Wednesday, April 08, 2009

ಗೂಗಲ್ ಮತ್ತು ಪತ್ರಿಕೆಗಳ ನಡುವೆ ಯುದ್ಧಾರಂಭ

ಹೀಗಾಗುತ್ತೆ ಅಂತ ನನಗೆ ಅನಿಸಿತ್ತು. ಒಂದಲ್ಲಾ ಒಂದು ದಿನ ಪತ್ರಿಕೆಗಳು ಹಾಗೂ ಗೂಗಲ್ ನಡುವೆ ಯುದ್ಧವಾಗುತ್ತದೆ ಅಂತ ನನಗೆ ಯಾಕೋ ತೀವ್ರ ಅನುಮಾನ ಶುರುವಾಗಿತ್ತು. ಅದೀಗ ನಿಜವಾಗಿದೆ. ಗೂಗಲ್ ಹಾಗೂ ಅಮೆರಿಕದ ಪತ್ರಿಕೆಗಳ ನಡುವೆ ಕಳೆದ 3-4 ವರ್ಷಗಳಿಂದ ಶೀತಲ ಸಮರ ನಡೆಯುತ್ತಿತ್ತು. ಆದರೆ, ಗೂಗಲ್, ಅಮೆರಿಕದಲ್ಲಿ, ಕಳೆದ ವಾರದಿಂದ ತನ್ನ ನ್ಯೂಸ್ ಸೈಟಿನಲ್ಲಿ ಜಾಹೀರಾತು ಪ್ರಕಟಿಸಲು ಶುರು ಮಾಡಿದ್ದೇ ತಡ, ಬಹಿರಂಗ ಸಮರ ಆರಂಭವಾಗಿದೆ.

1. ವಿಶ್ವದ ಮಾಧ್ಯಮ ಸಾಮ್ರಾಟ ರೂಪರ್ಟ್ ಮರ್ಡೋಕ್, ಕಳೆದ ವಾರ, ಗೂಗಲ್ ವಿರುದ್ಧ ಕೆಂಡ ಕಾರಿದ್ದ. "ಅಂತರ್ಜಾಲದ ಸುದ್ದಿ ಓದುಗರು ಇನ್ನು ದುಡ್ಡು ಕೊಡಬೇಕು. ಗೂಗಲ್ಲಿನಂಥ ಪರಾವಲಂಬಿಗಳು ಪುಗಸಟ್ಟೆ ನಮ್ಮ ಶ್ರಮವನ್ನು ಬಳಸಿಕೊಂಡು ತಾವು ಲಾಭ ಮಾಡಿಕೊಳ್ಳಲು ಅನುವು ಮಾಡಿಕೊಡಬಾರದು. ಅಮೆರಿಕದ ಪತ್ರಿಕೆಗಳೆಲ್ಲ ಧೈರ್ಯ ಮಾಡಬೇಕು. ಮಾಧ್ಯಮಗಳ ಸುದ್ದಿ ಕದಿಯದಂತೆ ಗೂಗಲ್ಲಿಗೆ ಕಡಿವಾಣ ಹಾಕಬೇಕು." ಎಂದು ಆತ ಕಟುವಾಗೇ ಅಬ್ಬರಿಸಿದ್ದ.

"ಗೂಗಲ್ ನ್ಯೂಸ್ ಜೀವಿಸಿರುವುದೇ ನಮ್ಮಂಥ ಪತ್ರಿಕೆಗಳಿಂದ. ಆದರೆ, ಇಂದು ಗೂಗಲ್ ಎಷ್ಟು ದೊಡ್ಡ ರಾಕ್ಷಸ ಆಗಿದೆ ಎಂದರೆ, ಪತ್ರಿಕೆಗಳನ್ನೇ ನುಂಗಿಹಾಕುತ್ತಿದೆ. ಈಗಾಗಲೂ, ಪತ್ರಿಕೆಗಳು ಒಗ್ಗಟ್ಟಾಗಿ ಗೂಗಲ್ಲನ್ನು ಎದುರಿಸಬೇಕು." ಎಂದು ಆತ ಕರೆ ಕೊಟ್ಟಿದ್ದ.

"ಗೂಗಲ್ ನ್ಯೂಸ್ ತನ್ನ ಸರ್ಚ್ ಲಿಂಕ್ ಮೂಲಕ ನಮ್ಮ ಅಂತರ್ಜಾಲ ಸುದ್ದಿ ತಾಣಕ್ಕೆ ಓದುಗರನ್ನು ಕಳಿಸುತ್ತದೆ ನಿಜ. ಆದರೆ, ಆ ಓದುಗರು ನಮ್ಮ ತಾಣಕ್ಕೆ ಹೊರೆಯಾಗುತ್ತರೆಯೇ ಹೊರತು ಅವರಿಂದ ನಯಾ ಪೈಸೆ ಲಾಭವಿಲ್ಲ."

If a user can’t find the content that’s most relevant to them from a search engine, that search engine is useless. Relevance is everything – and that works both ways. Taking their content out of Google would hurt a newspaper (unless they’re making nothing from the page view), but it would hurt Google too.

"ನೆನಪಿರಲಿ, ನಮಗೆ ಗೂಗಲ್ ಎಷ್ಟು ಅನಿವಾರ್ಯ ಎಂದು ಅನಿಸುತ್ತಿದೆಯೋ ಗೂಗಲ್ಲಿಗೂ ನಾವು ಅಷ್ಟೇ ಅನಿವಾರ್ಯ. ನಮ್ಮಂಥವರ ವಿಶ್ವಾಸಾರ್ಹ ಕಾಂಟೆಂಟ್ ಇಲ್ಲದಿದ್ದರೆ ಗೂಗಲ್ ನ್ಯೂಸ್ ಸೈಟಿಗೂ ಜನಹೋಗುವುದಿಲ್ಲ. ಚಿಲ್ಲರೆ ಸೈಟುಗಳ ಸುದ್ದಿಯಿಂದ ಗೂಗಲ್ ನ್ಯೂಸ್ ನಡೆಯುವುದಿಲ್ಲ. ಆದ್ದರಿಂದ, ಅಮೆರಿಕದ ಪತ್ರಿಕೆಗಳು ಗೂಗಲ್ಲನ್ನು ಎದುರಿಸಲು ಇದು ಸಕಾಲ" ಎಂದು ಮರ್ಡೋಕ್ ಯುದ್ಧದ ಪಾಂಚಜನ್ಯ ಮೊಳಗಿಸಿದ್ದಾನೆ.

2. ಮಂಗಳವಾರ ಗೂಗಲ್ ಮೇಲೆ ಇನ್ನೊಂದು ನೇರ ಆಕ್ರಮಣ. ಈಗ ಅಮೆರಿಕದ ಅತಿ ದೊಡ್ಡ ಸುದ್ದಿ ಸಂಸ್ಥೆ AP - ಅಸೋಸಿಯೇಟೆಡ್ ಪ್ರೆಸ್ಸಿಂದ.

ಈ ಸಂಸ್ಥೆ ಪತ್ರಿಕಾ ಹೇಳಿಕೆ ನೀಡಿ ತನ್ನ ಇಂಟರ್ನೆಟ್ ಕಾಂಟೆಂಟಿನ ಹಕ್ಕು ಸ್ವಾಮ್ಯ ರಕ್ಷಣೆಗೆ ಏನು ಬೇಕೋ ಎಲ್ಲಾ ಕ್ರಮಗಳನ್ನೂ ಕೈಗೊಳ್ಳುವುದಾಗಿ ತಿಳಿಸಿದೆ. ಹೇಳಿಕೆಯಲ್ಲಿ ಗೂಗಲ್ಲನ್ನು ನೇರವಾಗಿ ಹೆಸರಿಸಿಲ್ಲ. ಆದರೆ, ಅಂಥ ನ್ಯೂಸ್ ಅಗ್ರಿಗೇಟರುಗಳು, ಪುಗಸಟ್ಟೆಯಾಗಿ ತಮ್ಮ ಸುದ್ದಿಯನ್ನು ಬಳಸಿಕೊಳ್ಳುವುದನ್ನು ತಡೆಯುವುದಾಗಿ ಹೇಳಿದೆ. ತನ್ನ ಪ್ರಯತ್ನದಲ್ಲಿ ಪಾಲ್ಗೊಳ್ಳಲು ಇತರ ಪತ್ರಿಕೆಗಳೂ ಮುಂದಾಗಬೇಕು ಎಂದು ಎಪಿ ಕರೆ ನೀಡಿದೆ.

The board also unanimously agreed to work with portals and other partners who legally license our content and who reward the cooperative for its vast newsgathering efforts — and to seek legal and legislative remedies against those who don't. We believe all of your newspapers will join our battle to protect our content and receive appropriate compensation for it.

(ಪತ್ರಿಕಾ ಪ್ರಕಟಣೆ ಇಲ್ಲಿದೆ.)

3. ಇತ್ತ, ಗೂಗಲ್ ಸುಮ್ಮನೆ ಕುಳಿತಿಲ್ಲ. ಎಪಿ ಹೇಳಿಕೆಗೆ ತೀಕ್ಷ್ಣವಾಗಿ ಮರು ಹೇಳಿಕೆ ನೀಡಿದೆ. "ನಾವು ಕಾಪಿರೈಟ್ ಉಲ್ಲಂಘಿಸುತ್ತಿಲ್ಲ. ಅಮೆರಿಕದ ಕಾಪಿರೈಟ್ ಕಾನೂನಿನ ಪ್ರಕಾರ, ಯಾವುದೇ ಸುದ್ದಿಯ ತುಣುಕನ್ನು ಹಾಗೂ ಲಿಂಕನ್ನು ಪ್ರಕಟಿಸಲು ಗೂಗಲ್ಲಿಗೆ ಅವಕಾಶವಿದೆ. ಇದನ್ನು ತಡೆಯುವ ವಿಟೋ ಹಕ್ಕು ಮಾಧ್ಯಮಗಳಿಗೆ ಇಲ್ಲ. ಆದರೂ, ಅಮೆರಿಕದ ಯಾವುದೇ ಪತ್ರಿಕೆಯೂ ತನ್ನ ಕಾಂಟೆಂಟನ್ನು ಗೂಗಲ್ಲಿನಿಂದ ತೆಗೆದುಹಾಕಬಹುದಾದ ಅವಕಾಶವನ್ನು ನಾವು ಕಲ್ಪಿಸಿದ್ದೇವೆ. ಸುಮ್ಮನೇ, robot.txt ಬಳಸಿದರೆ ಸಾಕು. ನಾವು ಅಂತಹ ಪತ್ರಿಕೆಯ ತಂಟೆಗೆ ಹೋಗುವುದಿಲ್ಲ." ಎಂದು ಗೂಗಲ್ ತನ್ನ ಎದುರಾಳಿಗಳನ್ನು ಚಿವುಟಿದೆ. (ಯೂ ಕ್ಯಾನ್ ಗೆಟ್ ಔಟ್. ವಿ ಡೋಂಟ್ ಕೇರ್ ಎಂಬ ವಾಕ್ಯ ಮಾತ್ರ ಇಲ್ಲ.)

"ಈಗ ನೀವೇನೂ ಮಾಡಲಾಗುವುದಿಲ್ಲ. ಏಕೆಂದರೆ ಟಿಕೆಟ್ಸ್ ಆರ್ ಸೋಲ್ಡ್ ಔಟ್ !" - ಎಂಬ ಪರೋಕ್ಷ ಉದಾಹರಣೆಯ ಮೂಲಕ "ದೊಡ್ಡ ಪತ್ರಿಕೆಗಳು ಹಾಗೂ ದೊಡ್ಡ ಸುದ್ದಿಸಂಸ್ಥೆಗಳು ಇಲ್ಲದಿದ್ದರೆ ನಾವು ಸ್ಥಳೀಯ ಪತ್ರಿಕೆಗಳು ಹಾಗೂ ಸ್ಥಳೀಯ ಸುದ್ದಿ ಮೂಲಗಳನ್ನು ಬಳಸಿಕೊಳ್ಳುತ್ತೇವೆ ಎಂಬ ಇಂಗಿತವನ್ನು ಗೂಗಲ್ ವ್ಯಕ್ತಪಡಿಸಿದೆ. (ಯಥಾ ಪ್ರತಿ ಇಲ್ಲಿ ನೋಡಿ)

