Friday, May 22, 2009

ಮುಂಬಯೀ - ಟ್ಯಾಕ್ಸಿ ಪತ್ರಿಕೆ !

ವಿಮಾನಗಳಲ್ಲಿ in-flights ಮ್ಯಾಗಝಿನ್ ಇರುವುದು ಗೊತ್ತು ತಾನೆ? ಅದೇ ಥರ... ಮೊನ್ನೆ ಮಂಗಳವಾರದಿಂದ, ಮುಂಬೈ ಮಹಾಶಹರದ ಟ್ಯಾಕ್ಸಿಗಳಲ್ಲಿ in-Taxi ಮ್ಯಾಗಝಿನ್ “ಮುಂಬಯೀ” Mumbaee ಕಾಣಿಸಿಕೊಳ್ಳ ತೊಡಗಿದೆಯಂತೆ. ಇಂಥ ‘ಟ್ಯಾಕ್ಸಿ ಪತ್ರಿಕೆ’ ಭಾರತದಲ್ಲೇ ಪ್ರಥಮ. (…ಅಲ್ಲ ಜಗತ್ತಿನಲ್ಲೇ ಪ್ರಥಮ ಅಂತಲೂ ಕೆಲವರು ಹೇಳುತ್ತಾರೆ. ಗೊತ್ತಿಲ್ಲ.)

ಇಂಗ್ಲೀಷ್ ಭಾಷೆಯ ಈ ಪಾಕ್ಷಿಕ ಆರಂಭಿಸಿರುವುದು ಮುಂಬೈ ಟ್ಯಾಕ್ಸಿಮನ್ಸ್ ಯೂನಿಯನ್. ಟ್ಯಾಕ್ಸಿಯಲ್ಲಿ ಕುಳಿತ ಗಿರಾಕಿಗೆ, ಚಾಲಕ ಈ ಪತ್ರಿಕೆಯನ್ನು ಉಚಿತವಾಗಿ ಓದಲು ನೀಡುತ್ತಾನೆ ಹಾಗೂ ಗಿರಾಕಿ ಟ್ಯಾಕ್ಸಿಯಿಂದ ಇಳಿಯುವಾಗ ಪತ್ರಿಕೆಯನ್ನು ಚಾಲಕನಿಗೆ ವಾಪಸ್ ನೀಡುತ್ತಾನೆ. ಮುಂಬೈಯಲ್ಲಿ ಸುಮಾರು 65000 ಟ್ಯಾಕ್ಸಿಗಳಿವೆಯಂತೆ. ಅಲ್ಲದೇ, ಮುಂಬೈ-ಪುಣೆ, ಮುಂಬೈ-ನಾಸಿಕ್ ಮಾರ್ಗಗಳಲ್ಲೂ ಸಾವಿರಾರು ಟ್ಯಾಕ್ಸಿಗಳಿವೆ. ಅವುಗಳಲ್ಲೆಲ್ಲ ಈ ಮ್ಯಾಗಝಿನ್ ಇಡಲಾಗುತ್ತದಂತೆ.

ಮುಂಬೈನ ಟ್ಯಾಕ್ಸಿಗಳಲ್ಲಿ ವಾರಕ್ಕೆ ಏನಿಲ್ಲವೆಂದರೂ 35 ಲಕ್ಷ ಜನ ಸಂಚರಿಸುತ್ತಾರೆ. ಅವರೆಲ್ಲ ಬಹುತೇಕ ಮಧ್ಯಮ ಹಾಗೂ ಮೇಲ್ಮಧ್ಯಮ ವರ್ಗದ ವ್ಯಕ್ತಿಗಳು ಹಾಗೂ ಸಹಜವಾಗಿ, ಜಾಹೀರಾತುದಾರರ ಟಾರ್ಗೆಟ್. ಆದ್ದರಿಂದ, ಈ ಟ್ಯಾಕ್ಸಿ ಪತ್ರಿಕೆಗೆ ಜಾಹೀರಾತುದಾರರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆಯಂತೆ.

"ಮುಂದಿನ 6 ತಿಂಗಳಿಗಂತೂ ಜಾಹೀರಾತುಗಳು ಬುಕ್ ಆಗಿವೆ. ಪ್ರತಿವಾರ, 50000 ಪ್ರತಿಗಳ ಮುದ್ರಣ ವೆಚ್ಚ ಸುಮಾರು 5 ಲಕ್ಷ ರುಪಾಯಿ. ಈ ವೆಚ್ಚವನ್ನು ಜಾಹೀರಾತುಗಳಿಂದಲೇ ಭರಿಸಬೇಕಾಗುತ್ತದೆ. ಆರಂಭದಲ್ಲಿ 30000 ಪ್ರತಿಗಳನ್ನು ಟ್ಯಾಕ್ಸಿಗಳಿಗೆ ನೀಡಲಾಗಿದೆ. ಜೂನ್-ಜುಲೈ ವೇಳೆಗೆ 60000 ಪ್ರತಿಗಳನ್ನು ಟ್ಯಾಕ್ಸಿಗಳಿಗೆ ವಿತರಿಸಲಾಗುತ್ತದೆ" ಎನ್ನುತ್ತಾರೆ ಪತ್ರಿಕೆಯ ಸಂಪಾದಕ - ವಿಷ್ಣು ಕದಂ.

ಭಾರತದ ಪತ್ರಿಕೋದ್ಯಮಕ್ಕೆ ಈ ಟ್ಯಾಕ್ಸಿ ಪತ್ರಿಕೆಯ ಕಲ್ಪನೆ ಹೊಸತು. ಈ ಯತ್ನ ಯಶಸ್ವಿಯಾದರೆ, ಬೆಂಗಳೂರಿನಲ್ಲಿ ರಿಕ್ಷಾ ಪತ್ರಿಕೆ ಆರಂಭಿಸಬಹುದು.

1 comment:

Srinidhi said...

ರಿಕ್ಷಾ ಪತ್ರಿಕೆ... ಒಳ್ಳೆ ಐಡಿಯಾ! :-) ಕೆ‌ಎಸ್ಸಾರ್ಟಿಸಿ ಕೂಡ ಇಂಥದ್ದೊಂದು ಪತ್ರಿಕೆ ಪ್ರಾರಂಭಿಸಿತ್ತು ಅಲ್ವಾ?