ಪ್ರೆಸ್‌ಕ್ಲಬ್ ವದಂತಿಗಳಿಗೆ ಹೆಚ್ಚು ವಿನಾಶಕಾರಿ ಶಕ್ತಿ ಇದೆಯೋ? ಬ್ಲಾಗುಗಳಿಗೋ?
Well, ನನ್ನ ಪ್ರಕಾರ ಬ್ಲಾಗುಗಳಿಗೆ ಭಯಂಕರ ಶಕ್ತಿ ಇದೆ.
ಕಳೆದ ಸುಮಾರು 20 ದಿನದಿಂದ ನನ್ನ ಹಾಗೂ ಕನ್ನಡಪ್ರಭ ಸಂಪಾದಕ ರಂಗನಾಥ್ ಅವರ ರಾಜೀನಾಮೆಯ ಸುತ್ತ ನೂರಾರು ರೀತಿಯ ವದಂತಿ. ಟೀಕೆ. ನಮ್ಮನ್ನು ಕನ್ನಡಪ್ರಭದಿಂದ ಕಿತ್ತು ಹಾಕಿದರಂತೆ, ನಾವೇ ಆಡಳಿತ ಮಂಡಳಿ ಜೊತೆ ಜಗಳ ಮಾಡಿಕೊಂಡು ಬಿಟ್ಟೆವಂತೆ, ಇವತ್ತು ರಾಜೀನಾಮೆ ಕೊಟ್ಟರಂತೆ, ನಾಳೆ ಸಂಸ್ಥೆಯ ಮಾಲೀಕರು ಬಂದು ಕನ್ನಡಪ್ರಭದ ಹೊಸ ಸಂಪಾದಕರನ್ನು ಘೋಷಿಸುತ್ತಾರಂತೆ, 15 ಜನರ ದೊಡ್ಡ ತಂಡ ರಂಗನಾಥ್ ಅವರ ಜೊತೆ ಹೋಗುತ್ತಂತೆ, ಇಲ್ಲ ನಾಲ್ಕೇ ಜನ ಹೋಗುತ್ತಾರಂತೆ, ಸಿಇಒ ಅಂತೆ, ಹೊಸ ಪೇಪರ್ ಸಂಪಾದಕರಂತೆ, ಲಕ್ಷ ರುಪಾಯಿ ಸಂಬಳವಂತೆ, ಅಲ್ಲ 2 ಲಕ್ಷ ರುಪಾಯಿ ಸಂಬಳವಂತೆ, ಸುಳ್ಳು ಕೇವಲ 60-70 ಸಾವಿರ ರುಪಾಯಿ ಸಂಬಳವಂತೆ... ಇತ್ಯಾದಿ ಇತ್ಯಾದಿ...
ದಿನ ಬೆಳಗಾದರೆ, ರಾತ್ರಿಯಾದರೆ, ಇವೆಲ್ಲಾ ಮಾತು ಕೇಳೀ ಕೇಳಿ, ಎಸ್.ಎಂ.ಎಸ್. ಓದಿ ಓದಿ, ಈ-ಮೇಲ್ ನೋಡಿ ನೋಡಿ... ಕಿರಿಕಿರಿಯಾದರೂ ತೆಪ್ಪಗಿದ್ದೆ. ಇದೆಲ್ಲಾ ಸಾರ್ವಜನಿಕ ಜೀವನದಲ್ಲಿ ಸಹಜ ಅಂತ. ನಾವು ಜವಾಬ್ದಾರಿಯುತ ಹುದ್ದೆಯಲ್ಲಿದ್ದುಕೊಂಡು ಈ ಎಲ್ಲ ವದಂತಿಗಳಿಗೆ ಹೇಗೆ ಉತ್ತರಿಸುವುದು! ಅಥವಾ ಎಷ್ಟು ವದಂತಿಗಳಿಗೆ, ಎಷ್ಟು ಮಂದಿಗೆ ಅಂತ ಸಮಜಾಯಿಷಿ ನೀಡುವುದು? ಕ್ರಮೇಣ ಈ ವದಂತಿಗಳು ತಣ್ಣಗಾಗಿಬಿಡುತ್ತವೆ. ಇಂತಹ ವದಂತಿಗಳು ಕೇವಲ ನಮ್ಮ ಸುತ್ತ ಮಾತ್ರ ಅಲ್ಲವಲ್ಲ ಅಂತ ನನ್ನ ಪಾಡಿಗೆ ನಾನಿದ್ದೆ.
ಆದರೆ, ಈ ಬ್ಲಾಗಿದೆಯಲ್ಲ... ಇದೇ ಡೇಂಜರ್. ಇದರಲ್ಲಿ ಯಾರು ಏನು ಬೇಕಾದರೂ ಬರೆಯಬಹುದು. ಎಷ್ಟು ಬೇಕಾದರೂ ಬಯ್ಯಬಹುದು. ಎಂಥ ಆರೋಪವನ್ನಾದರೂ ಮಾಡಬಹುದು. ಹೋಗಲಿ ಅಂತ ಒಂದಕ್ಕೆ ಉತ್ತರ ನೀಡಿದರೆ, ಇನ್ನೂ ಅಪಾಯ. ಬಯ್ಯುವವರು, ಆರೋಪ ಮಾಡುವವರು ಇನ್ನಷ್ಟು ಆವೇಶದಿಂದ ಬರೆಯಲು ಆರಂಭಿಸುತ್ತಾರೆ. ಉತ್ತರ ನೀಡಲಿಲ್ಲವೋ... ಆ ವದಂತಿಗಳು, ಆರೋಪಗಳು ಅಪ್ಪಟ ಸತ್ಯ ಎಂಬಂತೆ ಅಂತರ್ಜಾಲದಲ್ಲಿ ದಾಖಲಾಗುತ್ತವೆ. ಜಗತ್ತಿನಾದ್ಯಂತ ಸುತ್ತುಹಾಕಿ ಮತ್ತೆ ಮತ್ತೆ ಧುತ್ತೆಂದು ಪ್ರತ್ಯಕ್ಷವಾಗಿ ಕಿರಿಕಿರಿ ಉಂಟುಮಾಡುತ್ತವೆ.
ಈಗ ಕೆಲವು ತಿಂಗಳ ಹಿಂದೆ ಎನ್.ಡಿ.ಟಿ.ವಿ. ಗ್ರೂಪ್ ಎಡಿಟರ್ ಬಾರ್ಕಾ ದತ್‌ಗೂ ಹೀಗೇ ಆಗಿತ್ತು. ಅದ್ಯಾರೋ ಬ್ಲಾಗಿನಲ್ಲಿ ಆಧಾರವಿಲ್ಲದ ಆರೋಪ ಮಾಡಿ, ಆ ಆರೋಪವನ್ನು ಅದ್ಯಾರೋ ಸೈನ್ಯಾಧಿಕಾರಿ ಓದಿ, ಆತ ಅದನ್ನು ಟೀವಿ ಸಂದರ್ಶನದಲ್ಲಿ ಹೇಳಿ, ಅವಾಂತರವಾಗಿತ್ತು. ನಂತರ ಎನ್.ಡಿ.ಟಿ.ವಿ. ಆ ಬ್ಲಾಗಿನ ಮೇಲೆ ಕಾನೂನು ಕ್ರಮ ಜರುಗಿಸಿತು. ಸೈನ್ಯಾಧಿಕಾರಿ ಅಧಿಕೃತವಾಗಿ ಕ್ಷಮೆ ಕೇಳಬೇಕಾಗಿ ಬಂತು.
ಅದೆಲ್ಲಾ ಇರಲಿ. ಈಗ ಇಂಥ ಆರೋಪಗಳಿಗೆ ಗುರಿಯಾಗುವ ಸರದಿ ನಮ್ಮದು. ಮೊದ ಮೊದಲು ಈ ಆರೋಪಗಳಿಗೆ ಉತ್ತರಿಸದಿರಲು ನಿರ್ಧರಿಸಿದ್ದೆವು. ಆದರೆ, ಈ ಬ್ಲಾಗುಗಳ ಮಹಿಮೆಯನ್ನು ಹೇಗೆ ಬಣ್ಣಿಸಲಿ? ಅದಕ್ಕೇ ಹೇಳಿದ್ದು ಪ್ರೆಸ್ ಕ್ಲಬ್ ಟಾಕ್‌ಗಿಂತ ಬ್ಲಾಗ್‌ಟಾಕ್ ಡೇಂಜರಸ್ ಅಂತ.
ಎಲ್ಲ ಅಂಶಗಳಿಗೂ ಉತ್ತರಿಸುವ ಉದ್ದೇಶವಾಗಲೀ, ಶಕ್ತಿಯಾಗಲೀ ನನಗಿಲ್ಲ. ಆದರೆ, ಸೂಕ್ಷ್ಮ ಅನ್ನಿಸುವ 3-4 ಆರೋಪಗಳಿಗೆ ನಾನಿಲ್ಲಿ ಅಧಿಕೃತ ಸ್ಪಷ್ಟನೆ ನೀಡುತ್ತಿದ್ದೇನೆ.
1. ಕನ್ನಡಪ್ರಭ ಸಂಪಾದಕ ರಂಗನಾಥ್ ಸುಮ್ಮನೆ ರಾಜೀನಾಮೆ ಕೊಟ್ಟು ಹೋಗುವ ಬದಲು ಕಚೇರಿಯ ತಮ್ಮ ಎಲ್ಲ ಪತ್ರವ್ಯವಹಾರ, ಇತ್ಯಾದಿ ಪರ್ಸನಲ್ ಕಡತಗಳನ್ನೆಲ್ಲ ಬೆಂಕಿ ಹಾಕಿ ಸುಟ್ಟುಹಾಕಿದ್ದಾರೆ.
ಈ ಆರೋಪವೊಂದು ದೊಡ್ಡ ಹಗರಣದ ರೂಪ ಪಡೆದಿದೆ. ತಮ್ಮ ಭ್ರಷ್ಟಾಚಾರಗಳನ್ನು ಮುಚ್ಚಿಹಾಕಲು ಯಾರೋ ಸರ್ಕಾರಿ ಕಡತಗಳನ್ನು ಸುಟ್ಟುಹಾಕಿದರಂತೆ ಎಂಬಂತೆ ಹುಯಿಲೆಬ್ಬಿಸಲಾಗಿದೆ. ವಾಸ್ತವ ಅದಲ್ಲ. ಹಲವಾರು ವರ್ಷಗಳ ಅವಧಿಯಲ್ಲಿ ಯಾವುದೇ ಕಚೇರಿಯಲ್ಲಾದರೂ ಪತ್ರವ್ಯವಹಾರಗಳ ದೊಡ್ಡ ಬೆಟ್ಟವೇ ಸೃಷ್ಟಿಯಾಗುತ್ತದೆ. ಅದಕ್ಕೇ ಹಲವು ಕಚೇರಿಯಲ್ಲಿ, ಕಾಲಕಾಲಕ್ಕೆ, ಅವಧಿ ಮೀರಿದ ಕಾಗದ ಪತ್ರಗಳನ್ನು ಹರಿದು ಚಿಂದಿ ಮಾಡಿ ಸುಟ್ಟುಹಾಕಲಾಗುತ್ತದೆ. ನಮ್ಮದೇ ಕಚೇರಿಯಲ್ಲೂ ಸುಮಾರು 6 ತಿಂಗಳಿಗೊಮ್ಮೆ ಈ ರೀತಿ ಅನಗತ್ಯ ಕಾಗದಪತ್ರಗಳನ್ನು ನಾಶಪಡಿಸುವ ಪದ್ಧತಿ ಇದೆ. ಈಗ ಸಂಪಾದಕ ರಂಗನಾಥ್ ತಮ್ಮ ಕಚೇರಿಯನ್ನು ತೆರವುಗೊಳಿಸುತ್ತಿರುವುದರಿಂದ ಅನಗತ್ಯ ಕಾಗದಪತ್ರಗಳನ್ನು ಹರಿದು ರದ್ದಿಗೆ ಎಸೆದದ್ದು ನಿಜ. ಆಗ, ಸಂಸ್ಥೆಯ ಬೆಂಗಳೂರು ಕಚೇರಿಯ ವ್ಯವಸ್ಥಾಪಕರೇ ಈ ಕಾಗದಪತ್ರಗಳನ್ನು ನಾಶಗೊಳಿಸುವ ಸೂಚನೆ ನೀಡಿದರು. ಅದಕ್ಕಾಗಿ ಕಚೇರಿಯ ನಿಯೋಜಿತ ಸಿಬ್ಬಂದಿಯೇ, ಟೈಮ್ ಆಫೀಸಿನ ಅಧಿಕಾರಿಯ ಸಮಕ್ಷಮದಲ್ಲೇ ಸುಟ್ಟುಹಾಕಿದರು. ಆ ಕಾಗದ ಪತ್ರಗಳನ್ನು ಸುಟ್ಟು ಹಾಕಿದ್ದು ಸಂಪಾದಕರಲ್ಲ - ಇದು ಕನ್ನಡಪ್ರಭದ ಕಾರ್ಯನಿರ್ವಾಹಕ ಸಂಪಾದಕನಾಗಿ ನಾನು ನೀಡುತ್ತಿರುವ ಅಧಿಕೃತ ಸ್ಪಷ್ಟನೆ.
(ಇಲ್ಲಿ ಇನ್ನೊಂದು ಮಾಹಿತಿ. ನಾನು ಕಾರ್ಯನಿರ್ವಾಹಕ ಸಂಪಾದಕನಾಗಿ ಅಧಿಕಾರ ಸ್ವೀಕಾರ ಮಾಡಿದಾಗ ನನ್ನ ಛೇಂಬರಿನ ಪಕ್ಕದ ಕಪಾಟಿನ ತುಂಬಾ ಕಾಗದಗಳೋ ಕಾಗದಗಳು. ಆರೆಂಟು ವರ್ಷದ ರದ್ದಿ ಪತ್ರವ್ಯವಹಾರಗಳು. ಯಾವುದು ಅಗತ್ಯ ಯಾವುದು ಅನಗತ್ಯ ಎಂದೂ ನಿರ್ಧರಿಸಲಾಗದ ಪರಿಸ್ಥಿತಿ. ಅದನ್ನೆಲ್ಲಾ ನೋಡಿ ಬೇಡದ್ದನ್ನು ಎಸೆದು ಬೇಕಾದನ್ನು ಆರಿಸಿಕೊಳ್ಳಲು ಹಲವು ವಾರಗಳೇ ಬೇಕಾಗಿತ್ತು ನನಗೆ. ಆಗ ನಾನು ಕಲಿತ ಪಾಠ: ಆಯಾ ಕಾಲಕ್ಕೆ ಸರಿಯಾಗಿ ಅವಧಿ ಮೀರಿದ ಕಾಗದಪತ್ರಗಳನ್ನು ನಾಶಪಡಿಸುವುದು ಒಂದು ಉತ್ತಮ ಆಡಳಿತಾತ್ಮಕ ಕ್ರಮ. ಇದೆಲ್ಲ ವಿವಾದ ಆಗುತ್ತದೆ ಎನ್ನುವುದೇ ನನಗೆ ಸೋಜಿಗ.)
2. ರಾಜೀನಾಮೆ ಕೊಟ್ಟು ಹೋಗುವ ಬದಲು ರಂಗನಾಥ್ ಮತ್ತು ರವಿ ಹೆಗಡೆ ಕನ್ನಡಪ್ರಭದ ಎಲ್ಲಾ ಶಾಖಾ ಕಚೇರಿಗಳಿಗೂ ಭೇಟಿ ನೀಡಿ ಕನ್ನಡಪ್ರಭದಲ್ಲಿ ಎಲ್ಲಾ ಸರಿ ಇಲ್ಲ ಎಂಬಂತೆ ಅಪಪ್ರಚಾರ ಮಾಡಿ ಕಂಪನಿಯೊಳಗೇ ಬೆಂಕಿ ಹಚ್ಚುವ ಕೆಲಸ ಮಾಡಿದರು.
ನಾವು ಇತ್ತೀಚೆಗೆ ರಾಜ್ಯಾದ್ಯಂತ ಪರ್ಯಟನೆ ಮಾಡಿದ್ದು ಉಪಸಂಪಾದಕರನ್ನು ನೇಮಿಸಿಕೊಳ್ಳುವ ಸಲುವಾಗೇ ವಿನಾ ಕಚೇರಿಯ ಬಗ್ಗೆ ಅಪಪ್ರಚಾರ ಮಾಡಲೆಂದಲ್ಲ. ಬೀದರದಿಂದ ಹಿಡಿದು ಚಾಮರಾಜನಗರದ ತನಕ ದೂರ ದೂರದ ಊರುಗಳಿಂದ ಯುವಕ ಯುವತಿಯರು ಕನ್ನಡಪ್ರಭದಲ್ಲಿ ಉದ್ಯೋಗಾವಕಾಶ ಕೋರಿ ಅರ್ಜಿ ಸಲ್ಲಿಸುತ್ತಾರೆ. ಅವರು ನಮ್ಮ ಲಿಖಿತ ಪರೀಕ್ಷೆ ಹಾಗೂ ಮೌಖಿಕ ಸಂದರ್ಶನಕ್ಕೆ ಹಾಜರಾಗಬೇಕು. ಇದಕ್ಕಾಗಿ, ಕೆಲವು ವರ್ಷಗಳ ಹಿಂದೆ, ಈ ಉದ್ಯೋಗಾಕಾಂಕ್ಷಿಗಳು ಬೆಂಗಳೂರಿಗೇ ಬಂದು ಒಂದು ದಿನ ತಂಗಬೇಕಾಗಿತ್ತು. ಇದಕ್ಕಾಗಿ ಅವರು ಪ್ರಯಾಣ ವೆಚ್ಚದ ಜೊತೆಗೆ ಲಾಡ್ಜಿಂಗ್ ವೆಚ್ಚದ ಹೊರೆಯನ್ನೂ ಹೊರಬೇಕಾಗಿತ್ತು. ಇದನ್ನು ತಪ್ಪಿಸಿ, ದೂರದೂರುಗಳ ಯುವಕ ಯುವತಿಯರಿಗೆ ಅನುಕೂಲವಾಗಲೆಂದು ರಾಜ್ಯದ ಅನೇಕ ಭಾಗಗಳಲ್ಲಿ ಪರೀಕ್ಷೆ ಹಾಗೂ ಸಂದರ್ಶನ ಏರ್ಪಡಿಸುವ ಪರಿಪಾಠವನ್ನು ನಾವು ಆರಂಭಿಸಿದೆವು. ಅದಕ್ಕಾಗಿ ಪ್ರತಿ ಬಾರಿಯೂ ನಾವು ರಾಜ್ಯಾದ್ಯಂತ ಪರ್ಯಟನೆ ನಡೆಸಿದ್ದೇವೆ. ಈ ಬಾರಿಯೂ ನಡೆಸಿದ್ದೇವೆ. ಆದರೆ, ಅಲ್ಲಿ ನಾವು ಕಂಪನಿಯ ಬಗ್ಗೆ ಅಪಪ್ರಚಾರ ನಡೆಸಿದೆವೆಂಬುದು ಅಪ್ಪಟ ನಾನ್‌ನೆಸ್ಸ್.
3. ಕನ್ನಡಪ್ರಭ ಮಾಲಿಕರನ್ನು, ಆಡಳಿತ ಮಂಡಳಿಯನ್ನು ರಂಗನಾಥ್ ಹಾಗೂ ರವಿ ಹೆಗಡೆ ಹಿಗ್ಗಾಮಗ್ಗ ಬೈದು, ಟೀಕಿಸಿ ರಾಜೀನಾಮೆ ನೀಡಿದ್ದಾರೆ. ಮ್ಯಾನೇಜ್‌ಮೆಂಟನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.
Well, even at this moment, I can say, our Chairman is one of the best newspaper chairmen to work with. ತಾವು ಪತ್ರಿಕೆಯ ಮಾಲಿಕರಾದರೂ, ಸಂಪಾದಕ ಹಾಗೂ ಸಂಪಾದಕೀಯವನ್ನು ಅತ್ಯಂತ ಗೌರವದಿಂದಲೇ ಕಾಣುವ ವ್ಯಕ್ತಿ ಅವರು. ಅವರು ತಮ್ಮ ಈ ನಿಲುವಿನಿಂದ ಸಾಕಷ್ಟು ಜಾಹೀರಾತು ಆದಾಯವನ್ನು ಕಳೆದುಕೊಂಡಿದ್ದಾರೆ. ಆದರೂ, ಸಂಪಾದಕರ ನಿಲವಿಗೆ ಬದ್ಧರಾಗಿ ನಿಲ್ಲುತ್ತಾರೆ. ಇದು ಅನೇಕ ಬಾರಿ ಜಾಹೀರಾತು ವಿಭಾಗದವರ ಅಸಮಾಧಾನಕ್ಕೂ ಕಾರಣವಾಗಿದೆ. ಪರಿಸ್ಥಿತಿ ಹೀಗಿರುತ್ತ, ನಾವು ಅವರನ್ನು ಟೀಕಿಸಿ, ತರಾಟೆಗೆ ತೆಗೆದುಕೊಂಡು, ರಾಜೀನಾಮೆ ನೀಡಿದೆವು ಎಂಬುದು ನಾನ್ಸೆನ್ಸ್. ಕಚೇರಿಯ ಆಂತರಿಕ ವಿಚಾರಗಳ ಕುರಿತು ದೂರು ನೀಡಲು ಚೆನ್ನೈಗೆ ಹೋಗಬೇಕಾದ ದುರ್ಗತಿ ಕನ್ನಡಪ್ರಭದಲ್ಲಿ ಎಂದೂ ಇರಲಿಲ್ಲ. ಈಗಲೂ ಇಲ್ಲ.
ಕಚೇರಿಯಲ್ಲಿ ಸರಿ-ಇಲ್ಲದ ಕೆಲವು ಸೌಲಭ್ಯಗಳು ಸುಧಾರಿಸಬೇಕು ಎಂದು ನಿಷ್ಠುರವಾಗಿ ಎಂದಾದರೂ ಹೇಳಿದ್ದಕ್ಕೂ ಈಗ ರಾಜೀನಾಮೆ ನೀಡಿರುವುದಕ್ಕೂ ತಾಳೆ ಹಾಕುವುದು ಒಂದು ಕುಚೋದ್ಯ.
4. ಕನ್ನಡಪ್ರಭದಂತ ಪುಟುಗೋಸಿ ಸಂಬಳದ ಪತ್ರಿಕೆಯಲ್ಲಿದ್ಕೊಂಡು...
ಕನ್ನಡಪ್ರಭ ಪುಟಗೋಸಿ ಸಂಬಳ ನೀಡುವ ಪತ್ರಿಕೆಯಲ್ಲ. It's one of the best paying Kannada Media organisations. ಇಲ್ಲಿ ಅನೇಕರಿಗೆ ಕನ್ನಡದ ನಂ.1 ಪತ್ರಿಕೆಗಿಂತ ಹೆಚ್ಚಿನ ವೇತನ ದೊರೆಯುತ್ತದೆ.
---
That's all I would say. ಮಿಕ್ಕಂತೆ ನಾವೇನೂ ಅಜಾತಶತ್ರುಗಳೂ ಅಲ್ಲ. ಟೀಕಾತೀತರೂ ಅಲ್ಲ. ನಮ್ಮ ಬಗ್ಗೆ ಟೀಕೆಗಳು ಮುಂದುವರಿಯುತ್ತವೆ ಎಂಬುದು ಗೊತ್ತು. ನಮ್ಮ ಜನ ಮಾಹಾತ್ಮ ಗಾಂಧಿಯನ್ನೇ ಟೀಕಿಸದೇ, ದ್ವೇಷಿಸದೇ ಬಿಟ್ಟಿಲ್ಲ. ಇನ್ನು ನಾವ್ಯಾವ ಸೀಮೆಯ ಹುಲ್ಲು ಕಡ್ಡಿಗಳು? ಆದರೆ, ಕನ್ನಡಪ್ರಭವನ್ನು ಕಳೆದ ಐದು ವರ್ಷಗಳಲ್ಲಿ ಕಟ್ಟಿ ಬೆಳೆಸಿದ, ಕನ್ನಡ ಪತ್ರಿಕೋದ್ಯಮದಲ್ಲಿ ಅನೇಕ ಹೊಸತನಗಳನ್ನು ರೂಢಿಸಿದ ಹೆಮ್ಮೆ ನಮಗಿದೆ. ನಮ್ಮ ಬಗ್ಗೆ ಕೋಪ ಕಾರುವವರು ಇದ್ದಾರೆ ನಿಜ. ಆದರೆ, ನಮ್ಮನ್ನು ಇಷ್ಟಪಡುವವರು ಹೆಚ್ಚು ಸಂಖ್ಯೆಯಲ್ಲಿದ್ದಾರೆ ಎಂಬ ಸಮಾಧಾನ ನಮಗಿದೆ.
Wednesday, August 12, 2009
ಸಂಪಾದಕರ ಕಡತಗಳಿಗೆ ಬೆಂಕಿ: ಒಂದು ಅಧಿಕೃತ ಸ್ಪಷ್ಟನೆ
Subscribe to:
Post Comments (Atom)
7 comments:
chennagi barediddiri, naanu alli illi nimma bagge odidde, houdaa anta hubberisidde kuda.
eega nimma post odi ella artha aytu raviyavre...
nimma hosa pryatnakke yasahssu sigli.
ರವಿ ಅವರೆ,
All the best for your new assignment -
Vinay Sreenivasa
ಸರ್,
ಅನಾಮಧೇಯ ಬ್ಲಾಗಿಗರ ಕುರಿತು ಆರಂಭದಲ್ಲಿ ನಾನು ಬರೆದಿದ್ದೆ. ಈ ವರ್ಗ ಇದೇ ಹಂತಕ್ಕೆ ತಲುಪುತ್ತದೆ ಎಂಬ ಸ್ಪಷ್ಟ ಅರಿವು ಆವತ್ತೆ ನನಗಾಗಿತ್ತು. ಆದರೆ ರವಿ ಹೆಗಡೆಯವರಂಥವರನ್ನು ತಮ್ಮ ತೆವಲು ತೀರಿಸಿಕೊಳ್ಳಲು ಎಳೆದು ತರುತ್ತಾರೆ ಎಂದು ಖಂಡಿತಾ ನಿರೀಕ್ಷಿಸಿರಲಿಲ್ಲ. ನೀವು ನಿಮ್ಮ ಪಾಲಿನ ಕರ್ತವ್ಯ ಮುಗಿಸಿದ್ದೀರಿ. ಸ್ಪಷ್ಟಿಕರಣ ಅಗತ್ಯವಾಗಿತ್ತು ಕೂಡ...ನಿಮ್ಮ ಮುಂದಿನ ಯತ್ನಕ್ಕೆ ಜಯಸಿಗಲಿ. ನನ್ನಂಥ ಹೊಸ ಪೀಳಿಗೆಯ ಹುಡುಗರಿಗೆ ನಿಮ್ಮಂಥ ಹಿರಿಯರು ಶಾಶ್ವತವಾಗಿ ಮಾದರಿಯಾಗಿ ಉಳಿಯಲಿ ಎಂಬುದಷ್ಟೆ ನನ್ನ ಆಶಯ...
ಪ್ರೀತಿಯಿಂದ
ವಿನಾಯಕ ಕೋಡ್ಸರ
ರವಿ ಹೆಗಡೆ ಸರ್,
ನನ್ನ ಬ್ಲಾಗಿನಲ್ಲಿ "ಕನ್ನಡಪ್ರಭದ ಎಡಿಟೋರಿಯಲ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೀನಿ" ಅಂತ ಹೇಳಿಕೊಳ್ಳುತ್ತಿರುವ ವಿಶ್ವ ಬಾಗಲೋಡಿ ಎಂಬ ವ್ಯಕ್ತಿಯಿಂದ ಕಾಮೆಂಟ್ ಬಂದಿದೆ. ನನ್ನ ಆರ್ಟಿಕಲ್ ನಲ್ಲಿ ಬಂದಿದ್ದ ವಿಷಯಕ್ಕೆ ಸಮಜಾಯಿಷಿ ನೀಡುವ ಪ್ರಯತ್ನ ಬಿಟ್ಟು ವೈಯುಕ್ತಿಕವಾಗಿ ಚಿತ್ ಮಾಡುವ ಪ್ರಯತ್ನವನ್ನೇ ಜಾಸ್ತಿ ಮಾಡುತ್ತಿದ್ದಂತಿದೆ.
ಕನ್ನಡಪ್ರಭ ದ ಜೋಗಿ, ಡಾವಿಂಕಿ, ಪ್ರಜಾವಾಣಿಯ ದಿಲಾವರ್ ಹೀಗೆ ಪತ್ರಕರ್ತರನ್ನು ಭೇಟಿ ಮಾಡಿದ್ದಕ್ಕೆ ಖುಷಿಪಡುವ, ಹೆಮ್ಮೆಪಡುವ ನಮ್ಮಂಥವರಿಗೆ ಹೀಗೆ ಯಾವುದೋ ಕಡಿಮೆ ಜನ ಓದುವ ಬ್ಲಾಗೊಂದರ ಮೂಲೆಯಲ್ಲಿ ಬಂದ ಒಂದು ಪುಟ್ಟ ವಿಮರ್ಶೆಯನ್ನೂ ತೆಗೆದುಕೊಳ್ಳಲಾಗದ, ಅನುಚಿತವಾಗಿ ಉತ್ತರಿಸುವ, "ಸತ್ಯ ಹೇಳಿದ್ರೆ ಏನಾಗ್ತದೆ ಗೊತ್ತಾಯ್ತಾ?" ಅಂತ ಅಬ್ಬರಿಸುವ, ನಿನಗೇನು ಮಾಡ್ತಿನಿ ನೋಡ್ತಿರು ಅನ್ನುವಂಥ ಅರ್ಥಬೀರುವ ಉತ್ತರ ನೀಡುವ ಇದೆಂಥ ಪತ್ರಕರ್ತರು ಸರ್ ?
ಕ್ಷಮಿಸಿ, ಕನ್ನಡಪ್ರಭ ಎಡಿಟೋರಿಯಲ್ ವಿಭಾಗದಿಂದ ಅಂತ ಬಂದಿದ್ದರಿಂದ ನಿಮಗೆ ತಿಳಿಸಬೇಕಾಗಿ ಬಂದಿದೆ. ದಯವಿಟ್ಟು ಇದರ ಕುರಿತು ಸ್ಪಷ್ಟೀಕರಣ ನೀಡಬೇಕಾಗಿ ವಿನಂತಿಸುತ್ತೇನೆ.
ನನ್ನ ಬ್ಲಾಗಿನ ಲಿಂಕ್ ಇಲ್ಲಿದೆ:
http://neelihoovu.wordpress.com/2009/07/17/ಪತ್ರಿಕೆಗಳ-ಸೌಜನ್ಯ-ಮತ್ತು-ಪ/#comments
-ರಂಜಿತ್
ಪ್ರಿಯ ರಂಜಿತ್,
1. ನೀವು ನೀಡಿದ ನಿಮ್ಮ ಬ್ಲಾಗಿನ ಲಿಂಕ್ ಹಾಗೂ ಅದರಲ್ಲಿ ಬಂದ ವಿಶ್ವ ಬಾಗಲೋಡಿ ಮತ್ತಿತರರ ಪ್ರತಿಕ್ರಿಯೆಗಳನ್ನು ನೋಡಿದೆ. ಒಂದಂತೂ ಖಚಿತ - ವಿಶ್ವ ಬಾಗಲೋಡಿ ಎಂಬುದೊಂದು ಕಾಲ್ಪನಿಕ ಹೆಸರು. ಬಾಗಲೋಡಿ ಎಂಬ ಹೆಸರಿನ ವ್ಯಕ್ತಿ ನಮ್ಮ ಕಚೇರಿಯಲ್ಲಿ ಒಬ್ಬರಿದ್ದಾರಾದರೂ ಅವರು ವಿಶ್ವ ಬಾಗಲೋಡಿ ಅಲ್ಲವೇ ಅಲ್ಲ. ಯಾರೋ ಬಾಗಲೋಡಿ ಹಾಗೂ ಕನ್ನಡಪ್ರಭದ ಹೆಸರನ್ನು ಕುಚೋದ್ಯಕ್ಕೆ ಬಳಸಿಕೊಂಡಿದ್ದಾರೆ. (ಕಮೆಂಟು ಹಾಕಿದ ವ್ಯಕ್ತಿ ಕನ್ನಡಪ್ರಭದವರೇ ಎಂಬುದರ ಕುರಿತೂ ಅನುಮಾನ.)
2. ನಮ್ಮ ಕಚೇರಿಯ 'ಅಸಲಿ ಬಾಗಲೋಡಿ'ಯವರಿಗೆ ಕಚೇರಿಯಲ್ಲಿ ಬ್ಲಾಗುಗಳನ್ನು ನೋಡುವ ರೈಟ್ಸ್ ಇಲ್ಲ. ಅವರ ಮನೆಯಲ್ಲಿ ಕಂಪ್ಯೂಟರೂ ಇಲ್ಲ. ಇನ್ನು ಸೈಬರ್ ಕೆಫೆಗಳಿಗೆ ಹೋಗಿ ಈ ರೀತಿಯ ಕಮೆಂಟು ಹಾಕುವ ಜಾಯಮಾನದವರೂ ಅಲ್ಲ ನಮ್ಮ ಬಾಗಲೋಡಿ. ಆ ಬಗ್ಗೆ ನಾನು ಗ್ಯಾರಂಟಿ!
3. ಅಂದಹಾಗೆ, ನಮ್ಮ ಕಚೇರಿಯಲ್ಲಿ ಬ್ಲಾಗುಗಳನ್ನು ಹಾಗೂ ಸೋಷಿಯಲ್ ನೆಟ್‌ವರ್ಕ್‌ಗಳನ್ನು ಬ್ಲಾಕ್ ಮಾಡಲಾಗಿದೆ. ಹಾಗಾಗಿ, ಶೇ.95ರಷ್ಟು ಸಂಪಾದಕೀಯ ವಿಭಾಗದ ಸಿಬ್ಬಂದಿಗೆ ಕಚೇರಿಯಲ್ಲಿ ಬ್ಲಾಗ್ ನೋಡಲು ಅವಕಾಶವಿಲ್ಲ. ಬ್ಲಾಗ್ ನೋಡಲು ಬೆರಳಣಿಕೆಯಷ್ಟು ಹಿರಿಯ ಸಿಬ್ಬಂದಿಗೆ ಮಾತ್ರ ರೈಟ್ಸ್ ನೀಡಲಾಗಿದೆ. ಅವರೂ ಸಹ ಕನ್ನಡಪ್ರಭ ಹೆಸರಿಗೆ ಕಳಂಕ ಬರುವ ರೀತಿಯಲ್ಲಿ ಯಾವುದೇ ಬ್ಲಾಗಿನಲ್ಲಿ ಪಾಲ್ಗೊಳ್ಳದಂತೆ ಸಂಪಾದಕರ ನಿರ್ದೇಶನವಿದೆ. ನಮ್ಮ ಕಚೇರಿಯಲ್ಲಿ ಸಿಬ್ಬಂದಿಯ ಸೈಬರ್ ಚಟುವಟಿಕೆಗಳನ್ನು ಗಮನಿಸುವ ತಂತ್ರಾಂಶವನ್ನು ಅಳವಡಿಸಲಾಗಿದೆ. ಹಾಗಾಗಿ, ದೂರುಗಳು ಬಂದಾಗ ಐಪಿ ಅಡ್ರೆಸ್ ಆಧರಿಸಿ ಕೆಲವು ಸಿಬ್ಬಂದಿಯ ಮೇಲೆ ಕ್ರಮವನ್ನೂ ಜರುಗಿಸಿದ್ದೇವೆ.
4. ಇನ್ನು ನಮ್ಮ ಕಚೇರಿಯ ಹೊರಗೆ (ನಮ್ಮ ಸಿಬ್ಬಂದಿ ಅಥವಾ ನಮ್ಮ ಸಿಬ್ಬಂದಿ ಎಂದು ಹೇಳಿಕೊಳ್ಳುವ ನಕಲಿ ವ್ಯಕ್ತಿಗಳು) ಇಂಥ ಕುಕೃತ್ಯಗಳಲ್ಲಿ ಪಾಲ್ಗೊಂಡಿರಬಹುದೇನೋ. ಅದಕ್ಕೆ ನಾನು ಹೇಗೆ ಪ್ರತಿಕ್ರಿಯಿಸಲಿ?
5. ಅಂದಹಾಗೆ, ಜಗತ್ತಿನ ಎಲ್ಲ ಪತ್ರಿಕೆಗಳಂತೆ ಕನ್ನಡಪ್ರಭದಲ್ಲೂ ತಪ್ಪುಗಳಾಗುತ್ತವೆ. ಅವುಗಳ ಕುರಿತು ನೇರ ಹಾಗೂ ಸಹೃದಯರ ಟೀಕೆಗಳು ಬಂದಾಗ ನಮ್ಮ ಹಿರಿಯ ಸಿಬ್ಬಂದಿ, ನಾನು ಅಥವಾ ನಮ್ಮ ಸಂಪಾದಕರು... ಖುದ್ದಾಗಿ ಪ್ರತಿಕ್ರಿಯಿಸಿದ್ದೇವೆ. ಸಾಧ್ಯವಿದ್ದಲ್ಲಿ ಸರಿಪಡಿಸಿದ್ದೇವೆ. ಕೆಲವು ವಿಷಯಗಳು ನಮ್ಮನ್ನೂ ಮೀರಿದ್ದು ಎಂಬುದನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ. ಈಗ ತಾವು ತಮ್ಮ ಬ್ಲಾಗಿನಲ್ಲಿ ಎತ್ತಿರುವ ವಿಷಯವನ್ನು ನಮ್ಮ ಮ್ಯಾಗಝಿನ್ ಸಂಪಾದಕರಾದ ಉದಯ ಮರಕಿಣಿ ಹಾಗೂ ಜೋಗಿ ಅವರ ಬಳಿ ಚರ್ಚಿಸುತ್ತೇನೆ. ಅಥವಾ ತಾವೂ ಸಹ ಅವರ ಜೊತೆ ನೇರವಾಗಿ ಚರ್ಚಿಸಬಹುದು. ಇದನ್ನೆಲ್ಲ ಸ್ವೀಕರಿಸುವ ತೆರೆದ ಮನಸ್ಸು ಖಂಡಿತ ನಮಗಿದೆ.
ಕನ್ನಡಪ್ರಭದ ಜೊತೆ ಸಂಪರ್ಕದಲ್ಲಿರಿ.
ನಮಸ್ಕಾರ.
ರವಿ ಹೆಗಡೆಯವರೇ,
ನಿಮ್ಮ ಪ್ರತಿಕ್ರಿಯೆಗೆ, ಮತ್ತು ಪತ್ರಕರ್ತರ ಬಗೆಗಿನ ನನ್ನ ನಂಬಿಕೆಗಳನ್ನು ಉಳಿಸಿದ್ದಕ್ಕೆ ಧನ್ಯವಾದಗಳು.
ನಿಮ್ಮ ಎಡಿಟೋರಿಯಲ್ ವಿಭಾಗದಿಂದ ಅಂತ ಆ ವ್ಯಕ್ತಿ ಅಂದಿದ್ದರಿಂದಾಗಿ ನಿಮಗೆ ತಿಳಿಸಬೇಕಾಯಿತು. ಕನ್ನಡಪ್ರಭದಲ್ಲಿನ ರಿಸ್ಟ್ರಿಕ್ಷನ್ ಗಳ ಬಗ್ಗೆ ಅರಿವಿರಲಿಲ್ಲ, ಇದಕ್ಕೂ ಮತ್ತು ನನ್ನ ಲೇಖನದಲ್ಲೆಲ್ಲಾದರೂ ಉದ್ಧಟತನವೆನ್ನಿಸಿದ್ದರೆ ಕ್ಷಮೆ ಇರಲಿ.
ತಪ್ಪುಗಳು ಆಗುವುದು ಸಹಜ. ನನ್ನ ಬರಹವನ್ನು ಟೀಕೆಯೆಂದು ಪರಿಗಣಿಸದೇ, ವಿಮರ್ಶೆಗಳಿಗೆ ತೆರೆದ ಮನವಿರುವುದು ನಿಮ್ಮ ದೊಡ್ಡತನ.
ಥ್ಯಾಂಕ್ಸ್.
ರಂಜಿತ್,
ಅಷ್ಟೆಲ್ಲ ಫಾರ್ಮಾಲಿಟಿ ಬೇಕಿಲ್ಲ. ಓದುಗರು ಹಾಗೂ ನಮ್ಮ ಬರಹಗಾರರ ಜವಾಬ್ದಾರಿಯುತ ಪ್ರತಿಕ್ರಿಯೆಗಳಿಗೆ ಜವಾಬ್ದಾರಿ ವಹಿಸಿ ಜವಾಬು ನೀಡುವುದು ನಮ್ಮ ಕರ್ತವ್ಯ ಕೂಡ. ನಾವು ಕನ್ನಡಪ್ರಭ ಅಥವಾ ಇನ್ನಾವುದೇ ಮಾಧ್ಯಮದಲ್ಲಿದ್ದರೂ ಈ ರಿವಾಜನ್ನು ಪಾಲಿಸುತ್ತೇವೆ.
ಆದರೆ, ಪತ್ರಿಕೆಗಳು ಹಾಗೂ ಮಾಧ್ಯಮಗಳ ಕುರಿತು ಎಲ್ಲರೂ ತಮ್ಮ ತಮ್ಮ ಬ್ಲಾಗುಗಳಲ್ಲಿ ಬರೆದುಕೊಂಡರೆ, ಪತ್ರಿಕೆಯ ಸಂಪಾದಕೀಯ ವಿಭಾಗಕ್ಕೆ ಇವೆಲ್ಲ ಗಮನಕ್ಕೆ ಬರುವುದು ಹೇಗೆ? ಅದರ ಬದಲು ನೇರವಾಗಿ ಪತ್ರಿಕೆಗೆ ತಿಳಿಸಿದರೆ ತಮ್ಮ ಕಾಳಜಿಗೂ ಮಹತ್ವ ಹಾಗೂ ಪತ್ರಿಕೆಗೂ ಒಳಿತು ಎನ್ನುವ ಸಲಹೆ ನನ್ನದು. ಕನ್ನಡಪ್ರಭ ಕುರಿತು ನಿಮ್ಮ ಅಭಿಪ್ರಾಯ ಹಾಗೂ ದೂರುಗಳನ್ನು kannadaprabha at gmail dot com ಅಥವಾ kpnetdivision at gmail dot com ವಿಳಾಸಕ್ಕೆ ತಿಳಿಸಿದರೆ ಸಂಬಂಧಿಸಿದ ವ್ಯಕ್ತಿ ಖಂಡಿತ ಗಮನಿಸುತ್ತಾರೆ.
ವಂದನೆಗಳು
Post a Comment