Tuesday, October 25, 2005

ಇಡೀ ರಾಜ್ಯ ದರಿದ್ರನಾರಾಯಣ ಮಯವಾಗಲಿ

ಗ್ಲೋಬಲ್‌ ವಿಲೇಜ್‌ನಿಂದ ಶ್ರೀಮನ್‌ ನಾರಾಯಣನಿಗೆ ಬಡ ಬೋರೇಗೌಡನ ಈ ಮೇಲ್‌

ಇನ್‌ಫೋಸಿಸ್‌ ಅಷ್ಟೇ ಏನು... ಭಾರತೀಯ ವಿಜ್ಞಾನ ಸಂಸ್ಥೆ, ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌, ಎಚ್‌ಎಎಲ್‌, ಇಂಟರ್‌ನ್ಯಾಶನಲ್‌ ಟೆಕ್‌ಪಾರ್ಕ್‌ ಮುಂತಾದ ಸಂಸ್ಥೆಗಳಿಂದಲೂ ಬಡಬೋರೇ ಗೌಡನಿಗೆ ನೇರವಾಗಿ ಯಾವಲಾಭವೂ ಇಲ್ಲ. ಅಮಗಳನ್ನೆಲ್ಲ ಕರ್ನಾಟಕದಿಂದ ಓಡಿಸಿ ಅಮಗಳ ಭೂಮಿಗಳನ್ನು ಸರ್ಕಾರ ವಶಪಡಿಸಿಕೊಂಡು ಬಡಜನರಿಗೆ ಹಂಚುವಂತಾಗಬೇಕು!

ಓಂ ನಮೋ ನಾರಾಯಣಾಯ,
ಹೀಗೆಂದಾಕ್ಷಣ ಕನ್‌ಫ್ಯೂಶನ್‌ ಬೇಡ ಹರಿಯೇ. ನಾರಾಯಣ ಅಂತ ನಾನು ಹೇಳಿದ್ದು ಇನ್‌ಫೋಸಿಸ್‌ ನಾರಾಯಣನೂ ಅಲ್ಲ ದರಿದ್ರನಾರಾಯಣನೂ ಅಲ್ಲ. ಅಸಲಿ ಭಗವಂತ ಶ್ರೀಮನ್‌ ನಾರಾಯಣನಾದ ನಿನಗೆ ನನ್ನ ಶಿರಸಾಷ್ಟಾಂಗ ನಮಸ್ಕಾರಗಳು.

ಯಾಕೆ ಈ ಸ್ಪಷ್ಟನೆಯನ್ನು ನೀಡುತ್ತಿದ್ದೇನೆ ಅಂದರೆ, ಕಳೆದ ಒಂದು ವಾರದಿಂದ, ಭೂಲೋಕದಲ್ಲಿ ನಮ್ಮಂಥ ಹುಲುಮಾನವರಿಗೆ ಎರಡೇ ನಾರಾಯಣ ಗೊತ್ತಿರುಮದು. ಒಂದು ಜೆಡಿಎಸ್‌ ದ್ಯಾವ್ರ ಪಂಥದ ದರಿದ್ರ ನಾರಾಯಣ ಹಾಗೂ ಇನ್ನೊಂದು ಶ್ರೀಕೃಷ್ಣ ಪಂಥದ ಇನ್‌ಫೋಸಿಸ್‌ ನಾರಾಯಣ. ನಾನೀಗ ನಮಸ್ಕಾರ ಹೇಳಿದ್ದು ಈ ಇಬ್ಬರು ನಾರಾಯಣರಿಗೂ ಅಲ್ಲ. ಭಗವಾನ್‌ ನಾರಾಯಣನಾದ ನಿನಗೆ.

ನೀನು ಅದೆಲ್ಲಿ ಇದ್ದೀಯೋ? ಅದು ಹ್ಯಾಗಿದ್ದೀಯೋ! ಗೊತ್ತಿಲ್ಲ. ಆದರೂ ಸರ್ವಾಂತರ್ಮಯಿಯಾದ ನೀನು ಎಲ್ಲೆಲ್ಲೂ ಇದ್ದೀಯಾ ಅಂತ ಭಕ್ತ ಪ್ರಹ್ಲಾದ ಬಹಳ ಹಿಂದೆಯೇ ಪ್ರೂವ್‌ ಮಾಡಿರುಮದರಿಂದ ನೀನು ಸೈಬರ್‌ಲೋಕದಲ್ಲೂ ಅದೆಲ್ಲೋ ಇದ್ದೇ ಇರುತ್ತೀಯಾ ಅಂತ ನಾನು ನಂಬುತ್ತೇನೆ. ಭಗವಂತಾ, ನಿನ್ನ ಈ-ಮೇಲ್‌ ವಿಳಾಸ ನನಗೆ ಗೊತ್ತಿಲ್ಲ. ಆದರೂ, ಈ-ಮೇಲ್‌ ಕಳಿಸುತ್ತಿದ್ದೇನೆ. ನನಗೆ ಗೊತ್ತು... ಪ್ರತಿನಿತ್ಯ ಅಂತರ್ಜಾಲದಲ್ಲಿ ಅನ್‌ಡೆಲಿವರ್ಡ್‌ ಆದ ಮತ್ತು ಡಿಲೀಟ್‌ ಆದ ಕೋಟ್ಯಂತರ ಮೆಸೇಜ್‌ಗಳೆಲ್ಲ ನಿನ್ನ ಪಾದವನ್ನೇ ಸೇರುತ್ತವೆ! ಏಕೆಂದರೆ ಒಮ್ಮೆ ಸೃಷ್ಟಿಯಾದದ್ದೆಲ್ಲ ಲಯವಾಗಲೇ ಬೇಕು. ಲಯವಾದಮೇಲೆ ಅಮ ಇನ್ನೆಲ್ಲಿ ಹೋಗಲು ಸಾಧ್ಯ? ರಿಸೈಕಲ್ಡ್‌ಬಿನ್‌ನಿಂದ ನೇರವಾಗಿ ನಿನ್ನಲ್ಲೇ ಮುಕ್ತಿಕಾಣಬೇಕು ಎಂಬುದು ಸಿಂಪಲ್‌ ಲಾಜಿಕ್ಕು. ಈ ಅಚಲ ಭಕ್ತಿ ವಿಶ್ವಾಸದಿಂದ ನಿನಗೆ ಈ ಮೇಲ್‌-ಅರ್ಚನೆ ಮಾಡುತ್ತಿದ್ದೇನೆ. ದಯವಿಟ್ಟು ಓದು. ಇಷ್ಟುದಿನ ನಾನು ಪತ್ರಬರೆಯುತ್ತಿದ್ದೆ. ಆದರೆ, ಈಗ ಈ ಮೇಲ್‌ ಸಿಸ್ಟಂ ಅಳವಡಿಸಿಕೊಂಡಿದ್ದೇನೆ. ಏಕೆಂದರೆ, ಒಂದೇ ಬಟನ್‌ ಒತ್ತಿದರೆ ಪತ್ರವನ್ನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಪ್ರಧಾನ ಮಂತ್ರಿ, ಸೋನಿಯಾಗಾಂಧಿ ಹಾಗೂ ಹಾಗೂ ದೇಶದ ಎಲ್ಲ ಪತ್ರಿಕೆ ಮತ್ತು ಟೀವಿ ಸಂಸ್ಥೆಗಳಿಗೂ ತಕ್ಷಣ ಕಳಿಸಬಹುದು. ಇದರಿಂದ ಪತ್ರ ಕಳಿಸಲು ತಗಲುತ್ತಿದ್ದ ವೆಚ್ಚ ಉಳಿತಾಯವಾಗುತ್ತದೆ!

ಇಷ್ಟಕ್ಕೂ ಮಹಾಮಹಿಮನಾದ ನಾರಾಯಣನೇ,
ದೇವಲೋಕ, ಭೂಲೋಕ, ಪಾತಾಳಲೋಕವೆಂಬ ತ್ರಿಲೋಕದ ನಿನ್ನ ಸೃಷ್ಟಿಕ್ರಿಯೆ ಅದ್ಬುತ ಎನ್ನುಮದರಲ್ಲಿ ಎರಡು ಮಾತಿಲ್ಲ. ಆದರೆ, ಮಾನವ ಸೃಷ್ಟಿಯ ಸೈಬರ್‌ಲೋಕವನ್ನು ಕಂಡು ನಿನಗೂ ತುಸು ಅಸೂಸೆಯಾಗಿರಬಹುದು ಅಂತ ನನಗೆ ಅನುಮಾನ. ಯಾಕೆಂದರೆ, ನೀನು ಸೃಷ್ಟಿಸಿದ ಎಲ್ಲ ಮೂರೂ ಲೋಕಗಳನ್ನೂ ಸೈಬರ್‌ಲೋಕವೊಂದರಲ್ಲೇ ಕಾಣಬಹುದು! ಹೂಂ ಅಂತೀಯಾ ಊಂಹೂ ಅಂತಿಯಾ?

ಇಲ್ಲಿ ಮೆಕ್ರೋಸಾಫ್ಟಿನ ಬಿಲ್ಸ್‌ಗೇಟ್ಸ್‌ ಎಂಬ ಕುಬೇರನಿದ್ದಾನೆ. ಐಬಿಎಂ ಕಂಪನಿಯ ವಜ್ರಾದಪಿ ಹಾರ್ಡ್‌ವೇರಿನ ಇಂದ್ರನಿದ್ದಾನೆ. ಅವನ ಆಸ್ಥಾನದಲ್ಲಿರುವ ರಂಭೆ, ಊರ್ವಶಿ, ತಿಲೋತ್ತಮೆ ಇತ್ಯಾದಿಗಳನ್ನೂ ಮೀರಿಸುವ ಅಪ್ಸರೆಯರಿದ್ದಾರೆ... ಪ್ರತಿದಿನವೂ ಹೊಸಸಾಫ್ಟವೇರ್‌ ಸೃಷ್ಟಿಸುವ ಭೃಹ್ಮ, ವೈರಸ್‌ ಹುಟ್ಟಿಸುವ ರಕ್ಕಸರು, ಕಂಪ್ಯೂಟರ್‌ ಮುಂದೆ ತಪಸ್ಸು ಮಾಡುವ ಋಷಿಗಳು, ಆನ್‌ಲೈನ್‌ ವಿದ್ಯೆ ನೀಡುವ ಸರಸ್ವತಿ, ಕ್ರೆಡಿಟ್‌ಕಾರ್ಡ್‌ ಮೂಲಕ ವ್ಯವಹರಿಸುವ ಲಕ್ಷ್ಮಿ, ಮಾಹಿತಿ ಹ್ಯಾಕ್‌ಮಾಡುವ ನಾರದ ಅಷ್ಟೇ ಏನು... ಬಗ್‌ನಂಥ ಕ್ರಿಮಿಯಿಂದ ಹಿಡಿದು, ಮೌಸು, ಟ್ರೋಜನ್‌ಹಾರ್ಸ್‌ನಂಥ ಪ್ರಾಣಿಸಂಕುಲದವರೆಗೆ ಇಲ್ಲಿ ಏನುಂಟು, ಏನಿಲ್ಲ? ನಾರಾಯಣನೇ... ಸ್ವತಃ ನಿನ್ನದೇ ವರ್ಚುವಲ್‌ ಅವತಾರ ಇಲ್ಲಿರುವಾಗ, ಅಂತರ್ಜಾಲದ ಮುಂದೆ ಯಾವಲೆಕ್ಕ ನಿನ್ನ ಮಾಯಾಜಾಲ!

ಹೇ ಪ್ರಭು...
ಈ-ಮೇಲ್‌ ಬರೆಯಲು ಕಾರಣವೇನೆಂದರೆ, ಭಾರತ ಹಳ್ಳಿಗಳ ದೇಶ. ರೈತರೇ ದೇಶದ ಬೆನ್ನೆಲುಬು. ಆದರೆ, ಇವರಲ್ಲಿ ಶೇ.೩೦ರಷ್ಟು ರೈತರು ಮಳೆಯ ಪ್ರವಾಹದಿಂದ ಬೆಳೆ ಕಳೆದುಕೊಂಡು ಲಾಸ್‌ ಅನುಭವಿಸುತ್ತಿದ್ದಾರೆ. ಇನ್ನು ಶೇ.೩೦ರಷ್ಟು ರೈತರು ಮಳೆಯೇ ಇಲ್ಲದೇ ಬೆಳೆ ಬಾರದೇ ನಷ್ಟಕ್ಕೊಳಗಾಗಿದ್ದಾರೆ. ಇನ್ನೂ ಶೇ.೩೦ರಷ್ಟು ರೈತರು ಉತ್ತಮ ಬೆಳೆಯಿಂದ ಸಂತಸಗೊಂಡರೂ ಬೆಲೆಕುಸಿತದಿಂದ ಸಂಪೂರ್ಣ ಅವಸಾನದ ಅಂಚು ತಲುಪಿದ್ದಾರೆ. ಅಂದರೆ, ಶೇ.೯೦ರಷ್ಟು ರೈತರು ಒಂದಲ್ಲಾ ಒಂದು ರೀತಿಯ ಲಾಸ್‌ನಲ್ಲಿದ್ದಾರೆ.

ಇದೆಂಥ ಅನ್ಯಾಯ ನೋಡು ಇನ್‌ಫೋಸಿನಂಥ ಕಂಪನಿ ಮಾತ್ರ ಪ್ರತಿವರ್ಷ ನೂರಾರು ಕೋಟಿ ರುಪಾಯಿ ಲಾಭ ಗಳಿಸುತ್ತಿದೆ. ನ್ಯಾಯಾನಾ ಭಗವಂತ? ರೈತರಿಗೆಲ್ಲ ನಷ್ಟವಾದರೆ ಇನ್‌ಫೋಸಿಸ್‌ಗೂ ನಷ್ಟವಾಗಬೇಕು. ಅದೇ ನ್ಯಾಯ ತಾನೇ?

ಈ ನಡುವೆ, ಶೇ.೫ರಷ್ಟು ರೈತರು ಅಲ್ಪ ಸ್ವಲ್ಪ ಲಾಭ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರೆ, ಇನ್ನುಳಿದ ಶೇ.೫ರಷ್ಟು ರೈತರು ತಮ್ಮ ಭೂಮಿಯನ್ನು ಸಾಫ್ಟ್‌ವೇರ್‌ ಕಂಪನಿಗಳು ಮತ್ತು ರಿಯಲ್‌ ಎಸ್ಟೇಟ್‌ ಕಂಪನಿಗಳಿಗೆ ಮಾರಿ ಹಣಗಳಿಸಿ ರೈತಾಪಿ ಕೆಲಸವನ್ನೇ ಬಿಡುತ್ತಿದ್ದಾರೆ.

ಆದರೆ, ಇನ್‌ಫೋಸಿಸ್‌ ಮಾತ್ರ ರೈತರ ಹೊಲಗದ್ದೆಗಳನ್ನು ಖರೀದಿಸಿ ದೇಶದಲ್ಲೇ ದೊಡ್ಡದಾದ ಸಾಫ್ಟ್‌ವೇರ್‌ ಕ್ಯಾಂಪಸ್‌, ವಿಶ್ವದಲ್ಲೇ ದೊಡ್ಡದಾದ ಶಿಕ್ಷಣ ಕ್ಯಾಂಪಸ್‌ ಸ್ಥಾಪಿಸಿ ಬಡವರ ಹೊಟ್ಟೆಕಿಚ್ಚಿಗೆ ಕಾರಣವಾಗಿದೆ.

ಇದು ಪರಮ ಅನ್ಯಾಯ. ಇದೇ ರಾಜ್ಯದಲ್ಲಿ ಐಬಿಎಂ, ಎಕ್ಸೆಂಚರ್‌, ಎಚ್‌ಪಿ, ವಿಪ್ರೋ ಮುಂತಾದ ಕಂಪನಿಗಳು ಬಾಡಿಗೆ ಕಟ್ಟಡದಲ್ಲಿ ಕೆಲಸಮಾಡುತ್ತಿಲ್ಲವೇ? ಹಾಗೇ ಇನ್ಫೋಸಿಸ್‌ ಕೂಡ ಬಾಡಿಗೆ ಕಟ್ಟಡದಲ್ಲೇ ಕೆಲಸ ಮಾಡಬೇಕು.

ರಾಜ್ಯದಲ್ಲಿ ಕೋಟ್ಯಂತರ ದರಿದ್ರ ನಾರಾಯಣರು ಸ್ಲಂಗಳಲ್ಲಿ, ಜೋಪಡಿಗಳಲ್ಲಿ ವಾಸಿಸುತ್ತಿರುವಾಗ ಇನ್‌ಫೋಸಿಸ್‌ ನಾರಾಯಣರಿಗೆ ಮಾತ್ರ ಹವಾನಿಯಂತ್ರಿತ ಪಂಚತಾರಾ ಕಟ್ಟಡದಲ್ಲಿ ವಾಸವಾಗಿರಲು ಹೇಗಾದರೂ ಮನಸ್ಸು ಬರುತ್ತದೋ? ಅವರೂ ಕೊಳಚೆ ಪ್ರದೇಶಗಳಲ್ಲಿ ಸಾಮಾನ್ಯ ನಾಗರಿಕರಂತೆ ಹಕ್ಕುಪತ್ರದ ಬದಲು ಸ್ವಾಧೀನ ಪತ್ರ ಇಟ್ಟುಕೊಂಡು ಜೀವನ ನಡೆಸಬೇಕು.

ಇಷ್ಟಕ್ಕೂ ಈ ಇನ್‌ಫೋಸಿಸ್‌ ಕಂಪನಿಯಿಂದ ದೇಶಕ್ಕೆ ಭಾರೀ ಹೆಸರು ಬಂದಿರಬಹುದು. ಜಿಡಿಪಿಗೆ ಸಾಕಷ್ಟು ಆದಾಯ ಆಗಿರಬಹುದು. ಇನ್‌ಫೋಸಿಸ್‌ ಷೇರುಗಳಿಂದ ದೇಶದಲ್ಲಿ ಕೋಟ್ಯಂತರ ಮಂದಿ ಶ್ರೀಮಂತರಾಗಿರಬಹುದು.

ಆದರೆ, ಅದರಿಂದೆಲ್ಲ ಬಡ ಬೋರೇಗೌಡನಿಗೆ ಏನು ಲಾಭವಾಯಿತು? ಇನ್‌ಫೋಸಿಸ್‌ ಅಷ್ಟೇ ಏನು... ಭಾರತೀಯ ವಿಜ್ಞಾನ ಸಂಸ್ಥೆ, ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌, ಹಿಂದೂಸ್ತಾನ್‌ ಏರೋನಾಟಿಕಲ್ಸ್‌, ಇಂಟರ್‌ನ್ಯಾಶನಲ್‌ ಟೆಕ್‌ಪಾರ್ಕ್‌ ಮುಂತಾದ ಸಂಸ್ಥೆಗಳಿಂದಲೂ ಬಡಬೋರೇ ಗೌಡನಿಗೆ ನೇರವಾಗಿ ಯಾವಲಾಭವೂ ಇಲ್ಲ. ಅಮಗಳನ್ನೆಲ್ಲ ಕರ್ನಾಟಕದಿಂದ ಓಡಿಸಿ ಅಮಗಳ ಭೂಮಿಗಳನ್ನು ಸರ್ಕಾರ ವಶಪಡಿಸಿಕೊಂಡು ಬಡಜನರಿಗೆ ಹಂಚುವಂತಾಗಬೇಕು.

ಪ್ರಜಾತಂತ್ರದ ಈ ದೇಶದಲ್ಲಿ ಬಹುಮತಕ್ಕೇ ಜಯ. ಈ ದೇಶದಲ್ಲಿ ಬಹುಮತ ಇರುಮದು ದರಿದ್ರನಾರಾಯಣರಿಗೆ. ಆದ್ದರಿಂದ ಇಡೀ ದೇಶದಲ್ಲಿ ದರಿದ್ರ ನಾರಾಯಣರ ಆಡಳಿತ ಬರಬೇಕು. ಇಡೀ ದೇಶ ದರಿದ್ರನಾರಾಯಣ ಮಯವಾಗ ಬೇಕು. ಇಡೀ ದೇಶ ಆಗದಿದ್ದರೆ ರಾಜ್ಯದಲ್ಲಂತೂ ಆಗಬೇಕು.

ಈ ಕೋರಿಕೆಯನ್ನು ಮನ್ನಿಸುತ್ತೀಯೆಂಬ ನಂಬಿಕೆಯಿದೆ. ಇಷ್ಟುದ್ದ ಈ-ಮೇಲ್‌ ಓದಿ, ತುಂಬಾ ಬೈಟ್ಸಾಯಿತು ಅಂತಿದಿಯೇನೋ. ಅದಕ್ಕೇ ಸದ್ಯಕ್ಕೆ ಲಾಗ್‌ಔಟ್‌ ಆಗುತ್ತೇನೆ. ಮತ್ತೆ ಯಾವಾಗಾದರೂ ಮೇಲ್‌ ಮಾಡುತ್ತೇನೆ.

ಇಂತಿ ನಿನ್ನ ಭಕ್ತೋತ್ತಮ
ಬೋರೇಗೌಡ

Kannada Prabha issue dated October 24, 2005
Let The Entier Karnataka Be Full of Narayanas.. Daridra Narayanas!

-

No comments: