Tuesday, March 21, 2006

‘ಮಿಸ್‌ ಇಂಡಿಯಾ’ಗಳು ಹೆಚ್ಚುತ್ತಿದ್ದಾರೆ ಎಚ್ಚರಿಕೆ!

ಭುವನ ಸೌಂದರ್ಯದಲ್ಲಿ ಭಾರತ ನಂಬರ್-೧, ಗ್ರಾನ್‌ ಸ್ಲಾಂ ರ್ಯಾಂಕಿಂಗ್‌ ನಂ.೨ -
ಊರ್ವಶಿಗೆ ಮೊದಲ ಮಿಸ್‌ ಇಂಡಿಯಾ ಯೂನಿವರ್ಸ್‌ ರಂಭೆ ಪತ್ರ

ನಿಂಗೊತ್ತಾ? ಜಾಗತಿಕ ‘ಗ್ರಾನ್‌ ಸ್ಲಾಂ’ ಸೌಂದರ್ಯದಲ್ಲಿ ಭಾರತಕ್ಕೆ ೨ನೇ ಸ್ಥಾನವಿದೆ. ಭುವನ ಸುಂದರಿ ಸ್ಪರ್ಧೆಯನ್ನಷ್ಟೇ ಲೆಕ್ಕಕ್ಕೆ ಹಿಡಿದರೆ ಭಾರತಕ್ಕೆ ೧ನೇ ಗ್ರಾನ್‌ ಸ್ಲಾಂ ಪಟ್ಟ! ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತಕ್ಕೆ ೩ನೇ ರ್ಯಾಂಕ್‌. ಮಿಸ್‌ ಇಂಟರ್‌ನ್ಯಾಶನಲ್‌ ಹಾಗೂ ಮಿಸ್‌ ಅರ್ಥ್‌ ಸ್ಪರ್ಧೆ ಭಾರತಕ್ಕೆ ತುಸು ಹೊಸತಾದ್ದರಿಂದ ಭಾರತದ ರ್ಯಾಂಕ್‌ ಇನ್ನೂ ಏರಿಲ್ಲ. ಆದರೂ, ಕ್ರಮವಾಗಿ ೫ ಹಾಗೂ ೧೨ನೇ ಸ್ಥಾನ ಭಾರತಕ್ಕಿದೆ.

ಊರ್ವಶಿ, ಊರ್ವಶಿ..
ಇದೂನೂ ಟೇಕ್‌ ಇಟ್‌ ಈಸಿ ಪಾಲಿಸಿ?

ಅಲ್ಲಾ ಕಣೆ, ಮೊನ್ನೆ ರಾತ್ರಿ ಟೀವೀಲಿ ಮಿಸ್‌ ಇಂಡಿಯಾ ಸ್ಪರ್ಧೆ ನೋಡಿದ್ಯಾ? ನಾನು ಯಾವ ಪ್ರೋಗ್ರಾಂ ಮಿಸ್‌ ಮಾಡಿದ್ರೂ ಈ ಸೌಂದರ್ಯ ಸ್ಪರ್ಧೆ ನೇರಪ್ರಸಾರ ನೋಡೋಕ್‌ ಮಾತ್ರ ಮರೆಯೋಲ್ಲ. ಈ ಸ್ಪರ್ಧೇಲಿ ಭಾಗವಹಿಸೋವ್ರಲ್ಲಿ ನನಗಿಂತ ಸುಂದರಿ ಯಾರಾದ್ರೂ ಇದ್ದಾಳಾ ಅಂತ ಆತಂಕದಿಂದಾನೇ ನೋಡ್ತೇನೆ. ಆಮೇಲೆ ಯಾರೂ ಇಲ್ಲಾಂತ ಖಚಿತ ಮಾಡ್ಕೊಂಡು ಸಮಾಧಾನ ಪಡ್ತೇನೆ! ಅಲ್ವಾ ಮತ್ತೆ... ನನಗಿಂತ ಸುಂದರಿ ಯಾರಾದ್ರೂ ಇರೋಕೆ ಸಾಧ್ಯಾನಾ?