4. ಅಮೆರಿಕದ ಎಲ್ಲ ಪತ್ರಿಕೆಗಳು ಹಾಗೂ ಸುದ್ದಿ ಸಂಸ್ಥೆಗಳು ಒಂದಾದರೆ ಗೂಗಲ್ ನ್ಯೂಸನ್ನು ಮಣಿಸುವುದು ಹಾಗೂ ಮುದ್ರಣ ಮಾಧ್ಯವನ್ನು ಸಾಯದಂತೆ ತಡೆಯುವುದು ಕಷ್ಟವೇನಲ್ಲ. ಆದರೆ, ಅಂತಹ ಒಗ್ಗಟ್ಟು ಅಮೆರಿಕದಂಥ ದೇಶದಲ್ಲಿ ಬರುವುದು ಕಷ್ಟ. ಏಕೆಂದರೆ, ಅದೊಂದು ಕ್ಯಾಪಿಟಲಿಸ್ಟಿಕ್ ಇಕಾನಮಿಯ ದೇಶ. ಆ ಆರ್ಥಿಕ ಪದ್ಧತಿಯಲ್ಲಿ ಒಂದು ಮೀನನ್ನು ಇನ್ನೊಂದು ಮೀನು ತಿಂದು ಬದುಕುತ್ತಿರುತ್ತದೆ. ಹಾಗಾಗಿ, 10 ಪತ್ರಿಕೆಗಳು ಗೂಗಲ್ಲಿನಿಂದ ಹೊರ ಹೋದರೆ, ಆ ಸ್ಥಾನವನ್ನು ಇನ್ನು 10 ಪತ್ರಿಕೆಗಳು ಆಕ್ರಮಿಸಿಕೊಳ್ಳಲು ಗೂಗಲ್ ಜೊತೆ ಕೈಜೋಡಿಸುತ್ತವೆ. ರೂಪರ್ಟ್ ಮರ್ಡೋಕ್ ಹಾಗೂ ಎಪಿಗೆ ಗೂಗಲ್ ಹೇಳಿದ್ದು ಇದನ್ನೇ - ನೀವು ಬೇಕಾದರೆ ಗೂಗಲ್ ಬಿಟ್ಟು ತೊಲಗಿ. ನಮಗೆ ಇನ್ನೂ ಬೇಕಾದಷ್ಟು ಪತ್ರಿಕೆ ಹಾಗೂ ಸುದ್ದಿ ಮೂಲಗಳು ಇವೆ - ಅಂತ.

ಈ ಸಮರ ಎಲ್ಲಿಗೆ ಹೋಗಿ ಮಟ್ಟುತ್ತದೆ?

ಪ್ರಕರಣ ಅಮೆರಿಕದ ಸುಪ್ರೀಂ ಕೋರ್ಟಿಗೆ ಹೋಗುತ್ತದೆ. ನ್ಯೂಯಾರ್ಕ್ ಟೈಮ್ಸಿನಂಥ ಪತ್ರಿಕೆಗೆ ಅಲ್ಲಿ ಸೋಲಾಗುತ್ತದೆ. ಆ ಪತ್ರಿಕೆ ಇಂಟರ್ನೆಟ್ ಆವೃತ್ತಿಯನ್ನೇ ಸ್ಥಗಿತಗೊಳಿಸುತ್ತದೆ. ಗೂಗಲ್ ಇನ್ನೂ ಬಲಗೊಂಡು EPICಎಂಬ ಸೇವೆ ಆರಂಭಿಸುತ್ತದೆ.... ಇದನ್ನೆಲ್ಲಾ ಭವಿಷ್ಯ ಹೇಳಿರುವ ಹಳೆಯ ಇಂಟರ್ನೆಟ್ ವಿಡಿಯೋ ಒಂದು ನೆನಪಾಗುತ್ತಿದೆ. Future of Media - Googlezon / EPIC 2015 ಎಂಬ 10 ನಿಮಿಷದ ವಿಡಿಯೋ ಅದು. ಮುಂದೇನಾಗಬಹುದು ಎಂಬುದನ್ನು ಕಲ್ಪನೆ ಮಾಡಿಕೊಂಡು 2004ರಲ್ಲೇ ಸಿದ್ಧಗೊಳಿಸಿದ (EPIC 2014) ಅದ್ಭುತ ವಿಡಿಯೋ. 2007ರಲ್ಲಿ ಅಪ್ಡೇಟ್ ಆಗಿದೆ. ಅಕ್ಷರಃ ಭವಿಷ್ಯ ನಿಜ ಆಗುತ್ತೆ ಅಂತಲ್ಲ. ಆದರೆ, ಸದ್ಯ ಅಮೆರಿಕದ ಪತ್ರಿಕೋದ್ಯಮ ಘಟನೆಗಳು ಅದರ ದಿಕ್ಕಿನಲ್ಲೇ ಸಾಗುತ್ತಿದೆ ಅನ್ನುವುದಂತೂ ನಿಜ. ಪತ್ರಿಕೋದ್ಯಮದಲ್ಲಿ ಇರುವ ನಾವು ನೋಡಲೇಬೇಕಾದ ವಿಡಿಯೋ ಇದು. (ನಿಮಗೆ ಯೂಟ್ಯೂಬ್ ನಿಷೇಧವಿದ್ದರೆ ಈ ಲಿಂಕ್ ನೋಡಿ)

No comments: