Sunday, November 30, 2008

ಟಾಕ್ ರೇಡಿಯೋ : ಇದು ಬರೀ ‘ಮಾತಾಡಿಯೋ’!




ಭಾಗ - 3

ನಾವು, ರೇಡಿಯೋ ಸಿಲೋನ್‌ನ ಬಿನಾಕಾ ಗೀತ್‌ಮಾಲ್,ವಿವಿಧಭಾರತಿಯ ಛಾಯಾಗೀತ್,ಆಲ್ ಇಂಡಿಯಾ ರೇಡಿಯೋಭಕ್ತಿ ಗೀತ್, ಬೆಂಗಳೂರು ಆಕಾಶವಾಣಿಯ ಚಿತ್ರಗೀತ್, ಧಾರ್ವಾಡ ರೇಡಿಯೋ ಜಾನಪದ ಗೀತ್, ರೇಡಿಯೋ ಸಿಟಿಯ ಡಿಸ್ಕೋ ಗೀತ್... ಕೇಳುತ್ತಾ ಬೆಳೆದವರು. ನಮ್ಮಂಥ ಸಂಗೀತ ಪ್ರಿಯ ಭಾರತೀಯರ ಪ್ರಕಾರ ರೇಡಿಯೋ ಅಂದರೆ ಹಾಡಿಯೋ! ಹಾಡಿಲ್ಲದ ರೇಡಿಯೋ ಅದು ಹೇಗೆ ರೇಡಿಯೋ!



ಗುಡ್ ಮಾರ್ನಿಂಗ್ ಇಂಡಿಯಾ
ನೀವಿನ್ನು ಕೇಳಲಿದ್ದೀರಿ...
ಹೊಚ್ಚ ಹೊಸ ಟಾಕ್ ರೇಡಿಯೋ!


ಅರೇ... ಆಡಿಯೋ ಗೊತ್ತು. ರೇಡಿಯೋ ಗೊತ್ತು. ವಿಡಿಯೋ, ನೋಡಿಯೋ ಗೊತ್ತು. ಇದೇನು ಮೋಡಿಯೋ! ಟಾಕ್ ರೇಡಿಯೋ?

ಸತ್ಯವಾಗಿ ಹೇಳುತ್ತೇನೆ. ಕಳೆದ ತಿಂಗಳು ಅಮೆರಿಕಕ್ಕೆ ಹೋಗುವವರೆಗೂ ನನಗೂ ಈ ಬಗ್ಗೆ ಹೆಚ್ಚೇನೂ ತಿಳಿದಿರಲಿಲ್ಲ. ಎಲ್ಲೋ ಒಂದೆರಡು ವಾಕ್ಯ ಓದಿದ್ದೆನಾದರೂ, ಅದೇನೆಂದು ನನ್ನ ತಲೆಯಲ್ಲಿ ದಾಖಲಾಗಿರಲಿಲ್ಲ. ಅಮೆರಿಕದಲ್ಲಿ ಅತ್ಯಂತ ಜನಪ್ರಿಯವಾಗಿರುವ ರೇಡಿಯೋ ಮಾಧ್ಯಮ ಇದು. ಭಾರತಕ್ಕೂ ಇದೀಗ ತಾನೇ ಕಾಲಿಟ್ಟಿದೆ. ಎರಡು ತಿಂಗಳ ಹಿಂದೆ, ಚೆನ್ನೈಯಲ್ಲಿ ಭಾರತದ ಮೊಟ್ಟ ಮೊದಲ ಟಾಕ್ ರೇಡಿಯೋ ಆರಂಭವಾಗಿದೆ. ಹೆಸರು ಚೆನ್ನೈಲೈವ್ ೧೦೪.೮ ಎಫ್‌ಎಂ.

ಟಾಕ್ ರೇಡಿಯೋಗೆ ಹಿಂದಿಯಲ್ಲಿ ‘ಬಾತ್ ರೇಡಿಯೋ’ ಎಂದು ಕರೆಯಬಹುದು. ತಮಿಳಿನಲ್ಲಿ ‘ಸೊಲ್ ರೇಡಿಯೋ’ ಎನ್ನಬಹುದು. ಕನ್ನಡದಲ್ಲಿ ‘ಮಾತ್ ರೇಡಿಯೋ’ ಅನ್ನಬಹುದು. ಈ ರೇಡಿಯೋದಲ್ಲಿ ಹಾಡುಗಳೇ ಇರುವುದಿಲ್ಲ. ಬೆಳಗಿನಿಂದ ರಾತ್ರಿವರೆಗೂ ಮಾತು.. ಮಾತು.. ಮಾತು.. ಮಾತು.. ಮಾತು.. ಮಾತು.. ಮಾತು.. ಮಾತು.. ಮಾತು.. ಮಾತು..

ನಾವು, ರೇಡಿಯೋ ಸಿಲೋನ್‌ನ ಬಿನಾಕಾ ಗೀತ್‌ಮಾಲ್, ವಿವಿಧಭಾರತಿಯ ಛಾಯಾಗೀತ್, ಆಲ್ ಇಂಡಿಯಾ ರೇಡಿಯೋದ ಭಕ್ತಿ ಗೀತ್, ಬೆಂಗಳೂರು ಆಕಾಶವಾಣಿಯ ಚಿತ್ರಗೀತ್, ಧಾರವಾಡ ರೇಡಿಯೋದ ಜಾನಪದ ಗೀತ್, ರೇಡಿಯೋ ಸಿಟಿಯ ಡಿಸ್ಕೋ ಗೀತ್... ಕೇಳುತ್ತಾ ಬೆಳೆದವರು. ನಮ್ಮಂಥ ಸಂಗೀತ ಪ್ರಿಯ ಭಾರತೀಯರ ಪ್ರಕಾರ ರೇಡಿಯೋ ಅಂದರೆ ಹಾಡಿಯೋ! ಹಾಡಿಲ್ಲದ ರೇಡಿಯೋ ಅದು ಹೇಗೆ ರೇಡಿಯೋ!

ಸಖತ್ ಮಾತ್ ಮಗಾ..

ಅಮೆರಿಕದಲ್ಲಿ ಹಾಡು ಸಂಗೀತದ ರೇಡಿಯೋಗಳು ಇದ್ದರೂ, ಟಾಕ್ ರೇಡಿಯೋ ಇದೀಗ ಅತ್ಯಂತ ಜನಪ್ರಿಯ ಮಾಧ್ಯಮ. ಕೆನಡಾ, ಬ್ರಿಟನ್‌ನಲ್ಲೂ ಈ ಪ್ರಕಾರದ ರೇಡಿಯೋ ಇದೆಯಾದರೂ ಸಂಗೀತ ಪ್ರಧಾನ ರೇಡಿಯೋದಷ್ಟು ಮನೆಮಾತಾಗಿಲ್ಲ. ನ್ಯೂಝಿಲ್ಯಾಂಡ್, ಆಸ್ಟ್ರೇಲಿಯಾದಲ್ಲಿ ಟಾಕ್ ರೇಡಿಯೋಗೆ ‘ಟಾಕ್ ಬ್ಯಾಕ್ ರೇಡಿಯೋ’ ಎನ್ನುತ್ತಾರಂತೆ. (ಭಾರತದಲ್ಲಿ ‘ಟಾಕ್ ರೇಡಿಯೋ’ ಎಂದರೆ ಸದಾ ವಟ ವಟ ಎಂದು ತಲೆ ತಿನ್ನುವ ‘ಹೆಂಡತಿಯೋ’ ಎಂದು ಕೇಳುವುದು ಬರೀ ಕುಚೋದ್ಯ!)

ಮುಂಜಾನೆಯಾದರೆ ಸಾಕು. ಟಾಕ್ ರೇಡಿಯೋದಲ್ಲಿ ರೇಡಿಯೋ ಜಾಕಿಗಳು ಮಾತಿಗೆ ಇಳಿಯುತ್ತಾರೆ. ಊರಿನ ಸಮಾಚಾರ, ರಾಜ್ಯ-ರಾಷ್ಟ್ರದ ಆಗು-ಹೋಗು, ಚುನಾವಣೆ, ರಾಜಕೀಯ, ಕ್ರೀಡೆ, ಸೆಕ್ಸ್ ಸಮಾಲೋಚನೆ, ಫ್ಯಾಷನ್ ವಿಚಾರ, ಮಕ್ಕಳ ವಿದ್ಯಾಭ್ಯಾಸ, ಷಾಪಿಂಗ್ ಸಲಹೆ, ಹವಾಮಾನ ವರದಿ, ಸಲಿಂಗ ವಿವಾಹ ಸೇರಿದಂತೆ ಹಲವಾರು ವಿಷಯಗಳ ಕುರಿತು ಮಾಹಿತಿ ನೀಡುತ್ತಾರೆ. ಚರ್ಚೆ ನಡೆಸುತ್ತಾರೆ. ತಜ್ಞರು ಅಥವಾ ಸಾಮಾನ್ಯ ಜನರ ಸಂದರ್ಶನ ಮಾಡುತ್ತಾರೆ. ಫೋನ್-ಇನ್ ಕಾರ್ಯಕ್ರಮ ನಡೆಸಿ ಕೇಳುಗರ ಜೊತೆ ಟೆಲಿಫೋನ್ ಮೂಲಕ ಹರಟೆ ಹೊಡೆಯುತ್ತಾರೆ. ಕೆಲವು ಬಾರಿ ರೇಡಿಯೋದಲ್ಲೇ ಜಗಳವಾಡುತ್ತಾರೆ. ತಮಾಷೆ, ಅಣಕ, ಕುಹಕ ಎಲ್ಲ ಬಗೆಯ ಮಾತಿನ ಕಾರ್ಯಕ್ರಮಗಳನ್ನೂ ಪ್ರಸಾರ ಮಾಡುತ್ತಾರೆ. ಆದರೆ ಹಾಡು ಸಂಗೀತ ಇಲ್ಲ ಅಷ್ಟೆ.

ಬೆಂಗಳೂರು, ಮೈಸೂರು, ಮುಂಬೈ, ದೆಹಲಿ, ಚೆನ್ನೈ, ಹೈದರಾಬಾದ್ ಸೇರಿದಂತೆ ಭಾರತದ ಅನೇಕ ದೊಡ್ಡ ಶಹರಗಳಲ್ಲಿ ಈಗೊಂದು ದಶಕದ ಈಚೆ ಎಫ್‌ಎಂ ರೇಡಿಯೋಗಳು ಆರಂಭವಾಗಿವೆಯಷ್ಟೇ. ಕಾರಿನಲ್ಲಿ, ಬಸ್ಸಿನಲ್ಲಿ, ಮನೆಯಲ್ಲಿ, ಕಚೇರಿಯಲ್ಲಿ, ಫೋನಿನಲ್ಲಿ, ಇಂಟರ್‌ನೆಟ್‌ನಲ್ಲಿ... ಎಲ್ಲೆಂದರಲ್ಲಿ ಈ ಎಫ್‌ಎಂ ಚಾನಲ್‌ಗಳು ಇಂದು ಬಿತ್ತರವಾಗುತ್ತಿವೆ. ಇವುಗಳಿಗೂ, ಟಾಕ್ ರೇಡಿಯೋಗೂ ತಾಂತ್ರಿಕವಾಗಿ ಯಾವುದೇ ವ್ಯತ್ಯಾಸವಿಲ್ಲ. ಆದರೆ, ಹಾಡು ಸಂಗೀತದ ಬದಲು ಮಾತೇ ಮುಖ್ಯವಾದ ಕಾರ್ಯಕ್ರಮ ಇರುವ ಎಫ್‌ಎಂ ರೇಡಿಯೋಗಳನ್ನು ಟಾಕ್ ರೇಡಿಯೋ ಎಂದು ವರ್ಗೀಕರಿಸಲಾಗಿದೆ.

ನಾನು ಅಮೆರಿಕದಲ್ಲಿರುವಾಗ ಟಾಕ್ ರೇಡಿಯೋಗಳು ಒಬಾಮಾ ಹಾಗೂ ಮೆಕೇನ್ ಕುರಿತು ವ್ಯಾಪಕವಾಗಿ ಸಾರ್ವಜನಿಕ ಚರ್ಚೆ ನಡೆಸಿದವು. ಕೆಲವು ಟಾಕ್ ರೇಡಿಯೋಗಳಲ್ಲಂತೂ ಜನರು ‘ಹಸಿ-ಹಸೀ’ ಶಬ್ದ ಬಳಸಿ ಬಿಸಿ-ಬಿಸಿ ವಾಗ್ಯುದ್ಧ ನಡೆಸಿದರು. ಹಾಗಾಗಿ, ಚುನಾವಣೆ ಸಂದರ್ಭದಲ್ಲಿ ಅಮೆರಿಕದ ಟಾಕ್ ರೇಡಿಯೋಗಳು ನಿಜಕ್ಕೂ... ಹಾಟ್ ಮಗಾ!

ಆರ್‌ಜೆಗಳು ‘ಬೋರ್’ಜೆಗಳಲ್ಲ...

ಆರ್‌ಜೆಗಳೆಂದು ಕರೆಸಿಕೊಳ್ಳುವ ನಮ್ಮ ಎಫ್‌ಎಂ ಚಾನೆಲ್ಲುಗಳ ರೇಡಿಯೋ ಜಾಕಿಗಳು ಈಗೀಗ ಬೋರ್ ಹೊಡೆಸುವ ‘ಬೋರ್’ಜೆಗಳಾಗಿದ್ದಾರೆ. ಕಾಲೇಜಿಗೆ ಹೋಗುವ ಹುಡುಗ ಹುಡುಗಿಯರನ್ನು, ಪಿಯೂಸಿಯಲ್ಲಿ ಡುಮ್ಕಿ ಹೊಡೆದ ಬಚ್ಚಾ-ಬಚ್ಚಿಯರನ್ನು ಇಂದು ಎಫ್‌ಎಂ ರೇಡಿಯೋ ಸ್ಟೇಷನ್‌ಗಳಲ್ಲಿ ಕೂರಿಸಿ ಅವರನ್ನು ಆರ್‌ಜೆ ಎನ್ನುವ ಸಂಪ್ರದಾಯ ಭಾರತದಲ್ಲಿ ಕಂಡುಬರುತ್ತಿದೆ. ಎರಡು ಹಾಡು, ಎಂಟು ಜಾಹೀರಾತಿನ ನಡುವೆ ಒಮ್ಮೆ ಗಂಟಲು ತೂರಿಸಿ, ಲವ್ವು, ಡೇಟಿಂಗು, ಬರ್ತ್‌ಡೇ, ಆನಿವರ್ಸರಿ ಮುಂತಾದ ಲೈಟ್ ಆಂಡ್ ಸ್ವೀಟ್ ಮಾತನಾಡುವುದು ಈ ಆರ್‌ಜೆಗಳ ಕೆಲಸ.

ಆದರೆ, ಟಾಕ್ ರೇಡಿಯೋದಲ್ಲಿ ಅಂಥ ‘ಬೋರ್’ಜೆಗಳಿರುವುದಿಲ್ಲ. ಸಾಮಾನ್ಯವಾಗಿ ಜಾಣರಾಗಿರುವ, ವಿಷಯಜ್ಞಾನವಿರುವ, ಪತ್ರಿಕೋದ್ಯಮದ ಹಿನ್ನೆಲೆಯಿರುವ, ಮಾತಿನಲ್ಲಿ ಚಾಕಚಕ್ಯತೆ ಇರುವ, ತಾರ್ಕಿಕ ಮಾತುಗಾರಿಕೆಯಿರುವ, ಮಾತಿನಲ್ಲೇ ಮೋಡಿ ಮಾಡುವ ವ್ಯಕ್ತಿಗಳು ಟಾಕ್ ರೇಡಿಯೋದಲ್ಲಿ ಹೋಸ್ಟ್ ಆಗಿರುತ್ತಾರೆ.

ಇಂದು ನಮ್ಮ ಎಫ್‌ಎಂ ಚಾನೆಲ್‌ಗಳ ಫೋನ್-ಇನ್ ಕಾರ್ಯಕ್ರಮಕ್ಕೆ ಫೋನ್‌ಮಾಡಿ ಮಾತನಾಡುವ ಶ್ರೋತೃವರ್ಗ ಎಂಥದು? ರಸ್ತೆಯಲ್ಲಿ ಹೋಗುವ ಎಲೆಕ್ರ್ಟಿಷಿಯನ್, ಕಾಲೇಜಿನಲ್ಲಿ ಓದುತ್ತಿರುವ ಬಾಲೆ, ಮನೆಯಲ್ಲಿ ಅಷ್ಟೇನೂ ಬ್ಯೂಸಿಯಿಲ್ಲದ ಗೃಹಿಣಿ, ಹೆಂಡತಿಯ ಬರ್ತ್‌ಡೇಯನ್ನು ಕಚೇರಿಯಲ್ಲಿ ನೆನಪಿಸಿಕೊಳ್ಳುವ ಕ್ಲರ್ಕು... ಹೀಗಿರುತ್ತದೆ ಡೆಮೊಗ್ರಫಿ.

“ಆದರೆ, ಟಾಕ್ ರೇಡಿಯೋ ಶ್ರೋತೃವರ್ಗ ಭಿನ್ನವಾದುದು. ನಮ್ಮದು ಉನ್ನತ ಆಸಕ್ತಿಯಿರುವವರ ಶ್ರೋತೃವರ್ಗ. ಕಂಪನಿಯ ಸಿಇಒಗಳು, ವೈದ್ಯರು, ಪಂಡಿತರು, ಜ್ಞಾನಿಗಳು, ಪ್ರೊಫೆಸರುಗಳು, ರಾಜಕಾರಣಿಗಳು, ವಕೀಲರು... ಮುಂತಾದ ಶ್ರೇಷ್ಠ ಶ್ರೇಣಿಯ ಶ್ರೋತೃವರ್ಗ ಟಾಕ್ ರೇಡಿಯೋಕ್ಕೆ ಇರುತ್ತದೆ‘ ಎನ್ನುತ್ತಾರೆ ಮಿಲ್‌ವಾಕಿಯ 1290 WMCS ಟಾಕ್ ರೇಡಿಯೋದ ಹೋಸ್ಟ್ ಜೋಲ್ ಮ್ಯಾಕ್‌ನ್ಯಾಲಿ.

“ಇಂಥ ಉನ್ನತ ಶ್ರೇಣಿಯ ಶ್ರೋತೃವರ್ಗ ಇರುವುದರಿಂದ ಪ್ರೀಮಿಯಂ ಜಾಹೀರಾತುದಾರರು ನಮಗೆ ಸಿಗುತ್ತಾರೆ. ಆ ಮೂಲಕ ನಮಗೆ ಉತ್ತಮ ಆದಾಯ ದೊರೆಯುತ್ತದೆ‘ ಎಂಬುದು 620 WTMJ ಟಾಕ್ ರೇಡಿಯೋದ ಜೇಮ್ಸ್ ಟಿ. ಹ್ಯಾರಿಸ್ ಅವರ ವಾದ.
ಎರಿಕ್ ವಾನ್ ಈ ಹಿಂದೆ ವಿಸ್ಕಾಸಿನ್‌ನ ಒಂದು ಸಂಜೆ ಪತ್ರಿಕೆಯ ಸಂಪಾದಕರಾಗಿದ್ದರು. ಆದರೆ, ಅಮೆರಿಕದಲ್ಲಿ ಪತ್ರಿಕೆಗಳು ಅವಸಾನಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅವರ ಪತ್ರಿಕೆಯೂ ಇತ್ತೀಚೆಗೆ ನಿಂತುಹೋಯಿತು. ಆಗಿನಿಂದ ಅವರು 1290 WMCS ಟಾಕ್ ರೇಡಿಯೋದಲ್ಲಿ ಪ್ರತಿದಿನ ೪ ಗಂಟೆಯ ಟಾಕ್ ಷೋ ನಡೆಸಿಕೊಡುವ ಆರ್‌ಜೆ ಆಗಿದ್ದಾರೆ.

ಚೆನ್ನೈ ಲೈವ್ ಮತ್ತು ದಿಲ್ಲಿ ಮ್ಯಾವ್!

ಈಗೊಂದು ಎರಡು ತಿಂಗಳ ಹಿಂದೆ, ಚೆನ್ನೈನಲ್ಲಿ ಎಫ್‌ಎಂ ೧೦೪.೮ ರೇಡಿಯೋ ಆರಂಭವಾಗಿದೆ. ಇದು ಭಾರತದ ಮೊಟ್ಟ ಮೊದಲ ಟಾಕ್ ರೇಡಿಯೋ. ಬೆಳಗ್ಗಿನಿಂದ ರಾತ್ರಿವರೆಗೆ ಇದರಲ್ಲಿ ಬರೀ ಮಾತು.. ಮಾತು.. ಮಾತು. ಪಕ್ಕಾ ಅಮೆರಿಕದ ಟಾಕ್ ರೇಡಿಯೋ ಮಾದರಿಯಲ್ಲೇ ಈ ರೇಡಿಯೋ ಕಾರ್ಯಕ್ರಮಗಳೂ ಇವೆಯಂತೆ. (ನಾನು ಕೇಳಿಲ್ಲ.) ಮಟೂಟ್ ಉದ್ಯಮ ಸಮೂಹ ಈ ಟಾಕ್ ರೇಡಿಯೋ ಆರಂಭಿಸಿದೆ. ಕೇವಲ ಸಂಗೀತ ಪ್ರಧಾನ ಎಫ್‌ಎಂ ರೇಡಿಯೋಗಳಿರುವ ಭಾರತದಲ್ಲಿ ಹೊಸ ಶ್ರೋತೃವರ್ಗ ಸೃಷ್ಟಿಸಿಕೊಳ್ಳುವುದು ತಮ್ಮ ಬಿಸಿನೆಸ್ ಮಾಡಲ್ ಎಂದು ಚೆನ್ನೈ ಲೈವ್ ಹೇಳಿಕೊಂಡಿದೆ.

ಆದರೆ, ಕಳೆದ ವರ್ಷ ಸುಮಾರು ಇದೇ ವೇಳೆಗೆ ದೆಹಲಿಯಲ್ಲಿ ಇಂಡಿಯಾ ಟುಡೇ ಸಮೂಹದಿಂದ ಮ್ಯಾವ್ ೧೦೪.೮ ಎಫ್‌ಎಂ ರೇಡಿಯೋ ಆರಂಭವಾಗಿದೆ. ಅದು ಸಹ ತನ್ನನ್ನು ಭಾರತದ ಮೊದಲ ಟಾಕ್ ರೇಡಿಯೋ ಎಂದು ಕರೆದುಕೊಂಡಿದೆ. ಆದರೆ, ಅದು ಬರೀ ಮಾತ್ ರೇಡಿಯೋ ಅಲ್ಲ. ಅದರಲ್ಲಿ ಹಾಡೂ ಸಂಗೀತ ಎಲ್ಲಾ ಇದೆ. ಆದ್ದರಿಂದ ಅದು ಮಾಮೂಲಿ ರೇಡಿಯೋ ಎಂಬ ವಾದವಿದೆ.

ಇಷ್ಟಾದರೂ ದಿಲ್ಲಿಯ ಮ್ಯಾವ್ ೧೦೪.೮ ಒಂದು ವಿಶೇಷವೇ. ಏಕೆಂದರೆ, ಅದು ಭಾರತದ ಮೊಟ್ಟ ಮೊದಲ ‘ಮಹಿಳಾ ರೇಡಿಯೋ’. ಮಹಿಳೆಯರಿಂದ ಮಹಿಳೆಯರಿಗಾಗಿ ಎಂಬ ತತ್ವ ಅದರದ್ದು. ಅಬ್ಬಾ ಮಹಿಳೆ ಮತ್ತು ರೇಡಿಯೋ ಎಂಥಾ ಕಾಂಬಿನೇಶನ್!
ಮ್ಯಾವ್ ೧೦೪.೮...
ಸಜೀವ ರೇಡಿಯೋಗಳಿಗಾಗಿ
ಇಲೆಕ್ಟ್ರಾನಿಕ್ ರೇಡಿಯೋ!

ಎಂಬುದು ಆ ಸ್ಟೇಷನ್‌ನ ಘೋಷವಾಕ್ಯ ಅಲ್ಲವಂತೆ.

24 X 7 ನಾನ್ ಸ್ಟಾಪ್ ಹರಟೆ

ಅಮೆರಿಕದ ಖಾಸಗಿ ಚಾನಲ್‌ಗಳು ಸುದ್ದಿ ಪ್ರಸಾರ ಮಾಡಲು ಅವಕಾಶವಿದೆ. ಆದರೆ, ಭಾರತದಲ್ಲಿ ಖಾಸಗಿ ರೇಡಿಯೋಗಳು ಸುದ್ದಿ ಪ್ರಸಾರ ಮಾಡುವಂತಿಲ್ಲ. ಬರುವ ವರ್ಷ ಕೇಂದ್ರ ಸರ್ಕಾರ ಇದಕ್ಕೆ ಅನುಮತಿ ನೀಡುವ ಸಾಧ್ಯತೆ ಇದೆ. ಹಾಗಾದರೂ, ಖಾಸಗಿ ರೇಡಿಯೋಗಳು ಟೀವಿ ನ್ಯೂಸ್ ಚಾನಲ್‌ಗಳ ರೀತಿ ತಾವೇ ಸುದ್ದಿ ಸಂಗ್ರಹಿಸಿ ಪ್ರಸಾರ ಮಾಡುವಂತಿಲ್ಲ. ಅವು ಆಲ್ ಇಂಡಿಯಾ ರೇಡಿಯೋದ ಸುದ್ದಿಗಳನ್ನು ತಮಗೆ ಬೇಕಾದ ರೀತಿಯಲ್ಲಿ ಪ್ಯಾಕೇಜ್ ಮಾಡಿ ಪ್ರಸಾರ ಮಾಡಬಹುದು ಅಷ್ಟೇ.

ಆದರೆ, ಭಾರತದ ಟಾಕ್ ರೇಡಿಯೋಗಳಿಗೆ ಈ ಕಟ್ಟಳೆಯ ಹಂಗಿಲ್ಲ. ಏಕೆಂದರೆ, ಸುದ್ದಿ ಪ್ರಸಾರ ಟಾಕ್ ರೇಡಿಯೋ ಕೆಲಸವಲ್ಲ. ಸುದ್ದಿಯ ಬಗ್ಗೆ ವಿಶ್ಲೇಷಣೆ ನಡೆಸುವುದು, ಹರಟೆ ಹೊಡೆಯುವುದು ಟಾಕ್ ರೇಡಿಯೋ ಉದ್ಯೋಗ. ಇದನ್ನು ದಿನಪತ್ರಿಕೆಗಳಿಗೂ, ಮ್ಯಾಗಸಿನ್‌ಗಳಿಗೂ ಇರುವ ವ್ಯತ್ಯಾಸ ಎಂದು ಹೇಳಬಹುದು.

ಎನಿವೇ, ಅಮೆರಿಕದಲ್ಲಿ ಈಗಾಗಲೇ ಮನೆಮಾತಾಗಿರುವ ಟಾಕ್ ರೇಡಿಯೋ ಇನ್ನು ಒಂದೊಂದಾಗಿ ಭಾರತದಲ್ಲೂ ಆರಂಭವಾಗಲಿದೆ.
ಮಸ್ತ್ ಮಜಾ ಮಾಡಿ!

Sunday, November 23, 2008

ಅಹಾ ನಂGay ಮದುವೆಯಂತೆ!



ಭಾಗ - 2

ಚಿರಂಜೀವಿ ವೆಡ್ಸ್ ಚಿರಂಜೀವಿ

ಮದುವೆ ಹಾGay ಸುಮ್ಮನೆ!

ನಿಮಗೆ ಸಲಿಂಗ ವಿವಾಹ ಗೊತ್ತಿರಬಹುದು. ಆದರೆ, ‘ಸಿವಿಲ್ ಯೂನಿಯನ್’ ಅಂದರೆ ಗೊತ್ತೇ? ಗಂಡು-ಗಂಡನ್ನು, ಹೆಣ್ಣು-ಹೆಣ್ಣನ್ನು ಮದುವೆಯಾದಾಗ ಅಮೆರಿಕ ಮತ್ತಿತರ ಕೆಲ ದೇಶಗಳಲ್ಲಿ ಸಿಗುವ ಹೊಸ ವೈವಾಹಿಕ ಮಾನ್ಯತೆ ಇದು. ಅಂದಹಾಗೆ, ಅಮೆರಿಕದಲ್ಲಿ ಮೊನ್ನೆ ಮೊನ್ನೆ ಚುನಾವಣೆ ನಡೆಯಿತಷ್ಟೇ. ಈ ಚುನಾವಣೆ ಅಮೆರಿಕ ಅಧ್ಯಕ್ಷರ ಆಯ್ಕೆಗಾಗಿ ಮಾತ್ರ ನಡೆಯಿತು ಅಂದುಕೊಳ್ಳಬೇಡಿ. ಇದೇ ಚುನಾವಣೆಯ ದಿನ ಒಬಾಮಾಗೆ ಮತ ಹಾಕುವ ಜೊತೆಯಲ್ಲೇ ಸಲಿಂಗ ವಿವಾಹ ಬೇಕೋ ಬೇಡವೋ ಎನ್ನುವ ಕುರಿತೂ ಅಮೆರಿಕದ ಮೂರು ರಾಜ್ಯದ ಜನ ಮತಚಲಾಯಿಸಿದರು!



ರಂಗೇನ ಹಳ್ಳಿಯಾಗೆ,
ಬಂಗಾರ ಕಪ್ಪ ತೊಟ್ಟ
ರಂಗಾದ ರಂಗೇ ಗೌಡ ಮೆರೆದಿದ್ದ

ನಾನು ಚಿಕ್ಕವನಿದ್ದಾಗ, ಪ್ರತಿದಿನವೂ ರೇಡಿಯೋದಲ್ಲಿ ಈ ಹಾಡು ಕೇಳುತ್ತಿದ್ದೆ. ಆಗೆಲ್ಲ ನಾನೂ ಧ್ವನಿ ಸೇರಿಸಿ ಗುನುಗುತ್ತಿದ್ದೆ. ನಂತರ, ಅಂತ್ಯಾಕ್ಷರಿ ಆಡುವಾಗ ‘ರ’ ಅಕ್ಷರ ಸಿಕ್ಕರೆ ಸಾಕು, ಈ ಹಾಡು ಹಾಡುವುದು ಗ್ಯಾರಂಟಿ. ಆಗೆಲ್ಲ, ರಂಗೇನ ಹಳ್ಳಿ, ರಂಗೇ ಗೌಡ ಎನ್ನುವಾಗ ಏನೂ ವಿಶೇಷ ಅನ್ನಿಸುತ್ತಿರಲಿಲ್ಲ. ಆದರೆ, ಮೊನ್ನೆ ಅಮೆರಿಕಕ್ಕೆ ಹೋಗಿ ಬಂದ ಮೇಲೆ, ಯಾಕೋ ರಂಗೇನ ಹಳ್ಳಿ ‘ರಂGayನ ಹಳ್ಳಿಯಂತೆಯೂ’ ರಂಗೇ ಗೌಡ ‘ರಂGay ಗೌಡನಂತೆಯೂ’ ಕಂಡು ಕಿರಿಕಿರಿ ಎನಿಸತೊಡಗಿದೆ. ಅದರಲ್ಲೂ ರಂಗಾದ ರಂಗೇ ಗೌಡ ಅನ್ನುವಾಗ ಅತನೊಬ್ಬ ಪಕ್ಕಾ Gay (ಸಲಿಂಗಕಾಮಿ) ಎನ್ನುವ ಚಿತ್ರಣ ಮೂಡತೊಡಗಿದೆ. ಇದು ‘ಗೇ’ವರಾಣೆ ನನ್ನ ತಪ್ಪಲ್ಲ!

ಕಳೆದ ಒಂದು ತಿಂಗಳ ಅಮೆರಿಕ ಪ್ರವಾಸದಲ್ಲಿ Gay (ಸಲಿಂಗಕಾಮಿ), Gay Marriage (ಸಲಿಂಗ ವಿವಾಹ), Gay Rights (ಸಲಿಂಗಿ ಹಕ್ಕು), Gay Movements (ಸಲಿಂಗಿ ಆಂದೋಲನ) ಕುರಿತು ನಾನು ಕೇಳದ, ಓದದ, ಮಾತನಾಡದ ದಿನವೇ ಇಲ್ಲ. ಹಾಗಾ‘ಗೇ’ ನನ‘ಗೆ’ ‘ಗೇ’ಗಳೆಲ್ಲ Gayಗಳಂತೆ ಕಾಣತೊಡಗಿದೆ.

ತಮಾಷೆಯಲ್ಲ, ಅಕ್ಟೋಬರ್ ತಿಂಗಳಲ್ಲಿ ಅಮೆರಿಕದಲ್ಲಿ ಸಾರ್ವತ್ರಿಕವಾಗಿ ಚರ್ಚೆಯಾದ ಪ್ರಮುಖ ವಿಷಯಗಳು ನಾಲ್ಕು:
೧. ಬುಷ್, ಜಾನ್ ಮೆಕೇನ್ ಮತ್ತು ‘ಮೊದ್ದುಮಣಿ’ ಸಾರಾ ಪಾಲಿನ್
೨. ಒಬಾಮಾ ಮತ್ತು ಆತನ ‘ಭಯೋತ್ಪಾದಕ’ ಮಿತ್ರ ಜೋ ದ ಪ್ಲಂಬರ್
೩. ಆರ್ಥಿಕ ಹಿಂಜರಿತ ಮತ್ತು ಹೆಚ್ಚಿದ ಉದ್ಯೋಗಿಗಳ ವಜಾ
೪. ಸಲಿಂಗ ಮದುವೆ ಮತ್ತು ಅದರ ಪರ-ವಿರೋಧ ಚುನಾವಣಾ ಪ್ರಚಾರ

ಕಳೆದ ಆರು ತಿಂಗಳಿಂದ ಅಮೆರಿಕದಲ್ಲಿ ಒಬಾಮ ಕುರಿತು ಎಷ್ಟು ಸಾರ್ವಜನಿಕ ಚರ್ಚೆ ನಡೆದಿದೆಯೋ, ಹೆಚ್ಚು ಕಡಿಮೆ ಅದರ ಅರ್ಧದಷ್ಟು ಚರ್ಚೆ ಸಲಿಂಗ ವಿವಾಹದ ಕುರಿತು ನಡೆದಿದೆ. ಅದರಲ್ಲೂ ಕ್ಯಾಲಿಫೋರ್ನಿಯಾ, ಫ್ಲೋರಿಡಾ ಮತ್ತು ಅರಿಝೋನಾ ರಾಜ್ಯಗಳಲ್ಲಿ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಬ್ಯಾಲಟ್‌ನಲ್ಲೇ ಸಲಿಂಗ ಮದುವೆ ಪರ-ವಿರೋಧ ಮತದಾನವೂ ನಡೆದಿದೆ. ಇದೇ ಮೊದಲ ಬಾರಿಗೆ ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿಗಳ ಚರ್ಚಾ ವೇದಿಕೆಯಲ್ಲಿ ಒಬಾಮಾ ಮತ್ತು ಮೆಕೇನ್ ಸಲಿಂಗ ವಿವಾಹದ ಕುರಿತು ಗಂಭೀರ ಚರ್ಚೆ ನಡೆಸಬೇಕಾಯಿತು.

ಅಂದರೆ, ಅಮೆರಿಕದಲ್ಲಿ ಸಲಿಂಗ ವಿವಾಹದ ಬಗ್ಗೆ ಎಷ್ಟು ಗದ್ದಲ ನಡೆಯುತ್ತಿದೆ ಎಂದು ನಿಮಗೆ ಅರ್ಥವಾಗಬಹುದು.

ಅಲ್ಲಿGay... ಇಲ್ಲಿGay!

ಹಾ‘ಗೆ’ ನೋಡಿದರೆ, ಸಲಿಂಗ ವಿವಾಹದ ವಿವಾದ ಅಮೆರಿಕಾ‘ಗೇ’ ಸೀಮಿತವಲ್ಲ. ಭಾರತವೂ ಸೇರಿದಂತೆ ವಿಶ್ವಾದ್ಯಂತ ಈಗ ಸಲಿಂಗ ವಿವಾಹ ಕುರಿತ ಚರ್ಚೆ, ಹೋರಾಟ ನಡೆಯುತ್ತಿದೆ.

ಅಂದಹಾ‘ಗೆ’, ಇತ್ತೀಚೆ‘ಗೆ’ ಹಿಂದಿ ಸಿನಿಮಾಗಳಿ‘ಗೆ’ ಹೋಗಿದ್ದೀರಾ? ಸಲಿಂಗಕಾಮ ಇಲ್ಲದ ಯಾವುದಾದರೂ ಸಿನಿಮಾ ಬಂದಿದೆಯೇ? ಮೊನ್ನೆ ಬಿಡುಗಡೆಯಾದ ಫ್ಯಾಷನ್ ಎಂಬ ಮಧುರ್ ಭಂಡಾರ್‌ಕರ್ ಚಿತ್ರದಲ್ಲಿ ಹಲವಾರು ಸಲಿಂಗಕಾಮಿಗಳಿದ್ದರೆ, ದೋಸ್ತಾನಾ ಎಂಬ ಚಿತ್ರದಲ್ಲಿ ಹೀರೋಗಳೇ ಸಲಿಂಗಕಾಮಿಗಳು! ಸ್ವತಃ ಸಲಿಂಗ ಕಾಮಿ ಎಂದು ‘ಪ್ರಚಾರಕ್ಕೆ’ ಗುರಿಯಾಗಿರುವ ಸೂಪರ್ ಹಿಟ್ ಹಿಂದಿ ಚಿತ್ರ ನಿರ್ದೇಶಕ ಕರಣ್ ಜೋಹರ್‌ಗೆ ಸಲಿಂಗಕಾಮಿಗಳಿಲ್ಲದ ಚಿತ್ರ ನಿರ್ದೇಶನ ಮಾಡಲು ಬರುವುದೇ ಇಲ್ಲವೇನೋ! ಗರ್ಲ್‌ಫ್ರೇಂಡ್ ಎಂಬ ಲೆಸ್ಬಿಯನ್ ಚಿತ್ರ ಸಲಿಂಗಕಾಮಿ ಹಿಂದಿ ಚಿತ್ರಕ್ಕೆ ಇನ್ನೊಂದು ಉದಾಹರಣೆ. ಕನ್ನಡ ಚಿತ್ರಗಳಲ್ಲಿ ಇನ್ನೂ ಈ ‘ಗೇ’ ಟ್ರೆಂಡ್ ಆರಂಭವಾಗಿಲ್ಲ, ಏಕೋ ಕಾಣೆ!

ರೂಮಿನೊಳGay ಹೊರGay

ಸಲಿಂಗರತಿ, ಸಲಿಂಗ ಕಾಮ ಇಂದು ನಿನ್ನೆಯದಲ್ಲ. ಆದರೆ, ಕಳೆದ ದಶಕದವರೆಗೂ ಸಲಿಂಗಕಾಮಿಗಳು ತಮ್ಮ ಸಂಬಂಧವನ್ನು ಗುಪ್ತವಾಗಿ ಇಟ್ಟುಕೊಳ್ಳುತ್ತಿದ್ದರು. ಹೋಮೋ ಸೆಕ್ಸ್ ಎಂಬುದು ಹೇಯ ಹಾಗೂ ನಾಚಿಗೆಗೇಡಿನ ವಿಷಯವಾಗಿತ್ತು. ಈಗ ಹಾಗಲ್ಲ. ಸಲಿಂಗ ಕಾಮ ನೈಸರ್ಗಿಕ ಕ್ರಿಯೆ. ಆದ್ದರಿಂದ ಅದು ಕೂಡ ಮಾನವ ಹಕ್ಕು ಎಂದು ವಾದಿಸಲಾಗುತ್ತಿದೆ. ಸಲಿಂಗಕಾಮಿಗಳು ಈಗ ಸಾರ್ವಜನಿಕವಾಗೇ ತಮ್ಮ ವಿಶೇಷತೆಯನ್ನು ಒಪ್ಪಿಕೊಳ್ಳತೊಡಗಿದ್ದಾರೆ. ಗಂಡು ಗಂಡನ್ನೂ, ಹೆಣ್ಣು ಹೆಣ್ಣನ್ನೂ ಮದುವೆಯಾಗಿ ಸಾರ್ವಜನಿಕವಾಗೇ ದಾಂಪತ್ಯ ನಡೆಸತೊಡಗಿದ್ದಾರೆ. ಕೆನಡಾ, ಸ್ಪೇನ್, ದಕ್ಷಿಣ ಆಫ್ರಿಕಾ, ಬೆಲ್ಜಿಯಂ, ನೆದರ್‌ಲ್ಯಾಂಡ್‌ಗಳಲ್ಲಿ ಸಲಿಂಗ ವಿವಾಹಕ್ಕೆ ಕಾನೂನಿನ ಮನ್ನಣೆ ಇದೆ. ಇಸ್ರೇಲ್ ಹಾಗೂ ಫ್ರಾನ್ಸ್‌ನಲ್ಲಿ ವಿದೇಶೀ ನೋಂದಾಯಿತ ಸಲಿಂಗ ದಂಪತಿಗಳಿಗೆ ಕಾನೂನಿನ ಅಭ್ಯಂತರವಿಲ್ಲ.

ಆದರೆ, ಈ ‘ಸಲಿಂಗ ಸಂಬಂಧ’ ಬೆಡ್‌ರೂಮಿನ ಒಳGay ಇರುವ ತನಕ ತೊಂದರೆ ಇರಲಿಲ್ಲ. ನಾಲ್ಕು ಗೋಡೆಯಿಂದ ಹೊರಬಂದು ಸಲಿಂಗ ಕಾಮದ ಸಾರ್ವಜನಿಕ ಪ್ರದರ್ಶನ ಆರಂಭವಾದದ್ದರಿಂದಲೇ ವಿವಾದವೂ ಆರಂಭವಾಗಿದೆ. ಭಾರತವೂ ಸೇರಿದಂತೆ ಅನೇಕ ದೇಶಗಳಲ್ಲಿ ಸಲಿಂಗ ವಿವಾಹ ಕಾನೂನು ಬಾಹಿರ. ಇನ್ನೂ ಕೆಲವು ದೇಶಗಳಲ್ಲಿ ಸಲಿಂಗರತಿ ಕ್ರಿಮಿನಲ್ ಅಪರಾಧ.

ಈ ವಿವಾದದ ನಡುವೆಯೂ, ಕೆಲವು ದೇಶಗಳಲ್ಲಿ ಸಲಿಂಗರತಿ ಹಾಗೂ ಸಲಿಂಗ ದಾಂಪತ್ಯಕ್ಕೆ ಕಾನೂನಿನ ರಕ್ಷೆ ಹಾಗೂ ಮನ್ನಣೆ ದೊರೆತಿದೆ. ಮತ್ತೆ ಕೆಲವು ದೇಶಗಳಲ್ಲಿ ಕಾನೂನು ಮನ್ನಣೆ ಪಡೆಯಲು ಸಲಿಂಗ ಪ್ರಿಯರು ಹೋರಾಟ ನಡೆಸಿದ್ದಾರೆ. ಈ ಕುರಿತ ಪರ-ವಿರೋಧ ಹೋರಾಟ ಅತ್ಯಂತ ತೀವ್ರವಾಗಿ ನಡೆಯುತ್ತಿರುವುದು ಸದ್ಯಕ್ಕೆ ಅಮೆರಿಕದಲ್ಲಿ ಮಾತ್ರ.

ತ್ರಿಶಂಕು ಕಲ್ಯಾಣ

ಅಮೆರಿಕ ‘ಕೇಂದ್ರ ಸರ್ಕಾರದ’ ಪ್ರಕಾರವೂ ಸಲಿಂಗ ವಿವಾಹ ಕಾನೂನು ಬಾಹಿರ. ಒಂದು ಗಂಡು - ಹೆಣ್ಣಿನ ನಡುವೆ ನಡೆಯುವ ಮದುವೆ ಮಾತ್ರ ಕಾನೂನುಬದ್ಧ. ಗಂಡು-ಗಂಡು ಅಥವಾ ಹೆಣ್ಣು-ಹೆಣ್ಣಿನ ನಡುವೆ ಮದುವೆ ನಡೆದರೆ ಅದಕ್ಕೆ ಕಾನೂನಿನ ಒಪ್ಪಿಗೆಯಿಲ್ಲ. ಹಾಗೆಂದು, ಇಂತಹ ಮದುವೆಗೆ ಅಲ್ಲಿನ ಕೇಂದ್ರ ಸರ್ಕಾರ ನಿಷೇಧವನ್ನೇನೂ ಹೇರಿಲ್ಲ. ಸಲಿಂಗ ವಿವಾಹ ಮಾಡಿಕೊಂಡವರಿಗೆ ಪೆನ್‌ಶನ್, ಇಮಿಗ್ರೇಶನ್ ಸೇರಿದಂತೆ ಕೇಂದ್ರ ಸರ್ಕಾರದ ಯಾವುದೇ ಸೌಲಭ್ಯಗಳೂ ದೊರೆಯುವುದಿಲ್ಲ. ಅಷ್ಟೇ.

ಆದರೆ, ಅಮೆರಿಕದ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಕಾನೂನಿದೆ. ಮೆಸಾಚುಸೆಟ್ಸ್ ಹಾಗೂ ಕನೆಕ್ಟಿಕಟ್ ಎಂಬ ಎರಡು ರಾಜ್ಯಗಳಲ್ಲಿ ಸಲಿಂಗ ವಿವಾಹ ಸಂಪೂರ್ಣ ಕಾನೂನುಬದ್ಧ. ಮೆಸಾಚುಸೆಟ್ಸ್‌ನಲ್ಲಿ, ೫ ವರ್ಷಗಳ ಹಿಂದೆಯೇ ಸಲಿಂಗ ವಿವಾಹಕ್ಕೆ ಕಾನೂನು ಮನ್ನಣೆ ದೊರಕಿದ್ದರೆ, ಕನೆಕ್ಟಿಕಟ್‌ನಲ್ಲಿ ಈ ವರ್ಷ ಅಕ್ಟೋಬರ್‌ನಲ್ಲಿ ಕಾನೂನಿನ ಆಶೀರ್ವಾದ ದೊರೆತಿದೆ.

ಈ ನಡುವೆ ಕ್ಯಾಲಿಫೋರ್ನಿಯಾದಲ್ಲಿ ತ್ರಿಶಂಕು ಪರಿಸ್ಥಿತಿ. ಈ ರಾಜ್ಯದಲ್ಲಿ, ಇದೇ ವರ್ಷ ಮೇ ತಿಂಗಳಿಂದ ಸಲಿಂಗ ವಿವಾಹಕ್ಕೆ ಕಾನೂನಿನ ಒಪ್ಪಿಗೆ ಸಿಕ್ಕಿತ್ತು. ಸಲಿಂಗ ಮದುವೆಯನ್ನು ತಪ್ಪು ಎನ್ನುವ ಅಧಿಕಾರ ಕಾನೂನಿಗೆ ಇಲ್ಲ ಎಂದು ಕ್ಯಾಲಿಫೋರ್ನಿಯಾ ಸುಪ್ರೀಂ ಕೋರ್ಟು ಮೇ ತಿಂಗಳಲ್ಲಿ ತೀರ್ಪು ನೀಡಿತ್ತು. ಇದಾದದ್ದೇ ತಡ, ಕೇವಲ ೫ ತಿಂಗಳಲ್ಲಿ ಕನಿಷ್ಠ ೧೮೦೦೦ ಸಲಿಂಗ ದಂಪತಿಗಳು ತಮ್ಮ ವಿವಾಹವನ್ನು ನೋಂದಾಯಿಸಿಕೊಂಡಿದ್ದಾರೆ. ಆದರೆ, ಕೋರ್ಟಿನ ಈ ತೀರ್ಪಿನ ವಿರುದ್ಧ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ದೊಡ್ಡ ವಿರೋಧದ ಅಲೆ ಎದ್ದಿತು. ಈ ಕುರಿತು ಕ್ಯಾಲಿಫೋರ್ನಿಯಾ ಸಂವಿದಾನಕ್ಕೇ ತಿದ್ದುಪಡಿ ತಂದು, ಸಲಿಂಗ ಮದುವೆಯನ್ನು ಕಾನೂನು ಬಾಹಿರಗೊಳಿಸುವ ಸಲುವಾಗಿ ಭಾರೀ ಜನಾಂದೋಲನ ನಡೆಯಿತು. ಪ್ರತಿಭಟನಾಕಾರರು ಸುಮಾರು ೧೦ ಲಕ್ಷಕ್ಕೂ ಹೆಚ್ಚು ಸಹಿ ಸಂಗ್ರಹಿಸಿದರು. ಪರಿಣಾಮವಾಗಿ ಸಲಿಂಗ ವಿವಾಹದ ಕುರಿತು ಅಧಿಕೃತ ಜನಮತ (ರೆಫರೆಂಡಮ್) ಪಡೆಯಲು ಕ್ಯಾಲಿಫೋರ್ನಿಯಾ ಸರ್ಕಾರ ನಿರ್ಧರಿಸಿತು. ಅದಕ್ಕಾಗಿ ಮೊನ್ನೆ ನವೆಂಬರ್ ೪ರ ಅಧ್ಯಕ್ಷೀಯ ಚುನಾವಣೆಯ ಬ್ಯಾಲಟ್ ಜೊತೆಯೇ ಸಲಿಂಗ ವಿವಾಹದ ಕುರಿತೂ ಮತದಾನ ನಡೆಯಿತು. ಈ ಚುನಾವಣೆಯಲ್ಲಿ ಸಲಿಂಗ ವಿವಾಹದ ವಿರುದ್ಧ ಶೇ.೫೨ಕ್ಕಿಂತ ಹೆಚ್ಚು ಮತಗಳು ಚಲಾವಣೆಯಾದವು. ಅದೇ ರೀತಿ ಅರಿಝೋನಾ ಹಾಗೂ ಅಟ್ಲಾಂಟಾ ಚುನಾವಣೆಯಲ್ಲೂ (ರೆಫರೆಂಡಮ್‌ನಲ್ಲೂ) ಸಲಿಂಗ ವಿವಾಹಕ್ಕೆ ಸೋಲಾಗಿದೆ. ಸಲಿಂಗ ವಿವಾಹದ ಪರವಾಗಿದ್ದ ತನ್ನ ಹಿಂದಿನ ತೀರ್ಪನ್ನು ಪುನಾಪರಿಶೀಲಿಸಲು ಕ್ಯಾಲಿಫೋರ್ನಿಯಾ ಸುಪ್ರೀಂ ಕೋರ್ಟು ಒಪ್ಪಿಕೊಂಡಿದೆ. ಈ ಜನಾದೇಶ ಹಾಗೂ ತೀರ್ಪು ಆಧರಿಸಿ ಕ್ಯಾಲಿಫೋರ್ನಿಯಾ ಸರ್ಕಾರ ತನ್ನ ಸಂವಿಧಾನಕ್ಕೆ ತಿದ್ದುಪಡಿ ತರುವ ಸಾಧ್ಯತೆ ಇದೆ.

ಹಾಗಾದರೆ, ಈಗಾಗಲೇ ಕ್ಯಾಲಿಫೋರ್ನಿಯಾದಲ್ಲಿ ಮದುವೆಯಾಗಿರುವ ೧೮೦೦೦ಕ್ಕಿಂತ ಹೆಚ್ಚು ಸಲಿಂಗ ದಂಪತಿಗಳ ಗತಿ ಏನು? ಅವರ ವಿವಾಹ ಕಾನೂನು ಬಾಹಿರವೇ, ಕಾನೂನುಬದ್ಧವೇ? ಈ ಕುರಿತು ಕ್ಯಾಲಿಫೋರ್ನಿಯಾ ಸುಪ್ರೀಂ ಕೋರ್ಟು ತೀರ್ಪು ನೀಡಬೇಕಾಗಿದೆ.

ಅಷ್ಟೇ ಅಲ್ಲ, ಈ ಸಲಿಂಗ ದಂಪತಿಗಳಿಗೆ ಇನ್ನೂ ಒಂದು ಪೇಚಿದೆ. ಕ್ಯಾಲಿಫೋರ್ನಿಯಾ, ಮೆಸಾಚುಸೆಟ್ಸ್ ಹಾಗೂ ಕನೆಕ್ಟಿಕಟ್ ರಾಜ್ಯಗಳಲ್ಲಿ ಕಾನೂನು ಪ್ರಕಾರ ಮದುವೆಯಾಗಿದ್ದರೂ ಇವರು ಅಮೆರಿಕದ ಇತರ ರಾಜ್ಯಗಳಿಗೆ ಹೋದಾಗ ಇವರ ದಾಂಪತ್ಯ ಕಾನೂನು ಬಾಹಿರವಾಗುತ್ತದೆ.

ಮದುವೆ ಬದಲು ಸಿವಿಲ್ ಯೂನಿಯನ್

ಅಮೆರಿಕದ ಕೆಲವು ರಾಜ್ಯಗಳಲ್ಲಿ ಹಾಗೂ ವಿಶ್ವದ ಕೆಲವು ದೇಶಗಳಲ್ಲಿ ಸಲಿಂಗ ವಿವಾಹಕ್ಕೆ ಪರ್ಯಾಯ ವೈವಾಹಿಕ ಕಾನೂನು ವ್ಯವಸ್ಥೆಯೊಂದಿದೆ. ಇದಕ್ಕೆ ‘ಸಿವಿಲ್ ಯೂನಿಯನ್’ ಎಂದು ಹೆಸರು. ಈ ಕಾನೂನಿನ ಪ್ರಕಾರ ಗಂಡು-ಗಂಡು ಅಥವಾ ಹೆಣ್ಣು-ಹೆಣ್ಣು ದಂಪತಿಯಾಗಬಹುದು. ಆದರೆ ಇವರ ಮದುವೆ ಮದುವೆಯಲ್ಲ. ಅದನ್ನು ‘ಸಿವಿಲ್ ಯೂನಿಯನ್’ (ನಾಗರಿಕ ಒಂದಾಗುವಿಕೆ) ಎಂದು ಪ್ರತ್ಯೇಕವಾಗಿ ಕಾನೂನು ಪರಿಗಣಿಸುತ್ತದೆ. ವರ್ಮಾಂಟ್, ನ್ಯೂಜೆರ್ಸಿ ಹಾಗೂ ನ್ಯೂಹೆಮ್‌ಸ್ಪೈರ್ ರಾಜ್ಯಗಳಲ್ಲಿ ಸಿವಿಲ್ ಯೂನಿಯನ್‌ಗೆ ವಿವಾಹದಷ್ಟೇ ಮಾನ್ಯತೆಯಿದ್ದರೆ, ಹವಾಯಿ, ಮೇನ್, ವಾಷಿಂಗ್‌ಟನ್, ಓರೆಗಾಂವ್ ರಾಜ್ಯಗಳಲ್ಲಿ ಸಿವಿಲ್ ಯೂನಿಯನ್‌ಗೆ ಭಾಗಶಃ ಮಾತ್ರ ಮಾನ್ಯತೆಯಿದೆ.

ಬ್ರಿಟನ್, ಜರ್ಮನಿ, ಸ್ವಿಜರ್‌ಲೆಂಡ್ ಸೇರಿದಂತೆ ಯುರೋಪಿನ ಅನೇಕ ದೇಶಗಳಲ್ಲಿ ಸಿವಿಲ್ ಯೂನಿಯನ್‌ಗೆ ಮಾನ್ಯತೆಯಿದೆ. ಆದರೆ, ಸಿವಿಲ್ ಯೂನಿಯನ್‌ನ ಕಲ್ಪನೆ ಭಾರತಕ್ಕೆ ಸಂಪೂರ್ಣ ಹೊಸತು.

ಬಾಡಿGay ತಾಯಿ ಬಿಸಿನೆಸ್

ಈ ನಡುವೆ, ಅಮೆರಿಕ ಸೇರಿದಂತೆ ಅನೇಕ ದೇಶಗಳ ಸಲಿಂಗ ದಂಪತಿಗಳಿಗೆ ಭಾರತ ‘ಪ್ರಸೂತಿ ಔಟ್ ಸೋರ್ಸಿಂಗ್’ ಸೇವೆ ನೀಡಲು ಆರಂಭಿಸಿದೆ. ಮೊನ್ನೆ ತಾನೆ ಇಸ್ರೇಲಿನ ‘ಗಂಡ-ಗಂಡತಿ’ ದಂಪತಿಯೊಂದು ಭಾರತದ ಬಾಡಿಗೆ ತಾಯಿಯ ಮೂಲಕ ಮಗುವನ್ನು ಪಡೆದುಕೊಂಡ ಸುದ್ದಿಯನ್ನು ನೀವು ಓದಿರಬಹುದು. ಅಮೆರಿಕ ಹಾಗೂ ಲಂಡನ್‌ನಲ್ಲಿ ಭಾರತದ ಬಾಡಿಗೆ ತಾಯಂದಿರಿಗೆ ಭಾರೀ ಡಿಮಾಂಡ್ ಬಂದಿದೆ.

ಅಮೆರಿಕದಲ್ಲಿ ಬಾಡಿಗೆ ತಾಯಿಯಾಗಲು ಸುಮಾರು ೪೦ ಲಕ್ಷ ರುಪಾಯಿ ಖರ್ಚು ತಗುಲಿದರೆ, ಭಾರತದಲ್ಲಿ ೧೫ ಲಕ್ಷ ರುಪಾಯಿ ಮಾತ್ರ ಸಾಕು. ಭಾರತದ ಬಾಡಿಗೆ ತಾಯಿಗೆ ಸುಮಾರು ೩.೫ ಲಕ್ಷ ರುಪಾಯಿ ಶುಲ್ಕ ದೊರೆತರೆ ಉಳಿದ ೧೨-೧೩ ಲಕ್ಷ ರುಪಾಯಿ ಆಸ್ಪತ್ರೆ ಹಾಗೂ ವೈದ್ಯರ ಕಿಸೆ ಸೇರುತ್ತದೆ. ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ಬಾಡಿಗೆ ತಾಯಿ ಬಿಸಿನೆಸ್ ಏರತೊಡಗಿದೆ. ಈ ಬಿಸಿನೆಸ್, ಸುಮಾರು ೨೫೦೦ ಕೋಟಿ ರುಪಾಯಿಯಷ್ಟು ಭಾರೀ ಮಾರುಕಟ್ಟೆಯಾಗಿ ಬೆಳೆಯುವ ಸಾಧ್ಯತೆ ಇದೆಯಂತೆ.

ಬಾಡಿಗೆ ಮಾತಾಕೀ ಜೈ!

Sunday, November 16, 2008

ವೇಸ್ಟ್ ಪೇಪರ್ ! - ಅಮೆರಿಕಾದಲ್ಲಿ ಪತ್ರಿಕೆಗಳ ಅವಸಾನ


ಭಾಗ-1

ಅಮೆರಿಕದ ವೃತ್ತಪತ್ರಿಕೆಗಳನ್ನು ಈಗ Dying Media‘ಸಾಯುತ್ತಿರುವ ಮಾಧ್ಯಮ’ ಎಂದೇ ಬಣ್ಣಿಸಲಾಗುತ್ತಿದೆ. ಯಾಕೆಂದರೆ, ಅಮೆರಿಕ ಪತ್ರಿಕೆಗಳ ಓದುಗರ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ. ಪತ್ರಿಕಾ ಸಂಸ್ಥೆಗಳು ದಿನದಿಂದ ದಿನಕ್ಕೆ ಸೊರಗುತ್ತಿವೆ.

ಕ್ರಿಸ್ತ ಶಕ ೨೦೪೩

ಅಂದರೆ, ಇನ್ನು ಸುಮಾರು ೩೫ ವರ್ಷಗಳ ಮುಂದೆ ಒಂದು ದಿನ ಮುಂಜಾನೆ... ಆತ ದೊಡ್ಡದಾಗಿ ಬಾಯಿ ತೆರೆದು, ಆಕಳಿಸಿ, ಕೈಯಲ್ಲಿದ್ದ ಪತ್ರಿಕೆಯನ್ನು ಮುದ್ದೆ ಮಾಡಿ ಬದಿಗೆ ಎಸೆಯುತ್ತಾನೆ. ಅದು ಅಮೆರಿಕ ಪತ್ರಿಕೆಗಳ ಕಟ್ಟ ಕಡೆಯ ದಿನ. ಅದು ಅಮೆರಿಕ ಪತ್ರಿಕೆಗಳ ಕಟ್ಟ ಕಡೆಯ ಸಂಚಿಕೆ ಹಾಗೂ ಆತನೇ ಆ ಪತ್ರಿಕೆಯ ಕಟ್ಟ ಕಡೆಯ ಓದುಗ! ಅಲ್ಲಿಗೆ ಅಮೆರಿಕದ ಎಲ್ಲ ಪ್ರಮುಖ ಪತ್ರಿಕೆಗಳ ಕಥೆಯೂ ಮುಗಿಯುತ್ತದೆ. ದಿ ನ್ಯೂಯಾರ್ಕ್ ಟೈಮ್ಸ್, ವಾಲ್‌ಸ್ಟ್ರೀಟ್ ಜರ್ನಲ್, ದಿ ವಾಷಿಂಗ್‌ಟನ್ ಪೋಸ್ಟ್, ಷಿಕಾಗೋ ಟ್ರಿಬ್ಯೂನ್, ಲಾಸ್ ಎಂಜಲೀಸ್ ಟೈಮ್ಸ್.. ಹೀಗೆ ಎಲ್ಲ ಪತ್ರಿಕೆಗಳೂ ಇತಿಹಾಸದ ಕಸದ ಬುಟ್ಟಿ ಸೇರುತ್ತವೆ.

ಫಿಲಿಪ್ ಮೇಯರ್ ಎಂಬ ಪತ್ರಿಕಾ-ಉದ್ಯಮ ತಜ್ಞ ‘ದಿ ವ್ಯಾನಿಷಿಂಗ್ ನ್ಯೂಸ್ ಪೇಪರ್ಸ್’ ಎಂಬ ಕೃತಿಯಲ್ಲಿ ಹೇಳಿರುವ ಭವಿಷ್ಯ ಇದು.

ಕಳೆದ ತಿಂಗಳು ನಾನು ಅಮೆರಿಕಕ್ಕೆ ಹೋದಾಗ ಆತನ ಭವಿಷ್ಯ ನಿಜವಾಗುತ್ತಿರುವುದನ್ನು ಕಣ್ಣಾರೆ ಕಂಡೆ. ಪತ್ರಿಕಾ ಮಾಲೀಕರು, ಗಾಬರಿಗೊಂಡಿರುವುದನ್ನು ನೋಡಿದೆ. ಅವರು, ಉಳಿವಿಗಾಗಿ ಹುಲ್ಲುಕಡ್ಡಿಯ ಆಸರೆ ಹುಡುಕುತ್ತಿರುವುದನ್ನು ಗಮನಿಸಿದೆ.

ಅಮೆರಿಕದ ವೃತ್ತಪತ್ರಿಕೆಗಳನ್ನು ಈಗ Dying Media‘ಸಾಯುತ್ತಿರುವ ಮಾಧ್ಯಮ’ ಎಂದೇ ಬಣ್ಣಿಸಲಾಗುತ್ತಿದೆ. ಯಾಕೆಂದರೆ, ಅಮೆರಿಕ ಪತ್ರಿಕೆಗಳ ಓದುಗರ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ. ಪತ್ರಿಕಾ ಸಂಸ್ಥೆಗಳು ದಿನದಿಂದ ದಿನಕ್ಕೆ ಸೊರಗುತ್ತಿವೆ.

ಯಾಕೆ?

ಅಮೆರಿಕದಂಥ ಅತ್ಯಂತ ಸಾಕ್ಷರರ ದೇಶದಲ್ಲಿ ಪತ್ರಿಕೆಗಳು ಯಾಕೆ ಸಾಯುತ್ತಿವೆ?

ಇಂಟರ್ನೆಟ್ ಈಸ್ ದ ಕಿಲ್ಲರ್! ಇಂಟರ್ನೆಟ್ ಎಂಬ ‘ಹೊಸ ಮಾಧ್ಯಮ’ಕ್ಕೆ ಜಗತ್ತಿನ ಅತ್ಯಂತ ಪುರಾತನ ಸಮೂಹ ಮಾಧ್ಯಮ ‘ಪತ್ರಿಕೆ’ ಬಲಿಯಾಗುತ್ತಿದೆ. ಅಮೆರಿಕ, ಪಶ್ಚಿಮ ಯೂರೋಪ್, ಆಸ್ಟ್ರೇಲಿಯಾ ಮುಂತಾದ ದೇಶಗಳಲ್ಲಿ, ೩-೪ ದಶಕಗಳಿಂದ ಪತ್ರಿಕೆಗಳ ಸಂಖ್ಯೆ ಸ್ವಲ್ಪ ಸ್ವಲ್ಪವಾಗಿ ಇಳಿಮುಖವಾಗಿತ್ತು. ಅದಕ್ಕೆ ಟೀವಿಯ ಪ್ರಭಾವ ಕಾರಣವಾಗಿತ್ತು. ಆದರೆ, ಈಗ ಇಂಟರ್ನೆಟ್‌ನ ಪ್ರಹಾರ ಎಷ್ಟು ತೀವ್ರವಾಗಿದೆ ಎಂದರೆ ಅಮೆರಿಕದ ಪತ್ರಿಕೆಗಳ ಪ್ರಸಾರ ಹಾಗೂ ಜಾಹೀರಾತು ಆದಾಯ ಪ್ರಪಾತಕ್ಕೆ ಬೀಳುತ್ತಿದೆ.

ಸುಮಾರು ೧೦-೧೫ ವರ್‍ಷಗಳ ಹಿಂದೆ ಪತ್ರಿಕೆಗಳು ತಮ್ಮ ಮುಖ್ಯವಾಹಿನಿಗೆ ಪೂರಕವಾಗಿ ‘ಸೈಡ್ ಬಿಸಿನೆಸ್’ ಎಂದು ಅಂತರ್ಜಾಲ ಆವೃತ್ತಿಯನ್ನು ಆರಂಭಿಸಿದವು. ಆದರೆ, ಈ ಸೈಡ್ ಬಿಸಿನೆಸ್ಸೇ ತನಗೆ ಸುಸೈಡಲ್ ಆಗುತ್ತದೆ ಎಂದು ಆಗ ಪತ್ರಿಕೆಗಳು ಅಂದುಕೊಂಡಿರಲಿಲ್ಲ.

ಇಂದು ಅಮೆರಿಕದ ಯುವಕರಲ್ಲಿ ಪತ್ರಿಕೆಗಳನ್ನು ಓದುವ ಹವ್ಯಾಸವೇ ಕಡಿಮೆಯಾಗುತ್ತಿದೆ. ಸಾಲದು ಎಂಬಂತೆ, ಕಚೇರಿಗೆ ಹೋಗುವವರೂ ಅಂತರ್ಜಾಲದಲ್ಲಿ ‘ಬ್ರೇಕಿಂಗ್ ನ್ಯೂಸ್’ ಓದಲು ಕಲಿತಿದ್ದಾರೆ. ಅದರಲ್ಲೂ, ಅಂತರ್ಜಾಲದಲ್ಲಿ ಪುಕ್ಕಟೆಯಾಗಿ ಹಲವಾರು ಪತ್ರಿಕೆಗಳನ್ನು ಓದಬಹುದು. ‘ಗೂಗಲ್ ನ್ಯೂಸ್’ ಎಂಬ ಅಂತರ್ಜಾಲ ಸುದ್ದಿ ಸರ್ಚ್ ಎಂಜಿನ್ ಬಂದಮೇಲಂತೂ ತಮಗೆ ಆಸಕ್ತಿ ಇರುವ ಸುದ್ದಿಗಳನ್ನು ಮಾತ್ರ ಜಗತ್ತಿನ ಎಲ್ಲ ಪತ್ರಿಕೆಗಳಿಂದ ಆರಿಸಿ ಓದಲು ಬಹಳ ಅನುಕೂಲವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಅಂತರ್ಜಾಲ ಸುದ್ದಿ ಮಾಧ್ಯಮ ಮುದ್ರಣ ಮಾಧ್ಯಮಕ್ಕಿಂತ ಹೆಚ್ಚು ಇಂಟರ್ಯಾಕ್ಟಿವ್ ಆಗಿದೆ. ಸುದ್ದಿಗಳಿಗೆ ತಾವೂ ತಕ್ಷಣ ಪ್ರತಿಕ್ರಿಯೆ ನೀಡಲು, ಪರಸ್ಪರ ವಿಚಾರ ವಿನಿಮಯ ಮಾಡಲು, ಆಸಕ್ತಿದಾಯಕ ವಿಷಯಗಳನ್ನು ತಮ್ಮ ಮಿತ್ರರಿಗೆ ತಕ್ಷಣ ಕಳಿಸಲು, ಬ್ಲಾಗುಗಳ ಮೂಲಕ ತಮ್ಮದೇ ಸಂಪಾದಕೀಯ ಬರೆಯಲೂ ಅಂತರ್ಜಾಲ ಪತ್ರಿಕೆಗಳು ಅನುವು ಮಾಡುತ್ತವೆ. ಹಾಗಾಗಿ, ಮುದ್ರಿತ ಪತ್ರಿಕೆಗಳಿಂದ ಓದುಗರು ದೂರವಾಗಿ ಇಂಟರ್ನೆಟ್ ಪತ್ರಿಕೆಗಳಿಗೆ ಮೊರೆ ಹೋಗುತ್ತಿದ್ದಾರೆ.ಇನ್ನೊಂದೆಡೆ, ಜಾಹೀರಾತುದಾರರಿಗೆ ಅಂತರ್ಜಾಲ ಸೋವಿ ಮಾರ್‍ಗವಾಗಿದೆ. ಕಡಿಮೆ ಖರ್ಚಿನಲ್ಲಿ ಗ್ರಾಹಕರನ್ನು ತಲುಪಲು ಅಂತರ್ಜಾಲ ಸಹಾಯ ಮಾಡುತ್ತದೆ. ಸಿನಿಮಾ, ರಾಕ್ ಷೋ, ಮ್ಯೂಸಿಕ್ ಸೀಡಿಯಂಥ ಮನರಂಜನಾ ಕ್ಷೇತ್ರದ ಜಾಹೀರಾತುಗಳು ನೇರವಾಗಿ ಇಂಟರ್ನೆಟ್ ಹಾಗೂ ಟೀವಿಯತ್ತ ಹರಿದುಹೋಗಿವೆ. ಅದರಲ್ಲೂ ವರ್ಗೀಕೃತ ಜಾಹೀರಾತುಗಳಂತೂ ಶೇ.೯೦ರಷ್ಟು ebay.comನಂಥ ಇಂಟರ್ನೆಟ್ ಪೋರ್ಟಲ್‌ಗಳಿಗೆ ರವಾನೆಯಾಗಿವೆ.

ಕೆಲವೇ ವರ್ಷಗಳ ಹಿಂದೆ, ‘ಮಾಧ್ಯಮ ದೊರೆ’ ರೂಪರ್ಟ್ ಮರ್ಡೋಕ್ ಹೇಳಿದ್ದ : ‘ವರ್ಗೀಕೃತ ಜಾಹೀರಾತುಗಳೆಂದರೆ ಪತ್ರಿಕೆಗಳಿಗೆ ಹರಿದುಬರುವ ಬಂಗಾರದ ನದಿ’ ಎಂದು. ಈಗ ಆತ ಹೇಳುತ್ತಾನೆ : ‘ಕೆಲವು ಬಾರಿ ನದಿಗಳು ಬತ್ತಿಹೋಗುತ್ತವೆ’ ಎಂದು!

೭೦೦೦ ಪತ್ರಕರ್ತರ ವಜಾ

ಒಂದೆಡೆ ಪ್ರಸಾರ ಸಂಖ್ಯೆ ಇಳಿಯುತ್ತಿದ್ದರೆ ಇನ್ನೊಂದೆಡೆ ಜಾಹೀರಾತು ಆದಾಯವೂ ಕಡಿಮೆಯಾಗುತ್ತಿದೆ. ಮತ್ತೊಂದೆಡೆ ವೆಚ್ಚಗಳು ಅಧಿಕವಾಗುತ್ತಿವೆ. ಸಾಲದ್ದಕ್ಕೆ ಈಗಿನ ಆರ್ಥಿಕ ಹಿಂಜರಿತ ಬೇರೆ! ಈ ಹೊಡೆತ ತಾಳಲಾರದೇ ಅಮೆರಿಕದ ಪತ್ರಿಕೆಗಳು ತಮ್ಮ ಉತ್ಪಾದನಾ ವೆಚ್ಚ ಕಡಿತ ಮಾಡಲು ಆರಂಭಿಸಿವೆ. ಅಮೆರಿಕ ಪತ್ರಿಕೆಯಲ್ಲಿ ಸಾಮಾನ್ಯವಾಗಿ ಅಗತ್ಯಕ್ಕಿಂತ ಹೆಚ್ಚು ಸಿಬ್ಬಂದಿ ಹಾಗೂ ಪತ್ರಕರ್ತರು ಇರುವುದು ವಾಡಿಕೆ. ಹಾಗಾಗಿ, ವೆಚ್ಚ ಕಡಿತದ ಮೊದಲ ಪರಿಣಾಮ ಆಗಿರುವುದು ಪತ್ರಕರ್ತರ ಮೇಲೆ. ಕೇವಲ ಕಳೆದ ೩ ತಿಂಗಳಲ್ಲಿ ಅಮೆರಿಕದಲ್ಲಿ ೭೦೦೦ ಪತ್ರಕರ್ತರು ಕೆಲಸ ಕಳೆದುಕೊಂಡಿದ್ದಾರೆ. ಕೆಲಸ ಕಳೆದುಕೊಂಡ ಇತರ ಸಿಬ್ಬಂದಿಗಳ ಸಂಖ್ಯೆ ದುಪ್ಪಟ್ಟು.

ವಾಷಿಂಗ್‌ಟನ್ ಪೋಸ್ಟ್ ಪತ್ರಿಕೆ ಮೊದಲು ವಿಶ್ವದ ಅನೇಕ ದೇಶಗಳಲ್ಲಿ ತನ್ನ ವಿಶೇಷ ಬಾತ್ಮೀದಾರರನ್ನು ಹೊಂದಿತ್ತು. ಇಂದು ಅವರನ್ನೆಲ್ಲ ವಜಾ ಮಾಡಿ ಆ ಸ್ಥಾನದಲ್ಲಿ ಅಗ್ಗದ ವೇತನಕ್ಕೆ ದೊರಕುವ ಬಿಡಿ ಸುದ್ದಿಗಾರರನ್ನು ನೇಮಕ ಮಾಡಿದೆ. ಇದು ಅನಿವಾರ್ಯ ಎನ್ನುತ್ತಾರೆ ಪತ್ರಿಕೆಯ ಮ್ಯಾನೇಜಿಂಗ್ ಎಡಿಟರ್ ಫಿಲಿಫ್ ಬೆನೆಟ್.

ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಮಾಲೀಕ ಆರ್ಥರ್ ಸಲ್ಸ್‌ಬರ್ಗರ್ (ಜ್ಯೂನಿಯರ್) ಅವರ ಅಭಿಪ್ರಾಯವೂ ಭಿನ್ನವಾಗಿಲ್ಲ. ‘ಈಗ ಓದುಗರೆಲ್ಲ ಇಂಟರ್ನೆಟ್‌ನತ್ತ ವಾಲಿದ್ದಾರೆ. ಹಾಗಾಗಿ ಅವರಿರುವತ್ತಲೇ ನಾವೂ ಸಾಗಬೇಕಾಗಿದೆ. ಈ ಕಾರಣಕ್ಕೆ ನಾವು ನಮ್ಮ ಮುದ್ರಣ ಆವೃತ್ತಿಯಲ್ಲಿ ಹಣ ಹೂಡಿಕೆ ಕಡಿಮೆ ಮಾಡಿ ಅಂತರ್ಜಾಲ ಆವೃತ್ತಿಗೆ ಸಾಕಷ್ಟು ಬಂಡವಾಳ ಹೂಡುತ್ತಿದ್ದೇವೆ. ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಬದುಕಬೇಕೆಂದರೆ ಈಗ ನಮಗದೊಂದೇ ದಾರಿ’ ಎನ್ನುತ್ತಾರೆ ಅವರು.

ಭಯಂಕರ ಮಡಿವಂತಿಕೆ

ಭಾರತದಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕಾ ಸಮೂಹದಂತೆ ೩-೪ ರಾಷ್ಟ್ರೀಯ ಪತ್ರಿಕೆಗಳಿವೆ. ಆದರೆ, ಅಮೆರಿಕದಲ್ಲಿ ರಾಷ್ಟ್ರೀಯ ಪತ್ರಿಕೆಗಳಿಲ್ಲ. ನ್ಯೂಯಾರ್ಕ್ ಟೈಮ್ಸ್ ನ್ಯೂಯಾರ್ಕಿನ ಪತ್ರಿಕೆಯಾದರೆ, ವಾಷಿಂಗ್‌ಟನ್ ಪೋಸ್ಟ್ ವಾಷಿಂಗ್‌ಟನ್ ಡಿ.ಸಿ.ಯ ಪತ್ರಿಕೆ. ‘ಷಿಕಾಗೋ ಟ್ರಿಬ್ಯೂನ್’ ಷಿಕಾಗೋಗೂ, ‘ಲಾಸ್‌ಎಂಜಲೀಸ್ ಟೈಮ್ಸ್’ ಲಾಸ್ ಎಂಜಲೀಸ್‌ಗೂ ಸೀಮಿತ. ಸ್ಯಾನ್‌ಫ್ರಾನ್ಸಿಸ್ಕೋಗೆ ‘ಸ್ಯಾಕ್ರಮೆಂಟೋ ಬೀ’ ಹಾಗೂ ವಿಸ್ಕಾನ್‌ಸಿನ್‌ಗೆ ‘ಮಿಲ್‌ವಾಕೀ ಜರ್ನಲ್’ ಎಂಬ ಪತ್ರಿಕೆಗಳಿವೆ. ಹೀಗೆ, ಒಂದೊಂದು ರಾಜ್ಯದಲ್ಲಿ ಒಂದೊಂದು ಪತ್ರಿಕೆಯ ಸಾಮ್ರಾಜ್ಯವಿದೆ.

ಇದ್ದುದರಲ್ಲಿ ನ್ಯೂಯಾರ್ಕ್ ಟೈಮ್ಸ್ ಹಾಗೂ ವಾಲ್‌ಸ್ಟ್ರೀಟ್ ಜರ್ನಲ್ ಪತ್ರಿಕೆಗಳು ನ್ಯೂಯಾರ್ಕ್ ಹೊರತುಪಡಿಸಿ ಅಮೆರಿಕದ ಇನ್ನೂ ಕೆಲವು ನಗರಗಳಲ್ಲಿ ದೊರೆಯುತ್ತದೆ.

ಯುಎಸ್‌ಎ ಟುಡೇ ಎಂಬ ಇನ್ನೊಂದು ಪತ್ರಿಕೆಯಿದೆ. ಇದು ಅಮೆರಿಕದ ಬಹುತೇಕ ನಗರಗಳಲ್ಲಿ ಮಾತ್ರವಲ್ಲ ಬೇರೆ ಬೇರೆ ದೇಶಗಳಲ್ಲೂ ಲಭ್ಯ. ಹಾಗೆ ನೋಡಿದರೆ, ಇದೊಂದೇ ಅಮೆರಿಕದ ರಾಷ್ಟ್ರೀಯ ಪತ್ರಿಕೆ. ಯುಎಸ್‌ಎ ಟುಡೇ ತನ್ನನ್ನು ಅಮೆರಿಕದ ಏಕೈಕ ರಾಷ್ಟ್ರೀಯ ಪತ್ರಿಕೆ ಎಂದೇ ಕರೆದುಕೊಳ್ಳುತ್ತದೆ. ಆದರೆ, ಪತ್ರಿಕೋದ್ಯಮದಲ್ಲಿ ಇದನ್ನು ಯಾರೂ ಗಂಭೀರ ಪತ್ರಿಕೆ ಎಂದು ಹೇಳುವುದೇ ಇಲ್ಲ. ಅಮೆರಿಕದ ಸಾರ್ವಜನಿಕ ಲೈಬ್ರರಿಗಳಲ್ಲಿ ಅಲ್ಲಿನ ಪತ್ರಿಕೆಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿಡಲಾಗುತ್ತದೆ. ಆದರೆ, ಯುಎಸ್‌ಎ ಟುಡೇ ಪತ್ರಿಕೆಯನ್ನು ಹಾಗೆ ಸಂಗ್ರಹಿಸುವುದು ಹಾಗಿರಲಿ ಲೈಬ್ರರಿಗೆ ತರಿಸುವುದೂ ಇಲ್ಲ.

ಇದಕ್ಕೆ ಅಮೆರಿಕ ಪತ್ರಿಕೋದ್ಯಮದ ತೀರಾ ಮಡಿವಂತಿಕೆಯೇ ಕಾರಣ. ಅಮೆರಿಕದ ಟೀವಿ ಸುದ್ದಿ ವಾಹಿನಿಗಳು ಮಡಿವಂತಿಕೆ ಬಿಟ್ಟರೂ ಅಮೆರಿಕದ ಮುಖ್ಯ ಪತ್ರಿಕೆಗಳು ಪತ್ರಿಕೋದ್ಯಮದ ‘ಬ್ರಾಹ್ಮಣ್ಯ’ವನ್ನು ಇನ್ನೂ ಪಾಲಿಸುತ್ತಿವೆ. ಅದೆಷ್ಟು ಸಂಪ್ರದಾಯವೆಂದರೆ, ಜಗತ್ಪ್ರಸಿದ್ಧ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಮುಖಪುಟ ಇಂದೂ ಸಹ ೧೮೭೮ನೇ ಇಸವಿಯ ಪತ್ರಿಕೆಯಂತೆ ಕಾಣುತ್ತದೆ. ಇಂದಿನ ಆರ್ಥಿಕ ಸಂಕಷ್ಟದಲ್ಲೂ ಈ ಪತ್ರಿಕೆಗಳು ತಮ್ಮ ಮುಖಪುಟದಲ್ಲಿ ದೊಡ್ಡ ಜಾಹೀರಾತು ಪ್ರಕಟಿಸುವುದಿಲ್ಲ. ಪುಟದ ಅಡಿಯಲ್ಲಿ ೩ ಸೆಂ.ಮೀ. ಎತ್ತರದ ಜಾಹೀರಾತು ಮಾತ್ರ ಪ್ರಕಟಿಸುತ್ತವೆ.

ಅಮೆರಿಕದ ಪತ್ರಿಕೆಗಳಲ್ಲಿ ಮೇಧಾವಿಗಳು, ವೃತ್ತಿಪರರೂ ಇದ್ದಾರೆ. ಆದರೆ, ಅವರೆಲ್ಲ ಇನ್ನೂ ಹಳೆಯ ಮಡಿವಂತ ಪತ್ರಿಕೋದ್ಯಮಕ್ಕೇ ಅಂಟಿಕೊಂಡಿರುವುದು ಸ್ಪಷ್ಟವಾಗಿ ಕಾಣುತ್ತದೆ.

ಅಮೆರಿಕ ಅಂದರೆ ಲ್ಯಾಂಡ್ ಆಫ್ ಗ್ರಾಫಿಕ್ಸ್. ಡೈನಾಸರ್, ಗಾಡ್‌ಝಿಲಾಗಳನ್ನು ಸೃಷ್ಟಿಸಿದ ನೆಲ ಇದು. ಅಮೆರಿಕದ ಟೀವಿ ಮಾಧ್ಯಮದಲ್ಲೂ, ಹಾಲಿವುಡ್ ಸಿನಿಮಾಗಳಲ್ಲೂ ಗ್ರಾಫಿಕ್ ವಿಜೃಂಭಿಸುತ್ತದೆ. ಭಾರತದ ‘ದಿ ಹಿಂದೂ’ವಿನಂಥ ಮಂಡಿವಂತ ಪತ್ರಿಕೆಗಳೂ ಅಮೆರಿಕದಿಂದ ವಿಶ್ವವಿಖ್ಯಾತ ಪತ್ರಿಕಾ ವಿನ್ಯಾಸಕಾರ ಮಾರಿಯೋ ಗಾರ್ಸಿಯಾನನ್ನು ಕರೆತಂದು ಕೋಟಿಗಟ್ಟಲೆ ರುಪಾಯಿ ಖರ್ಚು ಮಾಡಿ ಪತ್ರಿಕೆಗೆ ಆಧುನಿಕ ರೂಪ ನೀಡುತ್ತವೆ. ಆದರೆ, ಅಮೆರಿಕದ ಪ್ರಮುಖ ಪತ್ರಿಕೆಗಳು ತಮ್ಮ ಪತ್ರಿಕೆಗಳನ್ನು ಇನ್ನೂ ಹಳೆಯ ಶೈಲಿಯಲ್ಲೇ ಹೊರತರುತ್ತಿವೆ. ಬಹುಶಃ ಅದಕ್ಕೇ ಹೊಸ ಜನಾಂಗಕ್ಕೆ ಸಾಂಪ್ರದಾಯಿಕ ಪತ್ರಿಕೆಗಳು ರುಚಿಸುತ್ತಿಲ್ಲ. ಪರಿಣಾಮವಾಗಿ ಅವರು ಪತ್ರಿಕೆಗಳನ್ನು ಬಿಟ್ಟು ಅಂತರ್ಜಾಲಕ್ಕೆ ಮೊರೆಹೋಗಿದ್ದಾರೆ.

ಸ್ಪಾನಿಷ್, ಚೈನೀಸ್ ಏರಿಕೆ

ಇನ್ನೊಂದು ಗಮನೀಯ ಅಂಶ ಎಂದರೆ, ಅಮೆರಿಕದಲ್ಲಿ ಇಂಗ್ಲಿಷ್ ಪತ್ರಿಕೆಗಳು ಅವಸಾನಗೊಳ್ಳುತ್ತಿದ್ದರೂ, ಸ್ಪಾನಿಷ್ ಹಾಗೂ ಚೈನೀಸ್ ಭಾಷೆಯ ಪತ್ರಿಕೆಗಳ ಪ್ರಸಾರ ಸಂಖ್ಯೆ ಗಣನೀಯವಾಗಿ ಏರುತ್ತಿದೆ. ಬಡಾವಣೆಗಳಿಗೆ ಸೀಮಿತವಾದ ಸಣ್ಣ ‘ನೈಬರ್‌ಹುಡ್’ ಪತ್ರಿಕೆಗಳನ್ನು ಜನರು ಓದುತ್ತಿದ್ದಾರೆ. ಜಾಹೀರಾತುಗಳನ್ನೇ ನಂಬಿರುವ ಟ್ಯಾಬ್ಲಾಯ್ಡ್ ಗಾತ್ರದ ‘ಉಚಿತ’ ಪತ್ರಿಕೆಗಳು ಲಾಭದಲ್ಲಿ ನಡೆಯುತ್ತಿವೆ. ಸಂಕಷ್ಟದಲ್ಲಿರುವುದು ದೊಡ್ಡ ಪತ್ರಿಕೆಗಳು ಮಾತ್ರ. ಅವುಗಳಿಗೆ ಮುಂದಿನ ದಾರಿ ಹೇಗೋ ಗೊತ್ತಿಲ್ಲ.

ಉದಾರ ದೇಣಿಗೆ ಕೊಡಿ

ಒಂದು ಕಾಲದಲ್ಲಿ ಅಮೆರಿಕದ ಪತ್ರಿಕೋದ್ಯಮ ಎಷ್ಟು ಬಲಿಷ್ಠವಾಗಿತ್ತು ಎಂದರೆ, ವಾಷಿಂಗ್‌ಟನ್ ಪೋಸ್ಟ್ ಪತ್ರಿಕೆಯ ಇಬ್ಬರು ವರದಿಗಾರರು ಬಯಲುಗೊಳಿಸಿದ ವಾಟರ್‌ಗೇಟ್ ಹಗರಣದಿಂದ ಅಮೆರಿಕದ ಅಧ್ಯಕ್ಷ ರಿಚರ್ಡ್ ನಿಕ್ಸನ್ ರಾಜೀನಾಮೆ ನೀಡಬೇಕಾಯಿತು. ಆದರೆ, ಇಂದು ಅದೇ ವಾಷಿಂಗ್‌ಟನ್ ಪೋಸ್ಟ್ ಪತ್ರಿಕೆ ತನಿಖಾ ಪತ್ರಿಕೋದ್ಯಮಕ್ಕೆ ವ್ಯಯಮಾಡುತ್ತಿದ್ದ ಹಣದ ಮೇಲೆ ಕಡಿವಾಣ ಹಾಕಿದೆ. ಒಂದು ತಿಂಗಳಲ್ಲಿ ನೂರಕ್ಕಿಂತ ಹೆಚ್ಚು ಪತ್ರಕರ್ತರನ್ನು ತೆಗೆದುಹಾಕಿ ವೆಚ್ಚ ಕಡಿಮೆಮಾಡುವ ಹಂತದಲ್ಲಿದೆ. ಈ ಪತ್ರಿಕೆಯ ಭವಿಷ್ಯವೂ ಡೋಲಾಯಮಾನವಾಗಿದೆ. ಹಾಗಾದರೆ, ಇಂಥ ಪತ್ರಿಕೆಗಳು ಸತ್ತರೆ ಮುಂದೆ ತನಿಖಾ ಪತ್ರಿಕೋದ್ಯಮದ ಗತಿ ಏನಾಗುತ್ತದೆ?

ಜನರ ಉದಾರ ದೇಣಿಗೆಯಿಂದ ನಡೆಯುವ ಪತ್ರಿಕೆಗಳು ಹಾಗೂ ಬ್ಲಾಗುಗಳು ತನಿಖಾ ಪತ್ರಿಕೋದ್ಯಮವನ್ನು ಮುಂದುವರಿಸಬಹುದು. ನ್ಯಾಶನಲ್ ಪಬ್ಲಿಕ್ ರೇಡಿಯೋ ರೀತಿಯಲ್ಲಿ ಅಮೆರಿಕದಲ್ಲಿ, ಜನರ ದೇಣಿಗೆಯಿಂದಲೇ ನಡೆಯುವ ಅನೇಕ ಮಾಧ್ಯಮಗಳಿವೆ. ಮುಂದೊಂದು ದಿನ ಇಂಥ ಮಾಧ್ಯಮಗಳ ಸಾಲಿಗೆ ತನಿಖಾ ಪತ್ರಿಕೆಗಳೂ ಸೇರಬಹುದು ಎನ್ನುತ್ತಾರೆ ಅಮೆರಿಕದ ‘ಪ್ರಾಜೆಕ್ಟ್ ಫಾರ್ ಎಕ್ಸ್‌ಲೆನ್ಸ್ ಇನ್ ಜರ್‍ನಲಿಸಂ’ ಸಂಸ್ಥೆಯ ನಿರ್ದೇಶಕರಾದ ಟಾಮ್ ರೊಸೆಂಥಲ್.

ಯೂರೋಪ್‌ನ ಪತ್ರಿಕೆಗಳು ಸಾವಿನಿಂದ ಬಚಾವಾಗಲು ತಮ್ಮ ಸ್ವರೂಪದ ಜೊತೆ ಸುದ್ದಿಯ ವ್ಯಾಖ್ಯಾನವನ್ನು ಬದಲಿಸಿಕೊಂಡಿವೆ. ಅದರಲ್ಲೂ ಜರ್ಮನಿಯ ‘ಬಿಲ್ಡ್’ ಪತ್ರಿಕೆಯಂತೂ (ಸದ್ಯ ಜಗತ್ತಿನ ೭ನೇ ಅತಿ ಹೆಚ್ಚು ಪ್ರಸಾರ ಹೊಂದಿರುವ ಪತ್ರಿಕೆ) ಮುಖಪುಟದಲ್ಲೂ ಸಂಪೂರ್‍ಣ ನಗ್ನ ರೂಪದರ್ಶಿಯ ಚಿತ್ರ ಪ್ರಕಟಿಸಿ ಯುವಕರನ್ನು ಆಕರ್ಷಿಸಲು ಆರಂಭಿಸಿದೆ!

ಇದನ್ನೆಲ್ಲಾ ಗಮನಿಸಿದ ಮೇಲೆ, ‘ಸ್ಯಾಕ್ರಮೆಂಟೋ ಬೀ’ ಪತ್ರಿಕೆಯ ಡೆಪ್ಯೂಟಿ ಮ್ಯಾನೆಜಿಂಗ್ ಎಡಿಟರ್ ಮಾರ್ಟ್‌ರ್ ಸಾಲ್ಟ್ಸ್‌ಮನ್ ಅವರಿಗೆ ಹೇಳಿದೆ: ‘ಬಿಲ್ಡ್ ಪತ್ರಿಕೆಯಂಥ ಗಿಮಿಕ್‌ಗಳು ತೀರಾ ಅಸಹ್ಯಕರ, ನಿಜ. ಆದರೆ, ನಿಮ್ಮಂಥ ಮುಖ್ಯವಾಹಿನಿ ಪತ್ರಿಕೆಗಳು ಈಗ ಸಾವಿನಿಂದ ಪಾರಾಗಲು ಏನಾದರೂ ಮಾಡಲೇ ಬೇಕಲ್ಲ. ಅದಕ್ಕೆ ನಿಮಗಿರುವುದು ಒಂದೇ ದಾರಿ... ‘ಒಬಾಮಾ ಮಂತ್ರ’. ಬದಲಾವಣೆ!
Change that we need!
Change that we believe in.
Change that we can!

ಸಾಲ್ಟ್ಸ್‌ಮನ್ ನಕ್ಕರು. ಅವರ ನಗು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಮುಖಪುಟದಷ್ಟೇ ಪೇಲವವಾಗಿತ್ತು!