ಏಯ್‌... ನಿನ್‌ ಬಗ್ಗೆ ಹೇಳ್ತಿಲ್ಲ ಕಣೆ. ನೀನೂ ನನ್‌ ಥರಾ ಸುಂದರೀನೇ. ಖರೇ ಹೇಳ್ಲಾ? ನಂಗೆ ತುಂಬಾ ವರ್ಷದಿಂದ ಒಂದು ಸಣ್ಣ ಅಹಂಕಾರ ಇತ್ತು. ನಾನು, ನೀನು, ಮೇನಕೆ ಮತ್ತು ತಿಲೋತ್ತಮೆ... ಮಾತ್ರ ತ್ರಿಲೋಕ ಸುಂದರಿಯರು. ನಮ್ಮನ್ನು ಬಿಟ್ರೆ ಇನ್ಯಾರೂ ಇಷ್ಟು ಸುಂದರಿಯರಲ್ಲ ಅನ್ನೋ ನಂಬಿಕೆಯಿತ್ತು. ಶ್ರೀಮಂತಿಕೆಗೆ ಕುಬೇರ ಹೇಗೋ, ಸೌಂದರ್ಯಕ್ಕೆ ನಾಮ ಹಾಗೆ ಅಂತ ನನ್ನೊಳಗೇ ಬೀಗ್ತಾಇದ್ದೆ. ಸೌಂದರ್ಯ ಅಂದರೆ ನಾಮ. ನಾಮ ಅಂದರೆ ಸೌಂದರ್ಯ ಅನ್ನೋ ಮಾತು ಕೇಳಿದಾಗೆಲ್ಲ ಖುಷಿಯಾಗ್ತಾ ಇತ್ತು. ಆದರೆ, ಈಗ ಸೌಂದರ್ಯ ಅಂದರೆ ಜನ ಐಶ್ವರ್ಯ ರೈ, ಸೆಕ್ಸಿ ಅಂದರೆ ಮಲ್ಲಿಕಾ ಶೆರಾವತ್‌ ಅಂತಾರೆ. ನಂಗೆ ಬೇಜಾರಾಗಲ್ವಾ ಹೇಳು? ನಿಂಗೂ ಬೇಜಾರಾಗಿರಬೇಕಲ್ವಾ? ಮೇನಕೆ, ತಿಲೋತ್ತಮೆಗೂ ಆಗಿರುತ್ತೆ ಬಿಡೆ.

ಇಷ್ಟಕ್ಕೂ ಈ ಮಿಸ್‌ ಇಂಡಿಯಾ ಸ್ಪರ್ಧೆ ಇದೆಯಲ್ಲಾ. ಇದು ಅಮೆರಿಕ ಮತ್ತು ಯೂರೋಪ್‌ನ ಸೌಂದರ್ಯ ಸ್ಪರ್ಧೆಗಳ ಮಾದರಿಯಲ್ಲಿ ಆರಂಭವಾದದ್ದು ಅಂತ ಮೊನ್ನೆ ಇಂದ್ರ ಹೇಳಿದ ಕಣೆ. ಆರಂಭದಲ್ಲಿ ’ಬಿಕಿನಿ ಡ್ರೆಸ್‌’ ಕಾರ್ಯಕ್ರಮವಾಗಿ ಆರಂಭವಾಯ್ತಂತೆ. ಆಮೇಲೆ ಅಮ ಟೀವಿ ಕಾರ್ಯಕ್ರಮಗಳಾಗಿ ರೂಪಾಂತರವಾದವಂತೆ.

ಕನ್ನಡದ ಉದಯ ಚಾನಲ್‌ನಲ್ಲಿ ಆದರ್ಶ ದಂಪತಿಗಳು ಅನ್ನೋ ಕಾರ್ಯಕ್ರಮ ಬರ್ತಿತ್ತಲ್ಲ. ಈಗ ಈ-ಟೀವಿಯಲ್ಲಿ ‘ಸಿಲ್ಲಿ ಲಲ್ಲಿ’ ಧಾರಾವಾಹಿ ಬರುತ್ತಲ್ಲ... ಹಾಗೆ, ಮಿಸ್‌ ವರ್ಲ್ಡ್‌, ಮಿಸ್‌ ಯೂನಿವರ್ಸ್‌, ಮಿಸ್‌ ಇಂಡಿಯಾ ಎಲ್ಲಾ ಈಗ ದುಡ್ಡು ಮಾಡೋ ಟೀವಿ ಕಾರ್ಯಕ್ರಮಗಳು ಅಷ್ಟೇ.

ಆದರ್ಶ ದಂಪತಿ ಕಾರ್ಯಕ್ರಮದಲ್ಲಿ ಬಹುಮಾನ ಪಡೆಯೋರು ನಿಜವಾಗ್ಲೂ ಆದರ್ಶ ದಂಪತಿಗಳು ಹೇಗಲ್ವೋ, ಈ ಸೌಂದರ್ಯ ಸ್ಪರ್ಧೆಯಲ್ಲಿ ಬಹುಮಾನ ಪಡೆಯೋರೂ ನಿಜವಾಗಿ ಸುಂದರಿಯರಲ್ಲ. ಈ ವರ್ಷದ ಮಿಸ್‌ ಇಂಡಿಯಾ ನೇಹಾ ಕಪೂರ್‌ ನೋಡು. ಬ್ಯೂಟಿಯಂತೆ ಬ್ಯೂಟಿ! ಈ ವರ್ಷ ಮಿಸ್‌ ಯೂನಿವರ್ಸ್‌ನಲ್ಲಿ ಸೋಲು ಗ್ಯಾರಂಟಿ.

ಈ ಜಗತ್ತಿನಲ್ಲಿ ಸುಂದರಿಯರು ಯಾರಾದರೂ ಇದ್ದರೆ ನಾಮ ನಾಲ್ಕೇ ಜನ ಅಂತ ಇಂದ್ರ ಹೇಳಿದ್ದಾನೆ ಕಣೆ. ಸೋ ನೈಸ್‌ ಆಫ್‌ ಹಿಮ್‌ ಅಲ್ವಾ?

ಈಗಂತೂ, ಪ್ರಪಂಚದಲ್ಲಿ ನೂರಾರು ರೀತಿಯ ಸುಂದರಿಯರ ಸ್ಪರ್ಧೆ ನಡೀತಿದೆ. ಮಿಸ್‌ ಯೂನಿವರ್ಸ್‌, ಮಿಸ್‌ ವರ್ಲ್ಡ್‌, ಮಿಸ್‌ ಇಂಟರ್‌ನ್ಯಾಶನ್‌, ಮಿಸ್‌ ಅರ್ತ್‌, ಮಿಸ್‌ ಇಂಟರ್‌ನ್ಯಾಶನ್‌ ಟೂರಿಸಂ, ಮಿಸ್‌ ಕಾಂಟಿನೆಂಟಲ್‌... ನಿಂದ ಹಿಡಿದು ಭಾರತದ ಮಿಸ್‌ ಇಂಡಿಯಾ, ಮಿಸ್‌ ಬೆಂಗಳೂರು, ಮಿಸ್‌ ದೊಡ್ಡಬಳ್ಳಾಪುರದ ವರೆಗೆ ಪ್ರತಿ ಊರು ಕೇರಿಗೂ ಒಂದೊಂದು ಸ್ಪರ್ಧೆಯಿದೆ. ಅಷ್ಟೇ ಅಲ್ದೇ, ಸುಡೊಕು ಸುಂದರಿ, ಬಿಕನಿ ಸುಂದರಿ, ಸೆಕ್ಸಿ ಸುಂದರಿ, ಮಂದಹಾಸ ಸುಂದರಿ, ಕೇಶ ಸುಂದರಿ, ತ್ವಚಾ ಸುಂದರಿ, ನೀಳ್ಗಾಲ ಸುಂದರಿ, ಇನಿದನಿಯ ಸುಂದರಿ... ಓಹೋಹೋ... ಸುಂದರಿಯರ ಪಟ್ಟಿ ಉದ್ದವಿದೆ. ಸಾಲದು ಅಂತ ಮದುವೆಯಾದ ಶ್ರೀಮತಿ ಸುಂದರಿ, ವೃದ್ಧ ಸುಂದರಿ, ಡುಮ್ಮಿ ಸುಂದರಿ ಅಂತೆಲ್ಲಾ ಇನ್ನೂ ಹಲವಾರು ಸ್ಪರ್ಧೆಗಳಿವೆ.

ಅಷ್ಟೇ ಅಲ್ಲ ಊರ್ವಶಿ,

ನಿಂಗೊತ್ತಾ? ಭಾರತದಲ್ಲಿ ಸುಂದರಿಯರ ಸಂಖ್ಯೆ ಹೆಚ್ಚುತ್ತಿದೆ. ಜಾಗತಿಕ ’ಗ್ರಾನ್‌ ಸ್ಲಾಂ’ ಸೌಂದರ್ಯದಲ್ಲಿ ಭಾರತಕ್ಕೆ ೨ನೇ ಸ್ಥಾನವಿದೆ. ಭುವನ ಸುಂದರಿ ಸ್ಪರ್ಧೆಯನ್ನಷ್ಟೇ ಲೆಕ್ಕಕ್ಕೆ ಹಿಡಿದರೆ ಭಾರತಕ್ಕೆ ೧ನೇ ಗ್ರಾನ್‌ ಸ್ಲಾಂ ಪಟ್ಟ! ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತಕ್ಕೆ ೩ನೇ ರ್ಯಾಂಕ್‌. ಮಿಸ್‌ ಇಂಟರ್‌ನ್ಯಾಶನಲ್‌ ಹಾಗೂ ಮಿಸ್‌ ಅರ್ಥ್‌ ಸ್ಪರ್ಧೆ ಭಾರತಕ್ಕೆ ತುಸು ಹೊಸತಾದ್ದರಿಂದ ಭಾರತದ ರ್ಯಾಂಕ್‌ ಇನ್ನೂ ಏರಿಲ್ಲ. ಆದರೂ, ಕ್ರಮವಾಗಿ ೫ ಹಾಗೂ ೧೨ನೇ ಸ್ಥಾನ ಭಾರತಕ್ಕಿದೆ.

ಗ್ಲೋಬಲ್‌ ಬ್ಯೂಟಿಸ್‌ ಎಂಬ ಪ್ರತಿಷ್ಠಿತ ವೆಬ್‌ಸೈಟು ಈ ಲೆಕ್ಕವನ್ನು ಇಟ್ಟಿದೆ. ಪ್ರತಿ ಸೌಂದರ್ಯ ಸ್ಪರ್ಧೆಯಲ್ಲಿ ಆಯಾ ದೇಶದ ಪ್ರಗತಿಗನುಗುಣವಾಗಿ ಅಂಕಗಳನ್ನು ನೀಡುವ ಈ ವೆಬ್‌ಸೈಟು ಆ ಅಂಕಗಳ ಆಧಾರದಲ್ಲಿ ಸುಮಾರು ನೂರಕ್ಕಿಂತ ಹೆಚ್ಚು ದೇಶಗಳಿಗೆ ಸೌಂದರ್ಯದ ಗ್ರಾನ್‌ ಸ್ಲಾಂ ರ್ಯಾಂಕ್‌ ನೀಡಿದೆ. (ಪಟ್ಟಿ ನೋಡಿ)

ಗ್ಲೋಬಲ್‌ ಬ್ಯೂಟಿಸ್‌ ಗ್ರಾನ್‌ ಸ್ಲಾಂ
೨೦೦೫ರಲ್ಲಿ ಸ್ಥಾನ ----- ದೇಶ --------- ಅಂಕಗಳು
೧. ----------------- ವೆನಿಜುವೆಲಾ ----- ೬೦೧.೦೦
೨. ----------------- ಭಾರತ --------- ೫೫೭.೫೦
೩. ----------------- ಅಮೆರಿಕಾ ------- ೪೬೫.೦೦
೪. ----------------- ದಕ್ಷಿಣ ಆಫ್ರಿಕಾ --- ೩೪೨.೦೦
೫. ----------------- ಕೊಲಂಬಿಯಾ --- ೩೨೬.೦೦
೬. ----------------- ಪೋರ್ಟರಿಕೋ --- ೨೮೩.೦೦
೭. ----------------- ರಷ್ಯಾ ---------- ೨೭೮.೫೦
೮. ----------------- ಫಿಲಿಪೈನ್ಸ್‌ ------ ೨೭೬.೫೦
೯. ----------------- ಸ್ಪೇನ್‌ ---------- ೨೭೫.೫೦
೧೦. --------------- ಪೆರು ----------- ೨೩೩.೦೦


ಹೀಗೆ ದಿಢೀರ್‌ ಆಗಿ ಭಾರತದ ಸುಂದರಿಯರ ಸಂಖ್ಯೆ ಹೆಚ್ಚಾಗಲು ಕಾರಣವೇನು ಅಂತ ನಂಗೆ ಕುತೂಹಲ ಉಂಟಾಯ್ತು. ಅದಕ್ಕೆ ಒಂದು ತನಿಖೆ ನಡೆಸಿದಾಗ ಸತ್ಯ ಏನೂಂತ ಗೊತ್ತಾಯ್ತು. ಕಳೆದ ೧೦ ವರ್ಷಗಳ ಈಚೆ, ಸೌಂದರ್ಯ ಸ್ಪರ್ಧೆಗಳ ಸಂಖ್ಯೆ ಹೆಚ್ಚಾಗಿದೆ. ಈ ಸಮಯದಲ್ಲೇ ಭಾರತದಲ್ಲಿ ಟೆಲಿವಿಷನ್‌ ಕ್ರಾಂತಿಯಾಗಿದೆ. ಬಟ್ಟೆ ಬಿಚ್ಚುವ ಫ್ಯಾಷನ್‌ಗೆ ಜನ ಒಪ್ಪಿಕೊಂಡಿದ್ದಾರೆ. ಇದನ್ನು ನೋಡಲು ಪುರುಷರು ಹುಚ್ಚೆದ್ದಿದ್ದಾರೆ. ಫ್ಯಾಷನ್‌ಗೆ ಖರ್ಚು ಮಾಡಲು ಭಾರತದಲ್ಲಿ ಸಾಕಷ್ಟು ಹಣವಿದೆ. ಹಾಗಾಗಿ, ಭಾರತದ ಮೇಲೆ ಸೌಂದರ್ಯ ಪ್ರಸಾಧನಗಳ ಕಂಪನಿಗಳ ಕಣ್ಣಿದೆ. ಅದಕ್ಕೇ, ಭಾರತದಲ್ಲಿ ಸೌಂದರ್ಯ ಉದ್ಯಮ ಬೆಳೆಸಲು ನಿರ್ಧರಿಸಿರೋ ಈ ಕಂಪನಿಗಳು ವಿಪರೀತ ಬಂಡವಾಳ ಹೂಡಿವೆ. ಯುವ ಜನತೆಯ ಕ್ರೇಜ್‌ ಹೆಚ್ಚಿಸಲು ಸಿಕ್ಕ ಸಿಕ್ಕ ಸೌಂದರ್ಯ ಸ್ಪರ್ಧೆ ಹಾಗೂ ಕಾರ್ಯಕ್ರಮಕ್ಕೆ ಪ್ರಾಯೋಜಕತ್ವ ವಹಿಸಿವೆ. ಈ ಹುಚ್ಚುಹೊಳೆಗೆ ಕೊಚ್ಚಿ ಹೋಗುತ್ತಿರುವ ನಮ್ಮ ಹುಡುಗ ಹುಡುಗಿಯರು ಫ್ಯಾಷನ್‌ ಲೋಕದ ದಾಸರಾಗುತ್ತಿದ್ದಾರೆ. ಪರಿಣಾಮವಾಗಿ ಜಗತ್ತಿನಲ್ಲೇ ಫ್ಯಾಷನ್‌ ಉದ್ಯಮ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೇಶ ಭಾರತವಾಗಿದೆ. ಅಜ್ಜಿಯರೂ ಬ್ಯೂಟಿ ಪಾರ್ಲರ್‌ಗೆ ಹೋಗ್ತಾ ಇರೋದೇ ಇದಕ್ಕೆ ಸಾಕ್ಷಿ!

ಇದು ತಪ್ಪಾ ಅಂತ ಕೇಳ ಬೇಡ ಊರ್ವಶಿ. ಕೆಲಮ ವಿಷಯಗಳಲ್ಲಿ ತಪ್ಪೋ ಸರಿಯೋ ಅನ್ನೋದು ಮುಖ್ಯವಲ್ಲ. ಇಷ್ಟವಾಗುತ್ತೋ ಇಲ್ಲವೋ ಅನ್ನೋದಷ್ಟೇ ವಾಸ್ತವವಾಗುತ್ತೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಜೆ.ಎಚ್‌. ಪಟೇಲ್‌ ಹೇಳಿದ್ದ ಮಾತು ನಿಜ ಕಣೆ. ’ಸೌಂದರ್ಯ ಸ್ಪರ್ಧೆಯನ್ನು ಯಾಕೆ ವಿರೋಧಿಸ್ತೀರಿ? ಸೌಂದರ್ಯ ಇರೋರು ತೋರಿಸ್ತಾರೆ. ಆಸಕ್ತಿ ಇರೋರು ನೋಡಿಕೊಳ್ತಾರೆ. ಉಳಿದೋರು ತಮ್ಮ ತಮ್ಮ ಕೆಲಸ ನೋಡಿಕೊಳ್ಳಲಿ...’ ಅಂತ.

ನಂಗೆ ಅದಲ್ಲ ಕಣೆ ಚಿಂತೆ. ಈಗಿನ ಮಿಸ್‌ ಇಂಡಿಯಾಗಳಾದರೋ ವರ್ಷ ಕಳೆದ ಕೂಡಲೇ ಮಾಜಿ ಆಗುತ್ತಾರೆ. ಆದರೆ, ಈ ದೇಶದ ಮೊಟ್ಟ ಮೊದಲ ಮಿಸ್‌ ಇಂಡಿಯಾಗಳಾದ ನಾವಿನ್ನೂ ಮಾಜಿಗಳಾಗದೇ ಹಾಗೂ ಹೀಗೂ ಈವರೆಗೂ ಉಳಿದುಕೊಂಡಿಡ್ವಿ. ಆದ್ರೆ, ಭಾರತದಲ್ಲಿ ಈ ರೀತಿ ಮಿಸ್‌ ಇಂಡಿಯಾಗಳ ಸಂಖ್ಯೆ ಹೆಚ್ಚುತ್ತಾ ಹೋದ್ರೆ ನಮ್ಮ ಸ್ಥಾನ ಎಲ್ಲಿ ಮಿಸ್‌ ಆಗುತ್ತೋ ಅಂತ ಕಾಳಜಿಯಾಗಿದೆ.

ನೀನಗೇನೂ ಅನ್ನಿಸ್ತಿಲ್ವಾ ಊರ್ವಶಿ? ಇದಕ್ಕೆ ನಿನ್ನದೇನು ಸಮಜಾಯಿಶಿ?

ಮೊದಲ ಮಿಸ್‌ ಇಂಡಿಯಾ ಯೂನಿವರ್ಸ್‌
ರಂಭೆ

Kannada Prabha issue dated March 20, 2006

Beware... Miss Indias are increasing!

No comments: