ಭಾಗ - 7
ಚೀನಾ ಸರಕಿಲ್ಲದೇ ಅಮೆರಿಕದಲ್ಲಿ ಬದುಕಬಹುದು.
ಆದರೆ, ಅದು ಅತ್ಯಂತ ಕಷ್ಟದ ಬದುಕು!
ಅಮೆರಿಕದಲ್ಲಿ ಮೇಡ್-ಇನ್-ಅಮೆರಿಕಾ ಅಂತ ಏನಾದ್ರೂ ಇದ್ರೆ ಅದು ರಾಕೆಟ್ಟು, ಮಿಸೈಲು, ಸ್ಯಾಟಲೈಟು, ಅಣು ಬಾಂಬು ಮುಂತಾದ ಯುದ್ಧ ಸಾಮಗ್ರಿ ಮಾತ್ರ. ಉಳಿದಂತೆ ಅಮೆರಿಕದಲ್ಲಿ ಸಿಗೋದೆಲ್ಲಾ ಮೇಡ್-ಇನ್-ಚೈನಾ ಮಾಲು!
ಇದೊಂಥರಾ ಜೋಕಾದ್ರೂ, ವಾಸ್ತವ ಕೂಡ ಬೇರೆ ಅಲ್ಲ.
ಸಾರಾ ಬೊಂಜೋರ್ನಿ ಎಂಬ ಪತ್ರಕರ್ತೆ An Year Without -'Made In China' (ಮೇಡ್-ಇನ್-ಚೈನಾ ಇಲ್ಲದ ಒಂದು ವರುಷ) ಎಂಬ ಅಪರೂಪದ ಪುಸ್ತಕ ಬರೆದಿದ್ದಾಳೆ. ಚೀನಾದಲ್ಲಿ ತಯಾರಾದ ಯಾವುದೇ ವಸ್ತುವನ್ನೂ ಖರೀದಿಸದೇ ಅಮೆರಿಕದಲ್ಲಿ ಬದುಕಲು ಸಾಧ್ಯವಿಲ್ಲವೇ? ಎಂಬುದನ್ನು ಪರೀಕ್ಷಿಸಲು ಆಕೆ ಒಂದು ವರ್ಷ ಪ್ರಯೋಗ ಮಾಡುತ್ತಾಳೆ. ಹೊಸ ವರ್ಷದ ಆರಂಭದಲ್ಲಿ ಇದನ್ನೇ ‘ನ್ಯೂ ಇಯರ್ ರೆಸಲ್ಯೂಶನ್’ ಎಂದು ಶಪಥ ಮಾಡುತ್ತಾಳೆ. ಚೀನಾ ಮಾಲು ಬೇಡವೆಂದು, ಅಮೆರಿಕದಲ್ಲೇ ತಯಾರಾದ ಉತ್ಪನ್ನ ಬೇಕೆಂದು ಆಕೆ ಊರೆಲ್ಲ ಹುಡುಕುತ್ತಾಳೆ. ಕೆಲವು ಬಾರಿಯಂತೂ ಆಕೆಗೆ ಚೀನಾ ಮಾಲಿನ ಹೊರತಾಗಿ ಬೇರೆ ಉತ್ಪನ್ನವೇ ಸಿಗುವುದಿಲ್ಲ. ಕೆಲವೊಮ್ಮೆ ಸಿಕ್ಕರೂ ಉತ್ಪನ್ನಕ್ಕಿಂತ ಆಕೆ ಹುಡುಕಾಟಕ್ಕೇ ಹೆಚ್ಚು ವೆಚ್ಚಮಾಡಿರುತ್ತಾಳೆ. ತನ್ನ ಶಪಥಕ್ಕಾಗಿ ಆಕೆ ಒಂದು ವರ್ಷ ಪರದಾಡುತ್ತಾಳೆ. ಆಕೆ ತನ್ನ ಈ ನೈಜ ಅನುಭವ ಕಥನದಲ್ಲಿ ಹೇಳುತ್ತಾಳೆ -‘ಚೀನಾ ಸರಕಿಲ್ಲದೇ ಅಮೆರಿಕದಲ್ಲಿ ಬದುಕಬಹುದು. ಆದರೆ, ಅದು ಅತ್ಯಂತ ಕಷ್ಟದ ಬದುಕು‘ ಅಂತ.

ಚೀನಾ ಬಿಟ್ಟು ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ದಕ್ಷಿಣ ಕೊರಿಯಾ, ಥೈಲ್ಯಾಂಡ್‌ನಂಥ ಏಷ್ಯಾ ದೇಶಗಳಲ್ಲಿ ಹಾಗೂ ಬ್ರೆಝಿಲ್, ನಿಕಾರಾಗುವದಂಥ ಲ್ಯಾಟಿನ್ ಅಮೆರಿಕ ದೇಶಗಳಲ್ಲಿ ತಯಾರಾದ ಸರಕೂ ಅಮೆರಿಕದಲ್ಲಿ ಸಾಕಷ್ಟಿವೆ. ಆದರೆ, ಚೀನಾ ಉತ್ಪನ್ನಗಳೇ ಹೆಚ್ಚು. ಮೇಡ್-ಇನ್-ಅಮೆರಿಕ ಸರಕು ನಿಜಕ್ಕೂ ಅಪರೂಪ.
ಇದಕ್ಕೇನು ಕಾರಣ?
ಅದ್ಯಾಕೆ, ಅಮೆರಿಕದಲ್ಲಿ ಚೀನಾ ಮಾಲು ಇಷ್ಟೊಂದು ತುಂಬಿಹೋಗಿದೆ?
೧. ಒಂದು ಕಾಲದಲ್ಲಿ, ಅಮೆರಿಕದಲ್ಲಿ ಎಷ್ಟು ದುಬಾರಿಯಾದರೂ ಪರವಾಗಿಲ್ಲ, ಉನ್ನತ ಬ್ರಾಂಡಿನ ಸರಕು ಮಾತ್ರ ಬೇಕು ಎನ್ನುವ ಜನರಿದ್ದರು. ಈಗ ಚೀನಾ ಉತ್ಪನ್ನಗಳು ಅಷ್ಟೇನೂ ಉತ್ತಮ ಗುಣಮಟ್ಟದಲ್ಲ ಎನ್ನುವ ಅರಿವಿದ್ದರೂ ಹಣ ಉಳಿತಾಯಕ್ಕೆಂದು ಆ ಮಾಲುಗಳಿಗೇ ಮೊರೆ ಹೋಗಿರುವ ಮಧ್ಯಮವರ್ಗ ಹಾಗೂ ಬಡ ಜನರ ವರ್ಗ ಅಮೆರಿಕದಲ್ಲಿ ಸಾಕಷ್ಟಾಗಿದೆ. ಆದ್ದರಿಂದ ಚೀನಾ ಮಾಲಿಗೆ ಬೇಡಿಕೆ ಹೆಚ್ಚಿದೆ. ಅದರಲ್ಲೂ ಈಗ ಹಣಕಾಸು ಬಿಕ್ಕಟ್ಟು ಸೃಷ್ಟಿಯಾಗಿರುವುದರಿಂದ ದುಬಾರಿ ಬ್ರಾಂಡೆಡ್ ಸರಕಿಗಿಂತ ಅಗ್ಗದ ಚೀನಾ ಮಾಲಿಗೇ ಡಿಮಾಂಡು ಸಹಜ.

೩. ಅಮೆರಿಕದ ವಾಲ್‌ಮಾರ್ಟ್‌ನಂಥ ರಿಟೇಲ್ ದೈತ್ಯ ಕಂಪನಿಗಳಿಗೆ ಸೋವಿ ದರದಲ್ಲಿ ಚೀನಾದಲ್ಲಿ ಸರಕು ಸಿಗಲಾರಂಭಿಸಿತು. ಅಲ್ಲದೇ, ಸ್ವಂತ ಬ್ರಾಂಡ್ ಪದಾರ್ಥಗಳ ಉತ್ಪಾದನೆ ಅಮೆರಿಕಕ್ಕಿಂತ ಚೀನಾದಲ್ಲಿ ಅಗ್ಗವಾಗಿ ಕಂಡಿತು. ಏಕೆಂದರೆ, ಚೀನಾದಲ್ಲಿ ಕೂಲಿ ದರ ಹಾಗೂ ಉತ್ಪಾದನಾ ವೆಚ್ಚ ಕಮ್ಮಿ. ಅಲ್ಲದೇ, ಅಮೆರಿಕದ ಪಶ್ಚಿಮ ಕರಾವಳಿಗೆ ಚೀನಾದಿಂದ ಸರಕು ಸಾಗಣೆ ವೆಚ್ಚವೂ ದುಬಾರಿಯಲ್ಲ. ಈ ಆರ್ಥಿಕ ಕಾರಣದಿಂದ ಅಮೆರಿಕದ ತುಂಬಾ ಚೀನಾ ಚೀನಾ ಚೀನಾ ಮಾಲ್.
೪. ಇನ್ನು ಅಂತಾರಾಷ್ಟ್ರೀಯ ರಾಜನೀತಿಯನ್ನು ತುಸು ಗಮನಿಸಬೇಕು. ಚೀನಾ ಅರ್ಥವ್ಯವಸ್ಥೆ ಅಮೆರಿಕದ ಮೇಲೆ ಅವಲಂಬನೆಯಾದಷ್ಟೂ ಅಮೆರಿಕಕ್ಕೆ ಖುಷಿ! ಏಕೆಂದರೆ, ಚೀನಾ ಮುಂದೊಂದು ದಿನ ಶ್ರೀಮಂತ ಅಮೆರಿಕವನ್ನು ವಿರೋಧಿಸಿ ಬಡ ದೇಶವಾದ ರಷ್ಯಾದ ಪರ ನಿಲ್ಲುವ ಸಾಧ್ಯತೆ ಕಡಿಮೆಯಾಗುತ್ತದೆ. ಹಾಗೊಂದು ವೇಳೆ ಚೀನಾ ಅಮೆರಿಕವನ್ನು ಎದುರು ಹಾಕಿಕೊಂಡರೆ ಚೀನಾ ಬಹುದೊಡ್ಡ ರಫ್ತು ಮಾರುಕಟ್ಟೆಯನ್ನು ಕಳೆದುಕೊಂಡು ಕಂಗಾಲಾಗಬೇಕಾಗುತ್ತದೆ. ಅದರಲ್ಲೂ, ಅಮೆರಿಕ ಮತ್ತು ಅಮೆರಿಕದ ಮಿತ್ರ ರಾಷ್ಟ್ರಗಳು ಚೀನಾ ವಿರುದ್ಧ ಆರ್ಥಿಕ ದಿಗ್ಬಂಧನ ಹಾಕಿದರಂತೂ ಚೀನಾದ ಆರ್ಥಿಕ ವ್ಯವಸ್ಥೆ ತೀವ್ರ ಹದಗೆಡುತ್ತದೆ. ಈ ರೀತಿಯಲ್ಲಿ ಚೀನಾವನ್ನು ಆರ್ಥಿಕವಾಗಿ ನಿಯಂತ್ರಿಸುವುದು ಅಮೆರಿಕದ ಲೆಕ್ಕಾಚಾರ. ಆದ್ದರಿಂದ, ಚೀನಾ ಹೆಚ್ಚು ಹೆಚ್ಚು ಅಮೆರಿಕದ ಮಾರುಕಟ್ಟೆಯನ್ನು ಅವಲಂಬಿಸುವಂತೆ ಅಮೆರಿಕವೇ ಪ್ರಚೋದಿಸುತ್ತಿದೆ.
ಚೀನಾ ವಿರುದ್ಧ ಆಂದೋಲನ :
ಅಮೆರಿಕದಲ್ಲಿ ಚೀನಾ ಮಾಲ್ ಹಾವಳಿ ವಿರುದ್ಧ ಒಂದಷ್ಟು ಆಂದೋಲನಗಳೂ ನಡೆದಿವೆ. ‘ಚೀನಾ ಸಾಮಗ್ರಿ ಕೊಂಡರೆ ಚೀನಾ ಶ್ರೀಮಂತ ಆಗುತ್ತದೆ. ಹಾಗೆ ಶ್ರೀಮಂತವಾಗುವ ಚೀನಾ ಅಮೇರಿಕದತ್ತ ಅಣುಬಾಂಬ್ ತಿರುಗಿಸುತ್ತದೆ. ಆದ್ದರಿಂದ ಚೀನಾ ಸರಕನ್ನು ಕೊಳ್ಳಬೇಡಿ’ ಎಂದು ಕೆಲವು ಸ್ವಯಂ ಸೇವಾ ಸಂಸ್ಥೆಗಳು ಪ್ರಚಾರ ಮಾಡಿದವು. ಆದರೆ, ಆ ಪ್ರಚಾರಕ್ಕೆ ಫಲ ಸಿಕ್ಕಿಲ್ಲ. ಏಕೆಂದರೆ, ಚೀನಾ ಸರಕು ಕೊಳ್ಳದೇ ಅಮೆರಿಕದಲ್ಲಿ ಬದುಕುವುದು ಕಷ್ಟ!
ಅಮೆರಿಕ ಶಾಲೆಯಲ್ಲಿ ಚೀನಿ ಭಾಷೆ ಕಲಿತಾವೆ ಇಂಗ್ಲೀಷ್ ಮಕ್ಕಳು!
ಚೀನೀಯರಿಗೆ ಇಂಗ್ಲೀಷ್ ಬರಲ್ಲ. ಅದಕ್ಕೇ ಐಟಿ ಕ್ಷೇತ್ರದಲ್ಲಿ ಚೀನಾ ಭಾರತಕ್ಕಿಂತ ಹಿಂದುಳಿದಿದೆ. ಚೀನೀ ಮಂದಿ ಇಂಗ್ಲೀಷ್ ಕಲಿಯೋವರೆಗೂ ಉದ್ದಾರ ಆಗೋಲ್ಲ - ಅನ್ನುವವರು ಈಗ ತುಸು ಯೋಚಿಸಬೇಕು.
ಜಾಗತಿಕವಾಗಿ ಚೀನಾ, ಭಾರತಕ್ಕಿಂತ ಎಷ್ಟು ಬಲವಾಗುತ್ತಿದೆ ಅಂದರೆ, ಇಂಗ್ಲೀಷ್ ಮಂದಿಯೇ ಈಗ ಚೀನೀ ಭಾಷೆ ಕಲಿಯಲು ಆರಂಭಿಸಿದ್ದಾರೆ! ಅಮೆರಿಕದಂಥ ಅಮೆರಿಕದ ಶಾಲೆಯಲ್ಲಿ ‘ಮ್ಯಾಂಡರಿನ್’ಕಲಿಸಲಾಗುತ್ತಿದೆ. ಭಾರತದಲ್ಲಿ, ಮಕ್ಕಳು ಇಂಗ್ಲೀಷ್ ಕಲಿಯಬೇಕೆಂದು ಪಾಲಕರು ಹಂಬಲಿಸುತ್ತಾರಷ್ಟೇ? ಅದೇ ರೀತಿ ಅಮೆರಿಕ ಹಾಗೂ ಲ್ಯಾಟಿನ್ ಅಮೆರಿಕದಲ್ಲಿ ಎರಡು ಅಥವಾ ಮೂರನೇ ಭಾಷೆಯಾಗಿ ‘ಮ್ಯಾಂಡರಿನ್’ ಕಲಿಯುವಂತೆ ಪೋಷಕರು ಮಕ್ಕಳನ್ನು ಹುರಿದುಂಬಿಸುತ್ತಿದ್ದಾರೆ.
‘ಈ ಮಕ್ಕಳು ದೊಡ್ಡವರಾಗುವ ಹೊತ್ತಿಗೆ ಈಗ ಫ್ರೆಂಚ್, ಸ್ಪಾನಿಷ್‌ಗೆ ಇರುವಂತೆ ಚೀನೀ ಭಾಷೆಗೂ ಬೇಡಿಕೆ ಇರುತ್ತದೆ’ ಎನ್ನುತ್ತಾರೆ ಅಂತಹ ಒಬ್ಬ ಪಾಲಕ ಮೈಕೆಲ್ ರೊಸೇನ್‌ಬಾಮ್. ನಮ್ಮ ಹಿಂದಿ ಭಾಷೆಯನ್ನು, ಚೀನಿ ಭಾಷೆಯಂತೆ ಜಗತ್ತು ಇನ್ನೂ ಗಂಭೀರವಾಗಿ ಪರಿಗಣಿಸಿಲ್ಲ ಯಾಕೆ? ಸ್ವಲ್ಪ ಯೋಚಿಸಿ.