Wednesday, July 15, 2009

ಠಳ್ಳನೆ ಒಡೆಯಿತು ಒಬಾಮಾ "ರಹಸ್ಯ ಟೆಲೆಪ್ರಾಂಪ್ಟರ್"ರಾಕ್ ಒಬಾಮಾ ಮಾತಿನ ಮಾಂತ್ರಿಕ ಎಂಬುದರಲ್ಲಿ ಎರಡು ಮಾತಿಲ್ಲ. ಅವರ ನಿರರ್ಗಳ ಭಾಷಣ, ಪ್ರಭಾವೀ ಕಂಠ, ಆತ್ಮವಿಶ್ವಾಸದ ಧ್ವನಿ ಕೇಳಿದರೆ ಎಂಥವನೂ ಮರುಳಾಗಲೇ ಬೇಕು. ಅಂಥ ವಿದ್ಯುಚ್ಛಕ್ತಿ ಇದೆ ಅವರ ಮಾತಿನಲ್ಲಿ. ಚರ್ಚುಗಳ ಕಮ್ಯುನಿಟಿ ಸಂಘಟನೆಯಲ್ಲಿ ಪ್ರಚಾರಕನಂತೆ ಕೆಲಸ ಮಾಡುತ್ತಿದ್ದ ಬರಾಕ್ ಒಬಾಮಾ ರಾಜಕೀಯದಲ್ಲಿ ದಿಢೀರ್ ನಾಯಕನಾಗಿ, ಇಲಿನಾನ್ಸ್ ರಾಜ್ಯದ ಸೆನೆಟರ್ ಆಗಿ ನಂತರ ಇಡೀ ಅಮೇರಿಕಕ್ಕೆ ಅಧ್ಯಕ್ಷ ಆಗಿ ದಿಢೀರನೆ ಬೆಳೆದದ್ದು ಒಂದು ಅದ್ಭುತ.

ಒಬಾಮಾ ಇಂಥ ವಾಗ್ಮಿಯಾದರೂ, ಅವರ ಭಾಷಣದ ಹಿಂದೆ ಒಂದು ತಾಂತ್ರಿಕ ಪಡೆಯೇ ಇರುತ್ತದೆ ಎಂದು ನಿಮಗೆ ಗೊತ್ತೇ? ಒಬಾಮಾ ಭಾಷಣ ಮಾಡುವಾಗ "ಟೀವಿ ಸುದ್ದಿ ವಾಚಕರು ವಾರ್ತೆ ಓದುವಾಗ ಬಳಸುವಂಥ ಟೆಲೆಪ್ರಾಂಪ್ಟರ್" ಬಳಸುತ್ತಾರೆ ಎಂದರೆ ನಂಬುತ್ತೀರಾ? ಹೌದು... ಅವರು ಎಲ್ಲರೆದುರೇ, ವೇದಿಕೆಯಲ್ಲೇ ಟೆಲೆಪ್ರಾಂಪ್ಟರ್ ಬಳಸಿದರೂ ಅದು ಯಾರಿಗೂ ಕಾಣುವುದಿಲ್ಲ. ಒಂಥರಾ ರಹಸ್ಯ ಎಂಬಂತಿರುತ್ತದೆ ಅದು.

ಅದು ಟೀವಿ ಸ್ಟೂಡಿಯೋಗಳ ಟೆಲೆಪ್ರಾಂಪ್ಟರಿಗಿಂತ ಹೈಟೆಕ್. ನೋಡಲು ಸಾಮಾನ್ಯ ಪಾರದರ್ಶಕ ಗಾಜಿನಂತೆ ಕಾಣಿಸುವುದರಿಂದ ಪ್ರೇಕ್ಷಕರ ಗಮನಕ್ಕೆ ಬರುವುದಿಲ್ಲ. ಆದರೆ, ಭಾಷಣಕ್ಕೆ ನಿಂತ ಒಬಾಮಾಗೆ ಮಾತ್ರ ಆ ಗಾಜಿನ ಮೇಲೆ ಚೆನ್ನಾಗಿ ಅಕ್ಷರಗಳು ಕಾಣಿಸುತ್ತವೆ. ಈ ಕೆಳಗಿನ ಚಿತ್ರ ನೋಡಿ.ಆದರೂ, ಇಂಥದ್ದೆಲ್ಲ ಬಹಳ ಕಾಲ ರಹಸ್ಯವಾಗಿ ಉಳಿಯುವುದಿಲ್ಲ. 2008ರ ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ ಅದು ಹೇಗೋ ಪತ್ತೆಯಾದ ಈ ಟೆಲೆಪ್ರಾಂಪ್ಟರ್ ಗುಟ್ಟು, ಅಮೆರಿಕದಲ್ಲಿ ಒಂದಷ್ಟು ಟೀಕೆಗೂ ಒಳಗಾಗಿತ್ತು. ಆದರೆ, ಒಬಾಮಾ ಚರಿಷ್ಮಾ ಎದುರು ಅದು ದೊಡ್ಡ ಸುದ್ದಿಯಾಗಲಿಲ್ಲ ಅಷ್ಟೇ. ಆನಂತರ, ಅಧ್ಯಕ್ಷರಾದ ಮೇಲೂ ಅವರು ಟೆಲೆಪ್ರಾಂಪ್ಟರ್ ಬಳಸುವುದನ್ನು ಬಿಡಲಿಲ್ಲ. ಅವರು ಎಲ್ಲಿಲ್ಲಿಗೆ ಹೋಗಿ ಭಾಷಣ ಮಾಡುತ್ತಿದ್ದರೋ, ಅಲ್ಲಿಗೆಲ್ಲಾ ಅವರ ಟೆಲೆಪ್ರಾಂಪ್ಟರ್ ಕೂಡ ಹೋಗುತ್ತಿತ್ತು.

ಪರಿಸ್ಥಿತಿ ಹೀಗಿರುತ್ತ, ನಿನ್ನೆ ಮಂಗಳವಾರ ಅವರ ಟೆಲೆಪ್ರಾಂಪ್ಟರ್ ಗುಟ್ಟು ರಟ್ಟಾಯಿತು. ಜಗತ್ತಿನಾದ್ಯಂತ ಸುದ್ದಿಯಾಯಿತು. ಕಾರಣ... ಕಾರ್ಯಕ್ರಮವೊಂದರಲ್ಲಿ ಟೆಲೆಪ್ರಾಂಪ್ಟರ್ ನೋಡಿಕೊಂಡು ಒಬಾಮಾ ಭಾಷಣ ಮಾಡುತ್ತಿರುವಾಗ ಅದು ಎಲ್ಲರೆದುರೇ ಠಳ್ಳಂತ ಬಿದ್ದು ಒಡೆದುಹೋಯಿತು. ಇದರಿಂದ ಒಬಾಮಾ ತುಸು ಗಾಬರಿಗೊಂಡರು. ತಕ್ಷಣವೇ ಸಾವರಿಸಿಕೊಂಡರೂ ಅವರ ಭಾಷಣ ಒಂದಷ್ಟು ತೊದಲಿತು. ಇದು ಟೀವಿಗಳಲ್ಲೂ ಬಿತ್ತರವಾಯಿತು. ಆಗ ಟೀವಿ ಸುದ್ದಿ ವಾಚಕರು ಮುಸಿ ಮುಸಿ ನಗುತ್ತ ಹೇಳಿದರು... "ಅಧ್ಯಕ್ಷರ ಭಾಷಣಕ್ಕೆ ತಾಂತ್ರಿಕ ತೊಡಕಾಗಿದೆ. ಅಡಚಣೆಗಾಗಿ ಕ್ಷಮಿಸಿ. :-)"

ಅಂದಹಾಗೆ ಒಬಾಮಾ ಟೆಲೆಪ್ರಾಂಪ್ಟರ್ ಹೇಗಿತ್ತು? ಇಲ್ಲಿವೆ ಕೆಲ ಚಿತ್ರಗಳು:


ಒಬಾಮಾ ಎದುರಿಗೆ ಇರುವ ಟೆಲೆಪ್ರಾಂಪ್ಟರ್.ಅಡಿಯಲ್ಲಿರುವ ಕಂಪ್ಯೂಂಟರ್ ತೆರೆಯ ಮೇಲೆ ಮೂಡುವ ಭಾಷಣದ ಅಕ್ಷರಗಳು ಟೆಲೆಪ್ರಾಂಪ್ಟರ್ ಮೂಲಕ ಒಬಾಮಾಗೆ ಕಾಣುವುದು ಹೀಗೆ.


ಟೆಲೆಪ್ರಾಂಪ್ಟರಿನ ಗಾಜು ಎಷ್ಟು ಪಾರದರ್ಶಕ ಎಂದು ಗಮನಿಸಿ.ಆದರೆ ಎದುರು ಕುಳಿತ ಪ್ರೇಕ್ಷಕರಿಗೆ ಈ ಪಾರದರ್ಶಕ ಟೆಲೆಪ್ರಾಂಪ್ಟರ್ ಮೇಲೆ ಮೂಡುವ ಅಕ್ಷರಗಳು ಕಾಣಿಸುವುದಿಲ್ಲ. ಅಲ್ಲದೇ, ಸಾಧಾರಣ ಗಾಜಿನಂತೇ ಕಾಣುವ ಅದು ಪ್ರೇಕ್ಷಕರ ಗಮನವನ್ನೂ ಸೆಳೆಯುವುದಿಲ್ಲ.ಒಬಾಮಾ ಅವರ ಸಾರ್ವಜನಿಕ ಕಾರ್ಯಕ್ರಮವೊಂದರ ಈ ಚಿತ್ರ ನೋಡಿ. ಅಲ್ಲಿ ಟೆಲೆಪ್ರಾಂಪ್ಟರ್ ಇದೆ ಎಂದು ಯಾರ ಗಮನಕ್ಕೆ ಬರಲು ಸಾಧ್ಯ ನೀವೇ ಹೇಳಿ.

9 comments:

neelihoovu said...

informative ಆದ ಬರಹ. ಯಾವುದೇ instrument ನೆರವಿಲ್ಲದೇ ಒರಿಜಿನಲ್ ಆಗಿ ಭಾಷಣ ಮಾಡುವ ನಮ್ಮ ರಾಜಕಾರಣಿಗಳೇ ಮೇಲು.

-ರಂಜಿತ್.

sunaath said...

ಗುಟ್ಟನ್ನು ನಮಗೆ ತಿಳಿಸಿದ ನಿಮಗೆ ಧನ್ಯವಾದಗಳು.

ಶ್ರೀನಿಧಿ.ಡಿ.ಎಸ್ said...

interesting!majavagide:)

DK said...

ಒಬಾಮ ಇದನ್ನು ಬಳಸುವುದರಲ್ಲಿ ನನಗೆ ಅಂತಹ ತಪ್ಪೇನು ಕಾಣಿಸಲಿಲ್ಲ...ಕನಿಷ್ಠ ಪಕ್ಷ ಕೆಲಸಕ್ಕೆ ಬಾರದ ವಿಷಯಗಳನ್ನು ಮಾತನಾಡದೇ ಅವಶ್ಯಕ ವಿಷಯಗಳ ಬಗ್ಗೆ ಮಾತನಾಡುವುದೇ ಒಳ್ಳೆಯದು..ಇಲ್ಲವಾದರೆ ನಮ್ಮ ರಾಜಕಾರಣಿಗಳ ತರಹ ಮೈಕು ಸಿಕ್ಕರೆ ಸಾಕು ಎಲ್ಲರ ತಲೆ ತಿನ್ನಲು ತಯಾರಾಗಿ ನಿಲ್ಲುವ ಭೂಪರ ಥರ ಬಾಯಿಗೆ ಬಂದದ್ದನ್ನೆಲ್ಲಾ ಮಾತನಾಡುವ ಗೊಜಿರುವುದಿಲ್ಲ...ಅಲ್ಲಿಯೂ ಸಹ ಅವರು ತಮ್ಮ ವೃತ್ತಿಪರತೆಯನ್ನು ತೋರುತ್ತಾರೆ...ಇದು ನಿಜಕ್ಕೂ ಸ್ವಾಗತಾರ್ಹ...

Ravi Hegde said...

@DK
ಖಂಡಿತ ತಪ್ಪೇನೂ ಇಲ್ಲ ಅಥವಾ ನಾನು ತಪ್ಪು ಅಂತಾನೂ ಹೇಳಿಲ್ಲ. Infact, I admire his oratory skills and styles a lot. ಆದರೆ, ನನಗೆ ಒಬಾಮಾ ಅದು ಹೇಗೆ ಅಂಕಿ ಅಂಶಗಳನ್ನ ಅಷ್ಟು ನಿಖರವಾಗಿ ಹೇಳುತ್ತಾನೆ, ಕಠಿಣ ವಾಕ್ಯಗಳನ್ನು ಪುಸ್ತಕದಿಂದ ಓದಿದಂತೆ ನಿರರ್ಗಳವಾಗಿ ಪಟಪಟನೆ ನುಡಿಯುವುದು ಹೇಗೆ ... ಅಂತೆಲ್ಲಾ ಅಚ್ಚರಿಯಾಗುತ್ತಿತ್ತು. ಆದರೆ, ಆತ ಟೆಲೆಪ್ರಾಂಪ್ಟರ್ ನೆರವು ಪಡೆಯುವ ವಿಚಾರ ತಿಳಿದ ಮೇಲೆ ನನ್ನ ಪ್ರಶ್ನೆಗೆ ಉತ್ತರ ಸಿಕ್ಕಿತ್ತು ಅಷ್ಟೇ. ಮೊನ್ನೆ ಆತನ ಟೆಲೆಪ್ರಾಂಪ್ಟರ್ ಒಡೆದ ಸುದ್ದಿ ಓದಿದ ಮೇಲೆ ಆ ಟೆಲೆಪ್ರಾಂಪ್ಟರ್ ವಿಚಾರವನ್ನು ತಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ಈ ಬ್ಲಾಗ್ ಬರೆದೆ. ಅಂದಹಾಗೆ, ನನಗೂ ppt ಇಲ್ಲದೇ ಭಾಷಣ ಮಾಡಲು ಕಷ್ಟ!

Chaitanya Hegde said...

interesting..

Murali said...

Thanks for the information.....

Chaithrika said...

I agree with DK (also with your reply to that comment)

ರಮೇಶ ದೊಡ್ಡಪುರ said...

ಒಳ್ಳೆಯ ಮಾಹಿತಿ ನೀಡಿದ್ದೀರಿ ಧನ್ಯವಾದಗಳು. ಪ್ರೇಕ್ಷಕರಿಗೆ ಸರಿಯಾದ ಮಾಹಿತಿ ತಿಳಿಸುವುದು ಮುಖ್ಯವಾದ ಕೆಲಸ. ಅದು ಯಾವ ರೀತಿಯಲ್ಲಾದರೂ ಸರಿ ಅಲ್ಲವೇ? ನಮ್ಮ ಎಲ್ಲ ವಾರ್ತಾ ವಾಹಿನಿಗಳ ಸುದ್ದಿ ವಾಚಕೂ ಅದನ್ನು ಬಳಸುತ್ತಾರೆ. ಅದರಲ್ಲೇನೂ ತಪ್ಪು ಇದೆ ಎಂದು ನನಗೆ ಅನ್ನಿಸುವುದಿಲ್ಲ.