ಇದು ಪೆಪ್ಸಿ ಜಾಹೀರಾತಲ್ಲ. ವರ್ಜಿನ್ ಮೊಬೈಲ್ ಕಂಪನಿಯ ಮಾರ್ಕೆಟಿಂಗ್ ಗಿಮಿಕ್ಕೂ ಅಲ್ಲ. "ಪುಗಸಟ್ಟೆ ಟಾಕ್ ಟೈಮ್ ಹಾಗೂ ಉಚಿತ ಎಸ್.ಎಂ.ಎಸ್." ಎನ್ನುವುದು ಬ್ಲಿಕ್ ಎಂಬ ಮೊಬೈಲ್ ಕಂಪನಿಯ ಬಿಸಿನೆಸ್ ಮಾಡೆಲ್ಲು. ಲಂಡನ್ ಮೂಲದ ಈ ಕಂಪನಿ ಶೀಘ್ರ ಭಾರತದಲ್ಲೂ ತನ್ನ ಸೇವೆ ಆರಂಭಿಸಲಿದೆ. ಯುವಕ-ಯುವತಿಯರಿಗೆ ಉಚಿತ ಮೊಬೈಲ್ ಸಂಪರ್ಕ ನೀಡಲಿದೆ.
ಹಾಗಾದರೆ, ಕಂಪನಿಗೇನು ಆದಾಯ?
ಬ್ಲಿಕ್ - ಒಂದು ಜಾಹೀರಾತು ಆಧಾರಿತ ಮೊಬೈಲ್ ಸೇವಾ ಕಂಪನಿ. ಮಹಾನಗರಗಳಲ್ಲಿ ವಾಸಿಸುವ, 16ರಿಂದ 24 ವರ್ಷ ವಯೋಮಿತಿಯೊಳಗಿನ ಯುವಕ ಯುವತಿಯರಿಗೆ ಉಚಿತ ಟಾಕ್ ಟೈಮ್ ರಿಫಿಲ್ ಕೂಪನ್ನುಗಳನ್ನು ನೀಡುತ್ತದೆ. ಈ ಕಂಪನಿ ಜಾಹೀರಾತುಗಳನ್ನು ಸಂಗ್ರಹಿಸಿ ಈ ಚಂದಾದಾರರ ಮೊಬೈಲ್ ಫೋನಿಗೆ ಬಿತ್ತರಿಸುತ್ತದೆ. ಮೊಬೈಲ್ ಸೇವೆ ಪಡೆಯುವ ಯುವಕ-ಯುವತಿಯರು ಈ ಜಾಹೀರಾತುಗಳನ್ನು ಓದುತ್ತಾರೆ ಇಲ್ಲವೇ ಕೇಳುತ್ತಾರೆ ಅಥವಾ ಎಂಎಂಎಸ್ ಜಾಹೀರಾತುಗಳನ್ನು ನೋಡುತ್ತಾರೆ. ಬ್ಲಿಕ್ ಕಂಪನಿಗೆ ಈ ಜಾಹೀರಾತುಗಳೇ ಆದಾಯ. ಯುವಕ-ಯುವತಿಯರಿಗೆ ಪುಕ್ಕಟೆ ಮೊಬೈಲ್ ಸೇವೆ. ಹಾಗೂ ಜಾಹೀರಾತುದಾರರಿಗೆ ಯುವಗ್ರಾಹಕರನ್ನು ತಲುಪುವ ಅವಕಾಶ. - Win-Win Situation for all.
ಮೊಬೈಲ್ ಫೋನ್ ಇಂದು ಕೇವಲ ಫೋನಾಗಿ ಉಳಿದಿಲ್ಲ. ಇದೊಂದು ಪ್ರಭಾವೀ ಮಾಧ್ಯಮವಾಗಿ ಬದಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪತ್ರಿಕೆ, ಟೀವಿ, ಹಾಗೂ ಇಂಟರ್ನೆಟ್ಟಿನಂತೆ ಮೊಬೈಲ್ ಸೇವೆಗೂ ಜಾಹೀರಾತು ಪ್ರಮಾಣ ಹೆಚ್ಚಾಗುತ್ತದೆ ಎಂಬುದು ಬ್ಲಿಕ್ ಲೆಕ್ಕಾಚಾರ.
ಈ ಬಿಸಿನೆಸ್ ಮಾಡೆಲ್ ಭಾರತದಲ್ಲಿ ಯಶಸ್ವಿಯಾಗುವುದೇ? ಗೊತ್ತಿಲ್ಲ.
ಈಗ ಹತ್ತು ವರ್ಷದ ಹಿಂದೆ, ಬೆಂಗಳೂರು ಸೇರಿದಂತೆ ದೇಶದ ಅನೇಕ ಭಾಗದಲ್ಲಿ, ಇದೇ ಬಿಸಿನೆಸ್ ಮಾಡೆಲ್ಲಿನ, ಜಾಹೀರಾತು ಆಧಾರಿತ, ಉಚಿತ ಇಂಟರ್ನೆಟ್ ಸೇವೆ ಆರಂಭವಾಗಿತ್ತು. ಕ್ಯಾಲ್-ಟೈಗರ್ ಎಂಬ ಕಂಪನಿ ಉಚಿತ ಇಂಟರ್ನೆಟ್ ಸಂಪರ್ಕ ನೀಡಿತ್ತು. ಇಂಟರ್ನೆಟ್ ಕನೆಕ್ಟ್ ಆದಾಗ ಕಂಪ್ಯೂಟರಿನ ತೆರೆಯ ಅಡಿ-ಭಾಗದಲ್ಲಿ ಜಾಹೀರಾತು ಬ್ಯಾನರ್ ಕಾಣಿಸುತ್ತಿದ್ದವು. ಆದರೆ, ಕಂಪನಿಗೆ ಸಾಕಷ್ಟು ಜಾಹೀರಾತು ಸಿಗದೇ, ಕಂಪನಿ ಲಾಸ್ ಆಗಿ, ಕ್ಯಾಲ್-ಟೈಗರ್ ಉಚಿತ ಇಂಟರ್ನೆಟ್ ಸೇವೆ ಬಂದಾಯಿತು.
ಅದೇ ವೇಳೆ, ಚೆಕ್-ಮೇಲ್ ಎಂಬ ಇನ್ನೊಂದು ಸೇವೆಯೂ ಆರಂಭವಾಗಿತ್ತು. ಯಾಹೂ ಥರದ ಇ-ಮೇಲ್ ಸೇವೆ ಇದಾಗಿತ್ತು. ಆದರೆ, ವಿಶೇಷವೆಂದರೆ, ಈ ಇ-ಮೇಲ್ ಸೇವೆ ಬಳಸಿದರೆ, ಕಂಪನಿ ಪ್ರತಿ ತಿಂಗಳೂ ಹಣ ಕೊಡುತ್ತಿತ್ತು... ಚೆಕ್ ರೂಪದಲ್ಲಿ. ಅದಕ್ಕೇ ಚೆಕ್ ಮೇಲ್ ಎಂಬ ಹೆಸರಿತ್ತು. ಕಂಪನಿಗೆ ಜಾಹೀರಾತುಗಳಿಂದ ಆದಾಯ ಬರುತ್ತಿತ್ತು. ಆದರೆ, ಸಾಕಷ್ಟು ಜಾಹೀರಾತು ಸಿಗದೇ ಕಂಪನಿ ನಷ್ಟ ಹೊಂದಿ ಸೇವೆ ಬಂದಾಯಿತು.
ಅದೇ ರೀತಿ... ಜಾಹೀರಾತು ಮೇಲ್ ಓದಿ ಹಣ ಗಳಿಸಿ ಎಂಬ ಇನ್ನೊಂದಿಷ್ಟು ಸೇವೆ ಇತ್ತು. ನಾನು ಇದೆಲ್ಲಾ ಸೇವೆಗೂ ಸದಸ್ಯನಾಗಿದ್ದೆ. ಆರಂಭದಲ್ಲಿ ಉಚಿತ ಇಂಟರ್ನೆಟ್, ಕೆಲವಷ್ಟು ಚೆಕ್ ಎಲ್ಲಾ ಬಂದಿದ್ದು ನಿಜ. ಆದರೆ, ಆ ಕಂಪನಿಗಳ ಬಿಸಿನೆಸ್ ಯಶಸ್ವಿಯಾಗಲಿಲ್ಲ.
ಈಗ ಬ್ಲಿಕ್ ಬಂದಿದೆ. ಬಿಸಿನೆಸ್ ಮಾಡೆಲ್ ಅದೇ. ಪ್ರಾಡಕ್ಟ್ ಮಾತ್ರ ಬೇರೆ.... ಆದ್ದರಿಂದ ಬ್ಲಿಕ್ ಕ್ಲಿಕ್ ಆಗುವುದೋ ಬ್ಲಿಂಕ್ ಆಗುವುದೋ ಎನ್ನುವ ಕುತೂಹಲ ನನಗಿದೆ.
Tuesday, June 09, 2009
ಯಂಗಿಸ್ತಾನಿಗಳಿಗೆ ಉಚಿತ ಟಾಕ್ ಟೈಮ್, SMS ಸೇವೆ
Subscribe to:
Post Comments (Atom)
1 comment:
ಒಹ್ ನೀವು ಕ್ಯಾಲ್-ಟೈಗರ್ ಪಾರ್ಟಿ , ನಾನಂತೂ ಕ್ಯಾಲ್-ಟೈಗರ್ ಆಗ ವಿ ಎಸ ಏನ್ ಎಲ ಗಿಂತ ಕ್ಯಾಲ್-ಟೈಗರ್ ಫಾಸ್ಟ್ ಇತ್ತು .
Post a Comment