ಆಕೆ ದುಬಾರಿಯಾದರೆ ಮಲ್ಲಿಕಾ ಶೆರಾವತ್ ಆದರೂ ಓಕೆ:
ಕನ್ನಡದ ಕಣ್ವ ಬಿಎಂಶ್ರೀಗೆ ಯೆಂಡ್ಗುಡ್ಕ್ ರತ್ನನ ಈ-ಮೇಲ್
ಹೋರಾಟ ಮಾಡಿ, ಜನರ ಮೇಲೆ ಒತ್ತಡ ಹೇರಿ ಕನ್ನಡ ಭಾಷೆಯನ್ನ ಉದ್ಧಾರ ಮಾಡೋಕೆ ಆಗಲ್ಲ ಸಾರ್. ಕನ್ನಡ ಉದ್ಧಾರ ಆಗಬೇಕೂಂದ್ರೆ ಯುವ ಜನಾಂಗಾನ ಪ್ರೀತಿಯಿಂದ ಕನ್ನಡದತ್ತ ಆಕರ್ಷಿಸಬೇಕು... ಸಾರ್. ಅದಕ್ಕೆ ಸುಂದರ ಬ್ರಾಂಡ್ ಅಂಬಾಸಡರ್ ಇದ್ದರೆ ಕೆಲಸ ಸಲೀಸು. ಕನ್ನಡ ರಾಜ್ಯೋತ್ಸವದ ದಿನಾನೇ ಹುಟ್ಟಿರುವ ಐಶ್ವರ್ಯ ರೈಗಿಂತ ಬೇರೆ ‘ಕನ್ನಡ ಕುವರಿ’ ಎಲ್ಲಿ ಸಿಗ್ತಾಳೆ... ಸಾರ್!
ಕನ್ನಡದ ಕಣ್ವರಾದ ಶ್ರೀ ಬಿಎಂಶ್ರೀ ಸಾರ್‌ರವರೇ,
ನಮಸ್ಕಾರ ಸಾರ್... ನಾನು ರತ್ನ. ಯಂಡ್ಗುಡ್ಕ್ ರತ್ನ.
ಜಿ. ಪಿ. ರಾಜರತ್ನಂ ಅವರ ಕವನಪುತ್ರ ಸಾರ್. ಗೊತ್ತಾಗಲಿಲ್ವಾ ಸಾರ್...? ಬ್ರಮ್ಮಾ ನಿಂಗೆ ಜೋಡಿಸ್ತೀನಿ ಯೆಂಡಾ ಮುಟ್ಟಿದ ಕೈನಾ ಅನ್ನೋ ಫೇಮಸ್ ಸಾಂಗು ನಂದೇ ಸಾರ್. ನಾನೊಬ್ಬ ಕನ್ನಡದ ’ಉಟ್ಟು ಓರಾಟಗಾರ’ ಸಾರ್... ನಾನು ನನ್ ಫೇಮಸ್ ಸಾಂಗಲ್ಲಿ ಹೇಳ್ದಂಗೆ ಆ ಬ್ರಮ್ಮನೇ ಬಂದು ಕನ್ನಡ ಬಿಟ್ಟಾಕು ಅಂತ ಹೇಳದ್ರೂನೂ, ನನ್ ನಾಲ್ಗೆ ಸೀಳಾಕ್‌ದ್ರೂನೂ ನಾನು ಕನ್ನಡ ಮಾತಾಡೋದು ಮಾತ್ರ ಬಿಡೋದಿಲ್ಲ ಸಾರ್... ಬಿಡೋದಿಲ್ಲ.
ನಾಳೆ ಕನ್ನಡ ರಾಜ್ಯೋತ್ಸವ ಸಾರ್. ಈ ಹಿನ್ನೆಲೆಯಲ್ಲೇ ನಿಮಗೆ ನಾನು ಈ ಮೇಲ್ ಬರೀತಿದ್ದೇನೆ ಸಾರ್. ಈಗಿನ ಗ್ಲೋಬಲೈಸೇಶನ್ ಅರ್ಥಾತ್ ಜಾಗತೀಕರಣ ಯುಗದಲ್ಲಿ ಕನ್ನಡ ಉದ್ಧಾರಕ್ಕೆ ಸಾಂಪ್ರದಾಯಿಕ ವಿಧಾನ ನಡೆಯೋದಿಲ್ಲ. ಅದಕ್ಕೆ ಸಮಕಾಲೀನ ಗಿಮಿಕ್ಕೇ ಬೇಕು ಅನ್ನೋ ಪ್ರಾಕ್ಟಿಕಲ್ ಸಲಹೆ ನೀಡೋದು ಈ ಪತ್ರದ ಉದ್ದೇಶ ಸಾರ್.
ಸಾರ್... ಕನ್ನಡದ ಮಕ್ಕಳೆಲ್ಲ ಕನ್ನಡ ಬಿಟ್ಟು ಇಂಗ್ಲೀಷಿಗೆ ಅಂಟಿಕೊಂಡಿದ್ದಾರೆ ಅನ್ನೋದು ನಿಜ ಸಾರ್. ಈ ಪರಿಪಾಠ ಹೆಚ್ಚುತ್ತಿದೆ ಅನ್ನೋದೂ ನಿಜ ಸಾರ್. ಇದೆಲ್ಲಾ ಗ್ಲೋಬಲ್ ಫಿನೋಮಿನಾ ಸಾರ್ ಗ್ಲೋಬಲ್ ಫಿನೋಮಿನಾ.
ಹೀಗಾಗೋಕೆ ಕಾರಣ ಯುವಜನಾಂಗ ಸಾರ್. ಇವರೆಲ್ಲಾ ಒಂದೋ ಇಂಗ್ಲೀಷ್ ಲಾಂಗ್ವೇಜ್ ಹಿಂದೆ ಬಿದ್ದಿದ್ದಾರೆ ಇಲ್ಲಾ ಕಂಪ್ಯೂಟರ್ ಲಾಂಗ್ವೇಜ್ ಹಿಂದೆ ಬಿದ್ದಿದ್ದಾರೆ ಸಾರ್. ಅವರಿಗೆ ಇಂಗ್ಲೀಷು ಮತ್ತು ಕಂಪ್ಯೂಟರು ಎರಡೂ ಫ್ಯಾಷನ್ನು ಸಾರ್. ಕನ್ನಡ ಓಲ್ಡ್ ಫ್ಯಾಷನ್ನು ಸಾರ್. ಅದಕ್ಕೇ ಕನ್ನಡ ಅವಸಾನ ಆಗ್ತಿದೆ ಸಾರ್. ಕನ್ನಡ ಹೊಸ ಫ್ಯಾಷನ್ ಆದ್ರೆ ಮಾತ್ರ ಉದ್ಧಾರವಾಗುತ್ತೆ .... ಇದೇ ಈ ಶತಮಾನದ ಫಂಡಾ ಸಾರ್.
ಈಗ ಕನ್ನಡ ಉದ್ಧಾರ ಆಗಬೇಕೂಂದ್ರೆ ಈ ಯುವ ಜನಾಂಗಾನ ಕನ್ನಡದತ್ತ ಆಕರ್ಷಿಸಬೇಕು ಸಾರ್. ಯಾಕೆಂದರೆ ಇಂದಿನ ಯುವಕರೇ ಮುಂದಿನ ಪ್ರಜೆಗಳು ಸಾರ್. ಅಂದರೆ, ಅವರು ಇವತ್ತು ಯಾವ ಭಾಷೆಯನ್ನ ಕಲೀತಾರೋ ಮುಂದೆ ಆ ಭಾಷೆ ಬದುಕುತ್ತೆ. ಅವರು ಇವತ್ತು ಯಾವ ಭಾಷೆಯನ್ನ ಮರೀತಾರೋ ಮುಂದೆ ಆ ಭಾಷೆ ವಿನಾಶ ಆಗುತ್ತೆ ಸಾರ್. ಆದ್ದರಿಂದ ಕನ್ನಡ ಭಾಷೆ ಉಳೀಬೇಕು ಅಂದ್ರೆ ಮೊದಲು ಈ ಯುವ ಜನಾಂಗಾನ ಆಕರ್ಷಿಸಬೇಕು ಸಾರ್.
ಈಗಿನ ಕನ್ನಡ ಹೋರಾಟಗಾರರಿಗೆ ಕಷ್ಟ ಆಗ್ತಿರೋದು ಇದೇ ಸಾರ್. ಪಾಟೀಲ ಪುಟ್ಟಪ್ಪ, ಚಿದಾನಂದಮೂರ್ತಿ, ಚಂಪಾ, ವಾಟಾಳ್‌ನಾಗರಾಜ್ ಮುಂತಾದ ಕಟ್ಟಾಳುಗಳೆಲ್ಲ ನಿಜಕ್ಕೂ ಬಹಳ ಪ್ರಯತ್ನ ಪಡ್ತಾ ಇದ್ದಾರೆ ಸಾರ್. ಆದರೂ ಕನ್ನಡದತ್ತ ಯುವಕರು ಆಕರ್ಷಿತರಾಗ್ತಾ ಇಲ್ಲ ಸಾರ್.
ಸಾರ್... ನಿಜ ಹೇಳಿ ಸಾರ್... ಈ ಯುವಜನಾಂಗ ಪಾಟೀಲ ಪುಟ್ಟಪ್ಪ, ಚಿದಾನಂದ ಮೂರ್ತಿಯವರನ್ನೆಲ್ಲ ನೋಡಿ ಆಕರ್ಷಿತರಾಗೋಕೆ ಸಾಧ್ಯಾನಾ ಸಾರ್? ವಾಟಾಳ್ ನಾಗರಾಜ್ ಚಂದಾನೋ ಐಶ್ವರ್ಯ ರೈ ಚಂದಾನೋ ನೀವೇ ಹೇಳಿ ಸಾರ್!.. ಈ ರಹಸ್ಯಾನ ನೀಮ ಅರ್ಥ ಮಾಡಿಕೋಬೇಕು ಸಾರ್. ಅರ್ಥ ಮಾಡಿಕೊಂಡರೆ ಕನ್ನಡ ಅರ್ಧ ಉದ್ಧಾರ ಆದ ಹಾಗೇ ಸಾರ್.
ಅದಕ್ಕೇ ನನ್ನ ಸಲಹೆ ಏನೂಂದ್ರೆ... ಈ ಯುವಜನರನ್ನ ಆಕರ್ಷಿಸೋಕೆ ಕನ್ನಡಕ್ಕೊಬ್ಬಳು ಅತಿ ಸುಂದರ ಬ್ರಾಂಡ್ ಅಂಬಾಸಡರ್ ಬೇಕು ಸಾರ್. ಬ್ರಾಂಡ್ ಅಂಬಾಸಡರ್ ಅಂದ್ರೆ ಪ್ರಚಾರ ರಾಯಭಾರಿ ಅಂತ ಮಾರ್ಕೆಟಿಂಗ್ ಭಾಷೆಯಲ್ಲಿ ಅರ್ಥ ಸಾರ್.
ಸಾರ್... ಹಮಾಮ್ ಸೋಪಿನಿಂದ ಹಿಡಿದು ಗಾಡ್ರೆಜ್ ಹೇರ್ ಕಲರ್‌ವರೆಗೆ, ಮಹಿಳೆಯರ ಹೇರ್ ರಿಮೂವಲ್ ಕ್ರೀಮ್‌ನಿಂದ ಹಿಡಿದು ಪುರುಷರ ಷೇವಿಂಗ್ ಬ್ಲೇಡ್‌ವರೆಗೆ, ಮಕ್ಕಳ ಹಾರ್ಲಿಕ್ಸ್‌ನಿಂದ ಹಿಡಿದು ದೊಡ್ಡವರ ಆಲ್ಕೋಹಾಲ್‌ವರೆಗೆ ತಾರೆಯರೇ ಬ್ರಾಂಡ್ ಅಂಬಾಸಡರ್ ಅನ್ನೋದನ್ನ ಗಮನಿಸಿ ಸಾರ್. ಸಾರ್ ಯಾರನ್ನು ಬೇಕಾದ್ರೂ ಕೇಳಿ ಸಾರ್... ಸಿನಿಮಾ ತಾರೆಯರ ಸೌಂದರ್ಯದ ಗುಟ್ಟು ಲಕ್ಸ್ ಸೋಪು ಹೇಗೋ ಲಕ್ಸ್ ಸೋಪಿನ ಯಶಸ್ಸಿನ ಗುಟ್ಟೂ ಸಿನಿಮಾ ತಾರೆಯರು ಅಂತ ಹೇಳ್ತಾರೆ ಸಾರ್!
ಸಾರ್... ನಮಗೆ ಬೇಕಾದ ಬ್ರಾಂಡ್ ಅಂಬಾಸಡರ್ ಹೇಗಿರಬೇಕು ಅಂದರೆ, ಐಶ್ವರ್ಯ ರೈ ಥರ ಇರಬೇಕು ಸಾರ್. ಇಂಗ್ಲೀಷ್, ಹಿಂದಿ, ತೆಲಗು, ತಮಿಳು, ಮಲೆಯಾಳಂ... ಹೀಗೆ ಯಾಮದೇ ಭಾಷೆ ಮಾತಾಡುವ ಬಾಲಕ ಬಾಲಕಿಯರಿಗೂ, ಯುವಕ ಯುವತಿಯರಿಗೂ, ಪಾಲಕ ಪಾಲಕಿಯರಿಗೂ, ಮುದುಕ ಮುದುಕಿಯರಿಗೂ ಆಕೆ ಗೊತ್ತು ಸಾರ್. ಎಲ್ಲರೂ ಆಕೆ ಥರ ಕಾಣೋಕೆ ಬಯಸ್ತಾರೆ ಸಾರ್. ಅದರಲ್ಲೂ ಕಾಲೇಜ್ ಹುಡುಗೀರಂತೂ ಐಶ್ವರ್ಯ ಥರಾನೇ ಆಡ್ತಾರೆ ಸಾರ್. ಐಶ್ವರ್ಯ ಪ್ಯಾಂಟ್ ಹಾಕ್ಕೊಂಡರೆ ಇವರೂ ಪ್ಯಾಂಟ್ ಹಾಕ್ಕೋತಾರೆ ಸಾರ್. ಆಕೆ ಪ್ಯಾಂಟ್ ತೆಗೆದ್ರೆ ಇವರೂ ತೆಗೀತಾರೆ ಸಾರ್. ಆಕೆ ಇಂಗ್ಲೀಷಲ್ಲಿ ಹಾಯ್ ಎಂದರೆ ಇವ್ರೂ ಹಾಯ್ ಅಂತಾರೆ ಸಾರ್. ಆಕೆ ಕ್ಯಾ ಹೈ ಅಂತ ಹಿಂದಿಯಲ್ಲಿ ಉಲಿದರೆ ಇವರೂ ಕ್ಯಾ ಹೈ ಅಂತಾರೆ ಸಾರ್.
ಆದ್ದರಿಂದ ಆಕೆ ಕನ್ನಡದಲ್ಲಿ ಮಾತಾಡಿದರೆ, ಇವ್ರೂ ಕನ್ನಡದಲ್ಲಿ ಮಾತಾಡೋದು ಗ್ಯಾರಂಟಿ. ಆಕೆ ಕನ್ನಡದಲ್ಲಿ ಬರೆದರೆ ಇವರೂ ಕನ್ನಡದಲ್ಲಿ ಬರೆಯೋದು ಗ್ಯಾರಂಟಿ ಸಾರ್. ಇದು ಮಾರ್ಕೆಟ್ಟಲ್ಲಿ ಸಕ್ಸಸಾಗಿರೋ ಫಾರ್ಮುಲಾ.... ಸಾರ್.
ಸಾರ್... ಆಕೆ ಕನ್ನಡದ ರಾಯಭಾರಿಯಾದ್ರೆ ಕನ್ನಡ ಅಷ್ಟೇ ಅಲ್ಲ ಸಾರ್... ಕನ್ನಡೇತರ ಯುವಜನಾಂಗಾನೂ ಒಮ್ಮೆಲೇ ಕನ್ನಡದತ್ತ ಒಲಮ ತೋರಿಸುತ್ತೆ ಸಾರ್. ಒಂದು ಕಾಲೇಜಿನ ಹುಡುಗಿಯರು ಕನ್ನಡದಲ್ಲಿ ಉಲಿದರೆ ಸುತ್ತಲಿನ ಎಲ್ಲಾ ಕಾಲೇಜಿನ ಹುಡುಗರು ಕನ್ನಡದಲ್ಲೇ ಮಾತು ಶುರುವಿಟ್ಟುಕೊಳ್ಳುತ್ತಾರೆ ಸಾರ್. ಈ ಸ್ಟೈಲು ಇಡೀ ಊರಿಗೇ ವ್ಯಾಪಿಸುತ್ತೆ ಸಾರ್. ಊರಿಂದ... ಊರಿಗೆ, ಜಿಲ್ಲೆಯಿಂದ ಜಿಲ್ಲೆಗೆ.... ಆಮೇಲೆ ರಾಜ್ಯಕ್ಕೆ... ನಂತರ ಇಡೀ ದೇಶಕ್ಕೆ ಕನ್ನಡ ಫ್ಯಾಷನ್ನಾಗುತ್ತೆ ಸಾರ್. ನೋಡುತ್ತಿರಿ ಸಾರ್... ಕನ್ನಡ ಭಾಷೆ ಆಟೋಮ್ಯಾಟಿಕ್ಕಾಗಿ ಅಭಿವೃದ್ಧಿಯಾಗುತ್ತೆ ಸಾರ್!
ಸಾರ್... ಐಶ್ವರ್ಯ ರೈಗೆ ಕನ್ನಡ ಬರುತ್ತಾ ಅಂತ ನೀಮ ಕೇಳಬಹುದು. ಬೇಕಾಗಿಲ್ಲ ಸಾರ್. ಜಾಹೀರಾತಲ್ಲಿ ಆಕೆ ಲಕ್ಸ್ ಸೋಪ್ ಹಚ್ಚಿಕೋತಾಳೆ. ಹಾಗಂತ ದಿನಾ ಅದೇ ಸೋಪು ಹಚ್ಚಿಕೊಂಡು ಸ್ನಾನ ಮಾಡುತ್ತಾಳೆ ಅಂದುಕೊಂಡಿರಾ ಸಾರ್? ದುಡ್ಡು ಕೊಟ್ಟರೆ ರಾಯಭಾರಿಗಳು ಇದಕ್ಕೆಲ್ಲ ರೆಡಿ ಸಾರ್. ನಾವೂ ಆಕೆಗೆ ವರ್ಷಕ್ಕೆ ಐದೋ ಆರೋ ಕೋಟಿ ರುಪಾಯಿ ಕೊಟ್ಟರೆ ಆಯಿತು. ಇದನ್ನು ಸರ್ಕಾರ ಕನ್ನಡಾಭಿವೃದ್ಧಿ ಯೋಜನೆ ವೆಚ್ಚದಲ್ಲಿ ಸೇರಿಸಬಹುದು ಸಾರ್. ಐಶ್ವರ್ಯ ಕನ್ನಡ ಮ್ಯಾನೇಜ್ ಮಾಡುತ್ತಾಳೆ ಸಾರ್. ಇಷ್ಟಕ್ಕೂ ಆಕೆ ದಕ್ಷಿಣ ಕನ್ನಡದ ಮೂಲದವಳು ಸಾರ್. ಇಷ್ಟಕ್ಕೂ ಆಕೆ ಹುಟ್ಟಿದ್ದು ಕನ್ನಡ ರಾಜ್ಯೋತ್ಸವದ ದಿನಾನೇ ಸಾರ್. ಅದಕ್ಕೇ ಕನ್ನಡಕ್ಕೆ ಆಕೆಗಿಂತ ಉತ್ತಮ ಅಂಬಾಸಡರ್ ಯಾರು ಸಿಗ್ತಾರೆ ಸಾರ್?
ಸಾರ್... ಆಕೆ ದುಬಾರಿಯಾಯ್ತು ಅಂತೀರಾ ಸಾರ್? ಮಲ್ಲಿಕಾ ಶೆರಾವತ್ ಅಂತ ಇನ್ನೊಬ್ಳು ಸೆಕ್ಸ್ ಬಾಂಬ್ ಇದ್ದಾಳೆ ಸಾರ್. ಆಕೆಗೂ ಐಶ್ವರ್ಯಳಷ್ಟೇ ಪ್ರಭಾವವಿದೆ ಸಾರ್. ಅರ್ಧ ಬಜೆಟ್ಟಿಗೇ ಒಪ್ಪಿಕೊಳ್ಳುತ್ತಾಳೆ. ಅಷ್ಟೇ ಅಲ್ಲ ಸಾರ್... ಕೇವಲ ೧೦ ಲಕ್ಷಕ್ಕೆ ಅತ್ಯಂತ ಸೆಕ್ಸಿ ಸೀನಿನಲ್ಲಿ ಕಾಣಿಸಿಕೊಂಡಿದ್ದ ಆಕೆ ೨ ಕೋಟಿ ರುಪಾಯಿ ಕೊಟ್ಟರೆ ಕನ್ನಡಕ್ಕಾಗಿ ಏನೂ ಮಾಡಲು ರೆಡಿ ಇರ್ತಾಳೆ ಸಾರ್!
ಪ್ಲೀಸ್ ತಪುý್ಪ ತಿಳೀಬೇಡಿ ಸಾರ್. ಈಗಿನ ಕಾಲದ ಯುವ ಜನರು ಕನ್ನಡದ ಬಗ್ಗೆ ಆಕರ್ಷಿತರಾಗಲು ಇದೊಂದೇ ಮಾರ್ಗ ಸಾರ್. ಯೋಚಿಸಿ ನೋಡಿ ಸಾರ್. ಇದೆಲ್ಲ ಸರಿ ಅಲ್ಲ ಅನ್ನಿಸಿದ್ರೆ ನನ್ನ ಕ್ಷಮಿಸಿಬಿಡಿ ಸಾರ್. ಎಷ್ಟಂದ್ರೂ ನಾನು ಯಂಡ್ಗುಡ್ಕ್ ರತ್ನ ಸಾರ್.
ಜೈ ಕನ್ನಡ. ಜೈ ಕರ್ನಾಟಕ.
Kannada Prabha issue dated November 1, 2005
Airshwarya Rai as Brand Ambassador to Kannada Language
-
Wednesday, November 02, 2005
ಕನ್ನಡ ಭಾಷೆಗೆ ಐಶ್ವರ್ಯ ರೈ ಪ್ರಚಾರ ರಾಯಭಾರಿ!
Subscribe to:
Post Comments (Atom)
No comments:
Post a Comment