Tuesday, December 13, 2005

ರಾಜಕಾರಣಿಗಳಿಗೆ ಪ್ರತಿವರ್ಷ ಸತ್ಯ ಹರಿಶ್ಚಂದ್ರ ಪ್ರಶಸ್ತಿ!

೨೦೦೫ನೇ ಸಾಲಿನ ಪ್ರಶಸ್ತಿ ಕರ್ನಾಟಕದ ಮಂತ್ರಿಗಳಿಗೆ
-ವಿಶ್ವಾಮಿತ್ರರ ಮಾಜಿ ಆಪ್ತ ಸಹಾಯಕ ನಕ್ಷತ್ರಿಕನ ಪ್ರಸ್ತಾವನೆ


‘ತಮಾಷೆ ಸಿನಿಮಾಗಳೇ ಈಗೀಗ ಹೆಚ್ಚು ಬರುತ್ತಿರುವೆ. ಸೂಪರ್‌ ಹಿಟ್‌ ಆಗುತ್ತಿವೆ. ಯಾಕೆ ಗೊತ್ತಾ? ಜನರಿಗೆ ತಮಾಷೆ ಬೇಕಾಗಿದೆ. ಅದಕ್ಕಾಗಿ ಅವರು ದುಡ್ಡು ಕೊಟ್ಟು ತಮಾಷೆ ಸಿನಿಮಾಗಳಿಗೆ ಹೋಗುತ್ತಿದ್ದಾರೆ. ಜನ ತಮಾಷೆಗೂ ದುಡ್ಡು ಕೊಡಬೇಕಾದ ಶೋಚನೀಯ ಪರಿಸ್ಥಿತಿ ನಿವಾರಣೆ ಆಗಬೇಕೆಂದರೆ, ರಾಜಕಾರಣಿಗಳ ಪುಗಸಟ್ಟೆ ಮನರಂಜನೆ ಇನ್ನೂ ಹೆಚ್ಚಾಗಬೇಕಾಗಿದೆ!’


ರಾಜಾ ಹರಿಶ್ಚಂದ್ರಾ,
ಆಯಮ್‌ ವೆರಿ ಸಾರಿ. ಈ ಮೊದಲು ನನ್ನ ಹೈಕಮಾಂಡ್‌ ವಿಶ್ವಾಮಿತ್ರ ಮುನಿಗಳ ಮಾತು ಕೇಳಿ ನಿನಗೆ ಕೊಡಬಾರದ ಕಷ್ಟ ಕೊಟ್ಟೆ. ಆಡಬಾರದ ಮಾತನ್ನಾಡಿದೆ. ಕ್ಷಮಿಸು ರಾಜನ್‌... ಕ್ಷಮಿಸು. ಇದಕ್ಕೆಲ್ಲ ನನ್ನ ಹೈಕಮಾಂಡ್‌ ಕಾರಣವೇ ಹೊರತೂ ನಾನಲ್ಲ. ಹೈಕಮಾಂಡ್‌ ಹೇಳಿದಂತೆ ಮಾಡುಮದು ನನಗೆ ಅನಿವಾರ್ಯವಾಗಿತ್ತು. ಹಾಗಾಗಿ, ಹಿಂದೆ ನಾನು ಹೇಳಿದ ಮಾತನ್ನಾಗಲೀ, ಕೊಟ್ಟ ಕಷ್ಟವನ್ನಾಗಲೀ ದಯವಿಟ್ಟು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಡಿ ಮಹಾರಾಜಾ.

ಬೈ ದ ವೇ ಮಹಾರಾಜಾ, ಈಗ ನಾನು ವಿಶ್ವಾಮಿತ್ರರ ಬಣದಲ್ಲಿಲ್ಲ. ಸಿದ್ದರಾಮಯ್ಯ ಜೆಡಿಎಸ್‌ ಬಿಟ್ಟುಬಂದ ಹಾಗೆ, ಮುತಾಲಿಕ್‌ ಮೊದಲು ವಿಶ್ವ ಹಿಂದೂ ಪರಿಷತ್‌ ತ್ಯಜಿಸಿದ ಹಾಗೆ ನಾನು ವಿಶ್ವಾಮಿತ್ರ ಮುನಿಗಳ ಆಶ್ರಮ ಬಿಟ್ಟು ಬಂದಿದ್ದೇನೆ! ನಾನು ವಿಶ್ವಾಮಿತ್ರರಿಗೆ ಎಷ್ಟೇ ನಿಷ್ಠೆಯಿಂದ ನಡೆದುಕೊಂಡರೂ ಅವರು ನನಗೆ ಪ್ರಮೋಶನ್‌ ನೀಡಲೇ ಇಲ್ಲ. ಎಷ್ಟು ವರ್ಷಾ ಅಂತ ನಾನು ಅಡಿಯಾಳಾಗೇ ಇರುಮದು! ನನಗೂ ಉನ್ನತ ಸ್ಥಾನ, ಮಾನ ಬೇಡವೇ? ಆ ಬಗ್ಗೆ ನಾನು ಹಲಮ ಬಾರಿ ಅಸಮಾಧಾನ ತೋಡಿಕೊಂಡರೂ ಅವರು ಅಚಲರಾಗಿದ್ದಾರೆ. ಹಾಗಾಗಿ, ನಾನು ನಿಮ್ಮ ಆಶ್ರಯ ಕೋರುವ ಪ್ರಯತ್ನದಲ್ಲಿದ್ದೆ. ಇದನ್ನು ಹೇಗೋ ತಿಳಿದುಕೊಂಡ ಸ್ವಾಮಿಗಳು ನನ್ನನ್ನು ಆಶ್ರಮದಿಂದ ಉಚ್ಚಾಟಿಸಿದ್ದಾರೆ.

ಮೊನ್ನೆ ಮೊನ್ನೆ ಉಮಾಭಾರತಿಯವರ ಉಚ್ಚಾಟನೆಯನ್ನೂ ನೋಡಿದ ಮೇಲೆ ಯಾಕೋ ಉಚ್ಚಾಟನೆಗಳು ಈಗ ಬಹಳ ಕಾಮನ್‌ ಆದಂತೆ ತೋರುತ್ತಿವೆ. ಹೀಗೆ ಉಚ್ಚಾಟನೆ ಆದ ನಾವೆಲ್ಲ ನಮ್ಮ ನಮ್ಮ ಭವಿಷ್ಯಕ್ಕೊಂದು ಕಾಯಕಲ್ಪ ರೂಪಿಸಿಕೊಳ್ಳುವ ಪ್ರಯತ್ನದಲ್ಲಿ ಇದ್ದೇವೆ. ಅದರ ಮೊದಲ ಪ್ರಯತ್ನವಾಗಿ ಒಂದೊಂದು ರಾಜಕೀಯೇತರ ವೇದಿಕೆ ರೂಪಿಸಿಕೊಂಡು ನಾಯಕನ ಇಮೇಜ್‌ ಸೃಷ್ಟಿಸಿಕೊಳ್ಳುತ್ತಿದ್ದೇವೆ. ಈ ಹಿನ್ನೆಲೆಯಲ್ಲೇ ನಾನೀಗ ‘ಸತ್ಯ ಹರಿಶ್ಚಂದ್ರ ಪ್ರತಿಷ್ಠಾನ’ ಸ್ಥಾಪಿಸಿದ್ದೇನೆ.

ಪ್ರತಿವರ್ಷ ರಾಜಕಾರಣಿಗಳಿಗೆ ಪ್ರಶಸ್ತಿ ನೀಡುಮದು ಈ ಪ್ರತಿಷ್ಠಾನದ ಮೂಲ ಕೆಲಸ. ಎಲ್ಲಾದರೂ ನೋಡಿ... ಎಂತಾದರೂ ನೋಡಿ. ರಾಜಕಾರಣಿಗಳಿಗೆ ಸದಾ ಪ್ರಶಸ್ತಿ ವಿತರಿಸುವ ಕೆಲಸ. ಒಬ್ಬೊಬ್ಬ ರಾಜಕಾರಣಿಯೂ ತಮ್ಮ ತಮ್ಮ ಅಮೃತಹಸ್ತದಿಂದ ಎಷ್ಟು ಸಾವಿರ ಪ್ರಶಸ್ತಿ ವಿತರಿಸಿರುತ್ತಾನೋ ಲೆಕ್ಕವಿಲ್ಲ. ಆದರೆ, ಅವೇ ಅಮೃತಹಸ್ತಗಳಿಗೆ ಎಷ್ಟು ಪ್ರಶಸ್ತಿ ಪಡೆಯುವ ಯೋಗವಿದೆ ಹೇಳಿ? ರಾಜಕಾರಣಿಗಳು ಪ್ರಶಸ್ತಿ ವಿತರಿಸಿದ ಸುದ್ದಿಯನ್ನು ಪ್ರತಿದಿನ ನಾಮ ಓದುತ್ತೇವೆ. ಆದರೆ, ರಾಜಕಾರಣಿಗೆ ಪ್ರಶಸ್ತಿ ಲಭಿಸಿದ ಸುದ್ದಿ ಬಹಳ ಅಪರೂಪವಲ್ಲವೇ? ಪ್ರಶಸ್ತಿಗಳ ಬದಲಿಗೆ ರಾಜಕಾರಣಿಗಳಿಗೆ ಸನ್ಮಾನಗಳು ಆಗುತ್ತವೆ ನಿಜ. ಆದರೆ, ನೂರು ಸನ್ಮಾನಗಳು ಒಂದು ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ಗೆ ಸಮವೇ? ಲಕ್ಷ ಸನ್ಮಾನಗಳು ಒಂದು ‘ಪದ್ಮಶ್ರಿ’ ಪ್ರಶಸ್ತಿಗೆ ಸಾಟಿಯೇ! ನೀವೇ ಹೇಳಿ. ಸನ್ಮಾನಗಳ ಇಫೆಕ್ಟೇ ಬೇರೆ. ಪ್ರಶಸ್ತಿಗಳ ಗಮ್ಮತ್ತೇ ಬೇರೆ. ಈ ಕೊರಗು ರಾಜಕಾರಣಿಗಳಿಗೂ ಇದೆ.

ಈ ವೀಕ್‌ನೆಸ್ಸನ್ನು ಕ್ಯಾಶ್‌ ಮಾಡಿಕೊಳ್ಳಲು ನನ್ನ ಈ ಪ್ರತಿಷ್ಠಾನ ಸ್ಥಾಪಿಸಿದ್ದೇನೆ. ಈ ಪ್ರತಿಷ್ಠಾನ ತಮ್ಮ ಹೆಸರಿನಲ್ಲಿ ಸ್ಥಾಪನೆಯಾಗಿರುಮದರಿಂದ ಇದಕ್ಕೆ ತಮ್ಮ ಅನುಮತಿ ಹಾಗೂ ನೈತಿಕ ಬೆಂಬಲ ಪಡೆಯುಮದು ನನ್ನ ಈ ಪತ್ರದ ಉದ್ದೇಶ.

ಮಹಾರಾಜಾ,
ಪ್ರಶಸ್ತಿಯ ಹೆಸರು ‘ಸತ್ಯ ಹರಿಶ್ಚಂದ್ರ ಪ್ರಶಸ್ತಿ’. ಇದನ್ನು ಮಾಮೂಲಿಯಂತೆ ಸುಳ್ಳು ಹೇಳುವ ರಾಜಕಾರಣಿಗೆ ನೀಡುಮದಿಲ್ಲ. ಈ ಪ್ರಶಸ್ತಿಗೆ ಆಯ್ಕೆ ಆಗುಮದು ಸುಲಭವಲ್ಲ.

ರಾಜಕಾರಣಿಗಳು ಎಂದೂ ಸತ್ಯ ಹೇಳುಮದಿಲ್ಲ ಎಂಬ ಸತ್ಯದ ಅರಿಮ ಪ್ರಜೆಗಳಿಗೆಲ್ಲ ಇದೆ. ದೇಖೆಂಗೆ, ಸೋಚೇಂಗೆಯಿಂದ ಹಿಡಿದು... ನೋಡೋಣ್‌ ಬಿಡ್ರಿ, ಮಾಡೋಣ್‌ ಬಿಡ್ರಿ... ವರೆಗೆ, ಕೊಟ್ಟೇ ಕೊಡುತ್ತೇವೆ, ಬಂದೇ ಬರುತ್ತವೆಯಿಂದ ಹಿಡಿದು... ಕಟ್ಟೇ ಕಟ್ಟುತ್ತೇವೆ, ಬೀಳಿಸಿಯೇ ತೀರುತ್ತೇವೆ ತನಕ... ಉಚಿತ, ರಿಯಾಯ್ತಿಯಿಂದ ಹಿಡಿದು ಪ್ಯಾಕೇಜ್‌, ವಿಮೆಯ ತನಕ ಪ್ರಜೆಗಳು ಬಹಳಷ್ಟು ರಾಜಕಾರಣಿಗಳ ಭಾಷಣಗಳನ್ನೂ, ಭರವಸೆಯನ್ನೂ, ಆಶ್ವಾಸನೆಗಳನ್ನೂ, ಘೋಷಣೆಗಳನ್ನೂ ನೋಡಿದ್ದಾರೆ... ಕೇಳಿದ್ದಾರೆ.

ಅವೆಲ್ಲ ಜಾನಿ ಲಿವರ್‌ ಜೋಕಿನಂತೆ, ಮಸೂರಿ ಕೃಷ್ಣಮೂರ್ತಿ ಮಾತಿನಿಂತೆ, ಎನ್‌ ಎಸ್‌ ರಾವ್‌ ನಟನೆಯಂತೆ, ಟೆನ್ನಿಸ್‌ ಕೃಷ್ಣ ತಮಾಷೆಯಂತೆ... ಮಾಮೂಲಾಯಿತು. ಜನ ಚೇಂಜ್‌ ಕೇಳುತ್ತಿದ್ದಾರೆ. ಬೇರೆ ರೀತಿಯ ತಮಾಷೆಗಳನ್ನು ಜನ ಎದುರು ನೋಡುತ್ತಿದ್ದಾರೆ.

ಸಾಕ್ಷಿ ಬೇಕಾ? ನೋಡಿ... ಕುರಿಗಳು ಸಾರ್‌ ಕುರಿಗಳು, ಕೋತಿಗಳು ಸಾರ್‌ ಕೋತಿಗಳು, ಮುನ್ನಾ ಭಾಯಿ ಎಂಬಿಬಿಎಸ್‌, ನೋ ಎಂಟ್ರಿ, ಶಾದಿ ನಂ.೧, ರಾಮ ಶಾಮ ಭಾಮ... ಮುಂತಾದ ತಮಾಷೆ ಸಿನಿಮಾಗಳೇ ಈಗೀಗ ಹೆಚ್ಚು ಬರುತ್ತಿರುವೆ. ಸೂಪರ್‌ ಹಿಟ್‌ ಆಗುತ್ತಿವೆ. ಯಾಕೆ ಗೊತ್ತಾ? ಜನರಿಗೆ ತಮಾಷೆ ಬೇಕಾಗಿದೆ. ಅದಕ್ಕಾಗಿ ಅವರು ದುಡ್ಡು ಕೊಟ್ಟು ತಮಾಷೆ ಸಿನಿಮಾಗಳಿಗೆ ಹೋಗುತ್ತಿದ್ದಾರೆ.

ಜನ ತಮಾಷೆಗಾಗಿಯೂ ದುಡ್ಡು ಕೊಡಬೇಕಾದ ಶೋಚನೀಯ ಪರಿಸ್ಥಿತಿ ನಿವಾರಣೆ ಆಗಬೇಕೆಂದರೆ, ರಾಜಕಾರಣಿಗಳ ಪುಗಸಟ್ಟೆ ಮನರಂಜನೆ ಇನ್ನೂ ಹೆಚ್ಚಾಗಬೇಕಾಗಿದೆ. ರಾಜಕಾರಣಿಗಳ ಕ್ರಿಯೇಟಿವಿಟಿ ಚುರುಕುಗೊಳ್ಳಬೇಕಾಗಿದೆ. ಹೊಸ ತಲೆಮಾರಿನ ಯುವ ಪೀಳಿಗೆಗೆ ಅಪ್ಯಾಯಮಾನವಾಗುವಂಥ ಮನರಂಜನೆಯನ್ನು ಈ ರಾಜಕಾರಣಿಗಳು ನೀಡಬೇಕಾಗಿದೆ. ತಮಾಷೆ ಸಿನಿಮಾಗಳಲ್ಲಿ ಹೀರೋಗಳು ಸುಳ್ಳು ಹೇಳುತ್ತಿರುಮದು ಪ್ರೇಕ್ಷಕರಿಗೆಲ್ಲ ಗೊತ್ತಿರುತ್ತದೆ. ಆದರೂ, ಹೀರೋಗಳು ಅದನ್ನೇ ಸತ್ಯ ಎಂಬಂತೆ ಒಬ್ಬರನ್ನೊಬ್ಬರು ನಂಬಿಸಲು ಪ್ರಯತ್ನಿಸುವ ಪ್ರಸಂಗಗಳನ್ನು ಜನ ನೋಡಿ ಹೊಟ್ಟೆ ಹುಣ್ಣಾಗುವಂತೆ ನಗುತ್ತಾರೆ. ಆಮೇಲೆ ಅತಿ ಹೆಚ್ಚು ನಗಿಸಿದ ಸಿನಿಮಾಕ್ಕೂ, ಅತಿ ಹೆಚ್ಚು ನಗಿಸಿದ ನಟರಿಗೂ, ಇತರ ಕಲಾವಿದರೂ ಪ್ರಶಸ್ತಿಗಳ ಸುರಿಮಳೆಯಾಗುತ್ತದೆ. ಆದರೆ, ಇದೇ ರೀತಿಯ ಕಲಾ ಪ್ರದರ್ಶನ ನೀಡುವ ರಾಜಕಾರಣಿಗಳನ್ನು ಯಾರೂ ಗಮನಿಸುಮದೇ ಇಲ್ಲ. ಇಂಥ ರಾಜಕಾರಣಿಗಳ ಕಲೆಯನ್ನು ಜನತೆ ನಿರ್ಲಕ್ಷಿಸಿದ್ದಾರೆ.

ಈಗ ‘ಸತ್ಯ ಹರಿಶ್ಚಂದ್ರ ಪ್ರತಿಷ್ಠಾನ’ ಅಂಥ ಕಲಾ ಸಂಪನ್ನ ರಾಜಕಾರಣಿಗಳನ್ನು ಮಾತ್ರ ಗುರುತಿಸಿ, ಅವರಿಗೆ ಪ್ರತಿವರ್ಷ ಪ್ರಶಸ್ತಿ ನೀಡುತ್ತದೆ. ಇದರಿಂದ ಇತರ ರಾಜಕಾರಣಿಗಳೂ ಉತ್ತೇಜಿತರಾಗಿ ಮಾಮೂಲಿ ಸುಳ್ಳುಗಳನ್ನು ಬಿಟ್ಟು ಸೃಜನಾತ್ಮಕ ಸುಳ್ಳುಗಳ ಮೂಲಕ ಜನತೆಗೆ ಹೆಚ್ಚು ಮನರಂಜನೆ ನೀಡುತ್ತಾರೆ ಎಂಬುದು ಈ ಪ್ರತಿಷ್ಠಾನದ ಸದುದ್ದೇಶ.

ಜಿ.ಎಸ್‌.ಶಿವರುದ್ರಪ್ಪ ಹೇಳಿದಂತೆ... ‘ಎಲ್ಲ ಕೇಳಲಿ ಎಂದು ನಾನು ಹೇಳುಮದಿಲ್ಲ, ಹೇಳುಮದು ಅನಿವಾರ್ಯ ಕರ್ಮ ಎನಗೆ’ -ಎಂಬ ಭಾವನೆ ರಾಜಕಾರಣಿಗೆ ಬೇಡ.

ಜನ ಕೇಳಿ ಆನಂದಿಸುವಂತೆ ‘ಮಜ ತುಂಬಿ ಹೇಳುವೆನು ಇಂದು ನಾನು’ ಎಂಬ ಜಾಯಮಾನವನ್ನು ರಾಜಕಾರಣಿಗಳು ಬೆಳೆಸಿಕೊಳ್ಳಲಿ ಎಂಬುದು ಈ ಪ್ರತಿಷ್ಠಾನದ ಆಶಯ.

ಕಳೆದ ವರ್ಷವಾಗಿದ್ದರೆ, ಲಾಲೂ ಪ್ರಸಾದ್‌ ಯಾದವ್‌ಗೆ ಈ ಪ್ರಶಸ್ತಿ ಸಿಗುತ್ತಿತ್ತೇನೋ? ಆದರೆ, ಈ ವರ್ಷ ಅವರ ಕಾಮೆಡಿ ಕಡಿಮೆಯಾಗಿ ಟ್ರಾಜಿಡಿ ಹೆಚ್ಚಾಗಿದೆ. ಅದಕ್ಕಾಗಿ ಅವರಿಗೆ ಈ ಬಾರಿ ಪ್ರಶಸ್ತಿ ನೀಡಲು ಸಾಧ್ಯವಾಗದಿರಬಹುದು. ಆದರೆ, ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ ಬಂದಮೇಲೆ ಜನತೆಗೆ ಸಾಕಷ್ಟು ಕಾಮೆಡಿ ಮನರಂಜನೆ ಲಭಿಸಿದೆ. ಕೆಲಮ ಮಂತ್ರಿಗಳ ಸುಳ್ಳುಗಳಂತೂ ಸೂಪರ್‌ ಹಿಟ್‌ ಜೋಕ್‌ ಆಗಿವೆ! ಬಹುಶಃ ೨೦೦೫ರ ‘ಸತ್ಯ ಹರಿಶ್ಚಂದ್ರ ಪ್ರಶಸ್ತಿ’ ಕರ್ನಾಟಕದ ಮಂತ್ರಿಗಳಲ್ಲೇ ಒಬ್ಬರಿಗೆ ದೊರಕುವ ಸಾಧ್ಯತೆ ಇದೆ.

ಆದಷ್ಟು ಬೇಗ ಈ ಪ್ರತಿಷ್ಠಾನಕ್ಕೆ ತಮ್ಮ ಹೆಸರಿಡಲು ತಾಮ ‘ನೋ ಅಬ್ಜೆಕ್ಷನ್‌ ಸರ್ಟಿಫಿಕೆಟ್‌’ ನೀಡಿದರೆ ನನಗೆ ಪ್ರಶಸ್ತಿ ಪ್ರದಾನ ಮಾಡಲು ಸಾಧ್ಯವಾಗುತ್ತದೆ. ಬೆಂಗಳೂರು ಮೆಟ್ರೋ ರೈಲು ಹಾಗೂ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಹಸಿರು ನಿಶಾನೆ ನೀಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಲೆದಾಡಿಸಿದಂತೆ ನೀಮ ನನ್ನನ್ನು ಅಲೆದಾಡಿಸಲಾರಿರಿ ಎಂಬ ನಂಬುಗೆಯೊಡನೆ...

ತಮ್ಮ ಹಾಲಿ ವಿಶ್ವಾಸಿ
ನಕ್ಷತ್ರಿಕ
(ವಿಶ್ವಾಮಿತ್ರರ ಮಾಜಿ ಆಪ್ತ ಸಹಾಯಕ)


Kannada Prabha issue dated December 12, 2005
Satya Harishchandra Annual Award for Politicians!

No comments: