
ಭಾಗ - 6
ಅಗ್ನಿಜ್ವಾಲೆಗೆ ಆಹುತಿಯಾಗುತ್ತಿರುವ ಹಡಗಿನ ಈ ‘ವರ್ಣ ಚಿತ್ರ’ ಆ ಪತ್ರಿಕೆಯ ಮುಖಪುಟದ ಮೇಲಿನರ್ಧಭಾಗದಲ್ಲಿ ಮುದ್ರಿತವಾಗಿತ್ತು! ಆಗಿನ ಕಾಲದಲ್ಲಿ, ಪತ್ರಿಕೆಗಳಲ್ಲಿ ಬಣ್ಣದ ಮುದ್ರಣ ತಂತ್ರಜ್ಞಾನವೇ ಇರಲಿಲ್ಲ. ಹಾಗಾದರೆ, ಆ ಪತ್ರಿಕೆ ೧೮೪೦ನೇ ಇಸವಿಯಲ್ಲೇ ಬಣ್ಣದ ಚಿತ್ರ ಪ್ರಕಟಿಸಿದ್ದು ಹೇಗೆ?
ಈಹಳೇ ಸುದ್ದಿ ಕೇಳಿ ನನ್ನಂತೆ ನಿಮಗೂ ಅಚ್ಚರಿ ಆಗಬಹುದು!
೧೮೪೦ರ ಜನವರಿ ತಿಂಗಳು. ಅಮೆರಿಕದ ಲೆಕ್ಸಿಂಗ್‌ಟನ್ ಎಂಬ ವಿಲಾಸೀ ಹಡಗಿನ ಗ್ರಹಚಾರ ಸರಿ ಇರಲಿಲ್ಲ. ನ್ಯೂಯಾರ್ಕ್ ಬಂದರಿನಿಂದ ಸುಮಾರು ೫೦ ಮೈಲು ದೂರದಲ್ಲಿ ಸಮುದ್ರದ ನಟ್ಟ ನಡುವೆ ಅದಕ್ಕೆ ಬೆಂಕಿ ಹೊತ್ತಿಕೊಂಡಿತು. ಕೆಲವೇ ಗಂಟೆಗಳಲ್ಲಿ ಧಗಧಗನೆ ಉರಿದು, ಅದು ಸಮುದ್ರದಲ್ಲಿ ಮುಳುಗಿಹೋಯಿತು. ಇದ್ದ ೧೬೦ ಜನರಲ್ಲಿ ಕೇವಲ ನಾಲ್ವರು ಬದುಕುಳಿದರು. ವಿಷಯ ಅದಲ್ಲ. ಆ ಸುದ್ದಿಯನ್ನು ಪ್ರಕಟಿಸಿದ ‘ನ್ಯೂಯಾರ್ಕ್ ಸನ್’ ಪತ್ರಿಕೆಯ ಸಾಹಸವನ್ನು ಸ್ವಲ್ಪ ಕೇಳಿ.
ಈ ದುರಂತದ ವರದಿಗಾಗಿ ‘ನ್ಯೂಯಾರ್ಕ್ ಸನ್’ ಪತ್ರಿಕೆ ವಿಶೇಷ ‘ಎಕ್ಸ್‌ಟ್ರಾ’ ಆವೃತ್ತಿಯನ್ನು ಹೊರತಂದಿತ್ತು. ನೀಲ ಸಮುದ್ರದ ನಡುವೆ ಅಗ್ನಿಜ್ವಾಲೆಗೆ ಆಹುತಿಯಾಗುತ್ತಿರುವ ಲೆಕ್ಸಿಂಗ್‌ಟನ್ ಹಡಗಿನ ದೊಡ್ಡ ‘ವರ್ಣ ಚಿತ್ರ’ ಆ ಸಂಚಿಕೆಯ ಮುಖಪುಟದ ಮೇಲಿನರ್ಧಭಾಗದಲ್ಲಿ ಮುದ್ರಿತವಾಗಿತ್ತು! ಆಗಿನ ಕಾಲದಲ್ಲಿ, ಪತ್ರಿಕೆಗಳಲ್ಲಿ ಬಣ್ಣದ ಮುದ್ರಣ ತಂತ್ರಜ್ಞಾನವೇ ಇರಲಿಲ್ಲ. ಹಾಗಾದರೆ, ‘ನ್ಯೂಯಾರ್ಕ್ ಸನ್’ ೧೮೪೦ನೇ ಇಸವಿಯಲ್ಲೇ ಬಣ್ಣದ ಚಿತ್ರ ಪ್ರಕಟಿಸಿದ್ದು ಹೇಗೆ?
ನಂಬಿದರೆ ನಂಬಿ. ಬಿಟ್ಟರೆ ಬಿಡಿ. ಕಪ್ಪು ಬಿಳುಪು ಚಿತ್ರದ ಆ ಪತ್ರಿಕೆಯನ್ನು ಮೊದಲು ಲಿಥೋಗ್ರಾಫ್‌ನಲ್ಲಿ ಮುದ್ರಿಸಿ, ನಂತರ ಎಷ್ಟೋ ಪ್ರತಿಗಳಿಗೆ ಕಲಾವಿದರು ತಮ್ಮ ಕೈಯಾರೆ ಬಣ್ಣ ಹಚ್ಚಿ ಮಾರುಕಟ್ಟೆಗೆ ಬಿಡುಗಡೆ ಮಾಡಿದರು! ೧೬೮ ವರ್ಷದ ಹಿಂದಿನ ಈ ಅಪೂರ್ವ ಪತ್ರಿಕೆಯನ್ನು ನ್ಯೂಸಿಯಂನಲ್ಲಿ ಸಾಕ್ಷಾತ್ ಕಂಡಾಗ ಅಂದಿನ ಪತ್ರಿಕಾ ಸಾಹಸಕ್ಕೆ ಯಾರಾದರೂ ನಮೋ ನಮಃ ಎನ್ನಲೇಬೇಕು.

೨ನೇ ಮಹಾಯುದ್ಧದ ೪-ಡಿ ಸಿನಿಮಾ
ಎಡ್ವರ್ಡ್ ಆರ್ ಮರ್ರೋ ಎಂಬ ಅಮೆರಿಕದ ಮಹಾನ್ ರೇಡಿಯೋ ವರದಿಗಾರ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ, ಲಂಡನ್‌ನ ಕಟ್ಟಡವೊಂದರ ತಾರಸಿಯ ಮೇಲೆ ನಿಂತುಕೊಂಡು, ಜರ್ಮನಿಯ ವಿಮಾನಗಳು ಬಾಂಬ್ ಹಾಕುತ್ತಿರುವ ಸುದ್ದಿಯನ್ನು ರೇಡಿಯೋದಲ್ಲಿ ನೇರ ವರದಿ ಮಾಡಿದ. ನೇರ ಪ್ರಸಾರ ವರದಿಗಾರಿಕೆಯ ಆರಂಭ ಎಂದು ಗುರುತಿಸಲ್ಪಡುವ ಈ ಘಟನೆ ಬಹುತೇಕ ಜನರಿಗೆ ಗೊತ್ತಿಲ್ಲ. ಆದರೆ, ಆ ಸಂದರ್ಭವನ್ನು ನ್ಯೂಸಿಯಂನ ‘೪-ಡಿ’ ಟಾಕೀಸಲ್ಲಿ ಅನುಭವಿಸಬಹುದು.
ಈ ಟಾಕೀಸ್ ‘೩-ಡಿ’ಗಿಂತ ಅದ್ಭುತ ಅನುಭವ ನೀಡುತ್ತದೆ. ದೂರದಿಂದ ರೋಯ್ಯನೆ ಬರುವ ಬಾಂಬರ್ ವಿಮಾನ ನಮ್ಮ ತಲೆಯ ಮೇಲೇ ಬಂದಂತಾಗಿ ತಲೆಗೂದಲೆಲ್ಲಾ ಗಾಳಿಗೆ ಹಾರಾಡುತ್ತದೆ. ಗುಡುಗು ಸಿಡಿಲು ಆರ್ಭಟಿಸಿ ಮಳೆ ಸುರಿಯುವ ಲಕ್ಷಣ ಕಾಣಿಸಿದಾಗ ನಮ್ಮ ಮೇಲೂ ನಿಜವಾದ ಹನಿಗಳು ಬಿದ್ದು ವಾಸ್ತವ ಬಯಲಿನ ಅನುಭವ ಆಗುತ್ತದೆ. ಜೈಲಿನೊಳಗೆ ಇಲಿಗಳು ಕಿಚಿಕಿಚ ಎನ್ನುತ್ತ ಓಡಾಡುವಾಗ ಅವು ನಮ್ಮ ಕಾಲಮೇಲೇ ಓಡಾಡಿದಂತೆ ಸ್ಪರ್ಷಾನುಭವವಾಗುತ್ತದೆ. ಹಾವು ಭುಸ್ಸನೆ ವಿಷ ಉಗುಳಿದಾಗ ಅಕ್ಷರಶಃ ಮುಖದ ಮೇಲೆ ಸಿಂಚನವಾಗುತ್ತದೆ! ಇಂಥ ಟಾಕೀಸಿನಲ್ಲಿ, ಮೂರು ಬೇರೆ ಬೇರೆ ವರದಿಗಾರರ ಕಿರುಚಿತ್ರ ನೋಡುವಾಗ ನಾವು ನ್ಯೂಸಿಯಂ ನಲ್ಲಿದ್ದೇವೋ... ಅಥವಾ ಆ ವರದಿಗಾರರ ಜೊತೆ, ಅವರ ಕಾಲದಲ್ಲೇ ಇದ್ದೇವೋ ಎಂದು ಗೊತ್ತಾಗದಷ್ಟು ಗಾಢ ಅನುಭವವಾಗುತ್ತದೆ.
ವಾಷಿಂಗ್‌ಟನ್‌ನ ಹೃದಯದಲ್ಲಿ

ವಿಶೇಷವೆಂದರೆ, ಯುಎಸ್ ಕ್ಯಾಪಿಟಾಲ್ ಬಳಿ ಖಾಲಿಯಿದ್ದ ಏಕೈಕ ಸೈಟು ಇದಾಗಿತ್ತು. ಈ ನಿವೇಶನದಲ್ಲಿ ೪೫೦ ಮಿಲಿಯನ್ ಡಾಲರ್ ವೆಚ್ಚದಲ್ಲಿ ನಿರ್ಮಾಣವಾಗಿದೆ. ಈ ಬದಲಾವಣೆಯ ಹಿನ್ನೆಲೆಯಲ್ಲಿ ೨೦೦೨ರಲ್ಲಿ ಬಾಗಿಲು ಮುಚ್ಚಿದ್ದ ಹಳೆಯ ನ್ಯೂಸಿಯಂ ಈ ವರ್ಷ ಏಪ್ರಿಲ್‌ನಿಂದ ಹೊಸ ರೂಪದಲ್ಲಿ ಪುನಾರಂಭಗೊಂಡಿದೆ.
ಇದು ಸರ್ಕಾರಿ ಮ್ಯೂಸಿಯಂ ಅಲ್ಲ. ಫ್ರೀಡಂ ಫೋರಂ ಎಂಬ ಸ್ವಯಂ ಸೇವಾ ಸಂಸ್ಥೆ ಸ್ಥಾಪಿಸಿದ ಖಾಸಗಿ ಮ್ಯೂಸಿಯಂ. ಈ ನ್ಯೂಸಿಯಂ ಎದುರಿನ ಪ್ರದೇಶವೇ ‘ನ್ಯಾಷನಲ್ ಮಾಲ್’. ಇಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಅಮೆರಿಕದ ಹತ್ತಾರು ಮ್ಯೂಸಿಯಂಗಳು, ಜಾರ್ಜ್ ವಾಷಿಂಗ್‌ಟನ್, ಕೆನಡಿ, ಜಾಫರ್‌ಸನ್, ಲಿಂಕನ್ ಮುಂತಾದ ಗಣ್ಯರ ಸ್ಮಾರಕಗಳೂ ಇವೆ. ವಾಷಿಂಗ್‌ಟನ್ ಡಿ.ಸಿ.ಗೆ ಬಂದ ಪ್ರವಾಸಿಗರ್ಯಾರೂ ಈ ಪ್ರದೇಶ ನೋಡದೇ ವಾಪಸಾಗುವುದೇ ಇಲ್ಲ. ಇಂಥ ಅಪರೂಪದ ಸ್ಥಳಕ್ಕೆ ಹೊಂದಿಕೊಂಡತೆಯೇ ಇರುವುದರಿಂದ ನ್ಯೂಸಿಯಂಗೆ ಇನ್ನಷ್ಟು ಕಳೆ ಹಾಗೂ ಮಹತ್ವ.

ಹಿಸ್ಟರಿ ಆಫ್ ನ್ಯೂಸ್ ವಿಭಾಗ ನೋಡುತ್ತಾ ಹೋದಂತೆ, ಎರಡನೇ ಮಹಾಯುದ್ಧ ಆರಂಭವಾದ ಸುದ್ದಿ, ಮುಕ್ತಾಯವಾದ ಸುದ್ದಿ, ಹಿಟ್ಲರ್ ಹತಗೊಂಡ ಸಮಾಚಾರ, ಮಾನವ ಚಂದ್ರನ ಮೇಲೆ ಕಾಲಿಟ್ಟ ವರದಿ, ಕೆನಡಿ, ರೇಗನ್, ಲಿಂಕನ್ ಹತ್ಯೆಯಾದ ಘಟನೆ, ಟೈಟಾನಿಕ್ ಮುಳುಗಿದ ವಾರ್ತೆ... ಹೀಗೆ ಅನೇಕ ಐತಿಹಾಸಿಕ ಘಟನೆಗಳು ಪತ್ರಿಕೆಯ ಪುಟಗಳ ರೂಪದಲ್ಲಿ ಜೀವಂತಗೊಳ್ಳತೊಡಗುತ್ತವೆ.
ಬಾಸ್ಟರ್ಡ್ಸ್!

ಪತ್ರಿಕೋದ್ಯಮ ಹೂವ ಮೇಲಿನ ನಡಿಗೆಯಲ್ಲ. ಎಷ್ಟೋ ಪತ್ರಕರ್ತರು ಸುದ್ದಿಗಾಗಿ ಜೀವ ಕೊಟ್ಟಿದ್ದಾರೆ. ಅಂತಹ ಪತ್ರಕರ್ತರಿಗಾಗಿ ಇಲ್ಲಿ ಸ್ಮಾರಕವಿದೆ. ೧೮೦೦ ದಿವಂಗತ ಪತ್ರಕರ್ತರ ಚಿತ್ರವಿದೆ. ಈ ಚಿತ್ರಗಳ ಸಂಖ್ಯೆ ಹೆಚ್ಚುತ್ತಿದೆ ಎಂಬುದು ಕಳವಳಕಾರಿಯಾದರೂ ನಿಜ. ಇದೇ ವಿಭಾಗದಲ್ಲಿ ಬಿಳಿಯ ವ್ಯಾನೊಂದಿದೆ. ಇದು ಇರಾಕ್ ಯುದ್ಧದಲ್ಲಿ ವರದಿಗಾರರು ಬಳಸಿದ್ದ ವಾಹನ. ಇದರ ಮೇಲೆಲ್ಲಾ ಬುಲೆಟ್ ಬಡಿದ ಕುರುಹಾಗಿ ಅನೇಕ ರಂಧ್ರಗಳು. ಯುದ್ಧಭೂಮಿಯ ವರದಿಗಾರಿಕೆ ಎಷ್ಟು ಅಪಾಯಕಾರಿ ಎಂಬುದನ್ನಿದು ಪರಿಣಾಮಕಾರಿಯಾಗಿ ಬಿಂಬಿಸುತ್ತದೆ.
ಗುಟೆನ್‌ಬರ್ಗ್ ನಿರ್ಮಿಸಿದ ಜಗತ್ತಿನ ಮೊಟ್ಟ ಮೊದಲ ಮುದ್ರಣ ಯಂತ್ರದ ಮಾದರಿ, ಆತ ಮುದ್ರಿಸಿದ ಜಗತ್ತಿನ ಮೊಟ್ಟ ಮೊದಲ ಪುಸ್ತಕ ಗುಟೆನ್‌ಬರ್ಗ್ ಬೈಬಲ್‌ನಿಂದ ಹಿಡಿದು... ಸುದ್ದಿ ಸಂಗ್ರಹಕ್ಕೆ ಕೆಎಕ್ಸ್‌ಎಎಸ್ ಟೀವಿ ಬಳಸುತ್ತಿದ್ದ ನೈಜ ಸುದ್ದಿ-ಹೆಲಿಕಾಪ್ಟರ್‌ವರೆಗೆ ಇಲ್ಲಿ ೬೫೦೦ಕ್ಕಿಂತ ಹೆಚ್ಚು ಪ್ರದರ್ಶಕಗಳಿವೆ.
‘ಸ್ವಾತಂತ್ರ್ಯ ದಮನದ’ ದ್ಯೋತಕವಾಗಿದ್ದ ಬರ್ಲಿನ್ ಗೋಡೆಯನ್ನು ೧೯೮೯ರಲ್ಲಿ ಕೆಡವಲಾಯಿತು. ಆದರೆ ಅನೇಕ ವರ್ಣ ಚಿತ್ತಾರದ ಆ ಗೋಡೆ ಹೇಗಿತ್ತು ಗೊತ್ತೇ? ಇಲ್ಲಿ, ಬರ್ಲಿನ್ ಗೋಡೆಯ ಮೂರು ಟನ್ ತೂಕದ ಎಂಟು ವರ್ಣ ರಂಜಿತ ಅವಶೇಷಗಳಿವೆ. ಇವುಗಳನ್ನು ನೋಡಿದರೆ, ಬರ್ಲಿನ್ ಗೋಡೆಯ ವಾಸ್ತವ ತಿಳಿಯುತ್ತದೆ.
ಹೈಟೆಕ್ ಸ್ಟೂಡಿಯೋ
ಹೈಟೆಕ್ ಸ್ಟೂಡಿಯೋ
ಇಲ್ಲಿ ಹಳೆಯ ಕಾಲದ ತಗಡು, ವಸ್ತುಗಳು ಮಾತ್ರವಲ್ಲ, ಅತ್ಯಾಧುನಿಕ ಮಾಧ್ಯಮ ತಂತ್ರಜ್ಞಾನದ ಪ್ರದರ್ಶವೂ ಇದೆ. ಸುದ್ದಿಯ ಆಳ ಅರಿವು ನೀಡುವ ೧೨೫ ಗೇಮ್ ಸ್ಟೇಶನ್‌ಗಳು, ಜನಸಾಮಾನ್ಯರಿಗೆ ಟೀವಿ ವರದಿಗಾರರಾಗುವ ಅನುಭವ ನೀಡಲು ಇಂಟರ್ಯಾಕ್ಟಿವ್ ಸ್ಟೂಡಿಯೋಗಳು ಅಲ್ಲದೇ ಐತಿಹಾಸಿಕ ಸುದ್ದಿ ಡಾಕ್ಯುಮೆಂಟರಿಗಳು, ತುಣುಕುಗಳು, ಪತ್ರಿಕೋದ್ಯಮ ಕುರಿತ ಸಿನಿಮಾಗಳು ಇಲ್ಲಿನ ವಿವಿಧ ಥೇಟರ್‌ಗಳಲ್ಲಿ ಪ್ರದರ್ಶನವಾಗುತ್ತಿರುತ್ತವೆ. ಇವುಗಳಲ್ಲಿ ಒಂದು ಥೇಟರಿನ ತೆರೆಯ ಉದ್ದ ಬರೋಬ್ಬರಿ ೧೦೦ ಅಡಿ! ಇನ್ನೊಂದು ಮಾಧ್ಯಮ ತೆರೆಯ ಅಳತೆ ೪೦-೨೨ ಅಡಿ. ಎಬಿಸಿ ಟೀವಿಯ ಒಂದು ಲೈವ್ ಸ್ಟೂಡಿಯೋ ಇಲ್ಲಿದೆ. ಇಲ್ಲಿಂದಲೇ ‘ದಿ ವೀಕ್ ವಿಥ್ ಜಾರ್ಜ್ ಸ್ಟಿಫನೋಪಾಲಸ್’ ಕಾರ್ಯಕ್ರಮ ಪ್ರತಿ ಭಾನುವಾರ ನೇರ ಪ್ರಸಾರವಾಗುತ್ತದೆ.
ನ್ಯೂಸಿಯಂನಲ್ಲೊಂದು ಮನೆಯ ಮಾಡಿ...
ನ್ಯೂಸಿಯಂನ ಇನ್ನೊಂದು ವಿಶೇಷವೆಂದರೆ, ನ್ಯೂಸಿಯಂ ರೆಸಿಡೆಸ್ಸಿ. ಇದು ನ್ಯೂಸಿಯಂ ಕಟ್ಟಡದಲ್ಲೇ ಇರುವ ಅಪಾರ್ಟ್‌ಮೆಂಟು. ಬಾಡಿಗೆ ಹಾಗೂ ಲೀಸ್‌ಗೆ ಸಿಂಗಲ್ ಹಾಗೂ ಡಬಲ್ ಬೆಡ್ ರೂಮ್ ಮನೆಗಳು ಸಾರ್ವಜನಿಕರ ವಾಸಕ್ಕೆ ಲಭ್ಯ. ವಾವ್... ಎಂಥ ಲೊಕೇಶನ್‌ನಲ್ಲಿ ಮನೆ!
ನ್ಯೂಸಿಯಂನಲ್ಲೊಂದು ಮನೆಯ ಮಾಡಿ...
ನ್ಯೂಸಿಯಂನ ಇನ್ನೊಂದು ವಿಶೇಷವೆಂದರೆ, ನ್ಯೂಸಿಯಂ ರೆಸಿಡೆಸ್ಸಿ. ಇದು ನ್ಯೂಸಿಯಂ ಕಟ್ಟಡದಲ್ಲೇ ಇರುವ ಅಪಾರ್ಟ್‌ಮೆಂಟು. ಬಾಡಿಗೆ ಹಾಗೂ ಲೀಸ್‌ಗೆ ಸಿಂಗಲ್ ಹಾಗೂ ಡಬಲ್ ಬೆಡ್ ರೂಮ್ ಮನೆಗಳು ಸಾರ್ವಜನಿಕರ ವಾಸಕ್ಕೆ ಲಭ್ಯ. ವಾವ್... ಎಂಥ ಲೊಕೇಶನ್‌ನಲ್ಲಿ ಮನೆ!
ನ್ಯೂಸಿಯಂ ಅಂದರೆ ಬರೀ ಮ್ಯೂಸಿಯಂ ಅಲ್ಲ. ಅಲ್ಲಿ ಸಾರ್ವಜನಿಕರು ಬರ್ತ್‌ಡೇ ಪಾರ್ಟಿ ಮಾಡಲು ಅಥವಾ ತರಬೇತಿ ಕಾರ್ಯಾಗಾರ ಮಾಡಲೂ ಅವಕಾಶವಿದೆ. ಇಲ್ಲಿ, ಸುದ್ದಿ ಹಾಗೂ ಪತ್ರಿಕೋದ್ಯಮ ಇತಿಹಾಸಕ್ಕೆ ಸಂಬಂಧಿಸಿದ ಪುಸ್ತಕ, ಕ್ಯಾಸೆಟ್, ಡೀವಿಡಿ ಹಾಗೂ ಇತರ ಸ್ಮರಣಿಕೆ ಮಾರುವ ಮಳಿಗೆಯೂ ಒಂದಿದೆ. ಅಲ್ಲದೇ, ನ್ಯೂಸಿಯಂ ಆಗಾಗ ವಿವಿಧ ಕಾರ್ಯಕ್ರಮಗಳನ್ನು ನಡೆಸಿ ಸಾರ್ವಜನಿಕರನ್ನು ಆಕರ್ಷಿಸುತ್ತಿರುತ್ತದೆ. ನ್ಯೂಸಿಯಂ ಪ್ರವೇಶಕ್ಕೆ ೧೮ ಡಾಲರ್ ಶುಲ್ಕ. ನ್ಯೂಸಿಯಂನಂಥ ಬೃಹತ್ ಯೋಜನೆಗೆ ಹಣ ಸಂಗ್ರಹಿಸಲು, ಫ್ರೀಡಂ ಫೋರಂ ಇವುಗಳನ್ನು ಆದಾಯ ಮೂಲವಾಗಿ ಬಳಸಿಕೊಳ್ಳುತ್ತದೆ. ಇಲ್ಲವಾದರೆ, ನ್ಯೂಸಿಯಂನಂಥ ಐರಾವತವನ್ನು ಸರ್ಕಾರಿ ನೆರವಿಲ್ಲದೇ ಸಲಹುವುದು ಹೇಗೆ?
ನ್ಯೂಸಿಯಂ ವೆಬ್ ಸೈಟ್ : http://www.newseum.org
--------------------------
ನ್ಯೂಯಾರ್ಕ್‌ನಲ್ಲೊಂದು ಸೆಕ್ಸ್ ಮ್ಯೂಸಿಯಂ!
ನಾನು ಟೈಮ್ಸ್ ಸ್ವೇರ್‌ನಿಂದ ನ್ಯೂಯಾರ್ಕ್ ಸ್ಟಾಕ್ ಎಕ್ಸ್‌ಚೇಂಜ್ ಕಡೆ ಹೊರಟಿದ್ದೆ. ಆಗ ಕಣ್ಣಿಗೆ ಬಿತ್ತು ‘ಮ್ಯೂಸಿಯಂ ಆಫ್ ಸೆಕ್ಸ್‘. ಅರರೆ.. ಹೀಗೂ ಒಂದು ಮ್ಯೂಸಿಯಂ ಇದೆಯಾ ಅಂದುಕೊಂಡೆ. ಮ್ಯೂಸಿಯಂ ಅಮೆರಿಕದ ಸಂಸ್ಕೃತಿಯಲ್ಲೇ ರಕ್ತಗತ. ಎಲ್ಲ ವಿಷಯಕ್ಕೂ ಒಂದೊಂದು ವಸ್ತು ಸಂಗ್ರಹಾಲಯ ಮಾಡಿ ಎಲ್ಲ ದಾಖಲೆಗಳನ್ನೂ ಸಂರಕ್ಷಿಸುವುದು ಅವರ ಜಾಯಮಾನ. ಹಾಗಾಗಿ, ಅಮೆರಿಕದಲ್ಲಿ ಲೆಕ್ಕವಿಲ್ಲದಷ್ಟು ಮ್ಯೂಸಿಯಂ.
ಅಂದಹಾಗೆ, ಸೆಕ್ಸ್ ಮ್ಯೂಸಿಯಂನಲ್ಲಿ ಮನುಷ್ಯ ಮತ್ತು ಪ್ರಾಣಿ ಲೈಂಗಿಕತೆ ಕುರಿತು ಅನೇಕ ಮಾದರಿಗಳು, ಚಿತ್ರಕಲೆ, ಛಾಯಾಚಿತ್ರಗಳು, ಮಾಹಿತಿ ಅಲ್ಲದೇ ಲೈಂಗಿಕ ಆಟಿಕೆಗಳೂ ಇವೆ. ಈ ಮ್ಯೂಸಿಯಂನ ಉದ್ದೇಶ ಲೈಂಗಿಕ ಸದಭಿರುಚಿ ಮೂಡಿಸುವುದು. ಅದರಿಂದ ಚರ್ಚ್ ಸನಿಹವಿದ್ದರೂ ನ್ಯೂಯಾರ್ಕ್‌ನ ಸ್ಥಳೀಯ ಆಡಳಿತ ಈ ಮ್ಯೂಸಿಯಂಗೆ ಪರವಾನಿಗೆ ನೀಡಿದೆ. ಮುಂಬೈನಲ್ಲೂ ಇಂತಹ ಒಂದು ಸೆಕ್ಸ್ ಮ್ಯೂಸಿಯಂ ಇತ್ತೀಚೆಗೆ ಆರಂಭವಾಗಿದೆಯಂತೆ.
No comments:
Post a Comment