Showing posts with label Google Latitude. Show all posts
Showing posts with label Google Latitude. Show all posts

Tuesday, February 10, 2009

ಗೂಗಲ್ ಲ್ಯಾಟಿಟ್ಯೂಡ್ ಎಂಬ 'ಅಂಜನ ಶಕ್ತಿ'



ಮೊಬೈಲ್ ಫೋನ್ ಎನ್ನುವುದು ಈಗ ಬರೀ ಮಾತನಾಡುವ ಸಾದನವಾಗಿ ಉಳಿದಿಲ್ಲ. ಅದೊಂದು ಪರಿಪೂರ್ಣ ಮಾಧ್ಯಮವಾಗಿಬಿಟ್ಟಿದೆ. ಭವಿಷ್ಯದಲ್ಲಿ ಅಂತರ್ಜಾಲಕ್ಕೇ ಸೆಡ್ಡು ಹೊಡೆಯುವ ತಾಕತ್ತು ಈ ಉಪಕರಣಕ್ಕೆ ಬಂದಿದೆ. ಅದಕ್ಕೇ, ಮೈಕ್ರೋಸಾಫ್ಟ್ ಕೂಡ ಇದೀಗ ಅನೇಕ ಸಾಫ್ಟ್ ವೇರುಗಳನ್ನು ಮೊಬೈಲ್ ಫೋನುಗಳಿಗಾಗೇ ಅಭಿವೃದ್ಧಿ ಪಡಿಸುತ್ತಿದೆ. ಶೀಘ್ರ ಅದು ಮೊಬೈಲ್ ಸಾಫ್ಟ್ ವೇರುಗಳ 'ಸ್ಟೋರ್' ಆರಂಭಿಸುತ್ತಿದೆ.

ಗೂಗಲ್ ಕೂಡ ಹತ್ತಾರು ಮೊಬೈಲ್ ಫೋನ್ ತಂತ್ರಜ್ಞಾನವನ್ನು ಬಿಡುಗಡೆ ಮಾಡಿದೆ. ತೀರಾ ಇತ್ತೀಚೆಗೆ ಬಿಡುಗಡೆ ಮಾಡಿದ ತಂತ್ರಜ್ಞಾನ ಗೂಗಲ್ ಲ್ಯಾಟಿಟ್ಯೂಡ್. ನಿಮಗೆ ಅಂಜನ ಶಕ್ತಿಯ ಬಗ್ಗೆ ಗೊತ್ತಲ್ಲ. ಮಾಂತ್ರಿಕರು ಕುಳಿತಲ್ಲೇ ಅಂಜನ ಹಾಕಿ ನೋಡಿ, ಕಳೆದು ಹೋಗಿರುವ ವಸ್ತು ಎಲ್ಲಿದೆ ಎಂದು ಹೇಳುತ್ತಾರೆ. ಅಂತಹ ಶಕ್ತಿಯನ್ನು ಗೂಗೂಲ್ ಲ್ಯಾಟಿಟ್ಯೂಡ್ ನಿಮ್ಮ ಮೊಬೈಲ್ ಫೋನಿಗೆ ಕರುಣಿಸುತ್ತದೆ!

ಈ ತಂತ್ರಜ್ಞಾನ ಇದೀಗ ಭಾರತದಲ್ಲೂ ಲಭ್ಯ. ಇದೊಂದು ಜಿಪಿಎಸ್ ನಕಾಶೆ ತಂತ್ರಜ್ಞಾನ. ಗೂಗಲ್ ಲ್ಯಾಟಿಟ್ಯೂಡನ್ನು ಮೊಬೈಲ್ ಫೋನಿನಲ್ಲಿ ಅಳವಡಿಸಿಕೊಂಡರೆ, ಕರೆ ಮಾಡುವ ವ್ಯಕ್ತಿ ಎಲ್ಲಿಂದ ಕರೆ ಮಾಡುತ್ತಿದ್ದಾನೆ ಎಂದು ಫೋನಿನ ತೆರೆಯ ಮೇಲೆ ನಕಾಶೆ ತೋರಿಸುತ್ತದೆ. ಇದರ ಉಪಯೋಗವೇನು? ಈ 3 ಉದಾಹರಣೆ ನೋಡಿ ತಿಳಿಯುತ್ತದೆ.

1. ಓರ್ವ ವರದಿಗಾರ ಪದ್ಮನಾಭನಗರದ ಸಹಕಾರ ಶಿಕ್ಷಣ ಕೇಂದ್ರದಲ್ಲಿ ಒಂದು ವಿಚಾರ ಸಂಕಿರಣದ ಉದ್ಘಾಟನಾ ಕಾರ್ಯಕ್ರಮದ ವರದಿಗೆ ಹೋಗಬೇಕಿತ್ತು. ಆದರೆ, 'ಅಂಥ ಡಬ್ಬಾ ಕಾರ್ಯಕ್ರಮಕ್ಕೆ ಅಷ್ಟು ದೂರ ಹೋಗಬೇಕೆ? ಯಾರಿಂದಲಾದರೂ ಕಾಪಿ ಕಲೆಕ್ಟ್ ಮಾಡಿ ವರದಿ ಫೈಲ್ ಮಾಡಿದರಾಯಿತು' ಎಂದು ಯೋಚಿಸಿ ಆತ ಮನೆಯಲ್ಲೇ ಇರುತ್ತಾನೆ. ಆಗ ಆತನ ಫೋನಿಗೆ ಮುಖ್ಯ ವರದಿಗಾರನ ಕಾಲ್ ಬರುತ್ತದೆ. ನಾನು ವಿಚಾರ ಸಂಕಿರಣದ ಸ್ಪಾಟಿನಲ್ಲಿದ್ದೇನೆ ಎಂದು ಮುಖ್ಯ ವರದಿಗಾರನಿಗೆ ಸುಳ್ಳು ಹೇಳುತ್ತಾನೆ. ಇಂಥ ವರದಿಗಾರರ ಮೇಲೆ ಕಣ್ಣಿಡಲು ಸಂಪಾದಕರು ಅಥವಾ ಮುಖ್ಯ ವರದಿಗಾರರು ಗೂಗಲ್ ಲ್ಯಾಟಿಟ್ಯೂಡ್ ತಂತ್ರಜ್ಞಾನವನ್ನು ಬಳಸಬಹುದು. ಎಲ್ಲಾ ವರದಿಗಾರರ ಫೋನುಗಳಲ್ಲಿ ಈ ಸಾಫ್ಟ್ ವೇರ್ ಅಳವಡಿಸಬೇಕು. ಅಂಥ ಮೊಬೈಲಿಗೆ ಫೋನ್ ಮಾಡಿದರೆ ಆ ವರದಿಗಾರ ನಿರ್ದಿಷ್ಟ ಸಮಯದಲ್ಲಿ, ನಿರ್ದಿಷ್ಟ ಸ್ಪಾಟಿನಲ್ಲಿದ್ದಾನೋ ಇಲ್ಲವೋ ಎಂದು ಮೊಬೈಲ್ ಫೋನಿನ ನಕಾಶೆಯಲ್ಲಿ ಕಾಣಿಸುತ್ತದೆ.

2. ಕಂಪನಿಗಳು ತಮ್ಮ ಮಾರಾಟ ವಿಭಾಗದ ಫೀಲ್ಡ್ ಎಕ್ಸೆಕ್ಯೂಟಿವ್ ಗಳ ಮೇಲೆ ಕಣ್ಣಿಡಲು ಈ ಸಾಫ್ಟ್ ವೇರ್ ಬಳಸಬಹುದು. (ಊದಾಹರಣೆಗೆ ಪತ್ರಿಕೆಯೊಂದರ ಪ್ರಸಾರ ಹಾಗೂ ಜಾಹೀರಾತು ವಿಭಾಗದ ಫೀಲ್ಡ್ ಎಕ್ಸೆಕ್ಯೂಟಿವ್ ಗಳು.) ಅವರು ಅಲ್ಲಿ ಹೋಗಿದ್ದೆ, ಇಲ್ಲಿ ಹೋಗಿದ್ದೆ ಎಂದು ಸುಳ್ಳು ಹೇಳಿ, ಟಿಎ ಡಿಎ.ಯನ್ನೂ ಪಡೆಯುವ ಪ್ರಕರಣಗಳು ಅಧಿಕ. ಅಂಥವರ ಸುಳ್ಳು ಪತ್ತೆ ಹಚ್ಚಲು ಗೂಗಲ್ ಲ್ಯಾಟಿಟ್ಯೂಡ್ ನೆರವಾಗುತ್ತದೆ.

3. ತಂದೆ ತಾಯಿ ತಮ್ಮ ಮಕ್ಕಳ ಮೇಲೆ ನಿಗಾ ಇಡಲು ಈ ಸಾಫ್ಟ್ ವೇರನ್ನು ಬಳಸಬಹುದು! ತಮ್ಮ ಮಕ್ಕಳ ಮೊಬೈಲಿನಲ್ಲಿ ಈ ಸಾಫ್ಟ್ ವೇರ್ ಅಳವಡಿಸಬೇಕು. ಅಂಥ ಫೋನಿಗೆ ಅಪ್ಪ ಅಮ್ಮ ಕರೆ ಮಾಡುತ್ತಾರೆ ಅಂದುಕೊಳ್ಳಿ. ಆಗ ಮಕ್ಕಳು ಪಬ್ಬಿನಲ್ಲಿ ಗುಂಡು ಹಾಕುತ್ತಾ ಕುಳಿತಿದ್ದರೂ ಗೆಳೆಯನ/ಗೆಳತಿಯ ಮನೆಯಲ್ಲೋ ಇದ್ದೇನೆ ಎಂದು ಸುಳ್ಳು ಹೇಳಿದರೆ ಅಪ್ಪ ಅಮ್ಮನಿಗೆ ನಕಾಶೆಯಲ್ಲಿ ಮಕ್ಕಳು ಎಲ್ಲಿದ್ದಾರೆ ಎಂದು ಕಾಣಿಸುತ್ತದೆ.

Ofcourse, ಈ ಸಾಫ್ಟ್ ವೇರಿನ ಉಪಯೋಗ ಇಷ್ಟೇ ಅಲ್ಲ. ಹೆಚ್ಚಿನ ಮಾಹಿತಿ ಬೇಕಾದರೆ ಇಲ್ಲಿ ನೋಡಿ.