Tuesday, January 10, 2006

ಕಟ್ಟಾ ಸಸ್ಯಾಹಾರಿಯಾದರೆ ನಾಮ ಬದುಕುಮದೇ ಕಷ್ಟ!

ವೆಜ್‌ ಐಸ್‌ಕ್ರೀಮ್‌ನಲ್ಲೂ ಹಂದಿ ಮಾಂಸ, ಔಷಧಿಯಲ್ಲಿ ಮಾನವನ ಮೂಳೆ -ಸಸ್ಯಾಹಾರಿಯ ದುಃಖತಪ್ತ ಪತ್ರ

ಇಡೀ ಜಗತ್ತೇ ಒಂದಲ್ಲಾ ಒಂದು ರೀತಿಯಲ್ಲಿ ಮಾಂಸಾಹಾರಿ ಎನಿಸುತ್ತಿದೆ. ಆಹಾರದಲ್ಲಿ ಮಾಂಸ ತಿನ್ನದಿದ್ದರೂ ಔಷಧಿಗಳ ರೂಪದಲ್ಲಿ ಪ್ರಾಣಿಜನ್ಯ ವಸ್ತುಗಳನ್ನು ನಾಮ ಸೇವಿಸಿರುಮದು ಖಂಡಿತ. ಹೊಟೆಲ್‌ ಹಾಗೂ ರೆಡಿಮೇಡ್‌ ತಿನಿಸುಗಳಲ್ಲಿ ಪಕ್ಕಾ ಸಸ್ಯಾಹಾರ ಬಹಳ ಅಪರೂಪ. ಪ್ಯಾಕ್‌ ಆದ ಜ್ಯೂಸ್‌ನಲ್ಲೂ ಇರುತ್ತದೆ ಪ್ರಾಣಿಜನ್ಯ ಪದಾರ್ಥ. ಇಷ್ಟಕ್ಕೂ ಕೋಕ್‌, ಪೆಪ್ಸಿಯಲ್ಲಿ ಮಾಂಸಾಹಾರ ಇಲ್ಲ ಎಂದು ಹೇಳುವ ಕಾರಟ್‌ ಎಲ್ಲಾದರೂ ಇದ್ದಾರಾ? ಇಗೊಳ್ಳಿ ಚಾಲೆಂಜ್‌!


ಶ್ರೀಮತಿ ವೇದಾ ಕ್ಯಾರಟ್‌ ಅವರಿಗೆ

ಸಲಾಂ, ನಮಸ್ತೆ
ನಾನೊಬ್ಬ ಪರಮ ಸಸ್ಯಾಹಾರಿ. ನನ್ನ ದುಃಖಕ್ಕೆ ಪಾರವೇ ಇಲ್ಲ. ಕಳೆದವಾರ ಶ್ರೀಮತಿ ಬೃಂದಾ ಕಾರಟ್‌ ಅವರು ಸ್ವಾಮಿ ರಾಮದೇವ್‌ ಅವರ ನಾನ್‌ವೆಜ್‌ ಔಷಧಿ ಹಗರಣ ಬಯಲು ಮಾಡಿದ ಮೇಲಂತೂ ನನ್ನ ಬ್ಲಡ್‌ಪ್ರಶರ್‌ ಇನ್ನಷ್ಟು ಹೆಚ್ಚಾಗಿದೆ. ನಾನು ಸಸ್ಯಾಹಾರಿಯಾಗಿ ಘೋರ ದುರಂತವಾಯಿತು ಎಂದೆನ್ನಿಸಿದೆ. ಈ ದೇಶದ ಬಹುಜನರಂತೆ ನಾನೂ ಮಾಂಸಾಹಾರಿ ಆಗಬೇಕಿತ್ತು. ಆಗ ಆಹಾರದಲ್ಲಿ ಪ್ರಾಣಿಯಿದೆಯೋ, ಪಕ್ಷಿಯಿದೆಯೋ, ಗಿಡವಿದೆಯೋ, ಮರವಿದೆಯೋ, ತರಕಾರಿಯಿದೆಯೋ ಎಂದು ಚಿಂತಿಸುವ ಅಗತ್ಯವಿರಲಿಲ್ಲ. ರುಚಿಯಾಗಿರುಮದನ್ನೆಲ್ಲ ನಿಶ್ಚಿಂತೆಯಿಂದ ತಿಂದು ತೇಗಬಹುದಿತ್ತು!

ಈಗ ನಾನು ಪರಮ ಸಸ್ಯಾಹಾರಿ ಆಗಿರುಮದರಿಂದ ನನ್ನ ತಿನ್ನುವ ಆಯ್ಕೆಗಳೇ ಕಡಿಮೆಯಾಗಿವೆ. ಒಮ್ಮೊಮ್ಮೆಯಂತೂ, ಜಗತ್ತಿನಲ್ಲಿ ನನಗೆ ತಿನ್ನಲೇನೂ ಸಿಕ್ಕುಮದೇ ಇಲ್ಲವೇನೋ ಅನ್ನಿಸಿ ಬಿಡುತ್ತದೆ! ಏನನ್ನಾದರೂ ತಿನ್ನೋಣ ಅಂತ ಆಸೆಯಾದರೆ ಅದರಲ್ಲಿ ಮಾಂಸಾಹಾರ ಇದೆಯೇನೋ ಅನ್ನುವ ಸಂಶಯ. ಏನನ್ನಾದರೂ ತಿಂದಾದಮೇಲೆ, ಅದರಲ್ಲಿ ಏನಾದರೂ ಮಾಂಸಾಹಾರದ ಅಂಶ ಇತ್ತೇನೋ ಅನ್ನುವ ಚಿಂತೆ. ಛೆ... ಕಷ್ಟವಾಗಿಬಿಟ್ಟಿದೆ ಸಸ್ಯಾಹಾರಿಯ ಜೀವನ.

ಸ್ವಂತ ಮನೆಯ ಅನ್ನ-ಸಾಂಬಾರ್‌ ಬಿಟ್ಟರೆ ನನಗೆ ಇನ್ನಾಮದರಲ್ಲೂ ನಂಬಿಕೆಯಿಲ್ಲ. ಆದರೂ, ಊಟಕ್ಕೆ ಕುಳಿತಾಗ, ಅನ್ನದಲ್ಲಿ ಹುಳುವೇನಾದರೂ ಬಿದ್ದುಹೋಗಿದೆಯೇನೋ ಅಂತ ಅನುಮಾನ ಆಗುತ್ತದೆ. ಅನ್ನದಲ್ಲಿ ನೂರು ಕಲ್ಲು ಬಂದರೂ ಪರವಾಗಿಲ್ಲ ಶಿವನೇ... ಹುಳು ಇಲ್ಲದಿರಲಿ ಎಂದು ಪ್ರಾರ್ಥಿಸುತ್ತೇನೆ. ಅಕಸ್ಮಾತ್‌ ಅನ್ನದಲ್ಲಿ ಒಂದು ಹುಳು ಅಥವಾ ಇರುವೆ ಕಾಣಿಸಿದರಂತೂ ಮುಗಿದೇ ಹೋಯಿತು. ಊಟಮಾಡಿದ್ದೂ ವಾಪಸ್‌ ಬಂದುಬಿಡುತ್ತದೆ... ಏನು ಮಾಡಲಿ?ಸೊಪುý್ಪ, ತರಕಾರಿಯಲ್ಲೂ ಹುಳು ಹುಡುಕಿ ಹುಡುಕಿ ಸಾಕಾಗಿ ಹೋಗಿದೆ. ಬೀನ್ಸ್‌, ಬದನೆಕಾಯಿ, ಕೋಸುಗಡ್ಡೆ, ಕ್ಯಾಲಿಫ್ಲಾವರ್‌ನಲ್ಲಿ ಹುಳುಗಳು ಇರುಮದು ಹೆಚ್ಚು ಅಂತ ಯಾರೋ ಹೇಳಿದ ಮೇಲಂತೂ ಅಮಗಳ ಸಹವಾಸವನ್ನೇ ಬಿಟ್ಟುಬಿಟ್ಟಿದ್ದೇನೆ.

ಹಾಲು ಮೊಸರನ್ನು ಕೂಡ ನಾನು ಮುಟ್ಟುವ ಹಾಗಿಲ್ಲವಲ್ಲ. ಏಕೆಂದರೆ ಹಾಲು, ಮೊಸರು, ಮಜ್ಜಿಗೆ ಎಲ್ಲಾ ಮಾಂಸಾಹಾರ! ಹಾಗಂತ ನನಗೆ ಗೊತ್ತಿರಲಿಲ್ಲ. ಬಹಳ ವರ್ಷಗಳ ಕಾಲ ನಾನು ಅವನ್ನೆಲ್ಲ ಸಸ್ಯಾಹಾರ ಅಂತಲೇ ಪಟ್ಟಾಗಿ ಸವಿಯುತ್ತಿದ್ದೆ. ಆದರೆ, ಒಂದು ದಿನ ನನ್ನ ಸ್ನೇಹಿತನೊಬ್ಬನ ಪ್ರಶ್ನೆಯಿಂದ ನನಗೆ ಜ್ಞಾನೋದಯವಾಯಿತು. ಆಕಳು, ಎಮ್ಮೆಯ ಹೊಟ್ಟೆಯೊಳಗಿಂದ ಉತ್ಪತ್ತಿಯಾಗುವ ಹಾಲು ಪ್ರಾಣಿಜನ್ಯವಾಗುತ್ತದೆಯೇ ಹೊರತೂ ಅದು ಸಸ್ಯಜನ್ಯವಾಗಲಾರದು. ಅಂದರೆ, ಹಾಲು ಕೂಡ ಸಸ್ಯಾಹಾರವಲ್ಲ. ಪ್ರಾಣಿಯ ಹೊಟ್ಟೆಯೊಳಗೆ ಮಾಂಸದ ನಡುವೆ ಉತ್ಪತ್ತಿಯಾಗುವ ಹಾಲು ಮಾಂಸಾಹಾರವೇ ಅಂತ ನನಗೆ ಇಷ್ಟು ವರ್ಷ ಯಾಕೆ ಹೊಳೆಯಲಿಲ್ಲವೋ ಅಂತ ನನಗೆ ಬಹಳ ಪಾಪಪ್ರಜ್ಞೆ ಉಂಟಾಯಿತು. ಹಾಲು ಮಾಂಸಹಾರ ಅಂದರೆ ಮಜ್ಜಿಗೆ, ಮೊಸರು, ತುಪ್ಪ, ಬೆಣ್ಣೆ, ಗಿಣ್ಣು ಎಲ್ಲಾ ಹೇಗೆ ಸಸ್ಯಾಹಾರವಾದೀತು? ಹಾಗಾಗಿ... ಅಮಗಳ ಸೇವನೆಯನ್ನೆಲ್ಲ ನಾನು ಬಿಟ್ಟು ಬಿಡಬೇಕಾಯಿತು. ಅಷ್ಟು ವರ್ಷ ಸೇವಿಸಿದ ಪಾಪಪ್ರಜ್ಞೆಯಿಂದ ಹೊರಬರಲು ನನಗೆ ಹಲವಾರು ತಿಂಗಳುಗಳೇ ಬೇಕಾಯಿತು.
ನನಗೆ ಈಗ ಸಕ್ಕರೆ ಅಂದರೂ ಅಸಹ್ಯ. ಬಹಳ ವರ್ಷಗಳ ಕಾಲ ನಾನು ಕಬ್ಬಿನ ರಸದಿಂದ ತಯಾರಾಗುವ ಸಕ್ಕರೆಯನ್ನು ಸಸ್ಯಾಹಾರ ಅಂತಲೇ ಅಂದುಕೊಂಡಿದ್ದೆ. ಆದರೆ, ಸಕ್ಕರೆ ತಯಾರಾಗುವ ವಿಧಾನ ಕೇಳಿದ ನಂತರ ನನ್ನ ನಂಬಿಕೆಯೆಲ್ಲಾ ಸಿಡಿದು ಪುಡಿಪುಡಿಯಾಯಿತು. ಸಕ್ಕರೆ ಮೊದಲು ತಯಾರಾದಾಗ ಕಪುý್ಪ ಬಣ್ಣದಲ್ಲಿರುತ್ತದೆ. ಅದಕ್ಕೆ ಬ್ಲೀಚಿಂಗ್‌ ಮಾಡಲೋಸ್ಕರ ನಾಯಿ ಅಥವಾ ಪ್ರಾಣಿಯ ಮೂಳೆಗಳ ಇದ್ದಲನ್ನು ಬಳಸುತ್ತಾರಂತೆ. ಅದು ತಿಳಿದಾಗಿನಂದ ಇಲ್ಲಿಯ ವರೆಗೂ ನನಗೆ ಬೆಲ್ಲವೇ ಗತಿ. ಚಹಕ್ಕೂ ನಾನು ಬೆಲ್ಲ ಹಾಕಿ ಕುಡಿಯುವ ಪರಿಸ್ಥಿತಿ ಇತ್ತು.

ಎಷ್ಟೋ ಸಾರಿ ಹೊಟೆಲ್‌ಗೆ ಹೋಗಬೇಕೂಂತ ಆಸೆಯಾಗುತ್ತದೆ. ಆದರೆ, ಏನುಮಾಡುಮದು? ನಾನಲ್ಲಿಗೆ ಹೋಗುವಂತಿಲ್ಲ. ಬಹಳ ಹೊಟೆಲ್‌ಗಳಲ್ಲಿ ಪದಾರ್ಥಕ್ಕೆ ರುಚಿ ಬರಲೀ ಅಂತ ಮೀನಿನ ಪೌಡರ್‌ ಬಳಸುತ್ತಾರಂತೆ. ರೋಟಿ, ಕೇಕು, ಬ್ರೆಡ್ಡು, ಬಿಸ್ಕಿಟ್ಟು ಮಿದುವಾಗಲಿ ಅಂತ ತತ್ತಿಯನ್ನು ಹಾಕುತ್ತಾರಂತೆ. ವೆಜ್‌ ಸಲಾಡ್‌ನಲ್ಲಿ ಅಣಬೆ ಸೇರಿಸುತ್ತಾರಂತೆ ಅನ್ನುವ ವಿಷಯಗಳು ಗೊತ್ತಾದ ನಂತರವೂ ನಾನು ಹೇಗೆ ಹೊಟೆಲ್‌ ಪದಾರ್ಥ ತಿನ್ನಲಿ?

ಆವೊತ್ತೊಂದು ದಿನ, ಇಷ್ಟವಾಯಿತು ಅಂತ ರಸಗುಲ್ಲ ತಿನ್ನುತ್ತಿದ್ದೆ. ಇದು ಹಾಲಿನಿಂದ ಮಾಡುವ ಬೆಂಗಾಲಿ ಸ್ವೀಟು ಮಾರಾಯ... ಅಂತ ಮಿತ್ರ ಹೇಳಿದ್ದೇ ಹೇಳಿದ್ದು... ಬೆಂಗಾಲಿ ಸ್ವೀಟು ತಿನ್ನುಮದನ್ನು ನಿಲ್ಲಿಸಿಬಿಡಬೇಕಾಯಿತು. ಅಷ್ಟೇ ಅಲ್ಲ, ಸಕ್ಕರೆಯಂಥ ಮಾಂಸಾಹಾರವನ್ನು ಬಳಸುವ ಯಾಮದೇ ಸ್ವೀಟೂ ಮಾಂಸಾಹಾರವೇ ತಾನೆ?

ಐಸ್‌ಕ್ರೀಮಿನ ಕಥೆ ಇನ್ನೂ ಭಯಾನಕ. ಹೊಟೆಲ್‌, ಬೇಕರಿಯ ತಿನಿಸುಗಳಲ್ಲಿ ಜಿಲೆಟಿನ್‌ ಅನ್ನೋ ಪದಾರ್ಥವನ್ನು ವ್ಯಾಪಕವಾಗಿ ಬಳಸುತ್ತಾರಂತೆ. ಇದನ್ನು ಹಂದಿಯ ಅಸ್ತಿಮಜ್ಜೆಯಿಂದ ತಯಾರಿಸುತ್ತಾರಂತೆ. ಇದನ್ನು ಐಸ್‌ಕ್ರೀಮ್‌ಗೂ ಹಾಕುತ್ತಾರಂತೆ. ಹಾಗಾಗಿ ಐಸ್‌ಕ್ರೀಮು, ಜೆಲ್ಲಿ... ಎಲ್ಲಾ ನೋಡಿದರೆ ಮಾಂಸದ ಮುದ್ದೆಯನ್ನು ನೋಡಿದಂತೇ ಭಾಸವಾಗಿ ವಾಕರಿಕೆ ಬರುತ್ತದೆ.
ಕೋಕಿನಿಯಲ್‌ ಎಂದರೆ ಬಹುತೇಕ ಜನರಿಗೆ ಗೊತ್ತಿಲ್ಲ. ಆದರೆ, ನಾವೆಲ್ಲ ಒಂದಲ್ಲ ಒಂದು ರೀತಿಯಿಂದ ತಿಂದು ಬಿಟ್ಟಿದ್ದೇವೆ. ಇದು ಆಹಾರಕ್ಕೆ ಕೆಂಪು ಬಣ್ಣ ನೀಡುವ ಪದಾರ್ಥ. ಇದನ್ನು ಕೀಟವೊಂದನ್ನು ಹುಡಿಮಾಡಿ ತಯಾರಿಸಿರುತ್ತಾರೆ.

ಈ ನಡುವೆ ನನಗೆ ಡಯಾಬಿಟಿಸ್‌ ಆರಂಭವಾಗಿದ್ದು ಒಳ್ಳೆಯದಾಯಿತು ಅಂದುಕೊಂಡೆ. ಯಾಕೆಂದರೆ, ಈ ಕಾರಣಕ್ಕಾದರೂ ನಾನು ಈ ಸ್ವೀಟುಗಳೆಂಬೋ ಮಾಂಸಾಹಾರದಿಂದ ಕಡ್ಡಾಯವಾಗಿ ದೂರವಿರಬಹುದಲ್ಲ! ಆದರೆ, ವಿಧಿ ಅಲ್ಲೂ ನನಗೆ ಕೈಕೊಡಬೇಕೆ? ಮಧುಮೇಹ ನಿಯಂತ್ರಣಕ್ಕೆ ಬಳಸುವ ಇನ್‌ಸುಲಿನ್‌ ಔಷಧವನ್ನು ಪ್ರಾಣಿಗಳಿಂದಲೇ ಸಂಸ್ಕರಿಸುತ್ತಾರಂತೆ. ಹಾಗಾಗಿ ಇನ್‌ಸುಲಿನ್‌ ಮಾಂಸಾಹಾರ ಅಂತ ಗೊತ್ತಾಗಿ ಗೋಳೋ ಅಂತ ಅತ್ತುಬಿಟ್ಟೆ. ಸದ್ಯ... ವಿಜ್ಞಾನಿಗಳು ದೇವರಂತೆ ಬಂದು ನನ್ನನ್ನು ಕಾಪಾಡಿದರು. ಸಸ್ಯಾಹಾರಿ ಇನ್‌ಸುಲಿನ್‌ ಕಂಡುಹಿಡಿದಿದ್ದಾರೆ. ಇದು ಬಹಳ ದುಬಾರಿಯಾದರೂ ನನಗೆ ಬೇರೆ ಗತಿ ಇಲ್ಲ.

ಈ ನಡುವೆ, ನನಗೆ ಬಹಳ ಕೆಮ್ಮು. ಅದಕ್ಕಾಗಿ ಬೆನೆಡ್ರಿಲ್‌ ಎಂಬ ಔಷಧಿ ಕುಡಿಯುತ್ತಿದ್ದೆ. ಯಾರೋ ಹೇಳಿದರು... ಅದು ಕೋಣದ ರಕ್ತದಿಂದ ತಯಾರಾಗುತ್ತದೆ ಅಂತ. ಅದು ಹಾಗಿರಲಿಕ್ಕಿಲ್ಲ ಅಂತ ನನಗೆ ಗೊತ್ತಿದ್ದರೂ... ಆ ಔಷಧಿಯ ರೂಪ, ರುಚಿ ಎಲ್ಲ ಕೋಣದ ರಕ್ತದಂತೆ ಕಂಡು ಅದನ್ನೂ ಕುಡಿಯುಮದು ನಿಲ್ಲಿಸಿದ್ದೇನೆ.

ಅಷ್ಟೇ ಏನು... ಬಹುತೇಕ ಇಂಗ್ಲಿಷ್‌ ಔಷಧಿಗಳಲ್ಲಿ ಪ್ರಾಣಿಜನ್ಯ ಪದಾರ್ಥಗಳನ್ನೇ ಬಳಸುತ್ತಾರಂತೆ. ಮೀನೆಣ್ಣೆಯ ಟಾನಿಕ್‌ನಿಂದ ಹಿಡಿದು ಹಾವಿನ ವಿಷದ ವರೆಗೆ ಅನೇಕ ಪ್ರಾಣಿಜನ್ಯ ವಸ್ತುಗಳು ಇರುತ್ತವೆ. ಹಾಗಾಗಿ... ಬಹುತೇಕ ಇಂಗ್ಲಿಷ್‌ ಔಷಧಗಳು ಮಾಂಸಾಹಾರ ಎಂದು ತೀರ್ಮಾನಿಸಿ ನಾನು ಆಯುರ್ವೇದ ಔಷಧಿಗೆ ಒಗ್ಗಿಕೊಂಡೆ.

ಆದರೆ, ಆಯುರ್ವೇದವೂ ಸಂಪೂರ್ಣ ಸಸ್ಯಾಹಾರಿ ಎಂದು ಎಲ್ಲೂ ಹೇಳಿಕೊಂಡಿಲ್ಲ. ಗಿಡಮೂಲಿಕೆಗಳು ಹಾಗೂ ಅನೇಕ ಪ್ರಾಣಿ ಜನ್ಯ ವಸ್ತುಗಳನ್ನು ಆಯುರ್ವೇದ ಬಳಸಿಕೊಳ್ಳುತ್ತದೆ ಎಂದು ಎಲ್ಲೋ ಓದಿದ ಮೇಲೆ ನನ್ನನ್ನು ಕಾಪಾಡುವ ಸಸ್ಯಾಹಾರಿ ಔಷಧವೇ ಇಲ್ಲವೇನೋ ಅನ್ನಿಸಲು ಪ್ರಾರಂಭವಾಗಿದೆ. ಅದರಲ್ಲೂ ಸ್ವಾಮಿ ರಾಮ್‌ದೇವ್‌ ಅವರಂಥ ಮಹಾ ಸಾತ್ವಿಕ ಯೋಗಿಯೂ ತಮ್ಮ ಔಷಧದಲ್ಲಿ ಪ್ರಾಣಿಗಳು ಹಾಗೂ ಮನುಷ್ಯನ ಮೂಳೆಯನ್ನು ಬಳಸುತ್ತಾರೆ ಎಂಬ ವಿಷಯ ತಿಳಿದು ತೀರಾ ಕಂಗಾಲಾಗಿದ್ದೇನೆ.
ಇಡೀ ಜಗತ್ತೇ ಒಂದಲ್ಲಾ ಒಂದು ರೀತಿಯಲ್ಲಿ ಮಾಂಸಾಹಾರಿ ಎನ್ನಿಸಲು ಶುರುವಾಗಿದೆ. ಪಕ್ಕಾ ಸಸ್ಯಾಹಾರಿಗಳಿಗೆ ಜಗತ್ತಿನಲ್ಲಿ ತಿನ್ನಲು ಬಹಳ ಕಡಿಮೆ ಆಯ್ಕೆಗಳಿವೆ ಎಂಬುದು ಖಚಿತವಾಗಿದೆ. ಹಾಗಾಗಿ ಮುಂದಿನ ಜನ್ಮದಲ್ಲಾದರೂ ನಾನು ಮಾಂಸಾಹಾರಿಯಾಗಿ ಹುಟ್ಟುವ ಆಸೆಯಾಗಿದೆ.

ಇಷ್ಟೆಲ್ಲಾ ಹೇಳಿ ನಾನು ನಿಮ್ಮ ತಲೆ ತಿಂದೆನೇನೋ? ನನ್ನ ಈ ಅನುಮಾನಕ್ಕೆ ನೀವೇನಾದರೂ ಹೂಂ ಅಂದರೆ... ನಾನು ನಿಮ್ಮ ತಲೆತಿಂದ ಮಾಂಸಾಹಾರಿಯಾದೆನಲ್ಲಾ ಎಂಬ ಪಾಪಪ್ರಜ್ಞೆ ನನ್ನನ್ನು ಕಾಡುತ್ತದೆ! ದಯವಿಟ್ಟು ಕಾಪಾಡಿ.
ಇಂತಿ ಸಸ್ಯಾಹಾರಿ ಸತ್ಯಣ್ಣ



Kannada Prabha issue dated January 9, 2006

Are you a Pure Vegetarian?.. Life is Difficult for you!

Horrible Life Story of a Vegan

--

No comments: