Sunday, April 05, 2009

ಗುಡ್ ಬೈ ಕೊಲರಾಡೋ - 52 ಪುಟ Rocky ಮರಣ ಸಂಚಿಕೆ

‘ಕನ್ನಡಿಗರೇ, ಇನ್ನು ಬರೋಣವೆ?' - ಹಾಲ್ದೊಡ್ಡೇರಿಯವರು ಬರೆದ, ಜಿ.ಎ.ನರಸಿಂಹ ಮೂರ್ತಿಯವರ 'ಕಥೆಗಾರ' ಪತ್ರಿಕೆ ಕಣ್ಮುಚ್ಚಿದ ಕಥೆ ಓದಿದೆ. ಯಾಕೋ ಈ ರೀತಿ, ಪತ್ರಿಕೆಯ ಸಾವಿನ ಸುದ್ದಿ ಓದಿದ ನಂತರ, ಕೆಲ ಸಮಯ ನನ್ನನ್ನು ಖಾಲಿತನ ಆವರಿಸುತ್ತದೆ.

ಹತ್ತು ಹದಿನೈದು ವರ್ಷಗಳ ಹಿಂದೆ, ಪ್ರಜಾಮತ ಹಾಗೂ ಇಲ್ಲಸ್ಟ್ರೇಟೆಡ್ ವೀಕ್ಲಿ ಪತ್ರಿಕೆಗಳು ಹೆಚ್ಚು ಕಡಿಮೆ ಒಂದೇ ರೀತಿಯಲ್ಲಿ ಕೊನೆಯುಸಿರೆಳೆದವು. ಬದುಕುಳಿಯಲು ಆ ಎರಡೂ ಪತ್ರಿಕೆಗಳು ನಡೆಸಿದ ಕೊನೆಯ ಹೋರಾಟವನ್ನು ನಾನು ಕಣ್ಣಾರೆ ಕಂಡಿದ್ದೆ. ಈ ಘಟನೆ ನೆನಪಾದಾಗಲೆಲ್ಲ, ಯಾಕೋ - ಈಜಲು ಬಾರದ ವ್ಯಕ್ತಿ ನದಿಯಲ್ಲಿ ಮುಳುಗುತ್ತಿರುವ, ಆತ ಬದುಕುಳಿಯಲು ಪಟ ಪಟನೆ ಕೈಕಾಲು ಬಡಿಯುತ್ತಿರುವ, ಶ್ವಾಸನಾಳದಲ್ಲಿ ನೀರು ಸೇರಿ ಆತ ಉಸಿರಾಡಲು ಕಷ್ಟ ಪಡುತ್ತಿರುವ... ಹಾಗೂ ಈ ದೃಶ್ಯವನ್ನೆಲ್ಲ ನಾನು ಅಸಹಾಯಕನಾಗಿ ನೋಡುತ್ತಿರುವ - ಸಂಕಟದ ಭಾವನೆ ನನ್ನನ್ನು ಕಾಡಲಾರಂಭಿಸುತ್ತದೆ.

‘ಕನ್ನಡಿಗರೇ, ಇನ್ನು ಬರೋಣವೆ’? ಎಂಬ ಮುಖಪುಟದ ಶೀರ್ಷಿಕೆ ಓದಿದಾಗ ನನಗೆ ' ಗುಡ್ ಬೈ ಕೊಲರಾಡೋ' ಎಂಬ ತೀರಾ ಇತ್ತೀಚಿನ ಮರಣ ಶೀರ್ಷಿಕೆ ನೆನಪಾಯಿತು. ನಿಮ್ಮ ಬಳಿ ಈ ನೋವಿನ ಸುದ್ದಿಯನ್ನು ಹಂಚಿಕೊಳ್ಳೋಣ ಅನಿಸಿತು.

ಇದೇ 2009ರ ಫೆಬ್ರವರಿ 27ರಂದು ಅಮೆರಿಕದ Rocky Mountain News ಪತ್ರಿಕೆ ಕೊನೆಯುಸಿರೆಳೆಯಿತು. ಪ್ರೀತಿಯಿಂದ 'ರಾಕಿ' ಎಂದೇ ಕರೆಯಲ್ಪಡುತ್ತಿದ್ದ ಈ ಪತ್ರಿಕೆ 150ನೇ ವರ್ಷ ಆಚರಿಸಲು ಇನ್ನು ಕೇವಲ 55 ದಿನ ಬಾಕಿ ಇತ್ತು. ಆದರೆ, ಶತಮಾನದ ಕಾಲ ಗುಂಡುಕಲ್ಲಿನಂತಿದ್ದ ಆ ಪತ್ರಿಕೆ ಕೇವಲ 2 ತಿಂಗಳು ಉಸಿರು ಹಿಡಿದುಕೊಂಡಿರಲು ಸಾಧ್ಯವಾಗಲಿಲ್ಲ. ಆರ್ಥಿಕ ಸಂಕಷ್ಟದಿಂದ ಪತ್ರಿಕೆ ಅಷ್ಟು ಘಾಸಿಗೊಂಡಿತ್ತು. ಅಮೆರಿಕದಲ್ಲಿ ಪತ್ರಿಕೆಗಳ ಸ್ಥಿತಿ ಅಷ್ಟು ಗಂಭೀರವಾಗಿದೆ.

52 ಪುಟಗಳ ವಿದಾಯ ಸಂಚಿಕೆ



ಸಾಯುವ ದಿನ, 'ರಾಕಿ' ಮುಖಪುಟದಲ್ಲಿ, ಗುಡ್ ಬೈ ಕೊಲರಾಡೋ ಎಂಬ ಶೀರ್ಷಿಕೆ ಹಾಕಿ, ಓದುಗರಿಗೆ ತನ್ನ ನಿಧನ ವಾರ್ತೆಯನ್ನು ತಾನೇ ತಿಳಿಸಿತು. ತನ್ನ ಮೊದಲ ಸಂಚಿಕೆಯ ಮುಖಪುಟವನ್ನು ಮರುಮುದ್ರಿಸಿ ಮಾಸ್ಟ್ ಹೆಡ್ ಕೆಳಗೆ Final Edition - 1859 - 2009 ಎಂದು ದೊಡ್ಡದಾಗಿ ಪ್ರಕಟಿಸಿತು. ಈ ಪುಟದ ನಡುವೆ ಕೊನೆಯ ಸಂಪಾದಕೀಯ.

ಅಷ್ಟೇ ಅಲ್ಲ, ತನ್ನ 150 ವರ್ಷ ಇತಿಹಾಸದ ಸವಿನೆನಪುಗಳನ್ನೊಳಗೊಂಡ 52 ಪುಟಗಳ ವಿಶೇಷ ಸ್ಮರಣ ಸಂಚಿಕೆಯನ್ನೂ (ಮರಣ ಸಂಚಿಕೆ ಎಂದರೂ ಸರಿ) ರಾಕಿ ಅಂದು ಓದುಗರಿಗೆ ನೀಡಿತು. ಆ ಸಂಚಿಕೆ ನೋಡುವಾಗ ನನ್ನ ಕಣ್ಣೂ ತೇವವಾದದ್ದು ನಿಜ. ಆ ಸಂಚಿಕೆಯನ್ನು ನೀವೂ ಬೇಕಾದರೆ ಇಲ್ಲಿ ನೋಡಬಹುದು.

'ರಾಕಿ'ಯ ವಿರುದ್ಧ ನೂರಾರು ವರ್ಷ ಬದ್ಧವೈರಿಯಂತೆ ಸ್ಪರ್ಧಿಸಿದ್ದು "ಡೆನ್ವರ್ ಪೋಸ್ಟ್" ಎಂಬ ಇನ್ನೊಂದು ಪತ್ರಿಕೆ. ಆದರೆ, ರಾಕಿಯ ಸಾವಿನ ದಿನ, ಡೆನ್ವರ್ ಪೋಸ್ಟ್, ತನ್ನ ಮುಖಪುಟದಲ್ಲಿ, ತನ್ನ ವೈರತ್ವವನ್ನೆಲ್ಲ ಬಿಟ್ಟು ರಾಕಿಗೊಂದು ವಿದಾಯ ಸಂಪಾದಕೀಯ ಬರೆಯಿತು.

Stop the presses.
The Rocky Mountain News, one of America's great, proud newspapers, died Friday morning in Denver after a long, glorious and colorful life. It would have been 150 years old on April 23. The Rocky, as it was known affectionately, leaves a multitude of family and friends, writers and readers, adversaries and advertisers, defenders and detractors, and a dog named Marmaduke. It was not paper. It was indelible ink. Today we mourn the death and celebrate the life of the Rocky. ಪೂರ್ಣ ಪಾಠ ಇಲ್ಲಿದೆ.

Sad to say, wild war between the papers is over - ಎಂದು ಮಾಧ್ಯಮದ ಇತರ ಗಣ್ಯರು ಹಲುಬಿದರು.

ಇದಕ್ಕಿಂತಲೂ, ರಾಕಿ ಮೌಂಟನ್ ನ್ಯೂಸ್ - ಇನ್ನು ಪ್ರಕಟವಾಗುವುದಿಲ್ಲ ಎಂದು ಅದರ ಮಾಲಿಕ ತನ್ನ ಸಿಬ್ಬಂದಿಗೆ ತಿಳಿಸಿದ ಗಳಿಗೆಯನ್ನು ವಿಡಿಯೋದಲ್ಲಿ ನೋಡಿದೆ. "ಇಲ್ಲ. ಇದರಲ್ಲಿ ನಿಮ್ಮ ತಪ್ಪು ಏನೂ ಇಲ್ಲ. ನೀವು ಪತ್ರಕರ್ತರು ಅತ್ಯುತ್ತಮ ಜರ್ನಲಿಸಂ ಮೂಲಕ ಎಲ್ಲ ಪ್ರಯತ್ನ ಮಾಡಿದ್ದೀರಿ. ಆದರೆ, ಮಾರುಕಟ್ಟೆಯ ಹೊಡೆತಕ್ಕೆ ಸಿಕ್ಕು ನಾವು ಈ ಪತ್ರಿಕೆ ನಿಲ್ಲಿಸುವ ನಿರ್ಧಾರ ಮಾಡಲೇ ಬೇಕಾಗಿದೆ. ನಮಗೆ ಬದುಕಲು ಸಾಧ್ಯವೇ ಇಲ್ಲ. " - ಎಂದು ಮಾಲಿಕ ಸುದ್ದಿ ಮನೆಯಲ್ಲಿ ಹೇಳುತ್ತಿರುವಾಗ - ಆ ಪತ್ರಿಕೆಯ ಉದ್ಯೋಗಿಗಳ ಜೊತೆ ನಾನೂ ಕಣ್ಣಲ್ಲಿ ನೀರು ತುಂಬಿಕೊಂಡು ಮೌನವಾಗಿ ಅತ್ತು ಬಿಟ್ಟೆ.



ಈಗ ಮೃತಪತ್ರಿಕೆಯ ಮಾಜಿ ಸಿಬ್ಬಂದಿಗಳಲ್ಲಿ ಹಲವರು ಸೇರಿ ಕೇವಲ ಅಂತರ್ಜಾಲ ಪತ್ರಿಕೆಯನ್ನು ಆರಂಭಿಸಲು ಪ್ರಯತ್ನಿಸುತ್ತಿದ್ದಾರೆ.

ಇದನ್ನೆಲ್ಲ ಬರೆದು ಮುಗಿಸುವ ಹೊತ್ತಿಗೆ ಮತ್ತೇಕೋ ನನ್ನ ಕಣ್ಣೆಲ್ಲ ತೇವ. ಮತ್ತೆ, "ಈಜಲು ಬಾರದ ವ್ಯಕ್ತಿ ನದಿಯಲ್ಲಿ ಮುಳುಗುತ್ತಿರುವ, ಆತ ಬದುಕುಳಿಯಲು ಪಟ ಪಟನೆ ಕೈಕಾಲು ಬಡಿಯುತ್ತಿರುವ, ಶ್ವಾಸನಾಳದಲ್ಲಿ ನೀರು ಸೇರಿ ಆತ ಉಸಿರಾಡಲು ಕಷ್ಟ ಪಡುತ್ತಿರುವ..." ದೃಶ್ಯ ಕಣ್ಣ ಮುಂದೆ ಕಾಣಿಸುತ್ತಿದೆ.

3 comments:

Govinda Nelyaru said...

ಇನ್ನೊಂದು ಪತ್ರಿಕೆ ಮರಣಿಸಿದ ಸುದ್ದಿ ಕೇಳಿ ಬೇಸರವಾಯಿತು. christian science monitor ನಂತಹ ಹಲವಾರು ಪತ್ರಿಕೆಗಳು ಈಗ ಕಣ್ಮುಚ್ಚಿವೆ. ಜತೆಗೆ ಸ್ವತಂತ್ರ ಪತ್ರಿಕೋದ್ಯಮಕ್ಕೂ ವಿದಾಯ ಎನ್ನುವಂತಾಗುತ್ತದೋ ಎನ್ನುವ ಕಾಳಜಿ ಉಂಟಾಗುತ್ತದೆ.

ಚಿಕ್ಕದೊಂದು ತಿದ್ದುಪಡಿ -ಮಾಸ್ಟ್ ಹೆಡ್ ಕೆಳಗೆ Final Edition - 1959 - 2009 ಎಂದು ದೊಡ್ಡದಾಗಿ ಪ್ರಕಟಿಸಿತು ಎಂದು ಬರೆದಿದ್ದೀರಿ.

Ravi Hegde said...

ಓಹ್... ಹೌದಲ್ಲ! ತಪ್ಪು ತೋರಿಸಿದ್ದಕ್ಕೆ ಧನ್ಯವಾದಗಳು.

christian science monitor ಸ್ಥಗಿತಗೊಂಡಿದ್ದು ಇನ್ನೊಂದು ಖೇದದ ಸಂಗತಿ. ಮೊನ್ನೆ ನಾಗೇಶ್ ಹೆಗಡೆ ಕೂಡ ಈ ಸುದ್ದಿ ಕೇಳಿ ಆಘಾತ ವ್ಯಕ್ತಪಡಿಸಿದರು.

Rajani said...

ನಿಜ. ಪತ್ರಿಕೆಯೊಂದು ನಿತ್ತರೆ ಇತಿಹಾಸವೊಂದು ಸತ್ತಂತೆ