Life is Short ಅಂತಾರೆ ಕೆಲವರು. ಆದರೆ, ಈಗ ಇಂಟರ್ನೆಟ್ಟಿನ ‘ಸೋಶಿಯಲ್ ನೆಟ್‌ವರ್ಕಿಂಗ್’ನಿಂದಾಗಿ ನಮ್ಮ ಲೈಫು ಡಬಲ್ ಆಗಿದೆ! ಒಂದೇ ಬಾರಿಗೆ ಎರಡೆರಡು ಜನ್ಮ ಸಾಧ್ಯ. ಒಂದು ಭೂಲೋಕದಲ್ಲಿ. ಇನ್ನೊಂದು ಇಂಟರ್‌ರ್ನೆಟ್ ಲೋಕದಲ್ಲಿ! ಅದು ಸತ್ಯವೂ ಅಲ್ಲದ, ಮಿಥ್ಯವೂ ಅಲ್ಲದ, ಕನಸೂ ಅಲ್ಲದ, ನನಸೂ ಅಲ್ಲದ ಜೀವನ. ವರ್ಚುವಲ್ ಲೈಫ್. ನಾನು ಕನ್ನಡಪ್ರಭದ 'ಸಖಿ' ಪಾಕ್ಷಿಕಕ್ಕೆ ಬರೆದ ಸೋಶಿಯಲ್ ನೆಟ್‌ವರ್ಕಿಂಗ್ ಕುರಿತ ಲೇಖನ ಇದು.
Heyyyyy Wassup? ಏನೂ ಸ್ಕ್ರಾಪ್ಸೇ ಇಲ್ಲ?
ಏಯ್... I dumped Orkut. ಆಮ್ ಆನ್ Facebook. Dunno?
wth! (What The Hell)
hmm..
but, y?
that ssssucks
y?
ಅದ್ಯಾರಿಗೋ ನನ್ನ asl (Age, Sex, Location) ಗೊತ್ತಾಯ್ತು. ಸೋ. ಅದನ್ನ ಬಿಟ್ಟೆ.
ಬಟ್ txt ಮಾಡ್ಬೋದಿತ್ತಲ್ಲ?
Status ಅಪ್‌ಡೇಟ್ ಮಾಡಿದ್ನಲ್ಲಾ. Y?, ನನ್ ಟ್ವೀಟೂ ನೋಡಿಲ್ವಾ?
U on Twitter?
ss... follow me @sakhi
k. cusn (OK. See You Soon)
ಆಕೆ ಹೈದರಾಬಾದ್‌ನಲ್ಲಿ. ಈಕೆ ಬೆಂಗಳೂರಲ್ಲಿ. ಈ ಸಂಭಾಷಣೆ ನಡೆದದ್ದು gmail Chatನಲ್ಲಿ. ಅವರಿಬ್ಬರೂ ನೆಟ್‌ಮೇಟ್ಸು. ಎರಡು ವರ್ಷದಿಂದ ಫ್ರೆಂಡ್ಸು. ಒಬ್ಬರನ್ನೊಬ್ಬರು ನೋಡಿಲ್ಲ. ಇಬ್ಬರೂ ಒರಿಜಿನಲ್ ಹುಡುಗೀರಾ? ಅಥವಾ ಆನ್‌ಲೈನಲ್ಲಿನ ಡುಪ್ಲಿಕೇಟ್ ಅವತಾರವಾ! ಗೊತ್ತಿಲ್ಲ. ಬಟ್ ಇಟ್ಸ್ ಓಕೆ. ವರ್ಚುವಲ್ ಲೈಫ್ ಈಸ್ ವೆರೀ ಕೂಲ್.
ಈಗಿನ ಹೊಸ ಪೀಳಿಗೆಯ ಹುಡುಗ ಹುಡುಗಿಯರೇ ಹಾಗೆ. ಅವರಿಗೆ ಒಂದೇ ಬಾರಿಗೆ ಎರಡೆರಡು ಜನ್ಮವಿದೆ. ಒಂದು ಭೂಲೋಕದಲ್ಲಿ. ಇನ್ನೊಂದು ಇಂಟರ್‌ರ್ನೆಟ್ ಲೋಕದಲ್ಲಿ!
ಸುಳ್ಳಲ್ಲ... ಭೂಮಿಯಲ್ಲಿ ಇರೋ ಹುಡುಗ ಅಂತರ್ಜಾಲದಲ್ಲಿ ಹುಡುಗಿಯಾಗಿರಬಹುದು. ನೆಲದಲ್ಲಿ ನಾಚುತ್ತಾ ನಡೆದಾಡೋ ಹುಡುಗಿ ಇಂಟರ್ನೆಟ್ಟಲ್ಲಿ ಸಖತ್ ರೋಮ್ಯಾಂಟಿಕ್ ಆಗಿ ನಲಿದಾಡಬಹುದು. ಕನ್ನಡಿಯ ಮುಂದಿನ ಬ್ಲಾಕ್ ಬ್ಯೂಟಿ, ಕಂಪ್ಯೂಟರ್ ವಿಂಡೋದಲ್ಲಿ ಫೇರ್ ಆಂಡ್ ಲೌವ್ಲಿ ಎನಿಸಿಕೊಳ್ಳಬಹುದು. ಕಾಲೇಜು ಆವರಣದಲ್ಲಿ ಅಂತರ್‌ಮುಖಿ, ಅಂತರ್ಜಾಲದಲ್ಲಿ ವಾಚಾಳಿ ಸಖಿ... ಅಥವಾ ನೋ ಡೋಂಗಿ... ರಕ್ತ ಮಾಂಸದ ವಾಸ್ತವ ಜಗತ್ತಿನಲ್ಲೂ ವೈರು ಸಿಲಿಕಾನಿನ ಭ್ರಾಮಕ ಜಗತ್ತಿನಲ್ಲೂ ಆಕೆಯ ವ್ಯಕ್ತಿತ್ವ ಒಂದೇ ಆಗಿರಬಹುದು.
Life is Short ಅಂತಾರೆ ಕೆಲವರು. ಆದರೆ, ಈಗ ಇಂಟರ್ನೆಟ್ಟಿನ ‘ಸೋಶಿಯಲ್ ನೆಟ್‌ವರ್ಕಿಂಗ್’ನಿಂದಾಗಿ ನಮ್ಮ ಲೈಫು ಡಬಲ್ ಆಗಿದೆ! ಸತ್ತ ಮೇಲೆ ಏನಾಗ್ತೀವೋ, ಯಾವ ಲೋಕಕ್ಕೆ ಹೋಗ್ತೀವೋ ಗೊತ್ತಿಲ್ಲ. ಆದರೆ, ಈಗಿಂದೀಗ ಅಂತರ್ಜಾಲ ಲೋಕದಲ್ಲಿ ನಮಗೆ ಬೇಕಾದಂಥ ಲೈಫು ಪಡೆಯುವುದು ಸಾಧ್ಯ.
ನಿಜ ಜೀವನದಲ್ಲಿ ನಮಗೆ ಹಿತವಾಗಿರುವವರಿಗಿಂತ ಅಲರ್ಜಿಯಾಗುವವರ ಜೊತೆಯೇ ಒಡನಾಟ ಅನಿವಾರ್ಯವಾಗುತ್ತದೆ. ನಮಗೆ ಬೇಕಾದವರು ಇನ್ಯಾರಿಗೋ ಸಿಕ್ಕಿರುತ್ತಾರೆ. ಅಂತರ್ಜಾಲದ ಸೋಷಿಯಲ್ ನೆಟ್‌ವರ್ಕಿಂಗ್‌ನಲ್ಲಿ ಹಾಗಲ್ಲ. ಅಲ್ಲಿ ನಮಗೆ ಇಷ್ಟವಾಗುವಂಥವರ ಗ್ಯಾಂಗ್ ಕಟ್ಟಿಕೊಳ್ಳಬಹುದು. ಅವರ ಜೊತೆ ವಾಸ್ತವ ಜಗತ್ತಿನಷ್ಟೇ ನೈಜವಾದ ಜೀವನ ಸಾಗಿಸಬಹುದು. ನಮಗೆ ಪ್ರೀತಿಯಾಗುವಂಥ ಅಪ್ಪ, ಅಮ್ಮ, ಅಣ್ಣ, ಅಕ್ಕ, ತಮ್ಮ, ತಂಗಿ, ಗಂಡ, ಹೆಂಡತಿ, ನೆರೆಹೊರೆ, ಫ್ರೆಂಡ್ಸ್ ಆಂಡ್ ಫಿಲಾಸಫರ್‌ಗಳ ಹೊಸ ಸೋಷಿಯಲ್ ವ್ಯವಸ್ಥೆಯನ್ನೇ ಸ್ಥಾಪಿಸಿಕೊಳ್ಳಬಹುದು. ಇಂಟರ್ನೆಟ್ಟಿಗೆ ಲಾಗಿನ್ ಆದಾಗಲೆಲ್ಲ ಅವರ ಜೊತೆ ಮಾನಸಿಕ ಜೀವನ ಸಾಗಿಸಬಹುದು. ಅದು ಸತ್ಯವೂ ಅಲ್ಲದ, ಮಿಥ್ಯವೂ ಅಲ್ಲದ, ಕನಸೂ ಅಲ್ಲದ, ನನಸೂ ಅಲ್ಲದ ಜೀವನ. ವರ್ಚುವಲ್ ಲೈಫ್.
Thanks to Social Networking sites, ಇಂಟರ್ನೆಟ್ಟಿನಲ್ಲಿರುವ, ನಮಗಿಷ್ಟವಾಗುವ, ನಿಜವಾದ ವ್ಯಕ್ತಿಗಳ ಜೊತೆ ನಮ್ಮ ಒಡಲಾಳದ ತೊಳಲಾಟವನ್ನು ತೋಡಿಕೊಳ್ಳಬಹುದು. ಅಳು ಉಮ್ಮಳಿಸಿದರೆ ಅತ್ತು ಹಗುರಾಗಬಹುದು. ಸಂತೋಷವಾದಾಗ ಹಂಚಿಕೊಂಡು ಸಂಭ್ರಮಿಸಬಹುದು. ಕೀಟಲೆ ಮಾಡಬೇಕೆನಿಸಿದಾಗ ತುಂಟಾಟ ಆಡಬಹುದು, ದ್ವಂದ್ವ ಎದುರಾದಾಗ, ದಿಕ್ಕು ತೋಚದಾದಾಗ, ಧೈರ್ಯ ಕುಂದಿದಾಗ, ಅವಮಾನವನ್ನು ಎದುರಿಸಬೇಕಾದಾಗ ಯಾರದ್ದಾದರೂ ಸಲಹೆ ಬೇಕೆನಿಸಿದಾಗ... ಆಪ್ತ ಸಮಾಲೋಚನೆ ನಡೆಸಬಹುದು.
ಸೋಷಿಯಲ್ ನೆಟ್‌ವರ್ಕಿನ ಕಾಲೇಜು ಫ್ರೆಂಡಿಂದ ನೋಟ್ಸನ್ನೂ, ನೋಟ್ಸಿನ ಡೌಟಿಗೆ ಪರಿಹಾರವನ್ನೂ, ಅದರ ಜೊತೆಗೇ ಸ್ನೇಹವನ್ನೂ, ಪರಿಣಾಮವಾಗಿ ಪ್ರೀತಿಯನ್ನೂ, ಮುಂದುವರಿದು ರೋಮಾನ್ಸನ್ನೂ... ಥೂ ಪೋಲೀ ಗೀಲೀ ಬೇಡ... ವಿನಾಕಾರಣ ಉಲ್ಲಾಸಗೊಳ್ಳಲು ಒಂದು ಕಾರಣವನ್ನೂ ಇಂಟರ್ನೆಟ್ಟಿನ ಸೋಶಿಯಲ್ ನೆಟ್‌ವರ್ಕ್ ನೀಡುತ್ತದೆ.
ಭಾವನಾತ್ಮಕ ಜೀವನಕ್ಕಷ್ಟೇ ಅಲ್ಲ ಸೋಷಿಯಲ್ ನೆಟ್‌ವರ್ಕ್ ಅಂದರೆ, ಕೇವಲ ಭಾವನಾತ್ಮಕ ಸಾಂತ್ವನ ನೀಡುವ ‘ಇಮೋಷನಲ್ ವೆಬ್‌ತಾಣ’ ಅಂತೇನೂ ಭಾವಿಸಬೇಕಿಲ್ಲ. ಈ ನೆಟ್‌ವರ್ಕು... ವಿದ್ಯಾರ್ಥಿಗಳಿಗೆ ಟ್ಯೂಷನ್ ಕ್ಲಾಸು, ಉದ್ಯಮಿಗಳಿಗೆ ಮಾರ್ಕೆಟಿಂಗ್ ಚಾನಲ್ಲು, ರಿಟೇಲ್ ವ್ಯಾಪಾರಿಗಳಿಗೆ ಚಿಲ್ಲರೆ ಮಾರಾಟದ ಷೋರೂಮು, ಕಮಿಷನ್ ಬ್ರೋಕರ್‌ಗಳಿಗೆ ಕ್ಲಾಸಿಫೈಡ್ ಪೇಪರ್ರ್ಉಂ, ಸಮೀಕ್ಷೆ-ಸಂಶೋಧಕರಿಗೆ ಜನನಿಬಿಡ ಬಸ್ ಸ್ಟಾಂಡು, ಸಾಮಾನ್ಯ ಜನರಿಗೆ ಯೆಲ್ಲೋ ಪೇಜಸ್ಸು, ಉದ್ಯೋಗ ಹುಡುಕುವವರಿಗೆ ಎಚ್‌ಆರ್ ಕಲ್ಸಲ್ಟೆನ್ಸಿ, ಪತ್ರಕರ್ತರಿಗೆ ಸುದ್ದಿ ಸಿಗುವ ಹಾಟ್ ಸ್ಪಾಟು, ರಾಜಕಾರಣಿಗಳಿಗೆ ವಿಧಾನಸಭಾ ಕ್ಷೇತ್ರ, ಸುಮ್ಮನೆ ತಮಾಷೆ ಬೇಕಾದವರಿಗೆ ಎಂಟರ್‌ಟೈನ್‌ಮೆಂಟು, ಹೀಗೆ... ಸೋಷಿಯಲ್ ನೆಟ್‌ವರ್ಕು
ಅವರವರ ಭಾವಕ್ಕೆ... ಅವರವರರ ಲಾಭಕ್ಕೆ...
೨೦೦೮ರ ಅಮೆರಿಕದ ಚುನಾವಣೆಯ ಸಂದರ್ಭದಲ್ಲಿ ಬರಾಕ್ ಒಬಾಮಾ ಲಕ್ಷಾಂತರ ಜನ ಬೆಂಬಲಿಗರನ್ನೂ ಅವರಿಂದ ಮಿಲಿಯನ್‌ಗಟ್ಟಲೆ ದೇಣಿಗೆಯನ್ನೂ ನಂತರ ಅವರ ವೋಟನ್ನೂ ಪಡೆಯಲು ಸಾಧ್ಯವಾದದ್ದು ಸೋಷಿಯಲ್ ನೆಟ್‌ವರ್ಕಿಂಗ್ ಸೈಟುಗಳಿಂದ. ಇಂದು ವೋಡಾಫೋನ್‌ನ್ ಝೂಝೂ ಜಾಹೀರಾತು ಯೂಟ್ಯೂಬಿನಲ್ಲಿ ಲಭ್ಯ. ಆ ಜಾಹೀರಾತುಗಳಿಗೆ ಹತ್ತಾರು ಸಾವಿರ ಅಭಿಮಾನಿಗಳ ದಂಡು!
ಎರಡು ದಶಕದ ಹಿಂದೆ, ಈ-ಮೇಲ್ ಕ್ರಾಂತಿಯಾದ ಮೇಲೆ ಅಂತರ್ಜಾಲದಲ್ಲಿ ಸೋಷಿಯಲ್ ನೆಟ್‌ವರ್ಕಿಂಗ್ ಎಂಬ ಫಿನಾಮಿನಾ ಕೂಡ ಶುರುವಾಯಿತು. ಜಗತ್ತಿನ ಯಾವ್ಯಾವುದೋ ಭಾಗಗಳಿಂದ ಸಮಾನ ಆಸಕ್ತರು ಈ-ಮೇಲ್ ಮೂಲಕ ಗುಂಪು ಕಟ್ಟಿಕೊಳ್ಳಲಾರಂಭಿಸಿದರು. ಆದರೆ ಆಗ ಯಾರೂ ಅದನ್ನು ಸೋಷಿಯಲ್ ನೆಟ್‌ವರ್ಕಿಂಗ್ ಅಂತ ಕರೆಯುತ್ತಿರಲಿಲ್ಲ. ಸುಮ್ಮನೇ ‘ಈ-ಮೇಲ್ ಲಿಸ್ಟ್’ ಎನ್ನುತ್ತಿದ್ದರು. ನಂತರ, ಇದು ಫೋಟೋ, ಫೈಲು, ಕ್ಯಾಲೆಂಟರ್ ಮುಂತಾದವುಗಳನ್ನು ಹಂಚಿಕೊಳ್ಳುವ ‘ಗ್ರೂಪ್’ ಆಯಿತು. ನಂತರ, ಮದುವೆಗಾಗಿ ಗಂಡು-ಹೆಣ್ಣು ಹುಡುಕುವ ಮೆಟ್ರಿಮೋನಿಯಲ್ ತಾಣವಾಗಿ ಪ್ರವರ್ಧಮಾನಕ್ಕೆ ಬಂತು. ಇದಾದ ಮೇಲೆ, ದೀರ್ಘ ಕಾಲದ ವೈವಾಹಿಕ ಬಂಧನದ ಬದಲು, ತಕ್ಷಣದ ಮೋಜಿನ ಡೇಟಿಂಗಿಗಾಗಿ ವಿಶಾಲ ಮನಸ್ಸಿನ ಹುಡುಗ-ಹುಡುಗಿಯರನ್ನು ಅರಸುವ ಫ್ರೆಂಡ್‌ಫೈಂಡ್ ನೆಟ್‌ವರ್ಕ್‌ಗಳ ಭರಾಟೆ ಆರಂಭವಾಯಿತು. ಆಮೇಲೆ, ಸಜ್ಜನರೂ, ಮರ್ಯಾದಸ್ಥರೂ ತಮ್ಮ ಸಮಾನ ಮನಸ್ಕರ ಮಿತ್ರವೃಂದ ಸ್ಥಾಪಿಸಿಕೊಳ್ಳಲು ಅನುವಾಗುವ ಸೋಷಿಯಲ್ ನೆಟ್‌ವರ್ಕಿಂಗ್ ಸೈಟುಗಳು ಪ್ರಾರಂಭವಾದವು.
-ಹಲವು ವಿಧ
ಈಗ ಇಂಟರ್ನೆಟ್ಟಿನ ತುಂಬಾ ನೂರಾರು ಸೋಷಿಯಲ್ ನೆಟ್‌ವರ್ಕಿಂಗ್ ಸೈಟುಗಳು. Orkut, Myspace, Hi5, Facebookನಂಥ ಗೆಳೆಯರ ಬಳಗವಷ್ಟೇ ಅಲ್ಲ, ಬೇರೆ ಬೇರೆ ರೀತಿಯ ಸೋಷಿಯಲ್ ನೆಟ್‌ವರ್ಕಿಂಗ್ ಸೈಟುಗಳೂ ಆರಂಭವಾಗಿವೆ. Dig, Del.icio.us, Stumbleupon, Yahoo Buzzನಂಥ ಸೋಷಿಯಲ್, ಬುಕ್ ಮಾರ್ಕಿಂಗ್ ಸೈಟುಗಳು, Flickr, Picassaದಂಥ ಸೋಷಿಯಲ್ ಫೋಟೋ ಷೇರಿಂಗ್ ಸೈಟುಗಳು, Youtube, Vimeoದಂಥ ಸೋಷಿಯಲ್ ವಿಡಿಯೋ ಸೈಟುಗಳು, Twitter, Pingನಂಥ ಸೋಷಿಯಲ್ ಮೈಕ್ರೋ ಬ್ಲಾಗಿಂಗ್ ಸೈಟುಗಳು, Identi.caದಂಥ ಪಬ್ಲಿಕ್ ಟೈಮ್‌ಲೈನುಗಳು ಹೀಗೆ... ಹಲವು ವಿಧದ ಸೋಷಿಯಲ್ ನೆಟ್‌ವರ್ಕ್ ಆರಂಭವಾಗಿವೆ.
ಇಂದು ನಿಮ್ಮ ಈ-ಮೇಲ್ ತೆರೆದರೆ ಸಾಕು. ದಿನಕ್ಕೆ ಕನಿಷ್ಠ ಒಂದೆರಡಾದರೂ ಸೋಷಿಯಲ್ ನೆಟ್‌ವರ್ಕಿಗೆ ಸೇರಲು ನಿಮಗೆ ನಿಮ್ಮ ಯಾವುದೋ ಮಿತ್ರರಿಂದ ಆಹ್ವಾನ ಬಂದಿರುತ್ತದೆ. Tagged, Linkedin, Zorpia, Jaiku, Ning, yelp ಹೀಗೆ ಬೇರೆ ಬೇರೆ ವಿಚಿತ್ರ ಹೆಸರಿನ ಸೈಟಿನ ಆಹ್ವಾನಗಳು. ಕೆಲವೊಮ್ಮೆ ಈ ಆಹ್ವಾನಗಳು ಎಷ್ಟು ಕಿರಿಕಿರಿ ಉಂಟುಮಾಡುತ್ತವೆ ಅಂದರೆ, Tagged.comಗೆ ಜಗತ್ತಿನ ಅತ್ಯಂತ ಕಿರಿಕಿರಿಯ ಸೋಷಿಯಲ್ ನೆಟ್‌ವರ್ಕ್ ಅಂತ ಟೈಮ್ ಮ್ಯಾಗ್‌ಝಿನ್ ಬಿರುದು ನೀಡಿದೆ!
ಎಲ್ಲರೂ, ಎಲ್ಲ ಸೋಷಿಯಲ್ ನೆಟ್‌ವರ್ಕನ್ನೂ ಸೇರುವುದಾಗಲೀ, ಎಲ್ಲ ನೆಟ್‌ವರ್ಕ್‌ನಲ್ಲಿ ಇರುತ್ತೇನೆ ಎನ್ನುವುದಾಗಲೀ ಮೂರ್ಖತನ. ಹಾಗೆಯೇ, ಒಂದೂ ಸೋಷಿಯಲ್ ನೆಟ್‌ವರ್ಕ್ ತನಗೆ ಬೇಡ ಎನ್ನುವುದೂ ಜಾಣತನವಲ್ಲ.
ನಿಮ್ಮನ್ಯಾರೋ ಹುಡುಕುತ್ತಿದ್ದಾರೆ!
ಇಂದು ಸೋಷಿಯಲ್ ನೆಟ್‌ವರ್ಕಲ್ಲಿ ಇರುವುದು ಸ್ಟೈಲ್, ಫ್ಯಾಷನ್ ಅಷ್ಟೇ ಅಲ್ಲ ಅಗತ್ಯ ಕೂಡ. ಯಾರೋ ಎಲ್ಲೋ ನಿಮಗೋಸ್ಕರ ಹುಡುಕುತ್ತಿರುತ್ತಾರೆ. ಅವರಿಗೆ ನೀವು ಸಿಗಬೇಕು ಅಂದರೆ ನೀವು ಈ ನೆಟ್‌ವರ್ಕಿನಲ್ಲಿ ಎಲ್ಲೋ ಇರಬೇಕು.
ನಿಮ್ಮ ಬಾಲ್ಯದ ಗೆಳೆಯ, ಗೆಳತಿ, ಯಾವುದೋ ಹಂತದಲ್ಲಿ ನಿಮ್ಮಿಂದ ದೂರವಾದ ನಿಮ್ಮ ಕ್ಲಾಸ್‌ಮೇಟ್, ನಿಮ್ಮ ಪಕ್ಕದ್ಮನೆ ಈನಾ-ಮೀನಾ... ಯಾರೋ ನಿಮಗೋಸ್ಕರ ತಡಕಾಡುತ್ತಿರಬಹುದು. ನಿಮಗೆ ಕೆಲಸ ನೀಡಬೇಕಾದ ಕಂಪನಿ ನಿಮ್ಮ ಬಗ್ಗೆ ಮಾಹಿತಿ ಬೇಕೆಂದರೆ, ಇಂಟರ್‌ನೆಟ್‌ಲ್ಲಿ ಜಾಲಾಡುತ್ತಿರಬಹುದು. ನಿಮ್ಮ ಬಗ್ಗೆ ಲೇಖನ ಬರೆಯಲು ಬರಹಗಾರರು ಮಾಹಿತಿ ಸಂಗ್ರಹಿಸುತ್ತಿರಬಹುದು. ಯಾವುದೋ ಕ್ರಿಮಿನಲ್ ಕೇಸಿಗೆ ಸಂಬಂಧಿಸಿದಂತೆ ಪೊಲೀಸರೂ ನಿಮ್ಮ ಸುಳಿವನ್ನು ಇಂಟರ್‌ನೆಟ್ಟಿನಲ್ಲಿ ಪಡೆಯುತ್ತಿರಬಹುದು! ಯಾರೂ ನಿಮ್ಮ ಬಗ್ಗೆ ಇಂಟರ್‌ನೆಟ್ಟಿನಲ್ಲಿ ಹುಡುಕಾಡುವುದಿಲ್ಲ ಎಂದರೆ, Sorry, ನೀವು ಈ ಜಗತ್ತಿನಲ್ಲಿ ಯಾರಿಗೂ ಬೇಡವಾಗಿದ್ದೀರಿ ಅಂತ ಅರ್ಥ!
ನೀವು ಗುಗ್ಗು ಅಲ್ಲ, ಈ ಜಮಾನದವರು ಅನ್ನಿಸಿಕೊಳ್ಳಬೇಕಾದರೆ ನಿಮಗಿರುವುದು ಎರಡೇ ಆಯ್ಕೆ... ಒಳ್ಳೆಯ ಸೋಷಿಯಲ್ ನೆಟ್‌ವರ್ಕಿನಲ್ಲಿ ಇರುವುದು ಅಥವಾ ಒಳ್ಳೆಯ ನೆಟ್‌ವರ್ಕ್ ಸೇರುವುದು!
ಸೋಷಿಯಲ್ ನೆಟ್‌ವರ್ಕ್ ಅಂದರೆ ಏನು?
ಲಯನ್ಸ್ ಕ್ಲಬ್, ರೋಟರಿ ಕ್ಲಬ್, ರಾಜಕುಮಾರ್ ಅಭಿಮಾನಿಗಳ ಬಳಗ, ಕಟ್ಟೆ ಗೆಳೆಯರ ಬಳಗ, ಯುವಕ ಸಂಘ ... ಹೀಗೆ ನೂರಾರು ಸಂಘ ಸಂಸ್ಥೆಗಳ ಹೆಸರು ಕೇಳಿದ್ದೀರಲ್ಲ. ಇವೆಲ್ಲ ವಾಸ್ತವ ಜಗತ್ತಿನ ಸೋಷಿಯಲ್ ನೆಟ್‌ವರ್ಕ್‌ಗಳು. ಅದೇ ರೀತಿ, ಇಂಟರ್‌ನೆಟ್ಟಿನಲ್ಲೂ ಗೆಳೆಯರ ಬಳಗವಿದೆ. ಈ ಬಳಗದಲ್ಲಿ ಜಗತ್ತಿನ ಬೇರೆ ಬೇರೆ ಪ್ರದೇಶಗಳಿಂದ, ಬೇರೆ ಬೇರೆ ವೃತ್ತಿಯ, ಬೇರೆ ಬೇರೆ ಪ್ರವೃತ್ತಿಯ, ಬೇರೆ ಬೇರೆ ವಯಸ್ಸಿನ ವ್ಯಕ್ತಿಗಳು ಸದಸ್ಯರಾಗಿರುತ್ತಾರೆ. ಈ ಸದಸ್ಯರಲ್ಲಿ ಎಲ್ಲರಿಗೂ ಎಲ್ಲರ ಪರಿಚಯವಿರುವುದಿಲ್ಲ. ಆದರೆ, ಈ ಸದಸ್ಯರು ಸಮಾನ ಆಸಕ್ತಿ ಇರುವ ವ್ಯಕ್ತಿಗಳನ್ನು ಆಯ್ದುಕೊಂಡು ಅವರ ಜೊತೆ ಮಾಹಿತಿ ಅಥವಾ ಸ್ನೇಹ ವಿನಿಮಯ ಮಾಡಿಕೊಳ್ಳುತ್ತಾರೆ. ಇಲ್ಲಿ ಮೋಜು, ಮಸ್ತಿ, ಶಿಕ್ಷಣ, ಬಿಸಿನೆಸ್, ಜಾಹೀರಾತು, ಮಾಹಿತಿ, ಸುದ್ದಿ, ಫೋಟೋಗಳು, ವಿಡಿಯೋಗಳು, ಸಂಗೀತ, ಸ್ಲೈಡ್‌ಷೋ ಎಲ್ಲಾ ಇರುತ್ತದೆ.
ನೆಟ್‌ವರ್ಕ್ ಸೇರುವಾಗ ಜಾಗೃತೆ
ಬಾಳೆಹಣ್ಣು ತಿನ್ನುವಷ್ಟೇ ಸುಲಭ ಕೆಲಸ ಇದು. ಬಹುತೇಕ ನೆಟ್‌ವರ್ಕ್‌ಗಳಿಗೆ ಉಚಿತವಾಗಿ ಸೇರಬಹುದು. ಶುಲ್ಕ ಕೊಟ್ಟರೆ ಹೆಚ್ಚುವರಿ ಸೇವೆಗಳೂ ಲಭ್ಯ. ನೆಟ್‌ವರ್ಕ್ ಸೇರುವಾಗ ನೀವು ಕೆಲವು ಮಾಹಿತಿಯನ್ನು ಕೊಡುತ್ತೀರಿ. ಆಗ ಈ ಟಿಪ್ಸ್ ಗಮನಿಸಿ:
೧ ನಿಮ್ಮ ಬ್ಯಾಂಕಿಂಗ್ ಸಂಬಂಧಿ ಮಾಹಿತಿ, ಈ-ಮೇಲ್ ವಿಳಾಸ, ಪಾಸ್‌ವರ್ಡ್ ನೀಡಲೇ ಬೇಡಿ.
೨ ಸೋಷಿಯಲ್ ನೆಟ್‌ವರ್ಕಿಗೆಂದೇ ಪ್ರತ್ಯೇಕ ಈ-ಮೇಲ್ ಐಡಿ ಇದ್ದರೆ ಒಳ್ಳೆಯದು. ಈ-ಮೇಲ್ ಪಾಸ್‌ವರ್ಡ್ ಹಾಗೂ ನೆಟ್‌ವರ್ಕ್ ಪಾಸ್‌ವರ್ಡ್ ಎಲ್ಲಾ ಬೇರೆಯಾಗಿರಲಿ.
೩ ನಿಜವಾದ ಜನ್ಮ ದಿನ ನೀಡಬೇಡಿ. ಜನ್ಮದಿನ ನಿಮ್ಮ ಹಣಕಾಸು ವಹಿವಾಟಿನಲ್ಲಿ ಪ್ರಮುಖ ಮಾಹಿತಿಗಳಲ್ಲೊಂದು.
೪ ಹೊಸ ಮಿತ್ರರನ್ನು ಮಾಡಿಕೊಳ್ಳುವಾಗ ಅವರ ಹಿನ್ನೆಲೆ ತಿಳಿದುಕೊಳ್ಳಲು ಅವಕಾಶವಿರುತ್ತದೆ. ಓದಿ ನಿಮಗೆ ಒಪ್ಪಿಗೆಯಾದರೆ ಮಾತ್ರ ಸ್ನೇಹಹಸ್ತ ಚಾಚಿ. ಒಂದುವೇಳೆ, ಎಲ್ಲರನ್ನೂ ಮಿತ್ರರನ್ನಾಗಿ ಮಾಡಿಕೊಂಡರೂ ವ್ಯವಹರಿಸುವಾಗ ಎಚ್ಚರ.
೫ ಮಿತ್ರರನ್ನು ಆಹ್ವಾನಿಸಿ ಎಂಬ ಬಟನ್ ಎಲ್ಲಾ ನೆಟ್‌ವರ್ಕ್‌ನಲ್ಲೂ ಇರುತ್ತದೆ. ಅದನ್ನು ಆದಷ್ಟೂ ಕಡಿಮೆ ಬಳಸಿ. ಇಲ್ಲದಿದ್ದರೆ ನಿಮ್ಮ ಆ ರಿಕ್ವೆಸ್ಟ್‌ನಿಂದ ಮಿತ್ರರಿಗೆಲ್ಲ ಕಿರಿಕಿರಿ.
ಇಲ್ಲೂ ಕ್ರಿಮಿನಲ್‌ಗಳಿದ್ದಾರೆ ಎಚ್ಚರ!
ಸೋಷಿಯಲ್ ನೆಟ್‌ವರ್ಕ್ ಅಂದರೆ... ಸುಖದ ಹೊಳೆ, ಸಂತೋಷದ ಮಳೆ ಅಂದುಕೊಳ್ಳುವ ಹಾಗಿಲ್ಲ. ಇದರಲ್ಲೂ ಅನೇಕ ಅಪಾಯಗಳಿವೆ. ಅವುಗಳ ಬಗ್ಗೆ ಜಾಗರೂಕರಾಗಿರಿ.
ಲೈಂಗಿಕ ಕಿರುಕುಳ
ಸೋಷಿಯಲ್ ನೆಟ್‌ವರ್ಕಿನಲ್ಲಿ ಅತ್ಯಂತ ದೊಡ್ಡ ಸಮಸ್ಯೆ ಇದು. ಇಂಟರ್‌ನೆಟ್‌ನಲ್ಲಿ ಗೋಮುಖ ವ್ಯಾಘ್ರಗಳು ಅನೇಕ. ಸಂಭಾವಿತರಂತೆ ಪರಿಚಯವಾಗುವ ಇವರು ಕ್ರಮೇಣ ರೋಮ್ಯಾಂಟಿಕ್ ಆಗುತ್ತಾರೆ. ಆಮೇಲೆ, ಸಾಧುಗಳಂತೆ, ಇಂಟರ್‌ನೆಟ್ಟಿನ ಹೊರಗೆ, ವಾಸ್ತವ ಜಗತ್ತಿನಲ್ಲಿ ಭೇಟಿಯಾಗಲು ಆರಂಭಿಸುತ್ತಾರೆ. ಆ ಭೇಟಿಯನ್ನು ಲೈಂಗಿಕವಾಗಿ ಅಥವಾ ಇನ್ನಾವುದೇ ರೀತಿಯಲ್ಲಿ ದುರುಪಯೋಗ ಪಡಿಸಿಕೊಳ್ಳುತ್ತಾರೆ.
ಅಪಹರಣ, ಕಳವು ಇತ್ಯಾದಿ
ಇಂಟರ್ನೆಟ್ ಮೂಲಕ ಪರಿಚಯವಾಗುವ ಸೋಗುಧಾರಿಗಳು, ಮಕ್ಕಳು ಹಾಗೂ ಯುವತಿಯರನ್ನು ಅಪಹರಣ ಮಾಡಿ ಒತ್ತೆ ಹಣಕ್ಕಾಗಿ ತಂದೆ ತಾಯಿಯರನ್ನು ಪೀಡಿಸಿದ ಅನೇಕ ಉದಾಹರಣೆಗಳಿವೆ. ಮನೆಯ ವಿಳಾಸ, ಮನೆಯಲ್ಲಿ ಇರುವ ವ್ಯಕ್ತಿಗಳ ಸಂಖ್ಯೆ, ಯಾವಾಗ ಮನೆಯಲ್ಲಿ ವ್ಯಕ್ತಿಗಳಿರುವುದಿಲ್ಲ ಎಂಬುದನ್ನೆಲ್ಲಾ ತಿಳಿದು ಮನೆಯನ್ನು ಕಳವು ಮಾಡಿರುವ ಘಟನೆಗಳೂ ನಡೆದಿವೆ. ನೆಟ್ ಮೂಲಕ ಪರಿಚಯವಾದ ಸ್ನೇಹದ ಮೂಲಕ ಮನೆ ಪ್ರವೇಶಿಸುವ ಕ್ರಿಮಿನಲ್‌ಗಳು ಕೊಲೆ ಮಾಡಿರುವ ಅಪರಾಧಗಳೂ ಜರುಗಿವೆ.
ಮಾನ ಹರಾಜು, ಅವಮಾನ
ಇಂಟರ್‌ನೆಟ್ಟಿನ ಇನ್ನೊಂದು ದೊಡ್ಡ ಅಪಾಯ ಇದು. ಕೆಲವು ದೂರ್ತರು ನಿಮ್ಮ ಮಾನ ಹರಾಜು ಹಾಕಲು ಅಥವಾ ನಿಮಗೆ ಅವಮಾನ ಮಾಡಲು ಸೋಷಿಯಲ್ ನೆಟ್‌ವರ್ಕ್‌ಗಳನ್ನು ಬಳಸಿಕೊಳ್ಳಬಹುದು. ನಿಮ್ಮ ಹೆಸರಿನಲ್ಲಿ ಸುಳ್ಳು ಖಾತೆ ತೆರೆದು, ಕೃತಕವಾಗಿ ಸೃಷ್ಟಿಸಿದ ನಿಮ್ಮ ನಗ್ನ ಚಿತ್ರಗಳನ್ನು ಅಥವಾ ಲೈಂಗಿಕ ಕ್ರಿಯೆಯ ಚಿತ್ರಗಳನ್ನು ನೆಟ್‌ವರ್ಕಿನಲ್ಲಿ ಪ್ರದರ್ಶಿಸಬಹುದು. ನಿಮ್ಮ ಬಗ್ಗೆ ಅವಾಚ್ಯ ಬೈಗುಳಗಳನ್ನೋ ಅಥವಾ ಅವಮಾನ ಮಾಡುವ ಬರಹಗಳನ್ನೋ ಹಾಕಬಹುದು. ಕೆಲವೊಮ್ಮೆ ಈ ವಿಷಯದಲ್ಲಿ ಬ್ಲಾಕ್‌ಮೇಲ್ ಮಾಡುವ ಸಂಭವವೂ ಇದೆ. ಅಥವಾ ಕೇವಲ ಕಿರಿಕಿರಿ ಉಂಟು ಮಾಡಲು ನಿಮ್ಮ ಮೊಬೈಲ್ ಫೋನ್ ಬಹಿರಂಗಪಡಿಸುವುದು, ಫೋನು ಮಾಡುವಂತೆ ಇತರರನ್ನು ಆಹ್ವಾನಿಸುವುದು... ಮುಂತಾದ ಕಿಡಿಗೇಡಿ ಕೆಲಸಗಳನ್ನು ಮಾಡಬಹುದು.
ಹ್ಯಾಕಿಂಗ್, ವೈಯಕ್ತಿಕ ಮಾಹಿತಿ ಕಳವು
ಇದು ಕಂಪ್ಯೂಟರಿನ ದೊಡ್ಡ ಸಮಸ್ಯೆ. ಸೋಶಿಯಲ್ ನೆಟ್‌ವರ್ಕ್‌ಲ್ಲಿ ನಿಮ್ಮ ಸ್ನೇಹ ಬೆಳೆಸಿ, ನಿಮ್ಮ ಕೆಲವು ವೈಯಕ್ತಿಕ ಮಾಹಿತಿ ಪಡೆದು ದುರುಪಯೋಗ ಮಾಡಬಹುದು. ಅಥವಾ, ನಿಮ್ಮ ಖಾತೆಯನ್ನು ಹ್ಯಾಕ್ ಮಾಡಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕದಿಯಬಹುದು. ಆದ್ದರಿಂದ, ಇಂಟರ್ನೆಟ್ಟಿನಲ್ಲಿ, ಸೋಷಿಯಲ್ ಸೈಟಿನಲ್ಲಿ ಸೂಕ್ಷ್ಮವೆನಿಸುವ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಎಂದೂ ಬಹಿರಂಗ ಮಾಡಬೇಡಿ.
ಮಕ್ಕಳ ದುರ್ಬಳಕೆ
ಸೋಷಿಯಲ್ ನೆಟ್‌ವರ್ಕಿನಲ್ಲಿ ಇತ್ತೀಚೆಗೆ ಚಿಕ್ಕ ಮಕ್ಕಳು, ಹದಿಹರೆಯದವರ ಸಂಖ್ಯೆ ಹೆಚ್ಚುತ್ತಿದೆ. ಕೆಲವು ದೂರ್ತರು ಇಂಥವರ ಮೇಲೆ ಕಣ್ಣಿಟ್ಟಿರುತ್ತಾರೆ. ಚಿಕ್ಕ ಮಕ್ಕಳು ಹಾಗೂ ಹದಿಹರೆಯದವರು ತಮ್ಮ ಮುಗ್ಧತೆಯಿಂದಾಗಿ ಸುಲಭವಾಗಿ ತುತ್ತಾಗುತ್ತಾರೆ. ಈ ಬಗ್ಗೆ ಪಾಲಕರು ಹೆಚ್ಚು ಗಮನಹರಿಸಲೇಬೇಕು.
ಸೈನಿಕರ ಮಾಹಿತಿ
ತಮ್ಮ ಮಿತ್ರರು ಹಾಗೂ ಮನೆಯವರ ಜೊತೆ ಸಂಪರ್ಕದಲ್ಲಿರಲು, ಸುಮಾರು ೩೫೦೦೦ ಭಾರತೀಯ ಸೈನಿಕರು ಫೇಸ್‌ಬುಕ್ ಆರ್ಕುಟ್‌ನಂಥ ಸೋಷಿಯಲ್ ನೆಟ್‌ವರ್ಕ್ ಸೇರಿಕೊಂಡಿದ್ದಾರೆ. ಇವರು ಅಥವಾ ಇವರ ಸಂಬಂಧಿಕರು ಸೋಷಿಯಲ್ ನೆಟ್‌ವರ್ಕಿನಲ್ಲಿ ಸೈನ್ಯ ಅಥವಾ ಸೈನಿಕರ ಸಂಬಂಧಿ ಮಾಹಿತಿ, ಫೋಟೋ, ನಕಾಶೆ ಮುಂತಾದ ಮಾಹಿತಿ ನೀಡುವಾಗ ಬಹಳ ಜಾಗೃತೆ ವಹಿಸಬೇಕು. ಸೂಕ್ಷ್ಮ ವಿಷಯಗಳನ್ನು ನೀಡಲೇ ಬಾರದು ಎಂದು ಇತ್ತೀಚೆಗೆ ಭಾರತೀಯ ಸೇನೆ ಆದೇಶವನ್ನೂ ನೀಡಿದೆ. ನೀವು ಸೈನಿಕರ ಸಂಬಂಧಿಯಾಗಿದ್ದರೆ, ಸೋಷಿಯಲ್ ನೆಟ್‌ವರ್ಕಿನಲ್ಲಿ ನಿಮ್ಮ ಜವಾಬ್ದಾರಿ ಹೆಚ್ಚು ಎಂಬುದನ್ನು ಮರೆಯಬೇಡಿ.
ಸಮಯ ಹಾಳು
ಸೋಷಿಯಲ್ ನೆಟ್‌ವರ್ಕ್ ಒಂಥರಾ ಅಡಿಕ್ಟಿವ್. ಇದರಲ್ಲಿ ಒಮ್ಮೆ ಮುಳುಗಿದರೆ, ಸಮಯ ಹೋದದ್ದೇ ತಿಳಿಯುವುದಿಲ್ಲ. ಹಾಗಾಗಿ, ಅನೇಕರ ಸಮಯ ವ್ಯರ್ಥವಾಗುತ್ತದೆ. ಅದಕ್ಕಾಗಿ ಸೋಷಿಯಲ್ ನೆಟ್‌ವರ್ಕ್‌ಗಳ ಬಳಕೆಯ ಮೇಲೆ ಹಿಡಿತ ಹಾಗೂ ಮಿತಿ ಇಟ್ಟುಕೊಳ್ಳುವುದು ಅಗತ್ಯ.
ನಿಮಗೆ ಯಾವ ನೆಟ್‌ವರ್ಕ್ ಸೂಕ್ತ? ಟಾಪ್ ೧೦ ಸಲಹೆ
೧ ಇಂದು ಇಂಟರ್‌ನೆಟ್ಟಿನಲ್ಲಿ ನೂರಾರು ಸೋಷಿಯಲ್ ನೆಟ್‌ವರ್ಕ್‌ಗಳಿವೆ. ಎಲ್ಲವನ್ನೂ ನೀವು ಸೇರುವುದು ಸಾಧ್ಯವೂ ಇಲ್ಲ. ತರವೂ ಅಲ್ಲ.
೨ ಯಾವ್ಯಾವುದೋ ಸೋಷಿಯಲ್ ನೆಟ್‌ವರ್ಕ್ ಸೇರುವಂತೆ ನಿಮಗೆ, ನಿಮ್ಮ ಗೆಳೆಯರ ಹೆಸರಿನಲ್ಲಿ, ಬರುವ ಆಹ್ವಾನಗಳನ್ನೆಲ್ಲ ನೀವು ಮನ್ನಿಸಬೇಡಿ.
೩ ಒಟ್ಟಾರೆ ೩-೪ ನೆಟ್‌ವರ್ಕ್‌ಗಳನ್ನು ನೀವು ಸೇರಿಕೊಂಡರೆ ಸಾಕು. ಅದಕ್ಕಿಂತ ಹೆಚ್ಚು ನೆಟ್‌ವರ್ಕ್ ಸೇರಿಕೊಂಡರೆ, ಯಾವ ನೆಟ್‌ವರ್ಕಿನಲ್ಲೂ ಕ್ವಾಲಿಟಿ ಟೈಮ್ ಕಳೆಯಲು ನಿಮ್ಮಿಂದ ಸಾಧ್ಯವಾಗದು.
೪ ಸಾಮಾನ್ಯ ವಿಷಯಗಳಿಗೆ ಫೇಸ್‌ಬುಕ್ ಅಥವಾ ಆರ್ಕುಟ್, ಸಂದೇಶ ವಿನಿಮಯಕ್ಕಾಗಿ ಟ್ವೀಟರ್ ಹಾಗೂ ವೃತ್ತಿಪರ ವಿಷಯಗಳಿಗೆ ಲಿಂಕ್ಡ್‌ಇನ್ ನೆಟ್‌ವರ್ಕ್ ಸೇರಿದರೆ ಬೇಕಾದಷ್ಟಾಯಿತು. ಈ ಮೂರು ಅಂತಾರಾಷ್ಟ್ರೀಯ ನೆಟ್‌ವರ್ಕ್ ಅಲ್ಲದೇ, ನಿಮ್ಮ ಭಾಷೆ, ಸಮುದಾಯ ಅಥವಾ ಆಸಕ್ತಿಗೆ ಸಂಬಂಧಿಸಿದ ಇನ್ನೊಂದು ಲೋಕಲ್ ನೆಟ್‌ವರ್ಕ್ ಸೇರುವುದು ಒಳ್ಳೆಯದು.
೫ Facebook.com, Orkut.comಎರಡರಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಂಡರೆ ಸಾಕು. ಪ್ರಪಂಚದಲ್ಲಿ ಬೇರೆಡೆ ಅಷ್ಟೇನೂ ಪ್ರಸಿದ್ಧವಲ್ಲದಿದ್ದರೂ, ಆರ್ಕುಟ್ ಭಾರತದಲ್ಲಿ ಅತ್ಯಧಿಕ ಸದಸ್ಯರನ್ನು ಹೊಂದಿರುವ ನೆಟ್‌ವರ್ಕ್. ಫೇಸ್‌ಬುಕ್ ಜಗತ್ತಿನ ಅತ್ಯಂತ ಪ್ರಸಿದ್ಧ ನೆಟ್‌ವರ್ಕ್ ಆದರೆ, ಭಾರತದಲ್ಲಿ ಇದೀಗ ಜನಪ್ರಿಯವಾಗುತ್ತಿದೆ. ಅಷ್ಟು ಇಷ್ಟವಾದರೆ, ಇವೆರಡೂ ನೆಟ್‌ವರ್ಕ್ ಸೇರಿಕೊಂಡರೂ ಪರವಾಗಿಲ್ಲ. ಆದರೆ, ಇನ್ನಷ್ಟು ನೆಟ್‌ವರ್ಕ್ ಸೇರಲು ಹೋಗಬೇಡಿ.
ಈ ನೆಟ್‌ವರ್ಕ್‌ಗಳಲ್ಲಿ ಸಮಾನ ಮನಸ್ಕರನ್ನು ಹುಡುಕಬಹುದು. ಅವರ ಬಗ್ಗೆ ಮಾಹಿತಿ ತಿಳಿದುಕೊಂಡು ಹೊಸ ಮಿತ್ರರನ್ನು ಮಾಡಿಕೊಳ್ಳಬಹುದು. ಅವರೊಡನೆ ಮಾಹಿತಿ ವಿನಿಮಯ ಮಾಡಿಕೊಳ್ಳಬಹುದು. ಫೋಟೋ, ವಿಡಿಯೋ, ಎಂಪಿಥ್ರೀ ಮುಂತಾದವುಗಳನ್ನು ಹಂಚಿಕೊಳ್ಳಬಹುದು. ಆಟ ಆಡಬಹುದು, ವಿವಿಧ ಮೋಜಿನ ಕ್ವಿಝ್, ಜ್ಯೋತಿಷ್ಯ, ಪರ್ಸ್‌ನಾಲಿಟಿ ಟೆಸ್ಟ್‌ನಲ್ಲಿ ಪಾಲ್ಗೊಳ್ಳಬಹುದು. ವರ್ಚುವಲ್ ಗಿಫ್ಟ್, ಗ್ರೀಟಿಂಗ್ ಕಳಿಸಬಹುದು. ಮಿತ್ರರ ಕಾಲೆಳೆಯಬಹುದು ಅಥವಾ ಇಲ್ಲಿ ಸೀರಿಯಸ್ ಬಿಸಿನೆಸ್ ಕನ್ಸಲ್ಟನ್ಸಿ ನಡೆಸಬಹುದು. ಇವೆರಡೂ ಮೋಸ್ಟ್ ಫ್ಲೆಕ್ಸಿಬಲ್ ಹಾಗೂ ಮೋಸ್ಟ್ ಪವರ್‌ಫುಲ್ ನೆಟ್‌ವರ್ಕ್‌ಗಳು.
೬ Twitter.com ಇದು ಜಗತ್ತಿನ ಹೊಸ ಕ್ರೇಜ್. ನೀವು ಸದ್ಯಕ್ಕೆ ಸೇರಬಹುದಾದ ಇನ್ನೊಂದು ರೀತಿಯ ಅತ್ಯುತ್ತಮ ನೆಟ್‌ವರ್ಕ್. ಎಸ್‌ಎಂಎಸ್ಸನ್ನು ಆನಂದಿಸುವಂಥ ಅನುಭವನ್ನು ಈ ನೆಟ್‌ವರ್ಕ್ ನೀಡುತ್ತದೆ. ಇದು ಅತ್ಯಂತ ವೇಗದ ಸುದ್ದಿ ಪ್ರಸಾರ ಮಾಡಲು ಹಾಗೂ ಸುದ್ದಿ ತಿಳಿಯಲು ಉಪಯುಕ್ತ ಮೈಕ್ರೋ ಬ್ಲಾಗಿಂಗ್ ನೆಟ್‌ವರ್ಕ್. ಒಂದು ಸಂದೇಶದಲ್ಲಿ ೧೪೦ ಅಕ್ಷರಗಳನ್ನು ಮಾತ್ರ ಬರೆಯಲು ಸಾಧ್ಯ.
‘ಬೆಂಗಳೂರಿನಲ್ಲಿ ಗಡ್‌ಬಡ್ ಐಸ್‌ಕ್ರೀಮ್ ಎಲ್ಲಿ ಚೆನ್ನಾಗಿದೆ? ಕಡಿಮೆ ದರದಲ್ಲಿ ಅತ್ಯುತ್ತಮ ಡ್ರೆಸ್ ಮಟೀರಿಯಲ್ ಎಲ್ಲಿ ಸಿಗುತ್ತದೆ? ಐಎಫ್‌ಬಿ ವಾಷಿಂಗ್ ಮಷಿನ್ ಬೆಟರ್ರ್ಓ ಎಲ್ಜಿಯೋ’ -ಇಂಥ ಪ್ರಶ್ನೆಯನ್ನೂ ಈ ಟ್ವೀಟರ್‌ನಲ್ಲಿ ಕೇಳಬಹುದು. ಆಗ, ಟ್ವೀಟರ್ ನೆಟ್‌ವರ್ಕಿನ ಮಿತ್ರರು ಉತ್ತರ ನೀಡುತ್ತಾರೆ. ಬಹಳಷ್ಟು ಜನ ಇಂಥ ಉಪಯೋಗಕ್ಕೆ ಟ್ವೀಟರನ್ನು ಬಳಸುತ್ತಿದ್ದಾರೆ. ನಿಮಗೂ ಉಪಯೋಗವಾದೀತು.
೭ Linkedin.com ವೃತ್ತಿಪರರು ಹಾಗೂ ಉದ್ಯೋಗಸ್ಥರು ಸೇರಬಹುದಾದ ಇನ್ನೊಂದು ಸೋಷಿಯಲ್ ನೆಟ್‌ವರ್ಕ್. ಇದೊಂದು ವೃತ್ತಿಪರರ ಡೈರಕ್ಟರಿ ಅಂದರೂ ಪರವಾಗಿಲ್ಲ. ಇತರ ವೃತ್ತಿಪರರ ಜೊತೆ ಸಂವಹನ ನಡೆಸಲು, ಅವರ ವೃತ್ತಿ ಹಿನ್ನೆಲೆ ತಿಳಿದುಕೊಳ್ಳಲು, ಬಿಸಿನೆಸ್ ಅಥವಾ ವೃತ್ತಿಪರ ಸಂಬಂಧ ಬೆಳೆಸಲು ಈ ನೆಟ್‌ವರ್ಕ್ ಉಪಯುಕ್ತ. ಆದರೆ, ಕೇವಲ ನೌಕರಿ ಹುಡುಕಲು ಆಸಕ್ತರಾಗಿರುವವರು Naukri.com ನೆಟ್‌ವರ್ಕ್ ಸೇರಬಹುದು.
೮ ಈ ಮೇಲಿನ ಮೂರು ಅಂತಾರಾಷ್ಟ್ರೀಯ ನೆಟ್‌ವರ್ಕ್ ಹೊರತಾಗಿ ನೀವು ಸೇರಬಹುದಾದ ಇನ್ನೊಂದು ಲೋಕಲ್ ನೆಟ್‌ವರ್ಕ್ KannadaBlogs.ning.com. ಕನ್ನಡದಲ್ಲಿ ಬ್ಲಾಗಿಂಗ್ ಚಟುವಟಿಕೆ ಸಾಕಷ್ಟು ನಡೆಯುತ್ತಿದೆ. ಆದರೆ, ಅವೆಲ್ಲ ಚದುರಿಹೋಗಿರುವುದರಿಂದ ಯಾರ ಬ್ಲಾಗ್ ಎಲ್ಲಿದೆ? ಯಾವ ಬ್ಲಾಗಿನಲ್ಲಿ ಹೊಸದೇನಿದೆ? ಎಂದು ತಿಳಿಯುವುದು ಕಷ್ಟ. ಈ ಹಿನ್ನೆಲೆಯಲ್ಲಿ, KannadaBlogs.ning.com. ಎಂಬ ಕನ್ನಡ ಬ್ಲಾಗಿಗರ ಕೂಟ ಸೇರಬಹುದು.
೯ ಫೋಟೋ ವಿನಿಮಯಕ್ಕೆ Flickr.comಉತ್ತಮ ನೆಟ್‌ವರ್ಕ್. ಆದರೆ, ಉಚಿತ ಬಳಕೆದಾರರಿಗೆ ಈ ನೆಟ್‌ವರ್ಕಿನಲ್ಲಿ ಕಡಿವಾಣ ಹೆಚ್ಚು. ಅದಕ್ಕಾಗಿ, PicasaWeb.com ನೆಟ್‌ವರ್ಕ್ ಬಳಸಬಹುದು. ವಿಡಿಯೋ ವಿನಿಮಯಕ್ಕಾಗಿ YouTube.com ಉತ್ತಮ ನೆಟ್‌ವರ್ಕ್.
೧೦ ಇದಲ್ಲದೇ, ಸ್ಲೈಡ್ ವಿನಿಮಯಕ್ಕೆ Slide.com ಅಥವಾ SlideShare.net ಸೇರಬಹುದು.