‘ಆಪರೇಷನ್ ಸುನಾಮಿ’ ಕುರಿತು ಸಂತಾ ಸ್ಟಿಂಗ್‌ಗೆ ಬಂತಾ ಸ್ಟಿಂಗ್ ಇಂಟರೆ‘ಸ್ಟಿಂಗ್’ ಪತ್ರ
ಸುನಾಮಿಯ೦ತೆ ೨೦ ಸ೦ಸದರ ಮೇಲೆ ಟೀವಿ ಚಾನಲ್ ಗಳ ‘ಸ್ಟಿ೦ಗ್ ಆಪರೇಷನ್’ ಎರಗಿದ್ದೇ ತಡ ‘ಸ್ಟಿ೦ಗ್’ ಅನ್ನೋದು ‘ಬ್ಲಾ-ಸ್ಟಿ೦ಗ್’ ಆಗಿದೆ! ದುರ್ಯೋಧನ, ಚಕ್ರವ್ಯೂಹದ೦ಥ ಸ್ಟಿ೦ಗ್ ಆಪರೇಷನ್ ನೋಡಿದ ಮೇಲೆ ನಮ್ಮ ಸ೦ಸದರ ಬಗ್ಗೆ ನನಗೆ ಗೌರವ ಹೆಚ್ಚಾಗಿದೆ! ಅವರ ಬಗ್ಗೆ ಇಷ್ಟು ದಿನ ತಪ್ಪು ತಿಳಿದುಕೊ೦ಡಿದ್ದೆ ಎ೦ದು ವಿಷಾದವಾಗಿದೆ.
ಓಯೆ... ಸಂತಾ ಸ್ಟಿಂಗ್
ನಿನ್ನ ಹೆಸರನ್ನ ಸಿಂಗ್ ಬದಲು ಸ್ಟಿಂಗ್ ಅಂತ ನಾನ್ಯಾಕೆ ಬದಲಾಯಿಸಿದೆ ಗೊತ್ತಾ? ಈ ಹೆಸರು ಒಂಥರಾ ಇಂಟರೆ-ಸ್ಟಿಂಗ್ ಆಗಿದೆ ಅಲ್ವಾ... ಅದಕ್ಕೆ.
ಕಳೆದ ವರ್ಷ ಡಿಸೆಂಬರ್ ೨೬ಕ್ಕಿಂತ ಮೊದಲು ಭಾರತ ದೇಶದ ೧೦೦ ಕೋಟಿ ಜನಸಂಖ್ಯೆಯಲ್ಲಿ ೯೯.೯೯ ಕೋಟಿ ಜನರಿಗೆ ಸುನಾಮಿ ಅನ್ನೋ ಶಬ್ದವೇ ಗೊತ್ತಿರಲಿಲ್ಲ... ಗೊತ್ತಾ? ಭಾರತೀಯರು ಸುನಾಮಿಯನ್ನು ಕಂಡಿರಲಿಲ್ಲ. ಕೇಳಿರಲಿಲ್ಲ. ಓದಿರಲಿಲ್ಲ. ಆದರೆ, ಕೇವಲ ಒಂದೇ ವರ್ಷದಲ್ಲಿ ಎಂಥಾ ಬದಲಾವಣೆ ನೋಡು! ಇವತ್ತು ಮತ್ತೆ ಡಿಸೆಂಬರ್ ೨೬. ಯಾರನ್ನು ಬೇಕಾದರೂ ಕೇಳು... ಸುನಾಮಿ ಅಂದರೆ ಏನು ಅಂತ ಚಿಕ್ಕ ಭಾಷಣ ಕೊಡುತ್ತಾರೆ. ಜೋರಾಗಿ ಮಳೆ ಬಂದರೆ ‘ಗಗನ ಸುನಾಮಿ’ ಅಂತ ವರ್ಣಿಸುತ್ತಾರೆ. ವಿಪರೀತ ಪ್ರಶ್ನೆ ಕೇಳಿದರೆ ‘ಪ್ರಶ್ನೆ ಸುನಾಮಿ’ ಅಂತ ಛೇಡಿಸುತ್ತಾರೆ. ಪದೇ ಪದೇ ಮನೆಗೆ ಬಂದು ಕಾಟ ಕೊಡುವ ಅತಿಥಿಯನ್ನು ‘ಗೆಸ್ಟ್ ಸುನಾಮಿ’ ಅಂತ ಮೂದಲಿಸುತ್ತಾರೆ. ದೇವೇಗೌಡರು ಪದೇ ಪದೇ ಬರೆಯುವ ಪತ್ರಗಳಿಗೆ ‘ಪತ್ರ ಸುನಾಮಿ’ ಅಂತಾರೆ. ಯಡಿಯೂರಪ್ಪ ವಾಗ್ದಾಳಿಗೆ ‘ವಾಗ್ಸುನಾಮಿ’ ಅಂತಾರೆ. ಪದೇ ಪದೇ ಹೃದಯಕ್ಕಪ್ಪಳಿಸುವ ಹುಡುಗಿಗೆ ‘ಪ್ರೀತಿಯ ಸುನಾಮಿ’ ಅಂತಾರೆ. ರಭಸವಾಗಿ ನುಗ್ಗುವ ಧಡಿಯನಿಗೆ ‘ಮಾನವ ಸುನಾಮಿ’ ಅಂತಾರೆ... ಒಂದರ ಹಿಂದೆ ಒಂದರಂತೆ ವಕ್ಕರಿಸುವ ರಕ್ಕಸ ಅಲೆಗಳ ಈ ‘ಸುನಾಮಿ’ ಈಗ ಜನರ ಬಾಯಲ್ಲಿ ಹೇಗೆ ವಿಧ ವಿಧ ರೂಪ ಹಾಗೂ ಅರ್ಥ ಪಡೆದುಕೊಂಡಿದೆ ನೋಡು! ಜನಸಾಮಾನ್ಯರ ಡಿಕ್ಷನರಿಯಲ್ಲಿ ಸುನಾಮಿ ಅನ್ನೋ ಶಬ್ದ ಅಯಾಚಿತವಾಗಿ ಹೇಗೆ ಸೇರಿಕೊಂಡಿತು ನೋಡು!
ಅದೇ ರೀತಿ... ಕಳೆದ ಒಂದು ವರ್ಷದಲ್ಲಿ ಜನಸಾಮಾನ್ಯರ ಡಿಕ್ಷನರಿ ಸೇರಿಕೊಂಡ ಇನ್ನೊಂದು ಪ್ರಮುಖ ಶಬ್ದಾರ್ಥ- ‘ಸ್ಟಿಂಗ್ ಆಪರೇಷನ್’!
೪ ವರ್ಷಗಳ ಹಿಂದೆ ತೆಹಲ್ಕಾ ಡಾಟ್ ಕಾಮ್ ಸ್ಟಿಂಗ್ ಆಪರೇಷನ್ ನಡೆಸಿದರೂ ಜನರ ನಿಘಂಟು ಸೇರದ ಈ ‘ಸ್ಟಿಂಗ್’ ಕಳೆದ ಏಳೆಂಟು ತಿಂಗಳಲ್ಲಿ ಜನಮನದಲ್ಲಿ ಎಕ್ಸಿ-ಸ್ಟಿಂಗ್. ಬಾಲಿಮಡ್ ನಟ ಶಕ್ತಿ ಕಪೂರ್ ವಿರುದ್ಧ ‘ಇಂಡಿಯಾ ಟೀವಿ ಚಾನೆಲ್’ ಗುಪ್ತ ಕಾರ್ಯಾಚರಣೆ ನಡೆಸಿದ ನಂತರ ಈ ‘ಸ್ಟಿಂಗ್ ಪತ್ರಿಕೋದ್ಯಮ’ ನಮ್ಮ ದೇಶದಲ್ಲಿ ಹೆಚ್ಚು ಹೆಚ್ಚು ಪರ್ಸಿ-ಸ್ಟಿಂಗ್. ಆದರೆ, ಈ ತಿಂಗಳು, ಸುನಾಮಿಯಂತೆ ೨೦ ಸಂಸದರ ಮೇಲೆ ಟೀವಿ ಚಾನಲ್‌ಗಳ ‘ಸ್ಟಿಂಗ್ ಆಪರೇಷನ್’ ಎರಗಿದ್ದೇ ತಡ... ‘ಸ್ಟಿಂಗ್’ ಅನ್ನೋದು ‘ಬ್ಲಾ-ಸ್ಟಿಂಗ್’ ಆಗಿದೆ! ಈ ವರ್ಷ ಹಲವಾರು ಹೊಸ ಸುದ್ದಿ ಚಾನೆಲ್‌ಗಳು ಆರಂಭವಾಗಿವೆ. ಈ ಸ್ಪರ್ಧೆಯಲ್ಲಿ ಜನರ ಮನ ಗೆಲ್ಲಲು ಆ ಚಾನಲ್‌ಗಳೆಲ್ಲ ಅನುಸರಿಸುತ್ತಿರುವ ಪ್ರಮುಖ ವಿಧಾನ ಸ್ಟಿಂಗ್ ಆಪರೇಷನ್.
ಹೀಗಾಗಿ... ಸ್ಟಿಂಗ್ ಎನ್ನುವ ಲೇಟೆಸ್ಟ್ ಫ್ಯಾಷನ್ ಟ್ರೆಂಡಿಗೆ ಜನ ಈಗ ತಾನೇ ಅಡ್ಜೆ-ಸ್ಟಿಂಗ್. ಸ್ಟಿಂಗ್ ಅಂದರೆ ರಾಜಕಾರಣಿಗಳು ಒಮ್ಮೆ ಬೆಚ್ಚಿಬೀಳುತ್ತಾರೆ. ಉಳಿದವರು ಒಮ್ಮೆ ಕಿವಿ ನಿಮಿರಿಸುತ್ತಾರೆ. ಆದರೆ, ಎಲ್ಲರೂ ಒಮ್ಮೆ ಗಮನಹರಿಸುತ್ತಾರೆ. ಅದಕ್ಕೇ ಜನರ ಗಮನ ಸೆಳೆಯಲು ನಾನು ಸಿಂಗ್ ಅನ್ನೋ ಹಳೇ ಹೆಸರನ್ನ ಸ್ಟಿಂಗ್ ಅಂತ ಮಾಡರ್ನ್ ಮಾಡಿದ್ದೇನೆ... ಅರ್ಥವಾಯಿತಾ, ಸಂತಾ ಸ್ಟಿಂಗ್?
ಎಕ್ಚುವಲಿ, ಇನ್ನೂ ಅನೇಕರ ಹೆಸರನ್ನು ಬದಲು ಮಾಡೋದಕ್ಕೂ ನಾನೀಗ ಅಸಿ-ಸ್ಟಿಂಗ್. ಸದ್ಯಕ್ಕೆ ಕೆಲಮ ಹೆಸರನ್ನು ಟೆ-ಸ್ಟಿಂಗ್... ಉದಾಹರಣೆಗೆ ಧರಂ ಸ್ಟಿಂಗ್, ಸಂಗ್ರಾಂ ಸ್ಟಿಂಗ್, ಅಜಯ್ ಕುಮಾರ್ ಸ್ಟಿಂಗ್, ಮನಮೋಹನ ಸ್ಟಿಂಗ್, ನಟ್ವರ್ ಸ್ಟಿಂಗ್... ಇತ್ಯಾದಿ!
ಬೈ ದ ವೇ, ಇತ್ತೀಚಿನ ಸ್ಟಿಂಗ್ ಆಪರೇಷನ್‌ನಲ್ಲಿ ೧೧ ಸಂಸದರು ಉಚ್ಚಾಟನೆಗೊಂಡರಲ್ಲ. ಅವರನ್ನೆಲ್ಲ ನೋಡಿದರೆ, ಪಾಪ ಅನ್ನಿಸುತ್ತದೆ. ಯಾಕೆಂದರೆ, ಅವರು ಪ್ರಶ್ನೆ ಕೇಳೋದಕ್ಕೆ ತಗೊಂಡಿದ್ದ ಹಣವಾದರೂ ಎಷ್ಟು? ಇಪ್ಪತ್ತೋ, ಐವತ್ತೋ ಸಾವಿರ ರುಪಾಯಿ ಮಾತ್ರ. ಇಷ್ಟು ಕಡಿಮೆ ಲಂಚ ಪಡೆದರೆ ಅವರಿಗೆ ಉಚ್ಚಾಟನೆಯಂಥ ಘನ ಘೋರ ಶಿಕ್ಷೆಯೇ? ಮತ್ತೆಂದೂ ಪ್ರಶ್ನೆ ಕೇಳಲು ಲಂಚ ಪಡೆಯಲಾಗದಂಥ ಅವಸ್ಥೆಯೇ! ಅಂತ ಆಡ್ವಾಣಿಯವರು ಕೆಂಡ ಕಾರಿದ್ದಾರೆ.
ನನಗೂ ಆಡ್ವಾಣಿಯವರು ಹೇಳಿದ್ದು ಸರಿ ಅನ್ನಿಸುತ್ತಿದೆ. ಸಂಸದರು ಇಷ್ಟೇ ಇಷ್ಟು ಲಂಚ ತಿಂದರೆ ದೇಶದ ಮಾನ ಎಷ್ಟು ಮಹಾ ಹೋದೀತು! ಸ್ವಲ್ಪ ಮಾನ ಹೋಗಿರಬಹುದು. ಆದರೆ, ಈ ಸಂಸದರನ್ನು ನೋಡಿ ವ್ಯಥೆಯಾಗುತ್ತಿದೆ. ಎಷ್ಟು ಕಡಿಮೆ ಲಂಚಕ್ಕೂ ಕೈಚಾಚುವ ಪರಿಸ್ಥಿತಿ ಅವರಿಗೆ ಇದೆಯಲ್ಲಾ ಎಂದು ಕನಿಕರ ಉಂಟಾಗುತ್ತಿದೆ. ಎಲ್ಲಾ ಬಿಟ್ಟು ಸದನದಲ್ಲಿ ಪ್ರಶ್ನೆ ಕೇಳುಮದಕ್ಕೂ ಲಂಚ ಪಡೆಯುವಂಥ ಹೀನ ಪರಿಸ್ಥಿತಿ ಅವರಿಗೆ ಬಂದೊದಗಿದೆಯಲ್ಲಾ ಎಂದು ದುಃಖವಾಗುತ್ತಿದೆ. ಈ ಸಂಸದರಿಗೆ ಬೇರೆ ಯಾಮದಾದರೂ ರೀತಿಯಲ್ಲಿ ಕೋಟಿಗಟ್ಟಲೆ ಹಣವನ್ನು ಸುಲಭವಾಗಿ ಸಂಪಾದಿಸುವ ಅವಕಾಶ ಸಿಗಲಿಲ್ಲವಲ್ಲಾ ಅಂತ ಖೇದವಾಗುತ್ತಿದೆ. ಅಂಥ ಅವಕಾಶ ಸಿಕ್ಕಿದ್ದರೆ ಇವರೆಲ್ಲ ಈ ಪುಡಿಗಾಸಿಗೆ ಕೈಚಾಚುತ್ತಿದ್ದರೇ... ನೀನೇ ಹೇಳು!
ಒಂದು ದೃಷ್ಟಿಯಲ್ಲಿ ನೋಡಿದರೆ, ಈ ಸ್ಟಿಂಗ್ ಆಪರೇಷನ್‌ನಿಂದ ನಮ್ಮ ಸಂಸದರ ಬಗ್ಗೆ ನನಗೆ ಗೌರವ ಹೆಚ್ಚಾಗಿದೆ! ಏಕೆಂದರೆ, ಈ ಸಂಸದರು ಮತ್ತು ರಾಜಕಾರಣಿಗಳು ಹತ್ತಿಪ್ಪತ್ತು ಸಾವಿರಕ್ಕೆಲ್ಲ ಯಾವ ಕೆಲಸವನ್ನೂ ಮಾಡಿಕೊಡುಮದಿಲ್ಲ ಅಂದುಕೊಂಡಿದ್ದೆ. ಲಕ್ಷಾಂತರ, ಕೋಟ್ಯಂತರ ರುಪಾಯಿ ಲಂಚ ಕೊಟ್ಟರೆ ಮಾತ್ರ ಇವರು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ ಎಂಬ ತಪುý್ಪ ಕಲ್ಪನೆ ನನ್ನಲ್ಲಿತ್ತು. ಆದರೆ, ಇಷ್ಟು ಕಡಿಮೆ ಲಂಚಕ್ಕೂ ಇವರು ಸಂಸತ್ತಿನಲ್ಲಿ ತಮ್ಮ ಗಿರಾಕಿಗಳ ಕೆಲಸ ಮಾಡಿಕೊಟ್ಟರು ಎನ್ನುಮದು ನಮ್ಮ ಸಂಸದರ ಪ್ರಾಮಾಣಿಕತೆಗೆ ಹಿಡಿದ ಕನ್ನಡಿ. ಲಂಚದ ಬಾಬತ್ತು ಕಡಿಮೆಯಾಯಿತು ಎಂದು ಸಂಸದರು ಪ್ರಶ್ನೆ ಕೇಳದೇ ಇರಲಿಲ್ಲ. ಗಿರಾಕಿಗಳಿಗೆ ಮೋಸ ಮಾಡಲಿಲ್ಲ ಎನ್ನುಮದು ಶ್ಲಾಘನೀಯವೇ ಸರಿ.
ನಮ್ಮ ಕರ್ನಾಟಕದ ಸಂಸದರೂ ಇದ್ದಾರೆ. ವೆರಿಗುಡ್ ಪೀಪಲ್... ಬಟ್ ಗುಡ್ ಫಾರ್ ನಥಿಂಗ್! ಇವರು ಲಂಚ ಪಡೆದಾದರೂ ರಾಜ್ಯದ ಜನತೆಯ ಕೆಲಸ ಮಾಡಬಹುದಿತ್ತು ಅನಿಸುತ್ತಿದೆ ನನಗೆ!
ಹಾಗೆ ನೋಡಿದರೆ, ನಮ್ಮ ಸಂಸದರಿಗಿಂತ ಸರ್ಕಾರಿ ಅಧಿಕಾರಿಗಳೇ ಬೆಟರ್ರು. ಯಾಕೆಂದರೆ, ಲಂಚ ಪಡೆದಾದರೂ ಜನರ ಕೆಲಸ ಮಾಡಿಕೊಡುತ್ತಾರೆ. ಸಂಸದರಿಗಿಂತ ಈ ಅಧಿಕಾರಿಗಳು ಸ್ವಲ್ಪ ದುಬಾರಿ ಎನ್ನಿ. ಉದಾಹರಣೆಗೆ, ಒಂದು ಸೈಟ್ ರಜಿಸ್ಟ್ರೇಶನ್ ಮಾಡಲು ಈ ಅಧಿಕಾರಿಗಳು ೨೦ ಸಾವಿರದಿಂದ ೧ ಲಕ್ಷ ರುಪಾಯಿ ಲಂಚ ಪಡೆಯುತ್ತಾರೆ. ಆದರೂ ಪರವಾಗಿಲ್ಲ. ಕೆಲಸ ಮಾಡುತ್ತಾರಲ್ಲ ಅದಕ್ಕಿಂತ ಭಾಗ್ಯ ಈ ದೇಶಕ್ಕೆ ಇನ್ನೇನಿದೆ! ಅಂಥವರ ಮೇಲೆ ಸ್ಟಿಂಗ್ ಆಪರೇಷನ್ ಮಾಡಿ ಅವರು ಕೆಲಸ ಮಾಡದಂತೆ ನಿರುತ್ಸಾಹಗೊಳಿಸುಮದು ಒಳ್ಳೆಯ ಪತ್ರಿಕೋದ್ಯಮದ ಲಕ್ಷಣವಲ್ಲ.
ಈಗಿನ ಕಾಲಕ್ಕೆ ಬೇಕಾದ ಸ್ಟಿಂಗ್ ಆಪರೇಷನ್ ದುರ್ಯೋಧನ, ಚಕ್ರವ್ಯೂಹ ಥರದ್ದಲ್ಲ. ಲಂಚ ತಿಂದರೂ ಯಾರೂ ಕೆಲಸ ಮಾಡಿಕೊಡುತ್ತಿಲ್ಲ ಹಾಗೂ ಯಾರೂ ಲಂಚವನ್ನೂ ತಿನ್ನೋಲ್ಲ, ಕೆಲಸವನ್ನೂ ಮಾಡೋಲ್ಲ ಎನ್ನುಮದನ್ನು ಬಹಿರಂಗಗೊಳಿಸುವಂಥ ಸ್ಟಿಂಗ್ ಆಪರೇಷನ್ ಬೇಕಾಗಿದೆ ಈಗ. ಅದಕ್ಕೆ ನಾನು ಒಂದು ಪ್ಲಾನ್ ಹಾಕಿದ್ದೇನೆ.
ಕರ್ನಾಟಕ ಸರ್ಕಾರದಲ್ಲಿ ಬಹಳಷ್ಟು ಮಂತ್ರಿಗಳು, ಶಾಸಕರು, ಅಧಿಕಾರಿಗಳು ಲಂಚ ತಿಂದರೂ ಕೆಲಸ ಮಾಡುತ್ತಿಲ್ಲ ಎನ್ನುವ ಆಪಾದನೆಗಳಿವೆ. ರಸ್ತೆ ನಿರ್ಮಾಣ, ನೆರೆ ಪರಿಹಾರ, ಬೆಳೆ ಪರಿಹಾರ, ಗ್ರಾಮೀಣಾಭಿವೃದ್ಧಿ ಮುಂತಾದ ಹೆಸರಿನಲ್ಲಿ ಸರ್ಕಾರದ ಬೊಕ್ಕಸ ಕರಗುತ್ತ ಇದೆ. ಆದರೆ, ಯಾವ ಅಭಿವೃದ್ಧಿಯೂ ಆಗುತ್ತಿಲ್ಲ. ಇದನ್ನು ಕಂಡುಹಿಡಿಯಲು ನಾನು ಸ್ಟಿಂಗ್ ಆಪರೇಷನ್ ನಡೆಸಬೇಕೆಂದಿದ್ದೇನೆ. ಇದಕ್ಕೆ ನಾನು ‘ಆಪರೇಷನ್ ಸುನಾಮಿ’ ಅಂತ ಹೆಸರಿಟ್ಟಿದ್ದೇನೆ. ಈ ಹೆಸರು ಯಾಕೆ ಅಂತ ಕೇಳಬೇಡ. ಏಕೆಂದರೆ, ಆಪರೇಷನ್ ದುರ್ಯೋಧನ ಹೆಸರಿಟ್ಟವರಿಗೂ ಆ ಹೆಸರು ಯಾಕಿಟ್ಟಿದ್ದೇವೆ ಅಂತ ಗೊತ್ತಿಲ್ಲ! ಹಾಗಾಗಿ, ನಮಗೂ ನಾವ್ಯಾಕೆ ಸುನಾಮಿ ಹೆಸರಿಟ್ಟಿದ್ದೇವೆ ಅಂತ ಗೊತ್ತಿರಬೇಕಿಲ್ಲ.
ನಾಮ ಆದಷ್ಟು ಬೇಗ ಈ ಸ್ಟಿಂಗ್ ಆಪರೇಷನ್ ಮಾಡಬೇಕು. ತಡ ಮಾಡಿದರೆ, ಈ ಧರಂಸ್ಟಿಂಗ್ ಸರ್ಕಾರ ಬಿದ್ದುಹೋಗಿರುತ್ತದೆ. ಆಮೇಲೆ, ಸ್ಟಿಂಗ್ ಆಪರೇಷನ್ ಮಾಡಲು ಮುಂದಿನ ಸರ್ಕಾರ ರಚನೆಯಾಗುವವರೆಗೂ ನಾಮ ಕಾಯಬೇಕಾಗುತ್ತದೆ.
ಆದ್ದರಿಂದ, ಟೈಮ್ ವೇಸ್ಟಿಂಗ್ ಮಾಡದೇ, ನಮ್ಮ ಸ್ಟಿಂಗ್ ಆಪರೇಷನ್ನಿಗೆ ಸಿದ್ಧನಾಗು.
ಇಂತಿ ನಿನ್ನ ಪಾರ್ಟ್‌ನರ್
ಬಂತಾ ಸ್ಟಿಂಗ್
Kannada Prabha issue dated december 26, 20056
His Name is Sting... Dharam Sting!
--
Tuesday, December 27, 2005
ಹಿಸ್ ನೇಮ್ ಈಸ್ ಸ್ಟಿಂಗ್... ಧರಂ ‘ಸ್ಟಿಂಗ್’
Subscribe to:
Post Comments (Atom)
No comments:
Post a Comment