"ರೆಡ್ ಐ ಶಿಕ್ಯಾಗೋ" ಪತ್ರಿಕೆಯ ಮುಖಪುಟ
(ಉದಯವಾಣಿ, 7 ಅಕ್ಟೋಬರ್ 2011)
ಇಂತಹ ವ್ಯಕ್ತಿಗಳು ಪದೇ ಪದೇ ಭೂಮಿಗೆ ಬರುವುದಿಲ್ಲ. ತುಂಬಾ ಅಪರೂಪಕ್ಕೆ ಬಂದರೂ ಅದೇನೋ ಅರ್ಜೆಂಟು ಎಂಬಂತೆ ಬಹಳ ಬೇಗ ಲೋಕತೊರೆದು ಹೋಗಿಬಿಡುತ್ತಾರೆ. ಅಂಥವರು ಖಾಲಿ ಬಿಟ್ಟುಹೋಗುವ ಖುರ್ಚಿಗಳು ಹಾಗೇ ಇರುತ್ತವೆ... ಎಂದೆಂದಿಗೂ ಖಾಲಿಯಾಗಿ.
ಈಗ ಸ್ಟೀವ್ ಜಾಬ್ಸ್ ಸ್ಥಾನ ತೆರವಾಗಿದೆ. ಆ ಸ್ಥಾನ ಹಾಗೇ ಖಾಲಿ ಇದೆ. ಬಹುಶಃ ಎಂದೆಂದಿಗೂ ಖಾಲಿಯೇ ಇರಲಿದೆ. ಎಷ್ಟೇ Wanted ಜಾಹೀರಾತು ಕೊಟ್ಟರೂ ಆ Job Vacancy ತುಂಬಲು ಸಾಧ್ಯವೆ ಇಲ್ಲವೇನೋ.
ಜಗತ್ತಿನಲ್ಲಿ ಇದ್ದದ್ದು ಒಬ್ಬನೇ ಸ್ಟೀವ್ಸ್ ಜಾಬ್ಸ್. ಹಾಗಂತ ಎಲ್ಲರಿಗೂ ಆತನ ಹೆಸರು ಗೊತ್ತು ಅಂತ ಹೇಳಲಿಕ್ಕಾಗದು. ಆದರೆ, ಆತ ಅಭಿವೃದ್ಧಿಪಡಿಸಿದ ಐಪಾಡ್, ಐಫೋನ್, ಐಪ್ಯಾಡ್ ಬಗ್ಗೆ ಕೇಳದವರು ಬಹಳ ವಿರಳ. ಹಾಗೆ ನೋಡಿದರೆ, ಅವು ಮೂರೇ ಅಲ್ಲ... ಆತನ ಟಾಪ್-10 ಅನ್ವೇಷಣೆಗಳು ನಮ್ಮ ಕಂಪ್ಯೂಟರ್ ಜಗತ್ತನ್ನೇ ಬದಲಾಯಿಸಿದವು. ಜನರ ‘ಸ್ಟೈಲ್ ಸ್ಟೇಟ್ಮೆಂಟ್’ಗೂ ಹೊಸ ಭಾಷ್ಯ ಬರೆದವು.
ಇವಿಷ್ಟೇ ಆಗಿದ್ದಿದ್ದರೆ, That is not a great Job ಅನ್ನಬಹುದಿತ್ತು. ಆತ ಮೇಧಾವಿ ಕಂಪ್ಯೂಟರ್ ತಜ್ಞ, ಚಾಣಾಕ್ಷ ಉದ್ಯಮಿ, ಯಶಸ್ವಿ ಬಿಸಿನೆಸ್ಮ್ಯಾನ್ ಅಷ್ಟೇ ಆಗಿರುತ್ತಿದ್ದ. ಆತ ಅದಕ್ಕಿಂತ ಹೆಚ್ಚು. ಯಾಕೆಂದರೆ...
1. ಹುಟ್ಟನ್ನು ಗೆದ್ದರೆ ಸಾಕು... ಸಾವು ಹಾಗೂ ಬದುಕನ್ನು ಗೆಲ್ಲಬಹುದು ಎಂಬುದಕ್ಕೆ ಅತ ಉದಾಹರಣೆಯಾದ. ಸ್ಟೀವ್ಸ್ ಹುಟ್ಟಿದ್ದು ಕಾಲೇಜು ಹುಡುಗಿಯೊಬ್ಬಳ ಅಕ್ರಮ ಸಂಬಂಧಕ್ಕೆ. ಆಕೆಗೆ ಆತನ ಹುಟ್ಟು ಬೇಕಿರಲಿಲ್ಲ. ಆದರೆ, ಆಕೆ ಗರ್ಭಪಾತ ಮಾಡಿಸದಿರಲು ನಿರ್ಧರಿಸಿದ್ದೇ ಈ ಲೋಕದ ಪುಣ್ಯವಾಯಿತು. ಹೆತ್ತ ಬಳಿಕ ಆಕೆ ಮಗುವನ್ನು ಯಾರಿಗೋ ದತ್ತು ನೀಡಿದಳು. ಇದೊಂದೇ ಆತನ ತಾಯಿಯ ಕೊಡುಗೆ. ಸ್ಟೀವ್ಸ್ ಜೀವನದ ಉಳಿದ ಸಾಧನೆಗಳೆಲ್ಲ ‘ಸ್ವಯಂಕೃತಾಪರಾಧ’.
2. ಉತ್ತಮ ಕಾಲೇಜು, ಸಾಫ್ಟ್ವೇರ್ನಲ್ಲಿ ಇಂಜಿನಿಯರಿಂಗ್ ಡಿಗ್ರಿ, ಬಹುರಾಷ್ಟ್ರೀಯ ಕಂಪನಿಯಲ್ಲಿ ಕೈತುಂಬಾ ಸಂಬಳ ನೀಡುವ ಜಾಬ್... ಇವೆಲ್ಲಾ ಜೀವನಕ್ಕೆ ಬೇಕಾಗಿಲ್ಲ ಎಂದು ನಿರೂಪಿಸಿದ ಈ ಜಾಬ್ಸ್. ದುಡಿದ ದುಡ್ಡನ್ನೆಲ್ಲಾ ಸುರಿದು, ಪಾಲಕರು ಇವನನ್ನು ಅತ್ಯಂತ ಉತ್ತಮ ಕಾಲೇಜಿಗೆ ಸೇರಿಸಿದರು. ಆರೇ ತಿಂಗಳಿಗೆ ಆತ ಕಾಲೇಜು ಬಿಟ್ಟ. ಅಷ್ಟೊಂದು ದುಡ್ಡು ಖರ್ಚು ಮಾಡಿ ಕಾಲೇಜು ಡಿಗ್ರಿ ಬೇಡ ಅನ್ನುವುದು ಆತನ ನಂಬಿಕೆಯಾಗಿತ್ತು. ಯಶಸ್ಸಿಗೆ ಬೇಕಾಗಿರುವುದು ಜಾಣತನ, ಆತ್ಮವಿಶ್ವಾಸ, ಕಷ್ಟಪಟ್ಟು ದುಡಿಯುವ ಪ್ರವೃತ್ತಿ, ಸೋಲಿಗೆ ಹೆದರದಿರುವ ಮನೋಭಾವ ಹಾಗೂ ಏನನ್ನಾದರೂ ಹೊಸತನ್ನು ಹುಡುಕುವ ತುಡಿತ ಹಾಗೂ ಕನಸನ್ನೂ ಸಾಕಾರಗೊಳಿಸಬಹುದೆಂಬ ಛಲ. ಇದರಿಂದಾಗಿ ಜಗತ್ತಿನ ನವಪೀಳಿಗೆಯ ಎಷ್ಟೋ ಉದ್ಯಮಶೀಲ ವ್ಯಕ್ತಿಗಳಿಗೆ ಆತ ದೇವರು ಎನಿಸಿದ. 20ನೇ ವರ್ಷಕ್ಕೆ, ಮನೆಯ ಗ್ಯಾರೇಜ್ನಲ್ಲಿ ಆ್ಯಪಲ್ ಕಂಪನಿ ಸ್ಥಾಪಿಸಿದ. ಹತ್ತೇ ವರ್ಷದಲ್ಲಿ 2 ಬಿಲಿಯನ್ ಡಾಲರ್ ಕಂಪನಿಯಾಗಿ ಬೆಳೆಸಿದ ಈ ‘ಡಿಗ್ರಿ ನಪಾಸು’ ಹುಡುಗ.
3. ಈ ಹಂತದಲ್ಲಿ ಆತ ಕ್ರಿಯಾಶೀಲ ಐಡಿಯಾಗಳಿಂದ ಹಲವಾರು ತಪ್ಪುಗಳನ್ನು ಮಾಡಿ ಆ್ಯಪಲ್ ಕಂಪನಿಯ ನಷ್ಟಕ್ಕೆ ಕಾರಣವಾದ. 30ನೇ ವರ್ಷದಲ್ಲಿ ಅವನೇ ಸ್ಥಾಪಿಸಿದ ಕಂಪನಿಯಿಂದ ಆತನನ್ನು ವಜಾ ಮಾಡಲಾಯಿತು. ಆದರೆ, ಜಾಬ್ ಹೋಯಿತೆಂದು ಸ್ಟೀವ್ ಜಾಬ್ಸ್ಗೆ ಬೇಜಾರಗಲಿಲ್ಲ. ಐದೇ ವರ್ಷದಲ್ಲಿ ಒಂದರ ಬದಲು ಎರಡು ಕಂಪನಿ ಸ್ಥಾಪಿಸಿದ. ಒಂದು ನೆಕ್ಸ್ಟ್ ಎನ್ನುವ ಕಂಪ್ಯೂಟರ್ ಕಂಪನಿ. ಇನ್ನೊಂದು ಪಿಕ್ಸಾರ್ ಎಂಬ ಕಂಪ್ಯೂಟರ್ ಅನಿಮೇಶನ್ ಕಂಪನಿ. ಆತ ನಿರ್ಮಿಸಿದ ‘ಟಾಯ್ಸ್ಟೋರಿ’ ಅನಿಮೇಶನ್ ಚಿತ್ರ ಇಡೀ ಮನರಂಜನಾ ಉದ್ಯಮದ ದಿಸೆಯನ್ನೇ ಬದಲಾಯಿಸಿತು. ನೆಕ್ಸ್ಟ್ ಕಂಪನಿ ಎಷ್ಟು ಯಶಸ್ವಿಯಾಯಿತೆಂದರೆ ಆ್ಯಪಲ್ ಕಂಪನಿಯೇ ಅದನ್ನು ಖರೀದಿಸಿತು. ಮತ್ತೆ ತನ್ನ ಆ್ಯಪಲ್ ಕಂಪನಿಗೆ ವಾಪಸಾದ. ತಪ್ಪು ತಪ್ಪಲ್ಲ. ತಪ್ಪನ್ನು ಸರಿಪಡಿಸಬಹುದು ಎಂಬುದನ್ನು ನಿರೂಪಿಸಿದ.
4. ಆತ Innovation, ಹೊಸತನಕ್ಕೆ ಹೊಸ ಭಾಷ್ಯ ಬರೆದ. ಬಳಕೆದಾರ-ಕೇಂದ್ರಿತ ಸುಧಾರಣೆಗಳಿಗೆ ಆದ್ಯತೆ ನೀಡಿದರೆ ಮಾತ್ರ ಉದ್ಯಮವೊಂದು ಉಳಿಯಬಲ್ಲುದು ಎಂದು ನಿರೂಪಿಸಿ ತೋರಿಸಿದ. ಇಡೀ ಜಗತ್ತು ಮೈಕ್ರೋಸಾಫ್ಟ್ ವಿಂಡೋಸ್, ಇಂಟೆಲ್ ಚಿಪ್, ನೋಕಿಯಾ ಫೋನ್, ಸೋನಿ ವಾಕ್ಮನ್, ಡೆಲ್ ಲ್ಯಾಪ್ಟಾಪ್ನಿಂದ ನಡೆಯುತ್ತಿರುವಾಗ ಈತ ಐಮ್ಯಾಕ್ನ ಮ್ಯಾಜಿಕ್ ಮಾಡಿದ. ಐಪಾಡ್ನಿಂದ ವಾಕ್ಮನ್ನನ್ನು ಮೂಲೆಯಲ್ಲಿ ಮಲಗಿಸಿದ. ಐಫೋನ್ನಿಂದ ನೋಕಿಯಾವನ್ನು ನೂಕಿದ. ಐಪ್ಯಾಡ್ ಟ್ಯಾಬ್ಲೆಟ್ ಮೂಲಕ ಲ್ಯಾಪ್ಟಾಪ್ನ್ನು ಡೌನ್ ಮಾಡಿದ. ಹೊಸತನ ಅಂದರೆ ಸಾಮಾನ್ಯ ಜಾಬ್ಗಳಲ್ಲ... ಅವು ಸ್ಟೀವ್ ಜಾಬ್ಸ್!
5. ಸಾವು... ಯಾರನ್ನೂ ಬಿಡಲ್ಲ. ನನಗೂ ಪ್ರತಿದಿನ ಸಾವಿನ ಭಯವಿತ್ತು. ಆದರೆ, ಅದೇ ನನಗೆ ನನ್ನ ಕನಸುಗಳನ್ನು ಬೇಗಬೇಗನೆ ಸಾಕಾರಗೊಳಿಸಲು ಸ್ಫೂರ್ತಿಯಾಯಿತು ಎಂದ ಈ ಮಹಾಶಯ. ಕಾನ್ಸರ್ ಇದೆ ಎಂದು ಗೊತ್ತಾದಾಗ, ಇನ್ನು ಬದುಕಲು ಕೆಲವೇ ತಿಂಗಳುಗಳಿವೆ ಎಂದು ಡಾಕ್ಟರ್ ಹೇಳಿದಾಗ ಸ್ಟೀವ್ ಎದೆಗುಂದಲಿಲ್ಲ. ಅಂದುಕೊಂಡಿದ್ದನ್ನು ಸಾಧಿಸಲು ಹೆಚ್ಚು ಸಮಯ ಎಲ್ಲ ಎಂದಷ್ಟೇ ಆತನಿಗೆ ಅನ್ನಿಸಿತು. ಸಾಯುವ ಮೊದಲು ಸಾಧನೆ ಮಾಡಬೇಕೆಂದರೆ ತಾನು ಕೆಲಸ ಮಾಡುವ ರೀತಿಯಲ್ಲಿ ಏನೋ ಬದಲವಣೆಯಾಗಬೇಕು, ವೇಗವಾಗಿ ಮಾಡಬೇಕು ಎಂದು ಲೆಕ್ಕ ಹಾಕಿದ ಆತ ಅದೃಷ್ಟ ವಶಾತ್ 6 ತಿಂಗಳ ಬದಲು 6 ವರ್ಷ ಬದುಕಿದ. ಬದುಕಿದ್ದಷ್ಟೂ ವರ್ಷ, ವರ್ಷಕ್ಕೊಂದರಂತೆ ಹೊಸತನ್ನು ನೀಡುತ್ತಲೇ ಇದ್ದ. ಹಾಗಾಗಿ, ಸಾವಿನ ನೆರಳಲ್ಲಿರುವವರು ಜೀವನನ್ನು ಹೇಗೆ ಸಾರ್ಥಕಗೊಳಿಸಿಕೊಳ್ಳಬಹುದು ಎಂಬುದಕ್ಕೆ ಮಾದರಿಯಾದ.
ಈ ರೀತಿ, ನಮ್ಮಲ್ಲಿ ಜೀವನಸ್ಫೂರ್ತಿ ತುಂಬಬಲ್ಲವರು, ಸ್ಟೀವ್ ಒಬ್ಬನೇ ಅಲ್ಲ ಎನ್ನುವುದು ನಿಜ. ಈ ರೀತಿ ಉದ್ಯಮಿಗಳಿಗೆ ಮಾದರಿಯಾಗಬಲ್ಲವರು ಜಗತ್ತಿನಲ್ಲಿ ಇನ್ನೂ ಕೆಲವರಿದ್ದಾರೆ ಅನ್ನೋದೂ ನಿಜ. ಮುಂದೂ ಕೆಲವರಿದ್ದೇ ಇರುತ್ತಾರೆ ಅನ್ನುವುದೂ ಸತ್ಯ. ಏಕೆಂದರೆ ಜಗತ್ತು ಯಾರಿದ್ದರೂ ಇಲ್ಲದಿದ್ದರೂ ನಡೆಯುತ್ತಲೇ ಇರುತ್ತದೆ. ಇರಬೇಕು... ಈಗ ಜಗತ್ತಿನ ಮುಂದಿದೆ ಬಿಲಿಯನ್ ಡಾಲರ್ ಜಾಬ್ ಜಾಹೀರಾತು... ಜಾಬ್ಸ್ ಜಾಬ್ಗೆ ಸೂಕ್ತ ವ್ಯಕ್ತಿಗಳು ಬೇಕಾಗಿದ್ದಾರೆ!
Friday, October 07, 2011
ಜಾಬ್ಸ್ ಇನ್ನಿಲ್ಲ. ಜಾಬ್ ಖಾಲಿ ಇದೆ!
Subscribe to:
Post Comments (Atom)
3 comments:
chennagide
Really nice....
Really a nice articular....
Post a Comment