Saturday, February 28, 2009

ಒಂದು ಖುಷಿ ಸುದ್ದಿ. ನನ್ನ ಮಗಳ ಜಿಪಿಎಸ್ ನಿಬಂಧಕ್ಕೆ ಇಸ್ರೋ ಬಹುಮಾನಭಾರತದಲ್ಲಿ ಉಪಗ್ರಹ ಆಧಾರಿತ ಪಥ ನಿರ್ದೇಶನ ವ್ಯವಸ್ಥೆಯ ಅವಕಾಶಗಳು ಕುರಿತು ನಾಲ್ಕನೇ ತರಗತಿಯಲ್ಲಿರುವ ನನ್ನ ಮಗಳು ಕಳೆದ ವಾರ ಇಸ್ರೋ ಕಚೇರಿಗೆ ಹೋಗಿ ನಿಬಂಧವೊಂದವನ್ನು ಬರೆದುಬಂದಿದ್ದಳು. ನಿಬಂಧ ತಯಾರಿಸಲು ಆಕೆಗೆ ನಾನು ನೆರವು ನೀಡಿದ್ದೆ. ಅದನ್ನು ಒಂದೇ ದಿನದಲ್ಲಿ ಕಂಠಪಾಠ ಮಾಡಿಸಲು ನನ್ನಾಕೆ ಕಷ್ಟಪಟ್ಟಿದ್ದಳು. "ನಮ್ಮಗಳ" ಶ್ರಮ ಫಲಿಸಿದೆ. ಸಂತೋಷದ ಸಮಾಚಾರ ಅಂದರೆ, ನನ್ನ ಮಗಳಿಗೆ ಇಸ್ರೋ ಏರ್ಪಡಿಸಿದ್ದ ಸ್ಪರ್ಧೆಯ ಜೂನಿಯರ್ ವಿಭಾಗದಲ್ಲಿ ಮೊದಲ ಸ್ಥಾನ ಸಿಕ್ಕಿಬಿಟ್ಟಿದೆ! ಇಸ್ರೋ ಕೇಂದ್ರ ಕಚೇರಿಯಲ್ಲಿ ನನ್ನ ಪುಟ್ಟ ಮಗಳು ಇಂದು ಬಹುಮಾನ ಪಡೆಯುತ್ತಾಳೆ. ಆದರೆ, ಆ ವೇಳೆಯಲ್ಲಿ ನಾನು ಅವಳ ಜೊತೆ ಇರುವ ಬದಲು ಗೂಗಲ್ ಇಂಡಿಯಾ ಕೇಂದ್ರ ಕಚೇರಿಯಲ್ಲಿ ಅಂತರ್ಜಾಲ ಸಮ್ಮೇಳನದಲ್ಲಿ ಪಾಲ್ಗೊಂಡಿರುತ್ತೇನೆ ಎಂಬುದೊಂದೇ ಬೇಸರದ ಸಂಗತಿ.

ಅಂದಹಾಗೆ, ಆಕೆಯ ನಿಬಂಧ ಹೇಗಿತ್ತು? ಹಾಗೆ ಸುಮ್ಮನೆ ನಿಮ್ಮ ಟೈಂ ಪಾಸಿಗೆ...

ಉಪಗ್ರಹ ಆಧಾರಿತ ಪಥ ನಿರ್ದೇಶನ ವ್ಯವಸ್ಥೆ

ನಾವು ಒಮ್ಮೆ ಹೈದರಾಬಾದಿಗೆ ಹೋಗಿದ್ದೆವು. ಅಲ್ಲಿ ಊರು ನೋಡಲು ನಾವು ಕಾರಿನಲ್ಲಿ ಅಡ್ಡಾಡ್ಡುತ್ತಿದ್ದೆವು. ನನ್ನ ತಂದೆ ಕಾರು ಓಡಿಸುತ್ತಿದ್ದರು.ಆದರೆ,ಅವರಿಗೆ ಅಲ್ಲಿನ ದಾರಿ ಸರಿಯಾಗಿ ಗೊತ್ತಿರಲಿಲ್ಲ.ಆದರೂ, ಅವರು ಸರಿಯಾದ ದಾರಿಯಲ್ಲೇ ಕಾರು ಓಡಿಸುತ್ತಿದ್ದರು. ಹೇಗೆಂದರೆ, ಅವರ ಫೋನಿನಲ್ಲಿ ಊರಿನ ನಕಾಶೆ ಹಾಗೂ ದಾರಿ ತೋರಿಸುವ ವ್ಯವಸ್ಥೆ ಇತ್ತು. ಅದರಲ್ಲಿ, ಯಾವ ರಸ್ತೆಯಲ್ಲಿ ಹೋಗಬೇಕು,ಯಾವ ಕ್ರಾಸಿನಲ್ಲಿ ಕಾರು ತಿರುಗಿಸಬೇಕು, ಎಂದೆಲ್ಲ ತಂದೆಯವರಿಗೆ ಸರಿಯಾಗಿ ತಿಳಿಯುತ್ತಿತ್ತು.

ಆಗ, ನಾನು ತಂದೆಯವರ ಬಳಿ, ಅದು ಏನು ಅಂತ ಕೇಳಿದೆ.

ಅದಕ್ಕೆ ತಂದೆ ಉತ್ತರಿಸಿದರು... ಮರಿ, ಇದು ಜಿಪಿಎಸ್ ಉಪಕರಣ ಅಂತ.

ಹಾಗಂದರೆ ಏನು ಎಂದು ನಾನು ಕೇಳಿದೆ.

ಅದಕ್ಕೆ ಅವರು ಹೇಳಿದರು... ಮರೀ ಇದು, ಉಪಗ್ರಹ ಆಧಾರಿತ ಪಥ ನಿರ್ದೇಶನ ವ್ಯವಸ್ಥೆ. ಉಪಗ್ರಹವನ್ನು ಬಳಸಿಕೊಂಡು ನಾವು ಎಲ್ಲಿದ್ದೇವೆ, ನಾವು ಹೋಗಬೇಕಾದ ದಾರಿ ಯಾವುದು ಎಂದು ತಿಳಿದುಕೊಳ್ಳುವ ತಂತ್ರಜ್ಞಾನ ಎಂದು ಅವರು ವಿವರಿಸಿದರು.

ಅದೇ ಸಮಯದಲ್ಲಿ, ದೂರದ ಅಮೆರಿಕದಲ್ಲಿ ನನ್ನ ಚಿಕ್ಕಮ್ಮ ತಮ್ಮ ಕಂಪ್ಯೂಟರಿನಲ್ಲಿ ನಮ್ಮ ಕಾರು ಎಲ್ಲಿದೆ ತಿಳಿದುಕೊಳ್ಳುತ್ತಿದ್ದರು. ಅವರಿಗೆ ನಮ್ಮ ಕಾರು ಹೈದರಾಬಾದಿನ ಯಾವ ರಸ್ತೆಯಲ್ಲಿ ಚಲಿಸುತ್ತಿದೆ ಎಂದು ನಕಾಶೆಯಲ್ಲಿ ಕಾಣಿಸುತ್ತಿತ್ತು.

ಇದು ಕೇವಲ ದಾರಿ ತೋರಿಸುವ ತಂತ್ರಜ್ಞಾನವಲ್ಲ. ಜಿಪಿಎಸ್ ತಂತ್ರಜ್ಞಾನದಿಂದ ಇನ್ನೂ ಅನೇಕ ಉಪಯೋಗವಿದೆ. ಇಂದು ಪಧ ನಿರ್ದೇಶನ ಉಪಗ್ರಹಗಳಿಂದ ಭೂಮಿಯಲ್ಲಿ ಯಾವುದೇ ಒಂದು ವಸ್ತುವಿನ ನಿಖರವಾದ ಸ್ಥಳ, ದಿಕ್ಕು ಹಾಗೂ ವೇಳೆ ತಿಳಿಯುತ್ತದೆ. ಇದಕ್ಕೆ PNT (Position, Navigation & Timing) ಸೇವೆ ಎಂದು ಹೇಳುತ್ತಾರೆ. ಇವುಗಳನ್ನು ಉಪಯೋಗಿಸಿಕೊಂಡು ವಾಹನಗಳು ಹೈವೇಯಲ್ಲಿ ಎಲ್ಲಿ ಚಲಿಸುತ್ತಿವೆ? ರೈಲು ಯಾವ ವೇಳೆಯಲ್ಲಿ, ಎಲ್ಲಿದೆ? ವಿಮಾನ ಹಾಗೂ ಹಡಗುಗಳು ಎಲ್ಲಿ ಎಷ್ಟು ವೇಗದಲ್ಲಿ ಯಾವ ದಿಕ್ಕಿನಲ್ಲಿ ಚಲಿಸುತ್ತಿವೆ? ಎಂದೆಲ್ಲಾ ತಿಳಿಯುತ್ತದೆ. ಈ ತಂತ್ರಜ್ಞಾನವನ್ನು ಹೈವೇ ಹಾಗೂ ನಗರ ಟ್ರಾಫಿಕ್ ನಿರ್ವಹಣೆ, ವಾಯು ಹಾಗೂ ಜಲ ಸಂಚಾರ ನಿರ್ವಹಣೆ, ಯುದ್ಧ ಗೂಢಚಾರಿಕೆ ಮುಂತಾದ ಕ್ಷೇತ್ರಗಳಲ್ಲಿ ಬಳಸಿಕೊಳ್ಳಬಹುದು ಎಂದು ತಂದೆಯವರು ವಿವರಿಸಿದರು.

ಅಮೆರಿಕದ ಜಿಪಿಎಸ್, ಭಾರತದ ಆಕಾಶ್

ಜಿಪಿಎಸ್ ಎಂದರೆ, ಗ್ಲೋಬಲ್ ಪೊಸಿಷನಿಂಗ್ ಸಿಸ್ಟಂ. ಇದು ಅಮೆರಿಕದ ರಕ್ಷಣಾ ಇಲಾಖೆ 1970ರಲ್ಲಿ ಅಭಿವೃದ್ಧಿ ಪಡಿಸಿದ ತಂತ್ರಜ್ಞಾನ. ಗಗನದಲ್ಲಿ 28 ಉಪಗ್ರಹಗಳ ಒಂದು ಜಾಲ ಸ್ಥಾಪಿಸಲಾಗಿದೆ. ಈ ಮೂಲಕ ಭೂಮಿಯ ಪ್ರತಿಯೊಂದೂ ವಸ್ತುವಿನ ಚಲನ-ವಲನ ತಿಳಿದುಕೊಳ್ಳಲು ಅಮೆರಿಕಕ್ಕೆ ಸಾಧ್ಯವಾಗಿದೆ. ಈ ತಂತ್ರಜ್ಞಾನವನ್ನು ಮಿಲಿಟರಿ ಬಳಕೆಗೆ ಮಾತ್ರವಲ್ಲ ಸಾಮಾನ್ಯ ನಾಗರಿಕರ ಬಳಕೆಗೂ ಅಮೆರಿಕ ನೀಡುತ್ತದೆ. ಆದ್ದರಿಂದ, ಈ ಜಿಪಿಎಸ್ ಉಪಗ್ರಹ ಸೇವೆಯನ್ನು ಜಗತ್ತಿನ ಅನೇಕ ದೇಶಗಳು ಬಳಸಿಕೊಳ್ಳುತ್ತಿವೆ. ಈಗ ಬೇರೆ ಬೇರೆ ದೇಶಗಳು ತಮ್ಮದೇ ಉಪಗ್ರಹ ಆಧಾರಿತ ಪಥ ನಿರ್ದೇಶನ ಉಪಗ್ರಹ ಜಾಲಗಳನ್ನು ರೂಪಿಸುತ್ತಿವೆ.

ಸದ್ಯ, ಭಾರತ ಅಮೇರಿಕದ ಜಿಪಿಎಸ್ ವ್ಯವಸ್ಥೆಯನ್ನೇ ಬಳಸಿಕೊಳ್ಳುತ್ತಿದೆ. ಆದರೆ, ಇನ್ನು ಕೆಲವೇ ವರ್ಷಗಳಲ್ಲಿ ಭಾರತ ಕೂಡ ತನ್ನದೇ ಉಪಗ್ರಹ ಆಧಾರಿತ ಪಥ ನಿರ್ದೇಶನ ವ್ಯವಸ್ಥೆಯನ್ನು ಸ್ಥಾಪಿಸಲು ಉದ್ದೇಸಿಸಿದೆ. 7 ಉಪಗ್ರಹಗಳ ಈ IRNSS ವ್ಯವಸ್ಥೆಗೆ 1600 ಕೋಟಿ ರುಪಾಯಿ ವೆಚ್ಚವಾಗಲಿದೆ. ಇನ್ನು 3-4 ವರ್ಷದಲ್ಲಿ ಈ ನಮ್ಮ ಸ್ವತಂತ್ರ ವ್ಯವಸ್ಥೆ ಜಾರಿಗೆ ಬರಬಹುದು. ಭಾರತದ "ಇಸ್ರೋ" ಈ ಯೋಜನೆಯನ್ನು ರೂಪಿಸಿದೆ. ಈಗಾಗಲೇ, ಗಗನ್ ಎಂಬ ಉಪಗ್ರಹ ಆಧಾರಿತ ಪಥ ನಿರ್ದೇಶನ ವ್ಯವಸ್ಥೆಯನ್ನು ನಾಗರಿಕ ವಿಮಾನ ಸಂಚಾರ ನಿರ್ವಹಣೆಗಾಗಿ ಇಸ್ರೋ ಸ್ಥಾಪಿಸಿದೆ.

ಈ ಆಧುನಿಕ ವ್ಯವಸ್ಥೆ ಭಾರತದಲ್ಲಿ ಸಂಪೂರ್ಣವಾಗಿ ಜಾರಿಯಾದರೆ, ನಗರದ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆಯನ್ನು ಸುಧಾರಿಸಿ ಈಗಿನಂತೆ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಆಗುವುದನ್ನು ತಡೆಯಬಹುದು. ಅಪಘಾತ ಆದಲ್ಲಿಗೆ ತಕ್ಷಣ ರಕ್ಷಣಾ ದಳವನ್ನು ಕಳಿಸಬಹುದು. ಶಾಲೆಯಲ್ಲಿರುವ ಕಂಟ್ರೋಲ್ ರೂಮಿನಲ್ಲಿ ನಮ್ಮ ಸ್ಕೂಲ್ ಬಸ್ ಎಲ್ಲಿದೆ ಎಂದು ತಿಳಿದುಕೊಳ್ಳಬಹುದು. ಆಕಾಶದಲ್ಲಿ ವಿಮಾನಗಳು ಹಾಗೂ ರೇಲ್ವೆ ಹಳಿಯ ಮೇಲೆ ರೈಲುಗಳು ಡಿಕ್ಕಿ ಹೊಡೆಯುವುದನ್ನು ತಪ್ಪಿಸಬಹುದು. ಮೀನುಗಾರರು ಸಮುದ್ರದಲ್ಲಿ ಕಳೆದುಹೋಗದಂತೆ ಮಾಡಬಹುದು. ಭಾರತದ ಗಡಿ ಕಾಯಲು ಹಾಗೂ ಸೈನಿಕರ ಚಲನ ವಲನ ನಿರ್ವಹಣೆಗೆ ಈ ತಂತ್ರಜ್ಞಾನ ಬಹು ಉಪಯುಕ್ತವಾಗಲಿದೆ. ಎಲ್ಲೋ ಕಾಡಿನ ನಡುವೆ ಇರುವ ವಿದ್ಯುತ್ ಅಥವಾ ಜಾಲ ಸರಿಯಾಗಿದೆಯೇ? ಅಥವಾ ಎಲ್ಲಿ ತುಂಡಾಗಿದೆ? ಎಂದು ತಿಳಿದುಕೊಳ್ಳಲು ಬಳಸಿಕೊಳ್ಳಬಹುದು.

ಆದ್ದರಿಂದ, ಭಾರತದಲ್ಲಿ ಈ ಉಪಗ್ರಹ ಆಧಾರಿತ ಪಥ ನಿರ್ದೇಶನ ವ್ಯವಸ್ಥೆಗೆ ಅಪಾರ ಅವಕಾಶವಿದೆ ಎಂದು ನನಗೆ ಅರಿವಾಯಿತು.

Sunday, February 22, 2009

ಕಂಡಲ್ಲೆಲ್ಲಾ ಓದಿ ಕಿಂಡಲ್ಲಲ್ಲಿ!

ಆಥರ್‌ಗೊಂದು ಕಾಲ
eಥರ್‌ಗೊಂದು ಕಾಲ!ಇ-ಪುಸ್ತಕಗಳು ಹತ್ತು ವರ್ಷಗಳ ಹಿಂದೆ
ಸುದ್ದಿ ಮಾಡಲಾರಂಭಿಸಿದಾಗ...
‘ಅವೆಲ್ಲ ಯಶಸ್ವಿಯಾಗಲ್ಲ, ಬಿಡಿ.
ಗಂಟೆಗಟ್ಟಲೆ ಕಾದಂಬರಿ ಓದೋಕೆ
ಯಾರು ಕಂಪ್ಯೂಟರ್ ಮುಂದೆ ಗೂಬೆಯ ಥರ ಕೂತಿರ್ತಾರೆ?
ನಾವೇನು ಟಾಯ್ಲೆಟ್ಟಲ್ಲಿ ಕೂತು ಇ-ಪುಸ್ತಕ ಓದೋಕಾಗುತ್ತಾ?
ಬೆಡ್ ಮೇಲೆ ಮಲಕ್ಕೊಂಡು,
ರೈಲಿನಲ್ಲಿ ಹೋಗೋವಾಗ ಇ-ಪುಸ್ತಕ ಓದೋಕಾಗುತ್ತಾ?
ಇ-ಪುಸ್ತಕ ಕಾಗದದ ಪುಸ್ತಕಕ್ಕೆ ಯಾವತ್ತೂ ಪರ್ಯಾಯವಾಗೋಲ್ಲ’
ಎನ್ನುವ ಅಭಿಪ್ರಾಯವಿತ್ತು...

ಪುಸ್ತಕದ eಥರ್ ಯಾರು? eಥರ್ ಬರೆದ ಆ ಪುಸ್ತಕ ಬಂದಿದೆಯಾ? ಓಹ್... ಈ eಥರ್ ಯಾವ್ ಥರ ಬರೀತಾನೆ ಗೊತ್ತಾ? ನಾನು ಈ eಥರ್‌ನ ಫ್ಯಾನ್ -ಎಂದು ಕೇಳುವ ಕಾಲ ಕೊನೆಗೂ ಸನ್ನಿಹಿತವಾಗಿದೆ. ಆಥರ್‌ಗಳು e-ಥರ್‌ಗಳಾಗುತ್ತಿದ್ದಾರೆ. ಪುಸ್ತಕಲೋಕದಲ್ಲೂ ಡಿಜಿಟಲ್ ಗಾಳಿ ಜೋರಾಗಿಯೇ ಬೀಸಲಾರಂಭಿಸಿದೆ. e-ಪುಸ್ತಕಗಳ ಜಮಾನಾ ಆರಂಭವಾಗಿದೆ.
e-ಪುಸ್ತಕಗಳೆಂದರೆ ಎಲೆಕ್ಟ್ರಾನಿಕ್ ಪುಸ್ತಕಗಳು. ಅಂದರೆ, ಕಾಗದದ ಪುಸ್ತಕದ ಯಥಾವತ್ ಡಿಜಿಟಲ್ ರೂಪ. e-ಪುಸ್ತಕಗಳನ್ನು ಕಂಪ್ಯೂಟರ್ ಅಥವಾ ಡಿಜಿಟಲ್ ಸಾಧನಗಳಲ್ಲಿ ಮಾತ್ರ ಓದಲು ಸಾಧ್ಯ. ಈ e-ಪುಸ್ತಕ ಬರೆಯುವ ಲೇಖಕರನ್ನು ‘ಆಥರ್ ಬದಲು ಇ-ಥರ್’ ಎಂದು ಪನ್ ಮಾಡಬಹುದೇನೋ!

ಇ-ಪುಸ್ತಕಗಳು ಹತ್ತು ವರ್ಷಗಳ ಹಿಂದೆ ಸುದ್ದಿ ಮಾಡಲಾರಂಭಿಸಿದಾಗ... ‘ಅವೆಲ್ಲ ಯಶಸ್ವಿಯಾಗಲ್ಲ, ಬಿಡಿ. ಯಾರು ಗಂಟೆಗಟ್ಟಲೆ ಕಾದಂಬರಿ ಓದೋಕೆ ಕಂಪ್ಯೂಟರ್ ಮುಂದೆ ಗೂಬೆಯ ಥರ ಕೂತಿರ್ತಾರೆ? ನಾವೇನು ಟಾಯ್ಲೆಟ್ಟಲ್ಲಿ ಕೂತು e-ಪುಸ್ತಕ ಓದೋಕಾಗುತ್ತಾ? ಬೆಡ್‌ಮೇಲೆ ಮಲಕ್ಕೊಂಡು, ರೈಲಿನಲ್ಲಿ ಹೋಗೋವಾಗ e-ಪುಸ್ತಕ ಓದೋಕಾಗುತ್ತಾ? e-ಪುಸ್ತಕ ಕಾಗದದ ಪುಸ್ತಕಕ್ಕೆ ಯಾವತ್ತೂ ಪರ್ಯಾಯವಾಗೋಲ್ಲ’ ಎನ್ನುವ ಅಭಿಪ್ರಾಯವಿತ್ತು.

ಆದರೆ, ಈಗ ಪರಿಸ್ಥಿತಿ ಹಾಗಿಲ್ಲ. ಹೈಟೆಕ್ ಮೊಬೈಲ್ ಫೋನುಗಳು, ಅಂಗೈ ಅಗಲದ ಪಿಡಿಎಗಳು, e-ಪುಸ್ತಕ ರೀಡರ್‌ಗಳು ಬಂದಾಗಿನಿಂದ e-ಪುಸ್ತಕದ ಭರಾಟೆ ಜೋರಾಗಿದೆ.

ಅದರಲ್ಲೂ, ‘ಅಮೇಝಾನ್ ಕಿಂಡಲ್’ ಎಂಬ e-ಬುಕ್ ರೀಡರ್, ಪುಸ್ತಕ ಲೋಕದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದೆ. ಸಂಗೀತ ಕ್ಷೇತ್ರದಲ್ಲಿ ಐಪೋಡ್ ಸೃಷ್ಟಿಸಿದ ‘ಕೇಳಾಹಲ’ವನ್ನು ಪುಸ್ತಕ ಪ್ರಪಂಚದಲ್ಲಿ ಕಿಂಡಲ್ ಉಂಟು ಮಾಡಿದೆ. ಐಪೋಡ್ ಹೇಗೆ ಯುವ ಜನರ ಫ್ಯಾಷನ್ ಸ್ಟೇಟ್‌ಮೆಂಟ್ ಆಯಿತೋ, ಕಿಂಡಲ್ ಕೂಡ ಸ್ಟೈಲ್ ಐಕಾನ್ ಆಗಿದೆ. ಐಪೋಡ್ ಹೇಗೆ ಮಕ್ಕಳು ಹಾಗೂ ವಯಸ್ಕರಿಗೂ ಇಷ್ಟವಾಯಿತೋ ಹಾಗೇ ಕಿಂಡಲ್ ಕೂಡ ಎಲ್ಲ ವಯಸ್ಸಿನವರಿಗೂ ಇಷ್ಟವಾಗುತ್ತಿದೆ. ಐಪೋಡ್‌ನಿಂದ ಪ್ರಭಾವಿತವಾಗಿ ಹೇಗೆ ಹಲವಾರು ಕಂಪನಿಗಳು ಬೇರೆ ಬೇರೆ ರೀತಿಯ ಎಂಪಿ-ಥ್ರಿ ಸಂಗೀತ ಕೇಳಿಸುವ ಸಾಧನಗಳನ್ನು ಬಿಡುಗಡೆ ಮಾಡಿದವೋ ಹಾಗೇ, ಕಿಂಡಲ್‌ನಿಂದ ಪ್ರಬಾವಿತವಾಗಿ ಅನೇಕ ಕಂಪನಿಗಳು ಬೇರೆ ಬೇರೆ ರೀತಿಯ ಇ-ಪುಸ್ತಕ ಓದುವ ಸಾಧನಗಳನ್ನು ಬಿಡುಗಡೆ ಮಾಡುತ್ತಿವೆ. ರೈಲು, ಬಸ್ಸು, ವಿಮಾನ, ಕಚೇರಿ, ಮನೆ... ಹೀಗೆ ಎಲ್ಲೆಂದರಲ್ಲಿ ಐಪೋಡ್ ಹೇಗೆ ಕಾಣಿಸುತ್ತಿದೆಯೋ ಅದೇ ರೀತಿ ಕಿಂಡಲ್ ಎಲ್ಲೆಂದರಲ್ಲಿ ಕಾಣಿಸಲು ಆರಂಭಿಸಿದೆ. ಅಷ್ಟರ ಮಟ್ಟಿಗೆ ಕಿಂಡಲ್ಲನ್ನು ಪುಸ್ತಕ ಲೋಕದ ಐಪೋಡ್ ಅಂತ ಕರೆಯಬಹುದು.

ಥೇಟ್ ಪುಸ್ತಕ:ನೂರು ಪೇಜಿನ ಸಾಮಾನ್ಯ ಕವನ ಸಂಕಲನದಷ್ಟು ಗಾತ್ರದ ವಿದ್ಯುನ್ಮಾನ ಸಾಧನ ಈ ಕಿಂಡಲ್. ಪುಸ್ತಕದ ಹಾಳೆಗಿಂತ ತುಸು ಚಿಕ್ಕ ಪರದೆಯಲ್ಲಿ ಅಕ್ಷರ ಹಾಗೂ ಚಿತ್ರಗಳು ಕಾಣಿಸುತ್ತವೆ. ಒಂದು ಕಿಂಡಲ್‌ನಲ್ಲಿ ಸುಮಾರು ೨೦೦ ಕಾದಂಬರಿಗಳನ್ನು ತುಂಬಿಟ್ಟುಕೊಳ್ಳಬಹುದು. ಯಾವಾಗ ಬೇಕಾದರೂ, ಯಾವ ಪುಸ್ತಕ ಬೇಕೋ ಅದನ್ನು ‘ಓಪನ್’ ಮಾಡಿಕೊಂಡು ಮಾಮೂಲಿ ಪುಸ್ತಕದ ರಿತಿಯೇ ಓದಬಹುದು. ಟಾಯ್ಲೆಟ್ಟಲ್ಲೂ, ಹಾಸಿಗೆಯಲ್ಲೂ, ಬಸ್ಸು-ರೈಲಿನಲ್ಲೂ... ಎಲ್ಲೆಲ್ಲೂ ಥೇಟ್ ಪುಸ್ತಕ ಓದಿದ ರೀತಿಯೇ ಓದಬಹುದು.

Prev Page ಎಂಬ ಬಟನ್ ಒತ್ತಿದರೆ ಪುಟ ಮುಗುಚಿ ಹಿಂದಿನ ಪುಟ ತೆರೆದುಕೊಳ್ಳುತ್ತದೆ. Next Page ಎಂಬ ಬಟನ್ ಒತ್ತಿದರೆ, ಮುಂದಿನ ಪುಟ ತೆರೆದುಕೊಳ್ಳುತ್ತದೆ. ಹಾಗಾಗಿ, ಕಾಗದದ ಪುಸ್ತಕ ಓದಿದ ಸುಖವೇ ಸಿಗುತ್ತದೆ.

ಪುಸ್ತಕಕ್ಕಿಂತ ಉತ್ತಮ:

ಹಾಗೆ ನೋಡಿದರೆ, ಕಿಂಡಲ್‌ನಲ್ಲಿ ಕಾಗದದ ಪುಸ್ತಕಕ್ಕಿಂತ ಹೆಚ್ಚು ಅನುಕೂಲವಿದೆ. ಕನ್ನಡಕದ ಸಮಸ್ಯೆಯಿರುವವರು ಅಕ್ಷರ ಗಾತ್ರವನ್ನು ಹಿಗ್ಗಿಸಿಕೊಂಡು ಓದಬಹುದು.ಸರ್ಚ್ ಬಟನ್ ಒತ್ತಿ ಯಾವುದೋ ಒಂದು ಶಬ್ದಕ್ಕಾಗಿ ಇಡೀ ಪುಸ್ತಕವನ್ನು ಕ್ಷಣ ಮಾತ್ರದಲ್ಲಿ ಹುಡುಕಬಹುದು. ಯಾವುದೋ ಒಂದು ಶಬ್ದ ಅರ್ಥವಾಗದಿದ್ದರೆ ಕಿಂಡಲ್‌ನಲ್ಲೇ ನಿಘಂಟು ನೆರವು ಲಭ್ಯ. ಬ್ಯಾಕ್ ಲೈಟ್ ಆನ್ ಮಾಡಿ ಸಂಪೂರ್ಣ ಕತ್ತಲೆಯಲ್ಲೂ ಪುಸ್ತಕ ಓದಬಹುದು. ಓದಲು ಬೇಜಾರಾದರೆ, text-to-speech ಬಟನ್ ಒತ್ತಿದರೆ ಸಾಕು... ಕಿಂಡಲ್ ತಾನೇ ಪುಸ್ತಕವನ್ನು ಓದಿ ಹೇಳುತ್ತದೆ. ಪುಸ್ತಕ ಖರೀದಿಗೆ ಅಂಗಡಿಗೆ ಹೋಗುವ ಅಗತ್ಯವಿಲ್ಲ. ವೈರ್‌ಲೆಸ್ ಸಂಪರ್ಕದ ಮೂಲಕ ಒಂದೇ ನಿಮಿಷದಲ್ಲಿ ಇಡೀ ಪುಸ್ತಕವನ್ನು ಅಮೇಜಾನ್ ಕಿಂಡಲ್ ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. (ಸದ್ಯ ಈ ಉಚಿತ ವೈರ್‌ಲೆಸ್ ಸೌಲಭ್ಯ ಅಮೆರಿಕ, ಯೂರೋಪ್‌ನಲ್ಲಿ ಮಾತ್ರ ಇದೆ.)

ಒಮ್ಮೆ ೨ ಗಂಟೆ ಬ್ಯಾಟರಿ ಚಾರ್ಜ್ ಮಾಡಿದರೆ ವಾರಗಟ್ಟಲೇ ಓದಬಹುದು. ಪುಸ್ತಕಕ್ಕಿಂತ ಹಗುರ. ಕೇವಲ ೩೦೦ ಗ್ರಾಂ ತೂಕ. ಒಂದು ವೇಳೆ ಮೇಜಿನ ಮೇಲಿಂದ ಬಿದ್ದರೂ ಒಡೆಯದಷ್ಟು ಮಜಬೂತಾಗಿದೆ. ಇದರಲ್ಲಿ ಎಲ್‌ಸಿಡಿ ಅಥವಾ ಪ್ಲಾಸ್ಮಾ ತಂತ್ರಜ್ಞಾನದ ಬದಲು ‘ಇ-ಪೇಪರ್’ ತಂತ್ರಜ್ಞಾನವಿದೆ. ಹಾಗಾಗಿ, ಕಣ್ಣಿಗೆ ಸ್ವಲ್ಪವೂ ಹಾನಿಯಿಲ್ಲ. ಇದೆಲ್ಲ ಕಾರಣದಿಂದ ಮಾಮೂಲಿ ಪುಸ್ತಕ ಓದುವುದಕ್ಕಿಂತ ಕಿಂಡಲ್‌ನಲ್ಲಿ ಇ-ಪುಸ್ತಕ ಓದುವುದೇ ಒಂದು ಮಣ ಹೆಚ್ಚು ಸುಖ.

ಆದರೂ, ಕಿಂಡಲ್‌ನ ದೊಡ್ಡ ಸಮಸ್ಯೆ ಎಂದರೆ, ಬಣ್ಣಗಳದ್ದು. ಈ ಉಪಕರಣದಲ್ಲಿ ಇ-ಪೇಪರ್ ತಂತ್ರಜ್ಞಾನ ಇರುವುದರಿಂದ ಉತ್ಕೃಷ್ಟ ಬಣ್ಣಗಳನ್ನು ತೋರಿಸಲು ಸಾಧ್ಯವಿಲ್ಲ. ಅದಕ್ಕಾಗಿ ಸದ್ಯ ಕಿಂಡಲ್ ಕಪ್ಪು-ಬಿಳುಪು ಪುಸ್ತಕಗಳಿಗೆ ಮಾತ್ರ ಯೋಗ್ಯ. ಮುಂದೆ, ಇ-ಪೇಪರ್ ತಂತ್ರಜ್ಞಾನ ಅಭಿವೃದ್ಧಿಯಾಗೇ ಆಗುತ್ತದೆ. ಆಗ ನೈಜವರ್ಣದ ಪುಸ್ತಕಗಳನ್ನು ಕಿಂಡಲ್‌ನಲ್ಲಿ ಓದಬಹುದು.

ಕಾಲು ಕಿಮ್ಮತ್ತಿಗೆ ಲಕ್ಷಾಂತರ ಇ-ಪುಸ್ತಕಗಳು :

ಇಂದು ಎಲ್ಲಾ ಪುಸ್ತಕಗಳೂ ಡಿಜಿಟಲ್ ರೂಪದಲ್ಲಿ ಲಭ್ಯವಿಲ್ಲ. ಆದರೂ, ಹಲವಾರು ಲಕ್ಷ ಪುಸ್ತಕಗಳು ಇ-ಪುಸ್ತಕ ರೂಪದಲ್ಲಿ ಲಭ್ಯ. ಇ-ಪುಸ್ತಕಗಳ ಬೆಲೆ ಮಾಮೂಲಿ ಪುಸ್ತಕಗಳಿಗಿಂತ ಸಿಕ್ಕಾಪಟ್ಟೆ ಕಡಿಮೆ. ಅಲ್ಲದೇ ಹತ್ತಾರು ಸಾವಿರ ಉಚಿತ ಇ-ಪುಸ್ತಕಗಳು ಅಂತರ್ಜಾಲದಲ್ಲಿ ಲಭ್ಯ. (ಕನ್ನಡದಲ್ಲಿ ಇನ್ನೂ ಇ-ಪುಸ್ತಕ ಬಂದಿಲ್ಲ. ಕನ್ನಡದ ಮೊಟ್ಟ ಮೊದಲ ಇ-ಥರ್ ಯಾರಾಗಬಹುದು ಎನ್ನುವ ಕುತೂಹಲ ನನಗಿದೆ.)

ಅಮೆರಿಕದ ‘ಅಮೇಝಾನ್ ಡಾಟ್ ಕಾಮ್’ ಅಂತರ್ಜಾಲ ಆಧಾರಿತ ವಿಶ್ವದ ಅತಿದೊಡ್ಡ ಪುಸ್ತಕದ ಅಂಗಡಿ. ಅದು ಒಂದು ದಶಕದಿಂದ ಪುಸ್ತಕ ವ್ಯಾಪಾರ ಉದ್ದಿಮೆಯಲ್ಲಿ ಕ್ರಾಂತಿಯನ್ನೇ ಉಂಟುಮಾಡಿದೆ. ಒಂದಲ್ಲ ಒಂದು ದಿನ ಡಿಜಿಟಲ್ ಕ್ರಾಂತಿ ಪುಸ್ತಕ ಲೋಕದಲ್ಲೂ ಆಗುತ್ತದೆ ಎಂಬ ನಂಬಿಕೆ ಅದಕ್ಕಿತ್ತು. ಅದಕ್ಕೇ, ಐದಾರು ವರ್ಷಗಳಿಂದ ಇ-ಪುಸ್ತಕ ಸಾಧ್ಯತೆಯ ಬಗ್ಗೆ ಅನೇಕ ಪ್ರಯೋಗಗಳನ್ನು ಮಾಡಿದೆ. ೨೦೦೭ರಲ್ಲಿ ‘ಕಿಂಡಲ್’ ಎಂಬ ಇ-ಬುಕ್ ರೀಡರ್ ಬಿಡುಗಡೆಯಾದಾಗಿನಿಂದ ಅಮೇಝಾನ್‌ನ ನಂಬಿಕೆ ನಿಜವಾಗುತ್ತಿದೆ. ನಾಡಿದ್ದು, ಕಿಂಡಲ್‌ನ ಸುಧಾರಿತ ಮಾದರಿ ಕಿಂಡಲ್ ೨.೦ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದೆ.

ಇಲ್ಲೊಂದು ಕಿಂಡಲ್ ಕುರಿತ ವಿಡಿಯೋ ಇದೆ ನೋಡಿ:


ಕಿಂಡಲ್‌ಗೆ ಪರ್ಯಾಯ :

ಮಾಮೂಲಿ ಕಂಪ್ಯೂಟರ್, ಲ್ಯಾಪ್‌ಟಾಪ್, ಐಪೋಡ್, ಹೈಟೆಕ್ ಮೊಬೈಲ್ ಫೋನು, ಅಂಗೈ ಕಂಪ್ಯೂಟರು ಹಾಗೂ ಪಿಡಿಎಗಳಲ್ಲೂ ಇ-ಪುಸ್ತಕ ಓದಲು ಸಾಧ್ಯ. ಆದರೆ, ಪುಸ್ತಕ ಓದಿದ ಸುಖ ಸಿಗುವುದಿಲ್ಲ. ಆದ್ದರಿಂದ, ಅವುಗಳನ್ನು ಕಿಂಡಲ್‌ಗೆ ಪರ್ಯಾಯ ಎಂದು ಹೇಳಲಾಗದು. ಉದಾಹರಣೆಗೆ ಮೊಬೈಲ್ ಫೋನಿನಲ್ಲಿ ಕ್ಯಾಮರಾ ಇದೆ. ಹಾಗಂತ, ಅದನ್ನು ಡಿಜಿಟಲ್ ಕ್ಯಾಮೆರಾಗೆ ಪರ್ಯಾಯ ಎಂದು ಹೇಳಲಾದೀತೇ?

ಆ ದೃಷ್ಟಿಯಲ್ಲಿ, ಕಿಂಡಲ್‌ಗಿಂತ ಮೂರು ವರ್ಷ ಮೊದಲೇ ಮಾರುಕಟ್ಟೆಗೆ ಬಂದಿದ್ದ ಸೋನಿ ಕಂಪನಿಯ ಲೈಬ್ರೀ ಹಾಗೂ ಸೋನಿ ಇ-ರೀಡರ್ ಕಿಂಡಲ್‌ಗೆ ಇಂದೂ ದೊಡ್ಡ ಪ್ರತಿಸ್ಪರ್ಧಿಗಳು. ಕಿಂಡಲ್‌ಗೆ ಮಾರುಕಟ್ಟೆಯಲ್ಲಿ ಮೊದಲ ಸ್ಥಾನವಾಗಿದ್ದರೆ, ಸೋನಿ ಇ-ರೀಡರ್‌ಗೆ ಎರಡನೇ ಸ್ಥಾನ. ಈಗ ಇ-ಪುಸ್ತಕ ವ್ಯವಹಾರ ಹೆಚ್ಚುತ್ತಿರುವುದರಿಂದ, ಒಂದು ಡಜನ್ ಇ-ರೀಡರ್‌ಗಳೂ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಐರೆಕ್ಸ್, ಐಲಿಯಾಡ್, ಬಿಬುಕ್, ಸೈಬುಕ್, ಪ್ಲಾಸ್ಟಿಕ್ ಲಾಜಿಕ್, ಎಸ್ಟೀನಿಯಾ, ಪಿಕ್ಸೆಲಾರ್ ಇ-ರೀಡರ್, ಹೆನ್‌ಲಿನ್ ಇ-ರೀಡರ್... ಇತ್ಯಾದಿ.

ಕಿಂಡಲ್‌ನ ಇ-ಪುಸ್ತಕ ಫೈಲ್ ಫಾರ್ಮಾಟ್ ಬೇರೆ ಇ-ರೀಡರ್‌ಗೆ ಹೊಂದಿಕೆಯಾಗುವುದಿಲ್ಲ. ಬೇರೆ ಇ-ಪುಸ್ತಕಗಳ ಫಾರ್ಮಾಟ್ ಕಿಂಡಲ್‌ಗೆ ಹೊಂದಿಕೆಯಾಗುವುದಿಲ್ಲ. ಇದೀಗ ಕಿಂಡಲ್‌ನ ಇ-ಪುಸ್ತಕಗಳು ಎಲ್ಲಾ ಬ್ರಾಂಡ್‌ನ ಮೊಬೈಲ್ ಫೋನ್‌ಗೂ ಹೊಂದಿಕೆಯಾಗುವಂತೆ ಮಾಡಲು ಅಮೇಝಾನ್ ಉದ್ದೇಶಿಸಿದೆ. ಈ ನಡುವೆ, ಕಿಂಡಲ್‌ಗೆ ಅಡೋಬಿ ಕಂಪನಿಯ ಪಿಡಿಎಫ್ ಫಾರ್ಮಾಟ್ ತೀವ್ರ ಸ್ಪರ್ಧೆ ಒಡ್ಡುತ್ತಿದೆ. ಪಿಡಿಎಫ್ ಇ-ಪುಸ್ತಕಗಳು ಅನೇಕ ರೀಡರ್‌ಗಳಿಗೆ ಹೊಂದಿಕೆಯಾಗುತ್ತದೆ. ಆದರೆ, ಆ ರೀಡರ್‌ಗಳು ಕಿಂಡಲ್‌ನಷ್ಟು ಉತ್ತಮವಾಗಿಲ್ಲ. ಸ್ಪರ್ಧೆ ತುರುಸಿನಿಂದ ನಡೆದಿದೆ. ಜಜಯ ಯಾರಿಗೋ ಗೊತ್ತಿಲ್ಲ.

ಇದು ಇ-ಜಮಾನಾ

ಅಮೇಝಾನ್ ಡಾಟ್ ಕಾಮ್‌ನಲ್ಲಿ ಕಾಗದದ ಪುಸ್ತಕ ಕೊಂಡರೆ ಕೇವಲ ೩-೪ ಡಾಲರ್ ಹೆಚ್ಚು ಶುಲ್ಕಕ್ಕೆ ಇ-ಪುಸ್ತಕವೂ ದೊರೆಯುತ್ತದೆ.

ಗೂಗಲ್ ಬುಕ್ಸ್ ಹುಡುಕಿದರೆ ಅನೇಕ ಉಚಿತ ಇ-ಪುಸ್ತಕಗಳು ಆನ್‌ಲೈನ್‌ಲ್ಲೇ ಓದಲು ಲಭ್ಯ.

ಕಿಂಡಲ್‌ನ ಬೆಲೆ ೩೫೦ ಡಾಲರ್. ಆದರೆ ಇ-ಪುಸ್ತಕದ ಬೆಲೆ ಸಾಮಾನ್ಯ ಪುಸ್ತಕಕ್ಕಿಂತ ಶೇ.೭೫ರಷ್ಟು ಸೋವಿ. ಆದ್ದರಿಂದ ಕಿಂಡಲ್ ಓದಾಳಿಗಳಿಗೆ ಒಟ್ಟಾರೆ ಸಾಕಷ್ಟು ಲಾಭವಾಗುತ್ತದೆ.

ಕಿಂಡಲ್ ಪತ್ರಿಕೆಗಳುಕಿಂಡಲ್‌ನಲ್ಲಿ ಉಚಿತ ವೈರ್‌ಲೆಸ್ ಇಂಟರ್‌ನೆಟ್ ಲಭ್ಯವಿದ್ದು, ಕಂಪ್ಯೂಟರ್‌ನ ನೆರವಿಲ್ಲದೇ, ನೇರವಾಗಿ ಪುಸ್ತಕಗಳನ್ನು ಲೋಡ್ ಮಾಡಿಕೊಳ್ಳಬಹುದು. ಪೋಡ್‌ಕಾಸ್ಟ್‌ಗಳನ್ನು ಕಿಂಡಲ್‌ನಲ್ಲೇ ನೋಡಬಹುದು. ಇನ್ನಿತರ ಬಹುತೇಕ ಇ-ರೀಡರ್‌ಗಳಲ್ಲಿ ಈ ಸೌಲಭ್ಯವಿಲ್ಲ.

ಇದಕ್ಕಿಂತ ಹೆಚ್ಚಾಗಿ, ಇದೀಗ ಅಮೇರಿಕದ ಅನೇಕ ಪತ್ರಿಕೆಗಳು ತಮ್ಮ ಕಿಂಡಲ್ ಆವೃತ್ತಿಗಳನ್ನು ಬಿಡುಗಡೆ ಮಾಡಿವೆ. ಅಂದರೆ, ಮುದ್ರಿತ ಪ್ರತಿಗಳಿಗೆ ಬೇಡಿಕೆ ಕಡಿಮೆಯಾಗುತ್ತಿರುವ ಈ ದಿನಗಳಲ್ಲಿ, ಓದುಗರು ಅಂತರ್ಜಾಲದಲ್ಲಿ ಪತ್ರಿಕೆ ಓದುತ್ತಿದ್ದಾರೆ. ಈ ಹಂತದಲ್ಲಿ, ಕಿಂಡಲ್ಲಿನಲ್ಲಿ ಓದಬಹುದಾದ ಡಿಜಿಟಲ್ ಆವೃತ್ತಿಯನ್ನು ಪತ್ರಿಕೆಗಳು ಅಂತರ್ಜಾಲದಲ್ಲಿ ನೀಡುತ್ತವೆ. ಈ ಆವೃತ್ತಿಯ ಮೂಲಕ ಕ್ಷಣ ಕ್ಷಣಕ್ಕೂ ಬ್ರೇಕಿಂಗ್ ನ್ಯೂಸ್ ನೀಡಲು ಪತ್ರಿಕೆಗಳಿಗೂ ಸಾಧ್ಯವಾಗುತ್ತದೆ. ಅದಕ್ಕಾಗಿ, ವಾಷಿಂಗ್‌ಟನ್ ಪೋಸ್ಟ್, ನ್ಯೂಯಾರ್ಕ್ ಟೈಮ್ಸ್‌ನಂಥ ಪತ್ರಿಕೆಗಳೂ ಕಿಂಡಲ್ ಆವೃತ್ತಿ ಆರಂಭಿಸಿವೆ. ಈ ಆವೃತ್ತಿ ವ್ಯಾವಹಾರಿಕವಾಗಿಯೂ ಯಶಸ್ವಿಯಾಗುವ ಸಾಧ್ಯತೆಯಿದೆ. ಆ ದೃಷ್ಟಿಯಲ್ಲಿ ಈಗ ಸಾಯುತ್ತಿರುವ ಅಮೆರಿಕದ ಪತ್ರಿಕೆಗಳಿಗೆ ಕಿಂಡಲ್ ನಿಜಕ್ಕೂ ‘ಜೀವರಕ್ಷಕ’ ಸಾಧನವೇ ಸರಿ.

Thursday, February 19, 2009

ಒಂದು ಫೋಟೋ ಹೊಡೆಯಲು ಎಂಥಾ ಕಸರತ್ತು ನೋಡಿಸಾಮಾನ್ಯವಾಗಿ ಅಮೆರಿಕದ ಅಧ್ಯಕ್ಷ ಪ್ರಮಾಣ ವಚನ ಸ್ವೀಕರಿಸುವಾಗ ಆತನ ಪತ್ನಿ 'ಬೈಬಲ್' ಹಿಡಿದಿರುತ್ತಾಳೆ. ಅಧ್ಯಕ್ಷೀಯ ಅಭ್ಯರ್ಥಿ ತನ್ನ ಬಲಗೈಯನ್ನು ಮೇಲೆತ್ತಿ, ಎಡಗೈಯನ್ನು ಆ ಬೈಬಲ್ ಮೇಲಿಟ್ಟು ಪ್ರಮಾಣ ವಚನ ಸ್ವೀಕರಿಸುತ್ತಾನೆ. ಈ ಕಾರ್ಯಕ್ರಮ ಅಮೆರಿಕದ ಕ್ಯಾಪಿಟಾಲಿನ ಮುಂದೆ, ವಿಶಾಲ ವೇದಿಕೆಯಲ್ಲಿ ನಡೆಯುತ್ತದೆ. ಒಬಾಮಾ ಪ್ರಮಾಣ ವಚನ ಸ್ವೀಕರಿಸಿದ ಸುದ್ದಿಯನ್ನು ನಮ್ಮ ಪತ್ರಿಕೆಯಲ್ಲಿ ಪ್ರಕಟಿಸುವ ದಿನ, ಈ ಸಂದರ್ಭವನ್ನು ಚೆನ್ನಾಗಿ ಬಿಂಬಿಸುವ ಚಿತ್ರ ನನಗೆ ಬೇಕಿತ್ತು. ಅಂದು ನನಗದು ಸಿಕ್ಕಿರಲಿಲ್ಲ. ಆದರೆ, ಕಳೆದವಾರ ದಿಢೀರನೆ ಕಾಣಿಸಿತಲ್ಲಾ ಆ ಫೋಟೋ! ಬಿಲಿಯನ್ ಫೋಟೋಗಳ ನಡುವೆ ಒಂದೇ ಒಂದು ಅದ್ಭುತ ಫ್ರೇಮ್! ಹಾಗಾಗಿ, ಆ ಫೋಟೋ ಕುರಿತು ಈ ನಾಲ್ಕು ಮಾತು ಹೇಳಲೇ ಬೇಕು ಅನ್ನಿಸಿತು, ನಮ್ಮ ಅಕ್ಯಾಡೆಮಿಕ್ ಆಸಕ್ತಿಗೋಸ್ಕರ.

ಒಬಾಮಾ ಅಧಿಕಾರ ಸ್ವೀಕರಿಸುವಾಗ ಎಷ್ಟು ಸಾವಿರ ಕ್ಯಾಮರಾಗಳು ಎಷ್ಚು ಕೋಟಿ ಬಾರಿ ಕ್ಲಿಕ್ಕಿಸಿದವೋ ಗೊತ್ತಿಲ್ಲ. ಆದರೆ, ಈ ಫ್ರೇಮ್ ಸಿಕ್ಕಿದ್ದು ಮಾತ್ರ ಒಬ್ಬನೇ ಒಬ್ಬನಿಗೆ. ಆತ, McClatchy-Tribune ಪತ್ರಿಕೆಯ ಛಕ್ ಕೆನಡಿ. ವಾಷಿಂಗ್ಟನ್ ಡಿ.ಸಿ.ಯಲ್ಲಿ 20 ವರ್ಷಗಳಿಂದ ಮಾಧ್ಯಮ ಛಾಯಾಗ್ರಾಹಕ.

ಇಂಥ 'ಫ್ರೇಮ್'ಗಾಗಿ ಆತ ಪಟ್ಟ ಶ್ರಮ ಎಂಥದು ಎಂದು ತಿಳಿದರೆ, you can appreciate the photo much better.

2008ರಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮೊಟ್ಟ ಮೊದಲ ಬೀಜ ಬಿತ್ತನೆಯಾದಾಗ, ಈ ಛಾಯಾಗ್ರಾಹಕನ ಮನದಲ್ಲಿ ಮೊಳಕೆಯೊಡೆದ ಪ್ರಶ್ನೆ - "ಈ ಬಾರಿ ಅಧ್ಯಕ್ಷ ಪ್ರಮಾಣ ವಚನ ಸ್ವೀಕಾರಿಸುವ ದಿನ ಯಾವ ಕೋನದಲ್ಲಿ ಕ್ಲಿಕ್ಕಿಸಲಿ?"

ಅಂದಿನಿಂದಲೇ, ಆತ ಕ್ಯಾಮರಾ ಕೋನಕ್ಕಾಗಿ ಹುಡುಕಾಡತೊಡಗಿದ. ಪ್ರಮಾಣ ವಚನ ಸ್ವೀಕರಿಸುವ ಅಧ್ಯಕ್ಷ, ಅಧ್ಯಕ್ಷನ ಕುಟುಂಬ ಹಾಗೂ ಹಿನ್ನೆಲೆಯಲ್ಲಿ ಕ್ಯಾಪಿಟಾಲಿನ ದೊಡ್ಡ ಗುಮ್ಮಟ - ಇವಿಷ್ಟೂ ಫೋಟೋದ ಚೌಕಟ್ಟಿನಲ್ಲಿ ಕಾಣಿಸುವಂಥ ಕ್ಯಾಮರಾ ಕೋನ ಆತನಿಗೆ ಬೇಕಿತ್ತು. ಅದಕ್ಕೆ ಆತ ಕ್ಯಾಮರಾವನ್ನು ಪ್ರಮಾಣ ವಚನ ಸ್ವೀಕಾರ ಸಮಾರಂಭದ ವೇದಿಕೆಯಲ್ಲೇ, ಅಧ್ಯಕ್ಷನ ಪಾದಗಳಿಂದ ಸುಮಾರು 10-15 ಅಡಿ ದೂರದಲ್ಲಿ, ನೆಲ ಮಟ್ಟದಿಂದ 45 ಡಿಗ್ರಿ ಮೇಲ್ಮುಖವಾಗಿಡಬೇಕಿತ್ತು.

ಆದರೆ, ಅಧ್ಯಕ್ಷ ಪ್ರಮಾಣ ವಚನ ಸ್ವೀಕರಿಸುವ ವೇದಿಕೆಯಲ್ಲಿ ಯಾವ ಛಾಯಾಗ್ರಾಹಕನಿಗೂ ಪ್ರವೇಶ ಇರುವುದಿಲ್ಲವಲ್ಲ! ಏನು ಮಾಡುವುದು? ಅದಕ್ಕಾಗಿ ಆತ ರಿಮೋಟ್ ಕಂಟ್ರೋಲ್ ಚಾಲಿತ ಕ್ಯಾಮರಾವನ್ನು ವಿಶೇಷವಾಗಿ ವಿನ್ಯಾಸ ಮಾಡಿಸಿಕೊಂಡ. ಆ ಕ್ಯಾಮರಾವನ್ನು ವೇದಿಕೆಯಲ್ಲಿಟ್ಟು, ದೂರದ ಮಾನಿಟರ್ನಲ್ಲಿ ನೋಡಿ ರಿಮೋಟ್ ಮೂಲಕ ಕ್ಯಾಮರಾ ನಿಯಂತ್ರಿಸಿ, ಕ್ಲಿಕ್ಕಿಸುವ ಯೋಜನೆ ಹಾಕಿದ.

(ಪ್ರಮಾಣ ವಚನಕ್ಕೆ ಮುನ್ನ ಕ್ಯಾಮರಾ ಸ್ಥಾಪಿಸುತ್ತಿರುವ ಛಾಯಾಗ್ರಾಹಕ ಮತ್ತು ಭದ್ರತಾ ಸಿಬ್ಬಂದಿ.)

ಈ ಯೋಜನೆಯನ್ನು ವೈಟ್ ಹೌಸ್ ಅಧಿಕಾರಿಗಳಿಗೆ, ವೈಟ್ ಹೌಸ್ ಪೊಲೀಸ್ ಇಲಾಖೆಗೆ, ಎಫ್.ಬಿ.ಐ.ಗೆ ವಿವರಿಸಿ ಕಾಡಿ-ಬೇಡಿ ಅಧಿಕೃತವಾಗಿ ಒಪ್ಪಿಗೆ ಪಡೆದ. ಅಧ್ಯಕ್ಷ ಪ್ರಮಾಣ ವಚನ ಸ್ವೀಕರಿಸುವ ವೇದಿಕೆಯಲ್ಲಿ ಕ್ಯಾಮರಾ ಪರವಾನಿಗೆ ನೀಡಿದ್ದು ಇದೇ ಮೊದಲಬಾರಿಯಂತೆ. ಆದರೆ, ಅಧ್ಯಕ್ಷ ಪ್ರಮಾಣ ವಚನ ಸ್ವೀಕರಿಸುವಾಗ ವೇದಿಕೆಯಲ್ಲಿ ಕ್ಯಾಮರಾ ಸದ್ದು ಮಾಡಿ ಗೊಂದಲ ಉಂಟುಮಾಡಬಾರದು ಎಂದು ಭದ್ರತಾ ಅಧಿಕಾರಿಗಳು ಷರತ್ತು ಹಾಕಿದ್ದರಂತೆ. ಅದಕ್ಕಾಗಿ, ಕ್ಯಾಮರಾವನ್ನು Sound proof ಪೆಟ್ಟಿಗೆಯಲ್ಲಿ ಇಡಲಾಗಿತ್ತಂತೆ.

ಛಕ್ ಕೆನಡಿ ಇಷ್ಟೆಲ್ಲ ಶ್ರಮ ಪಟ್ಟಿದ್ದು ಫಲಿಸಿದೆ. ಈ ಚಿತ್ರವನ್ನು ಒಬಾಮಾ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಅತ್ಯುಕೃಷ್ಟ ಚಿತ್ರ ಎಂದು ಬಣ್ಣಿಸಲಾಗಿದೆ.

(2008ರ ಅಕ್ಟೋಬರಿನಲ್ಲಿ ನಾನು ಅಮೆರಿಕಕ್ಕೆ ಹೋಗಿದ್ದಾಗ ಕ್ಯಾಪಿಟಾಲ್ ಮುಂದಿನ ಅಂಗಳವನ್ನು ಅಧ್ಯಕ್ಷೀಯ ಪ್ರಮಾಣವಚನ ಸಮಾರಂಭದ ತಯಾರಿಗಾಗಿ ಕ್ಯಾಪಿಟಾಲ್ ಪೋಲೀಸರು ಮುಚ್ಚಿದ್ದರು. ಆಗಿನ್ನೂ ಚುನಾವಣೆಯೇ ನಡೆದಿರಲಿಲ್ಲ. ಪ್ರಮಾಣ ವಚನದ ತಯಾರಿ ನಡೆದಿತ್ತು!)

Tuesday, February 10, 2009

ಗೂಗಲ್ ಲ್ಯಾಟಿಟ್ಯೂಡ್ ಎಂಬ 'ಅಂಜನ ಶಕ್ತಿ'ಮೊಬೈಲ್ ಫೋನ್ ಎನ್ನುವುದು ಈಗ ಬರೀ ಮಾತನಾಡುವ ಸಾದನವಾಗಿ ಉಳಿದಿಲ್ಲ. ಅದೊಂದು ಪರಿಪೂರ್ಣ ಮಾಧ್ಯಮವಾಗಿಬಿಟ್ಟಿದೆ. ಭವಿಷ್ಯದಲ್ಲಿ ಅಂತರ್ಜಾಲಕ್ಕೇ ಸೆಡ್ಡು ಹೊಡೆಯುವ ತಾಕತ್ತು ಈ ಉಪಕರಣಕ್ಕೆ ಬಂದಿದೆ. ಅದಕ್ಕೇ, ಮೈಕ್ರೋಸಾಫ್ಟ್ ಕೂಡ ಇದೀಗ ಅನೇಕ ಸಾಫ್ಟ್ ವೇರುಗಳನ್ನು ಮೊಬೈಲ್ ಫೋನುಗಳಿಗಾಗೇ ಅಭಿವೃದ್ಧಿ ಪಡಿಸುತ್ತಿದೆ. ಶೀಘ್ರ ಅದು ಮೊಬೈಲ್ ಸಾಫ್ಟ್ ವೇರುಗಳ 'ಸ್ಟೋರ್' ಆರಂಭಿಸುತ್ತಿದೆ.

ಗೂಗಲ್ ಕೂಡ ಹತ್ತಾರು ಮೊಬೈಲ್ ಫೋನ್ ತಂತ್ರಜ್ಞಾನವನ್ನು ಬಿಡುಗಡೆ ಮಾಡಿದೆ. ತೀರಾ ಇತ್ತೀಚೆಗೆ ಬಿಡುಗಡೆ ಮಾಡಿದ ತಂತ್ರಜ್ಞಾನ ಗೂಗಲ್ ಲ್ಯಾಟಿಟ್ಯೂಡ್. ನಿಮಗೆ ಅಂಜನ ಶಕ್ತಿಯ ಬಗ್ಗೆ ಗೊತ್ತಲ್ಲ. ಮಾಂತ್ರಿಕರು ಕುಳಿತಲ್ಲೇ ಅಂಜನ ಹಾಕಿ ನೋಡಿ, ಕಳೆದು ಹೋಗಿರುವ ವಸ್ತು ಎಲ್ಲಿದೆ ಎಂದು ಹೇಳುತ್ತಾರೆ. ಅಂತಹ ಶಕ್ತಿಯನ್ನು ಗೂಗೂಲ್ ಲ್ಯಾಟಿಟ್ಯೂಡ್ ನಿಮ್ಮ ಮೊಬೈಲ್ ಫೋನಿಗೆ ಕರುಣಿಸುತ್ತದೆ!

ಈ ತಂತ್ರಜ್ಞಾನ ಇದೀಗ ಭಾರತದಲ್ಲೂ ಲಭ್ಯ. ಇದೊಂದು ಜಿಪಿಎಸ್ ನಕಾಶೆ ತಂತ್ರಜ್ಞಾನ. ಗೂಗಲ್ ಲ್ಯಾಟಿಟ್ಯೂಡನ್ನು ಮೊಬೈಲ್ ಫೋನಿನಲ್ಲಿ ಅಳವಡಿಸಿಕೊಂಡರೆ, ಕರೆ ಮಾಡುವ ವ್ಯಕ್ತಿ ಎಲ್ಲಿಂದ ಕರೆ ಮಾಡುತ್ತಿದ್ದಾನೆ ಎಂದು ಫೋನಿನ ತೆರೆಯ ಮೇಲೆ ನಕಾಶೆ ತೋರಿಸುತ್ತದೆ. ಇದರ ಉಪಯೋಗವೇನು? ಈ 3 ಉದಾಹರಣೆ ನೋಡಿ ತಿಳಿಯುತ್ತದೆ.

1. ಓರ್ವ ವರದಿಗಾರ ಪದ್ಮನಾಭನಗರದ ಸಹಕಾರ ಶಿಕ್ಷಣ ಕೇಂದ್ರದಲ್ಲಿ ಒಂದು ವಿಚಾರ ಸಂಕಿರಣದ ಉದ್ಘಾಟನಾ ಕಾರ್ಯಕ್ರಮದ ವರದಿಗೆ ಹೋಗಬೇಕಿತ್ತು. ಆದರೆ, 'ಅಂಥ ಡಬ್ಬಾ ಕಾರ್ಯಕ್ರಮಕ್ಕೆ ಅಷ್ಟು ದೂರ ಹೋಗಬೇಕೆ? ಯಾರಿಂದಲಾದರೂ ಕಾಪಿ ಕಲೆಕ್ಟ್ ಮಾಡಿ ವರದಿ ಫೈಲ್ ಮಾಡಿದರಾಯಿತು' ಎಂದು ಯೋಚಿಸಿ ಆತ ಮನೆಯಲ್ಲೇ ಇರುತ್ತಾನೆ. ಆಗ ಆತನ ಫೋನಿಗೆ ಮುಖ್ಯ ವರದಿಗಾರನ ಕಾಲ್ ಬರುತ್ತದೆ. ನಾನು ವಿಚಾರ ಸಂಕಿರಣದ ಸ್ಪಾಟಿನಲ್ಲಿದ್ದೇನೆ ಎಂದು ಮುಖ್ಯ ವರದಿಗಾರನಿಗೆ ಸುಳ್ಳು ಹೇಳುತ್ತಾನೆ. ಇಂಥ ವರದಿಗಾರರ ಮೇಲೆ ಕಣ್ಣಿಡಲು ಸಂಪಾದಕರು ಅಥವಾ ಮುಖ್ಯ ವರದಿಗಾರರು ಗೂಗಲ್ ಲ್ಯಾಟಿಟ್ಯೂಡ್ ತಂತ್ರಜ್ಞಾನವನ್ನು ಬಳಸಬಹುದು. ಎಲ್ಲಾ ವರದಿಗಾರರ ಫೋನುಗಳಲ್ಲಿ ಈ ಸಾಫ್ಟ್ ವೇರ್ ಅಳವಡಿಸಬೇಕು. ಅಂಥ ಮೊಬೈಲಿಗೆ ಫೋನ್ ಮಾಡಿದರೆ ಆ ವರದಿಗಾರ ನಿರ್ದಿಷ್ಟ ಸಮಯದಲ್ಲಿ, ನಿರ್ದಿಷ್ಟ ಸ್ಪಾಟಿನಲ್ಲಿದ್ದಾನೋ ಇಲ್ಲವೋ ಎಂದು ಮೊಬೈಲ್ ಫೋನಿನ ನಕಾಶೆಯಲ್ಲಿ ಕಾಣಿಸುತ್ತದೆ.

2. ಕಂಪನಿಗಳು ತಮ್ಮ ಮಾರಾಟ ವಿಭಾಗದ ಫೀಲ್ಡ್ ಎಕ್ಸೆಕ್ಯೂಟಿವ್ ಗಳ ಮೇಲೆ ಕಣ್ಣಿಡಲು ಈ ಸಾಫ್ಟ್ ವೇರ್ ಬಳಸಬಹುದು. (ಊದಾಹರಣೆಗೆ ಪತ್ರಿಕೆಯೊಂದರ ಪ್ರಸಾರ ಹಾಗೂ ಜಾಹೀರಾತು ವಿಭಾಗದ ಫೀಲ್ಡ್ ಎಕ್ಸೆಕ್ಯೂಟಿವ್ ಗಳು.) ಅವರು ಅಲ್ಲಿ ಹೋಗಿದ್ದೆ, ಇಲ್ಲಿ ಹೋಗಿದ್ದೆ ಎಂದು ಸುಳ್ಳು ಹೇಳಿ, ಟಿಎ ಡಿಎ.ಯನ್ನೂ ಪಡೆಯುವ ಪ್ರಕರಣಗಳು ಅಧಿಕ. ಅಂಥವರ ಸುಳ್ಳು ಪತ್ತೆ ಹಚ್ಚಲು ಗೂಗಲ್ ಲ್ಯಾಟಿಟ್ಯೂಡ್ ನೆರವಾಗುತ್ತದೆ.

3. ತಂದೆ ತಾಯಿ ತಮ್ಮ ಮಕ್ಕಳ ಮೇಲೆ ನಿಗಾ ಇಡಲು ಈ ಸಾಫ್ಟ್ ವೇರನ್ನು ಬಳಸಬಹುದು! ತಮ್ಮ ಮಕ್ಕಳ ಮೊಬೈಲಿನಲ್ಲಿ ಈ ಸಾಫ್ಟ್ ವೇರ್ ಅಳವಡಿಸಬೇಕು. ಅಂಥ ಫೋನಿಗೆ ಅಪ್ಪ ಅಮ್ಮ ಕರೆ ಮಾಡುತ್ತಾರೆ ಅಂದುಕೊಳ್ಳಿ. ಆಗ ಮಕ್ಕಳು ಪಬ್ಬಿನಲ್ಲಿ ಗುಂಡು ಹಾಕುತ್ತಾ ಕುಳಿತಿದ್ದರೂ ಗೆಳೆಯನ/ಗೆಳತಿಯ ಮನೆಯಲ್ಲೋ ಇದ್ದೇನೆ ಎಂದು ಸುಳ್ಳು ಹೇಳಿದರೆ ಅಪ್ಪ ಅಮ್ಮನಿಗೆ ನಕಾಶೆಯಲ್ಲಿ ಮಕ್ಕಳು ಎಲ್ಲಿದ್ದಾರೆ ಎಂದು ಕಾಣಿಸುತ್ತದೆ.

Ofcourse, ಈ ಸಾಫ್ಟ್ ವೇರಿನ ಉಪಯೋಗ ಇಷ್ಟೇ ಅಲ್ಲ. ಹೆಚ್ಚಿನ ಮಾಹಿತಿ ಬೇಕಾದರೆ ಇಲ್ಲಿ ನೋಡಿ.