ನಿಮಗಿನ್ನೂ ಹಿಡಿದಿಲ್ಲವೇ ಈ ಹುಚ್ಚು!
‘ನಾನು ಏನೂ ಮಾಡುತ್ತಿಲ್ಲ’ ಎಂಬ ಅತ್ಯಂತ ಸಿಲ್ಲಿ ಸಂದೇಶದಿಂದ ಹಿಡಿದು ‘ನ್ಯೂಯಾರ್ಕಿನ ಕಟ್ಟಡವೊಂದರಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಹುಚ್ಚುಚ್ಚಾಗಿ ಗುಂಡುಹಾರಿಸಿ ಹತ್ತಾರು ಜನರನ್ನು ಸಾಯಿಸುತ್ತಿದ್ದಾನೆ’ ಎಂಬ ಬ್ರೇಕಿಂಗ್ ನ್ಯೂಸ್‌ವರೆಗೆ... ಟ್ವೀಟರ್ ಸೈಟಿನಲ್ಲಿ ಕೋಟಿ ಕೋಟಿ ಸಂದೇಶಗಳು ಲಭ್ಯ.
೧. ನಾನೀಗ ಕಾಫಿ ಕುಡಿಯಲು ಹೋಗ್ತಿದ್ದೇನೆ.
೨. ರಾತ್ರಿಗೆ ಏನು ಅಡಿಗೆ ಮಾಡೋಣ ಅಂತ ಯೋಚಿಸ್ತಿದ್ದೇನೆ.
೩. ಲಂಡನ್‌ನಲ್ಲೂ ಲುಂಗಿ ಉಡೋವ್ರು ಇದ್ದಾರಾ? ಯಾರಾದ್ರೂ ಹೇಳಿ ಪ್ಲೀಸ್.
೪. ಅಯ್ಯೋ... ಹೊಸೂರು ರಸ್ತೆಯತ್ತ ಈಗ ಯಾರೂ ಬರಬೇಡಿ. ಸಿಕ್ಕಾಪಟ್ಟೆ ಟ್ರಾಫಿಕ್ ಜಾಮ್.
೫. ಮೈ ಗಾಡ್. ಹೊಸೂರು ರಸ್ತೆಯಲ್ಲಿ ಬಾಂಬ್ ಸ್ಫೋಟಿಸಿದೆ. ನಾಲ್ಕೈದು ಜನಾನಾದ್ರೂ ಸತ್ತಿದ್ದಾರೆ ಅಂತ ಹೇಳ್ತಿದ್ದಾರೆ.
೬. ಕಾಪಾಡಿ... ಕಾಪಾಡಿ... ಪೊಲೀಸರು ನನ್ನನ್ನು ಅನ್ಯಾಯವಾಗಿ ಪರಪ್ಪನ ಅಗ್ರಹಾರ ಜೈಲಿಗೆ ಹಾಕಿದ್ದಾರೆ.
ಈ ಮೇಲಿನ ಅರ್ಧ ಡಜನ್ ವಾಕ್ಯಗಳನ್ನು ಓದಿದಾಗ ನಿಮಗೆ ಏನೆನ್ನಿಸಿತು?
- ನಿಮಗೆ ಏನೂ ಅನ್ನಿಸದಿದ್ದರೆ ‘ನಿಮಗೆ ವಯಸ್ಸಾಯಿತು. ಜೀವನದಲ್ಲಿ ಆಸಕ್ತಿ ಹೊರಟುಹೋಗಿದೆ’ ಅಂತ ಅರ್ಥ.
- ‘ಸ್ನಾನಾ ಮಾಡ್ಕೊಳೋ, ಪೌಡರ್ ಹಚ್ಕೋಳೋ, ಹಲ್ ಉಜ್ಕೊಳೋ’ ಎನ್ನುವ ಅಸಂಬದ್ಧ ಸಿನಿಮಾ ಹಾಡಿನಂತಿದೆ ಪಕ್ಕದ ಆರು ಸಾಲುಗಳು ಅಂತ ಅನ್ನಿಸಿದರೆ ನೀವು ಕನ್ನಡ ಸಿನೆಮಾಗೆ ಸಂಗೀತ ಸಾಹಿತ್ಯ ನೀಡಲು ಯೋಗ್ಯ ಕವಿ ಅಂತ ಅರ್ಥ.
