Tuesday, October 18, 2005

ಪ್ರಗತಿಪರ ಭ್ರಷ್ಟಾಚಾರದಿಂದಲೇ ದೇಶದ ಪ್ರಗತಿ!

ಭಾಂಜೆ ದುರ್ಯೋಧನನಿಗೆ ಮಾಮಾಶ್ರಿ ಶಕುನಿ ಕಳಿಸಿದ ಲೇಟೆಸ್ಟ್‌ ಈ-ಮೇಲ್‌

ಭ್ರಷ್ಟಾಚಾರದಲ್ಲಿ ಕರ್ನಾಟಕ ನಂಬರ್‌ ಒನ್‌ ಎಂಬುದು ಕರ್ನಾಟಕ ಎಷ್ಟು ಉದ್ಯಮ ಸ್ನೇಹಿ ಎಂಬುದಕ್ಕೆ ವಿಶ್ವಬ್ಯಾಂಕೇ ನೀಡಿದ ಪ್ರಶಸ್ತಿ ಪತ್ರ! ಇದರ ಯಶಸ್ಸಿನ ಪಾಲು ಯಾಮದೇ ಒಬ್ಬ ಸಿ.ಎಂ.ಗಾಗಲೀ, ಮಾಜಿ ಸಿ.ಎಂ.ಗಾಗಲೀ ಸಲ್ಲುಮದಿಲ್ಲ. ’ಇದು ಎಲ್ಲರ ಟೀಮ್‌ ಎಫರ್ಟ್‌’. ಯುದ್ಧಗೆಲ್ಲಲು ಕೇವಲ ರಾಜನಿಂದ ಮಾತ್ರ ಸಾಧ್ಯವಿಲ್ಲ... ಇಡೀ ಸೈನ್ಯವೇ ಹೋರಾಡಬೇಕು. ಅಂಡರ್‌ಸ್ಟಾಂಡ್‌....ಭಾಂಜೆ?

ಪ್ರಿಯ ಭಾಂಜೆ,
ನಿನಗೇನಾಗಿದೆ ಧಾಡಿ. ಶ್ರೀಯುತ ದೇವೇಗೌಡರನ್ನು ನೋಡು. ಈ ವಯಸ್ಸಿನಲ್ಲೂ ಎಷ್ಟು ಚುರುಕಾಗಿದ್ದಾರೆ. ಅವರ ಛಲವನ್ನು ನೋಡು. ಬಡಜನರಿಗಾಗಿ ಅವರು ಹೋರಾಡುವ ಪರಿಯನ್ನು ನೋಡು. ಅವರು ಎಷ್ಟು ಪತ್ರ ಬರೆಯುತ್ತಾರೆ. ಕಾಂಗ್ರೆಸ್ಸಿನ ಹೈ ಕಮಾಂಡಿನಿಂದ ಹಿಡಿದು ಜೆಡಿಎಸ್ಸಿನ ಲೋ ಕಮಾಂಡ್‌ವರೆಗೆ, ಕಾವೇರಿ ನದಿಯಿಂದ ಹಿಡಿದು ಮೆಟ್ರೋ ರೈಲಿನವರೆಗೆ, ಕೊಳಚೆ ಸೈಟಿನಿಂದ ಹಿಡಿದು ಹೈಟೆಕ್‌ ಕಾರಿಡಾರ್‌ವರೆಗೆ ಅವರ ಪತ್ರದ ಹರಮ ವಿಶಾಲವಾಗಿದೆ. ಕರ್ನಾಟಕದಲ್ಲಿ ಸದ್ಯ ನಂಬರ್‌ ಒನ್‌ ಪತ್ರ-ಕರ್ತ ಅಂದರೆ ಅವರೇ! ಪ್ರತಿ ಬಾರಿ ಅವರು ಪತ್ರ ಬರೆದಾಗಲೂ ಅದು ದೊಡ್ಡ ಸುದ್ದಿಯಾಗುತ್ತದೆ. ಯಾರ ಪತ್ರಕ್ಕೂ ಅಷ್ಟು ಪ್ರಚಾರ ಸಿಗುಮದಿಲ್ಲ.

ಭಾಂಜೆ...
ಈಗೀಗ ಎಲ್ಲರೂ ತಮ್ಮ ಜೀವನ ಜಂಜಡಲ್ಲಿ ಪತ್ರ ಬರೆಯುವ ಹವ್ಯಾಸವನ್ನೇ ಬಿಟ್ಟುಬಿಟ್ಟಿದ್ದಾರೆ. ಆದರೆ, ಅವರೆಲ್ಲರೂ ಶ್ರೀಯುತ ದೇವೇಗೌಡರಿಂದ ಸ್ಫೂರ್ತಿ ಪಡೆದು ಮತ್ತೆ ಪತ್ರ ಬರೆಯುವ ಹವ್ಯಾಸವನ್ನು ರೂಢಿ ಮಾಡಿಕೊಳ್ಳಬೇಕು ಅಂತ ನನ್ನ ಆಸೆ.

ಇಟ್ಸ್‌ ಓಕೆ ಭಾಂಜೆ,
ಆದರೆ, ನನ್ನ ಈ ಪತ್ರಕ್ಕೆ ಶ್ರೀಯುತ ದೇವೇಗೌಡರು ಸ್ಫೂರ್ತಿಯಲ್ಲ ಎಂದು ಮೊದಲೇ ಸ್ಪಷ್ಟಪಡಿಸಿಬಿಡುತ್ತೇನೆ. ಕಳೆದವಾರ ದಿಢೀರ್‌ ಆಗಿ ಪತ್ರಿಕೆಗಳಲ್ಲಿ ಕಾಣಿಸಿಕೊಂಡ ಒಂದು ವರದಿ ನನ್ನ ಈ ಪತ್ರಕ್ಕೆ ಕಾರಣ.

ಭ್ರಷ್ಟಾಚಾರದಲ್ಲಿ ಕರ್ನಾಟಕಕ್ಕೆ ನಂಬರ್‌ ಒನ್‌ ಸ್ಥಾನ ನೀಡಿದ ವಿಶ್ವಬ್ಯಾಂಕ್‌ ಸಮೀಕ್ಷೆ ಕುರಿತಾದ ವರದಿ ಅದು. ಕಳೆದ ವರ್ಷವೇ ನಿದ್ದೆಗೆ ಹೋಗಿದ್ದ ಈ ಸಮೀಕ್ಷೆ ಈಗ ದಿಢೀರ್‌ ಆಗಿ ಎದ್ದು ಬಂದದ್ದು ಹೇಗೆ ಎಂಬ ಕುತೂಹಲ ಉಂಟಾಯಿತು ನನಗೆ.
ಇಂಥ ನೂರಾರು ಸಮೀಕ್ಷೆಗಳೂ ವರದಿಗಳೂ ದಿನವೂ ಪ್ರಕಟವಾಗುತ್ತಿರುತ್ತವೆ. ಚಹ ಕುಡಿಯುವವರಲ್ಲಿ ಶೇ.೨೬ರಷ್ಟು ಜನರು ಕ್ಯಾನ್ಸರಿಗೆ ತುತ್ತಾಗುತ್ತಾರೆ ಎಂಬ ಸಮೀಕ್ಷೆಯಿಂದ ಹಿಡಿದು, ಕಾಫಿ ಕುಡಿಯದಿದ್ದರೆ ಹಾರ್ಟ್‌ ಅಟ್ಯಾಕ್‌ ಆಗುವ ಪ್ರಮಾಣ ಶೇ.೮೦ ರಷ್ಟು ಅಧಿಕ ಎಂಬ ಸಮೀಕ್ಷೆಯ ವರೆಗೆ, ಹೆಂಡತಿ ಊರಿಗೆ ಹೋದಾಗ ಸ್ನೇಹಿತೆಯ ಜೊತೆ ಶೇ.೪೫ರಷ್ಟು ಗಂಡಸರು ಮಲಗುತ್ತಾರೆ ಎಂಬ ಸಮೀಕ್ಷೆಯಿಂದ ಹಿಡಿದು ಟೀವಿ ಇರುವ ಶೇ.೭೩.೫ರಷ್ಟು ಮನೆಯ ಮಕ್ಕಳು ಪೋಲಿ ಆಗುತ್ತಾರೆ ಎಂಬ ಸಮೀಕ್ಷೆಯ ವರೆಗೆ ವೈವಿಧ್ಯ ಸಮೀಕ್ಷೆಗಳನ್ನು ಓದಿ ನಾನು ಆನಂದಿಸುತ್ತಿದ್ದೆ.

ಆದರೆ, ಕರ್ನಾಟಕದ ಭ್ರಷ್ಟಾಚಾರದ ಕುರಿತ ಎರಡು ಬೇರೆ ಬೇರೆ ಸಮೀಕ್ಷೆ ನನಗೆ ತುಸು ಕುತೂಹಲ ಮೂಡಿಸಿತು. ಮೊನ್ನೆ ಮೊನ್ನೆಯವರೆಗೆ ಭ್ರಷ್ಟಾಚಾರದಲ್ಲಿ ಕರ್ನಾಟಕ ೪ನೇ ರ್ಯಾಂಕು ಎಂದು ಭಾರತದ ಸಮೀಕ್ಷೆಯೊಂದರಲ್ಲಿ ಹೇಳಲಾಗುತ್ತಿತ್ತು. ಆಗೆಲ್ಲ... ಲೋಕಾಯುಕ್ತರು ಆ ವರದಿ ಸರಿಯಿಲ್ಲ. ಭ್ರಷ್ಟಾಚಾರದಲ್ಲಿ ಕರ್ನಾಟಕ ನಂಬರ್‌ ಫೋರ್‌ ಅಲ್ಲ. ನಂಬರ್‌ ಒನ್‌ ಅಂತ ಒತ್ತಿ ಒತ್ತಿ ಹೇಳಿದರು. ಆದರೆ, ಅವರ ಮಾತನ್ನು ಯಾರೂ ಸೀರಿಯಸ್ಸಾಗಿ ತಗೊಳ್ಳಲಿಲ್ಲ. ಆದರೆ, ಈಗ ನೋಡು. ವಿಶ್ವಬ್ಯಾಂಕಿನ ವರದಿಯ ಪ್ರಕಾರ ಕರ್ನಾಟಕ ನಂಬರ್‌ ಒನ್‌ ಭ್ರಷ್ಟಾಚಾರಿ ಅಂತ ಖಾತ್ರಿಯಾಗಿದೆ! ಲೋಕಾಯುಕ್ತರು ಹೇಳಿದ್ದು ಎರಡೇ ತಿಂಗಳಲ್ಲಿ ನಿಜವಾಗಿದೆ.

ಇಷ್ಟಕ್ಕೂ ಭಾಂಜೆ,
ಭ್ರಷ್ಟಾಚಾರದಲ್ಲಿ ಕರ್ನಾಟಕ ನಂಬರ್‌ ಒನ್‌ ಎಂದರೆ ಕನ್ನಡಿಗರು ಯಾಕೆ ಬೇಜಾರು ಮಾಡಿಕೊಳ್ಳಬೇಕು? ಈ ಭ್ರಷ್ಟಾಚಾರಕ್ಕೆ ಈ ಮುಖ್ಯಮಂತ್ರಿ ಕಾರಣ, ಆ ಮುಖ್ಯಮಂತ್ರಿ ಕಾರಣ ಅಂತ ಯಾಕೆ ಕೆಸರೆರಚಿಕೊಳ್ಳಬೇಕು? ಕನ್ನಡಿಗರು ತಮಗೆ ದೊರಕಿದ ರ್ಯಾಂಕಿನ ಬಗ್ಗೆ ಹೆಮ್ಮೆ ಪಡಬೇಕು. ನಿನಗೆ ಗೊತ್ತಿರಬೇಕಲ್ಲ. ೬೪ ವಿದ್ಯೆಗಳಲ್ಲಿ ಚೋರ ವಿದ್ಯೆಯೂ ಒಂದು ಅಂತ. ಈ ಭ್ರಷ್ಟಾಚಾರವೆಲ್ಲ ಆ ವಿದ್ಯೆಯ ಅಂಗವೇ ಆಗಿದೆ. ಇಂಥ ಎಜುಕೇಶನ್‌ ಫೀಲ್ಡಿನಲ್ಲಿ ಕರ್ನಾಟಕ ಒಂದನೇ ರ್ಯಾಂಕ್‌ ಗಳಿಸಿದೆ ಎಂದರೆ ಯಾಕೆ ಕನ್ನಡಿಗರು ತಲೆ ತಗ್ಗಿಸುತ್ತಾರೋ ನನಗಂತೂ ಅರ್ಥ ಆಗುಮದಿಲ್ಲ!

ಈ ಪ್ರಜೆಗಳಿಗೆ ಒಂದು ವಿಷಯ ಇನ್ನೂ ಗೊತ್ತಿಲ್ಲ. ಭ್ರಷ್ಟಾಚಾರದಲ್ಲೂ ಎರಡು ಬಗೆಯಿದೆ. ಒಂದು ಪ್ರಗತಿಪರ ಭ್ರಷ್ಟಾಚಾರ. ಇನ್ನೊಂದು ಮಾರಕ ಭ್ರಷ್ಟಾಚಾರ ಅಂತ.

ದೇಶದ ಕಾನೂನುಗಳನ್ನು ಸಡಿಲಗೊಳಿಸಿ ದೇಶದ ಪ್ರಗತಿಗೆ ನೆರವಾಗುವ ಭ್ರಷ್ಟಾಚಾರವೇ ಪ್ರಗತಿಪರ ಭ್ರಷ್ಟಾಚಾರ. ಕಾನೂನುಗಳನ್ನು ಕಾನೂನುಗಳಿಂದಲೇ ನಾಶಮಾಡುವ ಭ್ರಷ್ಟಾಚಾರವನ್ನು ಮಾರಕ ಭ್ರಷ್ಟಾಚಾರ ಅಂತ ಕರೆಯುತ್ತಾರೆ.
ಸಾಮಾನ್ಯವಾಗಿ ಕರ್ನಾಟಕದಲ್ಲಿ ಕಾಣುವಂಥದ್ದು ಪ್ರಗತಿಪರ ಭ್ರಷ್ಟಾಚಾರ. ಬಿಹಾರದಲ್ಲಿ ಕಾಣುವ ಭ್ರಷ್ಟಾಚಾರ ಎರಡನೇ ಬಗೆಯದು ಎಂದು ತಜ್ಞರ ಅಭಿಪ್ರಾಯ.

ಪ್ರಗತಿಪರ ಭ್ರಷ್ಟಾಚಾರವನ್ನು ಕೆಟ್ಟದ್ದು ಎಂದು ಕರೆಯಬಾರದು ಎಂದು ದೇಶದ ಖ್ಯಾತ ಉದ್ಯಮಿಗಳೆಲ್ಲ ಅಭಿಪ್ರಾಯ ಪಡುತ್ತಾರೆ. ಈ ದೇಶದ ಬಹುತೇಕ ಕೈಗಾರಿಕೆಗಳು, ಉದ್ದಿಮೆಗಳು ಈ ಅಡಿಪಾಯದಲ್ಲೇ ನಿರ್ಮಾಣ ಆಗಿವೆ ಹಾಗೂ ಆಗುತ್ತಿವೆ ಎಂದು ಅವರು ವಾದಿಸುತ್ತಾರೆ.

ಒಂದು ವೇಳೆ ಕಾನೂನುಗಳನ್ನೆಲ್ಲ ಪಾಲಿಸಿದರೆ ದೇಶದಲ್ಲಿ ಕೈಗಾರಿಕೆ ಸ್ಥಾಪಿಸುಮದು ಸಾಧ್ಯವೇ ಇಲ್ಲ. ವ್ಯವಹಾರ ನಡೆಸಲು ಆಗುಮದೇ ಇಲ್ಲ. ಲೈಸೆನ್ಸ್‌ ಪಡೆಯಲು ನೂರಾರು ಕಟ್ಟಳೆಗಳು, ಹಲವಾರು ವರ್ಷಗಳು ಬೇಕು. ಫೈಲುಗಳು ಸಾವಿರಾರು ಹಸ್ತಗಳನ್ನು ಬದಲಾಯಿಸಬೇಕು. ಇವೆಲ್ಲಾ ಆಗಿ ಕೈಗಾರಿಕೆಗೆ ಹಸಿರು ನಿಶಾನೆ ಸಿಗುವ ಹೊತ್ತಿಗೆ ಉದ್ಯಮಿಯ ಅರ್ಧ ಆಯುಸ್ಸೇ ಕಳೆದುಹೋಗಿರುತ್ತದೆ. ಆಮೇಲೆ ಕೈಗಾರಿಕೆ ಸ್ಥಾಪಿಸುಮದು ಯಾವಾಗ! ಬಿಸಿನೆಸ್‌ ಆಗುಮದು ಯಾವಾಗ? ದೇಶದ ಪ್ರಗತಿ ಆಗುಮದು ಯಾವಾಗ?...

ಬದಲಿಗೆ... ಕಾಸು ಕೊಟ್ಟ ಕೂಡಲೇ ಲೈಸೆನ್ಸು ಸಿಗುವ, ಕೈ ಬೆಚ್ಚಗೆ ಮಾಡಿದ ಕೂಡಲೇ ಹಸಿರು ನಿಶಾನೆ ತೋರಿಸುವ ವ್ಯವಸ್ಥೆ ಇದ್ದರೆ ಎಷ್ಟನುಕೂಲ ನೋಡಿ. ಅದರಲ್ಲೂ ಸಿಂಗಲ್‌ ವಿಂಡೋ ವ್ಯವಸ್ಥೆ ಬಂದ ಮೇಲೆ ಇಡೀ ಪ್ರಕ್ರಿಯೆ ಎಷ್ಟು ಸುಲಭವಾಗುತ್ತದೆ ಎಂದರೆ, ಒಂದೇ ವಿಂಡೋದಲ್ಲಿ ಕಾಸು ಹಾಕಿದರಾಯಿತು... ಲೈಸೆನ್ಸಿನ ಹಲವಾರು ಡೋರುಗಳು ಆಟೋಮ್ಯಾಟಿಕ್‌ ಆಗಿ ಓಪನ್‌ ಆಗತ್ತವೆ. ದಿಢೀರನೆ ಕೈಗಾರಿಕೆ ಸ್ಥಾಪಿಸಬಹುದು. ದಿಢೀರನೆ ವ್ಯವಹಾರ ನಡೆಸಬಹುದು. ದಿಢೀರನೆ ದೇಶದ ಪ್ರಗತಿಯಾಗುತ್ತದೆ. ಇದೆಲ್ಲಾ ಪ್ರಗತಿಪರ ಭ್ರಷ್ಟಾಚಾರದ ಲಾಭಗಳು.

ಆದ್ದರಿಂದ ಎಲ್ಲಿ ಪ್ರಗತಿಪರ ಭ್ರಷ್ಟಾಚಾರ ಹೆಚ್ಚಿರುತ್ತದೋ ಅಲ್ಲಿ ಕೈಗಾರಿಕಾ ಪ್ರಗತಿಯೂ ಹೆಚ್ಚು ಎನ್ನುಮದು ಉದ್ಯಮಿಗಳ ನಂಬಿಕೆ. ‘ಪ್ರಗತಿಪರ ಭ್ರಷ್ಟಾಚಾರ ಎಲ್ಲಿದೆಯೋ ಅಲ್ಲಿದೆ ಪ್ರಗತಿ’... ಅಂತ ಘೋಷಣೆಯನ್ನು ಕೂಗಬಹುದು.

ಈ ಹಿನ್ನೆಲೆಯಲ್ಲಿ ಕೈಗಾರಿಕೋದ್ಯಮಿಗಳಿಗೆ ಬಂಡವಾಳ ಹೂಡಲು ಕರ್ನಾಟಕ ಪ್ರಶಸ್ತ ರಾಜ್ಯ. ಏಕೆಂದರೆ, ಭ್ರಷ್ಟಾಚಾರದಲ್ಲಿ ಕರ್ನಾಟಕ ನಂಬರ್‌ ಒನ್‌ ಅಂತ ವಿಶ್ವಬ್ಯಾಂಕು ಮತ್ತು ಭಾರತೀಯ ಕೈಗಾರಿಕಾ ಒಕ್ಕೂಟದ ಜಂಟಿ ಸಮೀಕ್ಷೆಯಲ್ಲೇ ಹೇಳಲಾಗಿದೆ. ಇದು ಕರ್ನಾಟಕ ಎಷ್ಟು ಉದ್ಯಮ ಸ್ನೇಹಿ ಎಂಬುದಕ್ಕೆ ವಿಶ್ವಬ್ಯಾಂಕೇ ನೀಡಿದ ಪ್ರಶಸ್ತಿ ಪತ್ರ. ಇದರ ಯಶಸ್ಸಿನ ಪಾಲು ಯಾಮದೇ ಒಬ್ಬ ಮುಖ್ಯಮಂತ್ರಿಗಾಗಲೀ, ಮಾಜಿ ಮುಖ್ಯಮಂತ್ರಿಗಾಗಲೀ ಸಲ್ಲುಮದಿಲ್ಲ. ಇದು ಎಲ್ಲರ ಟೀಮ್‌ ಎಫರ್ಟ್‌. ಗ್ರಾಮ ಪಂಚಾಯ್ತಿಯ ಸದಸ್ಯನಿಂದ ಹಿಡಿದು ಮುಖ್ಯಮಂತ್ರಿಯ ವರೆಗೆ, ಜವಾನನಿಂದ ಹಿಡಿದು ಸರ್ಕಾರದ ಮಖ್ಯಕಾರ್ಯದರ್ಶಿಯವರೆಗೆ ಎಲ್ಲರನ್ನೂ ಒಳಗೊಂಡ ತಂಡಕ್ಕೆ ಈ ಪ್ರಶಸ್ತಿ ಸಲ್ಲಬೇಕು.

ಯುದ್ಧವನ್ನು ಗೆಲ್ಲಲು ರಾಜನಿಂದ ಮಾತ್ರ ಸಾಧ್ಯವಿಲ್ಲ ಭಾಂಜೆ... ಇಡೀ ಸೈನ್ಯವೇ ಹೋರಾಡಬೇಕು. ಅಂಡರ್‌ಸ್ಟಾಂಡ್‌?
ಆಯುಷ್ಮಾನ್‌ ಭವ
ಮಾಮಾಶ್ರೀ


Kannada Prabha issue Dated - October 17, 2005
"Developmental Corruption" for the Development of the Nation!

-

No comments: