Tuesday, January 03, 2006

ಕರ್ನಾಟಕ ಸರ್ಕಾರ ಶೀಘ್ರ ಸ್ಫೋಟ: ‘ಉಗ್ರಕಾರಣಿಗಳ’ ಎಚ್ಚರಿಕೆ!

ಕರ್ನಾಟಕದ ಜನತೆಗೆ ರಾಜಕೀಯ ಭಯೋತ್ಪಾದಕರ ಹೊಸವರ್ಷದ ಬೆದರಿಕೆಗಳು!


ಕರ್ನಾಟಕದ ಸಮ್ಮಿಶ್ರ ಸರ್ಕಾರವನ್ನುಸ್ಫೋಟಗೊಳಿಸುವ ಬಾಂಬಿನ ರಿಮೋಟ್‌ ಕಂಟ್ರೋಲ್‌ ಇರುಮದು ಸೋನಿಯಾಜಿ ಬಳಿಯೇ ಹೊರತು ಎಸ್‌.ಎಂ.ಕೃಷ್ಣ ಅವರ ಬಳಿ ಅಲ್ಲ. ಆದ್ದರಿಂದ ಕೃಷ್ಣ ಅವರ ಭಯೋತ್ಪಾದನೆಗೆ ಯಾರೂ ಹೆದರಬೇಕಿಲ್ಲ ಎಂದು ಮುಖ್ಯಮಂತ್ರಿಯವರು, ರಾಜ್ಯದ ಜನತೆಗೆ ಪದೇ ಪದೇ ಅಭಯ ನೀಡುತ್ತಿದ್ದಾರೆ.

ರಾಜ್ಯದ ಮಹಾಜನತೆಗೆ ಹೊಸವರ್ಷದ ಬೆದರಿಕೆಗಳು!

ನಾಮ ಉಗ್ರರು ಸಾರ್‌ ಉಗ್ರರು. ಅಸಲಿ ಉಗ್ರರು. ಕಳೆದ ಒಂದು ವರ್ಷದಿಂದ ಕರ್ನಾಟಕದ ಕೆಲಮ ಮಹತ್ವದ ಕಟ್ಟಡಗಳು, ದೇವಾಲಯಗಳು ಹಾಗೂ ಸಂಸ್ಥೆಗಳನ್ನು ಸ್ಫೋಟಿಸುತ್ತೇವೆ ಎಂದು ಎಚ್ಚರಿಸುತ್ತಲೇ ಬಂದಿದ್ದೇವೆ. ಆದರೆ, ನೀಮ ನಮ್ಮ ಎಚ್ಚರಿಕೆಯನ್ನು ಹುಸಿಬಾಂಬ್‌ ಬೆದರಿಕೆ ಎಂದು ಅಲಕ್ಷ್ಯ ಮಾಡಿದ್ದೀರಿ.

ಹೀಗೆ ಅಲಕ್ಷ್ಯ ಮಾಡಿದ್ದು ನಿಮ್ಮ ತಪ್ಪಲ್ಲ ಎಂದು ನಮಗೆ ಗೊತ್ತು. ಇದಕ್ಕೆಲ್ಲ ಕರ್ನಾಟಕದ ರಾಜಕೀಯ ಭಯೋತ್ಪಾದಕರೇ ಕಾರಣ! ಸರ್ಕಾರವನ್ನು ಇವತ್ತು ಸ್ಫೋಟಿಸುತ್ತೇವೆ. ನಾಳೆ ಕೆಡವಿಹಾಕುತ್ತೇವೆ ಎಂದು ಒಂದು ವರ್ಷದಿಂದ ಜೆಡಿಎಸ್‌ ಭಯೋತ್ಪಾದಕರು ಹಾಗೂ ಕಾಂಗ್ರೆಸ್ಸಿನ ಉಗ್ರಗಾಮಿಗಳು ಪ್ರತಿದಿನವೂ ಬೆದರಿಸುತ್ತಿದ್ದಾರೆ. ಆದರೆ, ಸರ್ಕಾರವನ್ನು ಮಾತ್ರ ಸ್ಫೋಟಿಸುತ್ತಿಲ್ಲ! ಅವರ ಇಂತಹ ಹುಸಿ ಬೆದರಿಕೆಗಳನ್ನು ಪ್ರತಿ ದಿನ ಕೇಳಿ ಕೇಳಿ ನೀಮ ಬೆದರಿಕೆಗಳಿಗೆ ಒಗ್ಗಿ ಹೋಗಿದ್ದೀರಿ. ಹಾಗಾಗಿ, ಅಸಲಿ ಉಗ್ರಗಾಮಿಗಳಾದ ನಾಮ ಒಡ್ಡುವ ಅಸಲಿ ಬೆದರಿಕೆಗಳಿಗೂ ನೀಮ ಜಗ್ಗುತ್ತಿಲ್ಲ. ನಮ್ಮ ಬೆದರಿಕೆಯನ್ನೂ ನೀಮ ರಾಜಕೀಯ ಭಯೋತ್ಪಾದಕರ ಮಾಮೂಲಿ ಭಾಷಣಾವೇಶ ಎಂದು ಅಂದುಕೊಂಡಿರುಮದು ನಿಜಕ್ಕೂ ಖೇದದ ಸಂಗತಿ.

ರಾಜಕಾರಣಿಗಳ ಭರವಸೆಗಳಂತೆ ಬೆದರಿಕೆಗಳಿಗೂ ವಿಶ್ವಾಸಾರ್ಹತೆ ಇಲ್ಲ ಎಂದು ಜನ ತೀರ್ಮಾನಕ್ಕೆ ಬಂದಿದ್ದಾರೆ. ಅವರ ಬೋಗಸ್‌ ಬೆದರಿಕೆಗಳಿಂದಾಗಿ ನಮ್ಮ ಅಸಲಿ ‘ಭಯೋತ್ಪಾದನೆ’ಯ ಮೌಲ್ಯವೇ ಕಡಿಮೆಯಾಗಿದೆ. ಸರ್ಕಾರ ಎಂದು ಸ್ಫೋಟಗೊಳ್ಳುಮದೋ ಎಂಬ ಭಯದ ನಡುವೆಯೇ ಜನರು ಆರಾಮವಾಗಿ ಬದುಕಲು ಕಲಿತಿದ್ದಾರೆ! ಇದು ಭಯೋತ್ಪಾದನೆ ಎಂಬ ಶಬ್ದಕ್ಕೇ ಆದ ಅವಮಾನ ಎಂದು ನಾಮ ಪರಿಗಣಿಸಿದ್ದೇವೆ. ಈ ಹಿನ್ನೆಲೆಯಲ್ಲಿ ಭಯೋತ್ಪಾದನೆ ಎಂಬ ಶಬ್ದಕ್ಕೆ ಮರುಮೌಲ್ಯ ತಂದು ಕೊಡಲು ನಾಮ ಅನಿವಾರ್ಯವಾಗಿ ಮುಂದಾಗಬೇಕಾಯಿತು. ಅದಕ್ಕಾಗಿ ಕಳೆದವಾರ ಬೆಂಗಳೂರಿನ ಐಐಎಸ್‌ಸಿ ಸಭಾಂಗಣದ ಮೇಲೆ ದಾಳಿ ನಡೆಸಿ ಭಯೋತ್ಪಾದನೆಗೆ ಒಂದು ಮರ್ಯಾದಿ ತಂದುಕೊಡಬೇಕಾಯಿತು. ಇಲ್ಲವಾದರೆ, ರಾಜಕಾರಣಿಗಳ ಬೆದರಿಕೆಗೂ ನಮ್ಮ ಬೆದರಿಕೆಗೂ ಯಾಮದೇ ವ್ಯತ್ಯಾಸ ಇರುತ್ತಿರಲಿಲ್ಲ.

ಇತ್ತೀಚೆಗೆ ಹುಸಿಬಾಂಬ್‌ ಬೆದರಿಕೆಗಳು ಹೆಚ್ಚುತ್ತಿರುವ ಬಗ್ಗೆ ನಮಗೆ ನಿಜಕ್ಕೂ ಕಳವಳವಾಗಿದೆ. ಸಂಸತ್ತಿನಿಂದ ಹಿಡಿದು ಅಶೋಕಾ ಹೋಟೆಲ್‌ ತನಕ, ಚೆನ್ನಮ್ಮ ಎಕ್ಸ್‌ಪ್ರೆಸ್‌ ರೈಲಿನಿಂದ ಹಿಡಿದು ಐಬಿಎಂ ಸಾಫ್ಟ್‌ವೇರ್‌ ಕಂಪನಿಯ ತನಕ, ಮುಖ್ಯಮಂತ್ರಿ ಮನೆಯಿಂದ ಹಿಡಿದು, ಎಂ ಜಿ ರಸ್ತೆಯ ಅಂಗಡಿಯ ತನಕ ಎಲ್ಲವನ್ನೂ ಸ್ಫೋಟಿಸುವ ಬಾಂಬ್‌ ಬೆದರಿಕೆಗಳು ದಿನ ಬೆಳಗಾದರೆ, ಈ ಮೇಲ್‌ನಲ್ಲಿ, ಫೋನ್‌ನಲ್ಲಿ, ಫ್ಯಾಕ್ಸ್‌ನಲ್ಲಿ ಬರುತ್ತಿವೆ. ಆದರೆ, ಅವೆಲ್ಲ ಕೊನೆಗೆ ಠುಸ್‌ ಎನ್ನುವ ಹುಸಿ ಬಾಂಬ್‌ ಎಚ್ಚರಿಕೆಗಳಾಗುತ್ತಿವೆ. ಹಾಗಾಗಿ, ‘ಇದೇನು ಮಾಮೂಲಿ ಹುಸಿಬಾಂಬ್‌ ಬಿಡು’ ಎನ್ನುವಷ್ಟರ ಮಟ್ಟಿಗೆ ನೀಮ ನಿರಾತಂಕರಾಗಿದ್ದೀರಿ. ನಮ್ಮ ಭಯೋತ್ಪಾದನೆಯಿಂದ ನಿಮಗೆ ಭಯವಾಗುತ್ತಿಲ್ಲ. ಪರಿಸ್ಥಿತಿ ಹೀಗೇ ಮುಂದುವರಿದರೆ ನಾಮ ಭಯೋತ್ಪಾದನೆಗೆ ಇನ್ಯಾವ ಮಾರ್ಗ ಹಿಡಿಯುಮದೋ ನಮಗೆ ಅರ್ಥವಾಗುತ್ತಿಲ್ಲ.

ಹಾಗಾಗಿ, ನಾಮ ಉಗ್ರಗಾಮಿಗಳಾದರೂ, ಹುಸಿ ಬಾಂಬ್‌ ಬೆದರಿಕೆ ಒಡ್ಡುವವರ ಬಳಿ ಬೇಷರತ್‌ ಮನವಿ ಮಾಡಿಕೊಳ್ಳುತ್ತೇವೆ... ‘ದಯವಿಟ್ಟು ಹುಸಿ ಬೆದರಿಕೆ ಒಡ್ಡುಮದನ್ನು ಬಿಡಿ. ಇದರಿಂದ ‘ಭಯೋತ್ಪಾದನೆ’ಯ ಗೌರವವೇ ಕುಂದುತ್ತಿದೆ.’

ರಾಜಕಾರಣಿಗಳು ಬೆದರಿಕೆ ಒಡ್ಡುವಾಗ ಸ್ವಲ್ಪ ಕೇರ್‌ಫುಲ್‌ ಆಗಬೇಕು ಎಂಬುದು ನಮ್ಮ ಸಲಹೆ. ಇಲ್ಲವಾದರೆ ಯಡಿಯೂರಪ್ಪನವರ ಕಥೆಯಾಗುತ್ತದೆ. ಅವರ ಎಲ್ಲ ಬೆದರಿಕೆಗಳೂ ಹುಸಿಬಾಂಬ್‌ ಎಂದು ಬಹುತೇಕ ಜನತೆ ತೀರ್ಮಾನ ಮಾಡಿರುಮದರಿಂದ ಯಡಿಯೂರಪ್ಪನವರ ಬೆದರಿಕೆಗೆ ಯಾರೂ ಮಣಿಯುತ್ತಿಲ್ಲ. ಅತ್ತ ಪೂಜಾರಿಯವರ ಬಾಂಬುಗಳೂ ಅಷ್ಟೇ... ಠುಸ್‌ ಅನ್ನುತ್ತಿವೆ. ಸಿ. ಎಂ. ಇಬ್ರಾಹಿಂ, ಎ.ಕೆ.ಸುಬ್ಬಯ್ಯನವರ ಬಾಂಬುಗಳು ನಗೆಬಾಂಬುಗಳೆಂದು ಜನ ಎಂಜಾಯ್‌ ಮಾಡುತ್ತಿದ್ದಾರೆ.

ಸದ್ಯ ಇದ್ದುದರಲ್ಲಿ ದೇವೇಗೌಡರ ಲೆಟರ್‌ ಬಾಂಬ್‌ಗಳಿಗೆ ಮಾತ್ರ ತುಸು ಭಯೋತ್ಪಾದನೆಯ ಮೌಲ್ಯವಿದೆ. ಆದರೆ, ಅವರ ಪತ್ರಬಾಂಬುಗಳನ್ನೆಲ್ಲ ಇತ್ತೀಚೆಗೆ ಕೋರ್ಟುಗಳಲ್ಲಿ ನ್ಯಾಯಾಧೀಶರು ನಿಷ್ಕ್ರಿಯಗೊಳಿಸುತ್ತಿರುಮದು ಶೋಚನೀಯ. ಹಾಗಾಗಿ, ಗೌಡರ ಲೆಟರ್‌ಬಾಂಬ್‌ಗಳ ಕುರಿತೂ ಜನರಿಗೆ ಹೆದರಿಕೆ ಕಡಿಮೆಯಾಗುತ್ತಿದೆ. ಅದರಲ್ಲೂ ಇತ್ತೀಚಿನ ಜಿ.ಪಂ., ತಾ.ಪಂ ಚುನಾವಣೆಯಾದ ಮೇಲೆ ಗೌಡರ ಬಾಂಬುಗಳ ಶಕ್ತಿಯೇ ಕಡಿಮೆಯಾಗಿದೆ ಎಂದು ಗುಪ್ತದಳ ವರದಿ ಮಾಡಿದ್ದು ನಮಗೂ ತಿಳಿದುಬಂದಿದೆ.

ಈ ನಡುವೆ, ಸರ್ಕಾರ ಸ್ಫೋಟಿಸುವ ನಿಜವಾದ ಬಾಂಬ್‌ ಇರುಮದು ಡಿ.ಕೆ.ಶಿವಕುಮಾರ್‌ ಹಾಗೂ ಮಲ್ಲಿಕಾರ್ಜುನ ಖರ್ಗೆಯವರ ಕೈಲಿ ಹಾಗೂ ಆ ಬಾಂಬುಗಳ ರಿಮೋಟ್‌ ಕಂಟ್ರೋಲ್‌ ಇರುಮದು ಮಹಾರಾಷ್ಟ್ರ ರಾಜ್ಯಪಾಲ ಎಸ್‌.ಎಂ.ಕೃಷ್ಣ ಅವರ ಕೈಲಿ ಎಂದು ಸರ್ಕಾರದ ಅತ್ಯುನ್ನತ ಮೂಲಗಳು ನಂಬಿವೆ. ಆದ್ದರಿಂದ ಎಸ್‌.ಎಂ.ಕೃಷ್ಣ ಅವರು ಬೆಂಗಳೂರಿಗೆ ಬಂದಾಗಲೆಲ್ಲ ರಾಜಧಾನಿಯಲ್ಲಿ ಭದ್ರತಾ ವ್ಯವಸ್ಥೆ ಬಲಗೊಳ್ಳುತ್ತದೆ. ಕೃಷ್ಣ ಅವರ ಚಲನವಲನದ ಮೇಲೆ ಗುಪ್ತಚರ ದಳ ವಿಶೇಷ ಕಣ್ಣಿಟ್ಟಿರುತ್ತದೆ. ಅದರಲ್ಲೂ ಖರ್ಗೆ ಮತ್ತು ಕೃಷ್ಣ ಗುಪ್ತ ಸಮಾಲೋಜನೆ ನಡೆಸಿದರಂತೂ ಸರ್ಕಾರ ಸ್ಫೋಟವಾಗಲು ಕ್ಷಣಗಣನೆ ಆರಂಭವಾಯಿತು ಎಂಬಂತೆ ಭಯೋತ್ಪಾದನೆಯಾಗುತ್ತದೆ.

ಆದರೆ, ಇದು ಕೂಡ ಹುಸಿಬಾಂಬು ಬೆದರಿಕೆ ಎಂದು ಮುಖ್ಯಮಂತ್ರಿಗಳು ರಾಜ್ಯದ ಪ್ರಜೆಗಳಿಗೆ ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿಯವರ ಪ್ರಕಾರ, ರಿಮೋಟ್‌ ಕಂಟ್ರೋಲ್‌ ಕೃಷ್ಣ ಅವರ ಕೈಲಿಲ್ಲ. ಸೋನಿಯಾಜಿ ಅವರ ಕೈಲಿದೆ. ಆದ್ದರಿಂದ, ಈ ಸರ್ಕಾರ ಸ್ಫೋಟಗೊಳಿಸುವ ನಿಜವಾದ ಭಯೋತ್ಪಾದಕಿ ಸೋನಿಯಾಜಿಯೇ ಹೊರತು ಕೃಷ್ಣ ಅಲ್ಲ. ಎಸ್‌.ಎಂ. ಕೃಷ್ಣ ಅವರ ಭಯೋತ್ಪಾದನೆಗೆ ಯಾರೂ ಹೆದರಬೇಕಿಲ್ಲ ಎಂದು ಮುಖ್ಯಮಂತ್ರಿ ಧರಂಸಿಂಗ್‌ ರಾಜ್ಯದ ಜನತೆಗೆ ಪದೇ ಪದೇ ಅಭಯ ನೀಡಿದ್ದಾರೆ.

ಈ ನಡುವೆ, ಕುಮಾರ ಸ್ವಾಮಿಯವರು ಸ್ವಲ್ಪ ಉಗ್ರಗಾಮಿಯಂತೆ ಮಾತನಾಡಿದರೂ ಈ ಸರ್ಕಾರ ಸ್ಫೋಟಿಸುವ ಸಂಚು ನಮ್ಮದಲ್ಲ ಎಂದು ಜನತೆಗೆ ಸಾರಿ ಹೇಳಿದ್ದಾರೆ. ‘ಈ ಸರ್ಕಾರಕ್ಕೆ ನಾನು ಭಯೋತ್ಪಾದಕ ಅಲ್ಲ. ಒಂದು ವೇಳೆ ಸರ್ಕಾರ ಸ್ಫೋಟಗೊಂಡರೆ ನಾನು ಹೊಣೆ ಹೊರುಮದಿಲ್ಲ’ ಎಂದು ಗೌಡರೂ ವಿಷದಪಡಿಸಿದ್ದಾರೆ. ಇವರೆಲ್ಲರ ಬಳಿ ಇರುವ ಮಾಹಿತಿಯೂ ಒಂದೇ... ಈ ಸರ್ಕಾರ ಸ್ಫೋಟಿಸುವ ರಿಮೋಟ್‌ ಕಂಟ್ರೋಲ್‌ ಸೋನಿಯಾ ಅವರ ಬಳಿಯೇ ಇದೆ! ಈ ಲಾಜಿಕ್ಕನ್ನೆಲ್ಲ ನೋಡಿದರೆ, ಕರ್ನಾಟಕ ಸರ್ಕಾರಕ್ಕೆ ನಿಜವಾದ ಭಯೋತ್ಪಾದಕಿ ಸೋನಿಯಾಜಿ ಎಂದು ತೀರ್ಮಾನಕ್ಕೆ ಬರಲಡ್ಡಿಯಿಲ್ಲ.

ಈ ಎಲ್ಲ ಹುಸಿ ಬೆದರಿಕೆಗಳ ನಡುವೆಯೂ ಸಿದ್ದರಾಮಯ್ಯನವರಂಥ ನಿಜವಾದ ಭಯೋತ್ಪಾದಕರೂ ಇದ್ದಾರೆ ಎಂಬುದಷ್ಟೇ ನಮಗೆ ಹೆಮ್ಮೆಯ ವಿಷಯ. ಸಿದ್ದರಾಮಯ್ಯನವರನ್ನು ಮಾನವಬಾಂಬ್‌ ಅಂತಾದರೂ ಕರೆಯಿರಿ ಅಥವಾ ಆತ್ಮಹತ್ಯಾ ದಳದ ನೇತಾರ ಎಂದಾದರೂ ತಿಳಿಯಿರಿ... ಅವರು ಬೆದರಿಕೆ ಒಡ್ಡಿದ್ದಷ್ಟೇ ಅಲ್ಲ, ಮೊನ್ನೆ ಚುನಾವಣೆಯಲ್ಲಿ ಜೆಡಿಎಸ್ಸಿನ ಬಹುಭಾಗವನ್ನು ಸ್ಫೋಟಿಸಿ ಚಿಂದಿಮಾಡಿದರು ಎಂಬುದು ಗಮನಾರ್ಹ ವಿಷಯ. ಆದ್ದರಿಂದ, ಸಿದ್ದರಾಮಯ್ಯ ಜೆಡಿಎಸ್ಸಿಗೆ ನಿಜವಾದ ಭಯೋತ್ಪಾದಕರಾಗಿರುವಂತೆ ತೋರುತ್ತದೆ.

ಈ ಬೆಳವಣಿಗೆಯಿಂದ ಸ್ಫೂರ್ತಿ ಪಡೆದು ಜೆಡಿಎಸ್‌ ಹಾಗೂ ಕಾಂಗ್ರೆಸ್ಸಿನ ಉಗ್ರರೆಲ್ಲ ಸೇರಿ ಸರ್ಕಾರವನ್ನು ಈ ವರ್ಷವಾದರೂ ಖಂಡಿತ ಸ್ಫೋಟಿಸುತ್ತಾರೆ ಎಂಬ ನಂಬಿಕೆ ನಮಗಿದೆ.

ಇದು ಹುಸಿ ಬಾಂಬ್‌ ಆಗಲಾರದು ಎಂಬ ವಿಶ್ವಾಸದೊಂದಿಗೆ ಎಲ್ಲ ಭಯೋತ್ಪಾದಕ ಸಂಘಟನೆಗಳ ಪರವಾಗಿ ತಮಗೆಲ್ಲ ಮತ್ತೊಮ್ಮೆ ಹೊಸವರ್ಷದ ಬೆದರಿಕೆಗಳು


Kannada Prabha issue dated January 2, 2006
We'll Blast the Karnataka Government: Political Terrorists Warn!

-

No comments: