Saturday, February 28, 2009

ಒಂದು ಖುಷಿ ಸುದ್ದಿ. ನನ್ನ ಮಗಳ ಜಿಪಿಎಸ್ ನಿಬಂಧಕ್ಕೆ ಇಸ್ರೋ ಬಹುಮಾನ



ಭಾರತದಲ್ಲಿ ಉಪಗ್ರಹ ಆಧಾರಿತ ಪಥ ನಿರ್ದೇಶನ ವ್ಯವಸ್ಥೆಯ ಅವಕಾಶಗಳು ಕುರಿತು ನಾಲ್ಕನೇ ತರಗತಿಯಲ್ಲಿರುವ ನನ್ನ ಮಗಳು ಕಳೆದ ವಾರ ಇಸ್ರೋ ಕಚೇರಿಗೆ ಹೋಗಿ ನಿಬಂಧವೊಂದವನ್ನು ಬರೆದುಬಂದಿದ್ದಳು. ನಿಬಂಧ ತಯಾರಿಸಲು ಆಕೆಗೆ ನಾನು ನೆರವು ನೀಡಿದ್ದೆ. ಅದನ್ನು ಒಂದೇ ದಿನದಲ್ಲಿ ಕಂಠಪಾಠ ಮಾಡಿಸಲು ನನ್ನಾಕೆ ಕಷ್ಟಪಟ್ಟಿದ್ದಳು. "ನಮ್ಮಗಳ" ಶ್ರಮ ಫಲಿಸಿದೆ. ಸಂತೋಷದ ಸಮಾಚಾರ ಅಂದರೆ, ನನ್ನ ಮಗಳಿಗೆ ಇಸ್ರೋ ಏರ್ಪಡಿಸಿದ್ದ ಸ್ಪರ್ಧೆಯ ಜೂನಿಯರ್ ವಿಭಾಗದಲ್ಲಿ ಮೊದಲ ಸ್ಥಾನ ಸಿಕ್ಕಿಬಿಟ್ಟಿದೆ! ಇಸ್ರೋ ಕೇಂದ್ರ ಕಚೇರಿಯಲ್ಲಿ ನನ್ನ ಪುಟ್ಟ ಮಗಳು ಇಂದು ಬಹುಮಾನ ಪಡೆಯುತ್ತಾಳೆ. ಆದರೆ, ಆ ವೇಳೆಯಲ್ಲಿ ನಾನು ಅವಳ ಜೊತೆ ಇರುವ ಬದಲು ಗೂಗಲ್ ಇಂಡಿಯಾ ಕೇಂದ್ರ ಕಚೇರಿಯಲ್ಲಿ ಅಂತರ್ಜಾಲ ಸಮ್ಮೇಳನದಲ್ಲಿ ಪಾಲ್ಗೊಂಡಿರುತ್ತೇನೆ ಎಂಬುದೊಂದೇ ಬೇಸರದ ಸಂಗತಿ.

ಅಂದಹಾಗೆ, ಆಕೆಯ ನಿಬಂಧ ಹೇಗಿತ್ತು? ಹಾಗೆ ಸುಮ್ಮನೆ ನಿಮ್ಮ ಟೈಂ ಪಾಸಿಗೆ...

ಉಪಗ್ರಹ ಆಧಾರಿತ ಪಥ ನಿರ್ದೇಶನ ವ್ಯವಸ್ಥೆ

ನಾವು ಒಮ್ಮೆ ಹೈದರಾಬಾದಿಗೆ ಹೋಗಿದ್ದೆವು. ಅಲ್ಲಿ ಊರು ನೋಡಲು ನಾವು ಕಾರಿನಲ್ಲಿ ಅಡ್ಡಾಡ್ಡುತ್ತಿದ್ದೆವು. ನನ್ನ ತಂದೆ ಕಾರು ಓಡಿಸುತ್ತಿದ್ದರು.ಆದರೆ,ಅವರಿಗೆ ಅಲ್ಲಿನ ದಾರಿ ಸರಿಯಾಗಿ ಗೊತ್ತಿರಲಿಲ್ಲ.ಆದರೂ, ಅವರು ಸರಿಯಾದ ದಾರಿಯಲ್ಲೇ ಕಾರು ಓಡಿಸುತ್ತಿದ್ದರು. ಹೇಗೆಂದರೆ, ಅವರ ಫೋನಿನಲ್ಲಿ ಊರಿನ ನಕಾಶೆ ಹಾಗೂ ದಾರಿ ತೋರಿಸುವ ವ್ಯವಸ್ಥೆ ಇತ್ತು. ಅದರಲ್ಲಿ, ಯಾವ ರಸ್ತೆಯಲ್ಲಿ ಹೋಗಬೇಕು,ಯಾವ ಕ್ರಾಸಿನಲ್ಲಿ ಕಾರು ತಿರುಗಿಸಬೇಕು, ಎಂದೆಲ್ಲ ತಂದೆಯವರಿಗೆ ಸರಿಯಾಗಿ ತಿಳಿಯುತ್ತಿತ್ತು.

ಆಗ, ನಾನು ತಂದೆಯವರ ಬಳಿ, ಅದು ಏನು ಅಂತ ಕೇಳಿದೆ.

ಅದಕ್ಕೆ ತಂದೆ ಉತ್ತರಿಸಿದರು... ಮರಿ, ಇದು ಜಿಪಿಎಸ್ ಉಪಕರಣ ಅಂತ.

ಹಾಗಂದರೆ ಏನು ಎಂದು ನಾನು ಕೇಳಿದೆ.

ಅದಕ್ಕೆ ಅವರು ಹೇಳಿದರು... ಮರೀ ಇದು, ಉಪಗ್ರಹ ಆಧಾರಿತ ಪಥ ನಿರ್ದೇಶನ ವ್ಯವಸ್ಥೆ. ಉಪಗ್ರಹವನ್ನು ಬಳಸಿಕೊಂಡು ನಾವು ಎಲ್ಲಿದ್ದೇವೆ, ನಾವು ಹೋಗಬೇಕಾದ ದಾರಿ ಯಾವುದು ಎಂದು ತಿಳಿದುಕೊಳ್ಳುವ ತಂತ್ರಜ್ಞಾನ ಎಂದು ಅವರು ವಿವರಿಸಿದರು.

ಅದೇ ಸಮಯದಲ್ಲಿ, ದೂರದ ಅಮೆರಿಕದಲ್ಲಿ ನನ್ನ ಚಿಕ್ಕಮ್ಮ ತಮ್ಮ ಕಂಪ್ಯೂಟರಿನಲ್ಲಿ ನಮ್ಮ ಕಾರು ಎಲ್ಲಿದೆ ತಿಳಿದುಕೊಳ್ಳುತ್ತಿದ್ದರು. ಅವರಿಗೆ ನಮ್ಮ ಕಾರು ಹೈದರಾಬಾದಿನ ಯಾವ ರಸ್ತೆಯಲ್ಲಿ ಚಲಿಸುತ್ತಿದೆ ಎಂದು ನಕಾಶೆಯಲ್ಲಿ ಕಾಣಿಸುತ್ತಿತ್ತು.

ಇದು ಕೇವಲ ದಾರಿ ತೋರಿಸುವ ತಂತ್ರಜ್ಞಾನವಲ್ಲ. ಜಿಪಿಎಸ್ ತಂತ್ರಜ್ಞಾನದಿಂದ ಇನ್ನೂ ಅನೇಕ ಉಪಯೋಗವಿದೆ. ಇಂದು ಪಧ ನಿರ್ದೇಶನ ಉಪಗ್ರಹಗಳಿಂದ ಭೂಮಿಯಲ್ಲಿ ಯಾವುದೇ ಒಂದು ವಸ್ತುವಿನ ನಿಖರವಾದ ಸ್ಥಳ, ದಿಕ್ಕು ಹಾಗೂ ವೇಳೆ ತಿಳಿಯುತ್ತದೆ. ಇದಕ್ಕೆ PNT (Position, Navigation & Timing) ಸೇವೆ ಎಂದು ಹೇಳುತ್ತಾರೆ. ಇವುಗಳನ್ನು ಉಪಯೋಗಿಸಿಕೊಂಡು ವಾಹನಗಳು ಹೈವೇಯಲ್ಲಿ ಎಲ್ಲಿ ಚಲಿಸುತ್ತಿವೆ? ರೈಲು ಯಾವ ವೇಳೆಯಲ್ಲಿ, ಎಲ್ಲಿದೆ? ವಿಮಾನ ಹಾಗೂ ಹಡಗುಗಳು ಎಲ್ಲಿ ಎಷ್ಟು ವೇಗದಲ್ಲಿ ಯಾವ ದಿಕ್ಕಿನಲ್ಲಿ ಚಲಿಸುತ್ತಿವೆ? ಎಂದೆಲ್ಲಾ ತಿಳಿಯುತ್ತದೆ. ಈ ತಂತ್ರಜ್ಞಾನವನ್ನು ಹೈವೇ ಹಾಗೂ ನಗರ ಟ್ರಾಫಿಕ್ ನಿರ್ವಹಣೆ, ವಾಯು ಹಾಗೂ ಜಲ ಸಂಚಾರ ನಿರ್ವಹಣೆ, ಯುದ್ಧ ಗೂಢಚಾರಿಕೆ ಮುಂತಾದ ಕ್ಷೇತ್ರಗಳಲ್ಲಿ ಬಳಸಿಕೊಳ್ಳಬಹುದು ಎಂದು ತಂದೆಯವರು ವಿವರಿಸಿದರು.

ಅಮೆರಿಕದ ಜಿಪಿಎಸ್, ಭಾರತದ ಆಕಾಶ್

ಜಿಪಿಎಸ್ ಎಂದರೆ, ಗ್ಲೋಬಲ್ ಪೊಸಿಷನಿಂಗ್ ಸಿಸ್ಟಂ. ಇದು ಅಮೆರಿಕದ ರಕ್ಷಣಾ ಇಲಾಖೆ 1970ರಲ್ಲಿ ಅಭಿವೃದ್ಧಿ ಪಡಿಸಿದ ತಂತ್ರಜ್ಞಾನ. ಗಗನದಲ್ಲಿ 28 ಉಪಗ್ರಹಗಳ ಒಂದು ಜಾಲ ಸ್ಥಾಪಿಸಲಾಗಿದೆ. ಈ ಮೂಲಕ ಭೂಮಿಯ ಪ್ರತಿಯೊಂದೂ ವಸ್ತುವಿನ ಚಲನ-ವಲನ ತಿಳಿದುಕೊಳ್ಳಲು ಅಮೆರಿಕಕ್ಕೆ ಸಾಧ್ಯವಾಗಿದೆ. ಈ ತಂತ್ರಜ್ಞಾನವನ್ನು ಮಿಲಿಟರಿ ಬಳಕೆಗೆ ಮಾತ್ರವಲ್ಲ ಸಾಮಾನ್ಯ ನಾಗರಿಕರ ಬಳಕೆಗೂ ಅಮೆರಿಕ ನೀಡುತ್ತದೆ. ಆದ್ದರಿಂದ, ಈ ಜಿಪಿಎಸ್ ಉಪಗ್ರಹ ಸೇವೆಯನ್ನು ಜಗತ್ತಿನ ಅನೇಕ ದೇಶಗಳು ಬಳಸಿಕೊಳ್ಳುತ್ತಿವೆ. ಈಗ ಬೇರೆ ಬೇರೆ ದೇಶಗಳು ತಮ್ಮದೇ ಉಪಗ್ರಹ ಆಧಾರಿತ ಪಥ ನಿರ್ದೇಶನ ಉಪಗ್ರಹ ಜಾಲಗಳನ್ನು ರೂಪಿಸುತ್ತಿವೆ.

ಸದ್ಯ, ಭಾರತ ಅಮೇರಿಕದ ಜಿಪಿಎಸ್ ವ್ಯವಸ್ಥೆಯನ್ನೇ ಬಳಸಿಕೊಳ್ಳುತ್ತಿದೆ. ಆದರೆ, ಇನ್ನು ಕೆಲವೇ ವರ್ಷಗಳಲ್ಲಿ ಭಾರತ ಕೂಡ ತನ್ನದೇ ಉಪಗ್ರಹ ಆಧಾರಿತ ಪಥ ನಿರ್ದೇಶನ ವ್ಯವಸ್ಥೆಯನ್ನು ಸ್ಥಾಪಿಸಲು ಉದ್ದೇಸಿಸಿದೆ. 7 ಉಪಗ್ರಹಗಳ ಈ IRNSS ವ್ಯವಸ್ಥೆಗೆ 1600 ಕೋಟಿ ರುಪಾಯಿ ವೆಚ್ಚವಾಗಲಿದೆ. ಇನ್ನು 3-4 ವರ್ಷದಲ್ಲಿ ಈ ನಮ್ಮ ಸ್ವತಂತ್ರ ವ್ಯವಸ್ಥೆ ಜಾರಿಗೆ ಬರಬಹುದು. ಭಾರತದ "ಇಸ್ರೋ" ಈ ಯೋಜನೆಯನ್ನು ರೂಪಿಸಿದೆ. ಈಗಾಗಲೇ, ಗಗನ್ ಎಂಬ ಉಪಗ್ರಹ ಆಧಾರಿತ ಪಥ ನಿರ್ದೇಶನ ವ್ಯವಸ್ಥೆಯನ್ನು ನಾಗರಿಕ ವಿಮಾನ ಸಂಚಾರ ನಿರ್ವಹಣೆಗಾಗಿ ಇಸ್ರೋ ಸ್ಥಾಪಿಸಿದೆ.

ಈ ಆಧುನಿಕ ವ್ಯವಸ್ಥೆ ಭಾರತದಲ್ಲಿ ಸಂಪೂರ್ಣವಾಗಿ ಜಾರಿಯಾದರೆ, ನಗರದ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆಯನ್ನು ಸುಧಾರಿಸಿ ಈಗಿನಂತೆ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಆಗುವುದನ್ನು ತಡೆಯಬಹುದು. ಅಪಘಾತ ಆದಲ್ಲಿಗೆ ತಕ್ಷಣ ರಕ್ಷಣಾ ದಳವನ್ನು ಕಳಿಸಬಹುದು. ಶಾಲೆಯಲ್ಲಿರುವ ಕಂಟ್ರೋಲ್ ರೂಮಿನಲ್ಲಿ ನಮ್ಮ ಸ್ಕೂಲ್ ಬಸ್ ಎಲ್ಲಿದೆ ಎಂದು ತಿಳಿದುಕೊಳ್ಳಬಹುದು. ಆಕಾಶದಲ್ಲಿ ವಿಮಾನಗಳು ಹಾಗೂ ರೇಲ್ವೆ ಹಳಿಯ ಮೇಲೆ ರೈಲುಗಳು ಡಿಕ್ಕಿ ಹೊಡೆಯುವುದನ್ನು ತಪ್ಪಿಸಬಹುದು. ಮೀನುಗಾರರು ಸಮುದ್ರದಲ್ಲಿ ಕಳೆದುಹೋಗದಂತೆ ಮಾಡಬಹುದು. ಭಾರತದ ಗಡಿ ಕಾಯಲು ಹಾಗೂ ಸೈನಿಕರ ಚಲನ ವಲನ ನಿರ್ವಹಣೆಗೆ ಈ ತಂತ್ರಜ್ಞಾನ ಬಹು ಉಪಯುಕ್ತವಾಗಲಿದೆ. ಎಲ್ಲೋ ಕಾಡಿನ ನಡುವೆ ಇರುವ ವಿದ್ಯುತ್ ಅಥವಾ ಜಾಲ ಸರಿಯಾಗಿದೆಯೇ? ಅಥವಾ ಎಲ್ಲಿ ತುಂಡಾಗಿದೆ? ಎಂದು ತಿಳಿದುಕೊಳ್ಳಲು ಬಳಸಿಕೊಳ್ಳಬಹುದು.

ಆದ್ದರಿಂದ, ಭಾರತದಲ್ಲಿ ಈ ಉಪಗ್ರಹ ಆಧಾರಿತ ಪಥ ನಿರ್ದೇಶನ ವ್ಯವಸ್ಥೆಗೆ ಅಪಾರ ಅವಕಾಶವಿದೆ ಎಂದು ನನಗೆ ಅರಿವಾಯಿತು.

3 comments:

ಬಾನಾಡಿ said...

ಮಗಳಿಗೆ ನಿಬಂಧ ಬರೆಯಲು ನೀವು ಕೇವಲ್ ನೆರವು ನೀಡಿದಲ್ಲ ಬದಲು ನೀವೇ ನಿಬಂಧ ಬರೆದಂತಿದೆ. ಒಂದು ವೇಳೆ ಅವಳೇ ಬರೆದಿದ್ದರೆ ನಾಲ್ಕನೆ ಕ್ಲಾಸಿನ ಅವಳಿಗೆ ದೊರೆತ ಬಹುಮಾನ ಅವಳನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯಬಹುದು.

Ravi Hegde said...

ಹ್ಹ ಹ್ಹ ಹ್ಹ... ಹೌದು ಬಾನಾಡಿಯವರೇ,
ಅಕ್ಷರಶಃ ಹೇಳುವುದಾದರೆ, ನೀವಂದಿದ್ದು ನಿಜ.. ಮಾಹಿತಿಯನ್ನು ಹುಡುಕಿ ಕೊಟ್ಟು, ಪೂರ್ಣ ಅಲ್ಲದಿದ್ದರೂ ನಿಬಂಧದ ಬಹುತೇಕ ಭಾಗವನ್ನು ಅವಳಿಗಾಗಿ ಬರೆದುಕೊಟ್ಟಿದ್ದು ನಾನೇ. ಅದನ್ನು ಅವಳು ಅರ್ಥ ಮಾಡಿಕೊಂಡು 'ಅವಳ ಭಾಷೆಗೆ' ಒಂದಷ್ಟು ಸರಳಗೊಳಿಸಿಕೊಂಡು ಕಂಠಪಾಠ ಮಾಡಿಯೇ ಬರೆದು ಬಂದಳು. ಇದು ದೊಡ್ಡ ಸಾಧನೆ ಖಂಡಿತ ಅಲ್ಲವೇ ಅಲ್ಲ. ಆದರೂ, ಇಂಗ್ಲೀಷ್ ಮೀಡಿಯಮ್ಮಿನ ಹುಡುಗಿ, ವಿಷಯವನ್ನು ಅರ್ಥ ಮಾಡಿಕೊಂಡು, ಒಂದೇ ದಿನದಲ್ಲಿ ತಯಾರಾಗಿ, ಹಲವಾರು ನೂರು ಸ್ಪರ್ಧಿಗಳ ಜೊತೆಗೆ ನಿಬಂಧ ಬರೆದು, ಗೆದ್ದು ಬಂದಳಲ್ಲ ಅಂತ ನಾನು ನನ್ನಾಕೆಗೆ ಅದೇನೋ ಸಂತೋಷ ಅಷ್ಟೇ. ಈ ವಯಸ್ಸಿಗೆ ನಿಜಕ್ಕೂ ಚೆನ್ನಾಗಿ ಬರೆಯುವ ಅನೇಕ ಮಕ್ಕಳಿದ್ದಾರೆ. ಆದರೆ, ಆಕೆಗೆ ಭಾಷಣ, ಬರವಣಿಗೆಯಲ್ಲಿ ಸಹಜವಾದ ಆಸಕ್ತಿಯಿದೆ ಅನ್ನೋದು ನಿಜ. ಇಂಗ್ಲೀಷಿನಲ್ಲಿ ಕ್ರಿಯೇಟಿವ್ ಕಥೆ ಅಂಥ ತನಗೆ ತೋಚಿದ್ದನ್ನ ಏನೇನೋ ಬರೀತಾಳೆ. ನ್ಯಾಶನಲ್ ಮ್ಯಾಥ್ಯ್ ಓಲಂಪಿಯಾಡಿನಲ್ಲಿ ರಾಜ್ಯಕ್ಕೆ ಹದಿನೆಂಟನೆಯದೋ ಇಪ್ಪತ್ತನೆಯದೋ ಸ್ಥಾನ ಪಡೆದಿದ್ದಾಳೆ. ವಿಜ್ಞಾನದಲ್ಲಿ ಆಸಕ್ತಿಯಿದೆ. ಗಗನಾಟ್ ಆಗುವ ಬಾಲ-ಕನಸಿದೆ. ಅಂದಹಾಗೆ, ಸ್ಕೂಲು, ಇಂಟರ್ ಸ್ಕೂಲು ಅಂತ ಅದ್ಯಾವ್ಯಾವುದೋ ಸ್ಕೂಲಿಗೆ ಹೋಗಿ, ಅನೇನೋ ಸ್ಪರ್ಧೆಯಲ್ಲಿ ಈವರೆಗೆ ನಾಲ್ಕಾರು ಡಜನ್ ಬಹುಮಾನ ಪಡೆದಿದ್ದಾಳೆ. ಒಂದು ಫೋಟೋವನ್ನು ಬ್ಲಾಗಿಗೆ ಪೋಸ್ಟ್ ಮಾಡಿದ್ದೇನೆ. ಸುಮ್ಮನೇ, ಅಪ್ಪನಾಗಿರುವ ಸಂತೋಷಕ್ಕೆ :)

ಸಂದೀಪ್ ಕಾಮತ್ said...

ರವಿಯವರೇ ,
ಈಗ ಪ್ರಶಸ್ತಿ ಸಿಕ್ಕಿದ ಖುಷಿಯಿಂದ ಮುಂದೆ ಇನ್ನೂ ಒಳ್ಳೊಳ್ಳೆ ಸಾಧನೆ ಮಾಡುವಂತಾಗಲಿ ಜೀವನಾ.

ಪೋಷಕರು ಮಕ್ಕಳಿಗೆ ಸಹಾಯ ಮಾಡೋದು ಹೊಸತೇನಲ್ಲ.ಉರು ಹೊಡೆದು ಹೇಳೋದು ಕಷ್ಟ ಈ ನಿಬಂಧ ಹಾಗಾಗು ಹುಡುಗಿ ಅಭಿನಂಧನೀಯಳು.
ಪಾಪ ಮಗು ಇಂಗ್ಲೀಶ್ ನಲ್ಲಿ ಖುಷಿಯಾಗಿದೆ ಅಂತ ಕಾಣ್ಸುತ್ತೆ.ಇರ್ಲಿ ಬಿಡಿ ಕ್ರಿಯೇಟಿವಿಟಿ ಇದ್ರೆ ಸಾಕು ಯಾವ ಭಾಷೆಯಾದರೇನು ಅಲ್ವ?ನಂಗೆ ಇದನ್ನೆ ಇಂಗ್ಲೀಶ್ ನಲ್ಲಿ ಬರೆ ಅಂದ್ರೆ ಕೈ ಕಾಲು ನಡುಗುತ್ತೆ!