Sunday, December 07, 2008

2009 - ಫಿದಾಯೀ ಭಯೋತ್ಪಾದನಾ ವರ್ಷ?

ನ್ಯೂಯಾರ್ಕ್ ಸಬ್ ವೇ ಉಗ್ರರ ಮುಂದಿನ ಟಾರ್ಗೆಟ್


ಭಾಗ - 4

ಅಮೆರಿಕಕ್ಕೆ ಈಗ ಹೊಸ ನಮೂನಿ ಭಯೋತ್ಪಾದನಾ ಸಮಸ್ಯೆ ಎದುರಾಗಿದೆ. ಅದು Home Grown Terrorism ಸಮಸ್ಯೆ. ನ್ಯೂಯಾರ್ಕಿನ ’ಫಾರಿನ್ ಪಾಲಿಸಿ ಅಸೋಸಿಯೇಶನ್’ ಬಾತ್ಮೀದಾರ ಹಾಗೂ ’ಟೆರರಿಸಂ ತಜ್ಞ’ ಜೋಶ್ ಹ್ಯಾಮರ್ ಪ್ರಕಾರ ೯/೧೧ ಮಾದರಿ ಕೃತ್ಯಗಳಿಗಿಂತ ಇನ್ನು ’ಫಿದಾಯೀ’ ಮಾದರೀ ಭಯೋತ್ಪಾದನಾ ಪ್ರಕರಣಗಳು ಹೆಚ್ಚಲಿವೆ. ೨೦೦೯ ಬಹುಶಃ ಫಿದಾಯೀ ಮಾದರಿ ಭಯೋತ್ಪಾದನೆಯ ವರ್ಷವಾದರೂ ಆಗಬಹುದು.


ಳೆದ ಅಕ್ಟೋಬರ್ ಕೊನೆಯ ವಾರ ನಾನು ನ್ಯೂಯಾರ್ಕ್ ಸಿಟಿಯಲ್ಲಿದ್ದೆ. ಉಳಿದ ಅಮೆರಿಕದ ಶಹರಗಳಂತಲ್ಲ ಇದು. ಸದಾ ಜನ ಗಿಜಿಬಿಜಿ. ಗಡಿಬಿಡಿ. ಟ್ರಾಫಿಕ್ ಸಿಗ್ನಲ್‌ಗೆ ಕವಡೆ ಕಿಮ್ಮತ್ತು. ಯಾಕೋ ಮುಂಬೈನಲ್ಲಿರುವಂತೇ ಅನಿಸಿತು. ಅಮೆರಿಕದ ಅತ್ಯಂತ ಜನನಿಬಿಡ ಶಹರ ಇದು.

ಅಮೆರಿಕದ ಅಧ್ಯಕ್ಷ ಹುದ್ದೆಯನ್ನು ಬಿಟ್ಟರೆ, ನ್ಯೂಯಾರ್ಕ್ ಸಿಟಿಯ ಮೇಯರ್ ಹುದ್ದೆಯೇ ಅತ್ಯಂತ ಕಷ್ಟದ ಪದವಿ! - ಎನ್ನೋ ಮಾತಿದೆ. ಈ ಸಿಟಿಯ ನಿರ್ವಹಣೆ, ಭದ್ರತೆ ಅಷ್ಟು ಕಷ್ಟ.

ಅಲ್ಲಿ ನೆಲದಡಿ ಹಲವು ಸುರಂಗ ರೇಲ್ವೇಗಳಿವೆ. ಈ ಮೆಟ್ರೋ ರೇಲ್ವೆ ವ್ಯವಸ್ಥೆಗೆ ಸಬ್‌ವೇ ಅಂತ ಹೆಸರು. ಈ ಸಬ್‌ವೇಗಳಲ್ಲಿ 'ಟೈಮ್ಸ್ ಸ್ಕ್ವೇರ್ ಟರ್ಮಿನಲ್ ' ಅಮೆರಿಕದ ಅತ್ಯಂತ ಬಿಝಿ ರೇಲ್ವೆ ನಿಲ್ದಾಣ. ನಾನಿದ್ದ ಹೊಟೆಲ್, ಟೈಮ್ಸ್ ಸ್ಕ್ವೇರ್‌ನಿಂದ ಕೇವಲ ೨ ನಿಮಿಷದ ನಡಿಗೆ. ಹಾಗಾಗಿ, ಆರೆಂಟು ಸಲ ಈ ನಿಲ್ದಾಣಕ್ಕೆ ಹೋಗಿದ್ದೆ.

ನೆಲದಡಿ ಇರುವ ನಾಲ್ಕು ಮಹಡಿಗಳ ಈ ರೈಲು ನಿಲ್ದಾಣ ಪ್ರವೇಶಿಸುತ್ತಿದ್ದಂತೆ, ಕಿವಿಗಡಚಿಕ್ಕುವ ಸಂಗೀತ ಕೇಳಿಸಲು ಆರಂಭಿಸುತ್ತದೆ. ಗಿಟಾರ್ ನುಡಿಸುವವರು, ಡ್ರಮ್ ಬಾರಿಸುವವರು, ಟೇಪ್ ರೆಕಾರ್ಡ್‌ರ್ ಹಾಕಿಕೊಂಡು ಡಾನ್ಸ್ ಮಾಡುವವರು, ಹಲವು ವಾದ್ಯಗಳ ಆರ್‍ಕೆಸ್ಟ್ರಾ ನಡೆಸುವವರು... ಹೀಗೆ ಬಹುರೂಪಿ ಕಲಾವಿದರು ಮತ್ತು ಭಿಕ್ಷುಕರು ರೇಲ್ವೆ ಸ್ಟೇಷನ್‌ನ ಪ್ರವಾಸೀ ಆಕರ್ಷಣೆ. ಪೀಕ್ ಅವರ್‌ನಲ್ಲಿ ಇಲ್ಲಿ ಕಾಲಿಡಲೂ ಆಗದಷ್ಟು ಜನಸಂದಣಿ.

ಈ ಸ್ಟೇಷನ್ ಪ್ರವೇಶಿಸಿದಾಗೆಲ್ಲ ನನಗೆ ಅನಿಸಿದ್ದಿದೆ. ’ಇದೇನಿದು, ಇಲ್ಲಿ ಸ್ವಲ್ಪವೂ ಭದ್ರತಾ ವ್ಯವಸ್ಥೆಯೇ ಕಾಣುವುದಿಲ್ಲವಲ್ಲ. ಎಲ್ಲಾ ಕಡೆ ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದಾರೆ, ನಿಜ. ಆದರೆ, ಇಷ್ಟು ಬಿಝಿ ನಿಲ್ದಾಣಕ್ಕೆ ಇಷ್ಟೇ ಸಾಕೆ ಭದ್ರತೆ? ಒಂದು ವೇಳೆ ಇಲ್ಲಿ ಉಗ್ರರು ದಾಳಿ ಮಾಡಿದರೆ ಏನು ಗತಿ!’

ಸುಮ್ಮನೆ ಕೆಟ್ಟ ಕಲ್ಪನೆಯೊಂದು ಬಂತು -"ಐದಾರು ಜನ ಉಗ್ರರ ತಂಡ... ಸಾಧಾರಣ ಮೆಷಿನ್ ಗನ್ ಹಿಡಿದು ಏಕಾಏಕಿ ದಾಳಿಮಾಡಿ... ೧೦ ನಿಮಿಷದಲ್ಲಿ ನೂರಿನ್ನೂರು ಜನರನ್ನು ಕೊಂದು... ರೈಲೊಂದನ್ನು ಹೈಜಾಕ್ ಮಾಡಿ... ಕಡಿಮೆ ಜನಸಂದಣಿಯ ಸಣ್ಣ ಸ್ಟೇಷನ್‌ಗೆ ಹೋಗಿಳಿದು... ಪರಾರಿಯಾಗುವುದು ಎಷ್ಟು ಸುಲಭ!"

ಅಮೆರಿಕದ ವಿಮಾನ ನಿಲ್ದಾಣದಲ್ಲಾದರೋ, ಜಗತ್ತಿನಲ್ಲಿ ಎಲ್ಲೂ ಇಲ್ಲದಷ್ಟು ಬಿಗಿ ಭದ್ರತೆ. ತಪಾಸಣೆಗಾಗಿ ಬೆಲ್ಟು, ಶೂಗಳನ್ನೂ ಬಿಚ್ಚಿ ಎಕ್ಸ್‌ರೇ ಮಷಿನ್ನಿನೊಳಗೆ ತೂರಿಸಬೇಕು. ಆದರೆ, ಸಬ್‌ವೇಯಂಥ ಜನನಿಬಿಡ ಪ್ರದೇಶದಲ್ಲಿ ಮಾತ್ರ ಯಾವ ಭದ್ರತೆಯೂ ಇಲ್ಲ. ತಪಾಸಣೆಯಂತೂ ಇಲ್ಲವೇ ಇಲ್ಲ.

... ಇಂಥ 'ನ್ಯೂಯಾರ್ಕ್ ಸಬ್‌ವೇ' ಉಗ್ರರ ಮುಂದಿನ ಗುರಿ ಎಂದು ಕಳೆದ ವಾರ ಅಮೆರಿಕದ ರಾಷ್ಟ್ರೀಯ ತನಿಖಾ ದಳ - ಎಫ್‌ಬಿಐ ಎಚ್ಚರಿಕೆ ನೀಡಿದೆ.

ಹಾಗಾದರೆ, ನ್ಯೂಯಾರ್ಕ್ ಸಬ್‌ವೇ ಮೇಲೆ ನಡೆಯುವ ಭಯೋತ್ಪಾದನಾ ದಾಳಿ ಹೇಗಿರುತ್ತದೆ? ವಿಮಾನ ಡಿಕ್ಕಿ ಹೊಡೆಸುವಂಥ, ೯/೧೧, ಅಲ್‌ಖೈದಾ ಮಾದರಿಯ ಅದ್ಧೂರಿ ಭಯೋತ್ಪಾದನೆಯೋ? ಅಥವಾ ಮುಂಬೈಯಲ್ಲಿ ಕಳೆದವಾರ ನಡೆದಂಥ ಲಷ್ಕರ್-ಎ-ತಯ್ಯಬಾದ ’ಫಿದಾಯೀ’ ಮಾದರಿ ’ಚೀಪ್ ಆಂಡ್ ಬೆಸ್ಟ್’ ಭಯೋತ್ಪಾದನೆಯೋ?

ನ್ಯೂಯಾರ್ಕಿನ ’ಫಾರಿನ್ ಪಾಲಿಸಿ ಅಸೋಸಿಯೇಶನ್’ ಬಾತ್ಮೀದಾರ ಹಾಗೂ ’ಟೆರರಿಸಂ ತಜ್ಞ’ ಜೋಶ್ ಹ್ಯಾಮರ್ ಪ್ರಕಾರ ೯/೧೧ ಮಾದರಿ ಕೃತ್ಯಗಳಿಗಿಂತ ಇನ್ನು ’ಫಿದಾಯೀ’ ಮಾದರೀ ಭಯೋತ್ಪಾದನಾ ಪ್ರಕರಣಗಳು ಹೆಚ್ಚಲಿವೆ. ೨೦೦೯ ಬಹುಶಃ ಫಿದಾಯೀ ಮಾದರಿ ಭಯೋತ್ಪಾದನೆಯ ವರ್‍ಷವಾದರೂ ಆಗಬಹುದು ಎನ್ನುತ್ತಾರೆ ಅವರು!

ಯಾಕೆಂದರೆ, ಫಿದಾಯೀ ಮಾದರಿ ಭಯೋತ್ಪಾದನೆ ಸರಳ, ಸೋವಿ ಮತ್ತು ಅತ್ಯಂತ ಪ್ರಭಾವೀ ಎನ್ನುತ್ತಾರೆ ಜೋಶ್ ಹ್ಯಾಮರ್.
ಫಿದಾಯೀ ದಾಳಿ ಅಂದರೆ ಆತ್ಮಹತ್ಯಾ ದಾಳಿಯಲ್ಲ. ಉಗ್ರರ ಒಂದು ತಂಡ ಯಾವುದೋ ಒಂದು ಕಟ್ಟಡ, ಕಚೇರಿ ಅಥವಾ ಹೆಗ್ಗುರುತಿನ ಮೇಲೆ ಏಕಾ ಏಕಿ ಬಂದೂಕು ಮತ್ತು ಗ್ರೆನೇಡಿನ ದಾಳಿ ಮಾಡಿ ಅದನ್ನು ಆಕ್ರಮಿಸಿಕೊಳ್ಳುತ್ತದೆ. ಕೆಲವೊಮ್ಮೆ ಅಲ್ಲಿರುವ ಜನರನ್ನು ಒತ್ತೆ ಇಟ್ಟುಕೊಳ್ಳುತ್ತದೆ. ಎಷ್ಟು ದೀರ್ಘ ಕಾಲ ದಾಳಿ ನಡೆಸಲು ಸಾಧ್ಯವೋ ಅಷ್ಟು ನಡೆಸಿ, ತಮ್ಮ ವಿಧ್ವಂಸಕ ಕೃತ್ಯಕ್ಕೆ ಹೆಚ್ಚು ಪ್ರಚಾರ ಸಿಗುವಂತೆ ಮಾಡುತ್ತದೆ. ತಮ್ಮಲ್ಲಿರುವ ಮದ್ದು ಗುಂಡು ಖಾಲಿಯಾಗುವವರೆಗೂ ದಾಳಿ ನಡೆಸುತ್ತದೆ. ನಂತರ, ಅವಕಾಶ ಸಿಕ್ಕರೆ ಆ ಉಗ್ರರ ತಂಡ ಸ್ಥಳದಿಂದ ಪಲಾಯನಗೈಯುತ್ತದೆ ಅಥವಾ ಭದ್ರತಾ ಸಿಬ್ಬಂದಿಯಿಂದ ಹತಗೊಳ್ಳುತ್ತದೆ. ಲಷ್ಕರ್-ಎ-ತಯ್ಯಬಾ ಸಂಘಟನೆಯ ಭಯೋತ್ಪಾದನಾ ಮಾದರಿ ಇದು.


ಬರುವ ದಿನಗಳಲ್ಲಿ ಫಿದಾಯೀ ಮಾದರಿ ಭಯೋತ್ಪಾದನೆ ಯಾಕೆ ಹೆಚ್ಚಾಗಬಹುದು ಎನ್ನಲು ಜೋಶ್ ಹ್ಯಾಮರ್ ಐದು ಕಾರಣಗಳನ್ನು ನೀಡುತ್ತಾರೆ.

ಉಗ್ರರ ನೇಮಕ ಸುಲಭ : ಆತ್ಮಹತ್ಯಾ ದಾಳಿಗೆ ಉಗ್ರರನ್ನು ನೇಮಕ ಮಾಡಿಕೊಳ್ಳಲು ಉಗ್ರ ಸಂಘಟನೆಗಳಿಗೆ ಕಷ್ಟವಾಗುತ್ತಿದೆ. ಏಕೆಂದರೆ, ಆತ್ಮಹತ್ಯಾ ದಾಳಿಯಲ್ಲಿ ಬಾಂಬರ್ ಸ್ಫೋಟಗೊಂಡು ಛಿದ್ರವಾಗುವುದು ಖಚಿತ. ಆದರೆ, ಫಿದಾಯೀ ದಾಳಿಯಲ್ಲಿ ಉಗ್ರನಿಗೆ ಬದುಕುಳಿಯುವ ಅವಕಾಶವಿದೆ. ಹಾಗಾಗಿ, ಫಿದಾಯೀಗಳಾಗಲು ಉಗ್ರರು ಬೇಗನೆ ಒಪ್ಪಿಕೊಳ್ಳುತ್ತಿದ್ದಾರೆ.

ಕಡಿಮೆ ಖರ್ಚು, ಹೆಚ್ಚು ಹಾನಿ : ೯/೧೧ ದಾಳಿ ಮಾಡಲು ಅಲ್‌ಖೈದಾ ಪ್ರತಿ ವಿಮಾನ ಅಪಹರಣಕಾರರಿಗೆ ೨೬೦೦೦ ಡಾಲರ್ (೧೩ ಲಕ್ಷ ರು.) ನೀಡಿತ್ತಂತೆ. ಆದರೆ, ಫಿದಾಯಿ ಉಗ್ರರಿಗೆ ತಲಾ ೨೦೦೦ ಡಾಲರ್ (೧ ಲಕ್ಷ ರು.) ಸಾಕು. ಈ ಹಿನ್ನೆಲೆಯಲ್ಲಿ, ಫಿದಾಯೀ ಭಯೋತ್ಪಾದನೆ ಅತ್ಯಂತ ಸೋವಿ. ಒಂದಷ್ಟು ಉಗ್ರರು, ಅವರಿಗೆ ಒಂದೊಂದು ಎಕೆ-೪೭, ಒಂದಷ್ಟು ಗ್ರೆನೇಡ್, ಒಂದಷ್ಟು ಆರ್‌ಡಿಎಕ್ಸ್, ಖರ್ಚಿಗೆ ಒಂದಷ್ಟು ದುಡ್ಡು... ಸೋ ಚೀಪ್! ಆದರೆ, ಈ ದಾಳಿಯಿಂದಾಗುವ ಹಾನಿ ಅಪಾರ. ಉದಾಹರಣೆಗೆ ಕಳೆದ ವಾರದ ಮುಂಬೈ ಪ್ರಕರಣವನ್ನೇ ನೋಡಿ. ಕೇವಲ ೧೦ ಉಗ್ರರು ೨೦೦ ಜನರನ್ನು ಕೊಲ್ಲುವುದರ ಜೊತೆಗೆ ಉಂಟು ಮಾಡಿದ ಆರ್‍ಥಿಕ ನಷ್ಟ ಕನಿಷ್ಠ ೫೦೦೦ ಕೋಟಿಗೂ ಅಧಿಕ! ಹತ್ತಾರು ಬಾಂಬ್ ಸಿಡಿಸಿದ್ದರೂ ಇಷ್ಟೊಂದು ಹಾನಿ ಸಂಭವಿಸುತ್ತಿರಲಿಲ್ಲ.

ಸುಲಭ ಲಭ್ಯ ಆಯುಧ : ಫಿದಾಯೀ ದಾಳಿಗೆ ಬೇಕಾದ ಬಂದೂಕು, ಗ್ರೆನೇಡ್‌ನಂಥ ಆಯುಧಗಳು ಸುಲಭಕ್ಕೆ ಸಿಗುತ್ತವೆ. ಅಮೆರಿಕದಂಥ ಕೆಲವು ದೇಶಗಳಲ್ಲಂತೂ ಬಂದೂಕು ಕೊಳ್ಳುವುದು ಕಷ್ಟವೇ ಅಲ್ಲ. ಅವುಗಳ ಸಾಗಾಟ ಕೂಡ ಸುಲಭ. ೯/೧೧ನಂಥ ದಾಳಿಗೆ ವಿಮಾನಗಳಂಥ ದೊಡ್ಡ ಸಾಧನಗಳು ಬೇಕು. ಅವುಗಳ ಸಂಪಾದನೆ ಕಷ್ಟ.

ವಿಫಲಗೊಳ್ಳುವ ಸಾಧ್ಯತೆ ಕಡಮೆ : ೯/೧೧ ಮಾದರಿ ದಾಳಿಯಲ್ಲಿ ಅತ್ಯಂತ ಕೂಲಂಕಷ ಯೋಜನೆ ಬೇಕಾಗುತ್ತದೆ. ಯೋಜನೆಯಲ್ಲಿ ಯಾರು ಸ್ವಲ್ಪ ಏಮಾರಿದರೂ ಇಡೀ ಯೋಜನೆ ವಿಫಲವಾಗುತ್ತದೆ. ಆದರೆ, ಫಿದಾಯೀ ದಾಳಿ ವಿಫಲಗೊಳ್ಳುವ ಸಾಧ್ಯತೆ ಅತ್ಯಂತ ಕಡಿಮೆ. ಅಲ್ಲದೇ, ಸಮಯಕ್ಕೆ ತಕ್ಕಂತೆ ಫಿದಾಯೀ ಉಗ್ರರು ತಮ್ಮ ಯೋಜನೆಗಳನ್ನು ಬದಲಿಸಿಕೊಂಡು ವಿಧ್ವಂಸಕ ಕೃತ್ಯ ನಡೆಸಬಹುದು.

೫. ದೀರ್ಘ ಹಾಗೂ ಅತಿ ಪರಿಣಾಮಕಾರಿ : ೯/೧೧ ಘಟನೆಯಲ್ಲಿ ಎರಡು ವಿಮಾನಗಳು ಡಿಕ್ಕಿ ಹೊಡೆದು ಅವಳಿ ಕಟ್ಟಡಗಳನ್ನು ಉರುಳಿಸಲು ತೆಗೆದುಕೊಂಡ ಅವಧಿ ಕೆಲವು ಗಂಟೆಗಳು ಮಾತ್ರ. ಟೀವಿಯಲ್ಲಿ ನಂತರ ಪ್ರಸಾರವಾದದ್ದೆಲ್ಲ ರಿಪೀಟ್ ಷೋ. ಆದರೆ, ಮೊನ್ನೆಯ ಮುಂಬೈ ಘಟನೆಯನ್ನು ತೆಗೆದುಕೊಳ್ಳಿ. ನಿರಂತರ ಮೂರು ದಿನ ಭಯೋತ್ಪಾದನೆಯ ನೇರ ಪ್ರಸಾರವನ್ನು ಭಾರತದ ಜನ ವೀಕ್ಷಿಸಿದರು. ಟಿಆರ್‌ಪಿ (ವೀಕ್ಷಣೆಯ ಒಂದು ಮಾಪನ) ಕ್ರಿಕೆಟ್ ಪ್ರಸಾರಕ್ಕಿಂತ ಹೆಚ್ಚಿತು. ೨೪ ಗಂಟೆ ಇಂಗ್ಲಿಷ್ ಸುದ್ದಿ ವಾಹಿನಗಳ ಟಿಆರ್‌ಪಿ ೩-೪ ಪಟ್ಟು ಹೆಚ್ಚಾದರೆ, ಹಿಂದಿ ಚಾನಲ್‌ಗಳ ಟಿಆರ್‌ಪಿ ೯ ಪಟ್ಟು ಹೆಚ್ಚಾಯಿತು. ಅಲ್ಲದೇ, ವಿಶ್ವಾದ್ಯಂತ ಜನರು ಈ ಭಯೋತ್ಪಾನೆಯನ್ನು ಗಮನಿಸಿದರು. ಪತ್ರಿಕೆಗಳಲ್ಲಿ ಪುಟಗಟ್ಟಲೆ ಓದಿದರು. ಎಷ್ಟು ಕಡಿಮೆ ಖರ್ಚಿನಲ್ಲಿ ಭಯೋತ್ಪಾದಕರು ಎಷ್ಟು ಪ್ರಚಾರ ಗಿಟ್ಟಿಸಿದರು ನೋಡಿ!

ಈ ಕಾರಣಗಳಿಂದ, ೯/೧೧ ಮಾದರಿ ಭಯೋತ್ಪಾದನೆಗಿಂತ ಫಿದಾಯೀ ಮಾದರಿ ದಾಳಿ ಇನ್ನು ಉಗ್ರರಿಗೆ ಅಚ್ಚುಮೆಚ್ಚಾಗಲಿದೆ ಎಂಬುದು ಜೋಶ್ ಹ್ಯಾಮರ್ ವಾದ.

ಲೋಕಲ್ ಉಗ್ರರ ಸಮಸ್ಯೆ

ಅಮೆರಿಕಕ್ಕೆ ಈಗ ಹೊಸ ಭಯೋತ್ಪಾದನಾ ಸಮಸ್ಯೆ ಎದುರಾಗಿದೆ. ಅದು Home Grown Terrorism ಸಮಸ್ಯೆ. ಅಂದರೆ ಒಂದು ದೇಶದಲ್ಲಿ ಆಂತರಿಕವಾಗಿ ಮೊಳಕೆಯೊಡೆಯುವ ಭಯೋತ್ಪಾದನೆ ಇದು. ಲೋಕಲ್ ಭಯೋತ್ಪಾದಕರ ಕೃತ್ಯ ಎಂದು ಸರಳವಾಗಿ ಹೇಳಬಹುದು. ಈ ವರೆಗೂ, ಭಾರತದಲ್ಲಿ ಈ ಸಮಸ್ಯೆ ತೀವ್ರವಾಗಿತ್ತು. ಅಮೆರಿಕದಲ್ಲಿ ಲೋಕಲ್ ಉಗ್ರರ ಸಮಸ್ಯೆ ಎಷ್ಟಿದೆ ಎಂದು ಪೊಲೀಸ್ ಅಧಿಕಾರಿ ಮಾರ್ಕ್ ವಿಲ್ಬರ್ಟ್ ಅವರನ್ನು ಕೇಳಿದೆ.

’೯/೧೧ ಘಟನೆ ನಂತರ ಅಮೆರಿಕದ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆ Home Grown Terrorism ಸಮಸ್ಯೆ ಕುರಿತು ತೀವ್ರ ಗಮನ ಹರಿಸಿದೆ. ಇಷ್ಟು ವರ್ಷ ಅಮೆರಿಕದ ನೆಲದಲ್ಲೇ ಮೊಳಕೆಯೊಡದ ಆಂತರಿಕ ಭಯೋತ್ಪಾದನೆಯ ಚಿಂತೆ ಇರಲಿಲ್ಲ. ಹಾಗಾಗಿ, ನಮ್ಮ ಗಮನ ಹೊರದೇಶಗಳಿಂದ ಅಮೆರಿಕಕ್ಕೆ ಬರಬಹುದಾದ ಉಗ್ರರ ಬಗ್ಗೆ ಮಾತ್ರ ಹೆಚ್ಚಾಗಿತ್ತು. ಈಗ ಹಾಗಿಲ್ಲ. ಸ್ಥಳೀಯೋತ್ಪಾದಿತ ಉಗ್ರ ಚಟುವಟಿಕೆ ಅಮೆರಿಕದಲ್ಲೂ ಸುಪ್ತವಾಗಿದೆ.’

’೯/೧೧ ನಂತರ ಅಮೆರಿಕದಲ್ಲಿ ಯಾವುದೇ ಗಂಭೀರ ಉಗ್ರಗಾಮಿ ವಿಧ್ವಂಸಕ ಕೃತ್ಯ ನಡೆದಿಲ್ಲ. ಏಕೆಂದರೆ, ಭಾರತದಂತೆ ಅಮೆರಿಕದಲ್ಲಿ ಸ್ಧಳೀಯೋತ್ಪಾದಿತ ಉಗ್ರರು ಹೆಚ್ಚು ಇರಲಿಲ್ಲ. ಭಾರತದ ಸಮಸ್ಯೆ ಎಂದರೆ, ಅಲ್ಲಿ ಲೋಕಲ್ ಉಗ್ರರು ಸಾಕಷ್ಟಿದ್ದಾರೆ. ಸಾಲದು ಎಂಬಂತೆ ಅವರಿಗೆ ಹೊರಗಿನಿಂದ ಪ್ರಚೋದನೆ, ಬೆಂಬಲವೂ ಸಿಗುತ್ತಿದೆ. ಅಲ್ಲದೇ, ಹೊರಗಿನಿಂದ ಭಾರತಕ್ಕೆ ನುಸುಳುವ ಉಗ್ರರ ಸಮಸ್ಯೆಯೂ ಇದೆ. ಹೀಗೆ ದ್ವಿಮುಖ ಸಮಸ್ಯೆಯಲ್ಲಿ ಭಾರತ ಸಿಲುಕಿದೆ.’ ಎನ್ನುತ್ತಾರೆ ಅವರು.

ಬ್ರಿಟನ್, ಫ್ರಾನ್ಸ್, ಭಾರತದಲ್ಲಿ ಲೋಕಲ್ ಉಗ್ರರು

’ಲೋಕಲ್ ಉಗ್ರರ ಸಮಸ್ಯೆ ಬ್ರಿಟನ್, ಫ್ರಾನ್ಸ್ ಸೇರಿದಂತೆ ಯೂರೋಪಿನ ಕೆಲವು ದೇಶಗಳಲ್ಲೂ ಇದೆ. ಹಲವಾರು ವರ್ಷಗಳಿಂದ ಬ್ರಿಟನ್‌ನಲ್ಲಿ ಇಸ್ಲಾಮಿಕ್ ಕಾಲೋನಿಗಳು ಬೀಡುಬಿಟ್ಟಿವೆ. ಅಲ್ಲಿ, ಭಯೋತ್ಪಾದನಾ ಚಟುವಟಿಕೆಗಳು ಮೊಳಕೆಯೊಡೆದವು. ಕೊನೆಗೆ ಈ ಚಟುವಟಿಕೆಗಳು ಎಷ್ಟು ಹೆಚ್ಚಿದವೆಂದರೆ, ಅವರು ಲಂಡನ್‌ನ ಟ್ಯೂಬ್ ರೈಲುಗಳ ಮೇಲೆ ದಾಳಿ ಮಾಡಿದರು. ಈ ಮೊದಲು, ಮ್ಯಾಡ್ರಿಡ್ ರೈಲಿನ ಮೇಲೆ ದಾಳಿ ಮಾಡಿದ್ದೂ ಸ್ಥಳೀಯ ಉಗ್ರರೇ. ಆದ್ದರಿಂದ, ದೇಶದ ಭದ್ರತೆಗೆ ಲೋಕಲ್ ಉಗ್ರರ ಚಟುವಟಿಕೆ ಭಾರೀ ಅಪಾಯಕಾರಿ.’ ಎನ್ನುತ್ತಾರೆ ಕೌನ್ಸಿಲ್ ಆನ್ ಫಾರಿನ್ ರಿಲೇಶನ್ಸ್ ವೆಬ್‌ಸೈಟಿನ ಸಹ ಸಂಪಾದಕ ಎಬೆನ್ ಕಪ್ಲಾನ್.

’ಭಾರತ, ಯೂರೋಪ್‌ನಲ್ಲಿ ಕಂಡ ಅಪಾಯಕಾರಿ ಲೋಕಲ್ ಉಗ್ರಗಾಮಿ ಚಟುವಟಿಕೆ ಈಗ ಅಮೆರಿಕದಲ್ಲೂ ಸ್ವಲ್ಪ ಸ್ವಲ್ಪವಾಗಿ ಕಾಣಿಸುತ್ತಿದೆ. ಇದನ್ನು ನಿಗ್ರಹಿಸುವುದು ನಮ್ಮ ಮುಂದಿರುವ ಸವಾಲು’ ಎನ್ನುತ್ತಾರೆ ಅವರು.

ಇದರ ನಿಗ್ರಹಕ್ಕಾಗಿ ಭಾರತದ ಪೋಟಾ ಕಾಯಿದೆ ಹೋಲುವ Violent Radicalization and Homegrown Terrorism Prevention Bill ಅಮೆರಿಕ ಸಂಸತ್ತಿನಲ್ಲಿ ಕಳೆದ ವರ್ಷ ಮಂಡನೆಯಾಗಿದೆ. ಕೆಳಮನೆಯಲ್ಲಿ ೪೦೪-೬ ಮತಗಳಿಂದ ಅಂಗೀಕಾರವಾಗಿದೆ. ಸೆನೆಟ್‌ನಲ್ಲಿ ಇನ್ನೂ ಅಂಗೀಕಾರ ಅಗಬೇಕಷ್ಟೇ.

ಉಗ್ರ ಚಟುವಟಿಕೆಗೆ ಪ್ರಶಸ್ತ ತಾಣ ಯಾವುದು?

ಯೂರೋಪ್ ಹಾಗೂ ಭಾರತಕ್ಕೆ ಹೋಲಿಸಿದರೆ ಅಮೆರಿಕದಲ್ಲಿ ಮುಸ್ಲಿಂ ಜನಸಂಖ್ಯೆ ಕಡಿಮೆ. ಅದರಲ್ಲೂ ಅಮೆರಿಕದ ಮುಸ್ಲಿಮರು ತಮ್ಮದೇ ಪ್ರತ್ಯೇಕ ಗಲ್ಲಿ, ಕಾಲೋನಿ ಮಾಡಿಕೊಂಡಿಲ್ಲ ಎನ್ನುವುದು ದೊಡ್ಡ ಸಮಾದಾನ. ಈ ಮುಸ್ಲಿಮರು ಸಮಾಜದ ಮುಖ್ಯವಾಹಿನಿಯಲ್ಲಿ ಸೇರಿಹೋಗಿದ್ದಾರೆ. ಆದರೆ, ಲಂಡನ್, ಭಾರತ ಮೊದಲಾದ ಕಡೆ ಮುಸ್ಲಿಮರು ಪ್ರತ್ಯೇಕ ಸಮುದಾಯ ಮಾಡಿಕೊಂಡು ವಾಸಿಸುತ್ತಾರೆ. ಇದು ಭಯೋತ್ಪಾದನೆ ನಿಗ್ರಹದ ದೃಷ್ಟಿಯಿಂದ ಅಪಾಯಕಾರಿ. ಭಯೋತ್ಪಾದನೆಯ ಬೀಜ ಬಿತ್ತುವವರು ಮುಸ್ಲಿಂ ಸಮುದಾಯ ಸಾಕಷ್ಟು ಇರುವ ಗಲ್ಲಿ, ಬಡಾವಣೆಗಳಲ್ಲಿ ಕಾರ್‍ಯಾಚರಣೆ ಮಾಡುತ್ತಾರೆ. ಅಲ್ಲಿ ಉಗ್ರವಾದಿಗಳನ್ನು ಗುರುತಿಸಲು, ಅವರ ಮೇಲೆ ನಿಗಾ ಇಡಲು ಕಷ್ಟ ಅಲ್ಲದೇ, ಅವು ಉಗ್ರರಿಗೆ ಅಡಗಲು ಪ್ರಶಸ್ತ ಸ್ಥಳ. ಇಂತಹ ಪ್ರತ್ಯೇಕ ಮುಸ್ಲಿಂ ಕಾಲೋನಿಗಳು ತಲೆಎತ್ತದಂತೆ ಅಮೆರಿಕ ಎಚ್ಚರಿಕೆ ವಹಿಸುತ್ತಿದೆ ಎನ್ನುತ್ತಾರೆ ಎಬೆನ್.

ಜೈಲು, ಕಾಲೇಜು, ವಿಶ್ವವಿದ್ಯಾಲಯದಲ್ಲಿ ಉಗ್ರರು:

ಹೆಸರು ಹೇಳಲಿಚ್ಚಿಸದ ನ್ಯೂಯಾರ್ಕ್ ಸಿಟಿ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ ಅಮೆರಿಕದಲ್ಲಿ ಈಗಾಗಲೇ ಇಸ್ಲಾಮಿಕ್ ಉಗ್ರರ ಸ್ಥಳೀಯೋತ್ಪಾದನೆ ಆರಂಭವಾಗಿದೆ. ಮುಖ್ಯವಾಗಿ, ಜೈಲು, ಕಾಲೇಜು, ವಿಶ್ವವಿದ್ಯಾಲಯಗಳ ಕ್ಯಾಂಪಸ್‌ಗಳಲ್ಲಿ ಹಾಗೂ ಧಾರ್ಮಿಕ ಕೇಂದ್ರಗಳಲ್ಲಿ ಹೆಚ್ಚಾಗಿ ಇಂತಹ ಸುಳಿವು ಸಿಗುತ್ತಿದೆ ಎಂದು ಎಚ್ಚರಿಸುತ್ತಾರೆ ಅವರು.

ಹಾಗೆಂದು, ಅಮೆರಿಕದಲ್ಲಿರುವ ಮುಸ್ಲಿಮರೆಲ್ಲ ಉಗ್ರರು ಎಂದಲ್ಲ. ಅಮೆರಿಕದ ಅನೇಕ ಮುಸ್ಲಿಮರೇ, ಶಂಕಿತ ಉಗ್ರರ ಮಾಹಿತಿಯನ್ನು ಪೊಲೀಸರಿಗೆ ಒದಗಿಸುತ್ತಾರೆ. ಉದಾಹರಣೆಗೆ: ಒಂದು ವರ್ಷದ ಹಿಂದೆ, ಪಾಕ್ ಮೂಲದ ಅಮೆರಿಕ ಪ್ರಜೆಯೊಬ್ಬ ಅಫಘಾನಿಸ್ತಾನಕ್ಕೆ ಹೋಗಿ ಭಯೋತ್ಪಾದನೆಯ ತರಬೇತಿ ಪಡೆದು ಬಂದಿದ್ದ. ಇದನ್ನು ಇಸ್ಲಾಂ ಸಮುದಾಯದ ವ್ಯಕ್ತಿಯೊಬ್ಬರು ಸ್ಥಳೀಯ ಪೊಲೀಸರ ಗಮನಕ್ಕೆ ತಂದರು ಎಂದು ಅವರು ಹೇಳುತ್ತಾರೆ.

ಮುಂದಿನ ದಾಳಿ ಲೋಕಲ್ ಉಗ್ರರಿಂದ:

ನ್ಯೂಯಾರ್ಕಿನ ಉಗ್ರನಿಗ್ರಹ ವಿಭಾಗದ ನಿವೃತ್ತ ಪೊಲೀಸ್ ಉಪ-ಆಯುಕ್ತ ರಿಚರ್ಡ್ ಫಾಲ್ಕನ್‌ರ್ಯಾಥ್ ಪ್ರಕಾರ -ಅಮೆರಿಕದ ನೆಲದಲ್ಲೇ ಮೊಳಕೆಯೊಡೆದ ಭಯೋತ್ಪಾದನಾ ಕೃತ್ಯಗಳು ಇನ್ನೂ ಹೆಚ್ಚುವ ಸಾಧ್ಯತೆ ಇದೆ. ಅಮೆರಿಕದ ಯಾವುದೇ ನಗರದ ಮೇಲೆ ’ಫಾರಿನ್ ಉಗ್ರರಿಗಿಂತ’ ’ಸ್ಥಳೀಯ ಉಗ್ರರಿಂದ’ ದಾಳಿ ನಡೆಯುವ ಸಾಧ್ಯತೆಯೇ ಅಧಿಕವಾಗಿದೆ. ದಿನ ಕಳೆದಂತೆ ಈ ಆತಂಕ ಹೆಚ್ಚುತ್ತಿದೆ.

ಅಮೆರಿಕ ಈ ಉಗ್ರರನ್ನು ಹೇಗೆ ನಿಗ್ರಹಿಸುತ್ತದೆ?

ಲೋಕಲ್ ಉಗ್ರರನ್ನು ನಿಗ್ರಹಿಸಲು ಅಮೆರಿಕದ ಹೋಮ್ ಲ್ಯಾಂಡ್ ಸೆಕ್ಯುರಿಟಿ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ತನ್ನ ವೀಸಾ ನೀತಿಯನ್ನು ಬಲಗೊಳಿಸಿದೆ. ತನ್ನ ಎಲ್ಲಾ ಗಡಿಗಳಲ್ಲೂ ಭದ್ರತೆ ಹೆಚ್ಚಿಸಿದೆ. ಸಾಗರದ ಮೂಲಕ ಬರುವ ಸರಕನ್ನೂ ವಿಮಾನ ನಿಲ್ದಾಣದ ಮಾದರಿಯಲ್ಲಿ ಪಕ್ಕಾ ಪರಿಶೀಲನೆಗೆ ಒಳಪಡಿಸುತ್ತಿದೆ. ತಂತ್ರಜ್ಞಾನವನ್ನು ಸಾಕಷ್ಟು ಬಳಸಿಕೊಳ್ಳುತ್ತಿದೆ. ಇಸ್ಲಾಮೇತರ ಉಗ್ರರ ಬಗ್ಗು ಎಚ್ಚರ ವಹಿಸಿದೆ. ಎಲ್ಲಕ್ಕಿಂತ ಮುಖ್ಯವಾಗಿ ಅಲ್ಲಿ, ಭದ್ರತಾ ವ್ಯವಸ್ಥೆಯಲ್ಲಿ ರಾಜಕೀಯ ಹಸ್ತಕ್ಷೇಪ ಇಲ್ಲವೇ ಇಲ್ಲ ಮತ್ತು ಭ್ರಷ್ಟಾಚಾರ ಪ್ರಮಾಣ ಅತ್ಯತ್ಪ.

ದಾಳಿಗೆ ೩೦ ನಿಮಿಷದಲ್ಲಿ ಪ್ರತಿದಾಳಿ ನಡೆಸದಿದ್ದರೆ ಅಪಾಯ:

ಅಮೆರಿಕದ ಭದ್ರತಾ ವ್ಯವಸ್ಥೆಗೂ, ಭಾರತದ ಭದ್ರತಾ ವ್ಯವಸ್ಥೆಗೂ ಇರುವ ಬಹುಮುಖ್ಯ ವ್ಯತ್ಯಾಸ ಅಂದರೆ, ಉಗ್ರರ ದಾಳಿಗೆ ಪ್ರತಿದಾಳಿ ನಡೆಸಲು ಭದ್ರತಾ ಪಡೆಗಳು ತೆಗೆದು ಕೊಳ್ಳುವ ಸಮಯ. ಮೊನ್ನೆ ಮುಂಬೈ ದಾಳಿಯ ವೇಳೆ ಉಗ್ರರ ದಾಳಿಗೆ ಪ್ರತಿಯಾಗಿ ಎನ್‌ಎಸ್‌ಜಿ ಕಮಾಂಡೋಗಳು ಪ್ರತಿದಾಳಿ ನಡೆಸಿದ್ದು ಬರೋಬ್ಬರಿ ೧೦ ಗಂಟೆಗಳ ನಂತರ. ಭದ್ರತಾ ತಜ್ಞರ ಪ್ರಕಾರ ಫಿದಾಯೀ ಉಗ್ರರು ದಾಳಿ ನಡೆಸಿದ ೩೦ ನಿಮಿಷದಲ್ಲಿ ಭದ್ರತಾ ಪಡೆಗಳು ಪ್ರತಿದಾಳಿ ನಡೆಸಲು ವಿಫಲವಾದರೆ, ಉಗ್ರರು ಆಯಕಟ್ಟಿನ ಸ್ಥಳದಲ್ಲಿ ಸೇರಿಕೊಂಡು ಮೇಲುಗೈ ಸಾಧಿಸುತ್ತಾರೆ. ಮುಂಬೈ ಫಿದಾಯೀ ಉಗ್ರರ ದಾಳಿಯಲ್ಲಿ ಆದದ್ದು ಇದೇ. ಆದ್ದರಿಂದ ದಾಳಿ ನಡೆದ ಕೇವಲ ೨೦ ನಿಮಿಷದ ಒಳಗಾಗಿ ವಾಯು ದಾಳಿಯೂ ಸೇರಿದಂತೆ ಯಾವುದೇ ದಾಳಿ ನಡೆಸಲು ಅಮೆರಿಕ ಭದ್ರತಾ ಪಡೆಗಳು, ನಗರ ಪೊಲೀಸರು ಸಜ್ಜಾಗಿದ್ದಾರೆ. ಆದರೆ, ಇಷ್ಟು ವೇಗವಾಗಿ ಪ್ರತಿದಾಳಿ ನಡೆಸಲು ಭಾರತದಲ್ಲಿ ಇನ್ನೂ ಸಿದ್ಧತೆ ಸಾಲದು. ಭಾರತದ ಭದ್ರತಾ ವ್ಯವಸ್ಥಾಪಕರು ಅಮೆರಿಕ ಭದ್ರತಾ ತಜ್ಞರಿಂದ ಕಲಿಯ ಬೇಕಾದದ್ದು ಇದನ್ನೇ.--------------------------------------

ವೈಟ್‌ಹೌಸ್, ಕ್ಯಾಪಿಟಾಲ್ ಒಳಗಡೆ ಪುಕ್ಕಟೆ ಪ್ರವಾಸ!


ವೈಟ್ ಹೌಸ್ ಬೇಲಿಯ ಮುಂದೆ ಪ್ರವಾಸಿಗರ ಸ್ವಚ್ಛಂದ ಓಡಾಟ


ವೈಟ್ ಹೌಸ್ ವಿಸಿಟರ್ ಸೆಂಟರ್ ಮೂಲಕ ಒಳಗಡೆ ಪ್ರವಾಸ

ದೆಹಲಿಯಲ್ಲಿರುವ ನಮ್ಮ ಸಂಸದ್ ಭವನದ ಒಳಗಾಗಲೀ, ರಾಷ್ಟ್ರಪತಿ ಭವನವದ ಒಳಗಾಗಲೀ ಹೋಗುವ, ನೋಡುವ ಭಾಗ್ಯ ನಿಮಗೆ ಸಿಕ್ಕಿಲ್ಲವೇ? ಪರವಾಗಿಲ್ಲ, ಅಮೆರಿಕಕ್ಕೆ ಹೋದರೆ, ಅಲ್ಲಿನ ರಾಷ್ಟ್ರಪತಿ ಭವನ ’ವೈಟ್‌ಹೌಸ್’ ಹಾಗೂ ಸಂಸದ್ ಭವನ ’ಕ್ಯಾಪಿಟಾಲ್’ ಒಳಗೆ ನೀವು ಪುಕ್ಕಟೆ ಪ್ರವಾಸ ಮಾಡಿ ಬರಬಹುದು! ನಮ್ಮ ಸಂಸದ್ ಭವನದ ಸುತ್ತ ಕಾಲು ಮೈಲಿಯಿಂದಲೇ ಭದ್ರತೆ ಶುರು. ಯುದ್ಧ ಭೂಮಿಯಂಥ ಬಂಕರ್‌ಗಳನ್ನು ಸಂಸದ್ ಭವನದ ಮುಂದೆ ಕಾಣಬಹುದು. ಸಂಸದರಿಂದ ಪಾಸ್ ಪಡೆದಿದ್ದರೂ ಒಳಗೆ ಪ್ರವೇಶ ಕಠಿಣ. ಉಳಿದ ಮಾಮೂಲಿ ಪ್ರಜೆಗಳಿಗಂತೂ ಪ್ರವೇಶವೇ ಸಿಗದು. ಪಾಸ್ ಪಡೆದು ಗ್ಯಾಲರಿಗೆ ಹೋದ ವಿಐಪಿಯೂ, ಸಂಸದ್ ಭವನದ ಒಳಗೆಲ್ಲಾ ಸುತ್ತು ಹಾಕಿ ಅಲ್ಲಿನ ಅಂದ ಚೆಂದ ನೋಡಲು ಸಾಧ್ಯವಿಲ್ಲ. ಆದರೆ, ಅಮೆರಿಕದಲ್ಲಿ ವೈಟ್‌ಹೌಸ್ ಹಾಗೂ ಕ್ಯಾಪಿಟಾಲ್‌ಗೆ ಪ್ರತಿದಿನವೂ ಸಾವಿರಾರು ಪ್ರವಾಸಿಗಳಿಗೆ ಉಚಿತ ಪ್ರವೇಶವಿದೆ. ಮೈಸೂರು ಅರಮನೆಯನ್ನೋ, ಹೈದರಾಬಾದಿನ ಸಲಾರ್ ಜಂಗ್ ಮ್ಯೂಜಿಯಮ್ಮನ್ನೋ ನೋಡಿದಷ್ಟು ಸುಲಭವಾಗಿ ವೈಟ್‌ಹೌಸನ್ನೂ, ಕ್ಯಾಪಿಟಾಲನ್ನೂ ನೋಡಬಹುದು. ಅಮೆರಿಕ ರಾಜ್ಯಗಳ ಕ್ಯಾಪಿಟಾಲ್ ನೋಡುವುದಂತೂ ಇನ್ನೂ ಸುಲಭ. ನಾನಂತೂ ಮ್ಯಾಡಿಸನ್ ಕ್ಯಾಪಿಟಾಲ್‌ಗೆ ಹೋಗಿ ಸೆನೆಟರ್‌ಗಳ ಆಸನದಲ್ಲಿ ಕುಳಿತು ಹರಟೆ ಹೊಡೆದು ಬಂದೆ. ನನ್ನನ್ನು ಕ್ಯಾರೆ ಎಂದು ಕೇಳುವವರು ಅಲ್ಲಿ ಯಾರೂ ಇರಲಿಲ್ಲ!

1 comment:

ಮಲ್ಲಿಕಾಜು೯ನ ತಿಪ್ಪಾರ said...

Lekhan tumba chennagide.. Modlu saptahikadalli odidde sir...