- ಇವೆಲ್ಲ ಎಸ್‌ಎಂಎಸ್ ಸಂದೇಶ ಇರಬಹುದು ಅಂತ ನಿಮಗನ್ನಿಸಿದರೆ, ನೀವು ಮೊಬೈಲ್ ಎಕ್ಸ್ ಪರ್ಟ್ ಎಂದು ತಿಳಿಯಬಹುದು.
- ಈ ವಾಕ್ಯಗಳು ‘ಟ್ವೀಟರ್ ಸಂಭಾಷಣೆ’ ಅಂತ ನಿಮಗನ್ನಿಸಿದರೆ -ವಾರೆ ವ್ಹಾ... ನಿಮಗೆ ೨೧ನೇ ಶತಮಾನದ ಸರ್ವಜ್ಞ ಅಂತ ಬಿರುದು ನೀಡಬಹುದು!
ಟ್ವೀಟರ್ -ಸದ್ಯ ಜಗತ್ತಿಗೆ ಹುಚ್ಚು ಹಿಡಿಸಿರುವ ಇಂಟರ್‌ನೆಟ್ಟಿನ ಹೊಸ ಸೆನ್‌ಸೇಷನ್. ಜನರು-ಜನರೊಡನೆ ‘ಮಿನಿ-ಸಂದೇಶ’ಗಳನ್ನು ವಿನಿಮಯ ಮಾಡಿಕೊಳ್ಳುವ ಒಂದು ಇಂಟರ್‌ನೆಟ್ ತಾಣ. ಅಂತರ್ಜಾಲದ ಭಾಷೆಯಲ್ಲೇ ಹೇಳುವುದಾದರೆ, ‘ಮೈಕ್ರೋ ಬ್ಲಾಗಿಂಗ್’ ವೆಬ್‌ಸೈಟ್. ಒಬ್ಬರು ಇನ್ನೊಬ್ಬರೊಡನೆ ಅಥವಾ ಲಕ್ಷಾಂತರ ಜನರೊಜನೆ ಸಂಪರ್ಕ ಸಾಧಿಸಿ ಮಾಹಿತಿ ಹಂಚಿಕೊಳ್ಳುವ ಸೋಶಿಯಲ್ ನೆಟ್‌ವರ್ಕ್.
‘ನಾನು ಏನೂ ಮಾಡುತ್ತಿಲ್ಲ’ ಎಂಬ ಅತ್ಯಂತ ಸಿಲ್ಲಿ ಸಂದೇಶದಿಂದ ಹಿಡಿದು ‘ನ್ಯೂಯಾರ್ಕಿನ ಕಟ್ಟಡವೊಂದರಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಹುಚ್ಚುಚ್ಚಾಗಿ ಗುಂಡುಹಾರಿಸಿ ಹತ್ತಾರು ಜನರನ್ನು ಸಾಯಿಸುತ್ತಿದ್ದಾನೆ’ ಎಂಬ ಬ್ರೇಕಿಂಗ್ ನ್ಯೂಸ್‌ವರೆಗೆ... ಟ್ವೀಟರ್ ಸೈಟಿನಲ್ಲಿ ಕೋಟಿ ಕೋಟಿ ಸಂದೇಶಗಳು ಲಭ್ಯ.
ಟ್ವೀಟರ್ ಒಂದು ಇಂಟರ್‌ನೆಟ್ ತಾಣವಾದರೂ, ಇದಕ್ಕೆ ಮಾಹಿತಿಯನ್ನು ಮೊಬೈಲ್ ಫೋನಿನ ಮೂಲಕವೂ ಕಳಿಸಬಹುದು ಹಾಗೂ ತನಗೆ ಬಂದ ಮಾಹಿತಿಯನ್ನು ಮೊಬೈಲ್ ಫೋನಿನ ಎಸ್‌ಎಂಎಸ್ ರೂಪದಲ್ಲೂ ಪಡೆಯಬಹುದು. ಆದ್ದರಿಂದಲೇ, ಟ್ವೀಟರ್ ಸರ್ವಾಂತರ್ಮಯಿ.
ಇಂಟರ್‌ನೆಟ್ಟಿನಲ್ಲಿ ಇಂತಹ ಮಾಹಿತಿ ಮೊದಲೂ ದೊರೆಯುತ್ತಿತ್ತಲ್ಲ. ಈಗ ಟ್ವೀಟರಿನದೇನು ಮಹಾ?
ಟ್ವೀಟರ್ ಆರಂಭ ಆಗುವುದಕ್ಕಿಂತಲೂ ಮೊದಲೂ, ಇಂಟರ್‌ನೆಟ್‌ಲ್ಲಿ ಇಂತಹ ಮಾಹಿತಿ ದೊರೆಯುತ್ತಿದ್ದವು ಎನ್ನುವುದು ನಿಜ. ಆದರೆ, ಆ ಮಾಹಿತಿ ಟ್ವೀಟರ್ ಸಂದೇಶಗಳಷ್ಟು ‘ಲೈವ್’ (ನೇರ ಪ್ರಸಾರ) ಆಗಿರಲಿಲ್ಲ. ಜಗತ್ತಿನ ಯಾವುದೇ ಮಾಹಿತಿ ವ್ಯವಸ್ಥೆಗಿಂತಲೂ ಟ್ವೀಟರ್ ಹೆಚ್ಚು ಲೈವ್ ಎನ್ನೋದು ವಿಶೇಷ.
...ಒಂದು ಉದಾಹರಣೆ ನೋಡಿ:
ಕೆಲವು ತಿಂಗಳ ಹಿಂದೆ, ನ್ಯೂಯಾರ್ಕಿನ ಹಡ್ಸನ್ ನದಿಯಲ್ಲಿ ವಿಮಾನವೊಂದು ‘ಇಳಿದ’ ವಿಚಾರ ಗೊತ್ತಲ್ಲ. ಆ ಸುದ್ದಿಯನ್ನು ಮೊಟ್ಟ ಮೊದಲು ವಿಶ್ವಕ್ಕೆ ವರದಿ ಮಾಡಿದ್ದು, ಪತ್ರಿಕೆಯಲ್ಲ, ರೇಡಿಯೋ ಅಲ್ಲ, ಟೀವಿಯಲ್ಲ, ಇಂಟರ್‌ನೆಟ್ ಸೈಟುಗಳೂ ಅಲ್ಲ. ಅದೇ ನದಿಯಲ್ಲಿ ದೋಣಿ ವಿಹಾರ ಮಾಡುತ್ತಿದ್ದ ವ್ಯಕ್ತಿಯೊಬ್ಬ, ತನ್ನ ಕಣ್ಣೆದುರೇ ವಿಮಾನ ನದಿಗೆ ಇಳಿಯುತ್ತಿರುವುದನ್ನು ನೋಡಿದ. ಅರರೇ... ಇದೇನಿದು ನದಿಗೆ ವಿಮಾನ ಎಂದು ಅಚ್ಚರಿಗೊಂಡ. ತಕ್ಷಣ ಆ ಸಂದೇಶ ಹಾಗೂ ಚಿತ್ರವನ್ನು ಟ್ವೀಟರ್‌ಗೆ ಕಳಿಸಿದ. ಈ ಸುದ್ದಿಯನ್ನು ಅದೆಷ್ಟೋ ಸಾವಿರ ಜನರು ಟ್ವೀಟರಿನಲ್ಲಿ ನೋಡಿದ ಆನಂತರವಷ್ಟೇ, ರೇಡಿಯೋ, ಟೀವಿಗಳಲ್ಲಿ ಈ ಸುದ್ದಿ ಪ್ರಸಾರವಾಯಿತು. ಅದೇ ರೀತಿ, ಮುಂಬೈ ಮೇಲಿನ ಉಗ್ರರ ದಾಳಿ ಕೂಡ ಟ್ವೀಟರಿನ ಮೂಲಕ ಜಗತ್ತನ್ನು ತ್ವರಿತವಾಗಿ ತಲುಪಿತು.
ಅಂದರೆ ಇದೊಂದು ಸುದ್ದಿ ಮಾಧ್ಯಮವೇ?
ಇದನ್ನು ಖಂಡಿತ ಸುದ್ದಿ ಮಾಧ್ಯಮ ಎಂದು ಕರೆಯಬಹುದು. ಆದರೆ, ಇದು ಜನಿಸಿದಾಗ ಇದೊಂದು ಸುದ್ದಿ ಮಾಧ್ಯಮವಾಗಬಹುದು, ಕೋಟ್ಯಂತರ ಜನ ಈ ಸೇವೆಗೆ ಮುಗಿ ಬೀಳಬಹುದು ಎಂಬ ಕಲ್ಪನೆ ಇರಲಿಲ್ಲ.
ವ್ಯಕ್ತಿಯೊಬ್ಬ, ತನ್ನ ಕಚೇರಿಯಿಂದ, ಕಾರಿಂದ, ಸ್ವದೇಶದಿಂದ, ವಿದೇಶದಿಂದ, ಕಂಪ್ಯೂಟರಿಂದ, ಮೊಬೈಲ್ ಫೋನಿಂದ ಎಲ್ಲೆಂದರಲ್ಲಿಂದ ತನ್ನ ಹಾಲಿ ಸ್ಥಿತಿಯನ್ನು ಮಿತ್ರರಿಗೆ ತಿಳಿಸಲು ಅವಕಾಶ ಕಲ್ಪಿಸುವುದಷ್ಟೇ ಟ್ವೀಟರಿನ ಉದ್ದೇಶವಾಗಿತ್ತು. ‘ನಾನು ಈ ಕ್ಷಣದಲ್ಲಿ ಏನು ಮಾಡುತ್ತಿದ್ದೇನೆ? ಎಲ್ಲಿದ್ದೇನೆ? ಏನು ಚಿಂತಿಸುತ್ತಿದ್ದೇನೆ?’ -ಎಂಬ ಪುಟಾಣಿ ಮಾಹಿತಿಯನ್ನು ಗೆಳೆಯರ ಬಳಿ ಹಂಚಿಕೊಳ್ಳಲು ವೇದಿಕೆ ನೀಡುವುದಷ್ಟೇ ಟ್ವೀಟರಿನ ಯೋಜನೆಯಾಗಿತ್ತು. ಆದರೆ, ಇಂದು ಬಳಕೆದಾರರು, ತಾವೇ, ಹಲವಾರು ಉಪಯೋಗಗಳನ್ನು ಕಂಡುಕೊಂಡಿದ್ದಾರೆ.
ಟ್ವೀಟರಿನ ಉಪಯೋಗವೇನು?
೧. ಒಬಾಮಾ ಮಾದರಿ : ಅಮೆರಿಕ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ, ಲಕ್ಷಾಂತರ ಯುವಕರ ಸೇನೆ ಕಟ್ಟಲು, ಅವರೊಡನೆ ಸದಾ ಸಂಪರ್ಕದಲ್ಲಿರಲು, ಬರಾಕ್ ಒಬಾಮಾ ಈ ಸೇವೆ ಬಳಸಿಕೊಂಡಾಗಿನಿಂದ ‘ಟ್ವೀಟರ್’ ಅಮೆರಿಕದಲ್ಲಿ ಮಾತ್ರವಲ್ಲ ಜಗತ್ತಿನ ಇತರೆಡೆಯೂ ಪ್ರಸಿದ್ಧವಾಗಿದೆ. ಅಂದರೆ, ಜನನಾಯಕನೊಬ್ಬ ತನ್ನ ಬೆಂಬಲಿಗರನ್ನು ಒಟ್ಟುಗೂಡಿಸಲು ಹಾಗೂ ಅವರೊಡನೆ ಸಂಪರ್ಕದಲ್ಲಿರಲು ಟ್ವೀಟರ್ ಉಪಯೋಗವಾಗುತ್ತಿದೆ. ಒಬಾಮಾ, ಈಗ ಅಧ್ಯಕ್ಷರಾದ ಮೇಲೂ ಟ್ವೀಟರನ್ನು ವ್ಯಾಪಕವಾಗಿ ಬಳಸುತ್ತಿದ್ದಾರೆ. ಅವರ ಸಂದೇಶ ಪಡೆಯಲು, ಅವರೊಡನೆ ಸಂಪರ್ಕದಲ್ಲಿ ಇರಲು ೭ ಲಕ್ಷ ಜನ ಸದಸ್ಯರಾಗಿದ್ದಾರೆ.
ಮೊನ್ನೆ ಮೊನ್ನೆ, ಕರ್ನಾಟಕದಲ್ಲಿ, ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಹಾಗೂ ರಾಜ್ಯ ಬಿಜೆಪಿ ಘಟಕದವರು, ಟ್ವೀಟರ್ ಬಳಕೆ ಆರಂಭಿಸಿದ್ದಾರೆ. ಇದಕ್ಕಿನ್ನೂ ಹೆಚ್ಚು ಸದಸ್ಯರಿಲ್ಲ ಎನ್ನಿ. ಸಿನಿಮಾ ತಾರೆಯರು, ತಮ್ಮ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರಲು ಟ್ವೀಟರ್‌ಗಿಂತ ಉತ್ತಮ ಮಾರ್ಗ ಬೇರೊಂದಿಲ್ಲ.
೨. ಪತ್ರಿಕೆಗಳ ಮಾದರಿ : ಪತ್ರಿಕೆ, ಟೀವಿ ಚಾನಲ್‌ಗಳು ಹಾಗೂ ಇಂಟರ್‌ನೆಟ್ ಸೈಟುಗಳು ಬ್ರೆಕಿಂಗ್ ಸುದ್ದಿಗಳನ್ನು ಟ್ವೀಟರ್ ಮೂಲಕ ನೀಡಲು ಆರಂಭಿಸಿವೆ. ಓದುಗರು ಈ ಸುದ್ದಿಯನ್ನು ಇಂಟರ್‌ನೆಟ್ ಮೂಲಕ ಅಥವಾ ಮೊಬೈಲ್ ಫೋನ್ ಮೂಲಕ ಉಚಿತವಾಗಿ ಪಡೆಯಬಹುದು. ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಉಚಿತ ಟ್ವೀಟರ್ ಸೇವೆಗೆ ೪.೫ ಲಕ್ಷ ಚಂದಾದಾರರಿದ್ದಾರೆ. ಅದೇ ರೀತಿ, ಭಾರತದಲ್ಲಿ ಸಿಎನ್‌ಎನ್ ಐಬಿಎನ್, ಡಿಎನ್‌ಎ, ಇಂಡಿಯಾ ಟುಡೇಯಂಥ ಅನೇಕ ಪತ್ರಿಕೆಗಳು ಟ್ವೀಟರ್ ಸೇವೆ ಆರಂಭಿಸಿವೆ. ಅಲ್ಲದೇ, ಅನೇಕ ಪತ್ರಿಕೆಗಳು ಹಾಗೂ ಚಾನೆಲ್‌ಗಳು ಟ್ವೀಟರಿನ ಮೂಲಕ ಸಿಗುವ ಮಾಹಿತಿಯನ್ನು ತಮ್ಮ ವರದಿಗೆ ಪೂರಕವಾಗಿ ಬಳಸಿಕೊಳ್ಳುತ್ತಿವೆ.
೩. ಕಂಪನಿ ಗ್ರಾಹಕ ಸಂಪರ್ಕ ಮಾದರಿ : ಒಂದು ಕಂಪನಿ, ತನ್ನ ಗ್ರಾಹಕರೊಡನೆ ಸಂಪರ್ಕದಲ್ಲಿರಲು ಟ್ವೀಟರನ್ನು ಬಳಸಿಕೊಳ್ಳುತ್ತಿದೆ. ಉದಾಹರಣೆಗೆ ಗ್ರಾಹಕರು ಟ್ವೀಟರ್ ಮೂಲಕ ನೋಕಿಯಾ ಕಂಪನಿಯನ್ನು ಸಂಪರ್ಕಿಸಿ ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಅಥವಾ ಮಾಹಿತಿ ತರಿಸಿಕೊಳ್ಳಬಹುದು. ಗೂಗಲ್ ಕಂಪನಿಯ ಟ್ವೀಟರ್ ಸೇವೆಗೆ ೩-೪ ಲಕ್ಷ ಜನ ಸದಸ್ಯರಿದ್ದಾರೆ.
೪. ಸುಮ್ಮನೆ ಹರಟೆ ಮಾದರಿ : ಇದಲ್ಲದೇ, ಶೇ.೭೦ರಷ್ಟು ಜನ, ಟ್ವೀಟರನ್ನು ಚಾಟ್ ರೂಮಿನಂತೆ ಸುಮ್ ಸುಮ್‌ನೇ ಹರಟೆಗೆ ಬಳಸಿಕೊಳ್ಳುತ್ತಾರೆ.
೫. ಮಾಹಿತಿ ಕೇಳುವ ಮಾದರಿ : ಲಂಡನ್‌ನಲ್ಲಿ ಲುಂಗಿ ಉಡುವವರು ಇದ್ದಾರಾ ಎಂಬ ಸಿಲ್ಲಿ ಪ್ರಶ್ನೆಯಿಂದ ಹಿಡಿದು ಅತ್ಯುತ್ತಮ ವಾಷಿಂಗ್ ಮಷಿನ್ ಯಾವುದು ಎಂಬ ಗ್ರಾಹಕ ಪ್ರಶ್ನೆಯ ತನಕ ಯಾವ ಪ್ರಶ್ನೆಯನ್ನು ಬೇಕಾದರೂ ಟ್ವೀಟರ್ ಮೂಲಕ ಕೇಳಬಹುದು. ನಿಮ್ಮ ಪ್ರಶ್ನೆ ನೋಡುವ ಟ್ವೀಟಿಗರು ಉತ್ತರ ನೀಡುತ್ತಾರೆ.
ನಾವೂ ಟ್ವೀಟರ್ ಬಳಸಬೇಕೆಂದರೆ... ಹೇಗೆ? ಎಲ್ಲಿ?
ಮೊದಲು http://www.twitter.com/ ಸೈಟಿಗೆ ಹೋಗಿ. ಅಲ್ಲಿ ಹೊಸ ಸದಸ್ಯರಾಗಿ. ನಿಮ್ಮದೊಂದು ಟ್ವೀಟರ್ ಪುಟ ತಯಾರಾಗುತ್ತದೆ. ಇಲ್ಲಿ ನೀವು ಟ್ವೀಟರ್ ಸಂದೇಶ ಬರೆದರೆ, ಅವು ಒಂದರ ಕೆಳಗೆ ಒಂದರಂತೆ ದಾಖಲಾಗುತ್ತಾ ಹೋಗುತ್ತವೆ. ಹಾಗೂ ನಿಮ್ಮ ಮಿತ್ರರ ಸಂದೇಶಗಳೂ ಇಲ್ಲಿ ಕಾಣಿಸುತ್ತವೆ. ನೀವಿಲ್ಲಿ, ಹೊಸ ಹೊಸ ಮಿತ್ರರನ್ನು ಹುಡುಕಿಕೊಳ್ಳಬಹುದು. ಅವರ ಸಂದೇಶಗಳನ್ನು ನೀವು ಪಡೆಯಬಹುದು ಅಥವಾ ಇತರರು ನಿಮ್ಮ ಸಂದೇಶಗಳಿಗೆ ಚಂದಾದಾರರಾಗಬಹುದು.
ಇದು ಪುಗಸಟ್ಟೆ ಸೇವೆ. ನಿಮಗೆ ಈ ಮೇಲ್ ವಿಳಾಸ ಇದ್ದರೆ ಸಾಕು. ಫಾರಂ ತುಂಬಿದ ೨ ನಿಮಿಷದ ಒಳಗಾಗಿ ನೀವು ಟ್ವೀಟರ್ ಬಳಸಲು ಆರಂಭಿಸಬಹುದು. ನಿಮ್ಮ ಮೊಬೈಲ್ ಫೋನಿನ ಮೂಲಕವೂ ನೀವು ಟ್ವೀಟರ್ ಬಳಸಬಹುದು. ಮೊಬೈಲ್ ಬಳಸಿದರೆ, ಮೊಬೈಲ್ ಸೇವಾ ಕಂಪನಿಯ ಶುಲ್ಕವನ್ನು ಮಾತ್ರ ನೀವು ತೆರಬೇಕಾಗುತ್ತದೆ.
ಆದರೆ, ನೆನಪಿರಲಿ. ಟ್ವೀಟರ್ ಸಂದೇಶ ಚಿಕ್ಕದಾಗಿರಬೇಕು. ಈ ಸಂದೇಶದಲ್ಲಿ ೧೪೦ ಅಕ್ಷರಗಳು ಮಾತ್ರ ಇರಬಹುದು. ಆದ್ದರಿಂದ ಗಾತ್ರದಲ್ಲಿ ಚಿಕ್ಕದಾದ ಟ್ವೀಟರ್ ಸಂದೇಶವನ್ನು ಇಂಟರ್‌ನೆಟ್ಟಿನ ಎಸ್‌ಎಂಎಸ್ ರೂಪ ಅಂತ ಬೇಕಾದರೂ ಬಣ್ಣಿಸಬಹುದು.
ಟ್ವೀಟರಿನ ಒಂದು ಸಂದೇಶಕ್ಕೆ ‘ಟ್ವೀಟ್’ ಎಂದು ಹೆಸರು. ಟ್ವೀಟರ್ ಸಂದೇಶ ಕಳಿಸುವ ಕ್ರಿಯೆಗೆ ‘ಟ್ವೀಟಿಂಗ್’, ‘ಟ್ವೀಟ್ ಮಾಡುವುದು’ ಎಂದು ಹೇಳುತ್ತಾರೆ.
ಇದೆಲ್ಲಾ ಕೇಳಿದ ಮೇಲೆ, ಟ್ವೀಟರಿನಲ್ಲಿ ಅದ್ಭುತವೇನೂ ಇಲ್ಲ. ಈಮೇಲ್, ಬ್ಲಾಗಿಂಗ್ ಥರ ಇದಿನ್ನೊಂದು ಇಂಟರ್‌ನೆಟ್ ಸೇವೆ ಅಷ್ಟೇ, ಅನ್ನಿಸುತ್ತದೆ. ಆದರೆ, ಯಾಕೆ ಜಗತ್ತಿಗೆ ಟ್ವೀಟರಿನ ಹುಚ್ಚು ಹಿಡಿದಿದೆ?
ಅದೇ ಯಾರಿಗೂ ಅರ್ಥವಾಗುತ್ತಿಲ್ಲ. ಟ್ವೀಟರ್ ಕಂಪನಿಯ ಸ್ಥಾಪಕರಿಗೂ ತಮ್ಮ ಕಂಪನಿ ಇಷ್ಟು ಪ್ರಮಾಣದಲ್ಲಿ ಬೆಳೆಯುತ್ತದೆ ಎಂದು ಗೊತ್ತಿರಲಿಲ್ಲ. ಕೇವಲ ೨ ವರ್ಷದಲ್ಲಿ ಟ್ವೀಟರಿಗೆ ೭೦-೮೦ ಲಕ್ಷ ಸದಸ್ಯರಾಗಿಬಿಟ್ಟಿದ್ದಾರೆ. ಎರಡು ವರ್ಷದಲ್ಲಿ ಕಂಪನಿ ಶೇ.೧೪೦೦ರಷ್ಟು ಬೆಳವಣಿಗೆ ಸಾಧಿಸಿದೆ. ಇಷ್ಟು ಕಡಿಮೆ ಅವಧಿಯಲ್ಲಿ, ಇಷ್ಟು ವೇಗದಲ್ಲಿ ಜನಪ್ರಿಯವಾದ ಇಂಟರ್‌ನೆಟ್ ಸೇವೆ ಬೇರೊಂದಿಲ್ಲ.
ಟ್ವೀಟರ್ ಯಶಸ್ಸಿನ ನಂತರ ಅಂತಹ ಇನ್ನೂ ಅನೇಕ ಮೈಕ್ರೋ ಬ್ಲಾಗಿಂಗ್ ಸೇವೆ ಆರಂಭವಾದವು. ಆದರೆ, ಯಾವುದೂ ಟ್ವೀಟರಂತೆ ಜನಪ್ರಿಯವಾಗಿಲ್ಲ. (ಚೀನಾದಲ್ಲಿ ಮಾತ್ರ ಅಸಲಿ ಟ್ವೀಟರ್‌ಗಿಂತ ಮೇಡ್-ಇನ್-ಚೈನಾ ಟ್ವೀಟರ್ರ್‍ಏ ಜನಪ್ರಿಯ. ಇದು ಅವರ ದೇಶಪ್ರೇಮಕ್ಕೆ ಸಾಕ್ಷಿ.)
ವಿಚಿತ್ರವೆಂದರೆ, ಟ್ವೀಟರಿಗೆ ಸದ್ಯ ಒಂದು ನಯಾಪೈಸೆ ಆದಾಯವೂ ಇಲ್ಲ. ಪ್ರತಿ ವರ್ಷ ಕೋಟ್ಯಂತರ ಡಾಲರ್ ಖರ್ಚಾಗುತ್ತಿದೆ. ಟ್ವೀಟರ್ ಇನ್ನು ಮುಂದಾದರೂ ಹೇಗೆ ಲಾಭ ಮಾಡುತ್ತದೆ ಎಂದು ಯಾರಿಗೂ ಅರ್ಥವಾಗುತ್ತಿಲ್ಲ.
ಈ ನಡುವೆ, ಜನಪ್ರಿಯತೆ ನೋಡಿ, ೫೦ ಕೋಟಿ ಡಾಲರಿಗೆ ಟ್ವೀಟರನ್ನು ಕೊಳ್ಳಲು ಫೇಸ್‌ಬುಕ್ ಕಂಪನಿ ಮುಂದಾಯಿತು. ಆದರೆ, ಟ್ವೀಟರ್ ಒಪ್ಪಲಿಲ್ಲ. ಬ್ಲಾಗರ್, ಗೂಗಲ್ ಅರ್ಥ್ (ಕೀಹೋಲ್), ಪಿಕಾಸಾ ಮುಂತಾದ ಕಂಪನಿಗಳನ್ನು ಈಗಾಗಲೇ ಗುಳುಂ ಮಾಡಿರುವ ದೈತ್ಯ ಕಂಪನಿ ಗೂಗಲ್, ಈಗ ಟ್ವೀಟರನ್ನು ಕೊಳ್ಳಲು ಆಸೆಪಟ್ಟಿದೆಯೆಂಬ ಸುದ್ದಿಯಿದೆ. ಆದರೆ, ಕಂಪನಿಯನ್ನು ಮಾರಲು ಟ್ವೀಟರ್ ಇನ್ನೂ ಮನಸ್ಸು ಮಾಡಿಲ್ಲ. ಆ ಬ್ರೇಕಿಂಗ್ ನ್ಯೂಸ್ ಬೇಕೆಂದರೆ ಟ್ವೀಟರಿಗೆ ಸದಸ್ಯರಾಗಿ.
ಹ್ಯಾಪಿ ಟ್ವೀಟಿಂಗ್.
Follow Me on www.Twitter.com/RaviHegde
5 comments:
ಲೇಖನ ಚೆನ್ನಾಗಿದೆ. ಟ್ವಿಟ್ಟರ‍್ ಬಗ್ಗೆ ಒಂದು ಲೇಖನ ಬರೆಯಬೇಕೆಂದುಕೊಂಡು ಕಳೆದ ಆರು ತಿಂಗಳುಗಳಿಂದ ಮಾಹಿತಿ ಸಂಗ್ರಹಿಸುತ್ತಲೇ ಇದ್ದೇನೆ. ಅದು ಈಗ ಎಷ್ಟಾಗಿದೆಯೆಂದರೆ ಒಂದು ಪುಸ್ತಕವನ್ನೇ ಬರೆಯಬಹುದು :)
ಟ್ವಿಟ್ಟರ‍್ ಸಾಲುಗಳನ್ನು ಕನ್ನಡ ಸಿನಿಮಾ ಹಾಡಿನ ಅಸಂಬದ್ಧ ಸಾಲುಗಳಿಗೆ ಹೋಲಿಸಿದ್ದು ತುಂಬ ಸೂಕ್ತವಾಗಿದೆ.
-ಪವನಜ
Chennagide nimma prachara vaikhari! Adyavudo ning aytu, eega twitter!?
ಲೇಖನ ಓದಿ ಕುಶಿಯಾಯಿತು. ಮೊದಲು vakow.com ಮೂಲಕ ಸಂದೇಶ ಕಳುಹಿಸಲು ಸಾದ್ಯವಾಗುತಿತ್ತು. ಅದರದು ೧೦ ಅಂಕೆಯ ಮೊಬೈಲ್ ಸಂಖ್ಯೆ. ಆದುದರಿಂದ ಮಾಮೂಲಿ ದರ. ಈಗ ಅದು ಬಾಗಿಲು ಹಾಕಿದೆ.
Awesome! That Is What I can Say!
Kannada li ishtu channagi baribahuda antha ascharya aythu!
thousand thanks to the author!!
i am ur serious fan!!
kannada rocks!!
twitter too!
i am already following u on twitter!
my twitter link is http://twitter.com/che2on
ಇವತ್ತಿನ ಸಾಪ್ತಾಹಿಕ ಪ್ರಭದಲ್ಲಿ ಟ್ವೀಟರ್ ಬಗೆಗಿನ ನಿಮ್ಮ ಲೇಖನ ಬಹಳ ಚೆನ್ನಾಗಿತ್ತು. ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಬರಹಗಳು ಕುತೂಹಲಕರವಾಗಿಯೂ ಇರಬಲ್ಲವು ಅನ್ನುವುದಕ್ಕೆ ನಿಮ್ಮ ಲೇಖನಗಳೆ ಸಾಕ್ಷಿ.
ವಿಜ್ಞಾನ ತಂತ್ರಜ್ಞಾನಕ್ಕೆ ಇಷ್ಟೊಂದು ಜಾಗ ಕೊಡುತ್ತಿರುವ ಕನ್ನಡಪ್ರಭಕ್ಕೂ ಅಭಿನಂದನೆಗಳು. ಅಂದಹಾಗೆ ಕನ್ನಡಪ್ರಭದ ಅಷ್ಟೊಂದು ಪುಟಾಣಿ ಪುರವಣಿಗಳಲ್ಲೊಂದು ವಿಜ್ಞಾನ-ತಂತ್ರಜ್ಞಾನಕ್ಕೂ ಮೀಸಲಾಗಿರಬಾರದೇಕೆ?
Post a Comment