Tuesday, April 25, 2006

ದೇವೇಗೌಡರ ಆಶೀರ್ವಾದದ ಪರಿಣಾಮಗಳ ಅಧ್ಯಯನ

ಭೂತ, ವರ್ತಮಾನ ಹಾಗೂ ಭವಿಷ್ಯದಲ್ಲಿ ಅವರ ಆಶೀರ್ವಾದದಿಂದ ಏನೇನಾಗುತ್ತದೆ
- ಒಂದು ಸಂಶೋಧನಾ ಪ್ರಬಂಧ

‘ದೇವೇಗೌಡರ ಆಶೀರ್ವಾದ ಇಲ್ಲದಿದ್ದರೆ ಇಷ್ಟೆನ್ನೆಲ್ಲ ಮಾಡಲು ತಮ್ಮಿಂದ ಸಾಧ್ಯವಾಗುತ್ತಿರಲಿಲ್ಲ. ಇದರ ಸಂಪೂರ್ಣ ಕೀರ್ತಿ ದೇವೇಗೌಡರಿಗೇ ಸಲ್ಲಬೇಕು’ ಎಂದು ಧರ್ಮಸಿಂಗ್‌ ಕಳೆದ ವಾರ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದ್ದಾರೆ. ಇಂಥ ದೇವೇಗೌಡರ ಆಶೀರ್ವಾದ ಈಗ ಕುಮಾರಸ್ವಾಮಿಯವರಿಗೂ ಸಿಗಲು ಆರಂಭವಾಗಿದೆ! ಈ ಆಶೀರ್ವಾದದ ಫಲ ಹೇಗಿರುತ್ತದೆ ಎಂಬುದನ್ನು ನಾಮ ಕಾದು ನೋಡೋಣ ಮಗಾ.


ಪ್ರೀತಿಯ ಕುಮಾರಸಿಂಗನಿಗೆ,

ಈ ನಿನ್ನ ತಂದೆ ಗ್ರಾಮಸಿಂಗ ಮಾಡುವ ಆಶೀರ್ವಾದಗಳು. ಈಗಾಗಲೇ, ಮುಕ್ಕೋಟಿ ದೇವತೆಗಳು ಹಾಗೂ ಪಂಚಕೋಟಿ ಕನ್ನಡಿಗರ ಆಶೀರ್ವಾದ ಪಡೆದ ನಿನಗೆ ನನ್ನೊಬ್ಬನ ಆಶೀರ್ವಾದ ಮಾತ್ರ ಬಾಕಿ ಇತ್ತು. ಇಗೋ, ನಾನೂ ನಿನಗೆ ಆಶೀರ್ವಾದ ಮಾಡಿದ್ದೇನೆ. ಇದರೊಂದಿಗೆ, ಅತಿ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಆಶೀರ್ವಾದ ಪಡೆದ ಗಿನ್ನೆಸ್‌ ದಾಖಲೆ ನಿನ್ನದಾಗಬಹುದು.

ಬೈ ದ ವೇ ಮಗಾ, ಈ ಧರ್ಮಸಿಂಗರಿಗೆ ಈಗ ದಿಢೀರಾಗಿ ಧೈರ್ಯ ಬಂದಂತಿದೆ ಅಲ್ಲವಾ? ಅವರು ಮುಖ್ಯಮಂತ್ರಿ ಆಗಿದ್ದಾಗ ದೇವೇಗೌಡರ ವಿರುದ್ಧ ಒಂದಕ್ಷರ ಮಾತಾಡಲೂ ಅಂಜುತ್ತಿದ್ದರು. ಈಗ ನೋಡು, ಗೌಡರ ವಿರುದ್ಧ ಹೇಗೆ ಕಿಡಿಕಾರುವ ಸಾಮರ್ಥ್ಯ ಬಂದಿದೆ. ಈ ರೀತಿಯ ಶಕ್ತಿ ಅವರಿಗೆ ಎಲ್ಲಿಂದ ಬಂತು? ಯಾವ ಟಾನಿಕ್‌ ತಗೊಂಡರು ಗೊತ್ತಾಗ್ತಿಲ್ವೇ!

ಧರ್ಮಸಿಂಗರು ಸಹನೆಯ ಸಾಕ್ಷಾತ್‌ ಸ್ವರೂಪಿಯಷ್ಟೇ ಅಲ್ಲ... ಮಹಾ-ಸ್ವರೂಪಿ ಕೂಡ ಹೌದು. ಇನ್‌ಫ್ಯಾಕ್ಟ್‌ ಕುಮಾರಸ್ವಾಮಿ ಅವರಿಗಿಂತ ಧರ್ಮಸಿಂಗ್‌ ಸಹನೆ, ಮೆಲು ಮಾತು, ಸಮಚಿತ್ತದಲ್ಲಿ ಒಂದು ಮಣ ಹೆಚ್ಚೇ ತೂಗುತ್ತಿದ್ದರು. ಧರ್ಮಸಿಂಗರಿಗೂ ಕುಮಾರಸ್ವಾಮಿಗೂ ಎರಡು ಮೇಜರ್‌ ವ್ಯತ್ಯಾಸಗಳಿವೆ.

ವ್ಯತ್ಯಾಸ ಒಂದು - ಕುಮಾರಸ್ವಾಮಿ ನಿದ್ದೆ ಮಾಡುಮದೇ ಅಪರೂಪ. ಆದರೆ, ಧರ್ಮಸಿಂಗ್‌ ನಿದ್ದೆಯಿಂದ ಎದ್ದೇಳುಮದರಲ್ಲೂ ಬಹಳ ಸಹನಾಶೀಲ! ವ್ಯತ್ಯಾಸ ಎರಡು - ಯಾಮದೇ ವಿಷಯ ಎದುರಾದರೂ ಧರ್ಮಸಿಂಗ್‌ ನೋಡೋಣ್‌ ಬಿಡ್ರಿ... ಮಾಡೋಣ್‌ ಬಿಡ್ರಿ... ಎನ್ನುವ ಅಣಿಮುತ್ತು ಉದುರಿಸುತ್ತಿದ್ದರು. ಈಗ ಕುಮಾರಸ್ವಾಮಿ ಯಾಮದೇ ವಿಷಯ ಎದುರಾದರೂ ಒಂದು ದಿಢೀರ್‌ ಭರವಸೆ ಬಿಸಾಕುತ್ತಾರೆ!

ಧರ್ಮಸಿಂಗ್‌ ಮುಖ್ಯಮಂತ್ರಿ ಖುರ್ಚಿಯಲ್ಲಿ ಕುಳಿತಷ್ಟೂ ಕಾಲ, ಒಂದು ಕ್ಷಣವೂ ತಮ್ಮ ಸಹನೆಯನ್ನು ಕಳೆದುಕೊಂಡವರಲ್ಲ. ಪತ್ರಕರ್ತರನ್ನೂ ಸೇರಿದಂತೆ ಯಾರ ಮೇಲೂ ಸಿಡುಕಿದವರಲ್ಲ. ಸೋನಿಯಾ ಗಾಂಧಿಯವರನ್ನೂ, ದೇವೇಗೌಡರನ್ನೂ ಸಮಚಿತ್ತದಿಂದ ಸ್ವೀಕರಿಸಿದರು. ಗೌಡರ ಆದೇಶವನ್ನೂ ಶಿರಸಾವಹಿಸಿದರು. ಸೋನಿಯಾ ಕಮಾಂಡನ್ನೂ ಅಕ್ಷರಶಃ ಪಾಲಿಸಿದರು. ಆದ್ದರಿಂದಲೇ, ದೇವೇಗೌಡರಿಂದಲೂ ಭೇಷ್‌ ಎನ್ನಿಸಿಕೊಂಡರು. ಸೋನಿಯಾರಿಂದಲೂ ಭಲೆ ಅನ್ನಿಸಿಕೊಂಡರು.

ಇದೊಂದು ಮುಖ್ಯವಾದ ವಿಚಾರ. ದೇವೇಗೌಡರು ಬೇರೆ ಪಕ್ಷದ ನರಪಿಳ್ಳೆ ಹಾಗಿರಲಿ, ಸೊಳ್ಳೆಯನ್ನು ಕೂಡ ಹೊಗಳುವಂಥವರಲ್ಲ. ಅಂಥವರೂ ಸಹ ಧರ್ಮಸಿಂಗರನ್ನು ಅತ್ಯುತ್ತಮ ಮುಖ್ಯಮಂತ್ರಿ ಎಂದೇ ಹೊಗಳುತ್ತಿದ್ದರು! ಹೀಗೆ ದೇವೇಗೌಡರ ಆಶೀರ್ವಾದ ಪಡೆದ ಕಾಂಗ್ರೆಸ್ಸಿನ ಏಕೈಕ ವ್ಯಕ್ತಿ ಧರ್ಮಸಿಂಗ್‌ ಮಾತ್ರ ಎಂದು ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ದಾಖಲೆಯಾಗಬಹುದು!

ಅದೇ ರೀತಿ, ದೇಶಾದ್ಯಂತ ಇಡೀ ಕಾಂಗ್ರೆಸ್ಸು ದೇವೇಗೌಡರನ್ನು ವಿರೋಧಿಸುತ್ತಿದ್ದರೂ ಒಬ್ಬ ಧರ್ಮಸಿಂಗ್‌ ಮಾತ್ರ ದೇವೇಗೌಡರನ್ನು ಸ್ತುತಿಸುತ್ತಿದ್ದರು. ಸರ್ಕಾರ ಪತನವಾದ ಕ್ಷಣದಲ್ಲೂ ಧರ್ಮಸಿಂಗ್‌ ದೇವೇಗೌಡರ ಪರವಾಗೇ ಮಾತನಾಡಿದ್ದರು. ಎಲ್ಲಾ ತಪ್ಪೂ ಗೌಡರ ಮಗಂದೇ. ದೇವೇಗೌಡರದ್ದು ಯಾಮದೇ ತಪ್ಪಿಲ್ಲ ಎಂದು ಧರ್ಮಸಿಂಗ್‌ ಸಾರಿ.. ಸಾರಿ.. ಹೇಳಿದ್ದರು. ಇಷ್ಟು ಆತ್ಮೀಯವಾಗಿತ್ತು ದೇವೇಗೌಡರು ಮತ್ತು ಧರ್ಮಸಿಂಗರ ಸಂಬಂಧ.

ಮಗಾ... ಈಗ ನೋಡು ಪರಿಸ್ಥಿತಿ ಹೇಗಾಗಿದೆ! ಧರ್ಮಸಿಂಗ್‌ -ದೇವೇಗೌಡರ ಸಂಬಂಧ ಭಾರತ -ಪಾಕಿಸ್ತಾನ್‌ ಥರ ಆಗಿದೆ! ಎಂದೂ ದೇವೆಗೌಡರಿಗೆ ಎದುರಾಡದ ಧರ್ಮಸಿಂಗ್‌ ಈಗ ದೇವೇಗೌಡರ ವಿರುದ್ಧವೇ ನೇರಾನೇರ ಆರೋಪ ಮಾಡುತ್ತಿದ್ದಾರೆ. ದೇವೇಗೌಡರು ತಮಗೆ ಬರೆದ ’ಪ್ರೇಮಪತ್ರ’ಗಳ ಸಂಪುಟ ಪ್ರಕಟಿಸುತ್ತೇನೆ ಎಂದು ಧರ್ಮಸಿಂಗರು ಧಮಕಿ ಹಾಕಿದ್ದಾರೆ. ತಾಮ ಮುಖ್ಯಮಂತ್ರಿ ಆಗಿದ್ದಾಗ ದೇವೇಗೌಡರು ಸರ್ಕಾರದ ಆಡಳಿತದ ಮೇಲೆ ವಿಪರೀತ ಒತ್ತಡ ಹೇರುತ್ತಿದ್ದರು ಎಂದು ಆರೋಪಿಸಿದ್ದಾರೆ. ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟಿನಲ್ಲಿ ಪದೇ ಪದೆ ಸೋಲುತ್ತಿರುಮದಕ್ಕೆ ದೇವೇಗೌಡರ ತಪುý್ಪ ತಪುý್ಪ ಸಲಹೆಗಳೇ ಕಾರಣ ಎಂದು ಧರಂ ಸ್ಪಷ್ಟೀಕರಣ ನೀಡಿದ್ದಾರೆ.

ಹಾಗಾದರೆ, ದೇವೇಗೌಡರು ರಾಜ್ಯದ ಆಡಳಿತಕ್ಕೆ ಅಡ್ಡಿ ಮಾಡುತ್ತಿದ್ದ ರಹಸ್ಯಗಳನ್ನು ಧರ್ಮಸಿಂಗ್‌ ತಾಮ ಮುಖ್ಯಮಂತ್ರಿಯಾಗಿದ್ದಾಗಲೇ ಯಾಕೆ ಬಹಿರಂಗ ಮಾಡಲಿಲ್ಲ ಹೇಳಿ? ಒಂದು -ಆಗ ದೇವೇಗೌಡರ ವಿರುದ್ಧ ಮಾತನಾಡಲು ಧರ್ಮಸಿಂಗರಿಗೆ ಧೈರ್ಯ ಇರಲಿಲ್ಲ. ಅಥವಾ ಆಗ ದೇವೇಗೌಡರು ನೀಡಿದ ಸಲಹೆಗಳೆಲ್ಲ ತಪುý್ಪ ತಪುý್ಪ ಎಂದು ಧರ್ಮಸಿಂಗರಿಗೆ ಈಗ ಜ್ಞಾನೋದಯವಾಗಿದೆ! ಅಥವಾ, ದೇವೇಗೌಡರ ಸಲಹೆಗಳು ತಪುý್ಪ ಎಂದು ಗೊತ್ತಿದ್ದೂ ಅವನ್ನೇ ಪಾಲಿಸಿ ಧರ್ಮಸಿಂಗ್‌ ರಾಜ್ಯಕ್ಕೆ ಅನ್ಯಾಯ ಮಾಡಿದರು. ಈಗ ಗೌಡರ ರಹಸ್ಯಗಳನ್ನು ಬಹಿರಂಗಮಾಡಿ ಧರ್ಮಸಿಂಗರು ರಾಜ್ಯಕ್ಕೆ ನ್ಯಾಯದಾನ ಮಾಡುತ್ತಿದ್ದಾರೆ!

ಎನಿವೇ, ಒಂದಂತೂ ಸ್ಪಷ್ಟ. ಆಗಿನ ಧರ್ಮಸಿಂಗ್‌ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ಏನೆಲ್ಲಾ ಆಯಿತು, ರಾಜ್ಯಕ್ಕೆ ಯಾವ್ಯಾವ ಸ್ಥಿತಿ ಒದಗಿತು, ಧರ್ಮಸಿಂಗರಿಗೆ ಯಾವ ರೀತಿಯ ಹೆಸರು ಬಂತು... ಎಲ್ಲವೂ ದೇವೇಗೌಡರ ಆಶೀರ್ವಾದದ ಫಲ ಎಂಬುದು ಎಲ್ಲರಿಗೂ ಗೊತ್ತಾಗಿರುವ ಸತ್ಯ.

ಆದರೆ, ಈಗಿನ ರಾಜ್ಯ ಸರ್ಕಾರಕ್ಕೆ ಈವರೆಗೂ ಗೌಡರ ಆಶೀರ್ವಾದ ಇರಲಿಲ್ಲ. ಅದರಿಂದಾಗಿ ರಾಜ್ಯದಲ್ಲಿ ಏನೇನು ಆಗಿದೆ, ರಾಜ್ಯಕ್ಕೆ ಯಾವ ರೀತಿಯ ಪ್ರಚಾರ ಸಿಕ್ಕದೆ, ಕುಮಾರಸ್ವಾಮಿಯವರಿಗೆ ಯಾವ ರೀತಿಯ ಹೆಸರು ಬಂದಿದೆ ನೋಡಿ...

ಈ ಎರಡೂ ಸರ್ಕಾರದ ಅವಧಿಗಳನ್ನು ಆಧಾರವಾಗಿಟ್ಟುಕೊಂಡು ದೇವೇಗೌಡರ ಆಶೀರ್ವಾದದ ಫಲಶೃತಿ ಹೇಗಿರುತ್ತದೆ ಎಂಬುದರ ತುಲನಾತ್ಮಕ ಅಧ್ಯಯನ ಆಗಬೇಕು. ಸರಿಯಾಗಿ ಅಧ್ಯಯನ ಮಾಡಿದರೆ, ಇದೊಂದು ಒಳ್ಳೆಯ ಪಿಎಚ್‌ಡಿ ಪ್ರಬಂಧವಾದೀತು ಅಥವಾ ಜ್ಯೋತಿಷ್ಯ ಶಾಸ್ತ್ರಕ್ಕೆ ಒಂದು ಉತ್ತಮ ಗ್ರಂಥವಾದೀತು. ’ದೇವೇಗೌಡರ ಆಶೀರ್ವಾದದ ಫಲಶೃತಿ : ಭೂತ, ವರ್ತಮಾನ ಹಾಗೂ ಭವಿಷ್ಯ’ -ಎಂದು ಈ ಪ್ರಬಂಧ ಅಥವಾ ಗ್ರಂಥಕ್ಕೆ ಹೆಸರಿಡಬಹುದು!

ದೇವೇಗೌಡರ ಆಶೀರ್ವಾದದ ಬಲದಿಂದ ಧರ್ಮಸಿಂಗ್‌ ಕರ್ನಾಟಕದ ಮಾಹಿತಿ ತಂತ್ರಜ್ಞಾನ ಉದ್ಯಮಿಗಳನ್ನು ಬಹುತೇಕ ಓಡಿಸಿದರು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆಗೆ ಹಿಡಿದಿದ್ದ ಇನ್‌ಫೋಸಿಸ್‌ ನಾರಾಯಣಮೂರ್ತಿ ಎಂಬ ಗ್ರಹಣವನ್ನು ಬಿಡಿಸಿದರು. ಜಲ ನ್ಯಾಯಾಧೀಕರಣದ ವಿರುದ್ಧವೇ ಅರ್ಜಿ ಸಲ್ಲಿಸಿ ನೆರೆ ರಾಜ್ಯಗಳಿಗೆ ಅನುಕೂಲ ಮಾಡಿಕೊಟ್ಟರು. ಬೆಂಗಳೂರು ಫಾರ್ವಡ್‌ ಎಂಬ ನಗರಾಭಿವೃದ್ಧಿ ವೇದಿಕೆಯನ್ನು ಸಂಪೂರ್ಣ ವಿಸರ್ಜನೆ ಮಾಡಿದರು. ಬೆಂಗಳೂರು -ಮೈಸೂರು ಕಾರಿಡಾರ್‌ ವಿರುದ್ಧ ಸುಪ್ರೀಂಕೋರ್ಟ್‌ ವರೆಗೆ ಹೋಗಿ ನೈಸ್‌ ಕಂಪನಿಯ ಕೀರ್ತಿ ಹೆಚ್ಚಿಸಿದರು. ಮೆಟ್ರೋ ರೈಲಿಗೆ ಮೊದಲು ಬ್ರೇಕ್‌ ಹಾಕಿದರೂ ಕೊನೆಗೆ ಬೆಂಗಳೂರಿಗೆ ಮೆಟ್ರೋ ಹಾಗೂ ಮಾನೋ ಎರಡೂ ರೈಲು ಸಿಗುವಂತೆ ಮಾಡಿದರು. ಅರ್ಕಾವತಿ ಬಡಾವಣೆಯಲ್ಲಿ ಸರ್ಕಾರಕ್ಕೆ ಕಪಾಳಮೋಕ್ಷವಾದ ನಂತರವೇ ಪ್ರಜೆಗಳಿಗೆ ಸೈಟು ಸಿಗುವಂತೆ ಮಾಡಿದರು. ಭ್ರಷ್ಟಾಚಾರದಲ್ಲಿ ಕರ್ನಾಟಕ ನಂಬರ್‌ ಒನ್‌ ಎಂಬ ಸುದ್ದಿ ಸುಳ್ಳು ಎಂದು ವಿಶ್ವ ಬ್ಯಾಂಕಿನಿಂದಲೇ ಸ್ಪಷ್ಟೀಕರಣ ತರಿಸಿದರು. ದರಿದ್ರನಾರಾಯಣ ಹೆಸರಿನಲ್ಲಿ ಕನ್ನಡೇತರರಿಗೆಲ್ಲ ಬೆಂಗಳೂರಿನಲ್ಲಿ ನಿವೇಶನದ ಹಕ್ಕು ಸಿಗುವಂತೆ ಮಾಡಿದರು. ಸಿದ್ದರಾಮಯ್ಯನವರು ಅಹಿಂದ ಸಂಘಟನೆ ಸ್ಥಾಪನೆ ಮಾಡಲು ಕಾರಣರಾದರು. ಸಿಂಧ್ಯಾಗೆ ತ್ರಿಶಂಕು ಸ್ವರ್ಗ ತೋರಿಸಿದರು. ಎಲ್ಲಕ್ಕಿಂತ ಹೆಚ್ಚಾಗಿ, ಸ್ವತಃ ತಮ್ಮ ಅಧಿಕಾರ ಬಿಟ್ಟುಕೊಟ್ಟು ಕರ್ನಾಟಕಕ್ಕೆ ಒಬ್ಬ ಹೊಸ ಕಾರ್ಯಶೀಲ ಮುಖ್ಯಮಂತ್ರಿ ಸಿಗಲು ಅನುಮ ಮಾಡಿಕೊಟ್ಟರು. ’ದೇವೇಗೌಡರ ಆಶೀರ್ವಾದ ಇಲ್ಲದಿದ್ದರೆ ಇಷ್ಟೆನ್ನೆಲ್ಲ ಮಾಡಲು ತಮ್ಮಿಂದ ಸಾಧ್ಯವಾಗುತ್ತಿರಲಿಲ್ಲ. ಇದರ ಸಂಪೂರ್ಣ ಕೀರ್ತಿ ದೇವೇಗೌಡರಿಗೇ ಸಲ್ಲಬೇಕು’ ಎಂದು ಧರ್ಮಸಿಂಗ್‌ ಕಳೆದ ವಾರ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದ್ದಾರೆ.ಇಂಥ ದೇವೇಗೌಡರ ಆಶೀರ್ವಾದ ಈಗ ಕುಮಾರಸ್ವಾಮಿಯವರಿಗೂ ಸಿಗಲು ಆರಂಭವಾಗಿದೆ! ಈ ಆಶೀರ್ವಾದದ ಫಲ ಹೇಗಿರುತ್ತದೆ ಎಂಬುದನ್ನು ನಾಮ ಕಾದು ನೋಡೋಣ ಮಗಾ.

ಇನ್ನೊಂದಿಷ್ಟು ಆಶೀರ್ವಾದಗಳೊಂದಿಗೆ,
ಇಂತಿ ನಿನ್ನಪ್ಪ
ಗ್ರಾಮಸಿಂಗKannada Prabha issue dated April 24, 2006

A Research on the Effects of Dewe Gowda's Blessings!

--

No comments: