Tuesday, October 04, 2005

ಇನ್ನಷ್ಟು ಗಾಂಧಿ ಪ್ರತಿಮೆಗಳಿಗೆ ಆಗ್ರಹಿಸಿ ಧರಣಿ!

ಈ ದೇಶದಲ್ಲಿ ಗಾಂಧಿ ಜಯಂತಿ ಬಿಟ್ಟರೆ ನಂತರದ ಅತ್ಯಂತ ಫೇಮಸ್‌ ಜಯಂತಿ ಅಂಬೇಡ್ಕರ್‌ ಜಯಂತಿ ಮಾತ್ರ. ನೆಹರೂಗೆ ಅಂತ ಒಂದು ರಸ್ತೆಯಿಲ್ಲ. ಅಂಥ ರಸ್ತೆ ಇದ್ದರೂ ಗಾಂಧಿ ರಸ್ತೆಯಷ್ಟು ಫೇಮಸ್ಸಂತೂ ಅಲ್ಲವೇ ಅಲ್ಲ. ಶಿವಲಿಂಗ ಹಾಗೂ ಗಣೇಶ ವಿಗ್ರಹಗಳನ್ನು ಬಿಟ್ಟರೆ ಅತ್ಯಂತ ಹೆಚ್ಚು ಪ್ರತಿಮೆಗಳಿರುಮದು ನಿನ್ನದೆ! ಆದರೂ ಭಾರತಕ್ಕೆ ಇನ್ನಷ್ಟು ಗಾಂಧಿ ಪ್ರತಿಮೆಗಳು ಬೇಕು. ಯಾಕೆ ಗೊತ್ತಾ?

ಮುಷ್ಕರ್‌ ದಾಸ್‌ ಧರಣ್‌ಚಂದ್‌ ಗಾಂಧಿಯವರು ಮೋಹನದಾಸ್‌ ಕರಮಚಂದ್‌ ಗಾಂಧಿಗೆ ಬರೆದ ಈಮೇಲ್‌

ಪ್ರೀತಿಯ ಗಾಂಧಿ ತಾತಾ,
ನಿನ್ನೆ ತಾನೇ ನಿನ್ನ ಹುಟ್ಟುಹಬ್ಬ ಆಚರಿಸಿ ಮುಗಿಸಿದ್ದೇವೆ. ನೀನು ಕಲಿಸಿದ ಮೌಲ್ಯಗಳ ಪ್ರಕಾರವೇ ನಿನ್ನ ಬರ್ತ್‌ಡೇಯನ್ನು ಸರಳವಾಗಿ ಆಚರಿಸಿದ್ದೇವೆ. ಯಾರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದರೂ ನಿನ್ನ ಬರ್ತ್‌ಡೇಯನ್ನು ಮಾತ್ರ ವಿಜೃಂಭಣೆಯಿಂದ ನಡೆಸಿ ನಿನಗೆ ಅವಮಾನ ಮಾಡುಮದಿಲ್ಲ!

ಅದ್ಧೂರಿ ಬರ್ತ್‌ಡೇಗಳನ್ನು ಏನಿದ್ದರೂ, ಈಗಿನ ರಾಜಕಾರಣಿಗಳಿಗೆ ಮತ್ತು ಮರಿ ಪುಡಾರಿಗಳಿಗೇ ಮೀಸಲಿಟ್ಟಿದ್ದೇವೆ. ಅವರ ಬರ್ತ್‌ಡೇ, ಒಂಥರಾ ದರಿದ್ರನಾರಾಯಣ ಸಮಾವೇಶದಷ್ಟು ದೊಡ್ಡದೂ ಅಹಿಂದಾ ಸಮಾವೇಶದಷ್ಟೂ ವಿಶಾಲವೂ ಆಗಿರುತ್ತದೆ. ರಸ್ತೆಗಳ ತುಂಬಾ ಅವರ ಕಟೌಟು, ಊರತುಂಬಾ ಶುಭಾಶಯ ಕೋರುವ ಪೋಸ್ಟರುಗಳು, ಬ್ಯಾನರುಗಳು, ಪತ್ರಿಕೆಗಳಲ್ಲಿ ಜಾಹೀರಾತುಗಳು, ದೊಡ್ಡ ಸಾರ್ವಜನಿಕ ಸಮಾರಂಭ, ಕ್ವಿಂಟಾಲ್‌ ಭಾರದ ಹೂವಿನ ಹಾರ, ಕೇಕ್‌ ಕಟಿಂಗ್‌, ಗಿಫ್ಟ್‌ ಗಿವಿಂಗ್‌, ಹೊಗಳಿ ಹೊಗಳಿ, ಭಾಷಣಗಳು, ಓಟು-ಸೀಟಿಗೆ ಪೀಠಿಕೆಗಳು... ಆಸ್ಪತ್ರೆಯಲ್ಲಿ ಹಾಲು, ಬ್ರೆಡ್ಡು, ಬನ್ನು, ಹಣ್ಣು ವಿತರಣೆ... ವಿಶೇಷ ಅತಿಥಿಗಳಿಗೆ ಅಬಕಾರಿ ಸಚಿವ ಚೆನ್ನಿಗಪ್ಪ ಸರ್ಟಿಫೈಡ್‌ ಕ್ವಾಲಿಟಿ ಡ್ರಿಂಕ್‌... ಹೀಗೆ ನಡೆಯುತ್ತೆ ಅವರ ಬರ್ತ್‌ಡೇ ರ್ಯಾಲಿ.

ಆದರೆ, ನಿನ್ನ ಹುಟ್ಟುಹಬ್ಬ ವೆರಿ ಸಿಂಪಲ್‌. ನಿನ್ನ ಪ್ರತಿಮೆ ಅಥವಾ ಫೋಟೊ ಮುಂದೆ ಕೆಲವೇ ಕೆಲಮ ವೃದ್ಧರು ಸೇರಿ, ರಘುಪತಿ ರಾಘವ ರಾಜಾರಾಂ, ಪತಿತ ಪಾವನ ಸೀತಾರಾಂ ಅಂತ... ನಾಕು ಸಾಲು ಗುನುಗಿ ಮನೆಗೆ ಹೋಗುತ್ತಾರೆ. ಇಷ್ಟೇ ಸಿಂಪಲ್‌ ಸಾಕಾ. ಇಲ್ಲಾ ಇನ್ನೂ ಸಿಂಪಲ್‌ ಬೇಕಾ?

ಅಂದಹಾಗೆ, ಈ ದೇಶದಲ್ಲಿ ಗಾಂಧಿ ಜಯಂತಿ ಬಿಟ್ಟರೆ ನಂತರದ ಅತ್ಯಂತ ಫೇಮಸ್‌ ಜಯಂತಿ ಅಂಬೇಡ್ಕರ್‌ ಜಯಂತಿ ಮಾತ್ರ. ಚಾಚಾ ನೆಹರೂ ದಿನವನ್ನು ಮಕ್ಕಳ ದಿನಾಚರಣೆ ಅಂತ ಕರೆದಿರುಮದರಿಂದ ನೆಹರೂ ಜಯಂತಿ ಅಂತ ಯಾವ ಕ್ಯಾಲೆಂಡರ್‌ನಲ್ಲೂ ನಾಮ ಪ್ರಕಟಿಸುಮದಿಲ್ಲ. ಹಾಗಾಗಿ, ನೀನು ನಂಬಿದರೆ ನಂಬು ಬಿಟ್ಟರೆ ಬಿಡು... ನೆಹರೂ ಚಾಚಾನನ್ನು ಹೆಚ್ಚು ಕಡಿಮೆ ನಾಮ ಮರೆತೇ ಬಿಡುತ್ತಿದ್ದೇವೆ.

ನಿನ್ನನ್ನು ಮಾತ್ರ ನಾಮ ಮರೆಯುವ ಹಾಗೇ ಇಲ್ಲ. ಏಕೆಂದರೆ, ನೀನು ಮಹಾತ್ಮ. ಎಷ್ಟು ಮಹಾತ್ಮ ಎಂದರೆ, ನೆಹರೂ ಈ ದೇಶವನ್ನು ಅಷ್ಟು ವರ್ಷ ಆಳಿದರೂ, ’ನೆಹರೂ ವಂಶ’ಕ್ಕಿಂತ ’ಗಾಂಧಿ ಸಂತಾನ’ವೇ ದೇಶಾದ್ಯಂತ ಫೇಮಸ್ಸು. ಇಂದಿರಾಗಾಂಧಿ, ರಾಜೀವ ಗಾಂಧಿ ಈಗಲೂ ದೇಶಕ್ಕೆ ನಾಯಕರು. ಅವರ ಕೃಪಾಕಟಾಕ್ಷದಲ್ಲೇ ಈ ದೇಶದ ಸೊಸೆ ಸೋನಿಯಾ ಗಾಂಧಿ, ರಾಹುಲ್‌ಗಾಂಧಿ, ಪ್ರಿಯಾಂಕಾ ಗಾಂಧಿ ದೇಶವನ್ನು ಮುನ್ನಡೆಸುತ್ತಿದ್ದಾರೆ. ಗಾಂಧಿ ಹೆಸರನ್ನು ಚಿರಾಯುಗೊಳಿಸುತ್ತಿದ್ದಾರೆ. ಈ ದಿಸೆಯಲ್ಲಿ ಸಂಜಯಗಾಂಧಿ ಪತ್ನಿ ಮೇನಕಾ ಗಾಂಧಿ ಅಳಿಲು ಸೇವೆ ಸಲ್ಲಿಸಿದರೆ, ಮೇನಕಾ ಪುತ್ರ ವರುಣ್‌ ಗಾಂಧಿ ಇದೀಗ ತಾನೇ ರಂಗಕ್ಕೆ ಇಳಿದಿದ್ದಾರೆ. ಈ ನಡುವೆ ನಿನ್ನ ಸ್ವಂತ ಮಕ್ಕಳಾದ ಹರಿಲಾಲ್‌ ಗಾಂಧಿ, ಮಣಿಲಾಲ್‌ ಗಾಂಧಿ, ರಾಮದಾಸ್‌ ಗಾಂಧಿ ಮತ್ತು ದೇವದಾಸ್‌ ಗಾಂಧಿ ಮಾತ್ರ ನಾಪತ್ತೆ... ಈಗಲೂ ಜೀವಂತ ಇರುವ ನಿನ್ನ ಮೊಮ್ಮೊಗ ವರುಣ್‌ ಗಾಂಧಿ ಎಂದರೆ ಯಾರಾತ ಅಂತ ಕೇಳುತ್ತಾರೆ ಜನ. ಹಾಗಾಗಿ ನಿನ್ನ ಮನೆಮಂದಿಗಿಂತ ಸೋನಿಯಾ ಗಾಂಧಿ ಎಷ್ಟೋ ವಾಸಿ!

ದೇಶದಲ್ಲಿ ಜನರು ಈಗಲೂ ನಿನ್ನ ದಾರಿಯಲ್ಲಿ ತಪ್ಪದೇ ನಡೆಯುತ್ತಿದ್ದಾರೆ. ದೇಶದ ಯಾಮದೇ ಪಟ್ಟಣವನ್ನು ಬೇಕಾದರೂ ನೋಡು... ಕನಿಷ್ಠ ಒಂದಾದರೂ ಮಹಾತ್ಮಾ ಗಾಂಧಿ ರಸ್ತೆಯಿರುತ್ತದೆ. ಅಲ್ಲಿ ಜನ ಬಹಳ ಬ್ಯೂಸಿಯಾಗಿ ನಡೆದಾಡುತ್ತಿರುತ್ತಾರೆ! ಅದನ್ನು ನೋಡಿದಾಗಲೆಲ್ಲ, ಜನ ಈಗಲೂ ಗಾಂಧಿ ಮಾರ್ಗ ಬಿಟ್ಟಿಲ್ಲ ಅಂತ ನಿನ್ನ ಹೃದಯ ತುಂಬಿಬರುತ್ತಿರಬೇಕಲ್ಲವೇ? ಇಷ್ಟಕ್ಕೂ ನೆಹರು ರಸ್ತೆ ಅಂತ ನೀನು ಎಲ್ಲಾದರೂ ಕೇಳಿದ್ದು ನೆನಪಿದೆಯೇ? ಅಂಥ ರಸ್ತೆ ಇದ್ದರೂ ಎಲ್ಲೋ ಇದ್ದಿರಬಹುದು. ಆದರೆ ಆ ರಸ್ತೆ ಗಾಂಧಿ ರಸ್ತೆಯಷ್ಟು ಫೇಮಸ್ಸಂತೂ ಅಲ್ಲವೇ ಅಲ್ಲ. ಇದು ವಿಚಿತ್ರವಾದರೂ ಸತ್ಯ.

ಅಷ್ಟೇ ಅಲ್ಲ, ಭಾರತದಲ್ಲಿ ಶಿವಲಿಂಗ ಹಾಗೂ ಗಣೇಶ ವಿಗ್ರಹಗಳನ್ನು ಬಿಟ್ಟರೆ ಅತ್ಯಂತ ಹೆಚ್ಚು ಪ್ರತಿಮೆಗಳಿರುಮದು ನಿನ್ನದೆ! ಹಳ್ಳಿ ಹಳ್ಳಿ, ಪೇಟೆ ಪಟ್ಟಣ, ನಗರ ಮಹಾನಗರಗಳನ್ನು ನೋಡು... ಕನಿಷ್ಠ ಒಂದಾದರೂ ಗಾಂಧಿ ಪ್ರತಿಮೆ ಇದ್ದೇ ಇರುತ್ತದೆ. ಪ್ರತಿ ಊರಿಗೆ ಅಂಬೇಡ್ಕರ್‌ ಬಡಾವಣೆಯ ಕಿರುತಿ ಹೇಗೋ ನಿನ್ನ ಮೂರುತಿ ಹಾಗೆ! ಒಂದು ಗಾಂಧಿ ಪಾರ್ಕು, ಒಂದು ಗಾಂಧಿ ಸರ್ಕಲ್ಲು, ಒಂದು ಗಾಂಧಿ ಭವನ, ಒಂದು ಗಾಂಧಿ ರಸ್ತೆ ಮತ್ತು ಒಂದು ಗಾಂಧಿ ಪ್ರತಿಮೆ ಪ್ರತಿ ಊರಿಗೂ ಕಡ್ಡಾಯ. ಊರಿನಲ್ಲಿ ಕುಡಿಯಲು ನೀರಿಲ್ಲದಿದ್ದರೂ, ಓಡಾಡಲು ರಸ್ತೆಯಿಲ್ಲದಿದ್ದರೂ ಇವೆಲ್ಲ ಇದ್ದೇ ಇರುವಂತೆ ನಮ್ಮ ಘನ ಸರ್ಕಾರ ವ್ಯವಸ್ಥೆ ಮಾಡಿದೆ.

ದೇಶದಲ್ಲಿ ಬೇರೆ ಬೇರೆ ನಾಯಕರ ಎಷ್ಟೋ ಪ್ರತಿಮೆಗಳಿವೆ. ಆದರೆ ಅವೆಲ್ಲಕ್ಕಿಂತ ಹೆಚ್ಚಿನ ಡಿಮಾಂಡು ನಿನ್ನ ಪ್ರತಿಮೆಗಳಿಗೆ ಇದೆ. ನೀನು ಕಲಿಸಿಕೊಟ್ಟ ಸತ್ಯಾಗ್ರಹ, ಧರಣಿ, ಮುಷ್ಕರ, ಚಳವಳಿ ನಡೆಸಲು ಗಾಂಧಿ ಪ್ರತಿಮೆ ಬೇಕೇ ಬೇಕಲ್ಲ. ಹಾಗಾಗಿ ನಿನ್ನ ಪ್ರತಿಮೆ ಧರಣಿ, ಸತ್ಯಾಗ್ರಹದ ಹೆಗ್ಗುರುತೇ ಆಗಿದೆ!

ಗಾಂಧಿ ತಾತಾ,
ನೀನೂ ಗಮನಿಸಿರಬಹುದು. ಕೆಲವರು ದಾರಿಯಲ್ಲಿ ಹೋಗುವಾಗ ಅಕಸ್ಮಾತ್‌ ದೇವಾಲಯ ಕಂಡರೆ, ಒಂದು ಕ್ಷಣ ನಿಂತು ನಮಸ್ಕಾರ ಮಾಡಿ ಮುಂದೆ ಹೋಗುತ್ತಾರಲ್ಲ. ಅದೇ ರೀತಿ, ಕೆಲವರು ನಿನ್ನ ಪ್ರತಿಮೆ ಕಂಡರೆ ಸಾಕು ಒಂದು ಕ್ಷಣ ಧರಣಿ ಕುಳಿತು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಮುನ್ನಡೆಯುತ್ತಾರೆ! ಕೆಲವರು ಅಷ್ಟರ ಮಟ್ಟಿಗೆ ನೀನು ಕಲಿಸಿದ ಸತ್ಯಾಗ್ರಹ ಪಾಠವನ್ನು ಪಾಲಿಸುತ್ತಾರೆ.

ಧರಣಿ ಸತ್ಯಾಗ್ರಹ ತತ್ವವನ್ನು ಜನರು ಎಷ್ಟು ಪಾಲಿಸುತ್ತಾರೆ ಅಂದರೆ, ಮಾತೆತ್ತಿದರೆ ಧರಣಿ ಎನ್ನುತ್ತಾ ನಿನ್ನ ಪ್ರತಿಮೆ ಹುಡುಕಿಕೊಂಡು ಹೋಗುತ್ತಿದ್ದಾರೆ. ಗಂಡನ ವಿರುದ್ಧ ಹೆಂಡತಿಯೇ ಧರಣಿ ಕುಳಿತ ಸುದ್ದಿ ಪತ್ರಿಕೆಯಲ್ಲಿ ಬಂದಿತ್ತು. ಗಾಂಧಿ ಪ್ರತಿಮೆಯೆದುರು ಆಮರಣಾಂತ ಉಪವಾಸ, ಗಾಂಧಿ ಪ್ರತಿಮೆಯಿಂದ ತಾಲೂಕಾ ಕಚೇರಿವರೆಗೆ ಮೆರವಣಿಗೆ ಇತ್ಯಾದಿ ಸುದ್ದಿಗಳನ್ನು ಪ್ರತಿದಿನವೂ ನಾಮ ಓದುತ್ತಲೇ ಇರುತ್ತೇವೆ.

ಈಗೀಗ ಒಂದೇ ದಿನ ೬-೮ ಧರಣಿ ಸತ್ಯಾಗ್ರಹಗಳು ನಡೆಯುವ ಕಾಲ ಬಂದಿದೆ. ಒಂದು ಗುಂಪು ಗಾಂಧಿ ಪ್ರತಿಮೆಯ ಎದರೂ, ಇನ್ನೊಂದು ಗುಂಪು ಗಾಂಧಿ ಮೈದಾನದಲ್ಲೂ, ಮತ್ತೊಂದು ಗುಂಪು ಗಾಂಧಿ ಪಾರ್ಕಿನಲ್ಲೂ... ಹೀಗೆ ವಿವಿಧ ಗಾಂಧಿ ಕ್ಷೇತ್ರಗಳನ್ನು ಆ ಗುಂಪುಗಳು ಪಾಲುಮಾಡಿಕೊಂಡಿವೆ. ಆದರೂ, ಇನ್ನಷ್ಟು ಧರಣಿ, ಸತ್ಯಾಗ್ರಹಕ್ಕೆ ಜಾಗ ಸಾಲುತ್ತಿಲ್ಲ. ಅದಕ್ಕೇ ಮತ್ತಷ್ಟು ಗಾಂಧಿ ಕ್ಷೇತ್ರಗಳನ್ನು ಸ್ಥಾಪಿಸಬೇಕಾಗಿದೆ. ಪಾರ್ಕು, ಭವನ, ಮೈದಾನ ನಿರ್ಮಾಣಮಾಡುಮದು ಕಷ್ಟದ ಕೆಲಸ. ಪ್ರತಿಮೆ ಸ್ಥಾಪಿಸುಮದು ಇದ್ದುದರಲ್ಲಿ ಸುಲಭ. ಹೀಗಾಗಿ ದೇಶದಲ್ಲಿ ಇನ್ನಷ್ಟು ಗಾಂಧಿಪ್ರತಿಮೆಗಳನ್ನಾದರೂ ಸರ್ಕಾರ ಪ್ರತಿಷ್ಠಾಪಸಲೇ ಬೇಕಾಗಿದೆ. ಆದ್ದರಿಂದ, ಆದಷ್ಟು ಬೇಗ ಹೆಚ್ಚಿನ ಗಾಂಧಿ ಪ್ರತಿಮೆಗಳನ್ನು ಸ್ಥಾಪಿಸುವಂತೆ ಸರ್ಕಾರವನ್ನು ಆಗ್ರಹಿಸಿ ನಾನು ಧರಣಿ ಕೂರಲು ತೀರ್ಮಾನಿಸಿದ್ದೇನೆ. ಇದಕ್ಕೆ ನಿನ್ನ ಆಶೀರ್ವಾದ ಇದೆ ಎಂದು ನಂಬಿದ್ದೇನೆ.

ಇಂತಿ ವಿಧೇಯ
ಮುಷ್ಕರದಾಸ್‌ ಧರಣ್‌ಚಂದ್‌ ಗಾಂಧಿ


Kannada Prabha Issue Dated - October 3, 2005
An Odd (not ode) to Mahatma Gandhi on his Jayanthi

-

No comments: