Sunday, April 19, 2009

ಇಂಟರ್ನೆಟ್ ಮೂಲಕ ಮತ ಹಾಕಿ!

ನನ್ನ ಅರ್ಧ ಜೀವನ ಇಂಟರ್ನೆಟ್ ಮೂಲಕ ನಡೆಯುತ್ತಿದೆ. ಬ್ಯಾಂಕು, ಮನೆಯ ಎಲ್ಲಾ ಬಿಲ್ ಪೇಮೆಂಟು, ಪ್ರಯಾಣ ಟಿಕೆಟ್ ಬುಕಿಂಗು, ಹೊಟೆಲ್ ಬುಕಿಂಗು, ಸಿನೆಮಾ ಟಿಕೆಟ್ ಬುಕಿಂಗು ಸೇರಿದಂತೆ ಎಲ್ಲಾ ಇಂಟರ್ನೆಟ್ಟಲ್ಲೇ.... ಇಂಥ `ಹೈಟೆಕ್ ನಾನು' ಈಗ ನಾಲಾಯಕ್ ಒಬ್ಬರಿಗೆ ಮತ ಹಾಕಲು ಯಾವುದೋ ಮತಗಟ್ಟೆ ಹುಡುಕಿಕೊಂಡು ಹೋಗಿ ಕ್ಯೂ ನಿಲ್ಲುವುದೇ? ಛೆ.. ಛೆ..

ಈ ಯೋಚನೆ ಬಂದಾಗಲೆಲ್ಲ, ಮತ ಹಾಕಲೂ ಇಂಟರ್ನೆಟ್ ವ್ಯವಸ್ಥೆಯಿದ್ದರೆ, ಮನೆಯಲ್ಲೋ, ಆಫೀಸಿನಲ್ಲೋ ಕುಳಿತು ಮತ ಚಲಾಯಿಸಬಹುದಿತ್ತು ಅಂತ ನನಗೆ ಅನೇಕ ಬಾರಿ ಅನಿಸಿದೆ. ನಿಮಗೂ ಅನಿಸಿರಬಹುದು. ನನಗೆ ಇಂಟರ್ನೆಟ್ ಆಧಾರಿತ ಮತದಾನ ವ್ಯವಸ್ಥೆ ಕುರಿತು ಅಪಾರ ಭರವಸೆಯಿದೆ. ಇವತ್ತಲ್ಲಾ ನಾಳೆ ಈ ವ್ಯವಸ್ಥೆ ಜಾರಿಗೆ ಬಂದೇ ಬರುತ್ತದೆ ಎಂದು ಬಲವಾಗಿ ನಂಬಿರುವವನು ನಾನು.

ಈ ವ್ಯವಸ್ಥೆ ಜಾರಿಗೆ ಬಂದರೆ, ಒಟ್ಟಾರೆ ಮತದಾನ ಪ್ರಮಾಣ, ಅದರಲ್ಲೂ ನಗರ ಪ್ರದೇಶಗಳಲ್ಲಿ ಗಣನೀಯವಾಗಿ ಹೆಚ್ಚಾಗುತ್ತದೆ. ಈಗಿನ ಮತದಾನ ಪ್ರಕ್ರಿಯೆಯಿಂದ ಸುಶಿಕ್ಷಿತರು ದೂರ ಉಳಿಯುತ್ತಿದ್ದಾರೆ. ಒಂದು ಸಮೀಕ್ಷೆಯ ಪ್ರಕಾರ, ಮತಗಟ್ಟೆಗೆ ಖುದ್ದಾಗಿ ಬಂದು ಮತ ಹಾಕುವುದಕ್ಕಿಂತ ಇಂಟರ್ನೆಟ್ಟಿನಲ್ಲಿ ಮತ ಹಾಕಲು ಇಷ್ಟ ಪಟ್ಟವರ ಸಂಖ್ಯೆ ಶೇ.66. (ನನ್ನನ್ನೂ ಸೇರಿದಂತೆ!) ಅಂದರೆ, ಅವರೆಲ್ಲ ಇಂಟರ್ನೆಟ್ ಮೂಲಕ ಮತದಾನದಲ್ಲಿ ಪಾಲ್ಗೊಳ್ಳುವುದರಿಂದ ಚುನಾವಣೆಯಲ್ಲಿ ಸುಶಿಕ್ಷಿತರ ಪಾತ್ರ ಹೆಚ್ಚುತ್ತದೆ. ಆಗ, ಉತ್ತಮ ಅಭ್ಯರ್ಥಿಯ ಆಯ್ಕೆ ಸಾಧ್ಯವಾಗುತ್ತದೆ. ಜಾತಿ ಆಧಾರಿತ ಚುನಾವಣಾ ಫಲಿತಾಂಶ ಬರುವುದಿಲ್ಲ. ಸಾವಿರ ರುಪಾಯಿ ನೋಟು ಕೊಟ್ಟು ವೋಟು ಖರೀದಿಸುವ ಆಟ ಕಡಿಮೆಯಾಗುತ್ತದೆ. ಇದರಿಂದ ಒಟ್ಟಾರೆ ಪ್ರಜಾಪ್ರಭುತ್ವ ವ್ಯವಸ್ಥೆ ಬಲಗೊಳ್ಳುತ್ತದೆ - ಎಂದು ನನ್ನ ವಾದ.

ಈಗ ದೊಡ್ಡ ಪ್ರಶ್ನೆ, ಇಂಟರ್ನೆಟ್ ಆಧಾರಿತ ಮತದಾನ ಮಾಡುವುದು ಹೇಗೆ? ಇಂಟರ್ನೆಟ್ ಮೂಲಕ ಬೋಗಸ್ ವೋಟಿಂಗ್, ಮಾಸ್ ವೋಟಿಂಗ್ ಹಾಗೂ ಸೈಬರ್ ಫ್ರಾಡ್ ಸಮಸ್ಯೆಯಿದೆಯಲ್ಲ! ಅದನ್ನು ಬಗೆಹರಿಸುವುದು ಹೇಗೆ? ಇದಕ್ಕೆ ತಕ್ಷಣ ಸಿದ್ಧ ಉತ್ತರ ಇಲ್ಲ. ಆದರೆ, ಈ ಕುರಿತು ಅಧ್ಯಯನ ಹಾಗೂ ಸಂಶೋಧನೆಗಳು ನಡೆಯುತ್ತಿರುವುದು ನಿಜ.

ಅಮೆರಿಕದ ಕೆಲವು ರಾಜ್ಯಗಳಲ್ಲಿ ರೆಫರೆಂಡಮ್ಮಿಗೆ, ಕೆನಡಾದ ಕೆಲವು ಮುನಸಿಪಾಲಿಟಿಗೆ ಹಾಗೂ ಇನ್ನೂ ಕೆಲವು ಯೂರೋಪ್ ದೇಶಗಳಲ್ಲಿ ಇಂಟರ್ನೆಟ್ ಆಧಾರಿತ ವೋಟಿಂಗ್ ವ್ಯವಸ್ಥೆಯನ್ನು ಈಗಾಗಲೇ ಪ್ರಯೋಗಿಕವಾಗಿ ಬಳಸಲಾಗುತ್ತಿದೆ. ಅದಕ್ಕೆ ಸೈಬರ್ ವೋಟಿಂಗ್ ಅಂತಲೂ ಹೆಸರಿದೆ. VOI - Voting Over Internet ಅಂತಲೂ ಹೇಳುತ್ತಾರೆ. ಇಷ್ಟೇ ಅಲ್ಲದೇ, ಇನ್ನೂ ಹಲವಾರು ರೀತಿಯ ಪ್ರಯೋಗಗಳು ನಡೆಯುತ್ತಿವೆ. HTML, XML, ಥರ EML - Election Markup Language ಅನ್ನೋ ತಾಂತ್ರಿಕ ಪ್ರೋಟೋಕಾಲನ್ನೇ ಅಭಿವೃದ್ಧಿಪಡಿಸಲಾಗುತ್ತಿದೆ. ಆದರೆ, ಯಾವ ಪಕ್ಕಾ ವ್ಯವಸ್ಥೆಯೂ ಇನ್ನೂ ಸಿದ್ಧವಾಗಿಲ್ಲ.

ಕಾಗದದ ವೋಟಿನಂತೆ, ಡಿಜಿಟಲ್ ವೋಟಿಗೂ ಕಾನೂನಿನ ಸಮ್ಮತಿ ಇರಬೇಕಾಗುತ್ತದೆ. ಭಾರತದಲ್ಲಿ, EVMನಲ್ಲಿ ವೋಟ್ ಹಾಕಿದರೂ, ಮತದಾರ ಖುದ್ದಾಗಿ ತಾನು ವೋಟು ಚಲಾಯಿಸಿದ್ದಕ್ಕಾಗಿ ಸಹಿ ಅಥವಾ ಹೆಬ್ಬೆಟ್ಟು ಗುರುತು ಹಾಕಿರುತ್ತಾನೆ. ಸೈಬರ್ ವೋಟಿನಲ್ಲಿ ಈ ವೆರಿಫಿಕೇಶನ್ ಮಾಡುವುದು ಹಾಗೂ ಸಾಂವಿಧಾನಿಕ ಸಾಕ್ಷಿಪತ್ರ ಪಡೆಯುವುದು ಹೇಗೆ ಎಂಬ ಪ್ರಶ್ನೆ ಇನ್ನೂ ಬಗೆಹರಿದಿಲ್ಲ. ಅದಕ್ಕೆ, ಬಯೋಮೆಟ್ರಿಕ್ ವೆರಿಫಿಕೇಶನ್, ರಜಿಸ್ಟರ್ಡ್ ಡಿಜಿಟಲ್ ಸಿಗ್ನೇಚರ್ ಅಥವಾ PKI - Public Key Infrastructure ತಂತ್ರಜ್ಞಾನ ಪರಿಹಾರ ಎಂದುಕೊಳ್ಳಲಾಗುತ್ತಿದೆ. ನನಗೆ ಈ ವಿಷಯ ತಿಳಿಸಿದ್ದು ಅಮೆರಿಕ ಸಂವಿಧಾನದ ಪರಿಣತ ಅಕ್ರಂ ಎಲಿಯಾಸ್.


ಎನಿವೇ, ಈ ನಡುವೆ ಲೈಟಾಗಿ ನನ್ನದೆರಡು ಫಂಡಾ :-)

ಫಂಡಾ 1.

ಇಂಟರ್ನೆಟ್ ವೋಟಿಂಗ್ ವ್ಯವಸ್ಥೆ ಇರಬೇಕು ಅಂತ ನನ್ನ ಒತ್ತಾಯ. ಆದರೆ, ಸುರಕ್ಷತಾ ಕಾರಣಕ್ಕಾಗಿ ಈ ಸೌಕರ್ಯ ಎಲ್ಲರಿಗೂ ಸಿಗಬಾರದು. ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯ ಪಡೆದಿರುವ ಹಾಗೂ ಕನಿಷ್ಠ 10 ಸಾವಿರ ರುಪಾಯಿ ಬ್ಯಾಂಕ್ ಬ್ಯಾಲೆನ್ಸ್ ಇರುವ ನೌಕರರಿಗೆ ಅಥವಾ ಕನಿಷ್ಠ 3 ವರ್ಷ ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಿರುವ ವೃತ್ತಿಪರರಿಗೆ/ಬಿಸಿನೆಸ್ ವ್ಯಕ್ತಿಗಳಿಗೆ ಮಾತ್ರ ಅಂತರ್ಜಾಲದ ಮೂಲಕ ವೋಟ್ ಹಾಕಲು ಅನುವು ಮಾಡಿಕೊಡಬೇಕು. (ಇವೆರಡೂ ಇಲ್ಲದವರಿಗೆ ಮಾಮೂಲಿ ಮಾದರಿ ಹಾಗೂ 2ನೇ ಅಂತರ್ಜಾಲ ಮಾದರಿಯಿದೆ.)

ಇಂಥ ಅರ್ಹ ಮತದಾರರು, ತಮ್ಮ ಬ್ಯಾಂಕ್ ಖಾತೆಗೆ ಲಾಗಿನ್ ಆಗಿ, ಅಲ್ಲಿ, ತಮ್ಮ ವೋಟರ್ ಐಡಿ ನಂಬರ್ ತುಂಬಿ ಮತ ಚಲಾಯಿಸಬೇಕು. ಹೀಗೆ ಮತ ಚಲಾಯಿಸುವಾಗ ಮತದಾರನ ಬ್ಯಾಂಕ್ ಖಾತೆಯಿಂದ 1 ರುಪಾಯಿ ಡಿಡಕ್ಟ್ ಆಗಬೇಕು. ಅಂದರೆ, ಮತದಾರ ಮತ ಚಲಾಯಿಸಲು ತನ್ನ ಇಂಟರ್ನೆಟ್ ಬ್ಯಾಂಕಿಂಗಿನ ಟ್ರಾನ್ಸಾಕ್ಷನ್ ಪಾಸವರ್ಡನ್ನೇ ಬಳಸಬೇಕು.

ಇದರಿಂದ - ಲಾಭವೇನು?


  • ಈ ಪದ್ಧತಿಯಲ್ಲಿ ಮತದಾರನ ವೆರಿಫಿಕೇಶನ್ ಪಕ್ಕಾ ಆಗುತ್ತದೆ. ಬೋಗಸ್ ವ್ಯಕ್ತಿಗಳು ಮತಹಾಕಲು ಆಗುವುದಿಲ್ಲ. ಏಕೆಂದರೆ, ತಲೆ ಇರುವ ಯಾವುದೇ ವ್ಯಕ್ತಿ ತನ್ನ ಬ್ಯಾಂಕಿಂಗ್ ಟ್ರಾನ್ಸಾಕ್ಷನ್ ಪಾಸವರ್ಡನ್ನು ಬೇರೆಯವರಿಗೆ ಹೇಳಲಾರ. ಅಥವಾ 500 ರುಪಾಯಿಗೆ ಮಾರಿಕೊಳ್ಳಲಾರ.

  • ಈಗಿನಂತೆ, ಬೋಗಸ್ ಮತದಾರರನ್ನು ಸೃಷ್ಟಿಸಲು ಸಾಧ್ಯವಿಲ್ಲ ಏಕೆಂದರೆ, ಪ್ರತಿ ಬ್ಯಾಂಕ್ ಅಕೌಂಟ್ ತೆರೆಯಲು ಆರ್.ಬಿ.ಐ ಮಾರ್ಗದರ್ಶಿ ಸೂತ್ರಗಳು ತುಂಬಾ ಕಟ್ಟುನಿಟ್ಟಾಗಿವೆ. ವೋಟರ್ಸ ಐಡಿಗಿಂತ ಬ್ಯಾಂಕ್ ಐಡಿ ಉತ್ತಮ.

  • ಆದರೂ, ಗಣಿಧಣಿಗಳಂಥ ಶ್ರೀಮಂತ ಅಭ್ಯರ್ಥಿಗಳು ತಮ್ಮ ಪರಿಚಯದ ಬ್ಯಾಂಕಲ್ಲೆಲ್ಲ 'ಅಕ್ಷರಶಃ ಮತ ಬ್ಯಾಂಕ್' ಸ್ಥಾಪಿಸಿಕೊಳ್ಳುವ ಸಲುವಾಗಿ, ಕೊಳಚೆ ಪ್ರದೇಶಗಳ ಮತದಾರರ ಹೆಸರಿನಲ್ಲೂ ಬ್ಯಾಂಕ್ ಅಕೌಂಟ್ ತೆರೆದು ಅದರ ಇಂಟರ್ನೆಟ್ ಕಂಟ್ರೋಲನ್ನು ತಾವು ಇಟ್ಟುಕೊಳ್ಳುವ ಸಾದ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಆದರೆ, "ಪ್ರತಿ ಅಕೌಂಟಿನಲ್ಲಿ 10000 ರುಪಾಯಿ ಕನಿಷ್ಠ ಇರಬೇಕು ಹಾಗೂ ಇಂಟರ್ನೆಟ್ ಮತ ಹಾಕುವವರು ಯಾವುದಾದರೂ ಪ್ರತಿಷ್ಠಿತ ಕಂಪನಿ ಅಥವಾ ಸರ್ಕಾರಿ ನೌಕರರಾಗಿರಬೇಕು. ಇಲ್ಲವೇ, ಕನಿಷ್ಠ 3 ವರ್ಷ ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಿರಬೇಕು" ಎಂಬ ಅಂಶವನ್ನು ಗಮನಿಸಿ. ಈ ಷರತ್ತಿನಿಂದಾಗಿ, ಬೋಗಸ್ ಮತದಾರರನ್ನು ಸೃಷ್ಟಿಸುವುದು ಎಂಥ ಶ್ರೀಮಂತರಿಗೂ ಕಷ್ಟ ಹಾಗೂ ಬಲು ದುಬಾರಿ.

ಆದರೆ, ನನ್ನ-ನಿಮ್ಮಂಥ ಸಾಚಾ ಮತದಾರರಿಗೆ ಈ ಪದ್ಧತಿ ಬಹಳ ಅನುಕೂಲ ತಾನೇ?

ಫಂಡಾ 2

ಇದು ಈಗಿನ ಕೋರ್ ಬ್ಯಾಂಕಿಂಗ್ ಮಾದರಿಯ, ಕೋರ್ ವೋಟಿಂಗ್ ವ್ಯವಸ್ಥೆ. ಅಂದರೆ, ನೋಂದಾಯಿತ ಮತದಾರ ದೇಶದ ಯಾವುದೇ ಮತಗಟ್ಟೆ ಅಥವಾ ಬ್ಯಾಂಕಿಗೆ ಹೋಗಿ ಮತ ಚಲಾಯಿಸಲು ಅವಕಾಶವಿರಬೇಕು. ಉತ್ತರ ಪ್ರದೇಶದ ಮತದಾರ ಬೆಂಗಳೂರಿನ ಶಿವಾಜಿನಗರದ ಮತಗಟ್ಟೆಗೆ ಹೋಗಿ ಉತ್ತರ ಪ್ರದೇಶದ ತನ್ನ ಕ್ಷೇತ್ರದ ಅಭ್ಯರ್ಥಿಗೆ ಮತ ಚಲಾಯಿಸುವಂತಿರಬೇಕು. ಅಥವಾ ಬೆಂಗಳೂರಿನ ಮತದಾರ ಹೈದರಾಬಾದಿನ ಬ್ಯಾಂಕ್ ಶಾಖೆಯೊಂದರಲ್ಲಿ ತನ್ನೂರಿನ ಅಭ್ಯರ್ಥಿಗೆ ಮತದಾನ ಮಾಡುವಂತಿರಬೇಕು. ಮತದಾರರ ಗುರುತಿನ ಚೀಟಿ, ಸಹಿ ಅಥವಾ ಹೆಬ್ಬೆಟ್ಟು ಗುರುತುಗಳನ್ನು ಮತಗಟ್ಟೆ ಅಥವಾ ಬ್ಯಾಂಕ್ ಅಧಿಕಾರಿ, ಆನ್ ಲೈನಲ್ಲಿ ಪರಿಶೀಲಿಸಿ ಆ ಮತದಾರನಿಗೆ ಆನ್ ಲೈನಲ್ಲೇ ಮತಹಾಕಲು ಅವಕಾಶ ನೀಡಬೇಕು. ಈ ಮತ ಉದ್ದೇಶಿತ ಕ್ಷೇತ್ರದ ಅಭ್ಯರ್ಥಿಯ ಲೆಕ್ಕಕ್ಕೆ ಜಮಾ ಆಗಬೇಕು

ಲಕ್ಷಾಂತರ ರುಪಾಯಿಯನ್ನೇ ಹೀಗೆ ದೇಶದ ಎಲ್ಲೆಂದರಲ್ಲಿ ಜಮಾ ಮಾಡಲು ಅವಕಾಶವಿರುವಾಗ ಒಂದು 'ಜುಜುಬಿ' ವೋಟನ್ನು 'ಕೋರ್ ವೋಟಿಂಗ್' ಪದ್ಧತಿಯಲ್ಲಿ ಜಮಾ ಮಾಡಲು ಸಾಧ್ಯವಿಲ್ಲವೇ?

ಇದರಿಂದ ಆಗುವ ಲಾಭಗಳು:


  • ನಾವು ಭಾರತದಲ್ಲಿ ಯಾವುದೇ ಊರಿಗೆ ಹೋದರೂ, ಮತದಾನದಿಂದ ವಂಚಿತರಾಗಬೇಕಿಲ್ಲ.
  • ಮತದಾರರ ವೆರಿಫಿಕೇಶನ್ ಪಕ್ಕಾ. ಏಕೆಂದರೆ, ಈಗಿನ ಮತದಾನ ಪದ್ಧತಿಯೇ ಇಲ್ಲೂ ಅನ್ವಯವಾಗುತ್ತದೆ.
  • ತಾಂತ್ರಿಕವಾಗಿ ಜಾರಿಗೊಳಿಸುವುದು ಸುಲಭ.

ಚುನಾವಣಾ ಆಯೋಗ ಈ ಬ್ಲಾಗ್ ಓದುವುದಿಲ್ಲ ಅಂತ ನನಗೆ ಗೊತ್ತು. ಆದರೆ, ಈ 2 ಫಂಡಾಗೆ ನೀವೇನಂತೀರಿ?

4 comments:

Mohan said...

Yes , One or other day it may implement(may be 22 Century ) here in Indian , because of politician and politics. You have correct information on Internet voting, they are doing lot of work on that, Good article, But you know no one think technology to reach common man that is draw back of our country .
Regards
Mohan

ವಿನಾಯಕ ಕೆ.ಎಸ್ said...

ಮತ ಹಾಕುವ ಮನಸಿದ್ದರೆ, ಚುನಾವಣೆಗೊಂದು ದಿನ, ಒಂದು ದಿನ ಅಲ್ಲದಿದ್ದರೂ ಒಂದಷ್ಟು ದಿನದ ಒಂದಷ್ಟು ಸಮಯ ಕೊಡುವುದು ಎಂಥಾ ದೊಡ್ಡ ವ್ಯಕ್ತಿಗು ಸಾಹಸದ ಕಾಯಕವಾಗಲಾರದು. ಆದರೆ, ನಾವೇಕೆ ಮತ ಹಾಕಬೇಕು ಎಂಬುದು ಈಗಿನ ಮುಖ್ಯ ಪ್ರಶ್ನೆ...ಅದಕ್ಕೆ ಮೊದಲು ಉತ್ತರ ಹುಡುಕಬೇಕಿದೆ...

ಶಿವಪ್ರಕಾಶ್ said...

yes ravi,
even i m expecting the same feature..
it will be very much useful.
i dont know when this will be gets implemented.

Anonymous said...

i agree with u