Tuesday, January 13, 2009

ದಿವಾಳಿ ಜಡ್ಜ್ !


ಭಾಗ - 9

ಅಮೆರಿಕದಲ್ಲಿ ಪೊಲೀಸ್ ಕಮಿಷನರ್ ಅಥವಾ ಕೋರ್ಟುಗಳ ನ್ಯಾಯಾಧೀಶರಾಗಲು ಸಾರ್ವಜನಿಕ ಚುನಾವಣೆಯಲ್ಲಿ ಗೆಲ್ಲಬೇಕು! ಇಂಥ ಪದ್ಧತಿ ಅಮೆರಿಕದಲ್ಲಿ ಮಾತ್ರ ಇದೆ. ಅದಕ್ಕಿಂತ ಅಲ್ಲಿ ‘ದಿವಾಳಿ ಜಡ್ಜ್’ ಇದ್ದಾರೆ. ಗೊತ್ತೇ?


ನ್ನ ಅಜ್ಞಾನವೋ ಅಥವಾ ನಿಮಗೂ ಇದೊಂದು ಹೊಸ ವಿಷಯವೋ ಗೊತ್ತಿಲ್ಲ. ನನಗಂತೂ ಇದು ಸೋಜಿಗವೆನಿಸಿತು.

ಅಮೆರಿಕದ ಜಿಲ್ಲಾ ವರಿಷ್ಠಾಧಿಕಾರಿ ಹುದ್ದೆ ಹಾಗೂ ಕೋರ್ಟುಗಳ ನ್ಯಾಯಾಧೀಶರ ಹುದ್ದೆ ಜಗತ್ತಿನಲ್ಲೇ ವಿಶಿಷ್ಟ. ಏಕೆಂದರೆ, ಈ ಹುದ್ದೆಗಳಿಗೆ ಚುನಾವಣೆ ನಡೆಯುತ್ತದೆ. ನ್ಯಾಯಾಧೀಶರಾಗಲು ಬಯಸುವವರು ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಆಗಲು ಇಚ್ಚಿಸುವವರು ರಾಜಕಾರಣಿಗಳ ರೀತಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಬೇಕು. ಸ್ವಲ್ಪ ಹೆಚ್ಚು ಕಡಿಮೆ ರಾಜಕಾರಣಿಗಳ ರೀತಿಯೇ ಪ್ರಚಾರ ಮಾಡಬೇಕು. ಹಲವಾರು ಮಿಲಿಯನ್ ಡಾಲರ್ ಹಣ ಖರ್ಚು ಮಾಡಬೇಕು. ಹಾಗೂ ತಮ್ಮ ಅಧಿಕಾರಾವಧಿ ಮುಗಿದ ತಕ್ಷಣ ಅಧಿಕಾರ ಬಿಟ್ಟಿಳಿಯಬೇಕು. ಒಂದು ವೇಳೆ ಆಯ್ಕೆಯಾದ ಪೊಲೀಸ್ ವರಿಷ್ಠಾಧಿಕಾರಿ ಅಥವಾ ನ್ಯಾಯಾಧೀಶ ಸರಿಯಾಗಿ ಕೆಲಸ ಮಾಡಲಿಲ್ಲ ಎಂದಾದರೆ ಆತನ್ನು ಜನರು ಮತ್ತೆ ‘ಕಾಲ್ ಬ್ಯಾಕ್’ ಮತದಾನ ಮಾಡಿ ಹುದ್ದೆಯಿಂದ ಕೆಳಗಿಳಿಸಬಹುದು. ಇಂಥದೊಂದು ಪದ್ಧತಿ ಅಮೆರಿಕದಲ್ಲಿ ಮಾತ್ರ ಇದೆ.

ಕಳೆದ ನವೆಂಬರ್ ೪ರಂದು ಅಧ್ಯಕ್ಷೀಯ ಚುನಾವಣೆಯ ಮತದಾನದ ಜೊತೆಯಲ್ಲೇ ಅಮೆರಿಕದ ಅನೇಕ ರಾಜ್ಯಗಳಲ್ಲಿ ಪೊಲೀಸ್ ವರಿಷ್ಠ ಹಾಗೂ ನ್ಯಾಯಾಧೀಶರ ಆಯ್ಕೆಗೂ ಜನ ಓಟು ಹಾಕಿದರು.

ಅಮೆರಿಕದ ಅಧ್ಯಕ್ಷೀಯ ಚುನಾವಣೆ ಎಂದರೆ ಜಗತ್ಪ್ರಸಿದ್ಧ. ಆದರೆ, ಅಲ್ಲಿ ಪ್ರತಿ ವರ್ಷ ನಡೆಯುವ ಇನ್ನಿತರ ಸಹಸ್ರಾರು ಚುನಾವಣೆಗಳ ಬಗ್ಗೆ ಬಹುಜನರಿಗೆ ಗೊತ್ತೇ ಆಗುವುದಿಲ್ಲ. ಅಮೆರಿಕಕ್ಕೆ ಹೋಗಿ ಬಂದ ಅನೇಕರು ವೈಟ್ ಹೌಸ್, ನಯಾಗರಾ ಫಾಲ್ಸು, ಡಿಸ್ನಿ ಲ್ಯಾಂಡು, ಹಾಲಿವುಡ್ಡು, ಲಾಸ್‌ವೇಗಾಸ್ ಅಂತೆಲ್ಲ ಸಾಕಷ್ಟು ಪ್ರವಾಸ ಕಥನ ಬರೆದಿದ್ದಾರೆ. ಆದರೆ, ಅಮೆರಿಕದ ನ್ಯಾಯಾಂಗ ಚುನಾವಣೆ ಅಥವಾ ಷರೀಫ್ ಚುನಾವಣೆ ಕುರಿತ ಬರಹವನ್ನು ನಾನಂತೂ ಓದಿರಲಿಲ್ಲ. ಅದಕ್ಕಾಗಿ, ಪೊಲೀಸ್ ವರಿಷ್ಠ ಹಾಗೂ ನ್ಯಾಯಾಧೀಶರ ಹುದ್ದೆಯ ಚುನಾವಣೆ ನನಗೆ ಸೋಜಿಗ ಎನಿಸಿತು.

ಇದ್ಯಾಕೆ ಹೀಗೆ? ಅಮೆರಿಕದಲ್ಲಿ ಮಾತ್ರ ಈ ವಿಶಿಷ್ಟ ಪದ್ಧತಿ ಯಾಕಿದೆ? ಎಂದು ವಾಷಿಂಗ್‌ಟನ್ ಡಿ.ಸಿ.ಯ ಕ್ಯಾಪಿಟಲ್ ಕಮ್ಯುನಿಕೇಶನ್ ಗ್ರೂಪ್‌ನ ನಿರ್ದೇಶಕರಲ್ಲೊಬ್ಬರಾದ ಅಕ್ರಂ ಎಲಿಯಾಸ್ ಅವರನ್ನು ಕೇಳಿದೆ.

That is the beauty of American Democracy ಎಂದರು ಅವರು.

ಅಮೆರಿಕದ ಜನತಂತ್ರ ಒಂದು ಸಂಪೂರ್ಣ ಪ್ರಜಾಪ್ರಭುತ್ವ ಮಾದರಿ. ಚೆಕ್ ಆಂಡ್ ಬ್ಯಾಲೆನ್ಸ್ ಹಾಗೂ ಎಲ್ಲಾ ಹಂತದಲ್ಲೂ ಪ್ರಜೆಗಳ ಅಭಿಪ್ರಾಯಕ್ಕೆ ಮಹತ್ವ ನೀಡುವುದು ಅಮೆರಿಕ ಪ್ರಜಾಪ್ರಭುತ್ವ ಪದ್ಧತಿಯ ಹೆಗ್ಗುರುತು. ಹಾಗಾಗಿ ಅಮೆರಿಕದಲ್ಲಿ ಜನಮತ ಗಣನೆಗಾಗಿ ನಡೆದಷ್ಟು ಚುನಾವಣೆಗಳು ಜಗತ್ತಿನ ಇನ್ಯಾವ ದೇಶದಲ್ಲೂ ನಡೆಯುವುದಿಲ್ಲ.

ಅಮೆರಿಕದಲ್ಲಿ, ತಮ್ಮ ಬಡಾವಣೆಯ ಮನೆಗಳಿಗೆ ನೀಲಿ ಬಣ್ಣದ ಬದಲು ಹಳದಿ ಬಣ್ಣ ಬಳಿಯೋಣವೇ ಎಂಬ ವಿಷಯದಿಂದ ಹಿಡಿದು ರಾಜ್ಯದ ಸುಪ್ರೀಂ ಕೋರ್ಟಿನ ಮುಖ್ಯನ್ಯಾಯಾಧೀಶರ ಆಯ್ಕೆಯವರೆಗೆ ವಿವಿಧ ವಿಷಯಗಳ ಕುರಿತು ಚುನಾವಣೆ ನಡೆಯುತ್ತದೆ.
ಹಾಗಾದರೆ, ಇರಾಕ್ ಮೇಲೆ ಯುದ್ಧ ಮಾಡಲು ಬುಷ್ ಯಾಕೆ ಜನಾಭಿಪ್ರಾಯ ಕೇಳಲಿಲ್ಲ ಎಂಬ ನನ್ನ ಪ್ರಶ್ನೆಗೆ ಎಲಿಯಾಸ್ ಉತ್ತರ ಒಂದು ದೊಡ್ಡ ನಗು!

ಕೌಂಟಿ ಷರೀಫ್

ನಮ್ಮ ಪೊಲೀಸ್ ಕಮಿಷನರ್ ಅಥವಾ ಎಸ್ಪಿ ಹುದ್ದೆಯ ಅಮೆರಿಕನ್ ಹೆಸರು ‘ಕೌಂಟಿ ಷರೀಫ್’. ಈತ ಆಯಾ ಜಿಲ್ಲೆಯ ಪೊಲೀಸ್ ವಿಭಾಗದ ಚುನಾಯಿತ ಮುಖ್ಯಸ್ಥ. ಈತನ ಅಡಿಯಲ್ಲಿ ಇಡೀ ಪೊಲೀಸ್ ಇಲಾಖೆ ಕೆಲಸ ಮಾಡುತ್ತದೆ. (ಈ ಹುದ್ದೆಗೆ ಸಮಾನಾಂತರವಾಗಿ ನನಗೆ ತಕ್ಷಣದ ಹೋಲಿಕೆ ಕಾಣಿಸಿದ್ದು ಬೆಂಗಳೂರಿನ ಮೇಯರ್ ಹುದ್ದೆ. ಮೇಯರ್ ಕೂಡ ಜನರಿಂದ ಆಯ್ಕೆಯಾದ ಪ್ರತಿನಿಧಿ ತಾನೇ? ಈತನ ಅಡಿಯಲ್ಲಿ ಇಡೀ ಮಹಾನಗರ ಪಾಲಿಕೆ ಕೆಲಸ ಮಾಡುತ್ತದೆ. ಅವಧಿ ಮುಗಿದ ನಂತರ ಆ ಹುದ್ದೆಗೆ ಮತ್ತೆ ಚುನಾವಣೆ ನಡೆಯುತ್ತದೆಯಷ್ಟೇ?)

ಷರೀಫ್‌ಗಳ ಅಧಿಕಾರ ರಾಜ್ಯದಿಂದ ರಾಜ್ಯಕ್ಕೆ, ಕೌಂಟಿಯಿಂದ ಕೌಂಟಿಗೆ ಬದಲಾಗುತ್ತದೆ. ಕೆಲವು ಪ್ರದೇಶಗಳಲ್ಲಿ ಷರೀಫ್‌ಗೆ ಪೂರ್ಣ ಅಧಿಕಾರವಿದ್ದರೆ ಇನ್ನು ಕೆಲವು ಪ್ರದೇಶಗಳಲ್ಲಿ ಷರೀಫ್‌ಗೆ ನಿಗದಿತ ಅಧಿಕಾರ ಮಾತ್ರ ಇದೆ. ಇನ್ನೂ ಕೆಲವೆಡೆ ಷರೀಫ್ ಅಂದರೆ ಭಾರತದ ರಾಷ್ಟ್ರಪತಿಯಂತೆ ಒಂದು ‘ರಬ್ಬರ್ ಸ್ಟಾಂಪ್’ ಮಾತ್ರ.

ನ್ಯಾಯಾಧೀಶರ ಚುನಾವಣೆ

ಷರೀಫ್ ಚುನಾವಣೆಗಿಂತ ನನಗೆ ವಿಚಿತ್ರ ಎನಿಸಿದ್ದು ನ್ಯಾಯಾಂಗ ಚುನಾವಣೆ. ಅಮೆರಿಕದಲ್ಲಿ ಇಡೀ ದೇಶಕ್ಕೆಲ್ಲಾ ಒಂದು ಫೆಡರಲ್ ಸುಪ್ರೀಂ ಕೋರ್ಟ್ ಇದ್ದರೆ, ಪ್ರತಿ ರಾಜ್ಯದಲ್ಲೂ ಒಂದೊಂದು ಸುಪ್ರೀಂ ಕೋರ್ಟ್ ಇದೆ. ರಾಜ್ಯ ಸುಪ್ರೀಂ ಕೋರ್ಟ್ ಸೇರಿದಂತೆ, ಕೆಳ ನ್ಯಾಯಾಲಯಗಳ ನ್ಯಾಯಾಧೀಶರು ಚುನಾವಣೆಯಲ್ಲಿ ಜನರಿಂದಲೇ ಆಯ್ಕೆಯಾಗುತ್ತಾರೆ.

ಈ ಚುನಾವಣೆಯಲ್ಲಿ ನ್ಯಾಯಾಧೀಶರು ತಮಗೇ ಓಟು ನೀಡಿ ಎಂದು ಮತಯಾಚಿಸಬೇಕು. ‘ನನಗೆ ಓಟು ನೀಡಿದರೆ ನಾನು ಉತ್ತಮ ಜಡ್ಜ್‌ಮೆಂಟ್ ನೀಡುತ್ತೇನೆ’ ಎಂದು ಪ್ರಚಾರ ಮಾಡಬೇಕು. ಇದಕ್ಕಾಗಿ ಕೆಲವು ಅಭ್ಯರ್ಥಿಗಳು ಹತ್ತಾರು ಮಿಲಿಯನ್ ಡಾಲರ್ ಹಣ ಖರ್ಚು ಮಾಡುತ್ತಾರೆ. ಅವರ ಅಧಿಕಾರಾವಧಿ ಕೆಲವು ರಾಜ್ಯಗಳಲ್ಲಿ ೧೦ ವರ್ಷ ಇನ್ನು ಕೆಲವು ರಾಜ್ಯಗಳಲ್ಲಿ ೧೫ ವರ್ಷ.

ಅಮೆರಿಕದ ಫೆಡರಲ್ ಕೋರ್ಟಿನ ನ್ಯಾಯಾಧೀಶರು ಮಾತ್ರ ಸರ್ಕಾರದಿಂದ ನೇಮಕಗೊಳ್ಳುತ್ತಾರೆ. ಆದರೆ, ಅವರಿಗೆ ನಿವೃತ್ತಿ ಎಂಬುದೇ ಇಲ್ಲ. ಸಾಯುವವರೆಗೂ ಅವರು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರು! ಇದೂ ಒಂದು ಅಮೆರಿಕ ನ್ಯಾಯಾಂಗ ವ್ಯವಸ್ಥೆಯ ವೈಶಿಷ್ಟ್ಯ.

ಒಂದು ವೇಳೇ, ಇದೇ ವ್ಯವಸ್ಥೆ ಭಾರತದಲ್ಲಿ ಬಂದರೆ ಹೇಗಿರುತ್ತದೆ? -ಎಂದು ಒಂದು ಕ್ಷಣ ಯೋಚಿಸಿದೆ. ನ್ಯಾಯಾಧೀಶರು ಹಾಗೂ ಪೊಲೀಸರ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಮುಂತಾದ ಪಕ್ಷಗಳ ಅಭ್ಯರ್ಥಿಗಳು ಸ್ಪರ್ಧಿಸುತ್ತಾರೆ. ಮುಂದೆ ಪೊಲೀಸ್ ಮುಖ್ಯಸ್ಥರಾಗುವವರು ಹಾಗೂ ನ್ಯಾಯಾಧೀಶರಾಗುವವರು ಸಿಕ್ಕಾಪಟ್ಟೆ ಹಣ, ಹೆಂಡ, ಸೀರೆ, ಪಂಚೆ ಮುಂತಾದವುಗಳನ್ನು ಹಂಚುತ್ತಾರೆ. ಆರಿಸಿ ಬಂದಮೇಲೆ, ಒಂದು ಪಕ್ಷದ ಪೊಲೀಸರು ಇನ್ನೊಂದು ಪಕ್ಷದ ಅನುಯಾಯಿಗಳನ್ನು ಹಿಗ್ಗಾಮುಗ್ಗಾ ಹಿಂಸಿಸಿ ಬಂಧಿಸಿ ಜೈಲಿಗೆ ನೂಕುತ್ತಾರೆ. ಅದೇ ಪಕ್ಷದ ನ್ಯಾಯಾಧೀಶ ಇದ್ದರೆ ಕೋರ್ಟಿನಲ್ಲಿ ಆ ಪ್ರಕರಣಕ್ಕೆ ಜಯವಾಗುತ್ತೆ. ಆದರೆ, ಬೇರೆ ಪಕ್ಷದ ನ್ಯಾಯಾಧೀಶ ಇದ್ದರೆ ಕೇಸ್ ಪುಸ್ ಆಗುತ್ತದೆ! ಓ ಗಾಡ್... ಸದ್ಯ ಭಾರತದಲ್ಲಿ ಇಷ್ಟೊಂದು ಕೆಟ್ಟ ವ್ಯವಸ್ಥೆಯಿಲ್ಲ ಎಂದು ಸಮಾಧಾನ.

ಹಾಗಾದರೆ, ಅಮೆರಿಕದಲ್ಲಿ ಮಾತ್ರ ಯಾಕೆ ಈ ವ್ಯವಸ್ಥೆ ವಿಫಲವಾಗಿಲ್ಲ?

ಏಕೆಂದರೆ, ಅಮೆರಿಕದ ಶೇ.೯೦ರಷ್ಟು ಮತದಾರರು ಪ್ರಜ್ಞಾವಂತ ಮತದಾರರು. ಅವರು ಹಣ, ಹೆಂಡಕ್ಕೆ ಮತ ಚಲಾಯಿಸುವುದಿಲ್ಲ. ಆದ್ದರಿಂದ, ಅಲ್ಲಿ ಭ್ರಷ್ಟಾಚಾರದಿಂದ ಆರಿಸಿಬರುವುದು ಕಷ್ಟ. ಅದಕ್ಕಾಗಿ, ಅಲ್ಲಿ ಷರೀಫ್ ಹಾಗೂ ನ್ಯಾಯಾಂಗ ಚುನಾವಣಾ ವ್ಯವಸ್ಥೆ ಯಶಸ್ವಿಯಾಗುತ್ತಿದೆ.

ದಿವಾಳಿ ಜಡ್ಜ್

ಕೊನೆಯಲ್ಲೊಂದು ಕಿರು ಮಾಹಿತಿ: ಅಮೆರಿಕದ ಜಿಲ್ಲಾ ನ್ಯಾಯಾಲಯಗಳಲ್ಲಿ ‘ದಿವಾಳಿ ನ್ಯಾಯಾಧೀಶ’ - Bankruptcy Judge ಎಂಬ ವಿಚಿತ್ರ ಹುದ್ದೆಯೊಂದಿದೆ. ಈ ನ್ಯಾಯಾಧೀಶರು ಅಮೆರಿಕದ ನ್ಯಾಯಾಲಯ ಹಾಗೂ ಸಂಸತ್ತಿನ ಶಿಫಾರಸುಗಳ ಮೂಲಕ ನೇಮಕೊಳ್ಳುತ್ತಾರೆ. ಅಮೆರಿಕದಲ್ಲಿ ದಿವಾಳಿಯಾಗುವವರ ಪ್ರಕರಣ ಅಧಿಕ. ಅಂಥ ದಿವಾಳಿ ಪ್ರಕರಣಗಳನ್ನು ಪರಿಶೀಲಿಸಿ ಅವರಿಗೆ ದಿವಾಳಿ ಪಟ್ಟ ಕರುಣಿಸುವುದು ಈ ನ್ಯಾಯಾಧೀಶರ ಕೆಲಸ!

ನಾನು ಕಳೆದ ಅಕ್ಟೋಬರ್‌ನಲ್ಲಿ ಅಮೆರಿಕದಲ್ಲಿದ್ದಾಗ ಅಮೆರಿಕದಲ್ಲಿ ಆರ್ಥಿಕ ಹಿಂಜರಿತದ ಪರಿಣಾಮವಾಗಿ ದಿವಾಳಿಯಾಗುವವರ ಸಂಖ್ಯೆ ಹೆಚ್ಚಾಗಿತ್ತು. ಅದಕ್ಕಾಗಿ ಅಮೆರಿಕದ ದಿವಾಳಿ ನ್ಯಾಯಾಧೀಶರಿಗೆಲ್ಲ ಬಿಡುವಿಲ್ಲದಷ್ಟು ಕೆಲಸವಿತ್ತು!

No comments: