ನಾನು ಸಜೀವ ಗಿನಿ ಪಿಗ್‌ಗಳನ್ನು ಎಂದೂ ನೋಡಿಲ್ಲ. ಆದರೆ, ನಾನು 7ನೇ ತರಗತಿಯಲ್ಲಿದ್ದಾಗ, ವಿಜ್ಞಾನ ಪುಸ್ತಕದಲ್ಲಿ ಆನುವಂಶಿಯತೆ ಕುರಿತ ಪಾಠದಲ್ಲಿ 'ಗಿನಿ ಪಿಗ್' ಎಂಬ ಮೊಲದಂತೆ ಕಾಣುವ, ಹಂದಿಗಳ ಚಿತ್ರ ನೋಡಿದ ನೆನಪು ಇನ್ನೂ ಇದೆ. ಇಲಿಗಳು ಹಾಗೂ ಗಿನಿ ಪಿಗ್‌ಗಳನ್ನು ವಿಜ್ಞಾನಿಗಳು ತಮ್ಮ ಪ್ರಯೋಗಕ್ಕೆ ಬಳಸಿಕೊಳ್ಳುವುದು ವಾಡಿಕೆ. ಆದ್ದರಿಂದ, 'ಗಿನಿ ಪಿಗ್' ಎಂದರೆ 'ಪ್ರಯೋಗ ಪಶು' ಎಂಬ ಅರ್ಥ ಹುಟ್ಟಿಕೊಂಡಿದ್ದು ನಿಮಗೂ ಗೊತ್ತಿರಬಹುದು. ಅದು ಸರಿ... ಈಗ ನನಗೆ ಧಡಕ್ಕಂತ ಗಿನಿ ಪಿಗ್ ನೆನಪಾದದ್ದು ಏಕೆ?
ಏಕೆಂದರೆ, ನನಗೆ ಹತ್ತನೇ ತರಗತಿ ವಿದ್ಯಾರ್ಥಿಗಳೆಲ್ಲ ಈಗ 'ಗಿನಿ ಪಿಗ್ಗುಗಳಂತೆ' ಕಾಣುತ್ತಿದ್ದಾರೆ. ಪಾಪ ಪ್ರಯೋಗ ಪಶುಗಳು!
ಶಿಕ್ಷಣ ಕ್ಷೇತ್ರದಲ್ಲಿ, ನಮ್ಮ ಮಕ್ಕಳ ಮೇಲೆ ನಡೆಯುತ್ತಿರುವ ಪ್ರಯೋಗಗಳನ್ನು ನೋಡಿದಾಗ ನನಗೆ ಅಯ್ಯೋ ಅನ್ನಿಸುತ್ತದೆ. ನಮ್ಮ ದೇಶದಲ್ಲಿ, ನಮ್ಮ ರಾಜ್ಯದಲ್ಲಿ ಅದೆಷ್ಟು ಶಿಕ್ಷಣ ತಜ್ಞರು! ಅದೆಂಥ ಪ್ರಯೋಗಗಳು! ಒಬ್ಬರು ಮಾತೃಭಾಷೆಯಲ್ಲಿ ಶಿಕ್ಷಣ ಅಂದರೆ, ಇನ್ನೊಬ್ಬರು ಆಂಗ್ಲ ಮಾಧ್ಯಮ ಅನ್ನುತ್ತಾರೆ. ಇನ್ನೊಬ್ಬರು ಟ್ರೈಮಿಸ್ಟರ್ ಅಂದರೆ ಇನ್ನೊಬ್ಬರು ಸೆಮಿಸ್ಟರ್ ಅಂತಾರೆ. ಒಬ್ಬರು ಸೆಂಟ್ರಲ್ ಸಿಲಬಸ್ ಅಂದರೆ ಮಗದೊಬ್ಬರು ಸ್ಟೇಟ್ ಸಿಲಬಸ್ ಅಂತಾರೆ. ಸಾಲದೂ ಅಂತ ಈಗ ಈ ತಜ್ಞರ ಪೀಳಿಗೆಗೆ ಹೊಸ ಪಂಡಿತರೊಬ್ಬರ ಸೇರ್ಪಡೆಯಾಗಿದೆ.
ಮೀಟ್ ಮಿಸ್ಟರ್ ಕಪಿ ಸಿಬಲ್.. ಸಾರಿ... ಕಪಿಲ್ ಸಿಬಲ್
ಇವರು ಇದೀಗ ಭಾರತದ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಲು ಹೊರಟಿದ್ದಾರೆ. ಅದಕ್ಕಾಗಿ ಈ ಕೆಳಗಿನ ಪ್ರಯೋಗ ಮಾಡುವ ಪ್ರಸ್ತಾವನೆ ಮುಂದಿಟ್ಟಿದ್ದಾರೆ.
1. SSLC ಪಬ್ಲಿಕ್ ಪರೀಕ್ಷೆ ರದ್ದು ಮಾಡುವ ಪ್ರಯೋಗ.
2. SSLC, CBSE, ICSE ಮುಂತಾದ ಮಂಡಳಿಗಳನ್ನೆಲ್ಲಾ ವಿಸರ್ಜಿಸಿ ದೇಶಾದ್ಯಂತ ಒಂದೇ ಪ್ರೌಢ ಶಿಕ್ಷಣ ಮಂಡಳಿ ಸ್ಥಾಪಿಸುವ ಪ್ರಯೋಗ.
3. ದಿಲ್ಲಿಯಿಂದ ಹಳ್ಳಿವರೆಗೆ ಏಕರೂಪ ಪಠ್ಯ ತರುವ ಪ್ರಯೋಗ.
ಈಗಿನ ಶಿಕ್ಷಣ ಪದ್ಧತಿಯಲ್ಲಿ, ಪರೀಕ್ಷೆಗಳಿಂದ ವಿದ್ಯಾರ್ಥಿಗಳಿಗೆ ಸಿಕ್ಕಾಪಟ್ಟೆ ಟೆನ್‌ಶನ್ ಇದೆ. ಈ ಟೆನ್‌ಶನ್ನಿಂದ ಅನೇಕ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳಲೂ ಮುಂದಾಗುತ್ತಿದ್ದಾರೆ. ಆದ್ದರಿಂದ ಮಕ್ಕಳ ಟೆನ್‌ಶನ್ ಕಡಿಮೆ ಮಾಡಲು ಪರೀಕ್ಷೆಗಳನ್ನೇ ರದ್ದು ಮಾಡಬೇಕು ಎಂಬುದು ಅವರ ಆಲೋಚನೆ. ಒಂದುವೇಳೆ, ಕಪಿಲ್ ಸಿಬಲ್ ವೈದ್ಯರಾಗಿದ್ದರೆ ಡೇಂಜರ್ ಆಗಿತ್ತು. ಯಾರಾದರೂ ನೆಗಡಿ ಅಂತ ಅವರ ಬಳಿ ಹೋದರೆ, ಡಾಕ್ಟರ್ ಸಿಬಲ್ ಮೂಗು ಕತ್ತರಿಸುತ್ತಿದ್ದರು! ತಲೆ ನೋವು ಅಂದರೆ, ತಲೆ ತೆಗೆದುಹಾಕುತ್ತಿದ್ದರು!
ಆದರೂ, ಪರೀಕ್ಷೆ ರದ್ದು ಮಾಡುವ ಯೋಜನೆ ಪ್ರಕಟಿಸುವಾಗ ಕಪಿಲ್‌ರನ್ನು ಟೀವಿಯಲ್ಲಿ ನೋಡಬೇಕಿತ್ತು! ತಾನೇ ಮಹಾಬುದ್ಧಿವಂತ ಎಂಬಂತೆ ಅವರು ಬೀಗುತ್ತಿದ್ದರು. ಸಾಲದು ಎಂಬಂತೆ, ಅದ್ಯಾರೋ ಪೋದ್ದಾರ್ ಎಂಬ ಮಹರಾಯ್ತಿ ಸಿಬಲ್ ಅವರನ್ನ ಶಿಕ್ಷಣ ಕ್ಷೇತ್ರದ ಸ್ಯಾಮ್ ಪಿತ್ರೋಡಾ ಅಂತಲೂ ಬಣ್ಣಿಸಿದಳು. ಓ ಗಾಡ್!
ಹಾಗಾದರೆ, SSLC ಪರೀಕ್ಷೆ ರದ್ದು ಮಾಡಿದರೆ, ವಿದ್ಯಾರ್ಥಿಗಳ ಮೇಲಿನ ಒತ್ತಡ ನಿಜವಾಗಲೂ ಕಡಿಮೆಯಾಗುತ್ತಾ? ನನ್ನ ಪ್ರಕಾರ ಇಲ್ಲ. ಕಪಿಲ್ ಪ್ರಯೋಗ ಒಂದು ಕಪಿಚೇಷ್ಟೇಯಾಗುತ್ತದೆ ಅಷ್ಟೇ. ಇದಕ್ಕೆ ನನ್ನ 6 ಫಂಡಾ ಇದೆ, ನೋಡಿ.
ಫಂಡಾ 1: SSLC ಪರೀಕ್ಷೆ ರದ್ದಾಗುವುದರಿಂದ ವಿದ್ಯಾರ್ಥಿಗಳ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ ಎಂಬುದು ಸುಳ್ಳು. ಒತ್ತಡ ಒಂದು ಪಾಯಿಂಟಲ್ಲಿ ಕಡಿಮೆಯಾಗಿ ಇನ್ನೊಂದು ಪಾಯಿಂಟಿಗೆ ಶಿಫ್ಟ್ ಆಗುತ್ತದೆ. ಅಷ್ಟೇ.
ಮೊಟ್ಟ ಮೊದಲನೇಯದಾಗಿ ಮಕ್ಕಳ ಮೇಲೆ ಮಾನಸಿಕ ಒತ್ತಡ ಏಕೆ ಉಂಟಾಗುತ್ತದೆ ಎಂಬುದನ್ನು ಗಮನಿಸಬೇಕು. ಇದಕ್ಕೆ ಶಿಕ್ಷಣದ ಗ್ರಾಫಿನಲ್ಲಿ ಹಿಮ್ಮುಖವಾಗಿ ಯೋಚಿಸಬೇಕು.
a) ಇದು ಶಿಕ್ಷಣದ ಗ್ರಾಫ್. ಎಲ್ಲ ಪಾಲಕ ಪೋಷಕರ ಉದ್ದೇಶವೇನು? ತಮ್ಮ ಮಕ್ಕಳು ಚೆನ್ನಾಗಿ ಓದಿ-ಕಲಿತು ಉತ್ತಮ ಉದ್ಯೋಗ ಪಡೆಯಬೇಕು. ಕೈತುಂಬಾ ಸಂಬಳ ಪಡೆದು ಸುಖವಾಗಿ ಬದುಕಬೇಕು ಎಂಬುದು ತಾನೆ? ಅಂದರೆ, ಈ ಗ್ರಾಫಿನ 5ನೇ ಹಂತ ತಲುಪುವುದು ಎಲ್ಲ ಪಾಲಕ-ಪೋಷಕರ ಗುರಿ. ಈ ಹಂತ ತಲುಪುವ ಸಲುವಾಗಿ ಎಲ್ಲ ಒತ್ತಡ ಇರುತ್ತದೆ. ಒಮ್ಮೆ ಈ ಹಂತ ತಲುಪಿದರೆ ಒತ್ತಡ ನಿವಾರಣೆಯಾಗುತ್ತದೆ ಹಾಗೂ ಪಾಲಕರು ತಮ್ಮ ಜೀವನ ಧನ್ಯವಾಯಿತು ಎಂದುಕೊಳ್ಳುತ್ತಾರೆ. ಅಂದರೆ, ಪಾಲಕರು ತಮ್ಮ ಮಕ್ಕಳ ಮೇಲೆ ಶಿಕ್ಷಣದ ಒತ್ತಡ ಹೇರುವುದು ಈ 5ನೇಯ ಹಂತ ತಲುಪುವ ಸಲುವಾಗಿ. Point to be noted. ಉತ್ತಮ ಉದ್ಯೋಗ ಪಡೆಯುವುದೇ "ಒತ್ತಡದ" ಗಮ್ಯ.
b) ಹಾಗಾದರೆ, 5ನೇ ಹಂತ ತಲುಪುವುದು ಹೇಗೆ? ಐದನೇ ಹಂತ ತಲುಪಲು ಮಕ್ಕಳು ಅತ್ಯುತ್ತಮ ಶಿಕ್ಷಣ ಹಾಗೂ ಕೌಶಲ್ಯವನ್ನು ಪಡೆದಿರಬೇಕಾಗುತ್ತದೆ. ಕೇವಲ ಶಿಕ್ಷಣದ ಪ್ರಮಾಣಪತ್ರ ಪಡೆದಿದ್ದರೆ ಉತ್ತಮ ಉದ್ಯೋಗ ಸಿಗುವುದಿಲ್ಲ. ಉದಾಹರಣೆಗೆ ಬರೀ ಎಂಬಿಎ ಪದವಿ ಪಡೆದರೆ, ಸಾಲದು. ಆ ಪದವಿಯಲ್ಲಿ ಅತ್ಯುತ್ತಮ ಸ್ಕೋರ್ ಮಾಡಿರಬೇಕು. ಕೇವಲ ಉತ್ತಮ ಸ್ಕೋರ್ ಮಾಡಿದರೂ ಸಾಲದು. ಅತ್ಯುತ್ತಮ ಬಿಸಿನೆಸ್ ಸ್ಕೂಲಲ್ಲಿ ಕಲಿತಿರಬೇಕು. ಅತ್ಯುತ್ತಮ ಸಂಸ್ಥೆಯಲ್ಲಿ ಕಲಿತರೆ ಮಾತ್ರ ಅತ್ಯುತ್ತಮ ಉದ್ಯೋಕ್ಕೆ ಅರ್ಹತೆ ದೊರೆಯುತ್ತದೆ. Point to be noted. ಅಂದರೆ, ಇಲ್ಲಿ ಎರಡು ರೀತಿಯ ಒತ್ತಡ ಇರುತ್ತದೆ. ಒಂದು ಉತ್ತಮ ಸ್ಕೋರ್ ಮಾಡುವುದು ಹಾಗೂ ಇನ್ನೊಂದು ಅತ್ಯುತ್ತಮ ಶಿಕ್ಷಣ ಸಂಸ್ಥೆಯಲ್ಲಿ ಕಲಿಯುವುದು.
c) ಈ ಎರಡು ರೀತಿಯ ಒತ್ತಡಗಳೂ ಈಗ ಹಿಮ್ಮುಖವಾಗಿ 4, 3, 2ನೇ ಹಂತಕ್ಕೆ ವರ್ಗಾವಣೆಯಾಗುತ್ತವೆ. ಬೆಂಗಳೂರಿನಂಥ ಷಹರಗಳಲ್ಲಾದರೆ, ಈ ಒತ್ತಡ 1ನೇ ಹಂತಕ್ಕೂ ವರ್ಗಾವಣೆಯಾಗುತ್ತದೆ. (ಬೆಂಗಳೂರಿನಲ್ಲಿ ಉತ್ತಮ ಪ್ರಾಥಮಿಕ ಶಾಲೆಯಲ್ಲಿ LKGಗೆ ಪ್ರವೇಶ ಪಡೆಯುವ ಕಷ್ಟ ಪಾಲಕರಿಗೇ ಗೊತ್ತು!)
ಅಂದರೆ, ಅರ್ಥವಿಷ್ಟೇ. ವಿದ್ಯಾರ್ಥಿಗಳ ಮೇಲಿನ ಒತ್ತಡ ಎನ್ನುವುದು ಇಂದಿನ ಪರೀಕ್ಷೆಯ ಒತ್ತಡವಲ್ಲ. ಅದು ಭವಿಷ್ಯದ ಒತ್ತಡ. ಉತ್ತಮ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶ ಪಡೆಯುವ ಹಾಗೂ ಉತ್ತಮ ಉದ್ಯೋಗ ಪಡೆಯುವ ಕುರಿತಾದ ಒತ್ತಡ. ಅದು ಹಿಮ್ಮುಖವಾಗಿ ಬಂದಿದೆ ಅಷ್ಟೇ. Point to be noted. ಹಂತ 5ರಲ್ಲಿರುವ ಭವಿಷ್ಯದ ಒತ್ತಡವನ್ನು ನಿವಾರಿಸದ ಹೊರತೂ ಹಂತ 4, 3, 2 ಹಾಗೂ 1ರ ಮೇಲಿನ ಒತ್ತಡ ನಿವಾರಣೆಯಾಗುವುದಿಲ್ಲ.
ಸಿಬಲ್ ಅವರ ಕ್ರಾಂತಿಕಾರಿ ಶಿಕ್ಷಣ ಪದ್ಧತಿ ಹಂತ 5ರ ಒತ್ತಡವನ್ನು ನಿವಾರಿಸುವುದಿಲ್ಲ.
ಫಂಡಾ 2 : ಕರ್ನಾಟಕದ SSLC ಪ್ರಯೋಗ ಫೇಲಾದ ಕಥೆ
ಓ.ಕೆ. ಒಂದು ವೇಳೆ 10ನೇ ತರಗತಿಯ ಪಬ್ಲಿಕ್ ಪರೀಕ್ಷೆ ರದ್ದಾಯಿತು ಅಂದುಕೊಳ್ಳೋಣ. ಆಗ 10ನೇ ತರಗತಿಯ ವಿದ್ಯಾರ್ಥಿಯ ಮೇಲಿನ ಒತ್ತಡ ತಕ್ಷಣಕ್ಕೆ ಕಡಿಮೆಯಾಗುತ್ತದೆ ಎನ್ನುವುದು ನಿಜ. ಅದರೆ, ಪರಿಣಾಮವೇನು? ಆ ಮಗು ತಾನು ಓದಿದ ಶಾಲೆ ಬಿಟ್ಟು ಪಿಯು ಕಾಲೇಜು ಸೇರಲು ಪ್ರತ್ಯೇಕ ಪ್ರವೇಶ ಪರೀಕ್ಷೆ ಬರೆಯಬೇಕು ಎನ್ನುತ್ತದೆ ಸಿಬಲ್ ನಿಯಮ. ಅಂದರೆ, ಮಗು ಪಬ್ಲಿಕ್ ಪರೀಕ್ಷೆ ಬದಲು ತನ್ನ ಹೈಸ್ಕೂಲಿನಲ್ಲೇ ನಡೆಯುವ ವಾರ್ಷಿಕ ಪರೀಕ್ಷೆ ಬರೆಯುತ್ತದೆ ಹಾಗೂ ಪಿಯೂಸಿ ಪ್ರಥಮ ವರ್ಷಕ್ಕೆ ಸೇರಲು ಇನ್ನೊಂದು ಪ್ರವೇಶ ಪರೀಕ್ಷೆ ಬರೆಯುತ್ತದೆ. ಇದರರ್ಥ ಮಗು 11ನೇ ತರಗತಿ ಸೇರಲು ಎರಡು ಪರೀಕ್ಷೆ ಬರೆಯಬೇಕು! ಇದು extra ಒತ್ತಡವಲ್ಲವೇ?
ಇನ್ನೊಂದು ವಿಷಯ. ಕರ್ನಾಟಕದಲ್ಲಿ ನಡೆದ ಮಹತ್ವದ ಪ್ರಯೋಗವೊಂದನ್ನು ಗಮನಿಸಬೇಕು. ಕಳೆದ 3 ವರ್ಷದ ಹಿಂದೆ SSLC ಪರೀಕ್ಷೆಯ ಒತ್ತಡವನ್ನು ತಡೆಯಲು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆ ಮಾಡಿತು. 100 ಅಂಕಗಳ ಪ್ರಶ್ನೆ ಪತ್ರಿಕೆಯಲ್ಲಿ 60 ಅಂಕಗಳಷ್ಟು ಬಹು ಆಯ್ಕೆಯ ಪ್ರಶ್ನೆಗಳನ್ನು ನೀಡಿತು. ವಿವರಣಾತ್ಮಕ ಪ್ರಶ್ನೆಗಳನ್ನು ಕಡಿಮೆ ಮಾಡಿತು. ಇದರಿಂದ ಮಕ್ಕಳ ಮೇಲಿನ ಒತ್ತಡ ಕಡಿಮೆಯಾದದ್ದು ನಿಜ. ಆದರೆ, ಇದರ ಪರಿಣಾಮ ಪಿಯುಸಿ ದ್ವಿತೀಯ ಹಂತದಲ್ಲಿ ಕಾಣಿಸಿಕೊಂಡಿತು. ಸುಲಭವಾಗಿ SSLC ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳು, ಪ್ರಥಮ ಪಿ.ಯು. ತರಗತಿಯಲ್ಲಿ ಕಷ್ಟ ಅನುಭವಿಸಿದರು ಹಾಗೂ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಫೇಲಾದರು. ದ್ವಿತೀಯ ಪಿಯು ಪಾಸ್ ಫಲಿಂತಾಶ ಎಂದೂ ಇಲ್ಲದಷ್ಟು ಪ್ರಮಾಣದಲ್ಲಿ ಕುಸಿಯಿತು. ಇದೀಗ ರಾಜ್ಯದ ಶಿಕ್ಷಣ ತಜ್ಞರಿಗೆ ಈ ತಪ್ಪಿನ ಅರಿವಾಗಿದೆ. ಆದ್ದರಿಂದ ಮತ್ತೆ SSLC ಹಂತದಲ್ಲಿ ಪರೀಕ್ಷಾ ಪದ್ಧತಿ ಸರಿ ಮಾಡಲು ಈ ವರ್ಷದಿಂದ ಪ್ರಾರಂಭಿಸಿದ್ದಾರೆ. ಪರೀಕ್ಷೆಯನ್ನು ಸುಲಭಗೊಳಿಸಿದ್ದಕ್ಕೇ ಈ ಪರಿ ಫಲಿತಾಂಶ. ಇನ್ನು ಪರೀಕ್ಷೆಯನ್ನು ರದ್ದುಗೊಳಿಸಿದರೆ ಹೇಗಿರಬಹುದು ಪರಿಣಾಮ?
Point to be noted. ಅಡಿಪಾಯ ಗಟ್ಟಿ ಇಲ್ಲದೇ ಮನೆ ಕಟ್ಟಲು ಹೋದರೆ ಕಟ್ಟಡ ಕುಸಿಯದೇ ಇದ್ದೀತೆ? 12ನೇ ತರಗತಿಗೆ 10ನೇ ತರಗತಿಯೇ ಅಡಿಪಾಯ.
ಅಂದರೆ, 10ನೇ ತರಗತಿಯ ಪಬ್ಲಿಕ್ ಪರೀಕ್ಷೆ ರದ್ದು ಮಾಡಿದರೆ, ಅದರ ಒತ್ತಡ ಕೆಲವೇ ದಿನದಲ್ಲಿ ನಡೆಯುವ ಪ್ರವೇಶ ಪರೀಕ್ಷೆಯ ಮೇಲೆ ಅಥವಾ 11ನೇ ತರಗತಿಯ ಮೇಲೆ ಕಾಣಿಸಿಕೊಳ್ಳುತ್ತದೆ. ಅದರ ಪರಿಣಾಮ ವಗುವಿನ ಭವಿಷ್ಯಕ್ಕೆ ನಿರ್ಣಾಯಕವಾದ 12ನೇ ತರಗತಿಯ ಮೇಲೆ ಆಗುತ್ತದೆ.
ಇನ್ನು ಅಂಕಗಳ ಬದಲು ಗ್ರೇಡ್ ನೀಡುವುದಾಗಿ ಹಾಗೂ ಪರ್ಸೆಂಟ್ ಬದಲು ಪರ್ಸೆಂಟೈಲ್ ನೋಡುವುದಾಗಿ ಸಿಬಲ್ ಹೇಳಿದ್ದಾರೆ. ಸಿಬಲ್ ಪ್ರಸ್ತಾವದಲ್ಲಿ ಇದೊಂದೇ ತುಸು ಸಕಾರಾತ್ಮಕ ಅಂಶ. ಇದನ್ನು ಈಗಿನ ಪರೀಕ್ಷಾ ಪದ್ಧತಿಯಲ್ಲೂ ಜಾರಿ ಮಾಡಬಹುದಲ್ಲ!
ಫಂಡಾ 3: ಇದು ಸ್ಪರ್ಧಾತ್ಮಕ ಜಗತ್ತು. ಇಲ್ಲಿ ನಮ್ಮ ಇಡೀ ಜೀವನ, ಸ್ಪರ್ಧೆಯ ಸುತ್ತ ಗಿರಕಿಹೊಡೆಯುತ್ತದೆ. ಸ್ಪರ್ಧೆಯಲ್ಲಿ ಗೆಲ್ಲುವುದೇ ಮುಖ್ಯವಾಗುತ್ತದೆ. ಈ ಸ್ಪರ್ಧೆಯಲ್ಲಿ ಗೆಲ್ಲುವ ಬಗೆಯನ್ನು ಶಿಕ್ಷಣ ಕಲಿಸಿಕೊಡಬೇಕು. ಸ್ಪರ್ಧೆ ಎದುರಿಸುವ ಮನೋಸ್ಥೈರ್ಯವನ್ನು ಬೆಳೆಸಿಕೊಡಬೇಕು. ಜೀವನದ ವಾಸ್ತವ ಒತ್ತಡಗಳನ್ನು ಸ್ವೀಕರಿಸಲು ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಬೇಕು. Survival of the Fittest ಎಂಬ ಸತ್ಯದ ದರ್ಶನ ಮಾಡಿಸಬೇಕು. ಅದನ್ನು ಬಿಟ್ಟು ಒತ್ತಡಗಳಿಗೆ ಹೆದರಿ ಓಡಿಹೋಗುವ ಪಲಾಯನವಾದವನ್ನು ಕಲಿಸಬಾರದು. ಈಗ ಕಪಿಲ್ ಸಿಬಲ್ ನಮ್ಮ ವಿದ್ಯಾರ್ಥಿಗಳಿಗೆ ಪರೀಕ್ಷೆಯಿಂದ ಓಡಿಹೋಗುವ ವಿದ್ಯೆ ಕಲಿಸಲು ಉದ್ದೇಶಿಸಿದ್ದಾರೆ!
ಫಂಡಾ 4 : ಪರೀಕ್ಷೆ ರದ್ದು ಮಾಡುವುದರಿಂದ, "ಹೇಗೂ ಪಾಸಾಗಬೇಕಿಲ್ಲ ಬಿಡು..." ಎಂದು, ಮಕ್ಕಳು ಬೇಜವಾಬ್ದಾರರಾಗುತ್ತಾರೆ. ಪರೀಕ್ಷೆ ಇಲ್ಲದಿದ್ದರೂ ತಾವು ಓದಬೇಕು ಎಂದು ಬಹುತೇಕ ಮಕ್ಕಳು ಅಂದುಕೊಳ್ಳುವುದಿಲ್ಲ. ಏಕೆಂದರೆ, ಓದುವುದು ಮಕ್ಕಳ ಸಹಜ Instinct ಅಲ್ಲ. ಆಡುವುದು ಅವರ ಸಹಜ ಗುಣ. ಆದ್ದರಿಂದ ಮಕ್ಕಳು ಪರೀಕ್ಷೆಯಿಲ್ಲದಿದ್ದರೂ ತಾವೇ ತಾವಾಗಿ ಓದಿಕೊಳ್ಳುತ್ತಾರೆ ಎಂಬುದು ಭ್ರಮೆ. ಮಕ್ಕಳನ್ನು ಓದಿಸುವ ಕಷ್ಟ ಬುದ್ದಿಜೀವಿಗಳಿಗಿಂತ ತಾಯಂದೀರಿಗೆ ಚೆನ್ನಾಗಿ ಗೊತ್ತು! ಅಲ್ಲದೇ, 16ನೇ ವಯಸ್ಸಿನ ಮಕ್ಕಳ ಮನಸ್ಸು ಚಂಚಲ. ಅವರಿಗಿನ್ನೂ ಜವಾಬ್ದಾರಿ ಮೂಡಿರದ ವಯಸ್ಸು ಅದು. ಅದಕ್ಕೇ ಅವರನ್ನು Adult ಎಂದು ಪರಿಗಣಿಸುವುದಿಲ್ಲ. ಆರರಿಂದ ಹದಿನಾರರವರೆಗೆ ಮಕ್ಕಳನ್ನು ಓದಿಸುವ ಜವಾಬ್ದಾರಿ ಹಿರಿಯರದು. ಈ ಹಿನ್ನೆಲೆಯಲ್ಲಿ, ಪರೀಕ್ಷೆ ಎಂಬುದು, ಮಕ್ಕಳಿಗೆ ಓದಲು ಒಂದು ಪ್ರಬಲ ಕಾರಣವಾಗುತ್ತದೆ. ಆದ್ದರಿಂದ, ಪರೀಕ್ಷೆಯನ್ನು ರದ್ದುಗೊಳಿಸುವುದು ತರವಲ್ಲ.
ಫಂಡಾ 5 : ದೇಶಾದ್ಯಂತ 10ನೇ ತರಗತಿಗೆ ಸಮಾನ ಪಠ್ಯಕ್ರಮ ಜಾರಿಯಾದರೆ, ಶೈಕ್ಷಣಿಕ ಗೊಂದಲ ನಿವಾರಣೆಯಾಗುತ್ತದೆ ಎಂದು ಕಪಿಲ್ ಸಿಬಲ್ ವಾದ. ಒಂದು ದೃಷ್ಟಿಯಲ್ಲಿ ಅದು ನಿಜ. ಆದರೆ, ಕೇಂದ್ರ ಪಠ್ಯಕ್ರಮದಲ್ಲಿ, ಆಯಾ ರಾಜ್ಯಗಳ ಭಾಷೆ, ಇತಿಹಾಸ, ಸಂಸ್ಕೃತಿ ಎಲ್ಲಾ ಏನಾಗುತ್ತದೆ? ಶಿಕ್ಷಣ ಎಂದರೆ ಬರೀ ಸೈನ್ಸು, ಮ್ಯಾಥ್ಸು ಅಲ್ಲವಲ್ಲ! ವಿಜ್ಞಾನ ಮತ್ತು ವಾಣಿಜ್ಯದಂಥ ವಿಷಯದಲ್ಲಿ ಸಮಾನ ಪಠ್ಯ ತರಬಹುದು. ಆದರೆ, ಇತಿಹಾಸ, ಸಂಸ್ಕೃತಿ, ಸಮಾಜ ಶಾಸ್ತ್ರ, ಭಾಷೆಯಂಥ ಸೂಕ್ಷ್ಮ ವಿಷಯದಲ್ಲಿ ಸಮಾನ ಪಠ್ಯಕ್ರಮ ತರವಲ್ಲ. ಅಲ್ಲದೇ, ಹಳ್ಳಿ ಮಕ್ಕಳಿಗೂ ದಿಲ್ಲಿ ಮಕ್ಕಳಿಗೂ ಒಂದೇ ಶಿಕ್ಷಣ ನೀಡಬೇಕು ಎಂದರೆ ಹೇಗೆ ಸರಿ. ದಿಲ್ಲಿ ಮಕ್ಕಳ ಠಸ್ ಪುಸ್ ಇಂಗ್ಲೀಷಿನ ಮುಂದೆ ನಮ್ಮ ಹಳ್ಳಿ ಮಕ್ಕಳ ಇಂಗ್ಲೀಷು ಹೇಗೆ ಸಮವಾದೀತು? ಕೇಂದ್ರ ಪಠ್ಯಕ್ರಮದಲ್ಲೂ ಕನ್ನಡಮಾಧ್ಯಮ ಶಿಕ್ಷಣ ಇರುವುದೇ? ಹಾಗೇನಾದರೂ ಇದ್ದರೂ, ಸಮಾನ ಪಠ್ಯಕ್ರಮಕ್ಕೆ ನಾವು ಒಪ್ಪಿಕೊಂಡರೆ, ಉತ್ತರ ಭಾರತದ ಝಾನ್ಸಿರಾಣಿ ಎಂದರೆ ನಮ್ಮ ಮಕ್ಕಳಿಗೆ ಗೊತ್ತಿರುತ್ತದೆ. ಕಿತ್ತೂರು ಚೆನ್ನಮ್ಮ ಎಂದರೆ ಅದ್ಯಾರು ಅಂತಾರೆ? ಏಕೆಂದರೆ, ಕೇಂದ್ರ ಪಠ್ಯಕ್ರಮ ಉತ್ತರ ಭಾರತದಲ್ಲಿ ಸಿದ್ಧವಾಗುತ್ತದೆ! ಇದೆಲ್ಲಾ ಹೊಸ ಟೆನ್‌ಶನ್ನಿಗೆ ಕಾರಣವಾಗುತ್ತದೆ.
ಫಂಡಾ 6: ಹೋಗಲಿ, ಸಿಬಲ್ ಹೇಳಿದ್ದನ್ನು ಒಪ್ಪಿಕೊಂಡು ಬಿಡೋಣ. ಪರೀಕ್ಷಾ ಒತ್ತಡದಿಂದ ಮಕ್ಕಳನ್ನೂ, ಪಾಲಕರನ್ನೂ ಪಾರುಮಾಡಬೇಕು ಎಂಬುದು ಅವರ ಸದುದ್ದೇಶ. ಪರೀಕ್ಷಾ ಒತ್ತಡಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುವಂಥ ಸ್ಥಿತಿ ಹೋಗಲಾಡಿಸಬೇಕು ಎಂಬುದು ಸರಿ. ಆದರೆ, ಈ ಪರೀಕ್ಷಾ ಒತ್ತಡ ಹಾಗೂ ಆತ್ಮಹತ್ಯೆ ಮಾಡಿಕೊಳ್ಳುವ ಪ್ರವೃತ್ತಿ 12ನೇ ತರಗತಿಯಲ್ಲೂ ಇದೆಯಲ್ಲಾ! ಡಿಗ್ರಿ ಕ್ಲಾಸಿನಲ್ಲೂ ಇದೆಯಲ್ಲಾ? ಅವರನ್ನೆಲ್ಲಾ ಏಕೆ ಸಿಬಲ್ ಪರೀಕ್ಷಾ ಟ್ರಾಮಾದಿಂದ ಪಾರು ಮಾಡುವುದಿಲ್ಲ? ಭಾರತದಲ್ಲಿರುವ ಎಲ್ಲ ಕ್ಲಾಸಿನ ವಿದ್ಯಾರ್ಥಿಗಳನ್ನೂ ಪರೀಕ್ಷಾ ಟ್ರಾಮಾದಿಂದ ಪಾರುಮಾಡಿ ಎಲ್ಲರಿಗೂ ಸರ್ಟಿಫಿಕೆಟ್ ದಯಪಾಲಿಸಬಹುದಲ್ಲ? ಅದಕ್ಕಿಂತ ದೊಡ್ಡ ಶಿಕ್ಷಣ ಕ್ರಾಂತಿ ಇನ್ಯಾವುದಿದೆ!
ಪ್ಲೀಸ್ ಥಿಂಕ್ ಎಬೌಟ್ ಇಟ್ ಮಿಸ್ಟರ್ ಕಪಿ ಸಿಬಲ್.
Tuesday, June 30, 2009
ಕಪಿಲ್ ಸಿಬಲ್ ಕಪಿ-ಚೇಷ್ಟೆ!
Subscribe to:
Post Comments (Atom)
12 comments:
ಸಕತ್ ಬರಹ ರವಿ ಅವರೇ,,
ಏನ್ ಗುರು ಬ್ಲಾಗಿನಲ್ಲಿ ಇದರ ಬಗ್ಗೆ ಓದಿದ್ದೆ,, ಈಗ ನಿಮ್ಮ ಬ್ಲಾಗಿನಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಈ ಹುಚ್ಚು ನಿರ್ಧಾರದಿಂದ ಆಗೋ ಅನಾಹುತಗಳ ಬಗ್ಗೆ ತಿಳಿದೆ.
ನಿಮಗೆ ಧನ್ಯವಾದಗಳು
ರವಿ ಅವರೆ, ನಿಜಕ್ಕು ನಿಮ್ಮ ಫಂಡಾಗಳು ತುಂಬಾ ಚೆನ್ನಾಗಿ ಮೂಡಿ ಬಂದಿವೆ. ನೀವು ಈ ವಿಚಾರಗಳನ್ನು ದೈನಿಕ ಪತ್ರಿಕೆಗಳಲ್ಲಿಯೂ ಬರೆದರೆ ಅದಕ್ಕೊಂದು ಬೆಲೆ ಸಿಗುತ್ತದೆ. ಜನರಿಗೆ ಯೋಚಿಸಲು ಮತ್ತು ಪ್ರತಿಭಟಿಸಲು ಸರಿಯಾದ ವಿಷಯ ಸಿಕ್ಕಂತೆ ಆಗುತ್ತದೆ.
ಧನ್ಯವಾದಗಳೊಂದಿಗೆ
-ಬಾಲಚಂದ್ರ ಪಾಟೀಲ್
Ravi Sir,
ಇದನ್ನು ಪತ್ರಿಕೆಗಳಲ್ಲಿ ಪ್ರಕಟ ಮಾಡಿ.ಹೆಚ್ಚು ಜನರಿಗೆ ವಿಷಯ ಗೊತ್ತಾಗಲಿ ಮತ್ತು ಈ ಮೂರ್ಖ ಪ್ರಯೋಗಕ್ಕೆ ವಿರೋಧ ಗಟ್ಟಿಯಾಗಲಿ.
very nice article....
ತುಂಬಾ ಚೆನ್ನಾಗಿ ಬರ್ದಿದ್ದೀರಿ .. ದಯವಿಟ್ಟು ಇಂಥವನ್ನು ಪತ್ರಿಕೆಯಲ್ಲಿ ಹಾಕಿ ಜಾಸ್ತಿ ಜನ ಓದೋ ಹಾಗೆ ಅವಕಾಶ ಮಾಡ್ಕೊಡಿ. ಹಾಗೆಯೇ ಕೆಲಸಕ್ಕೂ ಇಂಟರ್ವೀವ್ ಅನ್ನೋದನ್ನ ತಗದ್ ಹಾಕಿದ್ರೆ ಒಳ್ಳೆದು ಸುಮ್ನೆ ಟೆನ್ಶನ್ :)
ರವಿ ಅವರೆ, ನಿಮ್ಮ ವಿಶೇಷಣೆ ಚೆನ್ನಾಗಿದೆ.
-ಶೇಷಾದ್ರಿವಾಸು
ರವಿ ಹೆಗಡೆ ಅವರೇ ತುಂಬಾ ಚೆನ್ನಾಗಿ ಬರೆದಿದ್ದೀರ. ಕಪಿಲ್ ಸಿಬಲ್ ಅವರದ್ದು ಕಪಿ ಚೇಷ್ಟೆಯೆ ಸರಿ. ಈ ಮಹನೀಯರು 10ನೇ ತರಗತಿ ಪಾಸ್ ಮಾಡಲು ತುಂಬಾ ಕಷ್ಟ ಪಟ್ಟಿದ್ದಾರೆ ಅನ್ನಿಸುತ್ತೆ. ಹೀಗೆ ಪರೀಕ್ಷೆ ರದ್ದು ಮಾಡಿದರೆ ಶಿಕ್ಷಣದ ಗುಣಮಟ್ಟ ಕುಸಿಯುವ ಸಾಧ್ಯತೆ ಇದೆ.
ರಾಜೇಶ ಹೆಗಡೆ
www.ವಿಸ್ಮಯನಗರಿ.com
ಕನ್ನಡ ಬ್ಲಾಗ್, ಕವನ, ಚರ್ಚೆ, ಸಮೀಕ್ಷೆ ಇನ್ನೂ ಏನೇನೋ
www.vismayanagari.com
ರವಿ,
ನಿಮ್ಮ fundas ತುಂಬಾ ಸರಿಯಾಗಿವೆ. ಆದರೆ, ಕೆಲವು ಮೂರ್ಖರು ಇತಿಹಾಸದಲ್ಲಿ ತಮ್ಮ ಹೆಸರನ್ನು ಅಜರಾಮರವಾಗಿ ಮಾಡಲು ವಿಚಿತ್ರ ಆಜ್ಞೆಗಳನ್ನು ಹೊರಡಿಸುತ್ತಾರೆ. ಉದಾಹರಣೆಗೆ ಮೊಹಮ್ಮದ ತುಗಲಕ್ ಹಾಗೂ ಕಪಿಲ ಸಿಬಾಲ.
ನಮ್ಮ ಪಬ್ಲಿಕ್ ಪರೀಕ್ಷೆಗಳಲ್ಲಿ ತೇರ್ಗಡೆಯಾಗುವವರು ಶೇಕಡಾ ೫೦ಕ್ಕಿಂತ ಕಡಿಮೆ ಅಂದರೆ ನಮ್ಮ ಶಿಕ್ಷಣಪದ್ಧತಿಯಲ್ಲಿ ಏನೋ ತಪ್ಪಿದೆ ಅಂತ ಅರ್ಥವಾಗುತ್ತದೆ. ಅದನ್ನು ಸರಿಪಡಿಸಬೇಕೆ ಹೊರತು, ಪರೀಕ್ಷೆಗಳನ್ನು ರದ್ದುಪಡಿಸುವದಲ್ಲ.
ಅತೀ ಸೂಕ್ತವಾದ ತರ್ಕಗಳನ್ನು ಹೊ೦ದಿದ ತಮ್ಮ ಫ಼೦ಡಾಗಳು ಹೆಚ್ಚು ಪ್ರಚಲಿತವಾಗಬೇಕಿದೆ. ಪತ್ರಿಕೆಗಳಲ್ಲಿ ಪ್ರಕಟಣೆಗೆ ಯೋಚಿಸಿ. ಅದ್ಭುತ್ ಬರೆಹ -ವಾಸ್ತವಕ್ಕೆ ಕೈಗನ್ನಡಿ.
ನಮಸ್ಕಾರ ರವಿ,
ನಿಮ್ಮ ಬರಹ ತುಂಬಾ ಚೆನ್ನಾಗಿ ಮೂಡಿ ಬಂದಿದೆ, ನನಗೆ ಬೇಜಾರು ಅಂದ್ರೆ ಪ್ರೊಫೆಸರ್ ಬಿ ಕೆ ಚಂದ್ರಶೇಖರ್ ಮತ್ತು ವಿಶ್ವನಾಥ್ ಅಂತ ದಡ್ಡ ದಡ್ಡ ಸಾರೀ ದೊಡ್ಡ ದೊಡ್ಡ ಮನುಷ್ಯರೇ ಜನರನ್ನು ತಪ್ಪು ದಾರಿಗೆ ಎಳೀತ ಇದ್ದಾರಲ್ಲ ಅದಕ್ಕೆ ನಾಚಿಕೆ ಆಗ್ತ ಇದೆ. ಹೀಗೆ ಒಳ್ಳೆ ಒಳ್ಳೆ ಬರಹ ಬರೆದು ಎಲ್ಲರನ್ನು ತಲುಪಿ ಉತ್ತುಂಗಕ್ಕೆ ಏರಿ ಎಂದು ಹಾರೈಸುವೆ ಮತ್ತು ನಮ್ಮ ಜನರಿಗೂ ಇದು ಅರ್ಥ ಆಗಲಿ
ರವಿ ಅವರೇ,
ನಿಮ್ಮ ವಿಶ್ಲೇಷಣೆ ತುಂಬಾ ಚೆನ್ನಾಗಿದೆ. ದಯವಿಟ್ಟು ಪತ್ರಿಕೆಗಳಿಗೆ ಹಾಕಿಸಿ. ಇದರಿಂದ ಎಲ್ಲರಿಗೂ ಇದರ ಬಗ್ಗೆ ಅರಿವು ಮೂಡುತ್ತದೆ.
ಕಪಿ Symbol ಅಂದ್ರೆ ಸೂಕ್ತ
Post a Comment