Tuesday, February 21, 2006

ಅಣು ಬಾಂಬ್‌ಗಿಂತ ನನಗೆ ಧರ್ಮದ ಭಯ

ಮಹಾನ್ ವಿಜ್ಞಾನಿ ಐನ್‌ಸ್ಟೈನ್‌ಗೆ
ಶಾ೦ತಿ ಪ್ರಶಸ್ತಿ ಸ್ಥಾಪಕ ಆಲ್‌ಫ್ರೆಡ್ ನೊಬೆಲ್‌ನ ಪತ್ರ


ನನಗೆ ಈ ಬಾಂಬುಗಳ ಹೆದರಿಕೆಯಿಲ್ಲ ಗೊತ್ತಾ? ಈ ಬಾಂಬುಗಳಷ್ಟೇ ಅಪಾಯಕಾರಿಯಾಗುತ್ತಿರುವ ಧರ್ಮಾಂಧತೆಯ ಬಗ್ಗೆ ನನಗೆ ಭಯವಾಗಿದೆ. ಧರ್ಮದ ಹೆಸರು ಹೇಳಲೂ ಅಂಜಿಕೆಯಾಗುತ್ತಿದೆ. ಒಂದೊಂದು ಧರ್ಮದ ಹೆಸರೂ ನನ್ನ ಬೆನ್ನಹುರಿಯಲ್ಲಿ ಲಿಟ್ಲ್‌ ಬಾಯ್‌, ಫ್ಯಾಟ್‌ಮ್ಯಾನ್‌ ಎಂಬಷ್ಟೇ ಛಳಿಯನ್ನುಂಟು ಮಾಡುತ್ತವೆ. ಜಗತ್ತಿನ ಯಾಮದೋ ಮೂಲೆಯಲ್ಲಿ ಸಿಡಿದ ಧಾರ್ಮಿಕ ಸ್ಫೋಟ ಇನ್ನೊಂದು ಮೂಲೆಯನ್ನೂ ಸುಟ್ಟುಹಾಕುತ್ತದೆ. ಜಗತ್ತಿಗೆ ಅಟಂಬಾಂಬಿನಷ್ಟೇ ಧರ್ಮಾಂಧತೆಯಿಂದಲೂ ಅಪಾಯವಿದೆ.

ಸರ್ ಅಲ್ಬರ್ಟ್‌ ಐನ್‌ಸ್ಟೈನ್‌,
ಜಗತ್ತಿನಲ್ಲಿ ಎಲ್ಲರೂ ಈಗ ನಮ್ಮಿಬ್ಬರನ್ನು ಮಹಾನ್‌ ವ್ಯಕ್ತಿಗಳೆಂದು ನಂಬಿದ್ದಾರೆ. ನಿಮ್ಮನ್ನು ಅದ್ಭುತ ವಿಜ್ಞಾನಿ ಎಂದು ಜನ ಕೊಂಡಾಡುತ್ತಾರೆ. ಜಗತ್ತಿನ ಅತಿ ಪ್ರತಿಷ್ಠಿತ ‘ನೊಬೆಲ್‌ ಪ್ರಶಸ್ತಿಯ’ ಸ್ಥಾಪಕ ಎಂದು ಜನ ನನ್ನನ್ನು ಗೌರವಿಸುತ್ತಾರೆ.

ಆದರೆ, ನಮ್ಮ ಬಗ್ಗೆ ಸ್ವಲ್ಪ ಇತಿಹಾಸ ಗೊತ್ತಿರುವವರು ನಿಮ್ಮನ್ನೂ, ನನ್ನನ್ನೂ ನಮ್ಮ ಸಂಶೋಧನೆ ಮತ್ತು ಕೊಡುಗೆಗಳಿಗಾಗಿ ಜರಿಯುತ್ತಾರೆ. ನಾನೋ ಡೈನಮೈಟ್‌ ಸಂಶೋಧನೆ ಮಾಡಿ ಭೂಮಿಯ ನಾಶಕ್ಕೆ ಮಹಾನ್‌ ಆಯುಧ ಕಂಡು ಹಿಡಿದೆ ಎಂಬ ಆರೋಪವಿದೆ.

ಅಷ್ಟೇ ಅಲ್ಲ, ನನ್ನ ಹೆಸರಿನಲ್ಲಿ ನೀಡಲಾಗುತ್ತಿರುವ ನೊಬೆಲ್‌ ಪ್ರಶಸ್ತಿ ಕೂಡ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿಯಂತೇ ಲಾಬಿದಾರರಿಗೆ ಸಿಗುತ್ತದೆ ಎಂಬ ಆಪಾದನೆಯಿದೆ. ಎಷ್ಟೋ ಅಯೋಗ್ಯರಿಗೆ ಈ ಪ್ರಶಸ್ತಿ ದಕ್ಕಿದೆ. ಎಷ್ಟೋ ಯೋಗ್ಯರಿಗೆ ಈ ಪ್ರಶಸ್ತಿ ಸಿಗಲಿಲ್ಲ. ಉದಾಹರಣೆಗೆ: ಜಗತ್ತಿಗೇ ಶಾಂತಿಯುತ ಹೋರಾಟದ ಮಾರ್ಗ ಕಲಿಸಿದ ಮಹಾತ್ಮಾ ಗಾಂಧಿಗೆ ನನ್ನ ಪ್ರಶಸ್ತಿ ಸಿಗಲಿಲ್ಲ. ಕಾರಣ ಏನೆಂದರೆ, ಬ್ರಿಟನ್‌ ಸರ್ಕಾರಕ್ಕೆ ಇರುಸು ಮುರುಸು ಉಂಟುಮಾಡಲು ನಮ್ಮ ನಾರ್ವೆ ಸರ್ಕಾರಕ್ಕೆ ಇಷ್ಟ ಇರಲಿಲ್ಲ. ಅದಕ್ಕೇ ನಾಲ್ಕು ಬಾರಿ ಗಾಂಧೀಜಿ ಹೆಸರು ನಾಮಕರಣವಾದರೂ ಅವರಿಗೆ ನಾಲ್ಕೂ ಬಾರಿ ಪ್ರಶಸ್ತಿ ನಿರಾಕರಿಸಲಾಯಿತು ಎಂಬ ದೂರಿದೆ.

ಆದರೆ, ನನಗಿಂತ ನಿಮ್ಮ ಮೇಲಿನ ಆರೋಪ ಇನ್ನೂ ಗುರುತರವಾದದ್ದು. ನೀಮ ತಮ್ಮ ಸಾಪೇಕ್ಷತಾ ವಾದದ ಮೂಲಕ ಅಣುಬಾಂಬಿನ ಮೂಲ ಸೂತ್ರವನ್ನು ಕಂಡು ಹಿಡಿದಿರಿ. ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಅಣುಬಾಂಬ್‌ ತಯಾರಿಸುವಂತೆ ನೀವೇ ಅಮೆರಿಕವನ್ನು ಪ್ರೇರೇಪಿಸಿದಿರಿ. ಇದು ಬಹಳ ಜನರಿಗೆ ಗೊತ್ತಿಲ್ಲ. ನೀಮ ೧೯೩೯ ಅ.೨ರಂದು ಅಂದಿನ ಅಮೆರಿಕದ ಅಧ್ಯಕ್ಷ ರೂಸ್‌ವೆಲ್ಟ್‌ಗೆ ಬರೆದ ಪತ್ರದ ನಕಲು ಈಗ ನನ್ನ ಕೈಲಿದೆ. ಅದನ್ನು ನೋಡುತ್ತಿದ್ದೆ. ಅಣು ಬಾಂಬ್‌ ಸಿದ್ಧಗೊಂಡ ಘಟನಾವಳಿಗಳು ನನ್ನ ಕಣ್ಣ ಮುಂದೆ ಚಲಿಸುತ್ತಿವೆ.

ನೀವು ಅಮೆರಿಕ ಅಧ್ಯಕ್ಷರಿಗೆ ಬರೆದದ್ದು ಇಷ್ಟು:

‘೧೯೩೮ರ ಈಚೆಗಿನ ಸಂಶೋಧನೆ ನೋಡಿದ ಮೇಲೆ ಅಣುಗಳಿಂದ ಹೊಸ ಶಕ್ತಿ ಸ್ಥಾವರ ಸ್ಥಾಪನೆ ಸಾಧ್ಯ ಎಂಬುದು ನನಗೂ ಮನವರಿಕೆಯಾಗಿದೆ. ಅಲ್ಲದೇ, ಈ ಶಕ್ತಿಯಿಂದ ಅತ್ಯಂತ ಶಕ್ತಿಶಾಲಿ ಬಾಂಬುಗಳ ತಯಾರಿಕೆ ಕೂಡ ಸಾಧ್ಯ. ಇಂತಹ ಒಂದು ಬಾಂಬನ್ನು ತುಂಬಿಕೊಂಡ ಹಡಗು ಯಾಮದಾದರೂ ಬಂದರಿನಲ್ಲಿ ಸ್ಫೋಟಿಸಿದರೆ ಆ ಇಡೀ ಬಂದರೇ ನಾಶವಾಗುತ್ತದೆ. ಅಷ್ಟೇ ಅಲ್ಲ ಅಕ್ಕಪಕ್ಕದ ಭೂಭಾಗವೂ ಹಾನಿಗೆ ಒಳಗಾಗುತ್ತದೆ. ಇಷ್ಟು ಸಾಮರ್ಥ್ಯ ಈ ಬಾಂಬಿಗೆ ಇರುತ್ತದೆ. ಆದರೆ, ಈ ಬಾಂಬುಗಳನ್ನು ಸಣ್ಣ ಹಡಗಿನಲ್ಲಿ ಒಯ್ಯುಮದು ಕಷ್ಟ ಅಂತ ನನ್ನ ಅನಿಸಿಕೆ.’

‘ಈ ನಡುವೆ ಜರ್ಮನಿಯ ನಾರಿhುಗಳು ಇಂತಹ ಬಾಂಬಿಗೆ ಬೇಕಾದ ಯುರೇನಿಯಮ್‌-೨೩೫ರ ಶುದ್ಧೀಕರಣದಲ್ಲಿ ತೊಡಗಿದ್ದಾರೆ ಎಂಬ ಸುಳಿವಿದೆ. ಅವರು ಇದರಿಂದ ಬಾಂಬ್‌ ತಯಾರಿಸುವ ಸಾಧ್ಯತೆಯಿದೆ. ಆದ್ದರಿಂದ ಅವರಿಗಿಂತ ಮೊದಲು ಬಾಂಬ್‌ ತಯಾರಿಸಬೇಕಾದರೆ, ಅಮೆರಿಕ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಈ ವಿಷಯ ತಮ್ಮ ಗಮನಕ್ಕೆ ತರುಮದು ನನ್ನ ಕರ್ತವ್ಯ.’

ತಮ್ಮ ಈ ಪತ್ರ ಓದಿದ ಕೂಡಲೇ ಅಮೆರಿಕದ ಅಧ್ಯಕ್ಷರು ಅಣು ಬಾಂಬ್‌ ತಯಾರಿಕೆಗೆ ಗುಪ್ತ ಆದೇಶ ನೀಡಿದರು. ಆ ಗುಪ್ತ ಯೋಜನೆಗೆ ಇಟ್ಟ ಹೆಸರು ‘ದಿ ಮ್ಯಾನ್‌ಹಟನ್‌ ಪ್ರಾಜೆಕ್ಟ್‌.‘ ಈ ಯೋಜನೆಯ ಉದ್ದೇಶ ವಿಶ್ವದ ಮೊತ್ತ ಮೊದಲ ಅಣು ಬಾಂಬ್‌ ತಯಾರಿಕೆ. ಇದರ ಹೊಣೆ ಆಗಿನ ಖ್ಯಾತ ಅಣು ವಿಜ್ಞಾನಿ ಜೆ. ರಾಬರ್ಟ್‌ ಓಪನ್‌ಹೈಮರ್.

ಸತತ ೫ ವರ್ಷಗಳ ಸಂಶೋಧನೆಯ ಬಳಿಕ ತಣ್ಣಗೆ ಸಿದ್ಧಗೊಂಡಿತ್ತು ಒಂದು ಅಣುಬಾಂಬು. ಅದಕ್ಕೆ ಇದ್ದ ಗುಪ್ತನಾಮ ‘ದಿ ಗ್ಯಾಜೆಟ್‌‘. ಈ ಯೋಜನೆಗಾಗಿ ಆಗಿನ ಕಾಲದಲ್ಲೇ ೨ ಬಿಲಿಯನ್‌ ಡಾಲರ್‌ ಖರ್ಚಾಯಿತು.

೧೯೪೫ರ ಜುಲೈ ೧೬ ಮುಂಜಾಮ ೫ ಗಂಟೆ ೨೯ ನಿಮಿಷ ೪೫ ಸೆಕೆಂಡು. ಅಮೆರಿಕ ಸರ್ಕಾರ, ಮಿಲಿಟರಿ ಮತ್ತು ವಿಜ್ಞಾನಿಗಳ ಅತ್ಯಂತ ಗುಪ್ತ ಕಾರ್ಯಾಚರಣೆ ನಡೆಯಿತು. ಈ ಕಾರ್ಯಾಚರಣೆ ಹೆಸರು ‘ದಿ ಟ್ರಿನಿಟಿ’. ನ್ಯೂ ಮೆಕ್ಸಿಕೋ ಉತ್ತರ ಭಾಗದ ಮರುಭೂಮಿ ಪ್ರದೇಶದ ಅಲಮಗಾರ್ಡೋ ಬಾಂಬಿಂಗ್‌ ರೇಂಜ್‌ನಲ್ಲಿ ೧೦೦ ಅಡಿ ಎತ್ತರದ ಒಂದು ಕಬ್ಬಿಣದ ಗೋಪುರ ಮೇಲೆ ಏರಿ ಕುಳಿತಿದ್ದ ದಿ ಗ್ಯಾಜೆಟ್‌ ಸ್ಫೋಟ. ಭಯಂಕರ ಶಬ್ದದೊಂದಿಗೆ ಜಗತ್ತಿನ ಮೊದಲ ಅಣುಬಾಂಬ್‌ ಸಿಡಿಯಿತು! ಕೋರೈಸುವ ಬೆಂಕಿ ಬಣ್ಣದ ಬೆಳಕು ನೂರಾರು ಮೈಲಿ ದೂರಕ್ಕೂ ಕಾಣಿಸಿತು. ನೋಡು ನೋಡುತ್ತಲೇ ಅಣಬೆಯಂತೆ ದಟ್ಟ ಮೋಡಗಗಳು ತುಂಬಿಕೊಂಡಮ. ಅಣು ಬಾಂಬಿನ ಯುಗ ಆರಂಭವಾಯಿತು.

ಈ ಮರುಭೂಮಿ ಪ್ರದೇಶದಿಂದ ಬಹುದೂರದಲ್ಲಿದ್ದ ಜನರಿಗೆ ಏನಾಯಿತೆಂದೇ ಗೊತ್ತಾಗಲಿಲ್ಲ. ಆ ದಿನ ಸೂರ್ಯನೇಕೋ ಡಬ್ಬಲ್‌ ಪ್ರಖರವಾಗಿದ್ದ ಅಂತ ಅಂದರು ಕೆಲವರು. ಇದಕ್ಕಿಂತ ಅಚ್ಚರಿಯೆಂದರೆ... ಈ ಸ್ಫೋಟ ನಡೆದ ಸ್ಥಳದಿಂದ ೧೨೫ ಕಿ.ಮೀ. ದೂರದಲ್ಲಿದ್ದ ಅಂಧ ಬಾಲಕಿಯೊಬ್ಬಳಿಗೆ ಮಿಂಚು ಕಾಣಿಸಿತಂತೆ! ಎಷ್ಟು ಪ್ರಖರವಾಗಿ ಇದ್ದೀತು ಆ ಸ್ಫೋಟ!

ಈ ತಂಡದಲ್ಲಿದ್ದ ವಿಜ್ಞಾನಿಯೊಬ್ಬರಂತೂ ‘ಓಹ್‌ ಇದರಿಂದ ಭೂಮಿಯ ಸಮತೋಲನವೇ ತಪ್ಪಲಿದೆ. ಈ ಆಯುಧದಿಂದ ಮಾನವ ತಾನು ವಾಸಿಸುವ ಭೂಮಿಯನ್ನೇ ನಾಶ ಮಾಡಿಕೊಳ್ಳುತ್ತಾನೆ‘ ಎಂದು ಭವಿಷ್ಯ ನುಡಿದ. ಅಣು ಬಾಂಬ್‌ ಪಿತಾಮಹ ಓಪನ್‌ಹೈಮರ್‌ಗೆ ಹಿಂದೂಗಳ ಭಗವದ್ಗೀತೆ ಅಷ್ಟಷ್ಟು ಗೊತ್ತಿತ್ತು. ಅದನ್ನು ಉದ್ಧರಿಸಿ ಆತ ಹಲುಬಿದ -‘ನಾನು ಮೃತ್ಯು. ಈ ವಿಶ್ವದ ವಿನಾಶಕ’ ಎಂದು. ಈ ಯೋಜನೆಯ ನಿರ್ದೇಶಕ ಕೆನ್‌ ಬೇನ್‌ಬ್ರಿಡ್ಜ್‌ ಹೇಳಿದ ‘ನೌ ವಿ ಆರ್‌ ಆಲ್‌ ಸನ್ಸ್‌ ಆಫ್‌ ಬಿಚ್ಚಸ್‌’.

ಜಗತ್ತಿನ ಮೊದಲ ಬಾಂಬ್‌ ಸೃಷ್ಟಿಕರ್ತರ ತಂಡ ತನ್ನ ಯಶಸ್ಸಿನಿಂದ ಕಂಗಾಲಾಗಿತ್ತು! ಪ್ರಯೋಗಾರ್ಥ ಸ್ಫೋಟಿಸಿದ ಸಣ್ಣ ಬಾಂಬಿಗೆ ಅವರು ನಡುಗಿಹೋಗಿದ್ದರು. ಅಣು ಬಾಂಬಿನ ಶಕ್ತಿಯನ್ನು ಕಂಡು ಈ ಅಸ್ತ್ರವನ್ನು ಕೈಬಿಡುವಂತೆ ಅವರು ಅಮೆರಿಕಕ್ಕೆ ಮನವಿ ಮಾಡಿದರು. ಆದರೆ, ಅಮೆರಿಕ ಅಂಥ ಮನಸ್ಥಿತಿಯಲ್ಲಿ ಇರಲಿಲ್ಲ. ಎರಡನೇ ಮಹಾಯುದ್ಧದ ತುತ್ತತುದಿಯಲ್ಲಿತ್ತು. ಹೊಸ ಬ್ರಹ್ಮಾಸ್ತ್ರವನ್ನು ಕೈಲಿ ಹಿಡಿದುಕೊಂಡು ಕೇಕೆ ಹಾಕಿ ನಲಿಯುತ್ತಿತ್ತು.

ಅಮೆರಿಕದ ಬಳಿ ಇನ್ನೂ ಎರಡು ಬಾಂಬ್‌ಗಳಿತ್ತು. ಒಂದು ‘ಲಿಟ್ಲ್‌ ಬಾಯ್‌’ ಇನ್ನೊಂದು ‘ಫ್ಯಾಟ್‌ ಮ್ಯಾನ್‌’.
ಜಗತ್ತಿನ ಮೊದಲ ಬಾಂಬ್‌ ಸಿಡಿದ ಸರಿಯಾಗಿ ೨೦ ದಿನಗಳ ನಂತರ, ೧೯೪೫ ಆಗಸ್ಟ್‌ ೬ರಂದು, ಹಿರೋಶಿಮಾ ಮೇಲೆ ಹಾರಿ ಬಂತು ಅಮೆರಿಕದ ಎನೋಲಾ ಗೇ -ಎಂಬ ಬಿ ೨೯ ವಿಮಾನ. ಅದು ಅಲ್ಲಿನ ಸೇತುವೆಯೊಂದನ್ನು ಗುರಿಯಾಗಿಟ್ಟುಕೊಂಡು ‘ಲಿಟ್ಲ್‌ ಬಾಯ್‌’ ಅಣು ಬಾಂಬನ್ನು ಧಸಕ್ಕೆಂದು ಬೀಳಿಸಿ ಹೊರಟು ಹೋಯಿತು. ಸುಮಾರು ನಾಲ್ಕೂವರೆ ಟನ್‌ ತೂಕದ ‘ಲಿಟ್ಲ್‌ ಬಾಯ್‌’ ತನ್ನ ಗುರಿಗಿಂತ ಕೇವಲ ೮೦೦ ಅಡಿ ದೂರಬಿತ್ತು. ಅಣು ಬಾಂಬಿಗೆ ಇದ್ಯಾವ ಲೆಕ್ಕ. ಹಿರೋಶಿಮಾ ಚಿಂದಿಯಾಯಿತು. ಇದಾದ ಮೂರು ದಿನಗಳ ನಂತರ ಇನ್ನೊಂದು ಅಣುಬಾಂಬ್‌ ‘ಫ್ಯಾಟ್‌ ಮ್ಯಾನ್‌’ ಬಿತ್ತು. ನಾಗಾಸಾಕಿ ಚಿಂದಿಯಾಯಿತು. ಜಪಾನ್‌ ಅಮೆರಿಕಕ್ಕೆ ಶರಣಾಯಿತು. ಅಲ್ಲಿಗೆ ಎರಡನೇ ಮಹಾಯುದ್ಧ ಮುಗಿಯಿತು. ಆದರೆ, ೬೦ ವರ್ಷ ಕಳೆದರೂ ಅಂದು ಸ್ಪೋಟಗೊಂಡ ಅಣುಬಾಂಬಿನ ದುಷ್ಪರಿಣಾಮ ಇಂದಿಗೂ ಮುಗಿದಿಲ್ಲ.

ಇತಿಹಾಸದ ಯುದ್ಧಗಳಲ್ಲಿ ಇದೆರಡೇ ಬಾರಿ ಅಟಂ ಬಾಂಬ್‌ ಸಿಡಿದದ್ದು. ನಡೆದ ಸಣ್ಣ ಸಣ್ಣ ಯುದ್ಧದಲ್ಲಿ ಅಟಂ ಬಾಂಬ್‌ ಬಳಕೆಯಾಗಿಲ್ಲ. ಆದರೆ, ಇಂದು ಅಮೆರಿಕ ಅಷ್ಟೇ ಅಲ್ಲ, ಅಂದು ಸಿಡಿದ ಬಾಂಬುಗಳಿಗಿಂತ ೧೦೦೦ ಪಟ್ಟು ಶಕ್ತಿಶಾಲಿ ಬಾಂಬುಗಳನ್ನು ಬಚ್ಚಿಟ್ಟುಕೊಂಡು ಕುಳಿತಿವೆ ಅನೇಕ ದೇಶಗಳು. ಅಮಗಳಲ್ಲಿ ಭಾರತ ಪಾಕಿಸ್ತಾನಗಳು ಎರಡು ದೇಶಗಳು. ಈಗ ಇರಾನ್‌ ಇಡೀ ವಿಶ್ವವನ್ನೇ ಎದುರುಹಾಕಿಕೊಂಡು ಅಣು ಬಾಂಬ್‌ ತಯಾರಿಸುತ್ತಿದೆ. ಇವೆಲ್ಲಾ ಬಾಂಬುಗಳು ಸಿಡಿಯದೇ ಇರುತ್ತವಾ? ಸಿಡಿದರೆ ಭೂಮಿಯ ಮೇಲೆ ಯಾರು ಬದುಕಿರುತ್ತಾರೆ. ಹೋಗಲಿ ಭೂಮಿಯಾದರೂ ಇರುತ್ತದಾ? ಗೊತ್ತಿಲ್ಲ. ಇದಕ್ಕೆ ವಿಜ್ಞಾನದ ಯಾವ ಸಿದ್ಧಾಂತ ಉತ್ತರಿಸುತ್ತದೆ!

ಡಿಯರ್‌ ಐನ್‌ಸ್ಟೈನ್‌,
ಆದರೆ, ನನಗೆ ಈ ಬಾಂಬುಗಳ ಹೆದರಿಕೆಯಿಲ್ಲ ಗೊತ್ತಾ? ಈ ಬಾಂಬುಗಳಷ್ಟೇ ಅಪಾಯಕಾರಿಯಾಗುತ್ತಿರುವ ಧರ್ಮಾಂಧತೆಯ ಬಗ್ಗೆ ನನಗೆ ಭಯವಾಗಿದೆ. ಧರ್ಮದ ಹೆಸರು ಹೇಳಲೂ ಅಂಜಿಕೆಯಾಗುತ್ತಿದೆ. ಒಂದೊಂದು ಧರ್ಮದ ಹೆಸರೂ ನನ್ನ ಬೆನ್ನಹುರಿಯಲ್ಲಿ ಲಿಟ್ಲ್‌ ಬಾಯ್‌, ಫ್ಯಾಟ್‌ ಮ್ಯಾನ್‌ ಎಂಬಷ್ಟೇ ಚಳಿಯನ್ನುಂಟು ಮಾಡುತ್ತವೆ. ಜಗತ್ತಿನ ಯಾಮದೋ ಮೂಲೆಯಲ್ಲಿ ಸಿಡಿದ ಧಾರ್ಮಿಕ ಸ್ಫೋಟ ಇನ್ನೊಂದು ಮೂಲೆಯನ್ನೂ ಸುಟ್ಟುಹಾಕುತ್ತದೆ. ಜಗತ್ತಿಗೆ ಅಟಂಬಾಂಬಿನಷ್ಟೇ ಧರ್ಮಾಂಧತೆಯಿಂದಲೂ ಅಪಾಯವಿದೆ. ಇನ್ನೊಂದು ಜಾಗತಿಕ ಯುದ್ಧದ ಭೀತಿಯನ್ನು ಹುಟ್ಟಿಸುತ್ತದೆ.

ಇನ್ನು ಎಷ್ಟು ಸಾವಿರ ಜನರಿಗೆ ನನ್ನ ಪ್ರತಿಷ್ಠಾನದಿಂದ ‘ನೊಬೆಲ್‌ ಶಾಂತಿ ಪ್ರಶಸ್ತಿ’ ನೀಡಿದರೂ ಅಷ್ಟೇ... ಭೂಮಿ ಎಂದೂ ಶಾಂತಿಯಿಂದ ಇರದು.

ಇಂತಿ ಭಯಭೀತ,
ಆಲ್‌ಫ್ರೆಡ್‌ ನೊಬೆಲ್‌

Kannada Prabha issue dated February 20, 2006

Religion is more Scarier than the Atom Bomb!

No comments: