Sunday, January 18, 2009

ಇಂಗು ತಿಂದ ಮಾಂಗ್‌ ಹಾಗೂ ಐದು ಅಮೆರಿಕನ್ ತುಣುಕು


ಭಾಗ - 10

೧. ಹಲೋ... ೯೧೧?

What’s the number for 911?
America’s Whackiest 911 Calls.

ಡಿಸ್ನಿ ಲ್ಯಾಂಡ್‌ನಲ್ಲಿ ಮಜ ಉಡಾಯಿಸಿದ ನಂತರ, ಹಾಲಿವುಡ್ ನೋಡಲು ನಾನು ಎನಹ್ಯಾಮ್‌ನಿಂದ ಲಾಸ್ ಏಂಜಲೀಸ್‌ಗೆ ಹೊರಟಿದ್ದೆ. ಆಗ, ಟೂರಿಸ್ಟ್ ಬಸ್ಸಿನಲ್ಲಿ ನನ್ನ ಪಕ್ಕ ಕುಳಿತಿದ್ದವ ಓದುತ್ತಿದ್ದ ಪುಸ್ತಕ ಇದು. ಶೀರ್ಷಿಕೆ ವಿಚಿತ್ರವಾಗಿದೆಯಲ್ಲ... ಎನಿಸಿತು.
೯೧೧, ಅಮೆರಿಕದ ಎಮರ್ಜೆನ್ಸಿ ನಂಬರ್. ಭಾರತದಲ್ಲಿ ಪೊಲೀಸ್ ಸಂಪರ್ಕಿಸಲು, ತುರ್ತು ದೂರವಾಣಿ ಸಂಖ್ಯೆ ೧೦೦ ಹೇಗೋ, ಹಾಗೆ, ಅಮೆರಿಕದಲ್ಲಿ ೯೧೧ ಡಯಲ್ ಮಾಡಬಹುದು. ಜನರು ತುರ್ತು ಸಂದರ್ಭಗಳಲ್ಲಿ ೯೧೧ ಕಾಲ್ ಮಾಡಿದರೆ ಸಾಕು ನೆರವು ಸಿಗುತ್ತದೆ. ಆದರೆ, ಅಲ್ಲಿಗೆ ಬರುವ ಕರೆಗಳು ಒಮ್ಮೊಮ್ಮೆ ಎಷ್ಟು ತಮಾಷೆಯಾಗಿರುತ್ತವೆ ಎಂದರೆ, ಆ ಧ್ವನಿಮುದ್ರಿತ ಕರೆಗಳ ಒಂದು ದೊಡ್ಡ ಜೋಕು ಪುಸ್ತಕವೇ ಪ್ರಕಟವಾಗಿದೆ. ಒಂದು ಪ್ರಸಂಗ ನೋಡಿ:
ಕರೆಗಾರ : ಹಲೋ... ಇದು ೯೧೧?
ಆಪರೇಟರ್ : ಹೌದು. ಹೇಳಿ. ಹೇಗೆ ಸಹಾಯ ಮಾಡಲಿ?
ಕರೆಗಾರ : ನನ್ನ ಹೆಂಡತಿಯನ್ನು ನಾನಾ ರೀತಿಯಲ್ಲಿ ಕತ್ತು ಹಿಚುಕಿ ಸಾಯಿಸಲು ಪ್ರಯತ್ನಿಸುತ್ತಿದ್ದೇನೆ. ದರಿದ್ರದವಳು ಸಾಯುತ್ತಿಲ್ಲ. ಉಸಿರಾಡುತ್ತಿದ್ದಾಳೆ. ಏನು ಮಾಡಲಿ?
ಆಪರೇಟರ್ : ಪಾಪ. ಆಕೆಯನ್ನು ನೀವೇಕೆ ಸಾಯಿಸುತ್ತಿದ್ದೀರಿ?
ಕರೆಗಾರ : ನಂಗೆ ಆಕೆ ಇಷ್ಟವಿಲ್ಲ. ಅದಕ್ಕೆ.
ಆಪರೇಟರ್ : ಸಾಯಿಸುವ ಬದಲು ಆಕೆಗೆ ಡೈವೋರ್ಸ್ ನೀಡಬಹುದಲ್ಲ?
ಕರೆಗಾರ : ಡೈವೋರ್ಸ್ ಕೊಡುವುದು ರಗಳೆಯ ಕೆಲಸ. ಸಾಯಿಸುವುದು ಈಸಿ. ಅದಕ್ಕೆ!

ಇಂಥ ನೂರಾರು ವಿಚಿತ್ರ ಕರೆಗಳನ್ನು ಅಮೆರಿಕದಾದ್ಯಂತ ‘೯೧೧‘ ಆಪರೇಟರುಗಳು ಪ್ರತಿದಿನ ಸಹಿಸಿಕೊಳ್ಳುತ್ತಾರಂತೆ.
ಅಂದ ಹಾಗೆ, ಅಮೆರಿಕದ ಎಮರ್ಜೆನ್ಸಿ ಸಂಖ್ಯೆ ೯೧೧ಕ್ಕೂ ಅಲ್ಲಿನ ಅವಳಿ ಗೋಪುರ ಧ್ವಂಸಗೊಂಡ ಭಯೋತ್ಪಾದನೆಯ ೯-೧೧ಕ್ಕೂ ಏನಾದರೂ ಸಂಬಂಧವಿದೆಯೇ? ಅಂತ ಸರ್ಜ್ ಬ್ಲಡ್ಸ್ ಎಂಬ ಸಾಕ್ಷಚಿತ್ರ ನಿರ್ಮಾಪಕರನ್ನು ಕೇಳಿದೆ. ಈ ಪ್ರಶ್ನೆ ಕೇಳಿ ಆತ ಬೆಚ್ಚಿ ಬಿದ್ದ. ಅರೆ, ಹೌದಲ್ಲ. ನಮ್ಮ ಎಮರ್ಜನ್ಸಿ ನಂಬರ್ ನೈನ್-ಒನ್-ಒನ್ ಹಾಗೂ ಕರಾಳ ದಿನ ನೈನ್-ಇಲೆವನ್ ಒಂದೇ ಆಗಿದೆಯಲ್ಲ! ಇಷ್ಟು ದಿನ ಇದನ್ನು ಗಮನಿಸಿಯೇ ಇರಲಿಲ್ಲ! ಮೈ ಗಾಡ್... ಎಂಥಾ ಕಾಕತಾಳೀಯ ಅಂತ ಅತ ಆರಚಿದ. ಬಹುಶಃ ಲ್ಯಾಡೆನ್ ತನ್ನ ಭಯೋತ್ಪಾದನೆಗೆ ನಮ್ಮ ೯೧೧ ಸಂಖ್ಯೆಯನ್ನೇ ಉದ್ದೇಶಪೂರ್ವಕವಾಗಿ ಮುಹೂರ್ತ ಮಾಡಿಕೊಂಡಿರಬಹುದು ಅಂತ ಆತ ಚಕಿತಗೊಂಡು ಹಲುಬಿದ.

ಲಾಸ್ ವೇಗಾಸ್, ಡಿಸ್ನಿ ಲ್ಯಾಂಡ್, ಲಾಸ್ ಏಂಜಲೀಸ್‌ಗೆ ಬರುವ ಮೊದಲು ನಾನು, ನ್ಯೂಯಾರ್ಕಲ್ಲಿರುವ ೯-೧೧ ದುರ್ಘಟನಾ ಸ್ಥಳ ‘ಗ್ರೌಂಡ್ ಝೀರೋ’ಕ್ಕೆ ಭೇಟಿ ನೀಡಿದ್ದೆ.


ಅವಳಿ ಗೋಪುರಗಳು ಧ್ವಂಸಗೊಂಡ ಸ್ಥಳವೀಗ ಅಕ್ಷರಶಃ ಪ್ರವಾಸಿ ತಾಣವಾಗಿದೆ. ಅಂದು ಭಯೋತ್ಪಾದನೆಗೆ ಸಾಕ್ಷಿಯಾಗಿದ್ದ ವ್ಯಕ್ತಿಗಳು, ಘಟನೆಯಲ್ಲಿ ಪಾರಾದವರು ಹಾಗೂ ಮಡಿದವರ ಕುಟುಂಬದ ಸದಸ್ಯರು ಮುಂತಾದವರನ್ನೊಳಗೊಂಡ ಪ್ರವಾಸಿ ಗೈಡ್‌ಗಳ ತಂಡ ಅಲ್ಲಿದೆ. ಅವರು ಅಮೆರಿಕನ್ ಎಕ್ಸ್‌ಪ್ರೆಸ್ ಬ್ಯಾಂಕಿನ ಕೇಂದ್ರ ಕಚೇರಿಯ ಒಳಭಾಗವನ್ನೂ ಸೇರಿದಂತೆ, ಅವಘಡ ಸಂಭವಿಸಿದ ಪ್ರದೇಶದ ಸುತ್ತ ಪ್ರವಾಸಿಗಳನ್ನು ಕರೆದೊಯ್ದು ವಿವರಣೆ ನೀಡುತ್ತಾರೆ. ಘಟನೆಯ ಅವಶೇಷಗಳು, ಮೃತರ ಸ್ಮಾರಕಗಳು, ರಕ್ಷಣೆಗೆ ಬಳಕೆಯಾದ ಅಗ್ನಿ ಶಾಮಕ ವಾಹನ ಮತ್ತಿತರ ವಸ್ತುಗಳ ಮ್ಯೂಸಿಯಂ ತೋರಿಸುತ್ತಾರೆ.


ಈಗ ಗ್ರೌಂಡ್ ಝೀರೋದಲ್ಲಿ ೫ ಗೋಪುರಗಳನ್ನು ನಿರ್ಮಿಸುವ ಕಾರ್ಯ ಭರದಿಂದ ಸಾಗಿದೆ. ಈಗಿನ ಯೋಜನೆಯಂತೆ, ಮೊದಲು ಅವಳಿ ಗೋಪುರಗಳಿದ್ದ ಎರಡೂ ಅಡಿಪಾಯಗಳನ್ನು ಚೌಕಾಕಾರದ ದೊಡ್ಡ ಕೊಳಗಳನ್ನಾಗಿ ಪರಿವರ್ತಿಸಲಾಗುತ್ತದೆ. ಅಲ್ಲಿ, ನೀರಿನ ಕೃತಕ ಜಲಪಾತವನ್ನು ನಿರ್ಮಿಸಿ, ೯-೧೧ ಘಟನೆಯಲ್ಲಿ ಮೃತ ವ್ಯಕ್ತಿಗಳ ಹೆಸರುಗಳನ್ನು ಶಿಲೆಯಲ್ಲಿ ಕೆತ್ತಲಾಗುತ್ತದೆ. ಅಲ್ಲೊಂದು ಉದ್ಯಾನವೂ ಹುಟ್ಟಿಕೊಳ್ಳಲಿದೆ. ವಿವರಗಳಿಗೆ ನೋಡಿ www.tributewtc.org : www.national911memorial.org

2. ಅಮೆರಿಕದಲ್ಲಿಲ್ಲ ವಾಯ್ಸ್ ಆಫ್ ಅಮೆರಿಕ!

VOA -ಅಂದರೆ, ವಾಯ್ಸ್ ಆಫ್ ಅಮೆರಿಕ. ಹಾಗಂದರೆ, BBC - ಬ್ರಿಟಿಷ್ ಬ್ರಾಡ್ ಕಾಸ್ಟಿಂಗ್ ಕಾರ್ಪೋರೇಶನ್ ಹಾಗೂ
AIR -ಆಲ್ ಇಂಡಿಯಾ ರೇಡಿಯೋ ಥರ ಅಮೆರಿಕದ ಸುಪ್ರಸಿದ್ಧ ರೇಡಿಯೋ... ಅಂತ ನಾನು ಚಿಕ್ಕಂದಿನಿಂದಲೂ ತಿಳಿದಿದ್ದ ಜನರಲ್ ನಾಲೇಜ್. ಆದರೆ, ‘ವಾಯ್ಸ್ ಆಪ್ ಅಮೆರಿಕ’ ಅಮೆರಿಕದಲ್ಲಿ ಎಲ್ಲೂ ಕೇಳಿಸುವುದಿಲ್ಲ. ಬಿತ್ತರಗೊಳ್ಳುವುದಿಲ್ಲ! ಅಂತ ನನಗೆ ಗೊತ್ತಿರಲಿಲ್ಲ. ನನಗಿದು ಗೊತ್ತಾಗಿದ್ದು. ವಾಷಿಂಗ್‌ಟನ್ ಡಿ.ಸಿ.ಯಲ್ಲಿ ವಾಯ್ಸ್ ಆಪ್ ಅಮೆರಿಕಾದ ಕೇಂದ್ರ ಕಚೇರಿಗೆ ಭೇಟಿ ನೀಡಿದಾಗ.


ವೈಟ್ ಹೌಸ್ ಹಾಗೂ ಅಮೆರಿಕ ಸಂಸತ್ತಿನಿಂದ ಕೆಲ ಹೆಜ್ಜೆ ದೂರದಲ್ಲಿ ವಿಶಾಲ ಕಟ್ಟಡದಲ್ಲಿದೆ ‘ವಾಯ್ಸ್ ಆಫ್ ಅಮೆರಿಕ’ ಕೇಂದ್ರ ಕಚೇರಿ. ಇಲ್ಲಿ ನೂರಾರು ಬಾನುಲಿ ಪತ್ರಕರ್ತರು, ತಂತ್ರಜ್ಞರು ಗಡಿಬಿಡಿಯಲ್ಲಿ ಕೆಲಸ ಮಾಡುತ್ತಿರುತ್ತಾರೆ. ಆದರೆ, ಅವರ ರೇಡಿಯೋ ಪ್ರಸಾರ ಮಾತ್ರ ಅಮೆರಿಕದಲ್ಲಿ ಕೇಳಿಸದು. ಇದು ಅಲ್ಲಿನ ಶಾಸನ ವಿಧಿಸಿದ ನಿರ್ಬಂಧ.

ವಾಯ್ಸ್ ಆಫ್ ಅಮೆರಿಕ -ಸರ್ಕಾರದ ಬಾನುಲಿ. ಇದು ಸ್ಥಾಪನೆಯಾದದ್ದೇ, ಹೊರದೇಶಗಳಿಗೆ ಅಮೆರಿಕ ಸರ್ಕಾರದ ಮುಖವಾಣಿಯಾಗಿ ತುತ್ತೂರಿ ಊದುವ ಕೆಲಸಕ್ಕೆ. ಆದ್ದರಿಂದ, ಅಮೆರಿಕದ ಭೂವ್ಯಾಪ್ತಿಯಲ್ಲಿ ಈ ‘ತುತ್ತೂರಿ’ಯನ್ನು ಪ್ರಸಾರ ಮಾಡುವಂತಿಲ್ಲ. ಇದು ವಾಯ್ಸ್-ಆಫ್-ಅಮೆರಿಕಾ ಸ್ಥಾಪನೆಯ ಶಾಸನದಲ್ಲೇ ಸ್ಪಷ್ಟವಾಗಿದೆ.

ವಾಯ್ಸ್ ಆಫ್ ಅಮೆರಿಕ ಕೇಂದ್ರ ಕಚೇರಿ ಅಮೆರಿಕದಲ್ಲಿದ್ದರೂ ಅದರ ಪ್ರಸಾರ ಕೇಂದ್ರಗಳಿರುವುದೆಲ್ಲ ವಿದೇಶಗಳಲ್ಲಿ. ಹಿಂದಿಯೂ ಸೇರಿದಂತೆ ವಿಶ್ವದ ೪೩ ಭಾಷೆಗಳಲ್ಲಿ ವಾಯ್ಸ್ ಆಫ್ ಅಮೆರಿಕ ನಿತ್ಯವೂ ಪ್ರಸಾರವಾಗುತ್ತಿದೆ. ನೀವೆಂದಾದರೂ ಈ ಬಾನುಲಿ ಕೇಳಿದ್ದೀರಾ? ನಾನಂತೂ ಕೇಳಿಲ್ಲ. ಅಮೆರಿಕದ ಜನ ಕೇಳುತ್ತಾರೆ ಅಂದುಕೊಂಡಿದ್ದೆ. ಅವರೂ ಕೇಳುತ್ತಿಲ್ಲವಲ್ಲ!

3. ಗಗನದಲ್ಲಿ ವೃದ್ಧ ಸಖಿಯರು!

ಅದ್ಯಾಕೋ ಗೊತ್ತಿಲ್ಲ. ಚಿಕ್ಕಂದಿನಿಂದಲೂ ನನಗೆ, ಗಗನ ಸಖಿಯರೆಂದರೆ, ಸುಂದರ ಮುಖದ, ಅಂದದ ಮೈಮಾಟದ, ಸವಿ ಮಾತಿನ ಯುವತಿಯರ ಕಲ್ಪನೆ ಮೂಡುತ್ತದೆ. ಆದರೆ, ಕಳೆದ ಕೆಲವು ವರ್ಷಗಳಿಂದ ಇಂಡಿಯನ್ ಏರ್‌ಲೈನ್ಸ್ ಹಾಗೂ ಡೆಕ್ಕನ್ ವಿಮಾನಗಳಲ್ಲಿ ಪ್ರಯಾಣ ಮಾಡಿದ ಮೇಲೆ ಸುಂದರ ಗಗನ ಸಖಿಯರ ನನ್ನ ಕಲ್ಪನೆ ನುಚ್ಚು ನೂರಾಗಿದೆಯೆನ್ನಿ! ಅದರಲ್ಲೂ ಅಮೆರಿಕ ವಿಮಾನಗಳಲ್ಲಿ ಪ್ರಯಾಣಿಸಿ ಬಂದಮೇಲಂತೂ ಗಗನಸಖಿಯರೆಂದರೆ ಯುವತಿಯರು ಎಂಬ ಕಲ್ಪನೆಯೇ ಚಿಂದಿಯಾಯಿತು! ಅಮೆರಿಕದ ವಿಮಾನಗಳಲ್ಲಿ ಇರುವ ಬಹುತೇಕ ಗಗನಸಖಿಯರು ವೃದ್ಧೆಯರು ಅಥವಾ ಮಧ್ಯ ವಯಸ್ಸಿನವರು.
ಯಾಕೆ, ಹೀಗೆ?

ಅಮೆರಿಕದಲ್ಲಿ ಏರ್ ಹೋಸ್ಟೆಸ್ ವೃತ್ತಿಗೆ ಹೆಚ್ಚು ಸಂಬಳ ಸಿಗುತ್ತಿಲ್ಲ. ಅದರ ಬದಲು, ಉತ್ತಮ ಹೊಟೆಲ್‌ಗಳಲ್ಲಿ ವೇಟರ್ ವೃತ್ತಿಗೇ ಹೆಚ್ಚು ವೇತನ ಹಾಗೂ ಟಿಪ್ಸ್ ಸಿಗುತ್ತದೆ. ಆದ್ದರಿಂದ ಸುಂದರ ಯುವತಿಯರು ಆಗಸದ ವೇಟರ್ ಹುದ್ದೆಗಿಂತ ಭೂಮಿಯ ಮೇಲಿನ ಬಾರ್ ಆಂಡ್ ರೆಸ್ಟಾರೆಂಟ್ ಹುದ್ದೆಯನ್ನೇ ಹೆಚ್ಚಾಗಿ ಆರಿಸಿಕೊಂಡಿದ್ದಾರೆ. ಆದ್ದರಿಂದ, ಅಮೆರಿಕದ ವಿಮಾನದಲ್ಲಿ ‘ಕಿಂಗ್‌ಫಿಷರ್ ಚೆಲುವೆಯರು’ ಕಡಿಮೆ.


4. ಬಡವರು ಸಾರ್ ಬಡವರು

ಅಮೆರಿಕ ಎಂದರೆ ಶ್ರೀಮಂತ ರಾಷ್ಟ್ರ. ಅಲ್ಲಿ ಸಿಕ್ಕಾಪಟ್ಟೆ ಹಣ ಗಳಿಸಿ ಶ್ರೀಮಂತರಾಗಲು ಸಾಧ್ಯ ಎಂದು ಕನಸು ಕಾಣುವವರು ಬಹಳಷ್ಟು ಜನ. ಅದಕ್ಕೆ ‘ಅಮೆರಿಕನ್ ಡ್ರೀಮ್ಸ್’ ಎನ್ನೋ ನುಡಿಗಟ್ಟೂ ಇದೆ. ಸಾಲದು ಅನ್ನುವಂತೆ, ಅಮೆರಿಕದ ಚಿತ್ರಣ ಕೊಡುವಾಗ ಯಾರೂ ಅಲ್ಲಿನ ಭಿಕ್ಷುಕರ ಚಿತ್ರ ತೋರಿಸುವುದಿಲ್ಲ. ವಾಸ್ತವ ವೆಂದರೆ, ಅಲ್ಲಿ ಶೇ.೨೬ರಷ್ಟು ಬಡವರಿದ್ದಾರೆ. ಅದರಲ್ಲೂ ಈಗ ಆರ್ಥಿಕ ಹಿಂಜರಿತ. ಹಾಗಾಗಿ, ಕೆಲಸ -ಮನೆ ಕಳೆದುಕೊಂಡ ವರ ಸಂಖ್ಯೆ ಲೆಕ್ಕಕ್ಕೆ ಸಿಗುತ್ತಿಲ್ಲ. ೧೯೩೦ರ ದಶಕದಲ್ಲಿ ಅಮೆರಿಕದಲ್ಲಿ ಇದ್ದಂಥ ಬಡತನ ಈಗಲೂ ಕಾಡುವ ಆತಂಕ ಉಂಟಾಗಿದೆ. ಅಮೆರಿಕದಲ್ಲಿ ಭಾರತದಷ್ಟು ಭಿಕ್ಷಕರು ಹಾಗೂ ಕಡು ಬಡವರಿಲ್ಲ, ನಿಜ. ಆದರೆ, ಸಾಕಷ್ಟು ಭಿಕ್ಷುಕರಿದ್ದಾರೆ. ಸ್ಯಾಂಪಲ್‌ಗೆ ಈ ಚಿತ್ರಗಳನ್ನು ನೋಡಿ.5. ಅಮೆರಿಕಾ ಗಾಂಧಿ

ಅಮೆರಿಕದ ಬಂಡವಾಳಶಾಹಿ ಸಿದ್ಧಾಂತಕ್ಕೂ ಮಹಾತ್ಮಾ ಗಾಂಧಿಯ ‘ಗಾಂಧಿಯನ್’ ಸಿದ್ಧಾಂತಕ್ಕೂ ಹಗಲು -ರಾತ್ರಿಗಿರುವಷ್ಟು ವ್ಯತ್ಯಾಸ. ಆದರೂ, ಮಹಾತ್ಮಾ ಗಾಂಧಿ ಅಮೆರಿಕದಲ್ಲಿ ಫೇಮಸ್. ಎಷ್ಟೆಂದರೆ, ಎನಹ್ಯಾಮ್‌ನ ಒಂದು ರಸ್ತೆಗೆ ಮಹಾತ್ಮಾ ಗಾಂಧಿ ರಸ್ತೆ ಎಂದೇ ಹೆಸರಿಡಲಾಗಿದೆ. ಅಲ್ಲದೇ, ಅಮೆರಿಕದಲ್ಲೂ ಒಂದಷ್ಟು ಗಾಂಧೀಜಿ ಪ್ರತಿಮೆಗಳಿವೆ. ವಾಷಿಂಗ್‌ಟನ್ ಡಿ.ಸಿ.ಯಲ್ಲಿ ಭಾರತೀಯ ರಾಯಭಾರಿ ಕಚೇರಿಯ ಮುಂದೆ ಒಂದು ಗಾಂಧಿ ಪ್ರತಿಮೆ ಹಾಗೂ ಸ್ಯಾನ್‌ಫ್ರಾನ್ಸಿಸ್ಕೋ ಬಂದರಿನಲ್ಲಿ ಒಂದು ಪ್ರತಿಮೆ ನನ್ನ ಕಣ್ಣಿಗೆ ಬಿತ್ತು.

6. ಇಂಗು ತಿಂದ ಮಾಂಗ್‌ರು!

ಭಾರತದಲ್ಲಿ ಅಕ್ರಮ ಬಾಂಗ್ಲಾ ದೇಶೀಯರು, ಟಿಬೇಟಿಯನ್ನರು ಇದ್ದಾರೆ ಎಂಬ ಕೂಗು ಇಂದು ನಿನ್ನೆಯದಲ್ಲ. ಬಾಂಗ್ಲಾ ಯುದ್ಧ ಹಾಗೂ ಟಿಬೆಟ್ ಮೇಲೆ ಚೀನಾ ಆಕ್ರಮಣ ಸಂದರ್ಭದಲ್ಲಿ ಭಾರತ ನಿರಾಶ್ರಿತ ಟಿಬೆಟಿಯನ್ನರು ಹಾಗೂ ಬಾಂಗ್ಲಾ ದೇಶೀಯರಿಗೆ ಆಶ್ರಯ ನೀಡಿತು. ಅದಕ್ಕಾಗಿ ಬಾಂಗ್ಲಾ ಕ್ಯಾಂಪ್ ಹಾಗೂ ಟಿಬೆಟಿಯನ್ನರ ಕ್ಯಾಂಪ್‌ಗಳು ಭಾರತದಲ್ಲಿ ತಲೆ ಎತ್ತಿದವು. ಆದರೆ, ಅಲ್ಲಿ ಈಗಲೂ ಅನೇಕರು ಅಕ್ರಮ ವಲಸಿಗರಾಗೇ ಉಳಿದುಕೊಂಡಿರುವುದು ಸತ್ಯ.

ಜಗತ್ತಿನಲ್ಲೇ ಅತ್ಯಂತ ಬಿಗಿ ಇಮಿಗ್ರೇಶನ್ ವ್ಯವಸ್ಥೆ ಹಾಗೂ ವಿಸಾ ಪದ್ಧತಿಯನ್ನು ಹೊಂದಿರುವ ಅಮೆರಿಕದಲ್ಲೂ ಇಂತಹ ಅಕ್ರಮ ವಲಸಿಗರ ಸಮಸ್ಯೆ ಇದೆ ಎಂದರೆ ನಂಬುತ್ತೀರಾ?

ಒಂದು ಕಡೆ, ಲ್ಯಾಟಿನ್ ಅಮೆರಿಕನ್ ಬಡವರು ಹಾಗೂ ಕರಿಯರು ಅಮೆರಿಕದ ಬಿಗಿ ಭದ್ರತೆಯನ್ನೂ ಭೇದಿಸಿಕೊಂಡು ಸಮುದ್ರ ಹಾಗೂ ಮೆಕ್ಸಿಕೋ ಭೂಭಾಗದ ಮೂಲಕ ಅಮೆರಿಕದ ಒಳಗೆ ನುಸುಳಿ ಅಕ್ರಮ ವಲಸಿಗರಾಗಿ ನೆಲೆಸಿದ್ದರೆ, ಇನ್ನೊಂದೆಡೆ, ಅಮೆರಿಕವೇ ಈ ಹಿಂದೆ ಆಶ್ರಯ ನೀಡಿದ್ದ ಚೀನೀ ಹಾಗೂ ಮಾಂಗ್ ಜನರು ಈಗಲೂ ಅಕ್ರಮ ವಲಸಿಗರಾಗೇ ಉಳಿದುಕೊಂಡಿದ್ದಾರೆ. ಮಿಲ್‌ವಾಕಿಯಲ್ಲಿ ಸಿಕ್ಕ ಮಾಂಗ್ ಸಮುದಾಯದ ಹೋರಾಟಗಾರ ಕೆವಿನ್ ಹರ್ ತಮ್ಮ ಜನರ ತ್ರಿಶಂಕು ಸ್ಥಿತಿಯನ್ನು ಹೇಳಿಕೊಂಡು ಗೋಳಿಟ್ಟ.

ವಿಯೆಟ್ನಾಂ ಯುದ್ಧ ನಡೆದಾಗ ಅಲ್ಲಿನ ಮಾಂಗ್ ಜನಾಂಗ ಅಮೆರಿಕಕ್ಕೆ ನೆರವು ನೀಡಿತು. ಪರಿಣಾಮವಾಗಿ ಸ್ಥಳೀಯರಿಂದ ಮಾಂಗ್ ಜನಾಂಗ ತೀವ್ರ ಹಲ್ಲೆಗೊಳಗಾಯಿತು. ಆಗ, ಅಮೆರಿಕ, ಈ ಮಾಂಗ್ ನಿರಾಶ್ರಿತರನ್ನು ಅಮೆರಿಕಕ್ಕೆ ಕರೆತಂದು ವಸತಿ ಕ್ಯಾಂಪ್ ನಿರ್ಮಿಸಿಕೊಟ್ಟಿತು. ಆದರೆ, ಅವರಿಗೆ, ಪೌರತ್ವ ನೀಡಲೇ ಇಲ್ಲ. ಹಲ ದಶಕಗಳ ಬಳಿಕವೂ ಮಾಂಗ್‌ರು ಅಮೆರಿಕದಲ್ಲಿ ಅಕ್ರಮ ವಲಸಿಗರು ಎಂಬ ಪಟ್ಟ ಹೊತ್ತುಕೊಂಡೇ ಬದುಕುತ್ತಿದ್ದಾರೆ. ಈ ಮಾಂಗ್‌ರು ಇಂದೂ ಅಮೆರಿಕದಲ್ಲಿ ಯಾವುದೇ ಗೌರವಾನ್ವಿತ ಉದ್ಯೋಗಕ್ಕೆ ಸೇರಲು ಸಾಧ್ಯವಾಗುತ್ತಿಲ್ಲ. ಏಕೆಂದರೆ, ಅಮೆರಿಕದಲ್ಲಿ ಸೋಷಿಯಲ್ ಸೆಕ್ಯುರಿಟಿ ನಂಬರ್ ಇಲ್ಲದ ವ್ಯಕ್ತಿಗೆ ಕಾನೂನು ಬದ್ಧ ಉದ್ಯೋಗ ಸಿಗುವುದಿಲ್ಲ. ಹೀಗಾಗಿ, ಅಮೆರಿಕ ನಂಬಿ ಬಂದ ಮಾಂಗರು ಈಗ ಇಂಗು ತಿಂದ ಮಂಗನಂತಾಗಿದ್ದಾರೆ!

(ಇಲ್ಲಿಗೆ ‘ಸ್ಟೇಟ್ ಅಫೇರ್’ ಸರಣಿ ಮುಕ್ತಾಯ)

2 comments:

Harish - ಹರೀಶ said...

ಮಜವಾಗಿವೆ! ಇನ್ನಷ್ಟು ಇಂತಹ ವಿಷಯಗಳನ್ನು ಬರೆಯಿರಿ

ಹಂಸಾನಂದಿ Hamsanandi said...

ಸ್ಯಾನ್ ಫ್ರಾನ್ಸಿಸ್ಕೋ ದಲ್ಲಿ ಗಾಂಧಿ ವೇಷ ಧರಿಸಿ, ಮೂರ್ತಿಯಂತೆ ದಿನವಿಡೀ ನಿಲ್ಲುವ ಕಲೆಗಾರರೂ ಇದ್ದಾರೆ! ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ.