
ತನಿಖಾ ವರದಿಯ 3 ಮೂಲಗಳ ಕುರಿತು ಮಾತನಾಡುತ್ತಿರುವ, ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯ ಸಹ ಸಂಪಾದಕ ಬಾಬ್ ವುಡ್‌ವರ್ಡ್. ಜಗತ್ಪಸಿದ್ಧ ವಾಟರ್‌ಗೇಟ್ ಹಗರಣ ಬಹಿರಂಗ ಮಾಡಿದ ಇಬ್ಬರು ವರದಿಗಾರರಲ್ಲಿ ಇವರೂ ಒಬ್ಬರು.
---------------------
ತನಿಖಾ ವರದಿ ಮಾಡುವುದು ಹೇಗೆ? ಅಂತಾರಾಷ್ಟ್ರೀಯ ವರದಿಗಳನ್ನು ನಿಭಾಯಿಸುವ ಪರಿಯೇನು? ಸಂದರ್ಶನ ತಂತ್ರಗಳು... ಹೀಗೆ ಅನೇಕ ವರದಿಗಾರಿಕೆ ವಿಷಯಗಳ ಕುರಿತು ಅಮೆರಿಕದ ಶ್ರೇಷ್ಠ ಪತ್ರಕರ್ತರು ಪುಟ್ಟ ಪುಟ್ಟ ಟಿಪ್ಸ್ ನೀಡುತ್ತಾರೆ. ಎಲ್ಲಿ?
ಇಂಟರ್ನೆಟ್ಟಿನ ವಿಡಿಯೋ ಸೈಟ್ "ಯೂಟ್ಯೂಬ್" ಜೂನ್ 29ರಿಂದ ವರದಿಗಾರರ ಆನ್‌ಲೈನ್ ಚಾನಲ್ ಆರಂಭಿಸಿದೆ. http://www.youtube.com/reporterscenter ಇಲ್ಲಿ ಪುಟ್ಟ ಪುಟ್ಟ ವಿಡಿಯೋಗಳಿವೆ. ಪರಿಣತ ಪತ್ರಕರ್ತರಿಗೆ ಈ ಟಿಪ್ಸ್ ಹೆಚ್ಚು ಪ್ರಯೋಜನಕ್ಕೆ ಬರಲಾರದೇನೋ! ಆದರೆ, ಉದಯೋನ್ಮುಖ ಪತ್ರಕರ್ತರಿಗೆ ಖಂಡಿತ ಉಪಯುಕ್ತ.
"ಸಿಟಿಝನ್ ಜರ್ನಲಿಸ್ಟ್" ಕಾನ್ಸೆಪ್ಟ್ ತಕ್ಕಮಟ್ಟಿಗೆ ಯಶಸ್ವಿಯಾಗಿದೆ. ಇಂತಹ ಹವ್ಯಾಸಿ ಪತ್ರಕರ್ತರಿಗೆ ಹಾಗೂ ಸಾರ್ವಜನಿಕರಿಗೆ ವರದಿಗಾರಿಕೆಯ ತಂತ್ರಗಳ ಕುರಿತು ಮಾರ್ಗದರ್ಶನ ನೀಡಿ ಸಿಟಿಝನ್ ಜರ್ನಲಿಸಂಗೆ ಉತ್ತೇಜನ ನೀಡುವುದು ಯೂಟ್ಯೂಬಿನ "ರಿಪೋರ್ಟರ್ಸ್ ಸೆಂಟರಿನ" ಉದ್ದೇಶ. ಅಂದರೆ, ಯೂಟ್ಯೂಬಿನಲ್ಲಿ 24 ಗಂಟೆ ಸಿಟಿಝನ್ ಜರ್ನಲಿಸ್ಟ್ ನ್ಯೂಸ್ ಚಾನಲ್ ಆರಂಭಿಸುವ ಉದ್ದೇಶ ಗೂಗಲ್‌ಗೆ ಇದ್ದಿರಬಹುದು.
Tuesday, June 30, 2009
ಮಹಾನ್ ಪತ್ರಕರ್ತರಿಂದ ಯೂಟ್ಯೂಬಲ್ಲಿ ವರದಿಗಾರಿಕೆ ಟಿಪ್ಸ್
Friday, May 22, 2009
ಮುಂಬಯೀ - ಟ್ಯಾಕ್ಸಿ ಪತ್ರಿಕೆ !
ವಿಮಾನಗಳಲ್ಲಿ in-flights ಮ್ಯಾಗಝಿನ್ ಇರುವುದು ಗೊತ್ತು ತಾನೆ? ಅದೇ ಥರ... ಮೊನ್ನೆ ಮಂಗಳವಾರದಿಂದ, ಮುಂಬೈ ಮಹಾಶಹರದ ಟ್ಯಾಕ್ಸಿಗಳಲ್ಲಿ in-Taxi ಮ್ಯಾಗಝಿನ್ “ಮುಂಬಯೀ” Mumbaee ಕಾಣಿಸಿಕೊಳ್ಳ ತೊಡಗಿದೆಯಂತೆ. ಇಂಥ ‘ಟ್ಯಾಕ್ಸಿ ಪತ್ರಿಕೆ’ ಭಾರತದಲ್ಲೇ ಪ್ರಥಮ. (…ಅಲ್ಲ ಜಗತ್ತಿನಲ್ಲೇ ಪ್ರಥಮ ಅಂತಲೂ ಕೆಲವರು ಹೇಳುತ್ತಾರೆ. ಗೊತ್ತಿಲ್ಲ.)
ಇಂಗ್ಲೀಷ್ ಭಾಷೆಯ ಈ ಪಾಕ್ಷಿಕ ಆರಂಭಿಸಿರುವುದು ಮುಂಬೈ ಟ್ಯಾಕ್ಸಿಮನ್ಸ್ ಯೂನಿಯನ್. ಟ್ಯಾಕ್ಸಿಯಲ್ಲಿ ಕುಳಿತ ಗಿರಾಕಿಗೆ, ಚಾಲಕ ಈ ಪತ್ರಿಕೆಯನ್ನು ಉಚಿತವಾಗಿ ಓದಲು ನೀಡುತ್ತಾನೆ ಹಾಗೂ ಗಿರಾಕಿ ಟ್ಯಾಕ್ಸಿಯಿಂದ ಇಳಿಯುವಾಗ ಪತ್ರಿಕೆಯನ್ನು ಚಾಲಕನಿಗೆ ವಾಪಸ್ ನೀಡುತ್ತಾನೆ. ಮುಂಬೈಯಲ್ಲಿ ಸುಮಾರು 65000 ಟ್ಯಾಕ್ಸಿಗಳಿವೆಯಂತೆ. ಅಲ್ಲದೇ, ಮುಂಬೈ-ಪುಣೆ, ಮುಂಬೈ-ನಾಸಿಕ್ ಮಾರ್ಗಗಳಲ್ಲೂ ಸಾವಿರಾರು ಟ್ಯಾಕ್ಸಿಗಳಿವೆ. ಅವುಗಳಲ್ಲೆಲ್ಲ ಈ ಮ್ಯಾಗಝಿನ್ ಇಡಲಾಗುತ್ತದಂತೆ.
ಮುಂಬೈನ ಟ್ಯಾಕ್ಸಿಗಳಲ್ಲಿ ವಾರಕ್ಕೆ ಏನಿಲ್ಲವೆಂದರೂ 35 ಲಕ್ಷ ಜನ ಸಂಚರಿಸುತ್ತಾರೆ. ಅವರೆಲ್ಲ ಬಹುತೇಕ ಮಧ್ಯಮ ಹಾಗೂ ಮೇಲ್ಮಧ್ಯಮ ವರ್ಗದ ವ್ಯಕ್ತಿಗಳು ಹಾಗೂ ಸಹಜವಾಗಿ, ಜಾಹೀರಾತುದಾರರ ಟಾರ್ಗೆಟ್. ಆದ್ದರಿಂದ, ಈ ಟ್ಯಾಕ್ಸಿ ಪತ್ರಿಕೆಗೆ ಜಾಹೀರಾತುದಾರರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆಯಂತೆ.
"ಮುಂದಿನ 6 ತಿಂಗಳಿಗಂತೂ ಜಾಹೀರಾತುಗಳು ಬುಕ್ ಆಗಿವೆ. ಪ್ರತಿವಾರ, 50000 ಪ್ರತಿಗಳ ಮುದ್ರಣ ವೆಚ್ಚ ಸುಮಾರು 5 ಲಕ್ಷ ರುಪಾಯಿ. ಈ ವೆಚ್ಚವನ್ನು ಜಾಹೀರಾತುಗಳಿಂದಲೇ ಭರಿಸಬೇಕಾಗುತ್ತದೆ. ಆರಂಭದಲ್ಲಿ 30000 ಪ್ರತಿಗಳನ್ನು ಟ್ಯಾಕ್ಸಿಗಳಿಗೆ ನೀಡಲಾಗಿದೆ. ಜೂನ್-ಜುಲೈ ವೇಳೆಗೆ 60000 ಪ್ರತಿಗಳನ್ನು ಟ್ಯಾಕ್ಸಿಗಳಿಗೆ ವಿತರಿಸಲಾಗುತ್ತದೆ" ಎನ್ನುತ್ತಾರೆ ಪತ್ರಿಕೆಯ ಸಂಪಾದಕ - ವಿಷ್ಣು ಕದಂ.
ಭಾರತದ ಪತ್ರಿಕೋದ್ಯಮಕ್ಕೆ ಈ ಟ್ಯಾಕ್ಸಿ ಪತ್ರಿಕೆಯ ಕಲ್ಪನೆ ಹೊಸತು. ಈ ಯತ್ನ ಯಶಸ್ವಿಯಾದರೆ, ಬೆಂಗಳೂರಿನಲ್ಲಿ ರಿಕ್ಷಾ ಪತ್ರಿಕೆ ಆರಂಭಿಸಬಹುದು.
Monday, April 06, 2009
ಬ್ರೇಕಿಂಗ್ ನ್ಯೂಸ್: ಭಾರತ ಚುನಾವಣೆ 2009ಗೆ ಗೂಗಲ್ ಸೈಟ್
ಇದರಲ್ಲಿ ಇಂಗ್ಲೀಷ್ ಮತ್ತು ಹಿಂದಿ ಭಾಷೆಯಲ್ಲಿ ಮಾಹಿತಿ ಹಾಗೂ 6 ಚುನಾವಣಾ ಟೂಲ್ ಇವೆ.
1. ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂದು ಪರಿಶೀಲಿಸುವುದು
2. ಮತಗಟ್ಟೆ ಎಲ್ಲಿದೆ ಎಂದು ತಿಳಿಯುವುದು
3. ಗೂಗಲ್ ನಕಾಶೆಯಲ್ಲಿ ಲೋಕಸಭಾ ಕ್ಷೇತ್ರ ದರ್ಶನ
4. ಈ ಚುನಾವಣೆ ಸಂಬಂಧಿತ ಸುದ್ದಿ, ಬ್ಲಾಗ್, ವಿಡಿಯೋ ಹಾಗೂ ಹೇಳಿಕೆಗಳನ್ನು ಓದಲು, ನೋಡಲು ಅವಕಾಶ
5. ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿತ ವಿವಿಧ ಅಂಕಿ ಅಂಶಗಳನ್ನು ನೋಡುವುದು
6. ಈ ವರ್ಷದ ಅಭ್ಯರ್ಥಿಗಳು ಹಾಗೂ ಹಾಲಿ ಎಂಪಿಗಳ ಕುರಿತು ಮಾಹಿತಿ ಮತ್ತು ಹಿನ್ನೆಲೆ ತಿಳಿಯುವುದು
ಹಿಂದೂಸ್ತಾನ್ ಟೈಮ್ಸ್ ಪತ್ರಿಕಾ ಸಮೂಹ, ಬೆಂಗಳೂರಿನ ಜನಾಗ್ರಹ, ಅಸೋಸಿಯೇಶನ್ ಫಾರ್ ಡೆಮೊಕ್ರಾಟಿಕ್ ರಿಫಾರ್ಮ್ಸ್, ಇಂಡಿಕಸ್ ಎನಾಲಿಟಿಕ್ಸ್, ಲಿಬರ್ಟಿ ಇನ್ಸ್ಟಿಟ್ಯೂಟ್ ಹಾಗೂ ಪಿಆರ್ಎಸ್ ಲೆಜಿಸ್ಲೇಟಿವ್ ಸರ್ವಿಸ್ - ಸಹಯೋಗದಲ್ಲಿ ಗೂಗಲ್ ಈ ಸೈಟನ್ನು ಆರಂಭಿಸಿದೆ.
ನನ್ನ ಮೊದಲ ನೋಟದಲ್ಲಿ ಈ ಸೈಟ್ ಓಕೆ ಅಂತ ಅನ್ನಿಸಿದರೂ ಇದರ ಉಪಯುಕ್ತತೆ ಕುರಿತು ಇನ್ನೂ ಖಚಿತ ಅಭಿಪ್ರಾಯ ಮೂಡಿಲ್ಲ. ಮತದಾರ ಪಟ್ಟಿಯಲ್ಲಿ ನನ್ನ ಹೆಸರು ತೋರಿಸಲು ಈ ಟೂಲ್ ವಿಫಲವಾಯಿತು. ಈ ರಾತ್ರಿ ಈ ಸೈಟಿನಲ್ಲಿ ಹೆಚ್ಚು ಪ್ರಯೋಗ ಮಾಡುವ ಉದ್ದೇಶವಿದೆ.

