Tuesday, February 14, 2006

ನೀವೆಷ್ಟು ಅದೃಷ್ಟವಂತರು? ಸ್ಕೇರ್‌ ಡೆಕ್ಕನ್‌ನಿಂದ ತಿಳಿಯಿರಿ

ನಿಮ್ಮ ವಿಮಾನಯಾನ ಸುಖಕರವಾಗಿದ್ದರೆ ಪೂರ್ವಜನ್ಮದ ಪುಣ್ಯ ಫಲ ಗ್ಯಾರಂಟಿ:
ಕ್ಯಾಪ್ಟನ್ ಪಾಪಿನಾಥನ ಪತ್ರ

ಈ ವಿಮಾನದಲ್ಲಿ ಪ್ರಯಾಣಿಸುಮದು ಅಂದರೆ ಒಂಥರಾ ಸಾಹಸ ಯಾತ್ರೆ ಮಾಡಿದಂತೆ. ಒಮ್ಮೆ ಜುರಾಸಿಕ್‌ ಪಾರ್ಕ್‌ ಸಿನಿಮಾದಂತೆ ಥ್ರಿಲ್ಲಿಂಗ್‌. ಇನ್ನೊಮ್ಮೆ ಜಗ್ಗೇಶ್‌ ಸಿನಿಮಾ ಥರ ಕಾಮೆಡಿ. ಇನ್ನೊಮ್ಮೆ ಶ್ರುತಿ ಸಿನಿಮಾ ರೀತಿ ಟ್ರಾಜಿಡಿ. ಮಗದೊಮ್ಮೆ ’ಈವಿಲ್‌ ಡೆಡ್‌’ ಥರ ಹಾರರ್‌, ಇನ್ನಷ್ಟು ಸಲ ಗುಪ್ತ್‌ ಸಿನಿಮಾದಂತೆ ಸಸ್ಪೆನ್ಸ್‌... ಬಹುತೇಕ ಬಾರಿ ಟ್ರಾಜಿಡಿ, ಕಾಮೆಡಿ, ಆಕ್ಷನ್‌, ಸಸ್ಪೆನ್ಸ್‌, ಥ್ರಿಲ್ಲರ್‌ ಎಲ್ಲಾ ಸೇರಿದ ಹಿಂದಿ ಸಿನಿಮಾದ ಮಿನಿಮಮ್‌ ಮನರಂಜನೆ ಗ್ಯಾರಂಟಿ.



ಪ್ರಿಯ ಸೋವಿನಾಥ್‌,
ನಾನೂ ನೋಡುತ್ತಲೇ ಇದ್ದೇನೆ. ಬಹಳ ದಿನಗಳಿಂದ ನೀನ್ಯಾಕೋ ತುಂಬಾ ಡಲ್ಲಾಗಿದ್ದೀಯಲ್ಲ. ಯಾಕೆ? ಜೀವನ ಬಹಳ ಯಾಂತ್ರಿಕವಾಗಿದೆ ಎಂದು ಬೋರಾಗಿದೆಯೇ? ಅದೇ ಆಫೀಸು. ಅದೇ ಕೆಲಸ. ಅದೇ ಓಡಾಟ. ಅದೇ ಹಾರಾಟ. ಒಂದು ದಿನ ಮಜವಾಗಿ ಕಳೆಯೋಣ ಅಂದರೆ ರಜಾ ತಗೊಳ್ಳೋಕೇ ಆಗಲ್ಲ ಅಂತೀಯಾ? ಇಂಥ ಬ್ಯುಸಿ ಲೈಫಲ್ಲಿ ಚಾರ್ಮೇ ಇಲ್ಲ ಅನಿಸುತ್ತಾ?

ನೀನು ಬುದ್ದು ಕಣೋ. ನಿಂಗೆ ಲೈಫನ್ನ ಹೇಗೆ ಎಂಜಾಯ್‌ ಮಾಡಬೇಕು ಅಂತಾನೇ ಗೊತ್ತಿಲ್ಲ. ಅದಕ್ಕೇ ಹೀಗೆ ಜೀವನ ಯಾಂತ್ರಿಕವಾಗಿದೆ ಅಂತ ಗೂಬೆ ಥರ ಕೂತಿರುತ್ತೀಯ. ನಿನ್ನ ಸಮಸ್ಯೆಗೆಲ್ಲ ಕಾರಣ ಏನು ಗೊತ್ತಾ? ನೀನು ಒಳ್ಳೇ ಕಂಪ್ಯೂಟರ್‌ ಥರ ಪ್ಲಾನ್‌ ಮಾಡಿಕೊಂಡು, ರೋಬಟ್‌ ಥರ ದುಡಿತೀಯ. ಹಾಗೆ ಸಿಸ್ಟಮ್ಯಾಟಿಕ್‌ ಆಗಿ ಇರೋ ಬದಲು, ಮಾಡುತ್ತಿರುವ ಕೆಲಸವನ್ನೇ ಸ್ವಲ್ಪ ಡಿಫರೆಂಟ್‌ ಆಗಿ ಮಾಡೋಕೆ ಆಗಲ್ವ ನಿಂಗೆ? ಲೈಫ್‌ನಲ್ಲಿ ಚೇಂಜ್‌ ಇರುತ್ತೆ ಕಣೋ. ಇಲ್ಲಾಂದ್ರೆ ನೀನು ಹೇಳೋ ಹಾಗೆ ಲೈಫು ಬರೀ ರೊಬೊಟಿಕ್‌ ಆಗದೇ ಇನ್ನೇನು ಆಗುತ್ತೆ ಹೇಳು.

ಉದಾಹರಣೆಗೆ ನೀನು ಡೆಲ್ಲಿಗೆ ಹೋಗಬೇಕು ಅಂದ್ಕೊ. ಬೆಂಗಳೂರಲ್ಲಿ ಯಾಮದೋ ವಿಮಾನ ಹತ್ತುತೀಯ. ಅದು ನಿನ್ನನ್ನು ಡೆಲ್ಲಿಯಲ್ಲಿ ಇಳಿಸುತ್ತೆ. ಆಮೇಲೆ ನೀನು ಡೆಲ್ಲಿ ಆಫೀಸಿಗೆ ಹೋಗಿ ಕೆಲಸ ಮುಗಿಸಿಕೊಂಡು ವಾಪಸ್‌ ಇನ್ನೊಂದು ವಿಮಾನ ಹತ್ತುತೀಯ. ಆ ವಿಮಾನ ನಿನ್ನನ್ನ ಬೆಂಗಳೂರಲ್ಲಿ ಇಳಿಸುತ್ತೆ. ಇಷ್ಟೇ ತಾನೇ ನೀನು ಮಾಡೋದು.
ಈ ರೂಟೀನ್‌ ಬದಲು, ನಾನು ಹೇಳೋ ಮಾತು ಕೇಳು. ನಿನ್ನ ಪ್ರಯಾಣ ಎಷ್ಟು ಮಜವಾಗಿರುತ್ತೆ ನೋಡು!

ನಮ್ಮ ಕನ್ನಡದವರದ್ದೇ ಒಂದು ವಿಮಾನ ಕಂಪನಿ ಇದೆ. ಹೆಸರು ಸ್ಕೇರ್‌ ಡೆಕ್ಕನ್‌ ಅಂತ. ಈ ವಿಮಾನಯಾನ ಅಂದ್ರೆ ಕ್ಷಣ ಕ್ಷಣಕ್ಕೂ ರೋಮಾಂಚಕಾರಿ ಅನುಭವ. ಒಂದು ದಿನದ ಪ್ರಯಾಣದಂತೆ ಇನ್ನೊಂದು ದಿನದ ಪ್ರಯಾಣ ಇರುಮದಿಲ್ಲ. ಒಮ್ಮೆ ಆದ ಅನುಭವವನ್ನು ನೀನೆಂದೂ ಮರೆಯುಮದಿಲ್ಲ! ಪ್ರತಿ ಪ್ರಯಾಣವೂ ಒಂದೊಂದು ಥರ ಮಜ. ಒಮ್ಮೆ ಜುರಾಸಿಕ್‌ ಪಾರ್ಕ್‌ ಸಿನಿಮಾದಂತೆ ಥ್ರಿಲ್ಲಿಂಗ್‌. ಇನ್ನೊಮ್ಮೆ ಜಗ್ಗೇಶ್‌ ಸಿನಿಮಾದಂತೆ ಕಾಮೆಡಿ. ಇನ್ನೊಮ್ಮೆ ಶ್ರುತಿ ಸಿನಿಮಾ ಥರ ಟ್ರಾಜಿಡಿ. ಮಗದೊಮ್ಮೆ ’ಈವಿಲ್‌ ಡೆಡ್‌’ ಥರ ಹಾರರ್‌, ಇನ್ನಷ್ಟು ಸಲ ಗುಪ್ತ್‌ ಸಿನಿಮಾದಂತೆ ಸಸ್ಪೆನ್ಸ್‌... ಬಹುತೇಕ ಬಾರಿ ಟ್ರಾಜಿಡಿ, ಕಾಮೆಡಿ, ಆಕ್ಷನ್‌, ಸಸ್ಪೆನ್ಸ್‌, ಥ್ರಿಲ್ಲರ್‌ ಎಲ್ಲಾ ಸೇರಿದ ಹಿಂದಿ ಸಿನಿಮಾದ ಮಿನಿಮಮ್‌
ಎಂಟರ್‌ಟೇನ್‌ಮೆಂಟ್‌ ಗ್ಯಾರಂಟಿ.

ನಾನು ಹೇಳೋದು ನಂಬು... ಈ ಸ್ಕೇರ್‌ ಡೆಕ್ಕನ್‌ ವಿಮಾನ ಯಾನ ಮಾಡಿ ಬಂದ ಮೇಲೆ, ನೀನು ಖಂಡಿತ ’ಪ್ರಯಾಣ ಮಾಮೂಲಾಗಿತ್ತು ಕಣೋ’ ಅಂತ ಮಾತ್ರ ಹೇಳೋಲ್ಲ. ಅಷ್ಟು ಭರವಸೆಯನ್ನು ನಾನು ಕೊಡುತ್ತೇನೆ.

ಅಷ್ಟೇ ಏನು? ಈ ವಿಮಾನ ಯಾನ ಮಾಡೋದ್ರಿಂದ ನಿನ್ನ ಅದೃಷ್ಟ ಕೂಡ ಪರೀಕ್ಷಿಸಿಕೊಳ್ಳಬಹುದು. ಟಿಕೆಟ್‌ ಬುಕಿಂಗ್‌ನಿಂದಲೇ ನಿನ್ನ ಅದೃಷ್ಟ ಪರೀಕ್ಷೆ ಆರಂಭವಾಗುತ್ತೆ. ಕೇವಲ ೫೦೦ ರುಪಾಯಿಗೆ ಡೆಲ್ಲಿಗೆ ಹೋಗಿ, ಕೊಲ್ಕತಾಗೆ ಹಾರಿ, ಹೈದರಾಬಾದ್‌, ಮುಂಬೈ, ಗೋವಾ, ಚೆನ್ನೈ... ಎಲ್ಲಿಗೆ ಬೇಕಾದರೂ ಪ್ರಯಾಣಿಸಿ. ಈ ತಿಂಗಳಿಗೆ ಇಷ್ಟು ಕಡಿಮೆ ಬೆಲೆಯ ೧ ಲಕ್ಷ ಟಿಕೆಟ್‌ ಬಿಡುಗಡೆ ಮಾಡಿದ್ದೀವಿ ಅಂತ ಕಂಪನಿ ಪ್ರಚಾರ ಮಾಡುತ್ತೆ. ನಿಮಗೇನಾದರೂ ಈ ಟಿಕೆಟ್‌ ಸಿಕ್ಕರೆ ನೀನು ೧೦ ಪರ್ಸೆಂಟ್‌ ಅದೃಷ್ಟವಂತ ಅಂದ್ಕೊ. ಆಮೇಲೆ ಆ ವಿಮಾನ ನಿಗದಿತ ವೇಳೆಗಿಂತ ಕೇವಲ ೨-೩ ಗಂಟೆ ತಡವಾಗಿ ಹಾರಿದರೆ ನೀನು ೨೦ ಪರ್ಸೆಂಟ್‌ ಅದೃಷ್ಟವಂತ. ಈ ವಿಮಾನ ಏನಾದರೂ ಟೈಮಿಗೆ ಸರಿಯಾಗಿ ಹಾರಿಬಿಟ್ಟರಂತೂ ವಾರೇ ವ್ಹಾ... ನೀನು ಪೂರ್ವ ಜನ್ಮದಲ್ಲಿ ಪುಣ್ಯ ಮಾಡಿರಬೇಕು ಕಣೋ... ೫೦ ಪರ್ಸೆಂಟ್‌ ಅದೃಷ್ಟವಂತ ಅಂತ ಖುಷಿಪಡು. ಈಗೀಗ ಸ್ಕೇರ್‌ ಡೆಕ್ಕನ್‌ ವಿಮಾನ ನಿಗದಿತ ವೇಳೆಗಿಂತ ಮುಂಚೆಯೂ ಹಾರುಮದಕ್ಕೆ ಶುರುಮಾಡಿದೆ. ಅಂದರೆ ನೀನು ವಿಮಾನ ನಿಲ್ದಾಣ ತಲುಪುಮದಕ್ಕಿಂತ ಮೊದಲೇ ಅದು ಹಾರಿ ಹೋಗಿಲ್ಲ ಅಂದರೆ ನೀನು ೬೦ ಪರ್ಸೆಂಟ್‌ ಅದೃಷ್ಟವಂತ. ಪ್ರತಿದಿನ ಈ ವಿಮಾನದ ೩-೪ ಟ್ರಿಪುý್ಪಗಳು ಕ್ಯಾನ್ಸಲ್‌ ಆಗುತ್ತವೆ. ಯಾರಿಗೂ ಹೇಳದೇ, ಕೇಳದೇ, ಈ ಕಂಪನಿಯ ಸಿಬ್ಬಂದಿ ವಿಮಾನ ನಿಲ್ದಾಣದಿಂದ ಹಾರಿಬಿಟ್ಟಿರುತ್ತಾರೆ! ನೀನು ಅಲ್ಲೇ ಕೋತಿ ಥರ ಕೂತಿರಬೇಕಾಗುತ್ತದೆ. ಅಂತಹ ಸಂದರ್ಭ ನಿನಗೆ ಬಂದಿಲ್ಲ ಅಂದರೆ ನೀನು ೭೦ ಪರ್ಸೆಂಟ್‌ ಲಕ್ಕಿ.

ಒಮ್ಮೊಮ್ಮೆ ಈ ವಿಮಾನದ ಟೈರು ಒಡೆದುಹೋಗಿ ಗಾಡಿ ರನ್‌ವೇಯಲ್ಲೇ ನಿಂತು ಬಿಡುತ್ತದೆ. ಅಥವಾ ರೆಕ್ಕೆ ಕಳಚಿ ನೇತಾಡಲು ಶುರುಮಾಡುತ್ತದೆ. ಮತ್ತೊಮ್ಮೆ ವಿಮಾನದ ಬಾಗಿಲೇ ಸರಿಯಾಗಿ ಹಾಕಿಕೊಳ್ಳುಮದಿಲ್ಲ. ಅಂಥದ್ದೇನು ನಡೆಯಲಿಲ್ಲ ಅಂದರೆ ನೀನು ೮೦ ಪರ್ಸೆಂಟ್‌ ಲಕ್ಕಿ. ವಿಮಾನ ಸರಿಯಾಗಿ ಇಳಿಯಬೇಕಾದ ನಿಲ್ದಾಣದಲ್ಲೇ ಇಳಿದರೆ ನೀನು ೧೦೦ ಪರ್ಸೆಂಟ್‌ ಅದೃಷ್ಟಶಾಲಿ. ಗೊತ್ತಾಯ್ತ? ನಿನಗೀ ವಿಮಾನದಲ್ಲಿ ಗುಟುಕು ನೀರು ಬೇಕಾದರೂ ದುಡ್ಡು ಕೊಡಬೇಕು. ಆದರೆ, ನಿನ್ನ ಅದೃಷ್ಟ ಪರೀಕ್ಷೆ ಉಚಿತ!

ಕಚೇರಿ ಕೆಲಸ ಬಿಟ್ಟು ಯಾಮದೇ ಇಂಟರೆಸ್ಟಿಂಗ್‌ ಟೈಮ್‌ಪಾಸ್‌ ಆಟಕ್ಕೆ ನಿನಗೆ ಟೈಮ್‌ ಸಿಗುಮದಿಲ್ಲ ಅಂತ ನಂಗೆ ಗೊತ್ತು. ಆದರೆ, ನಿನ್ನ ಕೆಲಸವನ್ನೇ ಒಂದು ಟೈಮ್‌ಪಾಸ್‌ ಗೇಮ್‌ ಮಾಡಿಕೊಳ್ಳಬಹುದು ಅಂತ ನಿಂಗೆ ಗೊತ್ತಾ? ಉದಾಹರಣೆಗೆ, ನೀನು ಸ್ಕೇರ್‌ ಡೆಕ್ಕನ್‌ ವಿಮಾನದ ಟಿಕೆಟ್‌ ಬುಕ್‌ ಮಾಡಿನೋಡು ಗೊತ್ತಾಗುತ್ತೆ. ೫೦೦ ರು.ಗೆ ಎಲ್ಲಿಗೆ ಬೇಕಾದರೂ ಟಿಕೆಟ್‌ ಸಿಗುತ್ತೆ ಅಂತ ಕಂಪನಿ ಹೇಳುತ್ತೆ ತಾನೆ? ನೀನು ಕಂಪನಿಯ ವೆಬ್‌ಸೈಟಿನಲ್ಲಿ ಎಲ್ಲಿ ಬೇಕಾದರೂ ಕ್ಲಿಕ್‌ ಮಾಡಿ ನೋಡು. ನಿಂಗೆ ೫೦೦ ರು. ಟಿಕೆಟ್‌ ಬುಕ್‌ ಮಾಡೋದಕ್ಕೇ ಆಗೋಲ್ಲ. ಒಂಥರಾ ಸುಡೊಕು ಥರ. ಒಮ್ಮೆ ನೀನು ಬುಕ್‌ ಮಾಡಲು ಶುರು ಹಚ್ಚಿಕೊಂಡೆಯೋ, ಆಯ್ತು. ಅದು ಟಿಕೆಟ್‌ ಬುಕ್‌ ಆಗುಮದಿಲ್ಲ. ನೀನು ಬಿಡುಮದಿಲ್ಲ! ಎಂಥಾ ಟೈಮ್‌ ಪಾಸ್‌. ಸುಡೊಕು ತೆಗೆದು ಮೂಲೆಗೆ ಬಿಸಾಕು!

ಇದಕ್ಕಿಂತ ಹೆಚ್ಚಾಗಿ ನೀನು ವಿಮಾನ ಅಪಹರಣದ ಬಗ್ಗೆ ಕೇಳಿದ್ದೀಯಲ್ಲ. ಹಾಗೆ ವಿಮಾನ ಹೈಜಾಕ್‌ ಆದಾಗ ಅದರೊಳಗಿನ ಯಾತ್ರಿಗಳ ಪರಿಸ್ಥಿತಿ ಹೇಗಿರುತ್ತದೆ ಗೊತ್ತಾ? ಸಾಕ್ಷಾತ್‌ ಅನುಭವ ಬೇಕೆಂದರೆ ಸ್ಕೇರ್‌ ಡೆಕ್ಕನ್‌ ವಿಮಾನ ಯಾನ ಮಾಡಬೇಕು. ನೀನು ಬೋರ್ಡಿಂಗ್‌ ಪಾಸ್‌ ತೆಗೆದುಕೊಂಡು, ಸೆಕ್ಯುರಿಟಿ ಚೆಕ್‌ ಮುಗಿಸಿಕೊಂಡು ಒಳಗೆ ಹೋಗಿರುತ್ತೀಯ. ಎಷ್ಟೋ ಹೊತ್ತಿನ ನಂತರ ನಿನ್ನನ್ನು ವಿಮಾನದೊಳಕ್ಕೆ ತುಂಬಿಯೂ ಆಗುತ್ತದೆ. ಆದರೆ, ವಿಮಾನ ಮಾತ್ರ ಹಾರುಮದೇ ಇಲ್ಲ. ಆಮೇಲೆ ನೋಡು ಥ್ರಿಲ್‌ ಶುರು. ವಿಮಾನದಲ್ಲಿ ಏನಾಗುತ್ತಿದೆ ಎಂದು ಯಾರೂ ಹೇಳುಮದಿಲ್ಲ. ಯಾವಾಗ ಟೇಕ್‌ಆಫ್‌ ಎಂದು ತಿಳಿಯುಮದಿಲ್ಲ. ಒಂದೆಡೆ ನಿನಗೆ ಹಸಿವೆ ಆಗುತ್ತಿರುತ್ತದೆ. ಆದರೆ, ತಿಂಡಿಯಿಲ್ಲ. ಗುಟುಕು ನೀರೂ ಇಲ್ಲ. ಪೆಟ್ರೋಲ್‌ ಖರ್ಚಾಗುತ್ತದೆ ಎಂದು ವಿಮಾನದ ಎಸಿಯನ್ನೂ ಪೈಲಟ್‌ ಆನ್‌ ಮಾಡಿರುಮದಿಲ್ಲ. ಹಾಗಾಗಿ ವಿಮಾನದ ಒಳಗೆ ಸೆಖೆ ಆರಂಭವಾಗುತ್ತದೆ. ಕುರ್ಚಿಗಳೇನೂ ಸುಖಾಸನಗಳಲ್ಲವಲ್ಲ. ಕುಳಿತುಕೊಳ್ಳುಮದು ಕಷ್ಟವಾಗುತ್ತದೆ. ವಿಮಾನದಿಂದ ಇಳಿಯಲು ಕೊಡುಮದಿಲ್ಲ. ಇತ್ತ ನಿನ್ನ ಬಂಧುಗಳು ನೀನು ಸುರಕ್ಷಿತವಾಗಿ ಗಮ್ಯ ತಲುಪಿದ್ದೀಯೋ ಇಲ್ಲವೋ ಅಂತ ಚಿಂತಿಸುತ್ತಿರುತ್ತಾರೆ. ಅತ್ತ ಒಂದಷ್ಟು ಜನರು ನಿನ್ನ ಬರವಿಗಾಗಿ ಕಾಯುತ್ತಿರುತ್ತಾರೆ. ಈ ಹೈಜಾಕ್‌ನಲ್ಲಿ ಉಗ್ರಗಾಮಿಗಳ ಮುಖವೊಂದು ಕಾಣುಮದಿಲ್ಲ ಅಷ್ಟೇ. ಉಳಿದಂತೆ ಆಹಾ... ಥೇಟ್‌ ಅಪಹರಣವಾದ ವಿಮಾನದಲ್ಲಿ ಕುಳಿತ ಅನುಭವ ನಿನಗೆ!

ಇನ್ನೊಂದು ಹೆಮ್ಮೆಯ ವಿಷಯ ಏನು ಗೊತ್ತಾ? ಏರ್‌ಪೋರ್ಟ್‌ನಲ್ಲಿ ನಿನ್ನ ಕೈಲಿ ಸ್ಕೇರ್‌ ಡೆಕ್ಕನ್‌ ಟಿಕೆಟ್‌ ನೋಡಿದ ಕೂಡಲೇ ಉಳಿದ ಪ್ರಯಾಣಿಕರಿಗೆ ನಿನ್ನ ಬಗ್ಗೆ ಗೌರವ ಹುಟ್ಟುತ್ತದೆ. ಈ ಭಯಂಕರ ವಿಮಾನದಲ್ಲಿ ಪ್ರಯಾಣಿಸುವ ಎದೆಗಾರಿಕೆ ನಿನಗಿದೆಯಲ್ಲ ಎಂದು ಅವರು ಅಚ್ಚರಿಪಡುತ್ತಾರೆ. ನಿನ್ನ ಧೈರ್ಯಕ್ಕೆ ಮೆಚ್ಚುತ್ತಾರೆ. ದೇವರು ಒಳ್ಳೆಯದು ಮಾಡಲಿ ಎಂದು ಹಾರೈಸುತ್ತಾರೆ.
ಶಾರ್ಟಾಗಿ ಹೇಳಬೇಕೆಂದರೆ, ಸ್ಕೇರ್‌ ಡೆಕ್ಕನ್‌ ಯಾನ ಎಂದರೆ ಒಂಥರಾ ಸಾಹಸ ಯಾತ್ರೆ. ಒಮ್ಮೆ ಯಾತ್ರೆ ಮಾಡಿನೋಡು. ಆಮೇಲಾದರೂ ನೀನು ಸ್ವಲ್ಪ ಲವಲವಿಕೆಯಿಂದ ಇರುತ್ತೀಯೇನೋ ಅಂತ ನನಗೊಂದು ಆಸೆ ಕಣೋ.

Dare it man. Dare it.

ನಿನ್ನ ಪ್ರಿಯ ಫ್ರೆಂಡು
ಕ್ಯಾಪ್ಟನ್ ಪಾಪಿನಾಥ್



Kannada Prabha issue dated February ೧೩, 2006
How Lucky You Are?.. Test it with Scare Deccan!

-

No comments: