Tuesday, December 06, 2005

ಯುದ್ಧ ಮಾಡಲೆಂದೇ ಧರ್ಮಗ್ರಂಥ ಬೋಧಿಸಲಾಯಿತು!

ಡಿಸೆಂಬರ್‌ ೬ರ ಮುನ್ನಾದಿನ ಆದಿ ಕವಿ ಪಂಪನಿಗೆ ಜಾತ್ಯತೀತ ಸೈಬರ್‌ ಕವಿ ಗಾಂಪನ ಪತ್ರ

ಧರ್ಮಗ್ರಂಥಗಳಿಂದ ಸಮಾಜದಲ್ಲಿ ಶಾಂತಿಗಿಂತ ಸಮರವೇ ಹೆಚ್ಚಾಗಿದೆ ಎಂಬ ಸಂಶಯ ಮೂಡುತ್ತದೆ. ಧರ್ಮದ ರಕ್ಷಣೆಗೆ ಶ್ರೀಕೃಷ್ಣ ಪವಿತ್ರ ‘ಗೀತೆ’ ಬೋಧಿಸಿ ಅರ್ಜುನ ಯುದ್ಧ ಮಾಡುವಂತೆ ಮಾಡಿದ. ಮಹಾಭಾರತ ಯುದ್ಧವೇ ನಡೆದುಹೋಯಿತು. ಅತ್ತ ಇಸ್ಲಾಂ ಧರ್ಮ ರಕ್ಷಣೆಗೆ ’ಜಿಹಾದ್‌’ ಬೊಧಿಸಲಾಯಿತು. ಈ ಯುದ್ಧಗಳಿಂದ ಇಡೀ ಜಗತ್ತೇ ಅಶಾಂತವಾಯಿತು. ಇದಕ್ಯಾರು ಕಾರಣ?


ಆದರಣೀಯ ಆದಿ ಕವಿ, ಪಂಪನಿಗೆ
ಸೈಬರ್‌ ಕವಿ ಗಾಂಪನ ನಮಸ್ಕಾರಗಳು. ಬಹಳ ದಿನಗಳಿಂದ ಜಾತ್ಯತೀತ ಮಹಾಭಾರತದ ಕುರಿತು ನಾನು ನಿನಗೆ
ಈ-ಮೇಲ್‌ ಬರೆಯಬೇಕು ಅಂದುಕೊಂಡಿದ್ದೆ. ಆದರೆ, ಸಮಯ ಕೂಡಿ ಬಂದಿರಲಿಲ್ಲ. ಈಗ ಸಂದರ್ಭ ಸಿಕ್ಕಿದೆ.
ನಾಳೆ ಡಿಸೆಂಬರ್‌ ೬. ರಾಮ ಜನ್ಮಭೂಮಿಯಲ್ಲಿ ಬಾಬರಿ ಮಸೀದಿ ಧ್ವಂಸವಾದ ದಿನ. ಇದು ಕೋಮುವಾದ ಹಾಗೂ ಜಾತ್ಯತೀತತೆಯ ಉನ್ಮಾದದ ದಿನ. ಧರ್ಮಸಂಘರ್ಷ ಹಾಗೂ ಧರ್ಮರಕ್ಷಣೆಯ ವ್ಯಾಖ್ಯಾನದ ದಿನ. ಭಾರತದ ರಾಷ್ಟ್ರೀಯ ದಿನಾಚರಣೆಗಳಲ್ಲಿ ಇದೂ ಒಂದು! ಬಿಜೆಪಿಗಳು ವಿಜಯೋತ್ಸವ ಎಂದೂ, ಬಿಜೆಪಿ ವಿರೋಧಿಗಳು ಇದನ್ನು ಕರಾಳದಿನ ಎಂದೂ ಆಚರಿಸುತ್ತಾರೆ. ಜನಸಾಮಾನ್ಯರು ಮಾತ್ರ ಕೋಮುಗಲಭೆಯ ಆತಂಕದಲ್ಲೇ ದಿನ ಕಳೆಯುತ್ತಾರೆ.

ಕವಿವರ್ಯಾ,
ನನಗೆ, ಧರ್ಮಗ್ರಂಥಗಳಾದ ಭಗವದ್ಗೀತೆ -ಖುರಾನ್‌ ಮತ್ತು ಮಹಾ ಸಾಫ್ಟ್‌ವೇರ್‌ಗಳಾದ ಮೈಕ್ರೋಸಾಫ್ಟ್‌ ವಿಂಡೋಸ್‌ ಹಾಗೂ ಲೈನಕ್ಸ್‌ ನಡುವೆ ಹಲವಾರು ಸಾಮ್ಯತೆ ಕಾಣುತ್ತಿದೆ.

ಮಹಾಭಾರತದ ಭಗವದ್ಗೀತೆ ಹಿಂದುಗಳಿಗೆ ಹೇಗೆ ಧರ್ಮಗ್ರಂಥವೋ ಹಾಗೆ ಮುಸ್ಲಿಮರಿಗೆ ಖುರಾನ್‌ ಧರ್ಮಗ್ರಂಥ. ಇವೆರಡೂ ಬೇರೆ ಬೇರೆ ಗ್ರಂಥಗಳಾದರೂ, ಉದ್ದೇಶ ಹಾಗೂ ಉಪಯೋಗ ಮಾತ್ರ ಒಂದೇ ತಾನೆ? ಅದರೆ, ಈ ಗ್ರಂಥಗಳ ಆರಾಧಕರು ಯಾಕೋ ತಾಮ ಪರಸ್ಪರ ವಿರೋಧಿಗಳು ಎಂಬಂತೆ ಹೋರಾಡುತ್ತಾರೆ.

ಈಗಿನ ನಮ್ಮ ಸೈಬರ್‌ಲೋಕದಲ್ಲೂ ಇದೇ ಹಣೆಬರಹ. ಒಂದು ಪಂಥದ ಗಣಕಿಗಳಿಗೆ ಮೈಕ್ರೋಸಾಫ್ಟ್‌ ವಿಂಡೋಸ್‌ ‘ಧರ್ಮತಂತ್ರಾಂಶ’ವಾದರೆ ಇನ್ನೊಂದು ವಿರೋಧಿ ಪಂಥಕ್ಕೆ ’ಲೈನಕ್ಸ್‌’ ಎಂಬುದು ಧರ್ಮತಂತ್ರಾಂಶ’. ಇವೆರಡೂ ತಂತ್ರಾಂಶಗಳ ಉದ್ದೇಶ ಹಾಗೂ ಉಪಯೋಗ ಒಂದೇ ಆದರೂ, ಉಭಯ ಪಂಥಗಳ ನಡುವೆ ಹಿಂದೂ-ಮುಸ್ಲಿಂ ಥರ ಶೀತಲ ಸಮರ ಇದೆ.

ಅಷ್ಟೇ ಅಲ್ಲ, ಮೈಕ್ರೋಸಾಫ್ಟಿನ ವಿಂಡೋಸ್‌ಗೂ ಮಹಾಭಾರತಕ್ಕೂ ಇನ್ನೊಂದು ಪ್ರಮುಖ ಸಾಮ್ಯತೆ ಇದೆ. ಅತ್ಯಂತ ಹೆಚ್ಚು ವರ್ಶನ್‌ಗಳಿರುವ ಮಹಾಸಾಫ್ಟ್‌ವೇರ್‌ ಎಂಬ ಖ್ಯಾತಿ ವಿಂಡೋಸ್‌ಗಾದರೆ, ಅತ್ಯಂತ ಹೆಚ್ಚು ಆವೃತ್ತಿಗಳಿರುವ ಮಹಾಗ್ರಂಥ ಎಂಬ ಖ್ಯಾತಿ ಮಹಾಭಾರತಕ್ಕೆ!

ಆದರೆ, ಕವೀಶ
ಒಂದು ಖೇದದ ವಿಷಯವೆಂದರೆ, ವಿಂಡೋಸ್‌ನ ಹೊಸ ವರ್ಷನ್‌ಗಳು ಈಗಲೂ ಬಿಡುಗಡೆಯಾಗುತ್ತಿವೆ. ಅದೇಕೋ ಮಹಾಭಾರತದ ಹೊಸ ಆವೃತ್ತಿಗಳು ಮಾತ್ರ ನಿಂತುಹೋಗಿವೆ! ನಿನ್ನಂಥ ಮಹಾಕವಿಗಳೂ ಮಹಾಭಾರತದ ಹೊಸ ವರ್ಶನ್‌ ಬರೆಯುವ ಸಾಹಸಕ್ಕೆ ಕೈಹಾಕುತ್ತಿಲ್ಲ. ನೀನೂ ಅಷ್ಟೇ, ಮೂಲ ಕೃತಿಯ ‘ಪಂಪಭಾರತ -ವರ್ಶನ್‌ ೧.೦’ ಬಿಡುಗಡೆ ಮಾಡಿದ ಮೇಲೆ ಯಾಕೆ ಪರಿಷ್ಕಾರಕ್ಕೆ ಕೈಹಾಕಿಲ್ಲ. ಈಗ ನೀನು ‘ಪಂಪಭಾರತ ವರ್ಶನ್‌ ೨.೧’ ಬರೆಯಬೇಕು. ಇದು ಸೂಪರ್‌ ಹಿಟ್‌ ಆಗುಮದು ಗ್ಯಾರಂಟಿ. ಪುಸ್ತಕ ಪ್ರಪಂಚದಲ್ಲಿ ದಾಖಲೆಯ ಮೇಲೆ ದಾಖಲೆ ಬರೆಯುತ್ತಿರುವ ’ಹ್ಯಾರಿ ಪಾಟರ್‌’ ಎಂಬ ಇಂಗ್ಲೀಷ್‌ ಕಾದಂಬರಿ ಸರಣಿಗಿಂತ ನಿನ್ನ ಕೃತಿಯೇ ಅತ್ಯಧಿಕ ಬೇಡಿಕೆ ಪಡೆಯುವ ಸಾಧ್ಯತೆಯಿದೆ.

ಅಂದು ನೀನು ಸುಲಭವಾಗಿ ‘ಪಂಪಭಾರತ’ ಬರೆದಿರಬಹುದು. ಆದರೆ, ಈಗ ಮಹಾಭಾರತ ಬರೆಯುಮದು ಸುಲಭದ ಮಾತಲ್ಲ ಎಂಬುದು ನೆನಪಿರಲಿ. ಅದಕ್ಕಾಗಿ ನೀನು ಈ ಕೆಳಗಿನ ಎರಡು ಜಾಗ್ರತೆ ವಹಿಸಬೇಕಾಗುತ್ತದೆ:

೧. ನೀನು ಬರೆದ ಪಂಪಭಾರತದಲ್ಲಿ, ರಾಜ ಅರಿಕೇಸರಿಯನ್ನೇ ಅರ್ಜುನ ಎಂಬಂತೆ ಬಿಂಬಿಸಿದ್ದಿ. ದ್ರೌಪದಿ ಕೇವಲ ಅರ್ಜುನನ ಹೆಂಡತಿ ಎಂದೂ, ದುರ್ಯೋಧನನು ಅತ್ಯಂತ ಛಲವಂತ ಎಂದೂ ವೈಭವೀಕರಿಸಿದ್ದಿ. ಇದು, ವ್ಯಾಸ ಮಹಾಮುನಿಗಳ ಮೂಲಕಥೆಗೆ ನೀನು ಮಾಡಿದ ಬದಲಾವಣೆ. ಇಂತಹ ಬದಲಾವಣೆಗೆ ಆಗ ಯಾರೂ ಪ್ರತಿಭಟಿಸಲಿಲ್ಲ. ಈಗ ಈ ರೀತಿಯ ತಪುý್ಪ ಮಾಡಬೇಡ. ಈಗಿನ ಕಾಲ ಹಿಂದೆಂದಿಗಿಂತ ಅತ್ಯಂತ ಹೆಚ್ಚು ’ಧರ್ಮ ಸೂಕ್ಷ್ಮವೂ’, ಜನರು ಹಿಂದೆಂದಿಗಿಂತ ಧರ್ಮಪ್ರಿಯರೂ ಆಗಿದ್ದಾರೆ. ಈಗಿನ ಜನರು ತಮ್ಮ ಧರ್ಮದ ವಿಷಯದಲ್ಲಿ ಸುಮ್ಮನೆ ಕುಳಿತುಕೊಳ್ಳುಮದಿಲ್ಲ. ಹಾಗಾಗಿ, ಇಂತಹ ಬದಲಾವಣೆ ಮಾಡುಮದಾದರೆ ಒಮ್ಮೆ ಹಿಂದೂ ರಕ್ಷಣಾ ವೇದಿಕೆ ಮತ್ತು ಜಾತ್ಯತೀತ ಸೌಹಾರ್ದ ಪರಿಷತ್ತಿನ ಪರವಾನಿಗೆ ಪಡೆದುಕೊಳ್ಳುಮದು ಒಳಿತು! ಇಲ್ಲವಾದರೆ, ನಿನ್ನ ವಿರುದ್ಧ ಅನೇಕ ಹೋರಾಟಗಳು ನಡೆಯಬಹುದು. ನಿನ್ನ ’ಭೂತ ದಹನ’ವಂತೂ ಗ್ಯಾರಂಟಿ. ಮೋರೆಗೆ ಮಸಿ ಬಳಿಯುವ ಅಪಾಯವೂ ಇದೆ.

೨. ನೀನು ಬರೆದ ‘ಭಾರತದಲ್ಲಿ’ ಭಗವದ್ಗೀತೆ ಚಿಕ್ಕ ಪ್ರಸ್ತಾಪದೊಂದಿಗೆ ಮುಗಿದುಹೋಗುತ್ತದೆ. ಈ ವಿಷಯದಲ್ಲಿ ನೀನು ಎಚ್ಚರವಾಗಿ ಇರುಮದು ಒಳ್ಳೆಯದು. ನಿನ್ನ ಹೊಸ ಗ್ರಂಥದಲ್ಲಿ ಭಗವದ್ಗೀತೆಯನ್ನು ಚಿಕ್ಕದಾಗಿ ಮುಗಿಸಿದರೆ, ಹಿಂದೂ ಧರ್ಮಗ್ರಂಥವನ್ನು ನಿರ್ಲಕ್ಷಿಸಿದ ‘ಹಿಂದೂ ವಿರೋಧಿ’ ಎಂಬ ಆರೋಪ ನಿನ್ನ ಮೇಲೆ ಬರುತ್ತದೆ. ಅಥವಾ ಯಥಾವತ್‌ ಭಗವದ್ಗೀತೆಯನ್ನು ಅಳವಡಿಸಿದರೆ ನೀನು ‘ಕೋಮುವಾದಿ’ ಎನಿಸಿಕೊಳ್ಳಬೇಕಾಗುತ್ತದೆ. ಆದ್ದರಿಂದ, ಭಗವದ್ಗೀತೆಗೆ ಅಲ್ಲಲ್ಲಿ, ತಿದ್ದುಪಡಿ ಮಾಡಿ ನೀನು ಕೋಮುಸೌಹಾರ್ದ, ಜಾತ್ಯತೀತ ಭಗವದ್ಗೀತೆಯನ್ನು ಬರೆದುಬಿಡುಮದು ಒಳ್ಳೆಯದು. ರಾಷ್ಟ್ರಕವಿ ಕುವೆಂಪು ಎಷ್ಟೋ ವರ್ಷಗಳ ಹಿಂದೆ ಬರೆದಿಟ್ಟು ಹೋಗಿದ್ದ ಕರ್ನಾಟಕದ ನಾಡಗೀತೆಯೇ ಇಂಥ ಕೋಮು ಸಂಘರ್ಷಕ್ಕೆ ಕಾರಣವಾಗಿತ್ತು ಎಂಬುದನ್ನು ಮರೆಯಬೇಡ.

ಇಷ್ಟಕ್ಕೂ ಹಿಂದುತ್ವ, ಕೋಮುವಾದ, ಜಾತ್ಯತೀತತೆ ಅಂದರೆ ಏನು ಎಂದು ನೀನು ಕೇಳಬಹುದು. ನಿಜವಾಗಿ ಹೇಳಬೇಕೆಂದರೆ, ಅದೆಲ್ಲ ನಮ್ಮಂಥ ಜನಸಾಮಾನ್ಯರಿಗೆ ಅರ್ಥವಾಗುಮದಿಲ್ಲ. ಒಬ್ಬೊಬ್ಬರು ಒಂದೊಂದು ರೀತಿ ವಾದ ಮಂಡಿಸಿ ನಮ್ಮನ್ನು ಬೆಚ್ಚಿಬೀಳಿಸುತ್ತಾರೆ. ಆಮೇಲೆ ಅವರೆಲ್ಲರೂ ಹೇಳಿದ್ದು ನಿಜ ಅನಿಸುತ್ತದೆ. ನಮಗೆ ಗೊಂದಲವಾಗುತ್ತದೆ.
ಈ ದೊಡ್ಡ ಶಬ್ಧಗಳು ನಮ್ಮಂಥ ಹುಲುಮಾನವರಿಗೆ ಅರ್ಥವಾಗಿರುಮದು ಹೀಗೆ:

ಹಿಂದುತ್ವ: ಬಿಜೆಪಿಯ ರಾಜಕೀಯ ತಳಪಾಯ ಇದು. ವಿಶ್ವ ಹಿಂದೂ ಪರಿಷತ್‌, ಆರ್‌ಎಸ್‌ಎಸ್‌ ಮತ್ತಿತರ ಸಂಘಟನೆಗಳು ಹಿಂದುತ್ವದ ಪವರ್‌ ಆಫ್‌ ಅಟಾರ್ನಿ ಹೊಂದಿವೆ!

ಕೋಮುವಾದ: ಬಿಜೆಪಿ ಹಾಗೂ ಇದರ ಅಂಗ ಸಂಘಗಳ ಯಾಮದೇ ಮಾತುಗಳನ್ನು ಟೀಕಿಸಲು ವಿರೋಧಿ ಪಕ್ಷಗಳು ಬಳಸುವ ಶಬ್ದ ಇದು. ಬಿಜೆಪಿಯ ಅನುಯಾಯಿಗಳೆಲ್ಲ ಕೋಮುವಾದಿಗಳು ಎಂಬುದು ಮಿಕ್ಕೆಲ್ಲ ಪಕ್ಷಗಳ ವ್ಯಾಖ್ಯೆ. ಭಾರತದ ಪುರಾತನ ಸಂಸ್ಕೃತಿ, ಪುರಾಣ, ವೇದ, ಆಚರಣೆಗಳನ್ನು ಸಮರ್ಥಿಸುವವರೆಲ್ಲರೂ ಕೋಮುವಾದಿಗಳೆಂಬ ವಾದವೂ ಇದೆ. ಬ್ರಾಹ್ಮಣರನ್ನು ಸಹ ಕೋಮುವಾದಿಗಳು ಎನ್ನಲಾಗುತ್ತದೆ. ಆದರೆ, ಕಟ್ಟಾ ಮುಸ್ಲಿಮರು ಜಾತ್ಯತೀತ ಪಕ್ಷಗಳ ವೋಟ್‌ ಬ್ಯಾಂಕುಗಳು!

ಜಾತ್ಯತೀತತೆ: ಸಾಮಾನ್ಯವಾಗಿ ಮುಸ್ಲಿಂ ಬಾಂಧವರಿಗೆ ಉತ್ತೇಜನ ನೀಡುಮದು ಹಾಗೂ ಬಿಜೆಪಿ ಅನುಯಾಯಿಗಳನ್ನು ದೂರ ಇಡುಮದೇ ಜಾತ್ಯತೀತತೆ! ಜಾತಿ, ಒಳಜಾತಿಗಳನ್ನು ಬೇರೆ ಬೇರೆ ಮಾಡಿ ಎಲ್ಲರಲ್ಲೂ ಕೋಮು ಜಾಗೃತಿ ಮೂಡಿಸಿ ಪ್ರತಿಯೊಬ್ಬರೂ ತಮ್ಮ ತಮ್ಮ ಜಾತಿಗಾಗಿ ಹೋರಾಡುವಂತೆ ಮಾಡುಮದನ್ನೂ ಜಾತ್ಯತೀತತೆ ಎನ್ನಲಾಗುತ್ತದೆ! ಅದೇ ರೀತಿ ಮೇಲ್ಜಾತಿಯವರೆಲ್ಲರೂ ಸಮಾಜ ಶೋಷಕರು ಎಂದು ಬಿಂಬಿಸಿದರೂ ಅದು ಜಾತ್ಯತೀತತೆ. ಬಿಜೆಪಿಯ ವಿರೋಧಿ ಪಕ್ಷಗಳ ಕಾರ್ಯಕರ್ತರು ಮತ್ತು ಬುದ್ಧಿಜೀವಿಗಳು ತಮ್ಮನ್ನು ಜಾತ್ಯತೀತರು ಎಂದು ಕರೆದುಕೊಳ್ಳುತ್ತಾರೆ.

ಈ ಧರ್ಮ ವ್ಯಾಖ್ಯಾನ ನೋಡಿ, ನೀನು ಧರ್ಮಸಂಕಟಕ್ಕೆ ಒಳಗಾಗಬಹುದು. ನಮ್ಮ ಧರ್ಮಗ್ರಂಥಗಳಿಂದ ಸಮಾಜದಲ್ಲಿ ಶಾಂತಿಗಿಂತ ಸಮರವೇ ಹೆಚ್ಚಾಗಿದೆ ಎಂಬ ಸಂಶಯ ನಿನಗೆ ಮೂಡಬಹುದು. ಅದು ನಿಜ ಪಂಪ. ಅರ್ಜುನ ತಾನು ತನ್ನ ಬಂಧುಗಳ ಜೊತೆ ಯುದ್ಧ ಮಾಡಲಾರೆ ಎಂದು ಹೇಳಿದಾಗ ಧರ್ಮದ ರಕ್ಷಣೆಗೆ ಶ್ರೀಕೃಷ್ಣ ಪವಿತ್ರ ’ಗೀತೆ’ ಬೋಧಿಸಿ ಅರ್ಜುನ ಯುದ್ಧ ಮಾಡುವಂತೆ ಮಾಡಿದ. ಮಹಾಯುದ್ಧವೇ ನಡೆದುಹೋಯಿತು. ಅತ್ತ ಇಸ್ಲಾಂ ಧರ್ಮ ರಕ್ಷಣೆಗೆ ’ಜಿಹಾದ್‌’ ನಡೆಸುವಂತೆ ಬೊಧಿಸಲಾಯಿತು. ಇಡೀ ಜಗತ್ತೇ ಅಶಾಂತವಾಯಿತು. ಈ ರೀತಿ ಧರ್ಮಗ್ರಂಥಗಳೇ ಯುದ್ಧಗಳಿಗೆ ಕಾರಣವಾಗಿರುಮದಕ್ಕೆ ಯಾರು ಕಾರಣರೋ ಗೊತ್ತಿಲ್ಲ.

ಈ ಧರ್ಮಸೂಕ್ಷ್ಮವನ್ನು ಗಮನದಲ್ಲಿಟ್ಟುಕೊಂಡು ನೀನು ಒಂದು ಕೋಮುಸೌಹಾರ್ದ, ಜಾತ್ಯತೀತ ಭಗವದ್ಗೀತೆಯುಳ್ಳ ಮಹಾಭಾರತವನ್ನು ಬರೆಯುತ್ತೀ ಎಂಬ ನಿರೀಕ್ಷೆಯಲ್ಲಿ...

ಸೈಬರ್‌ ಕವಿ
ಗಾಂಪKannada Prabha issue dated December 5, 2005
Holy Books of Religions were preached to do War!

-

No comments: