Showing posts with label Dharam Sting. Show all posts
Showing posts with label Dharam Sting. Show all posts

Tuesday, April 25, 2006

ದೇವೇಗೌಡರ ಆಶೀರ್ವಾದದ ಪರಿಣಾಮಗಳ ಅಧ್ಯಯನ

ಭೂತ, ವರ್ತಮಾನ ಹಾಗೂ ಭವಿಷ್ಯದಲ್ಲಿ ಅವರ ಆಶೀರ್ವಾದದಿಂದ ಏನೇನಾಗುತ್ತದೆ
- ಒಂದು ಸಂಶೋಧನಾ ಪ್ರಬಂಧ

‘ದೇವೇಗೌಡರ ಆಶೀರ್ವಾದ ಇಲ್ಲದಿದ್ದರೆ ಇಷ್ಟೆನ್ನೆಲ್ಲ ಮಾಡಲು ತಮ್ಮಿಂದ ಸಾಧ್ಯವಾಗುತ್ತಿರಲಿಲ್ಲ. ಇದರ ಸಂಪೂರ್ಣ ಕೀರ್ತಿ ದೇವೇಗೌಡರಿಗೇ ಸಲ್ಲಬೇಕು’ ಎಂದು ಧರ್ಮಸಿಂಗ್‌ ಕಳೆದ ವಾರ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದ್ದಾರೆ. ಇಂಥ ದೇವೇಗೌಡರ ಆಶೀರ್ವಾದ ಈಗ ಕುಮಾರಸ್ವಾಮಿಯವರಿಗೂ ಸಿಗಲು ಆರಂಭವಾಗಿದೆ! ಈ ಆಶೀರ್ವಾದದ ಫಲ ಹೇಗಿರುತ್ತದೆ ಎಂಬುದನ್ನು ನಾಮ ಕಾದು ನೋಡೋಣ ಮಗಾ.


ಪ್ರೀತಿಯ ಕುಮಾರಸಿಂಗನಿಗೆ,

ಈ ನಿನ್ನ ತಂದೆ ಗ್ರಾಮಸಿಂಗ ಮಾಡುವ ಆಶೀರ್ವಾದಗಳು. ಈಗಾಗಲೇ, ಮುಕ್ಕೋಟಿ ದೇವತೆಗಳು ಹಾಗೂ ಪಂಚಕೋಟಿ ಕನ್ನಡಿಗರ ಆಶೀರ್ವಾದ ಪಡೆದ ನಿನಗೆ ನನ್ನೊಬ್ಬನ ಆಶೀರ್ವಾದ ಮಾತ್ರ ಬಾಕಿ ಇತ್ತು. ಇಗೋ, ನಾನೂ ನಿನಗೆ ಆಶೀರ್ವಾದ ಮಾಡಿದ್ದೇನೆ. ಇದರೊಂದಿಗೆ, ಅತಿ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಆಶೀರ್ವಾದ ಪಡೆದ ಗಿನ್ನೆಸ್‌ ದಾಖಲೆ ನಿನ್ನದಾಗಬಹುದು.

ಬೈ ದ ವೇ ಮಗಾ, ಈ ಧರ್ಮಸಿಂಗರಿಗೆ ಈಗ ದಿಢೀರಾಗಿ ಧೈರ್ಯ ಬಂದಂತಿದೆ ಅಲ್ಲವಾ? ಅವರು ಮುಖ್ಯಮಂತ್ರಿ ಆಗಿದ್ದಾಗ ದೇವೇಗೌಡರ ವಿರುದ್ಧ ಒಂದಕ್ಷರ ಮಾತಾಡಲೂ ಅಂಜುತ್ತಿದ್ದರು. ಈಗ ನೋಡು, ಗೌಡರ ವಿರುದ್ಧ ಹೇಗೆ ಕಿಡಿಕಾರುವ ಸಾಮರ್ಥ್ಯ ಬಂದಿದೆ. ಈ ರೀತಿಯ ಶಕ್ತಿ ಅವರಿಗೆ ಎಲ್ಲಿಂದ ಬಂತು? ಯಾವ ಟಾನಿಕ್‌ ತಗೊಂಡರು ಗೊತ್ತಾಗ್ತಿಲ್ವೇ!

ಧರ್ಮಸಿಂಗರು ಸಹನೆಯ ಸಾಕ್ಷಾತ್‌ ಸ್ವರೂಪಿಯಷ್ಟೇ ಅಲ್ಲ... ಮಹಾ-ಸ್ವರೂಪಿ ಕೂಡ ಹೌದು. ಇನ್‌ಫ್ಯಾಕ್ಟ್‌ ಕುಮಾರಸ್ವಾಮಿ ಅವರಿಗಿಂತ ಧರ್ಮಸಿಂಗ್‌ ಸಹನೆ, ಮೆಲು ಮಾತು, ಸಮಚಿತ್ತದಲ್ಲಿ ಒಂದು ಮಣ ಹೆಚ್ಚೇ ತೂಗುತ್ತಿದ್ದರು. ಧರ್ಮಸಿಂಗರಿಗೂ ಕುಮಾರಸ್ವಾಮಿಗೂ ಎರಡು ಮೇಜರ್‌ ವ್ಯತ್ಯಾಸಗಳಿವೆ.

ವ್ಯತ್ಯಾಸ ಒಂದು - ಕುಮಾರಸ್ವಾಮಿ ನಿದ್ದೆ ಮಾಡುಮದೇ ಅಪರೂಪ. ಆದರೆ, ಧರ್ಮಸಿಂಗ್‌ ನಿದ್ದೆಯಿಂದ ಎದ್ದೇಳುಮದರಲ್ಲೂ ಬಹಳ ಸಹನಾಶೀಲ! ವ್ಯತ್ಯಾಸ ಎರಡು - ಯಾಮದೇ ವಿಷಯ ಎದುರಾದರೂ ಧರ್ಮಸಿಂಗ್‌ ನೋಡೋಣ್‌ ಬಿಡ್ರಿ... ಮಾಡೋಣ್‌ ಬಿಡ್ರಿ... ಎನ್ನುವ ಅಣಿಮುತ್ತು ಉದುರಿಸುತ್ತಿದ್ದರು. ಈಗ ಕುಮಾರಸ್ವಾಮಿ ಯಾಮದೇ ವಿಷಯ ಎದುರಾದರೂ ಒಂದು ದಿಢೀರ್‌ ಭರವಸೆ ಬಿಸಾಕುತ್ತಾರೆ!

ಧರ್ಮಸಿಂಗ್‌ ಮುಖ್ಯಮಂತ್ರಿ ಖುರ್ಚಿಯಲ್ಲಿ ಕುಳಿತಷ್ಟೂ ಕಾಲ, ಒಂದು ಕ್ಷಣವೂ ತಮ್ಮ ಸಹನೆಯನ್ನು ಕಳೆದುಕೊಂಡವರಲ್ಲ. ಪತ್ರಕರ್ತರನ್ನೂ ಸೇರಿದಂತೆ ಯಾರ ಮೇಲೂ ಸಿಡುಕಿದವರಲ್ಲ. ಸೋನಿಯಾ ಗಾಂಧಿಯವರನ್ನೂ, ದೇವೇಗೌಡರನ್ನೂ ಸಮಚಿತ್ತದಿಂದ ಸ್ವೀಕರಿಸಿದರು. ಗೌಡರ ಆದೇಶವನ್ನೂ ಶಿರಸಾವಹಿಸಿದರು. ಸೋನಿಯಾ ಕಮಾಂಡನ್ನೂ ಅಕ್ಷರಶಃ ಪಾಲಿಸಿದರು. ಆದ್ದರಿಂದಲೇ, ದೇವೇಗೌಡರಿಂದಲೂ ಭೇಷ್‌ ಎನ್ನಿಸಿಕೊಂಡರು. ಸೋನಿಯಾರಿಂದಲೂ ಭಲೆ ಅನ್ನಿಸಿಕೊಂಡರು.

ಇದೊಂದು ಮುಖ್ಯವಾದ ವಿಚಾರ. ದೇವೇಗೌಡರು ಬೇರೆ ಪಕ್ಷದ ನರಪಿಳ್ಳೆ ಹಾಗಿರಲಿ, ಸೊಳ್ಳೆಯನ್ನು ಕೂಡ ಹೊಗಳುವಂಥವರಲ್ಲ. ಅಂಥವರೂ ಸಹ ಧರ್ಮಸಿಂಗರನ್ನು ಅತ್ಯುತ್ತಮ ಮುಖ್ಯಮಂತ್ರಿ ಎಂದೇ ಹೊಗಳುತ್ತಿದ್ದರು! ಹೀಗೆ ದೇವೇಗೌಡರ ಆಶೀರ್ವಾದ ಪಡೆದ ಕಾಂಗ್ರೆಸ್ಸಿನ ಏಕೈಕ ವ್ಯಕ್ತಿ ಧರ್ಮಸಿಂಗ್‌ ಮಾತ್ರ ಎಂದು ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ದಾಖಲೆಯಾಗಬಹುದು!

ಅದೇ ರೀತಿ, ದೇಶಾದ್ಯಂತ ಇಡೀ ಕಾಂಗ್ರೆಸ್ಸು ದೇವೇಗೌಡರನ್ನು ವಿರೋಧಿಸುತ್ತಿದ್ದರೂ ಒಬ್ಬ ಧರ್ಮಸಿಂಗ್‌ ಮಾತ್ರ ದೇವೇಗೌಡರನ್ನು ಸ್ತುತಿಸುತ್ತಿದ್ದರು. ಸರ್ಕಾರ ಪತನವಾದ ಕ್ಷಣದಲ್ಲೂ ಧರ್ಮಸಿಂಗ್‌ ದೇವೇಗೌಡರ ಪರವಾಗೇ ಮಾತನಾಡಿದ್ದರು. ಎಲ್ಲಾ ತಪ್ಪೂ ಗೌಡರ ಮಗಂದೇ. ದೇವೇಗೌಡರದ್ದು ಯಾಮದೇ ತಪ್ಪಿಲ್ಲ ಎಂದು ಧರ್ಮಸಿಂಗ್‌ ಸಾರಿ.. ಸಾರಿ.. ಹೇಳಿದ್ದರು. ಇಷ್ಟು ಆತ್ಮೀಯವಾಗಿತ್ತು ದೇವೇಗೌಡರು ಮತ್ತು ಧರ್ಮಸಿಂಗರ ಸಂಬಂಧ.

ಮಗಾ... ಈಗ ನೋಡು ಪರಿಸ್ಥಿತಿ ಹೇಗಾಗಿದೆ! ಧರ್ಮಸಿಂಗ್‌ -ದೇವೇಗೌಡರ ಸಂಬಂಧ ಭಾರತ -ಪಾಕಿಸ್ತಾನ್‌ ಥರ ಆಗಿದೆ! ಎಂದೂ ದೇವೆಗೌಡರಿಗೆ ಎದುರಾಡದ ಧರ್ಮಸಿಂಗ್‌ ಈಗ ದೇವೇಗೌಡರ ವಿರುದ್ಧವೇ ನೇರಾನೇರ ಆರೋಪ ಮಾಡುತ್ತಿದ್ದಾರೆ. ದೇವೇಗೌಡರು ತಮಗೆ ಬರೆದ ’ಪ್ರೇಮಪತ್ರ’ಗಳ ಸಂಪುಟ ಪ್ರಕಟಿಸುತ್ತೇನೆ ಎಂದು ಧರ್ಮಸಿಂಗರು ಧಮಕಿ ಹಾಕಿದ್ದಾರೆ. ತಾಮ ಮುಖ್ಯಮಂತ್ರಿ ಆಗಿದ್ದಾಗ ದೇವೇಗೌಡರು ಸರ್ಕಾರದ ಆಡಳಿತದ ಮೇಲೆ ವಿಪರೀತ ಒತ್ತಡ ಹೇರುತ್ತಿದ್ದರು ಎಂದು ಆರೋಪಿಸಿದ್ದಾರೆ. ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟಿನಲ್ಲಿ ಪದೇ ಪದೆ ಸೋಲುತ್ತಿರುಮದಕ್ಕೆ ದೇವೇಗೌಡರ ತಪುý್ಪ ತಪುý್ಪ ಸಲಹೆಗಳೇ ಕಾರಣ ಎಂದು ಧರಂ ಸ್ಪಷ್ಟೀಕರಣ ನೀಡಿದ್ದಾರೆ.

ಹಾಗಾದರೆ, ದೇವೇಗೌಡರು ರಾಜ್ಯದ ಆಡಳಿತಕ್ಕೆ ಅಡ್ಡಿ ಮಾಡುತ್ತಿದ್ದ ರಹಸ್ಯಗಳನ್ನು ಧರ್ಮಸಿಂಗ್‌ ತಾಮ ಮುಖ್ಯಮಂತ್ರಿಯಾಗಿದ್ದಾಗಲೇ ಯಾಕೆ ಬಹಿರಂಗ ಮಾಡಲಿಲ್ಲ ಹೇಳಿ? ಒಂದು -ಆಗ ದೇವೇಗೌಡರ ವಿರುದ್ಧ ಮಾತನಾಡಲು ಧರ್ಮಸಿಂಗರಿಗೆ ಧೈರ್ಯ ಇರಲಿಲ್ಲ. ಅಥವಾ ಆಗ ದೇವೇಗೌಡರು ನೀಡಿದ ಸಲಹೆಗಳೆಲ್ಲ ತಪುý್ಪ ತಪುý್ಪ ಎಂದು ಧರ್ಮಸಿಂಗರಿಗೆ ಈಗ ಜ್ಞಾನೋದಯವಾಗಿದೆ! ಅಥವಾ, ದೇವೇಗೌಡರ ಸಲಹೆಗಳು ತಪುý್ಪ ಎಂದು ಗೊತ್ತಿದ್ದೂ ಅವನ್ನೇ ಪಾಲಿಸಿ ಧರ್ಮಸಿಂಗ್‌ ರಾಜ್ಯಕ್ಕೆ ಅನ್ಯಾಯ ಮಾಡಿದರು. ಈಗ ಗೌಡರ ರಹಸ್ಯಗಳನ್ನು ಬಹಿರಂಗಮಾಡಿ ಧರ್ಮಸಿಂಗರು ರಾಜ್ಯಕ್ಕೆ ನ್ಯಾಯದಾನ ಮಾಡುತ್ತಿದ್ದಾರೆ!

ಎನಿವೇ, ಒಂದಂತೂ ಸ್ಪಷ್ಟ. ಆಗಿನ ಧರ್ಮಸಿಂಗ್‌ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ಏನೆಲ್ಲಾ ಆಯಿತು, ರಾಜ್ಯಕ್ಕೆ ಯಾವ್ಯಾವ ಸ್ಥಿತಿ ಒದಗಿತು, ಧರ್ಮಸಿಂಗರಿಗೆ ಯಾವ ರೀತಿಯ ಹೆಸರು ಬಂತು... ಎಲ್ಲವೂ ದೇವೇಗೌಡರ ಆಶೀರ್ವಾದದ ಫಲ ಎಂಬುದು ಎಲ್ಲರಿಗೂ ಗೊತ್ತಾಗಿರುವ ಸತ್ಯ.

ಆದರೆ, ಈಗಿನ ರಾಜ್ಯ ಸರ್ಕಾರಕ್ಕೆ ಈವರೆಗೂ ಗೌಡರ ಆಶೀರ್ವಾದ ಇರಲಿಲ್ಲ. ಅದರಿಂದಾಗಿ ರಾಜ್ಯದಲ್ಲಿ ಏನೇನು ಆಗಿದೆ, ರಾಜ್ಯಕ್ಕೆ ಯಾವ ರೀತಿಯ ಪ್ರಚಾರ ಸಿಕ್ಕದೆ, ಕುಮಾರಸ್ವಾಮಿಯವರಿಗೆ ಯಾವ ರೀತಿಯ ಹೆಸರು ಬಂದಿದೆ ನೋಡಿ...

ಈ ಎರಡೂ ಸರ್ಕಾರದ ಅವಧಿಗಳನ್ನು ಆಧಾರವಾಗಿಟ್ಟುಕೊಂಡು ದೇವೇಗೌಡರ ಆಶೀರ್ವಾದದ ಫಲಶೃತಿ ಹೇಗಿರುತ್ತದೆ ಎಂಬುದರ ತುಲನಾತ್ಮಕ ಅಧ್ಯಯನ ಆಗಬೇಕು. ಸರಿಯಾಗಿ ಅಧ್ಯಯನ ಮಾಡಿದರೆ, ಇದೊಂದು ಒಳ್ಳೆಯ ಪಿಎಚ್‌ಡಿ ಪ್ರಬಂಧವಾದೀತು ಅಥವಾ ಜ್ಯೋತಿಷ್ಯ ಶಾಸ್ತ್ರಕ್ಕೆ ಒಂದು ಉತ್ತಮ ಗ್ರಂಥವಾದೀತು. ’ದೇವೇಗೌಡರ ಆಶೀರ್ವಾದದ ಫಲಶೃತಿ : ಭೂತ, ವರ್ತಮಾನ ಹಾಗೂ ಭವಿಷ್ಯ’ -ಎಂದು ಈ ಪ್ರಬಂಧ ಅಥವಾ ಗ್ರಂಥಕ್ಕೆ ಹೆಸರಿಡಬಹುದು!

ದೇವೇಗೌಡರ ಆಶೀರ್ವಾದದ ಬಲದಿಂದ ಧರ್ಮಸಿಂಗ್‌ ಕರ್ನಾಟಕದ ಮಾಹಿತಿ ತಂತ್ರಜ್ಞಾನ ಉದ್ಯಮಿಗಳನ್ನು ಬಹುತೇಕ ಓಡಿಸಿದರು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆಗೆ ಹಿಡಿದಿದ್ದ ಇನ್‌ಫೋಸಿಸ್‌ ನಾರಾಯಣಮೂರ್ತಿ ಎಂಬ ಗ್ರಹಣವನ್ನು ಬಿಡಿಸಿದರು. ಜಲ ನ್ಯಾಯಾಧೀಕರಣದ ವಿರುದ್ಧವೇ ಅರ್ಜಿ ಸಲ್ಲಿಸಿ ನೆರೆ ರಾಜ್ಯಗಳಿಗೆ ಅನುಕೂಲ ಮಾಡಿಕೊಟ್ಟರು. ಬೆಂಗಳೂರು ಫಾರ್ವಡ್‌ ಎಂಬ ನಗರಾಭಿವೃದ್ಧಿ ವೇದಿಕೆಯನ್ನು ಸಂಪೂರ್ಣ ವಿಸರ್ಜನೆ ಮಾಡಿದರು. ಬೆಂಗಳೂರು -ಮೈಸೂರು ಕಾರಿಡಾರ್‌ ವಿರುದ್ಧ ಸುಪ್ರೀಂಕೋರ್ಟ್‌ ವರೆಗೆ ಹೋಗಿ ನೈಸ್‌ ಕಂಪನಿಯ ಕೀರ್ತಿ ಹೆಚ್ಚಿಸಿದರು. ಮೆಟ್ರೋ ರೈಲಿಗೆ ಮೊದಲು ಬ್ರೇಕ್‌ ಹಾಕಿದರೂ ಕೊನೆಗೆ ಬೆಂಗಳೂರಿಗೆ ಮೆಟ್ರೋ ಹಾಗೂ ಮಾನೋ ಎರಡೂ ರೈಲು ಸಿಗುವಂತೆ ಮಾಡಿದರು. ಅರ್ಕಾವತಿ ಬಡಾವಣೆಯಲ್ಲಿ ಸರ್ಕಾರಕ್ಕೆ ಕಪಾಳಮೋಕ್ಷವಾದ ನಂತರವೇ ಪ್ರಜೆಗಳಿಗೆ ಸೈಟು ಸಿಗುವಂತೆ ಮಾಡಿದರು. ಭ್ರಷ್ಟಾಚಾರದಲ್ಲಿ ಕರ್ನಾಟಕ ನಂಬರ್‌ ಒನ್‌ ಎಂಬ ಸುದ್ದಿ ಸುಳ್ಳು ಎಂದು ವಿಶ್ವ ಬ್ಯಾಂಕಿನಿಂದಲೇ ಸ್ಪಷ್ಟೀಕರಣ ತರಿಸಿದರು. ದರಿದ್ರನಾರಾಯಣ ಹೆಸರಿನಲ್ಲಿ ಕನ್ನಡೇತರರಿಗೆಲ್ಲ ಬೆಂಗಳೂರಿನಲ್ಲಿ ನಿವೇಶನದ ಹಕ್ಕು ಸಿಗುವಂತೆ ಮಾಡಿದರು. ಸಿದ್ದರಾಮಯ್ಯನವರು ಅಹಿಂದ ಸಂಘಟನೆ ಸ್ಥಾಪನೆ ಮಾಡಲು ಕಾರಣರಾದರು. ಸಿಂಧ್ಯಾಗೆ ತ್ರಿಶಂಕು ಸ್ವರ್ಗ ತೋರಿಸಿದರು. ಎಲ್ಲಕ್ಕಿಂತ ಹೆಚ್ಚಾಗಿ, ಸ್ವತಃ ತಮ್ಮ ಅಧಿಕಾರ ಬಿಟ್ಟುಕೊಟ್ಟು ಕರ್ನಾಟಕಕ್ಕೆ ಒಬ್ಬ ಹೊಸ ಕಾರ್ಯಶೀಲ ಮುಖ್ಯಮಂತ್ರಿ ಸಿಗಲು ಅನುಮ ಮಾಡಿಕೊಟ್ಟರು. ’ದೇವೇಗೌಡರ ಆಶೀರ್ವಾದ ಇಲ್ಲದಿದ್ದರೆ ಇಷ್ಟೆನ್ನೆಲ್ಲ ಮಾಡಲು ತಮ್ಮಿಂದ ಸಾಧ್ಯವಾಗುತ್ತಿರಲಿಲ್ಲ. ಇದರ ಸಂಪೂರ್ಣ ಕೀರ್ತಿ ದೇವೇಗೌಡರಿಗೇ ಸಲ್ಲಬೇಕು’ ಎಂದು ಧರ್ಮಸಿಂಗ್‌ ಕಳೆದ ವಾರ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದ್ದಾರೆ.ಇಂಥ ದೇವೇಗೌಡರ ಆಶೀರ್ವಾದ ಈಗ ಕುಮಾರಸ್ವಾಮಿಯವರಿಗೂ ಸಿಗಲು ಆರಂಭವಾಗಿದೆ! ಈ ಆಶೀರ್ವಾದದ ಫಲ ಹೇಗಿರುತ್ತದೆ ಎಂಬುದನ್ನು ನಾಮ ಕಾದು ನೋಡೋಣ ಮಗಾ.

ಇನ್ನೊಂದಿಷ್ಟು ಆಶೀರ್ವಾದಗಳೊಂದಿಗೆ,
ಇಂತಿ ನಿನ್ನಪ್ಪ
ಗ್ರಾಮಸಿಂಗ



Kannada Prabha issue dated April 24, 2006

A Research on the Effects of Dewe Gowda's Blessings!

--

Tuesday, December 27, 2005

ಹಿಸ್‌ ನೇಮ್‌ ಈಸ್‌ ಸ್ಟಿಂಗ್‌... ಧರಂ ‘ಸ್ಟಿಂಗ್‌’

‘ಆಪರೇಷನ್‌ ಸುನಾಮಿ’ ಕುರಿತು ಸಂತಾ ಸ್ಟಿಂಗ್‌ಗೆ ಬಂತಾ ಸ್ಟಿಂಗ್‌ ಇಂಟರೆ‘ಸ್ಟಿಂಗ್‌’ ಪತ್ರ


ಸುನಾಮಿಯ೦ತೆ ೨೦ ಸ೦ಸದರ ಮೇಲೆ ಟೀವಿ ಚಾನಲ್ ಗಳ ‘ಸ್ಟಿ೦ಗ್ ಆಪರೇಷನ್’ ಎರಗಿದ್ದೇ ತಡ ‘ಸ್ಟಿ೦ಗ್’ ಅನ್ನೋದು ‘ಬ್ಲಾ-ಸ್ಟಿ೦ಗ್’ ಆಗಿದೆ! ದುರ್ಯೋಧನ, ಚಕ್ರವ್ಯೂಹದ೦ಥ ಸ್ಟಿ೦ಗ್ ಆಪರೇಷನ್ ನೋಡಿದ ಮೇಲೆ ನಮ್ಮ ಸ೦ಸದರ ಬಗ್ಗೆ ನನಗೆ ಗೌರವ ಹೆಚ್ಚಾಗಿದೆ! ಅವರ ಬಗ್ಗೆ ಇಷ್ಟು ದಿನ ತಪ್ಪು ತಿಳಿದುಕೊ೦ಡಿದ್ದೆ ಎ೦ದು ವಿಷಾದವಾಗಿದೆ.

ಓಯೆ... ಸಂತಾ ಸ್ಟಿಂಗ್‌
ನಿನ್ನ ಹೆಸರನ್ನ ಸಿಂಗ್‌ ಬದಲು ಸ್ಟಿಂಗ್‌ ಅಂತ ನಾನ್ಯಾಕೆ ಬದಲಾಯಿಸಿದೆ ಗೊತ್ತಾ? ಈ ಹೆಸರು ಒಂಥರಾ ಇಂಟರೆ-ಸ್ಟಿಂಗ್‌ ಆಗಿದೆ ಅಲ್ವಾ... ಅದಕ್ಕೆ.


ಕಳೆದ ವರ್ಷ ಡಿಸೆಂಬರ್‌ ೨೬ಕ್ಕಿಂತ ಮೊದಲು ಭಾರತ ದೇಶದ ೧೦೦ ಕೋಟಿ ಜನಸಂಖ್ಯೆಯಲ್ಲಿ ೯೯.೯೯ ಕೋಟಿ ಜನರಿಗೆ ಸುನಾಮಿ ಅನ್ನೋ ಶಬ್ದವೇ ಗೊತ್ತಿರಲಿಲ್ಲ... ಗೊತ್ತಾ? ಭಾರತೀಯರು ಸುನಾಮಿಯನ್ನು ಕಂಡಿರಲಿಲ್ಲ. ಕೇಳಿರಲಿಲ್ಲ. ಓದಿರಲಿಲ್ಲ. ಆದರೆ, ಕೇವಲ ಒಂದೇ ವರ್ಷದಲ್ಲಿ ಎಂಥಾ ಬದಲಾವಣೆ ನೋಡು! ಇವತ್ತು ಮತ್ತೆ ಡಿಸೆಂಬರ್‌ ೨೬. ಯಾರನ್ನು ಬೇಕಾದರೂ ಕೇಳು... ಸುನಾಮಿ ಅಂದರೆ ಏನು ಅಂತ ಚಿಕ್ಕ ಭಾಷಣ ಕೊಡುತ್ತಾರೆ. ಜೋರಾಗಿ ಮಳೆ ಬಂದರೆ ‘ಗಗನ ಸುನಾಮಿ’ ಅಂತ ವರ್ಣಿಸುತ್ತಾರೆ. ವಿಪರೀತ ಪ್ರಶ್ನೆ ಕೇಳಿದರೆ ‘ಪ್ರಶ್ನೆ ಸುನಾಮಿ’ ಅಂತ ಛೇಡಿಸುತ್ತಾರೆ. ಪದೇ ಪದೇ ಮನೆಗೆ ಬಂದು ಕಾಟ ಕೊಡುವ ಅತಿಥಿಯನ್ನು ‘ಗೆಸ್ಟ್‌ ಸುನಾಮಿ’ ಅಂತ ಮೂದಲಿಸುತ್ತಾರೆ. ದೇವೇಗೌಡರು ಪದೇ ಪದೇ ಬರೆಯುವ ಪತ್ರಗಳಿಗೆ ‘ಪತ್ರ ಸುನಾಮಿ’ ಅಂತಾರೆ. ಯಡಿಯೂರಪ್ಪ ವಾಗ್ದಾಳಿಗೆ ‘ವಾಗ್ಸುನಾಮಿ’ ಅಂತಾರೆ. ಪದೇ ಪದೇ ಹೃದಯಕ್ಕಪ್ಪಳಿಸುವ ಹುಡುಗಿಗೆ ‘ಪ್ರೀತಿಯ ಸುನಾಮಿ’ ಅಂತಾರೆ. ರಭಸವಾಗಿ ನುಗ್ಗುವ ಧಡಿಯನಿಗೆ ‘ಮಾನವ ಸುನಾಮಿ’ ಅಂತಾರೆ... ಒಂದರ ಹಿಂದೆ ಒಂದರಂತೆ ವಕ್ಕರಿಸುವ ರಕ್ಕಸ ಅಲೆಗಳ ಈ ‘ಸುನಾಮಿ’ ಈಗ ಜನರ ಬಾಯಲ್ಲಿ ಹೇಗೆ ವಿಧ ವಿಧ ರೂಪ ಹಾಗೂ ಅರ್ಥ ಪಡೆದುಕೊಂಡಿದೆ ನೋಡು! ಜನಸಾಮಾನ್ಯರ ಡಿಕ್ಷನರಿಯಲ್ಲಿ ಸುನಾಮಿ ಅನ್ನೋ ಶಬ್ದ ಅಯಾಚಿತವಾಗಿ ಹೇಗೆ ಸೇರಿಕೊಂಡಿತು ನೋಡು!


ಅದೇ ರೀತಿ... ಕಳೆದ ಒಂದು ವರ್ಷದಲ್ಲಿ ಜನಸಾಮಾನ್ಯರ ಡಿಕ್ಷನರಿ ಸೇರಿಕೊಂಡ ಇನ್ನೊಂದು ಪ್ರಮುಖ ಶಬ್ದಾರ್ಥ- ‘ಸ್ಟಿಂಗ್‌ ಆಪರೇಷನ್‌’!


೪ ವರ್ಷಗಳ ಹಿಂದೆ ತೆಹಲ್ಕಾ ಡಾಟ್‌ ಕಾಮ್‌ ಸ್ಟಿಂಗ್‌ ಆಪರೇಷನ್‌ ನಡೆಸಿದರೂ ಜನರ ನಿಘಂಟು ಸೇರದ ಈ ‘ಸ್ಟಿಂಗ್‌’ ಕಳೆದ ಏಳೆಂಟು ತಿಂಗಳಲ್ಲಿ ಜನಮನದಲ್ಲಿ ಎಕ್ಸಿ-ಸ್ಟಿಂಗ್‌. ಬಾಲಿಮಡ್‌ ನಟ ಶಕ್ತಿ ಕಪೂರ್‌ ವಿರುದ್ಧ ‘ಇಂಡಿಯಾ ಟೀವಿ ಚಾನೆಲ್‌’ ಗುಪ್ತ ಕಾರ್ಯಾಚರಣೆ ನಡೆಸಿದ ನಂತರ ಈ ‘ಸ್ಟಿಂಗ್‌ ಪತ್ರಿಕೋದ್ಯಮ’ ನಮ್ಮ ದೇಶದಲ್ಲಿ ಹೆಚ್ಚು ಹೆಚ್ಚು ಪರ್ಸಿ-ಸ್ಟಿಂಗ್‌. ಆದರೆ, ಈ ತಿಂಗಳು, ಸುನಾಮಿಯಂತೆ ೨೦ ಸಂಸದರ ಮೇಲೆ ಟೀವಿ ಚಾನಲ್‌ಗಳ ‘ಸ್ಟಿಂಗ್‌ ಆಪರೇಷನ್‌’ ಎರಗಿದ್ದೇ ತಡ... ‘ಸ್ಟಿಂಗ್‌’ ಅನ್ನೋದು ‘ಬ್ಲಾ-ಸ್ಟಿಂಗ್‌’ ಆಗಿದೆ! ಈ ವರ್ಷ ಹಲವಾರು ಹೊಸ ಸುದ್ದಿ ಚಾನೆಲ್‌ಗಳು ಆರಂಭವಾಗಿವೆ. ಈ ಸ್ಪರ್ಧೆಯಲ್ಲಿ ಜನರ ಮನ ಗೆಲ್ಲಲು ಆ ಚಾನಲ್‌ಗಳೆಲ್ಲ ಅನುಸರಿಸುತ್ತಿರುವ ಪ್ರಮುಖ ವಿಧಾನ ಸ್ಟಿಂಗ್‌ ಆಪರೇಷನ್‌.


ಹೀಗಾಗಿ... ಸ್ಟಿಂಗ್‌ ಎನ್ನುವ ಲೇಟೆಸ್ಟ್‌ ಫ್ಯಾಷನ್‌ ಟ್ರೆಂಡಿಗೆ ಜನ ಈಗ ತಾನೇ ಅಡ್ಜೆ-ಸ್ಟಿಂಗ್‌. ಸ್ಟಿಂಗ್‌ ಅಂದರೆ ರಾಜಕಾರಣಿಗಳು ಒಮ್ಮೆ ಬೆಚ್ಚಿಬೀಳುತ್ತಾರೆ. ಉಳಿದವರು ಒಮ್ಮೆ ಕಿವಿ ನಿಮಿರಿಸುತ್ತಾರೆ. ಆದರೆ, ಎಲ್ಲರೂ ಒಮ್ಮೆ ಗಮನಹರಿಸುತ್ತಾರೆ. ಅದಕ್ಕೇ ಜನರ ಗಮನ ಸೆಳೆಯಲು ನಾನು ಸಿಂಗ್‌ ಅನ್ನೋ ಹಳೇ ಹೆಸರನ್ನ ಸ್ಟಿಂಗ್‌ ಅಂತ ಮಾಡರ್ನ್‌ ಮಾಡಿದ್ದೇನೆ... ಅರ್ಥವಾಯಿತಾ, ಸಂತಾ ಸ್ಟಿಂಗ್‌?


ಎಕ್ಚುವಲಿ, ಇನ್ನೂ ಅನೇಕರ ಹೆಸರನ್ನು ಬದಲು ಮಾಡೋದಕ್ಕೂ ನಾನೀಗ ಅಸಿ-ಸ್ಟಿಂಗ್‌. ಸದ್ಯಕ್ಕೆ ಕೆಲಮ ಹೆಸರನ್ನು ಟೆ-ಸ್ಟಿಂಗ್‌... ಉದಾಹರಣೆಗೆ ಧರಂ ಸ್ಟಿಂಗ್‌, ಸಂಗ್ರಾಂ ಸ್ಟಿಂಗ್‌, ಅಜಯ್‌ ಕುಮಾರ್‌ ಸ್ಟಿಂಗ್‌, ಮನಮೋಹನ ಸ್ಟಿಂಗ್‌, ನಟ್ವರ್‌ ಸ್ಟಿಂಗ್‌... ಇತ್ಯಾದಿ!


ಬೈ ದ ವೇ, ಇತ್ತೀಚಿನ ಸ್ಟಿಂಗ್‌ ಆಪರೇಷನ್‌ನಲ್ಲಿ ೧೧ ಸಂಸದರು ಉಚ್ಚಾಟನೆಗೊಂಡರಲ್ಲ. ಅವರನ್ನೆಲ್ಲ ನೋಡಿದರೆ, ಪಾಪ ಅನ್ನಿಸುತ್ತದೆ. ಯಾಕೆಂದರೆ, ಅವರು ಪ್ರಶ್ನೆ ಕೇಳೋದಕ್ಕೆ ತಗೊಂಡಿದ್ದ ಹಣವಾದರೂ ಎಷ್ಟು? ಇಪ್ಪತ್ತೋ, ಐವತ್ತೋ ಸಾವಿರ ರುಪಾಯಿ ಮಾತ್ರ. ಇಷ್ಟು ಕಡಿಮೆ ಲಂಚ ಪಡೆದರೆ ಅವರಿಗೆ ಉಚ್ಚಾಟನೆಯಂಥ ಘನ ಘೋರ ಶಿಕ್ಷೆಯೇ? ಮತ್ತೆಂದೂ ಪ್ರಶ್ನೆ ಕೇಳಲು ಲಂಚ ಪಡೆಯಲಾಗದಂಥ ಅವಸ್ಥೆಯೇ! ಅಂತ ಆಡ್ವಾಣಿಯವರು ಕೆಂಡ ಕಾರಿದ್ದಾರೆ.


ನನಗೂ ಆಡ್ವಾಣಿಯವರು ಹೇಳಿದ್ದು ಸರಿ ಅನ್ನಿಸುತ್ತಿದೆ. ಸಂಸದರು ಇಷ್ಟೇ ಇಷ್ಟು ಲಂಚ ತಿಂದರೆ ದೇಶದ ಮಾನ ಎಷ್ಟು ಮಹಾ ಹೋದೀತು! ಸ್ವಲ್ಪ ಮಾನ ಹೋಗಿರಬಹುದು. ಆದರೆ, ಈ ಸಂಸದರನ್ನು ನೋಡಿ ವ್ಯಥೆಯಾಗುತ್ತಿದೆ. ಎಷ್ಟು ಕಡಿಮೆ ಲಂಚಕ್ಕೂ ಕೈಚಾಚುವ ಪರಿಸ್ಥಿತಿ ಅವರಿಗೆ ಇದೆಯಲ್ಲಾ ಎಂದು ಕನಿಕರ ಉಂಟಾಗುತ್ತಿದೆ. ಎಲ್ಲಾ ಬಿಟ್ಟು ಸದನದಲ್ಲಿ ಪ್ರಶ್ನೆ ಕೇಳುಮದಕ್ಕೂ ಲಂಚ ಪಡೆಯುವಂಥ ಹೀನ ಪರಿಸ್ಥಿತಿ ಅವರಿಗೆ ಬಂದೊದಗಿದೆಯಲ್ಲಾ ಎಂದು ದುಃಖವಾಗುತ್ತಿದೆ. ಈ ಸಂಸದರಿಗೆ ಬೇರೆ ಯಾಮದಾದರೂ ರೀತಿಯಲ್ಲಿ ಕೋಟಿಗಟ್ಟಲೆ ಹಣವನ್ನು ಸುಲಭವಾಗಿ ಸಂಪಾದಿಸುವ ಅವಕಾಶ ಸಿಗಲಿಲ್ಲವಲ್ಲಾ ಅಂತ ಖೇದವಾಗುತ್ತಿದೆ. ಅಂಥ ಅವಕಾಶ ಸಿಕ್ಕಿದ್ದರೆ ಇವರೆಲ್ಲ ಈ ಪುಡಿಗಾಸಿಗೆ ಕೈಚಾಚುತ್ತಿದ್ದರೇ... ನೀನೇ ಹೇಳು!


ಒಂದು ದೃಷ್ಟಿಯಲ್ಲಿ ನೋಡಿದರೆ, ಈ ಸ್ಟಿಂಗ್‌ ಆಪರೇಷನ್‌ನಿಂದ ನಮ್ಮ ಸಂಸದರ ಬಗ್ಗೆ ನನಗೆ ಗೌರವ ಹೆಚ್ಚಾಗಿದೆ! ಏಕೆಂದರೆ, ಈ ಸಂಸದರು ಮತ್ತು ರಾಜಕಾರಣಿಗಳು ಹತ್ತಿಪ್ಪತ್ತು ಸಾವಿರಕ್ಕೆಲ್ಲ ಯಾವ ಕೆಲಸವನ್ನೂ ಮಾಡಿಕೊಡುಮದಿಲ್ಲ ಅಂದುಕೊಂಡಿದ್ದೆ. ಲಕ್ಷಾಂತರ, ಕೋಟ್ಯಂತರ ರುಪಾಯಿ ಲಂಚ ಕೊಟ್ಟರೆ ಮಾತ್ರ ಇವರು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ ಎಂಬ ತಪುý್ಪ ಕಲ್ಪನೆ ನನ್ನಲ್ಲಿತ್ತು. ಆದರೆ, ಇಷ್ಟು ಕಡಿಮೆ ಲಂಚಕ್ಕೂ ಇವರು ಸಂಸತ್ತಿನಲ್ಲಿ ತಮ್ಮ ಗಿರಾಕಿಗಳ ಕೆಲಸ ಮಾಡಿಕೊಟ್ಟರು ಎನ್ನುಮದು ನಮ್ಮ ಸಂಸದರ ಪ್ರಾಮಾಣಿಕತೆಗೆ ಹಿಡಿದ ಕನ್ನಡಿ. ಲಂಚದ ಬಾಬತ್ತು ಕಡಿಮೆಯಾಯಿತು ಎಂದು ಸಂಸದರು ಪ್ರಶ್ನೆ ಕೇಳದೇ ಇರಲಿಲ್ಲ. ಗಿರಾಕಿಗಳಿಗೆ ಮೋಸ ಮಾಡಲಿಲ್ಲ ಎನ್ನುಮದು ಶ್ಲಾಘನೀಯವೇ ಸರಿ.


ನಮ್ಮ ಕರ್ನಾಟಕದ ಸಂಸದರೂ ಇದ್ದಾರೆ. ವೆರಿಗುಡ್‌ ಪೀಪಲ್‌... ಬಟ್‌ ಗುಡ್‌ ಫಾರ್‌ ನಥಿಂಗ್‌! ಇವರು ಲಂಚ ಪಡೆದಾದರೂ ರಾಜ್ಯದ ಜನತೆಯ ಕೆಲಸ ಮಾಡಬಹುದಿತ್ತು ಅನಿಸುತ್ತಿದೆ ನನಗೆ!


ಹಾಗೆ ನೋಡಿದರೆ, ನಮ್ಮ ಸಂಸದರಿಗಿಂತ ಸರ್ಕಾರಿ ಅಧಿಕಾರಿಗಳೇ ಬೆಟರ್ರು. ಯಾಕೆಂದರೆ, ಲಂಚ ಪಡೆದಾದರೂ ಜನರ ಕೆಲಸ ಮಾಡಿಕೊಡುತ್ತಾರೆ. ಸಂಸದರಿಗಿಂತ ಈ ಅಧಿಕಾರಿಗಳು ಸ್ವಲ್ಪ ದುಬಾರಿ ಎನ್ನಿ. ಉದಾಹರಣೆಗೆ, ಒಂದು ಸೈಟ್‌ ರಜಿಸ್ಟ್ರೇಶನ್‌ ಮಾಡಲು ಈ ಅಧಿಕಾರಿಗಳು ೨೦ ಸಾವಿರದಿಂದ ೧ ಲಕ್ಷ ರುಪಾಯಿ ಲಂಚ ಪಡೆಯುತ್ತಾರೆ. ಆದರೂ ಪರವಾಗಿಲ್ಲ. ಕೆಲಸ ಮಾಡುತ್ತಾರಲ್ಲ ಅದಕ್ಕಿಂತ ಭಾಗ್ಯ ಈ ದೇಶಕ್ಕೆ ಇನ್ನೇನಿದೆ! ಅಂಥವರ ಮೇಲೆ ಸ್ಟಿಂಗ್‌ ಆಪರೇಷನ್‌ ಮಾಡಿ ಅವರು ಕೆಲಸ ಮಾಡದಂತೆ ನಿರುತ್ಸಾಹಗೊಳಿಸುಮದು ಒಳ್ಳೆಯ ಪತ್ರಿಕೋದ್ಯಮದ ಲಕ್ಷಣವಲ್ಲ.


ಈಗಿನ ಕಾಲಕ್ಕೆ ಬೇಕಾದ ಸ್ಟಿಂಗ್‌ ಆಪರೇಷನ್‌ ದುರ್ಯೋಧನ, ಚಕ್ರವ್ಯೂಹ ಥರದ್ದಲ್ಲ. ಲಂಚ ತಿಂದರೂ ಯಾರೂ ಕೆಲಸ ಮಾಡಿಕೊಡುತ್ತಿಲ್ಲ ಹಾಗೂ ಯಾರೂ ಲಂಚವನ್ನೂ ತಿನ್ನೋಲ್ಲ, ಕೆಲಸವನ್ನೂ ಮಾಡೋಲ್ಲ ಎನ್ನುಮದನ್ನು ಬಹಿರಂಗಗೊಳಿಸುವಂಥ ಸ್ಟಿಂಗ್‌ ಆಪರೇಷನ್‌ ಬೇಕಾಗಿದೆ ಈಗ. ಅದಕ್ಕೆ ನಾನು ಒಂದು ಪ್ಲಾನ್‌ ಹಾಕಿದ್ದೇನೆ.


ಕರ್ನಾಟಕ ಸರ್ಕಾರದಲ್ಲಿ ಬಹಳಷ್ಟು ಮಂತ್ರಿಗಳು, ಶಾಸಕರು, ಅಧಿಕಾರಿಗಳು ಲಂಚ ತಿಂದರೂ ಕೆಲಸ ಮಾಡುತ್ತಿಲ್ಲ ಎನ್ನುವ ಆಪಾದನೆಗಳಿವೆ. ರಸ್ತೆ ನಿರ್ಮಾಣ, ನೆರೆ ಪರಿಹಾರ, ಬೆಳೆ ಪರಿಹಾರ, ಗ್ರಾಮೀಣಾಭಿವೃದ್ಧಿ ಮುಂತಾದ ಹೆಸರಿನಲ್ಲಿ ಸರ್ಕಾರದ ಬೊಕ್ಕಸ ಕರಗುತ್ತ ಇದೆ. ಆದರೆ, ಯಾವ ಅಭಿವೃದ್ಧಿಯೂ ಆಗುತ್ತಿಲ್ಲ. ಇದನ್ನು ಕಂಡುಹಿಡಿಯಲು ನಾನು ಸ್ಟಿಂಗ್‌ ಆಪರೇಷನ್‌ ನಡೆಸಬೇಕೆಂದಿದ್ದೇನೆ. ಇದಕ್ಕೆ ನಾನು ‘ಆಪರೇಷನ್‌ ಸುನಾಮಿ’ ಅಂತ ಹೆಸರಿಟ್ಟಿದ್ದೇನೆ. ಈ ಹೆಸರು ಯಾಕೆ ಅಂತ ಕೇಳಬೇಡ. ಏಕೆಂದರೆ, ಆಪರೇಷನ್‌ ದುರ್ಯೋಧನ ಹೆಸರಿಟ್ಟವರಿಗೂ ಆ ಹೆಸರು ಯಾಕಿಟ್ಟಿದ್ದೇವೆ ಅಂತ ಗೊತ್ತಿಲ್ಲ! ಹಾಗಾಗಿ, ನಮಗೂ ನಾವ್ಯಾಕೆ ಸುನಾಮಿ ಹೆಸರಿಟ್ಟಿದ್ದೇವೆ ಅಂತ ಗೊತ್ತಿರಬೇಕಿಲ್ಲ.


ನಾಮ ಆದಷ್ಟು ಬೇಗ ಈ ಸ್ಟಿಂಗ್‌ ಆಪರೇಷನ್‌ ಮಾಡಬೇಕು. ತಡ ಮಾಡಿದರೆ, ಈ ಧರಂಸ್ಟಿಂಗ್‌ ಸರ್ಕಾರ ಬಿದ್ದುಹೋಗಿರುತ್ತದೆ. ಆಮೇಲೆ, ಸ್ಟಿಂಗ್‌ ಆಪರೇಷನ್‌ ಮಾಡಲು ಮುಂದಿನ ಸರ್ಕಾರ ರಚನೆಯಾಗುವವರೆಗೂ ನಾಮ ಕಾಯಬೇಕಾಗುತ್ತದೆ.
ಆದ್ದರಿಂದ, ಟೈಮ್‌ ವೇಸ್ಟಿಂಗ್‌ ಮಾಡದೇ, ನಮ್ಮ ಸ್ಟಿಂಗ್‌ ಆಪರೇಷನ್ನಿಗೆ ಸಿದ್ಧನಾಗು.


ಇಂತಿ ನಿನ್ನ ಪಾರ್ಟ್‌ನರ್‌
ಬಂತಾ ಸ್ಟಿಂಗ್‌



Kannada Prabha issue dated december 26, 20056
His Name is Sting... Dharam Sting!

--