Wednesday, July 15, 2009

ಠಳ್ಳನೆ ಒಡೆಯಿತು ಒಬಾಮಾ "ರಹಸ್ಯ ಟೆಲೆಪ್ರಾಂಪ್ಟರ್"



ರಾಕ್ ಒಬಾಮಾ ಮಾತಿನ ಮಾಂತ್ರಿಕ ಎಂಬುದರಲ್ಲಿ ಎರಡು ಮಾತಿಲ್ಲ. ಅವರ ನಿರರ್ಗಳ ಭಾಷಣ, ಪ್ರಭಾವೀ ಕಂಠ, ಆತ್ಮವಿಶ್ವಾಸದ ಧ್ವನಿ ಕೇಳಿದರೆ ಎಂಥವನೂ ಮರುಳಾಗಲೇ ಬೇಕು. ಅಂಥ ವಿದ್ಯುಚ್ಛಕ್ತಿ ಇದೆ ಅವರ ಮಾತಿನಲ್ಲಿ. ಚರ್ಚುಗಳ ಕಮ್ಯುನಿಟಿ ಸಂಘಟನೆಯಲ್ಲಿ ಪ್ರಚಾರಕನಂತೆ ಕೆಲಸ ಮಾಡುತ್ತಿದ್ದ ಬರಾಕ್ ಒಬಾಮಾ ರಾಜಕೀಯದಲ್ಲಿ ದಿಢೀರ್ ನಾಯಕನಾಗಿ, ಇಲಿನಾನ್ಸ್ ರಾಜ್ಯದ ಸೆನೆಟರ್ ಆಗಿ ನಂತರ ಇಡೀ ಅಮೇರಿಕಕ್ಕೆ ಅಧ್ಯಕ್ಷ ಆಗಿ ದಿಢೀರನೆ ಬೆಳೆದದ್ದು ಒಂದು ಅದ್ಭುತ.

ಒಬಾಮಾ ಇಂಥ ವಾಗ್ಮಿಯಾದರೂ, ಅವರ ಭಾಷಣದ ಹಿಂದೆ ಒಂದು ತಾಂತ್ರಿಕ ಪಡೆಯೇ ಇರುತ್ತದೆ ಎಂದು ನಿಮಗೆ ಗೊತ್ತೇ? ಒಬಾಮಾ ಭಾಷಣ ಮಾಡುವಾಗ "ಟೀವಿ ಸುದ್ದಿ ವಾಚಕರು ವಾರ್ತೆ ಓದುವಾಗ ಬಳಸುವಂಥ ಟೆಲೆಪ್ರಾಂಪ್ಟರ್" ಬಳಸುತ್ತಾರೆ ಎಂದರೆ ನಂಬುತ್ತೀರಾ? ಹೌದು... ಅವರು ಎಲ್ಲರೆದುರೇ, ವೇದಿಕೆಯಲ್ಲೇ ಟೆಲೆಪ್ರಾಂಪ್ಟರ್ ಬಳಸಿದರೂ ಅದು ಯಾರಿಗೂ ಕಾಣುವುದಿಲ್ಲ. ಒಂಥರಾ ರಹಸ್ಯ ಎಂಬಂತಿರುತ್ತದೆ ಅದು.

ಅದು ಟೀವಿ ಸ್ಟೂಡಿಯೋಗಳ ಟೆಲೆಪ್ರಾಂಪ್ಟರಿಗಿಂತ ಹೈಟೆಕ್. ನೋಡಲು ಸಾಮಾನ್ಯ ಪಾರದರ್ಶಕ ಗಾಜಿನಂತೆ ಕಾಣಿಸುವುದರಿಂದ ಪ್ರೇಕ್ಷಕರ ಗಮನಕ್ಕೆ ಬರುವುದಿಲ್ಲ. ಆದರೆ, ಭಾಷಣಕ್ಕೆ ನಿಂತ ಒಬಾಮಾಗೆ ಮಾತ್ರ ಆ ಗಾಜಿನ ಮೇಲೆ ಚೆನ್ನಾಗಿ ಅಕ್ಷರಗಳು ಕಾಣಿಸುತ್ತವೆ. ಈ ಕೆಳಗಿನ ಚಿತ್ರ ನೋಡಿ.



ಆದರೂ, ಇಂಥದ್ದೆಲ್ಲ ಬಹಳ ಕಾಲ ರಹಸ್ಯವಾಗಿ ಉಳಿಯುವುದಿಲ್ಲ. 2008ರ ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ ಅದು ಹೇಗೋ ಪತ್ತೆಯಾದ ಈ ಟೆಲೆಪ್ರಾಂಪ್ಟರ್ ಗುಟ್ಟು, ಅಮೆರಿಕದಲ್ಲಿ ಒಂದಷ್ಟು ಟೀಕೆಗೂ ಒಳಗಾಗಿತ್ತು. ಆದರೆ, ಒಬಾಮಾ ಚರಿಷ್ಮಾ ಎದುರು ಅದು ದೊಡ್ಡ ಸುದ್ದಿಯಾಗಲಿಲ್ಲ ಅಷ್ಟೇ. ಆನಂತರ, ಅಧ್ಯಕ್ಷರಾದ ಮೇಲೂ ಅವರು ಟೆಲೆಪ್ರಾಂಪ್ಟರ್ ಬಳಸುವುದನ್ನು ಬಿಡಲಿಲ್ಲ. ಅವರು ಎಲ್ಲಿಲ್ಲಿಗೆ ಹೋಗಿ ಭಾಷಣ ಮಾಡುತ್ತಿದ್ದರೋ, ಅಲ್ಲಿಗೆಲ್ಲಾ ಅವರ ಟೆಲೆಪ್ರಾಂಪ್ಟರ್ ಕೂಡ ಹೋಗುತ್ತಿತ್ತು.

ಪರಿಸ್ಥಿತಿ ಹೀಗಿರುತ್ತ, ನಿನ್ನೆ ಮಂಗಳವಾರ ಅವರ ಟೆಲೆಪ್ರಾಂಪ್ಟರ್ ಗುಟ್ಟು ರಟ್ಟಾಯಿತು. ಜಗತ್ತಿನಾದ್ಯಂತ ಸುದ್ದಿಯಾಯಿತು. ಕಾರಣ... ಕಾರ್ಯಕ್ರಮವೊಂದರಲ್ಲಿ ಟೆಲೆಪ್ರಾಂಪ್ಟರ್ ನೋಡಿಕೊಂಡು ಒಬಾಮಾ ಭಾಷಣ ಮಾಡುತ್ತಿರುವಾಗ ಅದು ಎಲ್ಲರೆದುರೇ ಠಳ್ಳಂತ ಬಿದ್ದು ಒಡೆದುಹೋಯಿತು. ಇದರಿಂದ ಒಬಾಮಾ ತುಸು ಗಾಬರಿಗೊಂಡರು. ತಕ್ಷಣವೇ ಸಾವರಿಸಿಕೊಂಡರೂ ಅವರ ಭಾಷಣ ಒಂದಷ್ಟು ತೊದಲಿತು. ಇದು ಟೀವಿಗಳಲ್ಲೂ ಬಿತ್ತರವಾಯಿತು. ಆಗ ಟೀವಿ ಸುದ್ದಿ ವಾಚಕರು ಮುಸಿ ಮುಸಿ ನಗುತ್ತ ಹೇಳಿದರು... "ಅಧ್ಯಕ್ಷರ ಭಾಷಣಕ್ಕೆ ತಾಂತ್ರಿಕ ತೊಡಕಾಗಿದೆ. ಅಡಚಣೆಗಾಗಿ ಕ್ಷಮಿಸಿ. :-)"

ಅಂದಹಾಗೆ ಒಬಾಮಾ ಟೆಲೆಪ್ರಾಂಪ್ಟರ್ ಹೇಗಿತ್ತು? ಇಲ್ಲಿವೆ ಕೆಲ ಚಿತ್ರಗಳು:


ಒಬಾಮಾ ಎದುರಿಗೆ ಇರುವ ಟೆಲೆಪ್ರಾಂಪ್ಟರ್.



ಅಡಿಯಲ್ಲಿರುವ ಕಂಪ್ಯೂಂಟರ್ ತೆರೆಯ ಮೇಲೆ ಮೂಡುವ ಭಾಷಣದ ಅಕ್ಷರಗಳು ಟೆಲೆಪ್ರಾಂಪ್ಟರ್ ಮೂಲಕ ಒಬಾಮಾಗೆ ಕಾಣುವುದು ಹೀಗೆ.


ಟೆಲೆಪ್ರಾಂಪ್ಟರಿನ ಗಾಜು ಎಷ್ಟು ಪಾರದರ್ಶಕ ಎಂದು ಗಮನಿಸಿ.



ಆದರೆ ಎದುರು ಕುಳಿತ ಪ್ರೇಕ್ಷಕರಿಗೆ ಈ ಪಾರದರ್ಶಕ ಟೆಲೆಪ್ರಾಂಪ್ಟರ್ ಮೇಲೆ ಮೂಡುವ ಅಕ್ಷರಗಳು ಕಾಣಿಸುವುದಿಲ್ಲ. ಅಲ್ಲದೇ, ಸಾಧಾರಣ ಗಾಜಿನಂತೇ ಕಾಣುವ ಅದು ಪ್ರೇಕ್ಷಕರ ಗಮನವನ್ನೂ ಸೆಳೆಯುವುದಿಲ್ಲ.



ಒಬಾಮಾ ಅವರ ಸಾರ್ವಜನಿಕ ಕಾರ್ಯಕ್ರಮವೊಂದರ ಈ ಚಿತ್ರ ನೋಡಿ. ಅಲ್ಲಿ ಟೆಲೆಪ್ರಾಂಪ್ಟರ್ ಇದೆ ಎಂದು ಯಾರ ಗಮನಕ್ಕೆ ಬರಲು ಸಾಧ್ಯ ನೀವೇ ಹೇಳಿ.

Saturday, July 04, 2009

ಕನ್ನಡದಲ್ಲಿ Stay Hungry Stay Foolish



ಇತ್ತೀಚೆಗೆ ನನಗೆ ತುಂಬಾ ಇಷ್ಟವಾದ ಎರಡು ಪುಸ್ತಕಗಳಲ್ಲಿ Stay Hungry Stay Foolish ಕೂಡ ಒಂದು. ಬರೆದದ್ದು ರಶ್ಮಿ ಬನ್ಸಾಲ್ ಎಂಬ ಅಹಮದಾಬಾದ್ ಐಐಎಂನ ಹಳೆ ವಿದ್ಯಾರ್ಥಿನಿ. ಈಗ ಜಾಮ್‌ಮ್ಯಾಗ್ ಪತ್ರಿಕೆಯ ಸಂಪಾದಕಿ. ಈ ಪುಸ್ತಕ 1 ಲಕ್ಷ ಪ್ರತಿಗಳ ಮಾರಾಟ ದಾಟಿದೆ. ಇದೀಗ ಈ ಪುಸ್ತಕದ ಕನ್ನಡ ಅವತರಣಿಕೆಯೂ ಬಂದಿದೆ ಅಂತ ಈಗ ಗೊತ್ತಾಯ್ತು. ಸಾಧನೆಗೆ ಮಿತಿ ಇಲ್ಲ ಸಾಧಕರಿಗೆ ಕೊನೆ ಇಲ್ಲ - ಅಂತ ಶಿರ್ಷಿಕೆಯಂತೆ. 325 ಪುಟ, 150 ರುಪಾಯಿ. ಜುಲೈ 2ರಂದು, ಬೆಂಗಳೂರಿನಲ್ಲಿ, ಖುದ್ದು ರಶ್ಮಿ ಬನ್ಸಾಲ್ ಈ ಪುಸ್ತಕವನ್ನು ಬಿಡುಗಡೆ ಮಾಡಿದರಂತೆ.

ಕನ್ನಡ ಭಾಷಾಂತರ ಯಾರು ಮಾಡಿದ್ದಾರೆ, ಹೇಗೆ ಮಾಡಿದ್ದಾರೆ, ಯಾರು ಪ್ರಕಟಿಸಿದ್ದಾರೆ ಅಂತ ಗೊತ್ತಾಗಲಿಲ್ಲ. (ನಾನಾಗಲೀ, ಕನ್ನಡಪ್ರಭ ಸಂಪಾದಕ ಎಚ್. ಆರ್. ರಂಗನಾಥ್ ಅವರಾಗಲೀ ಈ ಪುಸ್ತಕದ ಭಾಷಾಂತರ ಮಾಡಬೇಕು ಅಂದುಕೊಂಡಿದ್ದೆವು. ಪತ್ರಿಕೆಯ ಕೆಲಸದ ಗಡಿಬಿಡಿಯಲ್ಲಿ ಸಾಧ್ಯವಾಗಲಿಲ್ಲ.)

ನೌಕ್ರಿ ಡಾಟ್ ಕಾಮ್, ಮೇಕ್ ಮೈ ಟ್ರಿಪ್ ಡಾಟ್ ಕಾಮ್, ಸುಭಿಕ್ಷಾ, ರೇಣುಕಾ ಶುಗರ್ಸ್, ಎಜುಕಾಂಪ್, ಸಿಂಟೆಕ್ಸ್, ಆರ್ಕಿಡ್ ಹೊಟೆಲ್, ಮುಂತಾದ ಅನೇಕ ಕಂಪನಿಗಳನ್ನು ಸ್ಥಾಪಿಸಿದ ಐಐಎಂಎ ವಿದ್ಯಾರ್ಥಿಗಳ 25 ಸಾಧನೆಯ ಕಥೆಗಳಿವೆ. ಸಂಬಳಕ್ಕೆ ನೌಕರಿ ಮಾಡುವ ಬದಲಿಗೆ ತಾವೇ ಮಾಲಿಕರಾಗುವ ಯುವಕರ ನಿಜ ಘಟನೆಗಳು ಇವು. Very Inspiring.

ರಶ್ಮಿ ಈಗ ಎರಡನೇ ಪುಸ್ತಕವನ್ನು ಬರೆಯುತ್ತಿದ್ದಾರಂತೆ. ಹೊಸ ಪುಸ್ತಕದ ಬಗ್ಗೆ ನಿರೀಕ್ಷೆಯೂ ಹೆಚ್ಚಾಗಿದೆ.

An Update by Mr. Bedre Manjunath : SHSF Kannada Version hss been published by Vassan Publications, Bangalore and the translation has come up nicely. But, don't know who the translator is. It is a recent trend with the publishers that they pay the translator some amount and drop his or her name from the book. It is only Sri Visweswar Bhat who got his name published in You Can Win. All others are not ready to publish the name of the translator. They want the product but they don't want the creator! Great guns! Even in this case the name of the translator has not been published. You can see its Kannada version Cover page on my Blog http://bedrebaraha.blogspot.com