ್ಳುತ್ತಾರೆ. ಅಂದರೆ, ಪಾಲಕರು ತಮ್ಮ ಮಕ್ಕಳ ಮೇಲೆ ಶಿಕ್ಷಣದ ಒತ್ತಡ ಹೇರುವುದು ಈ 5ನೇಯ ಹಂತ ತಲುಪುವ ಸಲುವಾಗಿ. Point to be noted. ಉತ್ತಮ ಉದ್ಯೋಗ ಪಡೆಯುವುದೇ "ಒತ್ತಡದ" ಗಮ್ಯ.

b) ಹಾಗಾದರೆ, 5ನೇ ಹಂತ ತಲುಪುವುದು ಹೇಗೆ? ಐದನೇ ಹಂತ ತಲುಪಲು ಮಕ್ಕಳು ಅತ್ಯುತ್ತಮ ಶಿಕ್ಷಣ ಹಾಗೂ ಕೌಶಲ್ಯವನ್ನು ಪಡೆದಿರಬೇಕಾಗುತ್ತದೆ. ಕೇವಲ ಶಿಕ್ಷಣದ ಪ್ರಮಾಣಪತ್ರ ಪಡೆದಿದ್ದರೆ ಉತ್ತಮ ಉದ್ಯೋಗ ಸಿಗುವುದಿಲ್ಲ. ಉದಾಹರಣೆಗೆ ಬರೀ ಎಂಬಿಎ ಪದವಿ ಪಡೆದರೆ, ಸಾಲದು. ಆ ಪದವಿಯಲ್ಲಿ ಅತ್ಯುತ್ತಮ ಸ್ಕೋರ್ ಮಾಡಿರಬೇಕು. ಕೇವಲ ಉತ್ತಮ ಸ್ಕೋರ್ ಮಾಡಿದರೂ ಸಾಲದು. ಅತ್ಯುತ್ತಮ ಬಿಸಿನೆಸ್ ಸ್ಕೂಲಲ್ಲಿ ಕಲಿತಿರಬೇಕು. ಅತ್ಯುತ್ತಮ ಸಂಸ್ಥೆಯಲ್ಲಿ ಕಲಿತರೆ ಮಾತ್ರ ಅತ್ಯುತ್ತಮ ಉದ್ಯೋಕ್ಕೆ ಅರ್ಹತೆ ದೊರೆಯುತ್ತದೆ. Point to be noted. ಅಂದರೆ, ಇಲ್ಲಿ ಎರಡು ರೀತಿಯ ಒತ್ತಡ ಇರುತ್ತದೆ. ಒಂದು ಉತ್ತಮ ಸ್ಕೋರ್ ಮಾಡುವುದು ಹಾಗೂ ಇನ್ನೊಂದು ಅತ್ಯುತ್ತಮ ಶಿಕ್ಷಣ ಸಂಸ್ಥೆಯಲ್ಲಿ ಕಲಿಯುವುದು.

c) ಈ ಎರಡು ರೀತಿಯ ಒತ್ತಡಗಳೂ ಈಗ ಹಿಮ್ಮುಖವಾಗಿ 4, 3, 2ನೇ ಹಂತಕ್ಕೆ ವರ್ಗಾವಣೆಯಾಗುತ್ತವೆ. ಬೆಂಗಳೂರಿನಂಥ ಷಹರಗಳಲ್ಲಾದರೆ, ಈ ಒತ್ತಡ 1ನೇ ಹಂತಕ್ಕೂ ವರ್ಗಾವಣೆಯಾಗುತ್ತದೆ. (ಬೆಂಗಳೂರಿನಲ್ಲಿ ಉತ್ತಮ ಪ್ರಾಥಮಿಕ ಶಾಲೆಯಲ್ಲಿ LKGಗೆ ಪ್ರವೇಶ ಪಡೆಯುವ ಕಷ್ಟ ಪಾಲಕರಿಗೇ ಗೊತ್ತು!)

ಅಂದರೆ, ಅರ್ಥವಿಷ್ಟೇ. ವಿದ್ಯಾರ್ಥಿಗಳ ಮೇಲಿನ ಒತ್ತಡ ಎನ್ನುವುದು ಇಂದಿನ ಪರೀಕ್ಷೆಯ ಒತ್ತಡವಲ್ಲ. ಅದು ಭವಿಷ್ಯದ ಒತ್ತಡ. ಉತ್ತಮ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶ ಪಡೆಯುವ ಹಾಗೂ ಉತ್ತಮ ಉದ್ಯೋಗ ಪಡೆಯುವ ಕುರಿತಾದ ಒತ್ತಡ. ಅದು ಹಿಮ್ಮುಖವಾಗಿ ಬಂದಿದೆ ಅಷ್ಟೇ. Point to be noted. ಹಂತ 5ರಲ್ಲಿರುವ ಭವಿಷ್ಯದ ಒತ್ತಡವನ್ನು ನಿವಾರಿಸದ ಹೊರತೂ ಹಂತ 4, 3, 2 ಹಾಗೂ 1ರ ಮೇಲಿನ ಒತ್ತಡ ನಿವಾರಣೆಯಾಗುವುದಿಲ್ಲ.

ಸಿಬಲ್ ಅವರ ಕ್ರಾಂತಿಕಾರಿ ಶಿಕ್ಷಣ ಪದ್ಧತಿ ಹಂತ 5ರ ಒತ್ತಡವನ್ನು ನಿವಾರಿಸುವುದಿಲ್ಲ.

ಫಂಡಾ 2 : ಕರ್ನಾಟಕದ SSLC ಪ್ರಯೋಗ ಫೇಲಾದ ಕಥೆ

ಓ.ಕೆ. ಒಂದು ವೇಳೆ 10ನೇ ತರಗತಿಯ ಪಬ್ಲಿಕ್ ಪರೀಕ್ಷೆ ರದ್ದಾಯಿತು ಅಂದುಕೊಳ್ಳೋಣ. ಆಗ 10ನೇ ತರಗತಿಯ ವಿದ್ಯಾರ್ಥಿಯ ಮೇಲಿನ ಒತ್ತಡ ತಕ್ಷಣಕ್ಕೆ ಕಡಿಮೆಯಾಗುತ್ತದೆ ಎನ್ನುವುದು ನಿಜ. ಅದರೆ, ಪರಿಣಾಮವೇನು? ಆ ಮಗು ತಾನು ಓದಿದ ಶಾಲೆ ಬಿಟ್ಟು ಪಿಯು ಕಾಲೇಜು ಸೇರಲು ಪ್ರತ್ಯೇಕ ಪ್ರವೇಶ ಪರೀಕ್ಷೆ ಬರೆಯಬೇಕು ಎನ್ನುತ್ತದೆ ಸಿಬಲ್ ನಿಯಮ. ಅಂದರೆ, ಮಗು ಪಬ್ಲಿಕ್ ಪರೀಕ್ಷೆ ಬದಲು ತನ್ನ ಹೈಸ್ಕೂಲಿನಲ್ಲೇ ನಡೆಯುವ ವಾರ್ಷಿಕ ಪರೀಕ್ಷೆ ಬರೆಯುತ್ತದೆ ಹಾಗೂ ಪಿಯೂಸಿ ಪ್ರಥಮ ವರ್ಷಕ್ಕೆ ಸೇರಲು ಇನ್ನೊಂದು ಪ್ರವೇಶ ಪರೀಕ್ಷೆ ಬರೆಯುತ್ತದೆ. ಇದರರ್ಥ ಮಗು 11ನೇ ತರಗತಿ ಸೇರಲು ಎರಡು ಪರೀಕ್ಷೆ ಬರೆಯಬೇಕು! ಇದು extra ಒತ್ತಡವಲ್ಲವೇ?

ಇನ್ನೊಂದು ವಿಷಯ. ಕರ್ನಾಟಕದಲ್ಲಿ ನಡೆದ ಮಹತ್ವದ ಪ್ರಯೋಗವೊಂದನ್ನು ಗಮನಿಸಬೇಕು. ಕಳೆದ 3 ವರ್ಷದ ಹಿಂದೆ SSLC ಪರೀಕ್ಷೆಯ ಒತ್ತಡವನ್ನು ತಡೆಯಲು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆ ಮಾಡಿತು. 100 ಅಂಕಗಳ ಪ್ರಶ್ನೆ ಪತ್ರಿಕೆಯಲ್ಲಿ 60 ಅಂಕಗಳಷ್ಟು ಬಹು ಆಯ್ಕೆಯ ಪ್ರಶ್ನೆಗಳನ್ನು ನೀಡಿತು. ವಿವರಣಾತ್ಮಕ ಪ್ರಶ್ನೆಗಳನ್ನು ಕಡಿಮೆ ಮಾಡಿತು. ಇದರಿಂದ ಮಕ್ಕಳ ಮೇಲಿನ ಒತ್ತಡ ಕಡಿಮೆಯಾದದ್ದು ನಿಜ. ಆದರೆ, ಇದರ ಪರಿಣಾಮ ಪಿಯುಸಿ ದ್ವಿತೀಯ ಹಂತದಲ್ಲಿ ಕಾಣಿಸಿಕೊಂಡಿತು. ಸುಲಭವಾಗಿ SSLC ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳು, ಪ್ರಥಮ ಪಿ.ಯು. ತರಗತಿಯಲ್ಲಿ ಕಷ್ಟ ಅನುಭವಿಸಿದರು ಹಾಗೂ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಫೇಲಾದರು. ದ್ವಿತೀಯ ಪಿಯು ಪಾಸ್ ಫಲಿಂತಾಶ ಎಂದೂ ಇಲ್ಲದಷ್ಟು ಪ್ರಮಾಣದಲ್ಲಿ ಕುಸಿಯಿತು. ಇದೀಗ ರಾಜ್ಯದ ಶಿಕ್ಷಣ ತಜ್ಞರಿಗೆ ಈ ತಪ್ಪಿನ ಅರಿವಾಗಿದೆ. ಆದ್ದರಿಂದ ಮತ್ತೆ SSLC ಹಂತದಲ್ಲಿ ಪರೀಕ್ಷಾ ಪದ್ಧತಿ ಸರಿ ಮಾಡಲು ಈ ವರ್ಷದಿಂದ ಪ್ರಾರಂಭಿಸಿದ್ದಾರೆ. ಪರೀಕ್ಷೆಯನ್ನು ಸುಲಭಗೊಳಿಸಿದ್ದಕ್ಕೇ ಈ ಪರಿ ಫಲಿತಾಂಶ. ಇನ್ನು ಪರೀಕ್ಷೆಯನ್ನು ರದ್ದುಗೊಳಿಸಿದರೆ ಹೇಗಿರಬಹುದು ಪರಿಣಾಮ?

Point to be noted. ಅಡಿಪಾಯ ಗಟ್ಟಿ ಇಲ್ಲದೇ ಮನೆ ಕಟ್ಟಲು ಹೋದರೆ ಕಟ್ಟಡ ಕುಸಿಯದೇ ಇದ್ದೀತೆ? 12ನೇ ತರಗತಿಗೆ 10ನೇ ತರಗತಿಯೇ ಅಡಿಪಾಯ.

ಅಂದರೆ, 10ನೇ ತರಗತಿಯ ಪಬ್ಲಿಕ್ ಪರೀಕ್ಷೆ ರದ್ದು ಮಾಡಿದರೆ, ಅದರ ಒತ್ತಡ ಕೆಲವೇ ದಿನದಲ್ಲಿ ನಡೆಯುವ ಪ್ರವೇಶ ಪರೀಕ್ಷೆಯ ಮೇಲೆ ಅಥವಾ 11ನೇ ತರಗತಿಯ ಮೇಲೆ ಕಾಣಿಸಿಕೊಳ್ಳುತ್ತದೆ. ಅದರ ಪರಿಣಾಮ ವಗುವಿನ ಭವಿಷ್ಯಕ್ಕೆ ನಿರ್ಣಾಯಕವಾದ 12ನೇ ತರಗತಿಯ ಮೇಲೆ ಆಗುತ್ತದೆ.

ಇನ್ನು ಅಂಕಗಳ ಬದಲು ಗ್ರೇಡ್ ನೀಡುವುದಾಗಿ ಹಾಗೂ ಪರ್ಸೆಂಟ್ ಬದಲು ಪರ್ಸೆಂಟೈಲ್ ನೋಡುವುದಾಗಿ ಸಿಬಲ್ ಹೇಳಿದ್ದಾರೆ. ಸಿಬಲ್ ಪ್ರಸ್ತಾವದಲ್ಲಿ ಇದೊಂದೇ ತುಸು ಸಕಾರಾತ್ಮಕ ಅಂಶ. ಇದನ್ನು ಈಗಿನ ಪರೀಕ್ಷಾ ಪದ್ಧತಿಯಲ್ಲೂ ಜಾರಿ ಮಾಡಬಹುದಲ್ಲ!

ಫಂಡಾ 3: ಇದು ಸ್ಪರ್ಧಾತ್ಮಕ ಜಗತ್ತು. ಇಲ್ಲಿ ನಮ್ಮ ಇಡೀ ಜೀವನ, ಸ್ಪರ್ಧೆಯ ಸುತ್ತ ಗಿರಕಿಹೊಡೆಯುತ್ತದೆ. ಸ್ಪರ್ಧೆಯಲ್ಲಿ ಗೆಲ್ಲುವುದೇ ಮುಖ್ಯವಾಗುತ್ತದೆ. ಈ ಸ್ಪರ್ಧೆಯಲ್ಲಿ ಗೆಲ್ಲುವ ಬಗೆಯನ್ನು ಶಿಕ್ಷಣ ಕಲಿಸಿಕೊಡಬೇಕು. ಸ್ಪರ್ಧೆ ಎದುರಿಸುವ ಮನೋಸ್ಥೈರ್ಯವನ್ನು ಬೆಳೆಸಿಕೊಡಬೇಕು. ಜೀವನದ ವಾಸ್ತವ ಒತ್ತಡಗಳನ್ನು ಸ್ವೀಕರಿಸಲು ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಬೇಕು. Survival of the Fittest ಎಂಬ ಸತ್ಯದ ದರ್ಶನ ಮಾಡಿಸಬೇಕು. ಅದನ್ನು ಬಿಟ್ಟು ಒತ್ತಡಗಳಿಗೆ ಹೆದರಿ ಓಡಿಹೋಗುವ ಪಲಾಯನವಾದವನ್ನು ಕಲಿಸಬಾರದು. ಈಗ ಕಪಿಲ್ ಸಿಬಲ್ ನಮ್ಮ ವಿದ್ಯಾರ್ಥಿಗಳಿಗೆ ಪರೀಕ್ಷೆಯಿಂದ ಓಡಿಹೋಗುವ ವಿದ್ಯೆ ಕಲಿಸಲು ಉದ್ದೇಶಿಸಿದ್ದಾರೆ!

ಫಂಡಾ 4 : ಪರೀಕ್ಷೆ ರದ್ದು ಮಾಡುವುದರಿಂದ, "ಹೇಗೂ ಪಾಸಾಗಬೇಕಿಲ್ಲ ಬಿಡು..." ಎಂದು, ಮಕ್ಕಳು ಬೇಜವಾಬ್ದಾರರಾಗುತ್ತಾರೆ. ಪರೀಕ್ಷೆ ಇಲ್ಲದಿದ್ದರೂ ತಾವು ಓದಬೇಕು ಎಂದು ಬಹುತೇಕ ಮಕ್ಕಳು ಅಂದುಕೊಳ್ಳುವುದಿಲ್ಲ. ಏಕೆಂದರೆ, ಓದುವುದು ಮಕ್ಕಳ ಸಹಜ Instinct ಅಲ್ಲ. ಆಡುವುದು ಅವರ ಸಹಜ ಗುಣ. ಆದ್ದರಿಂದ ಮಕ್ಕಳು ಪರೀಕ್ಷೆಯಿಲ್ಲದಿದ್ದರೂ ತಾವೇ ತಾವಾಗಿ ಓದಿಕೊಳ್ಳುತ್ತಾರೆ ಎಂಬುದು ಭ್ರಮೆ. ಮಕ್ಕಳನ್ನು ಓದಿಸುವ ಕಷ್ಟ ಬುದ್ದಿಜೀವಿಗಳಿಗಿಂತ ತಾಯಂದೀರಿಗೆ ಚೆನ್ನಾಗಿ ಗೊತ್ತು! ಅಲ್ಲದೇ, 16ನೇ ವಯಸ್ಸಿನ ಮಕ್ಕಳ ಮನಸ್ಸು ಚಂಚಲ. ಅವರಿಗಿನ್ನೂ ಜವಾಬ್ದಾರಿ ಮೂಡಿರದ ವಯಸ್ಸು ಅದು. ಅದಕ್ಕೇ ಅವರನ್ನು Adult ಎಂದು ಪರಿಗಣಿಸುವುದಿಲ್ಲ. ಆರರಿಂದ ಹದಿನಾರರವರೆಗೆ ಮಕ್ಕಳನ್ನು ಓದಿಸುವ ಜವಾಬ್ದಾರಿ ಹಿರಿಯರದು. ಈ ಹಿನ್ನೆಲೆಯಲ್ಲಿ, ಪರೀಕ್ಷೆ ಎಂಬುದು, ಮಕ್ಕಳಿಗೆ ಓದಲು ಒಂದು ಪ್ರಬಲ ಕಾರಣವಾಗುತ್ತದೆ. ಆದ್ದರಿಂದ, ಪರೀಕ್ಷೆಯನ್ನು ರದ್ದುಗೊಳಿಸುವುದು ತರವಲ್ಲ.

ಫಂಡಾ 5 : ದೇಶಾದ್ಯಂತ 10ನೇ ತರಗತಿಗೆ ಸಮಾನ ಪಠ್ಯಕ್ರಮ ಜಾರಿಯಾದರೆ, ಶೈಕ್ಷಣಿಕ ಗೊಂದಲ ನಿವಾರಣೆಯಾಗುತ್ತದೆ ಎಂದು ಕಪಿಲ್ ಸಿಬಲ್ ವಾದ. ಒಂದು ದೃಷ್ಟಿಯಲ್ಲಿ ಅದು ನಿಜ. ಆದರೆ, ಕೇಂದ್ರ ಪಠ್ಯಕ್ರಮದಲ್ಲಿ, ಆಯಾ ರಾಜ್ಯಗಳ ಭಾಷೆ, ಇತಿಹಾಸ, ಸಂಸ್ಕೃತಿ ಎಲ್ಲಾ ಏನಾಗುತ್ತದೆ? ಶಿಕ್ಷಣ ಎಂದರೆ ಬರೀ ಸೈನ್ಸು, ಮ್ಯಾಥ್ಸು ಅಲ್ಲವಲ್ಲ! ವಿಜ್ಞಾನ ಮತ್ತು ವಾಣಿಜ್ಯದಂಥ ವಿಷಯದಲ್ಲಿ ಸಮಾನ ಪಠ್ಯ ತರಬಹುದು. ಆದರೆ, ಇತಿಹಾಸ, ಸಂಸ್ಕೃತಿ, ಸಮಾಜ ಶಾಸ್ತ್ರ, ಭಾಷೆಯಂಥ ಸೂಕ್ಷ್ಮ ವಿಷಯದಲ್ಲಿ ಸಮಾನ ಪಠ್ಯಕ್ರಮ ತರವಲ್ಲ. ಅಲ್ಲದೇ, ಹಳ್ಳಿ ಮಕ್ಕಳಿಗೂ ದಿಲ್ಲಿ ಮಕ್ಕಳಿಗೂ ಒಂದೇ ಶಿಕ್ಷಣ ನೀಡಬೇಕು ಎಂದರೆ ಹೇಗೆ ಸರಿ. ದಿಲ್ಲಿ ಮಕ್ಕಳ ಠಸ್ ಪುಸ್ ಇಂಗ್ಲೀಷಿನ ಮುಂದೆ ನಮ್ಮ ಹಳ್ಳಿ ಮಕ್ಕಳ ಇಂಗ್ಲೀಷು ಹೇಗೆ ಸಮವಾದೀತು? ಕೇಂದ್ರ ಪಠ್ಯಕ್ರಮದಲ್ಲೂ ಕನ್ನಡಮಾಧ್ಯಮ ಶಿಕ್ಷಣ ಇರುವುದೇ? ಹಾಗೇನಾದರೂ ಇದ್ದರೂ, ಸಮಾನ ಪಠ್ಯಕ್ರಮಕ್ಕೆ ನಾವು ಒಪ್ಪಿಕೊಂಡರೆ, ಉತ್ತರ ಭಾರತದ ಝಾನ್ಸಿರಾಣಿ ಎಂದರೆ ನಮ್ಮ ಮಕ್ಕಳಿಗೆ ಗೊತ್ತಿರುತ್ತದೆ. ಕಿತ್ತೂರು ಚೆನ್ನಮ್ಮ ಎಂದರೆ ಅದ್ಯಾರು ಅಂತಾರೆ? ಏಕೆಂದರೆ, ಕೇಂದ್ರ ಪಠ್ಯಕ್ರಮ ಉತ್ತರ ಭಾರತದಲ್ಲಿ ಸಿದ್ಧವಾಗುತ್ತದೆ! ಇದೆಲ್ಲಾ ಹೊಸ ಟೆನ್‌ಶನ್ನಿಗೆ ಕಾರಣವಾಗುತ್ತದೆ.

ಫಂಡಾ 6: ಹೋಗಲಿ, ಸಿಬಲ್ ಹೇಳಿದ್ದನ್ನು ಒಪ್ಪಿಕೊಂಡು ಬಿಡೋಣ. ಪರೀಕ್ಷಾ ಒತ್ತಡದಿಂದ ಮಕ್ಕಳನ್ನೂ, ಪಾಲಕರನ್ನೂ ಪಾರುಮಾಡಬೇಕು ಎಂಬುದು ಅವರ ಸದುದ್ದೇಶ. ಪರೀಕ್ಷಾ ಒತ್ತಡಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುವಂಥ ಸ್ಥಿತಿ ಹೋಗಲಾಡಿಸಬೇಕು ಎಂಬುದು ಸರಿ. ಆದರೆ, ಈ ಪರೀಕ್ಷಾ ಒತ್ತಡ ಹಾಗೂ ಆತ್ಮಹತ್ಯೆ ಮಾಡಿಕೊಳ್ಳುವ ಪ್ರವೃತ್ತಿ 12ನೇ ತರಗತಿಯಲ್ಲೂ ಇದೆಯಲ್ಲಾ! ಡಿಗ್ರಿ ಕ್ಲಾಸಿನಲ್ಲೂ ಇದೆಯಲ್ಲಾ? ಅವರನ್ನೆಲ್ಲಾ ಏಕೆ ಸಿಬಲ್ ಪರೀಕ್ಷಾ ಟ್ರಾಮಾದಿಂದ ಪಾರು ಮಾಡುವುದಿಲ್ಲ? ಭಾರತದಲ್ಲಿರುವ ಎಲ್ಲ ಕ್ಲಾಸಿನ ವಿದ್ಯಾರ್ಥಿಗಳನ್ನೂ ಪರೀಕ್ಷಾ ಟ್ರಾಮಾದಿಂದ ಪಾರುಮಾಡಿ ಎಲ್ಲರಿಗೂ ಸರ್ಟಿಫಿಕೆಟ್ ದಯಪಾಲಿಸಬಹುದಲ್ಲ? ಅದಕ್ಕಿಂತ ದೊಡ್ಡ ಶಿಕ್ಷಣ ಕ್ರಾಂತಿ ಇನ್ಯಾವುದಿದೆ!

ಪ್ಲೀಸ್ ಥಿಂಕ್ ಎಬೌಟ್ ಇಟ್ ಮಿಸ್ಟರ್ ಕಪಿ ಸಿಬಲ್.

Tuesday, June 09, 2009

ಯಂಗಿಸ್ತಾನಿಗಳಿಗೆ ಉಚಿತ ಟಾಕ್ ಟೈಮ್, SMS ಸೇವೆ

ಇದು ಪೆಪ್ಸಿ ಜಾಹೀರಾತಲ್ಲ. ವರ್ಜಿನ್ ಮೊಬೈಲ್ ಕಂಪನಿಯ ಮಾರ್ಕೆಟಿಂಗ್ ಗಿಮಿಕ್ಕೂ ಅಲ್ಲ. "ಪುಗಸಟ್ಟೆ ಟಾಕ್ ಟೈಮ್ ಹಾಗೂ ಉಚಿತ ಎಸ್.ಎಂ.ಎಸ್." ಎನ್ನುವುದು ಬ್ಲಿಕ್ ಎಂಬ ಮೊಬೈಲ್ ಕಂಪನಿಯ ಬಿಸಿನೆಸ್ ಮಾಡೆಲ್ಲು. ಲಂಡನ್ ಮೂಲದ ಈ ಕಂಪನಿ ಶೀಘ್ರ ಭಾರತದಲ್ಲೂ ತನ್ನ ಸೇವೆ ಆರಂಭಿಸಲಿದೆ. ಯುವಕ-ಯುವತಿಯರಿಗೆ ಉಚಿತ ಮೊಬೈಲ್ ಸಂಪರ್ಕ ನೀಡಲಿದೆ.

ಹಾಗಾದರೆ, ಕಂಪನಿಗೇನು ಆದಾಯ?

ಬ್ಲಿಕ್ - ಒಂದು ಜಾಹೀರಾತು ಆಧಾರಿತ ಮೊಬೈಲ್ ಸೇವಾ ಕಂಪನಿ. ಮಹಾನಗರಗಳಲ್ಲಿ ವಾಸಿಸುವ, 16ರಿಂದ 24 ವರ್ಷ ವಯೋಮಿತಿಯೊಳಗಿನ ಯುವಕ ಯುವತಿಯರಿಗೆ ಉಚಿತ ಟಾಕ್ ಟೈಮ್ ರಿಫಿಲ್ ಕೂಪನ್ನುಗಳನ್ನು ನೀಡುತ್ತದೆ. ಈ ಕಂಪನಿ ಜಾಹೀರಾತುಗಳನ್ನು ಸಂಗ್ರಹಿಸಿ ಈ ಚಂದಾದಾರರ ಮೊಬೈಲ್ ಫೋನಿಗೆ ಬಿತ್ತರಿಸುತ್ತದೆ. ಮೊಬೈಲ್ ಸೇವೆ ಪಡೆಯುವ ಯುವಕ-ಯುವತಿಯರು ಈ ಜಾಹೀರಾತುಗಳನ್ನು ಓದುತ್ತಾರೆ ಇಲ್ಲವೇ ಕೇಳುತ್ತಾರೆ ಅಥವಾ ಎಂಎಂಎಸ್ ಜಾಹೀರಾತುಗಳನ್ನು ನೋಡುತ್ತಾರೆ. ಬ್ಲಿಕ್ ಕಂಪನಿಗೆ ಈ ಜಾಹೀರಾತುಗಳೇ ಆದಾಯ. ಯುವಕ-ಯುವತಿಯರಿಗೆ ಪುಕ್ಕಟೆ ಮೊಬೈಲ್ ಸೇವೆ. ಹಾಗೂ ಜಾಹೀರಾತುದಾರರಿಗೆ ಯುವಗ್ರಾಹಕರನ್ನು ತಲುಪುವ ಅವಕಾಶ. - Win-Win Situation for all.

ಮೊಬೈಲ್ ಫೋನ್ ಇಂದು ಕೇವಲ ಫೋನಾಗಿ ಉಳಿದಿಲ್ಲ. ಇದೊಂದು ಪ್ರಭಾವೀ ಮಾಧ್ಯಮವಾಗಿ ಬದಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪತ್ರಿಕೆ, ಟೀವಿ, ಹಾಗೂ ಇಂಟರ್ನೆಟ್ಟಿನಂತೆ ಮೊಬೈಲ್ ಸೇವೆಗೂ ಜಾಹೀರಾತು ಪ್ರಮಾಣ ಹೆಚ್ಚಾಗುತ್ತದೆ ಎಂಬುದು ಬ್ಲಿಕ್ ಲೆಕ್ಕಾಚಾರ.

ಈ ಬಿಸಿನೆಸ್ ಮಾಡೆಲ್ ಭಾರತದಲ್ಲಿ ಯಶಸ್ವಿಯಾಗುವುದೇ? ಗೊತ್ತಿಲ್ಲ.

ಈಗ ಹತ್ತು ವರ್ಷದ ಹಿಂದೆ, ಬೆಂಗಳೂರು ಸೇರಿದಂತೆ ದೇಶದ ಅನೇಕ ಭಾಗದಲ್ಲಿ, ಇದೇ ಬಿಸಿನೆಸ್ ಮಾಡೆಲ್ಲಿನ, ಜಾಹೀರಾತು ಆಧಾರಿತ, ಉಚಿತ ಇಂಟರ್ನೆಟ್ ಸೇವೆ ಆರಂಭವಾಗಿತ್ತು. ಕ್ಯಾಲ್-ಟೈಗರ್ ಎಂಬ ಕಂಪನಿ ಉಚಿತ ಇಂಟರ್ನೆಟ್ ಸಂಪರ್ಕ ನೀಡಿತ್ತು. ಇಂಟರ್ನೆಟ್ ಕನೆಕ್ಟ್ ಆದಾಗ ಕಂಪ್ಯೂಟರಿನ ತೆರೆಯ ಅಡಿ-ಭಾಗದಲ್ಲಿ ಜಾಹೀರಾತು ಬ್ಯಾನರ್ ಕಾಣಿಸುತ್ತಿದ್ದವು. ಆದರೆ, ಕಂಪನಿಗೆ ಸಾಕಷ್ಟು ಜಾಹೀರಾತು ಸಿಗದೇ, ಕಂಪನಿ ಲಾಸ್ ಆಗಿ, ಕ್ಯಾಲ್-ಟೈಗರ್ ಉಚಿತ ಇಂಟರ್ನೆಟ್ ಸೇವೆ ಬಂದಾಯಿತು.

ಅದೇ ವೇಳೆ, ಚೆಕ್-ಮೇಲ್ ಎಂಬ ಇನ್ನೊಂದು ಸೇವೆಯೂ ಆರಂಭವಾಗಿತ್ತು. ಯಾಹೂ ಥರದ ಇ-ಮೇಲ್ ಸೇವೆ ಇದಾಗಿತ್ತು. ಆದರೆ, ವಿಶೇಷವೆಂದರೆ, ಈ ಇ-ಮೇಲ್ ಸೇವೆ ಬಳಸಿದರೆ, ಕಂಪನಿ ಪ್ರತಿ ತಿಂಗಳೂ ಹಣ ಕೊಡುತ್ತಿತ್ತು... ಚೆಕ್ ರೂಪದಲ್ಲಿ. ಅದಕ್ಕೇ ಚೆಕ್ ಮೇಲ್ ಎಂಬ ಹೆಸರಿತ್ತು. ಕಂಪನಿಗೆ ಜಾಹೀರಾತುಗಳಿಂದ ಆದಾಯ ಬರುತ್ತಿತ್ತು. ಆದರೆ, ಸಾಕಷ್ಟು ಜಾಹೀರಾತು ಸಿಗದೇ ಕಂಪನಿ ನಷ್ಟ ಹೊಂದಿ ಸೇವೆ ಬಂದಾಯಿತು.

ಅದೇ ರೀತಿ... ಜಾಹೀರಾತು ಮೇಲ್ ಓದಿ ಹಣ ಗಳಿಸಿ ಎಂಬ ಇನ್ನೊಂದಿಷ್ಟು ಸೇವೆ ಇತ್ತು. ನಾನು ಇದೆಲ್ಲಾ ಸೇವೆಗೂ ಸದಸ್ಯನಾಗಿದ್ದೆ. ಆರಂಭದಲ್ಲಿ ಉಚಿತ ಇಂಟರ್ನೆಟ್, ಕೆಲವಷ್ಟು ಚೆಕ್ ಎಲ್ಲಾ ಬಂದಿದ್ದು ನಿಜ. ಆದರೆ, ಆ ಕಂಪನಿಗಳ ಬಿಸಿನೆಸ್ ಯಶಸ್ವಿಯಾಗಲಿಲ್ಲ.

ಈಗ ಬ್ಲಿಕ್ ಬಂದಿದೆ. ಬಿಸಿನೆಸ್ ಮಾಡೆಲ್ ಅದೇ. ಪ್ರಾಡಕ್ಟ್ ಮಾತ್ರ ಬೇರೆ.... ಆದ್ದರಿಂದ ಬ್ಲಿಕ್ ಕ್ಲಿಕ್ ಆಗುವುದೋ ಬ್ಲಿಂಕ್ ಆಗುವುದೋ ಎನ್ನುವ ಕುತೂಹಲ ನನಗಿದೆ.

Saturday, June 06, 2009

ಕನ್ನಡ ಟೈಪಿಸಲು ಗೂಗಲ್ ಹೊಸ ತಂತ್ರ - Bookmarklet

ಎಲ್ಲಾದರೂ ಇರಿ. ಎಂತಾದರೂ ಇರಿ. ಆನ್ ಲೈನಲ್ಲಿ ಕನ್ನಡ ಟೈಪ್ ಮಾಡುತ್ತಿರಿ.

ವೆಬ್ ಸೈಟುಗಳಲ್ಲಿ ಕನ್ನಡ ಟೈಪ್ ಮಾಡಲು ಅನೇಕ ವಿಧಾನಗಳಿವೆ ಅಂತ ನನ್ನ ಈ ಹಿಂದಿನ ಲೇಖನದಲ್ಲಿ ತಿಳಿಸಿದ್ದೆ. ಈಗ ಅದೆಲ್ಲಕ್ಕಿಂತ ಇನ್ನೂ ಸುಲಭದ ವಿದ್ಯೆಯನ್ನು ಕಲಿಸಿಕೊಡುತ್ತೇನೆ. Thanks to Google's Newest Bookmarklet!

ಭಾರತೀಯ ಭಾಷಾ ಟೂಲ್ ಅಭಿವೃದ್ಧಿಯಲ್ಲಿ ಗೂಗಲ್ ಇನ್ನೂ ಒಂದು ಹೆಜ್ಜೆ ಮುಂದೆ ಬಂದಿದೆ. ಮೂರು ತಿಂಗಳ ಹಿಂದೆ ಕನ್ನಡ ಸೇರಿದಂತೆ ಭಾರತೀಯ ಭಾಷೆಗಳಿಗೆ ಗೂಗಲ್ ಲಿಪ್ಯಂತರ (Transliteration) ಟೂಲ್ ನೀಡಿತ್ತು ತಾನೇ?. ಆದರೆ, ಆ ಟೂಲ್ ಗೂಗಲ್ ಒಡೆತನದ ಜಿಮೇಲ್, ಬ್ಲಾಗರ್ ಮುಂತಾದ ಸೈಟುಗಳಲ್ಲಿ ಮಾತ್ರ ಕೆಲಸ ಮಾಡುತ್ತಿತ್ತು. ಇದೀಗ, ಜೂನ್ 4ರಂದು, ಕನ್ನಡ ಬುಕ್ಮಾರ್ಕ್-ಲೆಟ್ ಎಂಬ ವಿನೂತನ ಟೂಲನ್ನು ಗೂಗಲ್ ಬಿಡುಗಡೆ ಮಾಡಿದೆ. ಈ ಟೂಲಿಂದ ಯಾವುದೇ ಸೈಟಿನಲ್ಲಿ ಬೇಕಾದರೂ ಕನ್ನಡ ಅಥವಾ ಇತರ ಭಾರತೀಯ ಭಾಷೆಯನ್ನು ಸುಲಭವಾಗಿ ಟೈಪ್ ಮಾಡಬಹುದು. ಕನ್ನಡ ಟೈಪ್ ಮಾಡಲು ಹೆಣಗಾಡುವ ಎಲ್ಲರಿಗೂ ಈ ಟೂಲ್ ನಿಜಕ್ಕೂ ಒಂದು ವರ.

ಅಂದಹಾಗೆ, ಬುಕ್ಮಾರ್ಕ್-ಲೆಟ್ ಅಂದರೆ ಏನು ಅಂತ ನೀವು ಕೇಳಬಹುದು. Bookmark + Applet ಸೇರಿ Bookmarklet ಆಗಿದೆ. ಇದೊಂದು ಅತ್ಯಂತ ಪುಟಾಣಿ ತಂತ್ರಾಂಶ. ಕೆಲವಾರು ಸಾಲುಗಳ ಜಾವಾಸ್ಕ್ರಿಪ್ಟ್ ಅಷ್ಟೇ. ನಿಮ್ಮ ಬ್ರೌಸರಿನಲ್ಲಿ ಇದನ್ನು ಫೇವರಿಟ್ ಲಿಂಕ್ ಆಗಿ ಸೇರಿಸಿಕೊಂಡರೆ ಸಾಕು.ಕನ್ನಡ ಟೈಪ್ ಮಾಡಬೇಕು ಅನ್ನಿಸಿದಾಗ ಈ ಲಿಂಕ್ ಒತ್ತಬೇಕು. ಕನ್ನಡ ಲಿಪ್ಯಂತರ ಕ್ರಿಯೆ ಚಾಲೂ ಆಗುತ್ತದೆ. ಕನ್ನಡ ಟೈಪಿಂಗ್ ಬೇಡ ಅನ್ನಿಸಿದಾಗ ಮತ್ತೆ ಈ ಲಿಂಕ್ ಒತ್ತಿದರೆ ಲಿಪ್ಯಂತಕ ಕ್ರಿಯೆ ಸ್ಥಗಿತಗೊಳ್ಳುತ್ತದೆ.ಇದು ಸಹ "ಫೊನೆಟಿಕ್ ಕೀಬೋರ್ಡ ವಿನ್ಯಾಸ" ಆಧಾರಿತ ಟೂಲ್. ಅಂದರೆ, "Baruttane ಅಂತ ಟೈಪ್ ಮಾಡಿ ಒಂದು ಸ್ಪೇಸ್ ನೀಡಿದರೆ "ಬರುತ್ತಾನೆ" ಅಂತ ತಂತಾನೆ ಲಿಪ್ಯಂತರವಾಗುತ್ತದೆ.

ಈ ಟೂಲನ್ನು ಫೇವರಿಟ್ ಲಿಂಕ್ ಆಗಿ ನಿಮ್ಮ ಬ್ರೌಸರಿಗೆ ಸೇರಿಸಿಕೊಳ್ಳುವುದು ಹೇಗೆ?

1. ಮೊದಲು ಈ ಲಿಂಕಿನ ಮೇಲೆ ರೈಟ್ ಕ್ಲಿಕ್ ಮಾಡಿ. [ಅ Type in Kannada]

2. ಈಗ "Add to Favorites" ಕ್ಲಿಕ್ ಮಾಡಿ.3. ಈಗ ಈ ಕೆಳಗಿನ ಎಚ್ಚರಿಕೆಯ ಸಂದೇಶ ಮೂಡುತ್ತದೆ. ಹೆದರ ಬೇಡಿ. Yes ಬಟನ್ ಒತ್ತಿ. ಏಕೆಂದರೆ, ಈ ಲಿಂಕ್ ಏನೇನೂ ಅಪಾಯಕಾರಿಯಲ್ಲ.4. ಈಗ Links ಡೈರಕ್ಟರಿಯಲ್ಲಿ ಈ ಲಿಂಕನ್ನು ಸೇರಿಸಲು Add ಬಟನ್ ಒತ್ತಿ. ಅಷ್ಟೇ.5. ನಿಮ್ಮ ಕನ್ನಡ ಲಿಪ್ಯಂತರ ಲಿಂಕ್ ಸಿದ್ಧ.6. ಬ್ರೌಸರಿನ ಮೇಲಿರುವ [ಅ Type in Kannada] ಬಟನ್ ಒತ್ತಿ. ಕನ್ನಡ ಲಿಪ್ಯಂತರ ಕ್ರಿಯೆ ಆರಂಭವಾಗುತ್ತದೆ. ಈಗ ವೈಬ್ ಪೇಜಿನಲ್ಲಿ ಎಲ್ಲಿ ಕನ್ನಡ ಟೈಪ್ ಮಾಡಬೇಕೋ ಅಲ್ಲಿ ನಿಮ್ಮ ಮೌಸಿನ ಕರ್ಸರ್ ಇಟ್ಟು ಟೈಪಿಂಗ್ ಆರಂಭಿಸಿ. ಉದಾಹರಣೆಗೆ Sedina Hakki ಅಂತ ಟೈಪ್ ಮಾಡಿ. ಅದು ಸೇಡಿನ ಹಕ್ಕಿ ಅಂತ ಬದಲಾಗುತ್ತದೆ.

ಈ ರೀತಿ ನೀವು ಸುಲಭವಾಗಿ ಯಾವುದೇ ವೆಬ್ ಪೇಜಿನಲ್ಲೂ ಕನ್ನಡ ಟೈಪ್ ಮಾಡಬಹುದು.

ಪ್ರೇಮಲೋಕ - ಸೆಲ್ ಸಿನೆಮಾ!


ಹಂಸಲೇಖಾ ಹಾಗೂ ರವಿಚಂದ್ರನ್ ಜೋಡಿಗೆ ಕನ್ನಡ ಸಿನಿಮಾ ಲೋಕದಲ್ಲಿ ಬ್ರೇಕ್ ನೀಡಿದ ಚಲನಚಿತ್ರ ಪ್ರೇಮಲೋಕ. ಸುಮಾರು ಎರಡು ದಶಕದ ಹಿಂದಿನ ಈ ಸೂಪರ್ ಹಿಟ್ ಚಿತ್ರ ಇದೀಗ ಮೊಬೈಲ್ ಫೋನಿನ ಆಡಿಯೋ ಸಿನಿಮಾ ರೂಪ ತಳೆದಿದೆ. ವೋಡಾಫೋನ್, ಐಡಿಯಾ, ಏರ್ ಟೆಲ್ ಹಾಗೂ ರಿಲಯನ್ಸ್ ಮೊಬೈಲ್ ಫೋನಿನಲ್ಲಿ ಲಭ್ಯವಾಗುತ್ತಿದೆ. ಈ ಚಿತ್ರ ಬೇಡವೆಂದರೆ, ಶೋಲೆ ಹಾಗೂ ಫ್ಯಾಷನ್ ಬಾಲಿವುಡ್ ಚಿತ್ರಗಳೂ ಸೇರಿದಂತೆ ತಮಿಳು, ತೆಲುಗಿನ ಒಟ್ಟೂ 208 ಆಡಿಯೋ ಸಿನಿಮಾಗಳಿವೆ. ಇನ್ನಷ್ಟು ಸಿನಿಮಾಗಳು ಬರಲಿವೆ.

ಇದು ಯು.ಟಿ.ವಿ. ನ್ಯೂ ಮಿಡಿಯಾ ಕಂಪನಿಯ ಹೊಸ ಮನರಂಜನೆ ವ್ಯವಹಾರ. ಮೊನ್ನೆ, ಜೂನ್ 3ರಿಂದ ಮೊಬೈಲ್ ಫೋನುಗಳಿಗೆ ಆಡಿಯೋ ಸಿನೆಮಾ ಎಂಬ ಹೊಸ ಸೇವೆಯನ್ನು ಯು.ಟಿ.ವಿ. ಆರಂಭಿಸಿದೆ. ಇಡೀ ಸಿನಿಮಾದ ಸಂಕ್ಷಿಪ್ತ ಧ್ವನಿ ರೂಪವನ್ನು ಮೊಬೈಲ್ ಫೋನಿನ ಜಾಲದ ಮೂಲಕ ವಿತರಿಸುವುದು ಯು.ಟಿ.ವಿ. ಐಡಿಯಾ. ಈ ಸಿನಿಮಾ ಕೇಳಲು ವೋಡಾಫೋನ್ ಹಾಗೂ ಏರ್ ಟೆಲ್ ನಿಮಿಷಕ್ಕೆ 6 ರುಪಾಯಿ, ಐಡಿಯಾ ಸೆಲ್ಯೂಲಾರ್ 7 ರುಪಾಯಿ ಶುಲ್ಕ ವಿಧಿಸಿದರೆ, ರಿಲಯನ್ಸ್ ತಿಂಗಳಿಗೆ 30 ರುಪಾಯಿ ಚಂದಾಹಣ ಕೇಳುತ್ತದೆ.

ಆಡಿಯೋ ಸಿನಿಮಾ ತುಂಬಾ ಹೊಸ ಕಲ್ಪನೆಯೇನೂ ಅಲ್ಲ. ಹಿಂದೆ, ನಾನು ಚಿಕ್ಕವನಿದ್ದಾಗ ಸಿನೆಮಾಗಳು ಆಡಿಯೋ ಕ್ಯಾಸೆಟ್ ರೂಪದಲ್ಲೂ ಬರುತ್ತಿತ್ತು. ಡೈಲಾಗು ಹಾಗೂ ಹಾಡುಗಳು ಸೇರಿ ಇಡಿ ಸಿನಿಮಾವನ್ನು ಒಂದು ಗಂಟೆಯ ಧ್ವನಿಸುರುಳಿಗೆ ಸರಿಹೋಗುವಂತೆ ಸಂಕ್ಷಿಪ್ತಗೊಳಿಸಿರಲಾಗುತ್ತಿತ್ತು. ಅಲ್ಲದೇ, ಆಕಾಶವಾಣಿಯಲ್ಲೂ ಆಡಿಯೋ ಸಿನೆಮಾ ಧಾರಾವಾಹಿಯಾಗಿ ಬಿತ್ತರವಾಗುತ್ತಿತ್ತು.

ಇದೀಗ ಆಡಿಯೋ ಸಿನಿಮಾ ಮೊಬೈಲ್ ಜಾಲಕ್ಕೆ ಸೇರ್ಪಡೆಯಾಗಿದೆ. ಸೆಲ್ ಫೋನಲ್ಲಿ ಲಭ್ಯವಾಗುವ ಈ ಸಿನಿಮಾವನ್ನು ಸೆಲ್ ಸಿನಿಮಾ ಎನ್ನಬಹುದೇನೋ! ಮೊಬೈಲ್ ಫೋನಿನಲ್ಲಿ ಎಫ್ ಎಂ ರೇಡಿಯೋ ಕೇಳುಗರು ಇರುವಂತೆ ಆಡಿಯೋ ಸಿನಿಮಾಕ್ಕೂ ಕೇಳುಗರು ಸಿಗುವ ಸಾಧ್ಯತೆ ಇಲ್ಲದಿಲ್ಲ.