Tuesday, November 15, 2005

ಕಂಚಿ ಸ್ವಾಮಿಗಿಲ್ಲದ ರಾಷ್ಟ್ರಪತಿ ಕ್ಷಮಾದಾನ ಅಬು ಸಲೇಂಗೆ!

ಗಲ್ಲು ಶಿಕ್ಷೆಯಿಂದ ಪಾರುಮಾಡುಮದು ಸರ್ಕಾರಕ್ಕೇ ಅನಿವಾರ್ಯ:
ಮೋನಿಕಾ ಬೇಡಿಗೆ ಅಬು ಸಲೇಂ ರಹಸ್ಯ ಪತ್ರ


ಕೋರ್ಟು, ನಮಗೆ ಗಲ್ಲು ಶಿಕ್ಷೆ ವಿಧಿಸಿದರೂ ರಾಷ್ಟ್ರಪತಿ ಕ್ಷಮಾದಾನ ನೀಡಿ ನಮ್ಮನ್ನು ಗಲ್ಲು ಶಿಕ್ಷೆಯಿಂದ ಪಾರುಮಾಡುತ್ತಾರೆ. ಅವರು ಪಾರು ಮಾಡಲೇ ಬೇಕಾಗುತ್ತದೆ. ಯಾಕೆಂದರೆ, ಇದು ಭಾರತ ಸರ್ಕಾರ ಪೋರ್ಚುಗಲ್‌ ಸರ್ಕಾರಕ್ಕೆ ನೀಡಿದ ಲಿಖಿತ ಭರವಸೆಯ ಪ್ರಶ್ನೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಸರ್ಕಾರದ ವಿಶ್ವಾಸಾರ್ಹತೆಯ ವಿಷಯ.


ಮೋನಿ ಡಾರ್ಲಿಂಗ್‌,
ಮುಂಬೈ ಸ್ಫೋಟ, ಗುಲ್‌ಶನ್‌ ಕುಮಾರನ್ನ ಮಟಾಷ್‌ ಮಾಡಿದ್ದೂ ಸೇರಿ... ಸುಮಾರು ೬೦ ಪ್ರಕರಣಕ್ಕೆ ಸಂಬಂಧಿಸಿ ನನ್ನನ್ನು ಸಿಬಿಐನವರು ಹಿಡಿದು ಹಾಕಿದ್ದಾರೆ. ಇಲ್ಲಿಗೆ ನಮ್ಮ ಕಥೆ ಮುಗೀತು ಅಂತ ಭಯ ಪಟ್ಕೋಬೇಡ ಮೇರಿ ಜಾನ್‌. ಇವರು ನಮಗೆ ಏನೂ ಮಾಡೋಲ್ಲ. ಕೋರ್ಟಿನಿಂದಲೂ ಏನೂ ಮಾಡೋಕೆ ಆಗೋಲ್ಲ. ನಮ್ಮ ರಕ್ಷಣೆಯ ಭಾರವನ್ನು ಭಾರತ ಸರ್ಕಾರವೇ ಹೊತ್ತಿದೆ. ಸಾಲದೂ ಅಂತ ಪೋರ್ಚುಗಲ್‌ ಸರ್ಕಾರ, ಯೂರೋಪಿಯನ್‌ ಒಕ್ಕೂಟ, ವಿಶ್ವಸಂಸ್ಥೆ ಎಲ್ಲವೂ ನಮ್ಮ ಪರವಾಗೇ ನಿಂತಿವೆ. ಇನ್‌ ಫ್ಯಾಕ್ಟ್‌, ಕಂಚಿ ಸ್ವಾಮೀಜಿಗಿಂತ ನಾವೇ ಸೇಫ್‌ ಗೊತ್ತಾ?

ಕೊಲೆ ಮಾಡಿದ ಆರೋಪ ಸಾಬೀತಾದರೆ, ಕಂಚಿ ಸ್ವಾಮೀಜಿಗೆ ಗಲ್ಲು ಶಿಕ್ಷೆ ಗ್ಯಾರಂಟಿಯಂತೆ. ಯಾಕೆಂದರೆ, ಸಮಾಜಕ್ಕೆ ಮಾರ್ಗದರ್ಶನ ಮಾಡುವವರು, ಜನರಿಗೆ ಮಾದರಿಯಾಗಿ ಇರುವವರು, ಸಮಾಜದಲ್ಲಿ... ಅಂಥ ದೊಡ್ಡ ಸ್ಥಾನದಲ್ಲಿ ಇರುವವರೇ ನಮ್ಮ ಥರ ಕೊಲೆ, ಗಿಲೆ ಮಾಡಿಕೊಂಡಿದ್ದರೆ ಅವರನ್ನು ಕ್ಷಮಿಸಲು ಹೇಗೆ ಸಾಧ್ಯ?

ಆದರೆ, ನಮ್ಮ ಕೇಸ್‌ ಬೇರೆ. ‘ಪಾಪ... ಏನೋ ದಾರಿ ತಪ್ಪಿದ ಮಕ್ಕಳು. ಯಾಮದೋ ಗಳಿಗೆಯಲ್ಲಿ ತಪುý್ಪ ದಾರಿ ಹಿಡಿದಿದ್ದಾರೆ. ಈಗ ತಪ್ಪಿನ ಅರಿವಾಗಿದೆ. ತಪುý್ಪ ತಿದ್ದಿಕೊಳ್ಳಲು ಒಂದು ಅವಕಾಶ ಕೊಡಿ. ಮುಂದೆ ಅವರು ಸರಿಯಾಗ್ತಾರೆ.’ ಅಂತ ನಮ್ಮ ಪರವಾಗಿ ಇಡೀ ದೇಶದ ಬುದ್ಧಿಜೀವಿಗಳೇ ವಾದಿಸುತ್ತಾರೆ ನೋಡುತ್ತಿರು.

ಅಲ್ಲದೇ, ಪೊಲೀಸರು ನಮ್ಮ ಬಾಯಿ ಬಿಡಿಸಲು ನಮಗೆ ಹಿಂಸೆ ಕೊಡುವಂತೆಯೂ ಇಲ್ಲ. ಯಾಕೆಂದರೆ, ಅವರು ಹಾಗೆ ಮಾಡಿದರೆ ಅದು ಮಾನವ ಹಕ್ಕಿನ ಉಲ್ಲಂಘನೆಯಾಗುತ್ತದೆ. ಅದಕ್ಕಾಗಿ, ಮಾನವ ಹಕ್ಕು ಹೋರಾಟಗಾರರೂ ನಮ್ಮ ಪರವಾಗೇ ಹೋರಾಟ ಮಾಡುತ್ತಾರೆ. ವೀರಪ್ಪನ್‌ನ ‘ಮಾನವ ಹಕ್ಕಿಗಾಗೇ’ ಹೋರಾಟ ಮಾಡಿದ ಇವರೆಲ್ಲ ನಮ್ಮ ರಕ್ಷಣೆಗೂ ಬಾರದೇ ಇರುತ್ತಾರಾ!

ಅದಕ್ಕಿಂತ ಹೆಚ್ಚಾಗಿ ನಮಗೆ ಭಾರತ ಮತ್ತು ಪೋರ್ಚುಗಲ್‌... ಎರಡೂ ಸರ್ಕಾರದ ರಕ್ಷಣೆಯಿದೆ ಬಿಡು.

‘ಇವರಿಬ್ಬರಿಗೂ ಗಲ್ಲು ಶಿಕ್ಷೆ ವಿಧಿಸೋಲ್ಲ. ೨೫ ವರ್ಷಕ್ಕಿಂತ ಹೆಚ್ಚು ಜೈಲು ಶಿಕ್ಷೆಯನ್ನೂ ಕೊಡೋಲ್ಲ’... ಅಂತ ಭಾರತ ಸರ್ಕಾರದ ಪರವಾಗಿ ಆಗಿನ ಪ್ರಧಾನಿ ವಾಜಪೇಯೀಜಿ ಪೋರ್ಚುಗಲ್‌ ಸರ್ಕಾರಕ್ಕೆ ಲಿಖಿತ ಭರವಸೆ ಕೊಟ್ಟಿದ್ದರಿಂದ ತಾನೆ ನಮ್ಮನ್ನು ಆ ಸರ್ಕಾರ ಭಾರತದ ವಶಕ್ಕೆ ಕೊಟ್ಟಿದ್ದು. ಒಂದು ವೇಳೆ ಭಾರತ ಈ ರೀತಿ ಭರವಸೆ ಕೊಡದೇ ಇದ್ದಿದ್ದರೆ ಪೋರ್ಚುಗಲ್‌ ಸರ್ಕಾರ ನಮ್ಮನ್ನು ಭಾರತದ ವಶಕ್ಕೆ ನೀಡುತ್ತಲೇ ಇರಲಿಲ್ಲ. ಏಕೆಂದರೆ, ಯೂರೋಪಿನ ದೇಶಗಳಲ್ಲಿ ಗಲ್ಲು ಶಿಕ್ಷೆಯೂ ಇಲ್ಲ. ೨೫ ವರ್ಷಕ್ಕಿಂತ ದೀರ್ಘ ಕಾಲದ ಜೈಲು ಶಿಕ್ಷೆಯೂ ಇಲ್ಲ. ಆದ್ದರಿಂದ ಗಲ್ಲು ಶಿಕ್ಷೆಯಿರುವ ದೇಶಗಳಿಗೆ ಯುರೋಪ್‌ ಅಪರಾಧಿಗಳನ್ನು ಹಸ್ತಾಂತರಿಸುಮದಿಲ್ಲ.

ಈ ಕಟ್ಟಳೆಯನ್ನು ಒಪ್ಪಿ ನಮ್ಮನ್ನು ವಶಪಡಿಸಿಕೊಂಡಿರುವ ಭಾರತವೇನಾದರೂ ಈಗ ತನ್ನ ಮಾತಿಗೆ ತಪ್ಪಿ ನಮ್ಮ ಸಾವಿಗೆ ಕಾರಣವಾದರೆ ಪೋರ್ಚುಗಲ್‌ ದೇಶ ಸುಮ್ಮನಿರುತ್ತದಾ? ಅಂತಾರಾಷ್ಟ್ರೀಯ ಒಪ್ಪಂದದ ಉಲ್ಲಂಘನೆ ಅಂತ ಹುಯಿಲೆಬ್ಬಿಸುತ್ತದೆ. ಇಡೀ ಯುರೋಪಿಯನ್‌ ಒಕ್ಕೂಟವನ್ನು ಭಾರತದ ವಿರುದ್ಧ ಎತ್ತಿಕಟ್ಟುತ್ತದೆ. ಈ ಗದ್ದಲ ಸಹಜವಾಗಿ ವಿಶ್ವಸಂಸ್ಥೆವರೆಗೂ ಹೋಗದೇ ಇರುತ್ತದಾ? ಹಾಗಾಗಿ ನಮ್ಮನ್ನು ರಕ್ಷಿಸುಮದು ಈಗ ಭಾರತಕ್ಕೆ ಅಂತಾರಾಷ್ಟ್ರೀಯ ಪ್ರತಿಷ್ಠೆಯ ಪ್ರಶ್ನೆ. ಇಂಥ ಸರ್ಕಾರಿ ಗೌರವ ಪಡೆಯುತ್ತಿರುವ ಭಾರತದ ಮೊದಲ ಪ್ರಜೆಗಳು ನಾಮ ಅಂತ ಹೆಮ್ಮೆ ಪಡು ಮೋನಿ!

ಒಂಥರಾ ತಮಾಷೆಯಾಗಿದೆಯಲ್ಲಾ?...
ಅಷ್ಟು ಕೊಲೆಗಳನ್ನು ಮಾಡಿದ ನನ್ನನ್ನ ಎರಡು ಬೃಹತ್‌ ದೇಶಗಳ ಸರ್ಕಾರಗಳೇ ಹೇಗೆ ರಕ್ಷಿಸುತ್ತಿವೆ ನೋಡು! ನಾನೆಷ್ಟು ಪವರ್‌ಫುಲ್‌ ಅಲ್ಲವಾ? ನನ್ನಂಥ ಗಂಡ ಸಿಕ್ಕಿದ್ದು ನಿನ್ನ ಲಕ್ಕು ಅಂದುಕೊಳ್ಳುತ್ತೀಯಾ ಡಾರ್ಲಿಂಗ್‌?

ಭಾರತಕ್ಕೆ ನಮ್ಮನ್ನು ಕರೆತಂದು ಟಾಡಾ ಕೋರ್ಟಿಗೆ ಸಿಬಿಐ ಹಾಜರುಪಡಿಸಿದ ದಿನ , ಕೋರ್ಟಿನ ಗರ್ಜನೆ ಕೇಳಿ ನನಗೂ ಸ್ವಲ್ಪ ಭಯ ಆದದ್ದು ನಿಜ.

‘ಇವರು ಇಬ್ಬರೂ ಅಪರಾಧಿಗಳು ಅಂತ ಸಾಬೀತಾದರೂ ಇವರಿಗೆ ಗಲ್ಲು ಶಿಕ್ಷೆ ವಿಧಿಸುವಂತಿಲ್ಲ ಹಾಗೂ ೨೫ ವರ್ಷಕ್ಕಿಂತ ಹೆಚ್ಚು ಶಿಕ್ಷೆ ಕೊಡುವಂತಿಲ್ಲ’ ಎಂದು ನಮ್ಮ ಪರವಾಗಿ ಸರ್ಕಾರಿ ವಕೀಲ ವಾದ ಮಂಡಿಸುತ್ತಿದ್ದಂತೆ, ಆ ಜಡ್ಜಿಗೆ ತುಂಬಾ ಕೋಪ ಬಂತು. ‘ಕೋರ್ಟಿಗೆ ಹೀಗೆಲ್ಲ ಕಟ್ಟಳೆ ವಿಧಿಸಲು ನೀವ್ಯಾರು? ಅಪರಾಧಕ್ಕೆ ತಕ್ಕ ಶಿಕ್ಷೆಯನ್ನು ಕೋರ್ಟು ವಿಧಿಸುತ್ತದೆ. ಸೂರ್ಯನಿಗೇ ಟಾರ್ಚಾ? ಕೋರ್ಟಿಗೇ ಶರತ್ತಾ?’ ಅಂತ ದೇವೇಗೌಡರ ಥರ ಗುಡುಗಿದರು.

ಆ ಕ್ಷಣ ನನಗೆ ಎಲ್ಲಿ ಎಡವಟ್ಟಾಗುತ್ತದೋ ಅಂತ ದಿಗಿಲಾಯಿತು. ಈಗ ವಕೀಲರ ಜೊತೆ ಸಮಾಲೋಚನೆ ನಡೆಸಿದ ನಂತರ ನನಗೆ ಸಂಪೂರ್ಣ ಸಮಾಧಾನ ಆಗಿದೆ.

ಕೋರ್ಟು, ಬೇಕಾದರೆ ನಮಗೆ ಗಲ್ಲು ಶಿಕ್ಷೆ ವಿಧಿಸಲಿ. ಆದರೂ ನಮಗೆ ಯಾವ ಭಯವೂ ಇಲ್ಲ. ಯಾಕೆ ಗೊತ್ತಾ? ರಾಷ್ಟ್ರಪತಿ ನಮಗೆ ಕ್ಷಮಾದಾನ ನೀಡಿ ನಮ್ಮನ್ನು ಗಲ್ಲು ಶಿಕ್ಷೆಯಿಂದ ಪಾರುಮಾಡುತ್ತಾರೆ. ಅವರು ಪಾರು ಮಾಡಲೇ ಬೇಕು. ಯಾಕೆಂದರೆ, ಇದು ಭಾರತ ಸರ್ಕಾರ ಪೋರ್ಚುಗಲ್‌ ಸರ್ಕಾರಕ್ಕೆ ನೀಡಿದ ಲಿಖಿತ ಭರವಸೆಯ ಪ್ರಶ್ನೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ವಿಶ್ವಾಸಾರ್ಹತೆ ಹಾಗೂ ಪ್ರತಿಷ್ಠೆಯ ವಿಷಯ. ಆದ್ದರಿಂದ ಈ ದೇಶದ ಅಂತಾರಾಷ್ಟ್ರೀಯ ವಿಶ್ವಾಸಾರ್ಹತೆ ಉಳಿಸಲು ರಾಷ್ಟ್ರಪತಿಗಳು ನಮಗೆ ವಿಧಿಸಿದ ಗಲ್ಲು ಶಿಕ್ಷೆಯನ್ನು ರದ್ದು ಪಡಿಸಲೇ ಬೇಕಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರಪತಿಗಳು ಯಾರಿಗೂ ಕ್ಷಮಾದಾನ ನೀಡಿಲ್ಲ. ಅದನ್ನು ಪಡೆಯುವ ನಾವೇ ಅದೃಷ್ಟವಂತರು ಡಾರ್ಲಿಂಗ್‌.

ಮೋನಿ ಡಾರ್ಲಿಂಗ್‌,
ಈ ನಡುವೆ ಜೈಲಿನಲ್ಲಿ ನನಗೆ ತುಂಬಾ ಫ್ರೀ ಟೈಮ್‌ ಸಿಗುತ್ತೆ. ಆಗ ನಾನು ಒಂದು ಪುಸ್ತಕ ಬರೆಯಬೇಕು ಅಂದುಕೊಂಡಿದ್ದೇನೆ. ಶೀರ್ಷಿಕೆ: ಗಲ್ಲು ಶಿಕ್ಷೆಯಿಂದ ಪಾರಾಗುಮದು ಹೇಗೆ?

ಹೇಗೆ ಯೂರೋಪಿಯನ್‌ ದೇಶಗಳಿಂದ ಭಾರತಕ್ಕೆ ಗಡಿಪಾರಾಗಿ ಬಂದರೆ ಎಂಥ ಅಪರಾಧ ಮಾಡಿದ್ದರೂ ಭಾರತದ ಗಲ್ಲು ಶಿಕ್ಷೆಯಿಂದ ಪಾರಾಗಬಹುದು ಎಂಬುದನ್ನು ಹಂತ ಹಂತವಾಗಿ ವಿವರಿಸುತ್ತೇನೆ. ಈ ಪುಸ್ತಕ ಹೇಗೆ ಖರ್ಚಾಗುತ್ತೆ ನೋಡುತ್ತಿರು!

ಕಂಚಿ ಮಠದ ಒಂದೇ ಒಂದು ಕೊಲೆ ಕೇಸಿನಲ್ಲಿ ಸಿಕ್ಕಿಕೊಂಡು ವಿಲಿವಿಲಿ ಒದ್ದಾಡುತ್ತಿರುವ ಸ್ವಾಮಿಗಳ ಪರಿಸ್ಥಿತಿ ನೋಡಿ ನಗು ಬರುತ್ತಿದೆ. ಅಷ್ಟೇ ಅಲ್ಲ... ಈ ಸಿಬಿಐ ಅಧಿಕಾರಿಗಳ ಕಷ್ಟ ಕಂಡು ಪಾಪ ಅನ್ನಿಸುತ್ತಿದೆ.

ಮುಂಬೈ ಸ್ಫೋಟ ಸಂಭವಿಸಿ ೧೨ ವರ್ಷವಾದರೂ ಸಿಬಿಐ ಅಧಿಕಾರಿಗಳು ಇನ್ನೂ ಅಪರಾಧಿಗಳ ಹುಡುಕಾಟದಲ್ಲೇ ಇದ್ದಾರೆ. ನನ್ನನ್ನು ಪಡೆಯಲು ಪೋರ್ಚುಗಲ್‌ ದೇಶದ ಕಾನೂನಿನೊಡನೆ ಕಳೆದ ಮೂರು ವರ್ಷದಿಂದ ಬಡಿದಾಡಿ ಹೈರಾಣಾಗಿದ್ದಾರೆ. ಈಗ ಭಾರತದ ಕಾನೂನಿನೊಡನೆ ಅವರ ಹೋರಾಟ ಆರಂಭವಾಗಿದೆ. ಅವರು ಹೋರಾಡುತ್ತಲೇ ಇರುತ್ತಾರೆ. ಇದು ಅವರ ಹಣೆಬರಹ.
ನನಗೆ ಈಗ ಈ ಕಾನೂನಿನ ಭಯ ಉಳಿದಿಲ್ಲ. ಭಯವಿರುಮದು ನಮ್ಮ ಭೂಗತ ಲೋಕದ ಜನರ ಮೇಲೆ ಮಾತ್ರ. ಅದರಲ್ಲೂ ದಾವೂದ್‌ ಭಯ್ಯಾ ನನ್ನನ್ನು ಫಿನಿಷ್‌ ಮಾಡಲು ಖಂಡಿತ ಪ್ರಯತ್ನಿಸುತ್ತಾನೆ. ಅವನಿಗೆ ಸಿಬಿಐಗಿರುವಂಥ ಯಾವ ಕಾನೂನು ಇಲ್ಲವಲ್ಲ. ಅವರು ಎಲ್ಲಿಂದ, ಯಾವಾಗ, ಹೇಗೆ ನನ್ನ ಮೇಲೆ ಅಟ್ಯಾಕ್‌ ಮಾಡುತ್ತಾರೋ ಗೊತ್ತಿಲ್ಲ! ಸಿಬಿಐ ಅಧಿಕಾರಿಗಳು ಲಂಚ ತಗೊಂಡು ನನ್ನನ್ನು ದಾವೂದ್‌ ಕಡೆಯವರಿಗೆ ‘ಅರ್ಪಿಸು’ತ್ತಾರೋ ಎಂಬ ಭಯವೂ ಇದೆ. ಅಥವಾ ನಕಲಿ ಎನ್‌ಕೌಂಟರಿನಲ್ಲಿ ಸಾಯಿಸಿಬಿಡುತ್ತಾರೋ ಎಂಬ ಅಳುಕಿದೆ. ಹಾಗಾಗಿ ನನ್ನ ೧೦೦೦ ಕೋಟಿ ರುಪಾಯಿ ಆಸ್ತಿಯ ಆಮಿಷವನ್ನು ನಾನೂ ಇವರಿಗೆ ಒಡ್ಡಿದ್ದೇನೆ. ಪೊಲೀಸರು ನನಗೆ ಕೈಕೊಡಲಿಕ್ಕಿಲ್ಲ ಎಂದುಕೊಂಡಿದ್ದೇನೆ.

ಆದರೆ, ನನ್ನ ರಕ್ಷಣೆಯ ಹೊಣೆಯನ್ನು ಸಿಬಿಐ ಮತ್ತು ಭಾರತ ಸರ್ಕಾರ ಹೊತ್ತಿದೆ. ಯಾರಿಗೂ ನೀಡದಷ್ಟು ಬಿಗಿ ಭದ್ರತೆಯನ್ನು ಒದಗಿಸಿದ್ದಾರೆ. ಅದೂ ಉಚಿತವಾಗಿ! ಇದಕ್ಕಾಗಿ ನಾನು ಭಾರತ ಸರ್ಕಾರಕ್ಕೆ ಚಿರಋಣಿ.

ಹಾಗಾಗಿ ನಿಶ್ಚಿಂತೆಯಿಂದಿರು ಡಾರ್ಲಿಂಗ್‌.

ವಿತ್‌ ಲವ್‌
-ಅಬು ಸಲೇಂKannada Prabha issue dated November 14, 2005
Clemency for Abu Salem Which the Kanchi Seer Wouldn't Get!

-


No comments: