Showing posts with label Twitter. Show all posts
Showing posts with label Twitter. Show all posts

Thursday, August 20, 2009

ಸೋಷಿಯಲ್ ನೆಟ್‌ವರ್ಕಿಂಗ್ : ನಮ್ಮ ಜನ್ಮ ಡಬಲ್!

Life is Short ಅಂತಾರೆ ಕೆಲವರು. ಆದರೆ, ಈಗ ಇಂಟರ್ನೆಟ್ಟಿನ ‘ಸೋಶಿಯಲ್ ನೆಟ್‌ವರ್ಕಿಂಗ್’ನಿಂದಾಗಿ ನಮ್ಮ ಲೈಫು ಡಬಲ್ ಆಗಿದೆ! ಒಂದೇ ಬಾರಿಗೆ ಎರಡೆರಡು ಜನ್ಮ ಸಾಧ್ಯ. ಒಂದು ಭೂಲೋಕದಲ್ಲಿ. ಇನ್ನೊಂದು ಇಂಟರ್‌ರ್ನೆಟ್ ಲೋಕದಲ್ಲಿ! ಅದು ಸತ್ಯವೂ ಅಲ್ಲದ, ಮಿಥ್ಯವೂ ಅಲ್ಲದ, ಕನಸೂ ಅಲ್ಲದ, ನನಸೂ ಅಲ್ಲದ ಜೀವನ. ವರ್ಚುವಲ್ ಲೈಫ್. ನಾನು ಕನ್ನಡಪ್ರಭದ 'ಸಖಿ' ಪಾಕ್ಷಿಕಕ್ಕೆ ಬರೆದ ಸೋಶಿಯಲ್ ನೆಟ್‌ವರ್ಕಿಂಗ್ ಕುರಿತ ಲೇಖನ ಇದು.



Heyyyyy Wassup? ಏನೂ ಸ್ಕ್ರಾಪ್ಸೇ ಇಲ್ಲ?
ಏಯ್... I dumped Orkut. ಆಮ್ ಆನ್ Facebook. Dunno?
wth! (What The Hell)
hmm..
but, y?
that ssssucks
y?
ಅದ್ಯಾರಿಗೋ ನನ್ನ asl (Age, Sex, Location) ಗೊತ್ತಾಯ್ತು. ಸೋ. ಅದನ್ನ ಬಿಟ್ಟೆ.
ಬಟ್ txt ಮಾಡ್ಬೋದಿತ್ತಲ್ಲ?
Status ಅಪ್‌ಡೇಟ್ ಮಾಡಿದ್ನಲ್ಲಾ. Y?, ನನ್ ಟ್ವೀಟೂ ನೋಡಿಲ್ವಾ?
U on Twitter?
ss... follow me @sakhi
k. cusn (OK. See You Soon)

ಆಕೆ ಹೈದರಾಬಾದ್‌ನಲ್ಲಿ. ಈಕೆ ಬೆಂಗಳೂರಲ್ಲಿ. ಈ ಸಂಭಾಷಣೆ ನಡೆದದ್ದು gmail Chatನಲ್ಲಿ. ಅವರಿಬ್ಬರೂ ನೆಟ್‌ಮೇಟ್ಸು. ಎರಡು ವರ್ಷದಿಂದ ಫ್ರೆಂಡ್ಸು. ಒಬ್ಬರನ್ನೊಬ್ಬರು ನೋಡಿಲ್ಲ. ಇಬ್ಬರೂ ಒರಿಜಿನಲ್ ಹುಡುಗೀರಾ? ಅಥವಾ ಆನ್‌ಲೈನಲ್ಲಿನ ಡುಪ್ಲಿಕೇಟ್ ಅವತಾರವಾ! ಗೊತ್ತಿಲ್ಲ. ಬಟ್ ಇಟ್ಸ್ ಓಕೆ. ವರ್ಚುವಲ್ ಲೈಫ್ ಈಸ್ ವೆರೀ ಕೂಲ್.

ಈಗಿನ ಹೊಸ ಪೀಳಿಗೆಯ ಹುಡುಗ ಹುಡುಗಿಯರೇ ಹಾಗೆ. ಅವರಿಗೆ ಒಂದೇ ಬಾರಿಗೆ ಎರಡೆರಡು ಜನ್ಮವಿದೆ. ಒಂದು ಭೂಲೋಕದಲ್ಲಿ. ಇನ್ನೊಂದು ಇಂಟರ್‌ರ್ನೆಟ್ ಲೋಕದಲ್ಲಿ!

ಸುಳ್ಳಲ್ಲ... ಭೂಮಿಯಲ್ಲಿ ಇರೋ ಹುಡುಗ ಅಂತರ್ಜಾಲದಲ್ಲಿ ಹುಡುಗಿಯಾಗಿರಬಹುದು. ನೆಲದಲ್ಲಿ ನಾಚುತ್ತಾ ನಡೆದಾಡೋ ಹುಡುಗಿ ಇಂಟರ್ನೆಟ್ಟಲ್ಲಿ ಸಖತ್ ರೋಮ್ಯಾಂಟಿಕ್ ಆಗಿ ನಲಿದಾಡಬಹುದು. ಕನ್ನಡಿಯ ಮುಂದಿನ ಬ್ಲಾಕ್ ಬ್ಯೂಟಿ, ಕಂಪ್ಯೂಟರ್ ವಿಂಡೋದಲ್ಲಿ ಫೇರ್ ಆಂಡ್ ಲೌವ್ಲಿ ಎನಿಸಿಕೊಳ್ಳಬಹುದು. ಕಾಲೇಜು ಆವರಣದಲ್ಲಿ ಅಂತರ್‌ಮುಖಿ, ಅಂತರ್ಜಾಲದಲ್ಲಿ ವಾಚಾಳಿ ಸಖಿ... ಅಥವಾ ನೋ ಡೋಂಗಿ... ರಕ್ತ ಮಾಂಸದ ವಾಸ್ತವ ಜಗತ್ತಿನಲ್ಲೂ ವೈರು ಸಿಲಿಕಾನಿನ ಭ್ರಾಮಕ ಜಗತ್ತಿನಲ್ಲೂ ಆಕೆಯ ವ್ಯಕ್ತಿತ್ವ ಒಂದೇ ಆಗಿರಬಹುದು.

Life is Short ಅಂತಾರೆ ಕೆಲವರು. ಆದರೆ, ಈಗ ಇಂಟರ್ನೆಟ್ಟಿನ ‘ಸೋಶಿಯಲ್ ನೆಟ್‌ವರ್ಕಿಂಗ್’ನಿಂದಾಗಿ ನಮ್ಮ ಲೈಫು ಡಬಲ್ ಆಗಿದೆ! ಸತ್ತ ಮೇಲೆ ಏನಾಗ್ತೀವೋ, ಯಾವ ಲೋಕಕ್ಕೆ ಹೋಗ್ತೀವೋ ಗೊತ್ತಿಲ್ಲ. ಆದರೆ, ಈಗಿಂದೀಗ ಅಂತರ್ಜಾಲ ಲೋಕದಲ್ಲಿ ನಮಗೆ ಬೇಕಾದಂಥ ಲೈಫು ಪಡೆಯುವುದು ಸಾಧ್ಯ.

ನಿಜ ಜೀವನದಲ್ಲಿ ನಮಗೆ ಹಿತವಾಗಿರುವವರಿಗಿಂತ ಅಲರ್ಜಿಯಾಗುವವರ ಜೊತೆಯೇ ಒಡನಾಟ ಅನಿವಾರ್ಯವಾಗುತ್ತದೆ. ನಮಗೆ ಬೇಕಾದವರು ಇನ್ಯಾರಿಗೋ ಸಿಕ್ಕಿರುತ್ತಾರೆ. ಅಂತರ್ಜಾಲದ ಸೋಷಿಯಲ್ ನೆಟ್‌ವರ್ಕಿಂಗ್‌ನಲ್ಲಿ ಹಾಗಲ್ಲ. ಅಲ್ಲಿ ನಮಗೆ ಇಷ್ಟವಾಗುವಂಥವರ ಗ್ಯಾಂಗ್ ಕಟ್ಟಿಕೊಳ್ಳಬಹುದು. ಅವರ ಜೊತೆ ವಾಸ್ತವ ಜಗತ್ತಿನಷ್ಟೇ ನೈಜವಾದ ಜೀವನ ಸಾಗಿಸಬಹುದು. ನಮಗೆ ಪ್ರೀತಿಯಾಗುವಂಥ ಅಪ್ಪ, ಅಮ್ಮ, ಅಣ್ಣ, ಅಕ್ಕ, ತಮ್ಮ, ತಂಗಿ, ಗಂಡ, ಹೆಂಡತಿ, ನೆರೆಹೊರೆ, ಫ್ರೆಂಡ್ಸ್ ಆಂಡ್ ಫಿಲಾಸಫರ್‌ಗಳ ಹೊಸ ಸೋಷಿಯಲ್ ವ್ಯವಸ್ಥೆಯನ್ನೇ ಸ್ಥಾಪಿಸಿಕೊಳ್ಳಬಹುದು. ಇಂಟರ್ನೆಟ್ಟಿಗೆ ಲಾಗಿನ್ ಆದಾಗಲೆಲ್ಲ ಅವರ ಜೊತೆ ಮಾನಸಿಕ ಜೀವನ ಸಾಗಿಸಬಹುದು. ಅದು ಸತ್ಯವೂ ಅಲ್ಲದ, ಮಿಥ್ಯವೂ ಅಲ್ಲದ, ಕನಸೂ ಅಲ್ಲದ, ನನಸೂ ಅಲ್ಲದ ಜೀವನ. ವರ್ಚುವಲ್ ಲೈಫ್.

Thanks to Social Networking sites, ಇಂಟರ್ನೆಟ್ಟಿನಲ್ಲಿರುವ, ನಮಗಿಷ್ಟವಾಗುವ, ನಿಜವಾದ ವ್ಯಕ್ತಿಗಳ ಜೊತೆ ನಮ್ಮ ಒಡಲಾಳದ ತೊಳಲಾಟವನ್ನು ತೋಡಿಕೊಳ್ಳಬಹುದು. ಅಳು ಉಮ್ಮಳಿಸಿದರೆ ಅತ್ತು ಹಗುರಾಗಬಹುದು. ಸಂತೋಷವಾದಾಗ ಹಂಚಿಕೊಂಡು ಸಂಭ್ರಮಿಸಬಹುದು. ಕೀಟಲೆ ಮಾಡಬೇಕೆನಿಸಿದಾಗ ತುಂಟಾಟ ಆಡಬಹುದು, ದ್ವಂದ್ವ ಎದುರಾದಾಗ, ದಿಕ್ಕು ತೋಚದಾದಾಗ, ಧೈರ್ಯ ಕುಂದಿದಾಗ, ಅವಮಾನವನ್ನು ಎದುರಿಸಬೇಕಾದಾಗ ಯಾರದ್ದಾದರೂ ಸಲಹೆ ಬೇಕೆನಿಸಿದಾಗ... ಆಪ್ತ ಸಮಾಲೋಚನೆ ನಡೆಸಬಹುದು.

ಸೋಷಿಯಲ್ ನೆಟ್‌ವರ್ಕಿನ ಕಾಲೇಜು ಫ್ರೆಂಡಿಂದ ನೋಟ್ಸನ್ನೂ, ನೋಟ್ಸಿನ ಡೌಟಿಗೆ ಪರಿಹಾರವನ್ನೂ, ಅದರ ಜೊತೆಗೇ ಸ್ನೇಹವನ್ನೂ, ಪರಿಣಾಮವಾಗಿ ಪ್ರೀತಿಯನ್ನೂ, ಮುಂದುವರಿದು ರೋಮಾನ್ಸನ್ನೂ... ಥೂ ಪೋಲೀ ಗೀಲೀ ಬೇಡ... ವಿನಾಕಾರಣ ಉಲ್ಲಾಸಗೊಳ್ಳಲು ಒಂದು ಕಾರಣವನ್ನೂ ಇಂಟರ್ನೆಟ್ಟಿನ ಸೋಶಿಯಲ್ ನೆಟ್‌ವರ್ಕ್ ನೀಡುತ್ತದೆ.

ಭಾವನಾತ್ಮಕ ಜೀವನಕ್ಕಷ್ಟೇ ಅಲ್ಲ ಸೋಷಿಯಲ್ ನೆಟ್‌ವರ್ಕ್ ಅಂದರೆ, ಕೇವಲ ಭಾವನಾತ್ಮಕ ಸಾಂತ್ವನ ನೀಡುವ ‘ಇಮೋಷನಲ್ ವೆಬ್‌ತಾಣ’ ಅಂತೇನೂ ಭಾವಿಸಬೇಕಿಲ್ಲ. ಈ ನೆಟ್‌ವರ್ಕು... ವಿದ್ಯಾರ್ಥಿಗಳಿಗೆ ಟ್ಯೂಷನ್ ಕ್ಲಾಸು, ಉದ್ಯಮಿಗಳಿಗೆ ಮಾರ್ಕೆಟಿಂಗ್ ಚಾನಲ್ಲು, ರಿಟೇಲ್ ವ್ಯಾಪಾರಿಗಳಿಗೆ ಚಿಲ್ಲರೆ ಮಾರಾಟದ ಷೋರೂಮು, ಕಮಿಷನ್ ಬ್ರೋಕರ್‌ಗಳಿಗೆ ಕ್ಲಾಸಿಫೈಡ್ ಪೇಪರ್ರ್ಉಂ, ಸಮೀಕ್ಷೆ-ಸಂಶೋಧಕರಿಗೆ ಜನನಿಬಿಡ ಬಸ್ ಸ್ಟಾಂಡು, ಸಾಮಾನ್ಯ ಜನರಿಗೆ ಯೆಲ್ಲೋ ಪೇಜಸ್ಸು, ಉದ್ಯೋಗ ಹುಡುಕುವವರಿಗೆ ಎಚ್‌ಆರ್ ಕಲ್ಸಲ್ಟೆನ್ಸಿ, ಪತ್ರಕರ್ತರಿಗೆ ಸುದ್ದಿ ಸಿಗುವ ಹಾಟ್ ಸ್ಪಾಟು, ರಾಜಕಾರಣಿಗಳಿಗೆ ವಿಧಾನಸಭಾ ಕ್ಷೇತ್ರ, ಸುಮ್ಮನೆ ತಮಾಷೆ ಬೇಕಾದವರಿಗೆ ಎಂಟರ್‌ಟೈನ್‌ಮೆಂಟು, ಹೀಗೆ... ಸೋಷಿಯಲ್ ನೆಟ್‌ವರ್ಕು



ಅವರವರ ಭಾವಕ್ಕೆ... ಅವರವರರ ಲಾಭಕ್ಕೆ...

೨೦೦೮ರ ಅಮೆರಿಕದ ಚುನಾವಣೆಯ ಸಂದರ್ಭದಲ್ಲಿ ಬರಾಕ್ ಒಬಾಮಾ ಲಕ್ಷಾಂತರ ಜನ ಬೆಂಬಲಿಗರನ್ನೂ ಅವರಿಂದ ಮಿಲಿಯನ್‌ಗಟ್ಟಲೆ ದೇಣಿಗೆಯನ್ನೂ ನಂತರ ಅವರ ವೋಟನ್ನೂ ಪಡೆಯಲು ಸಾಧ್ಯವಾದದ್ದು ಸೋಷಿಯಲ್ ನೆಟ್‌ವರ್ಕಿಂಗ್ ಸೈಟುಗಳಿಂದ. ಇಂದು ವೋಡಾಫೋನ್‌ನ್ ಝೂಝೂ ಜಾಹೀರಾತು ಯೂಟ್ಯೂಬಿನಲ್ಲಿ ಲಭ್ಯ. ಆ ಜಾಹೀರಾತುಗಳಿಗೆ ಹತ್ತಾರು ಸಾವಿರ ಅಭಿಮಾನಿಗಳ ದಂಡು!

ಎರಡು ದಶಕದ ಹಿಂದೆ, ಈ-ಮೇಲ್ ಕ್ರಾಂತಿಯಾದ ಮೇಲೆ ಅಂತರ್ಜಾಲದಲ್ಲಿ ಸೋಷಿಯಲ್ ನೆಟ್‌ವರ್ಕಿಂಗ್ ಎಂಬ ಫಿನಾಮಿನಾ ಕೂಡ ಶುರುವಾಯಿತು. ಜಗತ್ತಿನ ಯಾವ್ಯಾವುದೋ ಭಾಗಗಳಿಂದ ಸಮಾನ ಆಸಕ್ತರು ಈ-ಮೇಲ್ ಮೂಲಕ ಗುಂಪು ಕಟ್ಟಿಕೊಳ್ಳಲಾರಂಭಿಸಿದರು. ಆದರೆ ಆಗ ಯಾರೂ ಅದನ್ನು ಸೋಷಿಯಲ್ ನೆಟ್‌ವರ್ಕಿಂಗ್ ಅಂತ ಕರೆಯುತ್ತಿರಲಿಲ್ಲ. ಸುಮ್ಮನೇ ‘ಈ-ಮೇಲ್ ಲಿಸ್ಟ್’ ಎನ್ನುತ್ತಿದ್ದರು. ನಂತರ, ಇದು ಫೋಟೋ, ಫೈಲು, ಕ್ಯಾಲೆಂಟರ್ ಮುಂತಾದವುಗಳನ್ನು ಹಂಚಿಕೊಳ್ಳುವ ‘ಗ್ರೂಪ್’ ಆಯಿತು. ನಂತರ, ಮದುವೆಗಾಗಿ ಗಂಡು-ಹೆಣ್ಣು ಹುಡುಕುವ ಮೆಟ್ರಿಮೋನಿಯಲ್ ತಾಣವಾಗಿ ಪ್ರವರ್ಧಮಾನಕ್ಕೆ ಬಂತು. ಇದಾದ ಮೇಲೆ, ದೀರ್ಘ ಕಾಲದ ವೈವಾಹಿಕ ಬಂಧನದ ಬದಲು, ತಕ್ಷಣದ ಮೋಜಿನ ಡೇಟಿಂಗಿಗಾಗಿ ವಿಶಾಲ ಮನಸ್ಸಿನ ಹುಡುಗ-ಹುಡುಗಿಯರನ್ನು ಅರಸುವ ಫ್ರೆಂಡ್‌ಫೈಂಡ್ ನೆಟ್‌ವರ್ಕ್‌ಗಳ ಭರಾಟೆ ಆರಂಭವಾಯಿತು. ಆಮೇಲೆ, ಸಜ್ಜನರೂ, ಮರ್ಯಾದಸ್ಥರೂ ತಮ್ಮ ಸಮಾನ ಮನಸ್ಕರ ಮಿತ್ರವೃಂದ ಸ್ಥಾಪಿಸಿಕೊಳ್ಳಲು ಅನುವಾಗುವ ಸೋಷಿಯಲ್ ನೆಟ್‌ವರ್ಕಿಂಗ್ ಸೈಟುಗಳು ಪ್ರಾರಂಭವಾದವು.

-ಹಲವು ವಿಧ

ಈಗ ಇಂಟರ್ನೆಟ್ಟಿನ ತುಂಬಾ ನೂರಾರು ಸೋಷಿಯಲ್ ನೆಟ್‌ವರ್ಕಿಂಗ್ ಸೈಟುಗಳು. Orkut, Myspace, Hi5, Facebookನಂಥ ಗೆಳೆಯರ ಬಳಗವಷ್ಟೇ ಅಲ್ಲ, ಬೇರೆ ಬೇರೆ ರೀತಿಯ ಸೋಷಿಯಲ್ ನೆಟ್‌ವರ್ಕಿಂಗ್ ಸೈಟುಗಳೂ ಆರಂಭವಾಗಿವೆ. Dig, Del.icio.us, Stumbleupon, Yahoo Buzzನಂಥ ಸೋಷಿಯಲ್, ಬುಕ್ ಮಾರ್ಕಿಂಗ್ ಸೈಟುಗಳು, Flickr, Picassaದಂಥ ಸೋಷಿಯಲ್ ಫೋಟೋ ಷೇರಿಂಗ್ ಸೈಟುಗಳು, Youtube, Vimeoದಂಥ ಸೋಷಿಯಲ್ ವಿಡಿಯೋ ಸೈಟುಗಳು, Twitter, Pingನಂಥ ಸೋಷಿಯಲ್ ಮೈಕ್ರೋ ಬ್ಲಾಗಿಂಗ್ ಸೈಟುಗಳು, Identi.caದಂಥ ಪಬ್ಲಿಕ್ ಟೈಮ್‌ಲೈನುಗಳು ಹೀಗೆ... ಹಲವು ವಿಧದ ಸೋಷಿಯಲ್ ನೆಟ್‌ವರ್ಕ್ ಆರಂಭವಾಗಿವೆ.

ಇಂದು ನಿಮ್ಮ ಈ-ಮೇಲ್ ತೆರೆದರೆ ಸಾಕು. ದಿನಕ್ಕೆ ಕನಿಷ್ಠ ಒಂದೆರಡಾದರೂ ಸೋಷಿಯಲ್ ನೆಟ್‌ವರ್ಕಿಗೆ ಸೇರಲು ನಿಮಗೆ ನಿಮ್ಮ ಯಾವುದೋ ಮಿತ್ರರಿಂದ ಆಹ್ವಾನ ಬಂದಿರುತ್ತದೆ. Tagged, Linkedin, Zorpia, Jaiku, Ning, yelp ಹೀಗೆ ಬೇರೆ ಬೇರೆ ವಿಚಿತ್ರ ಹೆಸರಿನ ಸೈಟಿನ ಆಹ್ವಾನಗಳು. ಕೆಲವೊಮ್ಮೆ ಈ ಆಹ್ವಾನಗಳು ಎಷ್ಟು ಕಿರಿಕಿರಿ ಉಂಟುಮಾಡುತ್ತವೆ ಅಂದರೆ, Tagged.comಗೆ ಜಗತ್ತಿನ ಅತ್ಯಂತ ಕಿರಿಕಿರಿಯ ಸೋಷಿಯಲ್ ನೆಟ್‌ವರ್ಕ್ ಅಂತ ಟೈಮ್ ಮ್ಯಾಗ್‌ಝಿನ್ ಬಿರುದು ನೀಡಿದೆ!

ಎಲ್ಲರೂ, ಎಲ್ಲ ಸೋಷಿಯಲ್ ನೆಟ್‌ವರ್ಕನ್ನೂ ಸೇರುವುದಾಗಲೀ, ಎಲ್ಲ ನೆಟ್‌ವರ್ಕ್‌ನಲ್ಲಿ ಇರುತ್ತೇನೆ ಎನ್ನುವುದಾಗಲೀ ಮೂರ್ಖತನ. ಹಾಗೆಯೇ, ಒಂದೂ ಸೋಷಿಯಲ್ ನೆಟ್‌ವರ್ಕ್ ತನಗೆ ಬೇಡ ಎನ್ನುವುದೂ ಜಾಣತನವಲ್ಲ.

ನಿಮ್ಮನ್ಯಾರೋ ಹುಡುಕುತ್ತಿದ್ದಾರೆ!

ಇಂದು ಸೋಷಿಯಲ್ ನೆಟ್‌ವರ್ಕಲ್ಲಿ ಇರುವುದು ಸ್ಟೈಲ್, ಫ್ಯಾಷನ್ ಅಷ್ಟೇ ಅಲ್ಲ ಅಗತ್ಯ ಕೂಡ. ಯಾರೋ ಎಲ್ಲೋ ನಿಮಗೋಸ್ಕರ ಹುಡುಕುತ್ತಿರುತ್ತಾರೆ. ಅವರಿಗೆ ನೀವು ಸಿಗಬೇಕು ಅಂದರೆ ನೀವು ಈ ನೆಟ್‌ವರ್ಕಿನಲ್ಲಿ ಎಲ್ಲೋ ಇರಬೇಕು.

ನಿಮ್ಮ ಬಾಲ್ಯದ ಗೆಳೆಯ, ಗೆಳತಿ, ಯಾವುದೋ ಹಂತದಲ್ಲಿ ನಿಮ್ಮಿಂದ ದೂರವಾದ ನಿಮ್ಮ ಕ್ಲಾಸ್‌ಮೇಟ್, ನಿಮ್ಮ ಪಕ್ಕದ್ಮನೆ ಈನಾ-ಮೀನಾ... ಯಾರೋ ನಿಮಗೋಸ್ಕರ ತಡಕಾಡುತ್ತಿರಬಹುದು. ನಿಮಗೆ ಕೆಲಸ ನೀಡಬೇಕಾದ ಕಂಪನಿ ನಿಮ್ಮ ಬಗ್ಗೆ ಮಾಹಿತಿ ಬೇಕೆಂದರೆ, ಇಂಟರ್‌ನೆಟ್‌ಲ್ಲಿ ಜಾಲಾಡುತ್ತಿರಬಹುದು. ನಿಮ್ಮ ಬಗ್ಗೆ ಲೇಖನ ಬರೆಯಲು ಬರಹಗಾರರು ಮಾಹಿತಿ ಸಂಗ್ರಹಿಸುತ್ತಿರಬಹುದು. ಯಾವುದೋ ಕ್ರಿಮಿನಲ್ ಕೇಸಿಗೆ ಸಂಬಂಧಿಸಿದಂತೆ ಪೊಲೀಸರೂ ನಿಮ್ಮ ಸುಳಿವನ್ನು ಇಂಟರ್‌ನೆಟ್ಟಿನಲ್ಲಿ ಪಡೆಯುತ್ತಿರಬಹುದು! ಯಾರೂ ನಿಮ್ಮ ಬಗ್ಗೆ ಇಂಟರ್‌ನೆಟ್ಟಿನಲ್ಲಿ ಹುಡುಕಾಡುವುದಿಲ್ಲ ಎಂದರೆ, Sorry, ನೀವು ಈ ಜಗತ್ತಿನಲ್ಲಿ ಯಾರಿಗೂ ಬೇಡವಾಗಿದ್ದೀರಿ ಅಂತ ಅರ್ಥ!

ನೀವು ಗುಗ್ಗು ಅಲ್ಲ, ಈ ಜಮಾನದವರು ಅನ್ನಿಸಿಕೊಳ್ಳಬೇಕಾದರೆ ನಿಮಗಿರುವುದು ಎರಡೇ ಆಯ್ಕೆ... ಒಳ್ಳೆಯ ಸೋಷಿಯಲ್ ನೆಟ್‌ವರ್ಕಿನಲ್ಲಿ ಇರುವುದು ಅಥವಾ ಒಳ್ಳೆಯ ನೆಟ್‌ವರ್ಕ್ ಸೇರುವುದು!

ಸೋಷಿಯಲ್ ನೆಟ್‌ವರ್ಕ್ ಅಂದರೆ ಏನು?

ಲಯನ್ಸ್ ಕ್ಲಬ್, ರೋಟರಿ ಕ್ಲಬ್, ರಾಜಕುಮಾರ್ ಅಭಿಮಾನಿಗಳ ಬಳಗ, ಕಟ್ಟೆ ಗೆಳೆಯರ ಬಳಗ, ಯುವಕ ಸಂಘ ... ಹೀಗೆ ನೂರಾರು ಸಂಘ ಸಂಸ್ಥೆಗಳ ಹೆಸರು ಕೇಳಿದ್ದೀರಲ್ಲ. ಇವೆಲ್ಲ ವಾಸ್ತವ ಜಗತ್ತಿನ ಸೋಷಿಯಲ್ ನೆಟ್‌ವರ್ಕ್‌ಗಳು. ಅದೇ ರೀತಿ, ಇಂಟರ್‌ನೆಟ್ಟಿನಲ್ಲೂ ಗೆಳೆಯರ ಬಳಗವಿದೆ. ಈ ಬಳಗದಲ್ಲಿ ಜಗತ್ತಿನ ಬೇರೆ ಬೇರೆ ಪ್ರದೇಶಗಳಿಂದ, ಬೇರೆ ಬೇರೆ ವೃತ್ತಿಯ, ಬೇರೆ ಬೇರೆ ಪ್ರವೃತ್ತಿಯ, ಬೇರೆ ಬೇರೆ ವಯಸ್ಸಿನ ವ್ಯಕ್ತಿಗಳು ಸದಸ್ಯರಾಗಿರುತ್ತಾರೆ. ಈ ಸದಸ್ಯರಲ್ಲಿ ಎಲ್ಲರಿಗೂ ಎಲ್ಲರ ಪರಿಚಯವಿರುವುದಿಲ್ಲ. ಆದರೆ, ಈ ಸದಸ್ಯರು ಸಮಾನ ಆಸಕ್ತಿ ಇರುವ ವ್ಯಕ್ತಿಗಳನ್ನು ಆಯ್ದುಕೊಂಡು ಅವರ ಜೊತೆ ಮಾಹಿತಿ ಅಥವಾ ಸ್ನೇಹ ವಿನಿಮಯ ಮಾಡಿಕೊಳ್ಳುತ್ತಾರೆ. ಇಲ್ಲಿ ಮೋಜು, ಮಸ್ತಿ, ಶಿಕ್ಷಣ, ಬಿಸಿನೆಸ್, ಜಾಹೀರಾತು, ಮಾಹಿತಿ, ಸುದ್ದಿ, ಫೋಟೋಗಳು, ವಿಡಿಯೋಗಳು, ಸಂಗೀತ, ಸ್ಲೈಡ್‌ಷೋ ಎಲ್ಲಾ ಇರುತ್ತದೆ.

ನೆಟ್‌ವರ್ಕ್ ಸೇರುವಾಗ ಜಾಗೃತೆ

ಬಾಳೆಹಣ್ಣು ತಿನ್ನುವಷ್ಟೇ ಸುಲಭ ಕೆಲಸ ಇದು. ಬಹುತೇಕ ನೆಟ್‌ವರ್ಕ್‌ಗಳಿಗೆ ಉಚಿತವಾಗಿ ಸೇರಬಹುದು. ಶುಲ್ಕ ಕೊಟ್ಟರೆ ಹೆಚ್ಚುವರಿ ಸೇವೆಗಳೂ ಲಭ್ಯ. ನೆಟ್‌ವರ್ಕ್ ಸೇರುವಾಗ ನೀವು ಕೆಲವು ಮಾಹಿತಿಯನ್ನು ಕೊಡುತ್ತೀರಿ. ಆಗ ಈ ಟಿಪ್ಸ್ ಗಮನಿಸಿ:

ನಿಮ್ಮ ಬ್ಯಾಂಕಿಂಗ್ ಸಂಬಂಧಿ ಮಾಹಿತಿ, ಈ-ಮೇಲ್ ವಿಳಾಸ, ಪಾಸ್‌ವರ್ಡ್ ನೀಡಲೇ ಬೇಡಿ.

ಸೋಷಿಯಲ್ ನೆಟ್‌ವರ್ಕಿಗೆಂದೇ ಪ್ರತ್ಯೇಕ ಈ-ಮೇಲ್ ಐಡಿ ಇದ್ದರೆ ಒಳ್ಳೆಯದು. ಈ-ಮೇಲ್ ಪಾಸ್‌ವರ್ಡ್ ಹಾಗೂ ನೆಟ್‌ವರ್ಕ್ ಪಾಸ್‌ವರ್ಡ್ ಎಲ್ಲಾ ಬೇರೆಯಾಗಿರಲಿ.

ನಿಜವಾದ ಜನ್ಮ ದಿನ ನೀಡಬೇಡಿ. ಜನ್ಮದಿನ ನಿಮ್ಮ ಹಣಕಾಸು ವಹಿವಾಟಿನಲ್ಲಿ ಪ್ರಮುಖ ಮಾಹಿತಿಗಳಲ್ಲೊಂದು.

ಹೊಸ ಮಿತ್ರರನ್ನು ಮಾಡಿಕೊಳ್ಳುವಾಗ ಅವರ ಹಿನ್ನೆಲೆ ತಿಳಿದುಕೊಳ್ಳಲು ಅವಕಾಶವಿರುತ್ತದೆ. ಓದಿ ನಿಮಗೆ ಒಪ್ಪಿಗೆಯಾದರೆ ಮಾತ್ರ ಸ್ನೇಹಹಸ್ತ ಚಾಚಿ. ಒಂದುವೇಳೆ, ಎಲ್ಲರನ್ನೂ ಮಿತ್ರರನ್ನಾಗಿ ಮಾಡಿಕೊಂಡರೂ ವ್ಯವಹರಿಸುವಾಗ ಎಚ್ಚರ.

ಮಿತ್ರರನ್ನು ಆಹ್ವಾನಿಸಿ ಎಂಬ ಬಟನ್ ಎಲ್ಲಾ ನೆಟ್‌ವರ್ಕ್‌ನಲ್ಲೂ ಇರುತ್ತದೆ. ಅದನ್ನು ಆದಷ್ಟೂ ಕಡಿಮೆ ಬಳಸಿ. ಇಲ್ಲದಿದ್ದರೆ ನಿಮ್ಮ ಆ ರಿಕ್ವೆಸ್ಟ್‌ನಿಂದ ಮಿತ್ರರಿಗೆಲ್ಲ ಕಿರಿಕಿರಿ.



ಇಲ್ಲೂ ಕ್ರಿಮಿನಲ್‌ಗಳಿದ್ದಾರೆ ಎಚ್ಚರ!


ಸೋಷಿಯಲ್ ನೆಟ್‌ವರ್ಕ್ ಅಂದರೆ... ಸುಖದ ಹೊಳೆ, ಸಂತೋಷದ ಮಳೆ ಅಂದುಕೊಳ್ಳುವ ಹಾಗಿಲ್ಲ. ಇದರಲ್ಲೂ ಅನೇಕ ಅಪಾಯಗಳಿವೆ. ಅವುಗಳ ಬಗ್ಗೆ ಜಾಗರೂಕರಾಗಿರಿ.

ಲೈಂಗಿಕ ಕಿರುಕುಳ
ಸೋಷಿಯಲ್ ನೆಟ್‌ವರ್ಕಿನಲ್ಲಿ ಅತ್ಯಂತ ದೊಡ್ಡ ಸಮಸ್ಯೆ ಇದು. ಇಂಟರ್‌ನೆಟ್‌ನಲ್ಲಿ ಗೋಮುಖ ವ್ಯಾಘ್ರಗಳು ಅನೇಕ. ಸಂಭಾವಿತರಂತೆ ಪರಿಚಯವಾಗುವ ಇವರು ಕ್ರಮೇಣ ರೋಮ್ಯಾಂಟಿಕ್ ಆಗುತ್ತಾರೆ. ಆಮೇಲೆ, ಸಾಧುಗಳಂತೆ, ಇಂಟರ್‌ನೆಟ್ಟಿನ ಹೊರಗೆ, ವಾಸ್ತವ ಜಗತ್ತಿನಲ್ಲಿ ಭೇಟಿಯಾಗಲು ಆರಂಭಿಸುತ್ತಾರೆ. ಆ ಭೇಟಿಯನ್ನು ಲೈಂಗಿಕವಾಗಿ ಅಥವಾ ಇನ್ನಾವುದೇ ರೀತಿಯಲ್ಲಿ ದುರುಪಯೋಗ ಪಡಿಸಿಕೊಳ್ಳುತ್ತಾರೆ.

ಅಪಹರಣ, ಕಳವು ಇತ್ಯಾದಿ
ಇಂಟರ್ನೆಟ್ ಮೂಲಕ ಪರಿಚಯವಾಗುವ ಸೋಗುಧಾರಿಗಳು, ಮಕ್ಕಳು ಹಾಗೂ ಯುವತಿಯರನ್ನು ಅಪಹರಣ ಮಾಡಿ ಒತ್ತೆ ಹಣಕ್ಕಾಗಿ ತಂದೆ ತಾಯಿಯರನ್ನು ಪೀಡಿಸಿದ ಅನೇಕ ಉದಾಹರಣೆಗಳಿವೆ. ಮನೆಯ ವಿಳಾಸ, ಮನೆಯಲ್ಲಿ ಇರುವ ವ್ಯಕ್ತಿಗಳ ಸಂಖ್ಯೆ, ಯಾವಾಗ ಮನೆಯಲ್ಲಿ ವ್ಯಕ್ತಿಗಳಿರುವುದಿಲ್ಲ ಎಂಬುದನ್ನೆಲ್ಲಾ ತಿಳಿದು ಮನೆಯನ್ನು ಕಳವು ಮಾಡಿರುವ ಘಟನೆಗಳೂ ನಡೆದಿವೆ. ನೆಟ್ ಮೂಲಕ ಪರಿಚಯವಾದ ಸ್ನೇಹದ ಮೂಲಕ ಮನೆ ಪ್ರವೇಶಿಸುವ ಕ್ರಿಮಿನಲ್‌ಗಳು ಕೊಲೆ ಮಾಡಿರುವ ಅಪರಾಧಗಳೂ ಜರುಗಿವೆ.

ಮಾನ ಹರಾಜು, ಅವಮಾನ
ಇಂಟರ್‌ನೆಟ್ಟಿನ ಇನ್ನೊಂದು ದೊಡ್ಡ ಅಪಾಯ ಇದು. ಕೆಲವು ದೂರ್ತರು ನಿಮ್ಮ ಮಾನ ಹರಾಜು ಹಾಕಲು ಅಥವಾ ನಿಮಗೆ ಅವಮಾನ ಮಾಡಲು ಸೋಷಿಯಲ್ ನೆಟ್‌ವರ್ಕ್‌ಗಳನ್ನು ಬಳಸಿಕೊಳ್ಳಬಹುದು. ನಿಮ್ಮ ಹೆಸರಿನಲ್ಲಿ ಸುಳ್ಳು ಖಾತೆ ತೆರೆದು, ಕೃತಕವಾಗಿ ಸೃಷ್ಟಿಸಿದ ನಿಮ್ಮ ನಗ್ನ ಚಿತ್ರಗಳನ್ನು ಅಥವಾ ಲೈಂಗಿಕ ಕ್ರಿಯೆಯ ಚಿತ್ರಗಳನ್ನು ನೆಟ್‌ವರ್ಕಿನಲ್ಲಿ ಪ್ರದರ್ಶಿಸಬಹುದು. ನಿಮ್ಮ ಬಗ್ಗೆ ಅವಾಚ್ಯ ಬೈಗುಳಗಳನ್ನೋ ಅಥವಾ ಅವಮಾನ ಮಾಡುವ ಬರಹಗಳನ್ನೋ ಹಾಕಬಹುದು. ಕೆಲವೊಮ್ಮೆ ಈ ವಿಷಯದಲ್ಲಿ ಬ್ಲಾಕ್‌ಮೇಲ್ ಮಾಡುವ ಸಂಭವವೂ ಇದೆ. ಅಥವಾ ಕೇವಲ ಕಿರಿಕಿರಿ ಉಂಟು ಮಾಡಲು ನಿಮ್ಮ ಮೊಬೈಲ್ ಫೋನ್ ಬಹಿರಂಗಪಡಿಸುವುದು, ಫೋನು ಮಾಡುವಂತೆ ಇತರರನ್ನು ಆಹ್ವಾನಿಸುವುದು... ಮುಂತಾದ ಕಿಡಿಗೇಡಿ ಕೆಲಸಗಳನ್ನು ಮಾಡಬಹುದು.

ಹ್ಯಾಕಿಂಗ್, ವೈಯಕ್ತಿಕ ಮಾಹಿತಿ ಕಳವು

ಇದು ಕಂಪ್ಯೂಟರಿನ ದೊಡ್ಡ ಸಮಸ್ಯೆ. ಸೋಶಿಯಲ್ ನೆಟ್‌ವರ್ಕ್‌ಲ್ಲಿ ನಿಮ್ಮ ಸ್ನೇಹ ಬೆಳೆಸಿ, ನಿಮ್ಮ ಕೆಲವು ವೈಯಕ್ತಿಕ ಮಾಹಿತಿ ಪಡೆದು ದುರುಪಯೋಗ ಮಾಡಬಹುದು. ಅಥವಾ, ನಿಮ್ಮ ಖಾತೆಯನ್ನು ಹ್ಯಾಕ್ ಮಾಡಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕದಿಯಬಹುದು. ಆದ್ದರಿಂದ, ಇಂಟರ್ನೆಟ್ಟಿನಲ್ಲಿ, ಸೋಷಿಯಲ್ ಸೈಟಿನಲ್ಲಿ ಸೂಕ್ಷ್ಮವೆನಿಸುವ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಎಂದೂ ಬಹಿರಂಗ ಮಾಡಬೇಡಿ.

ಮಕ್ಕಳ ದುರ್ಬಳಕೆ

ಸೋಷಿಯಲ್ ನೆಟ್‌ವರ್ಕಿನಲ್ಲಿ ಇತ್ತೀಚೆಗೆ ಚಿಕ್ಕ ಮಕ್ಕಳು, ಹದಿಹರೆಯದವರ ಸಂಖ್ಯೆ ಹೆಚ್ಚುತ್ತಿದೆ. ಕೆಲವು ದೂರ್ತರು ಇಂಥವರ ಮೇಲೆ ಕಣ್ಣಿಟ್ಟಿರುತ್ತಾರೆ. ಚಿಕ್ಕ ಮಕ್ಕಳು ಹಾಗೂ ಹದಿಹರೆಯದವರು ತಮ್ಮ ಮುಗ್ಧತೆಯಿಂದಾಗಿ ಸುಲಭವಾಗಿ ತುತ್ತಾಗುತ್ತಾರೆ. ಈ ಬಗ್ಗೆ ಪಾಲಕರು ಹೆಚ್ಚು ಗಮನಹರಿಸಲೇಬೇಕು.

ಸೈನಿಕರ ಮಾಹಿತಿ

ತಮ್ಮ ಮಿತ್ರರು ಹಾಗೂ ಮನೆಯವರ ಜೊತೆ ಸಂಪರ್ಕದಲ್ಲಿರಲು, ಸುಮಾರು ೩೫೦೦೦ ಭಾರತೀಯ ಸೈನಿಕರು ಫೇಸ್‌ಬುಕ್ ಆರ್ಕುಟ್‌ನಂಥ ಸೋಷಿಯಲ್ ನೆಟ್‌ವರ್ಕ್ ಸೇರಿಕೊಂಡಿದ್ದಾರೆ. ಇವರು ಅಥವಾ ಇವರ ಸಂಬಂಧಿಕರು ಸೋಷಿಯಲ್ ನೆಟ್‌ವರ್ಕಿನಲ್ಲಿ ಸೈನ್ಯ ಅಥವಾ ಸೈನಿಕರ ಸಂಬಂಧಿ ಮಾಹಿತಿ, ಫೋಟೋ, ನಕಾಶೆ ಮುಂತಾದ ಮಾಹಿತಿ ನೀಡುವಾಗ ಬಹಳ ಜಾಗೃತೆ ವಹಿಸಬೇಕು. ಸೂಕ್ಷ್ಮ ವಿಷಯಗಳನ್ನು ನೀಡಲೇ ಬಾರದು ಎಂದು ಇತ್ತೀಚೆಗೆ ಭಾರತೀಯ ಸೇನೆ ಆದೇಶವನ್ನೂ ನೀಡಿದೆ. ನೀವು ಸೈನಿಕರ ಸಂಬಂಧಿಯಾಗಿದ್ದರೆ, ಸೋಷಿಯಲ್ ನೆಟ್‌ವರ್ಕಿನಲ್ಲಿ ನಿಮ್ಮ ಜವಾಬ್ದಾರಿ ಹೆಚ್ಚು ಎಂಬುದನ್ನು ಮರೆಯಬೇಡಿ.

ಸಮಯ ಹಾಳು

ಸೋಷಿಯಲ್ ನೆಟ್‌ವರ್ಕ್ ಒಂಥರಾ ಅಡಿಕ್ಟಿವ್. ಇದರಲ್ಲಿ ಒಮ್ಮೆ ಮುಳುಗಿದರೆ, ಸಮಯ ಹೋದದ್ದೇ ತಿಳಿಯುವುದಿಲ್ಲ. ಹಾಗಾಗಿ, ಅನೇಕರ ಸಮಯ ವ್ಯರ್ಥವಾಗುತ್ತದೆ. ಅದಕ್ಕಾಗಿ ಸೋಷಿಯಲ್ ನೆಟ್‌ವರ್ಕ್‌ಗಳ ಬಳಕೆಯ ಮೇಲೆ ಹಿಡಿತ ಹಾಗೂ ಮಿತಿ ಇಟ್ಟುಕೊಳ್ಳುವುದು ಅಗತ್ಯ.



ನಿಮಗೆ ಯಾವ ನೆಟ್‌ವರ್ಕ್ ಸೂಕ್ತ? ಟಾಪ್ ೧೦ ಸಲಹೆ

ಇಂದು ಇಂಟರ್‌ನೆಟ್ಟಿನಲ್ಲಿ ನೂರಾರು ಸೋಷಿಯಲ್ ನೆಟ್‌ವರ್ಕ್‌ಗಳಿವೆ. ಎಲ್ಲವನ್ನೂ ನೀವು ಸೇರುವುದು ಸಾಧ್ಯವೂ ಇಲ್ಲ. ತರವೂ ಅಲ್ಲ.

ಯಾವ್ಯಾವುದೋ ಸೋಷಿಯಲ್ ನೆಟ್‌ವರ್ಕ್ ಸೇರುವಂತೆ ನಿಮಗೆ, ನಿಮ್ಮ ಗೆಳೆಯರ ಹೆಸರಿನಲ್ಲಿ, ಬರುವ ಆಹ್ವಾನಗಳನ್ನೆಲ್ಲ ನೀವು ಮನ್ನಿಸಬೇಡಿ.

ಒಟ್ಟಾರೆ ೩-೪ ನೆಟ್‌ವರ್ಕ್‌ಗಳನ್ನು ನೀವು ಸೇರಿಕೊಂಡರೆ ಸಾಕು. ಅದಕ್ಕಿಂತ ಹೆಚ್ಚು ನೆಟ್‌ವರ್ಕ್ ಸೇರಿಕೊಂಡರೆ, ಯಾವ ನೆಟ್‌ವರ್ಕಿನಲ್ಲೂ ಕ್ವಾಲಿಟಿ ಟೈಮ್ ಕಳೆಯಲು ನಿಮ್ಮಿಂದ ಸಾಧ್ಯವಾಗದು.

ಸಾಮಾನ್ಯ ವಿಷಯಗಳಿಗೆ ಫೇಸ್‌ಬುಕ್ ಅಥವಾ ಆರ್ಕುಟ್, ಸಂದೇಶ ವಿನಿಮಯಕ್ಕಾಗಿ ಟ್ವೀಟರ್ ಹಾಗೂ ವೃತ್ತಿಪರ ವಿಷಯಗಳಿಗೆ ಲಿಂಕ್ಡ್‌ಇನ್ ನೆಟ್‌ವರ್ಕ್ ಸೇರಿದರೆ ಬೇಕಾದಷ್ಟಾಯಿತು. ಈ ಮೂರು ಅಂತಾರಾಷ್ಟ್ರೀಯ ನೆಟ್‌ವರ್ಕ್ ಅಲ್ಲದೇ, ನಿಮ್ಮ ಭಾಷೆ, ಸಮುದಾಯ ಅಥವಾ ಆಸಕ್ತಿಗೆ ಸಂಬಂಧಿಸಿದ ಇನ್ನೊಂದು ಲೋಕಲ್ ನೆಟ್‌ವರ್ಕ್ ಸೇರುವುದು ಒಳ್ಳೆಯದು.

Facebook.com, Orkut.comಎರಡರಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಂಡರೆ ಸಾಕು. ಪ್ರಪಂಚದಲ್ಲಿ ಬೇರೆಡೆ ಅಷ್ಟೇನೂ ಪ್ರಸಿದ್ಧವಲ್ಲದಿದ್ದರೂ, ಆರ್ಕುಟ್ ಭಾರತದಲ್ಲಿ ಅತ್ಯಧಿಕ ಸದಸ್ಯರನ್ನು ಹೊಂದಿರುವ ನೆಟ್‌ವರ್ಕ್. ಫೇಸ್‌ಬುಕ್ ಜಗತ್ತಿನ ಅತ್ಯಂತ ಪ್ರಸಿದ್ಧ ನೆಟ್‌ವರ್ಕ್ ಆದರೆ, ಭಾರತದಲ್ಲಿ ಇದೀಗ ಜನಪ್ರಿಯವಾಗುತ್ತಿದೆ. ಅಷ್ಟು ಇಷ್ಟವಾದರೆ, ಇವೆರಡೂ ನೆಟ್‌ವರ್ಕ್ ಸೇರಿಕೊಂಡರೂ ಪರವಾಗಿಲ್ಲ. ಆದರೆ, ಇನ್ನಷ್ಟು ನೆಟ್‌ವರ್ಕ್ ಸೇರಲು ಹೋಗಬೇಡಿ.

ಈ ನೆಟ್‌ವರ್ಕ್‌ಗಳಲ್ಲಿ ಸಮಾನ ಮನಸ್ಕರನ್ನು ಹುಡುಕಬಹುದು. ಅವರ ಬಗ್ಗೆ ಮಾಹಿತಿ ತಿಳಿದುಕೊಂಡು ಹೊಸ ಮಿತ್ರರನ್ನು ಮಾಡಿಕೊಳ್ಳಬಹುದು. ಅವರೊಡನೆ ಮಾಹಿತಿ ವಿನಿಮಯ ಮಾಡಿಕೊಳ್ಳಬಹುದು. ಫೋಟೋ, ವಿಡಿಯೋ, ಎಂಪಿಥ್ರೀ ಮುಂತಾದವುಗಳನ್ನು ಹಂಚಿಕೊಳ್ಳಬಹುದು. ಆಟ ಆಡಬಹುದು, ವಿವಿಧ ಮೋಜಿನ ಕ್ವಿಝ್, ಜ್ಯೋತಿಷ್ಯ, ಪರ್ಸ್‌ನಾಲಿಟಿ ಟೆಸ್ಟ್‌ನಲ್ಲಿ ಪಾಲ್ಗೊಳ್ಳಬಹುದು. ವರ್ಚುವಲ್ ಗಿಫ್ಟ್, ಗ್ರೀಟಿಂಗ್ ಕಳಿಸಬಹುದು. ಮಿತ್ರರ ಕಾಲೆಳೆಯಬಹುದು ಅಥವಾ ಇಲ್ಲಿ ಸೀರಿಯಸ್ ಬಿಸಿನೆಸ್ ಕನ್ಸಲ್ಟನ್ಸಿ ನಡೆಸಬಹುದು. ಇವೆರಡೂ ಮೋಸ್ಟ್ ಫ್ಲೆಕ್ಸಿಬಲ್ ಹಾಗೂ ಮೋಸ್ಟ್ ಪವರ್‌ಫುಲ್ ನೆಟ್‌ವರ್ಕ್‌ಗಳು.

Twitter.com ಇದು ಜಗತ್ತಿನ ಹೊಸ ಕ್ರೇಜ್. ನೀವು ಸದ್ಯಕ್ಕೆ ಸೇರಬಹುದಾದ ಇನ್ನೊಂದು ರೀತಿಯ ಅತ್ಯುತ್ತಮ ನೆಟ್‌ವರ್ಕ್. ಎಸ್‌ಎಂಎಸ್ಸನ್ನು ಆನಂದಿಸುವಂಥ ಅನುಭವನ್ನು ಈ ನೆಟ್‌ವರ್ಕ್ ನೀಡುತ್ತದೆ. ಇದು ಅತ್ಯಂತ ವೇಗದ ಸುದ್ದಿ ಪ್ರಸಾರ ಮಾಡಲು ಹಾಗೂ ಸುದ್ದಿ ತಿಳಿಯಲು ಉಪಯುಕ್ತ ಮೈಕ್ರೋ ಬ್ಲಾಗಿಂಗ್ ನೆಟ್‌ವರ್ಕ್. ಒಂದು ಸಂದೇಶದಲ್ಲಿ ೧೪೦ ಅಕ್ಷರಗಳನ್ನು ಮಾತ್ರ ಬರೆಯಲು ಸಾಧ್ಯ.

‘ಬೆಂಗಳೂರಿನಲ್ಲಿ ಗಡ್‌ಬಡ್ ಐಸ್‌ಕ್ರೀಮ್ ಎಲ್ಲಿ ಚೆನ್ನಾಗಿದೆ? ಕಡಿಮೆ ದರದಲ್ಲಿ ಅತ್ಯುತ್ತಮ ಡ್ರೆಸ್ ಮಟೀರಿಯಲ್ ಎಲ್ಲಿ ಸಿಗುತ್ತದೆ? ಐಎಫ್‌ಬಿ ವಾಷಿಂಗ್ ಮಷಿನ್ ಬೆಟರ್ರ್ಓ‌ ಎಲ್ಜಿಯೋ’ -ಇಂಥ ಪ್ರಶ್ನೆಯನ್ನೂ ಈ ಟ್ವೀಟರ್‌ನಲ್ಲಿ ಕೇಳಬಹುದು. ಆಗ, ಟ್ವೀಟರ್ ನೆಟ್‌ವರ್ಕಿನ ಮಿತ್ರರು ಉತ್ತರ ನೀಡುತ್ತಾರೆ. ಬಹಳಷ್ಟು ಜನ ಇಂಥ ಉಪಯೋಗಕ್ಕೆ ಟ್ವೀಟರನ್ನು ಬಳಸುತ್ತಿದ್ದಾರೆ. ನಿಮಗೂ ಉಪಯೋಗವಾದೀತು.

Linkedin.com ವೃತ್ತಿಪರರು ಹಾಗೂ ಉದ್ಯೋಗಸ್ಥರು ಸೇರಬಹುದಾದ ಇನ್ನೊಂದು ಸೋಷಿಯಲ್ ನೆಟ್‌ವರ್ಕ್. ಇದೊಂದು ವೃತ್ತಿಪರರ ಡೈರಕ್ಟರಿ ಅಂದರೂ ಪರವಾಗಿಲ್ಲ. ಇತರ ವೃತ್ತಿಪರರ ಜೊತೆ ಸಂವಹನ ನಡೆಸಲು, ಅವರ ವೃತ್ತಿ ಹಿನ್ನೆಲೆ ತಿಳಿದುಕೊಳ್ಳಲು, ಬಿಸಿನೆಸ್ ಅಥವಾ ವೃತ್ತಿಪರ ಸಂಬಂಧ ಬೆಳೆಸಲು ಈ ನೆಟ್‌ವರ್ಕ್ ಉಪಯುಕ್ತ. ಆದರೆ, ಕೇವಲ ನೌಕರಿ ಹುಡುಕಲು ಆಸಕ್ತರಾಗಿರುವವರು Naukri.com ನೆಟ್‌ವರ್ಕ್ ಸೇರಬಹುದು.

ಈ ಮೇಲಿನ ಮೂರು ಅಂತಾರಾಷ್ಟ್ರೀಯ ನೆಟ್‌ವರ್ಕ್ ಹೊರತಾಗಿ ನೀವು ಸೇರಬಹುದಾದ ಇನ್ನೊಂದು ಲೋಕಲ್ ನೆಟ್‌ವರ್ಕ್ KannadaBlogs.ning.com. ಕನ್ನಡದಲ್ಲಿ ಬ್ಲಾಗಿಂಗ್ ಚಟುವಟಿಕೆ ಸಾಕಷ್ಟು ನಡೆಯುತ್ತಿದೆ. ಆದರೆ, ಅವೆಲ್ಲ ಚದುರಿಹೋಗಿರುವುದರಿಂದ ಯಾರ ಬ್ಲಾಗ್ ಎಲ್ಲಿದೆ? ಯಾವ ಬ್ಲಾಗಿನಲ್ಲಿ ಹೊಸದೇನಿದೆ? ಎಂದು ತಿಳಿಯುವುದು ಕಷ್ಟ. ಈ ಹಿನ್ನೆಲೆಯಲ್ಲಿ, KannadaBlogs.ning.com. ಎಂಬ ಕನ್ನಡ ಬ್ಲಾಗಿಗರ ಕೂಟ ಸೇರಬಹುದು.

ಫೋಟೋ ವಿನಿಮಯಕ್ಕೆ Flickr.comಉತ್ತಮ ನೆಟ್‌ವರ್ಕ್. ಆದರೆ, ಉಚಿತ ಬಳಕೆದಾರರಿಗೆ ಈ ನೆಟ್‌ವರ್ಕಿನಲ್ಲಿ ಕಡಿವಾಣ ಹೆಚ್ಚು. ಅದಕ್ಕಾಗಿ, PicasaWeb.com ನೆಟ್‌ವರ್ಕ್ ಬಳಸಬಹುದು. ವಿಡಿಯೋ ವಿನಿಮಯಕ್ಕಾಗಿ YouTube.com ಉತ್ತಮ ನೆಟ್‌ವರ್ಕ್.

೧೦ ಇದಲ್ಲದೇ, ಸ್ಲೈಡ್ ವಿನಿಮಯಕ್ಕೆ Slide.com ಅಥವಾ SlideShare.net ಸೇರಬಹುದು.

Sunday, April 12, 2009

ಟ್ವೀಟರ್.. ಟ್ವೀಟರ್.. ವಾಟ್ ಯು ಆರ್ !

ನಿಮಗಿನ್ನೂ ಹಿಡಿದಿಲ್ಲವೇ ಈ ಹುಚ್ಚು!

‘ನಾನು ಏನೂ ಮಾಡುತ್ತಿಲ್ಲ’ ಎಂಬ ಅತ್ಯಂತ ಸಿಲ್ಲಿ ಸಂದೇಶದಿಂದ ಹಿಡಿದು ‘ನ್ಯೂಯಾರ್ಕಿನ ಕಟ್ಟಡವೊಂದರಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಹುಚ್ಚುಚ್ಚಾಗಿ ಗುಂಡುಹಾರಿಸಿ ಹತ್ತಾರು ಜನರನ್ನು ಸಾಯಿಸುತ್ತಿದ್ದಾನೆ’ ಎಂಬ ಬ್ರೇಕಿಂಗ್ ನ್ಯೂಸ್‌ವರೆಗೆ... ಟ್ವೀಟರ್ ಸೈಟಿನಲ್ಲಿ ಕೋಟಿ ಕೋಟಿ ಸಂದೇಶಗಳು ಲಭ್ಯ.



೧. ನಾನೀಗ ಕಾಫಿ ಕುಡಿಯಲು ಹೋಗ್ತಿದ್ದೇನೆ.
೨. ರಾತ್ರಿಗೆ ಏನು ಅಡಿಗೆ ಮಾಡೋಣ ಅಂತ ಯೋಚಿಸ್ತಿದ್ದೇನೆ.
೩. ಲಂಡನ್‌ನಲ್ಲೂ ಲುಂಗಿ ಉಡೋವ್ರು ಇದ್ದಾರಾ? ಯಾರಾದ್ರೂ ಹೇಳಿ ಪ್ಲೀಸ್.
೪. ಅಯ್ಯೋ... ಹೊಸೂರು ರಸ್ತೆಯತ್ತ ಈಗ ಯಾರೂ ಬರಬೇಡಿ. ಸಿಕ್ಕಾಪಟ್ಟೆ ಟ್ರಾಫಿಕ್ ಜಾಮ್.
೫. ಮೈ ಗಾಡ್. ಹೊಸೂರು ರಸ್ತೆಯಲ್ಲಿ ಬಾಂಬ್ ಸ್ಫೋಟಿಸಿದೆ. ನಾಲ್ಕೈದು ಜನಾನಾದ್ರೂ ಸತ್ತಿದ್ದಾರೆ ಅಂತ ಹೇಳ್ತಿದ್ದಾರೆ.
೬. ಕಾಪಾಡಿ... ಕಾಪಾಡಿ... ಪೊಲೀಸರು ನನ್ನನ್ನು ಅನ್ಯಾಯವಾಗಿ ಪರಪ್ಪನ ಅಗ್ರಹಾರ ಜೈಲಿಗೆ ಹಾಕಿದ್ದಾರೆ.

ಮೇಲಿನ ಅರ್ಧ ಡಜನ್ ವಾಕ್ಯಗಳನ್ನು ಓದಿದಾಗ ನಿಮಗೆ ಏನೆನ್ನಿಸಿತು?

  • ನಿಮಗೆ ಏನೂ ಅನ್ನಿಸದಿದ್ದರೆ ‘ನಿಮಗೆ ವಯಸ್ಸಾಯಿತು. ಜೀವನದಲ್ಲಿ ಆಸಕ್ತಿ ಹೊರಟುಹೋಗಿದೆ’ ಅಂತ ಅರ್ಥ.
  • ‘ಸ್ನಾನಾ ಮಾಡ್ಕೊಳೋ, ಪೌಡರ್ ಹಚ್ಕೋಳೋ, ಹಲ್ ಉಜ್ಕೊಳೋ’ ಎನ್ನುವ ಅಸಂಬದ್ಧ ಸಿನಿಮಾ ಹಾಡಿನಂತಿದೆ ಪಕ್ಕದ ಆರು ಸಾಲುಗಳು ಅಂತ ಅನ್ನಿಸಿದರೆ ನೀವು ಕನ್ನಡ ಸಿನೆಮಾಗೆ ಸಂಗೀತ ಸಾಹಿತ್ಯ ನೀಡಲು ಯೋಗ್ಯ ಕವಿ ಅಂತ ಅರ್ಥ.
  • ಇವೆಲ್ಲ ಎಸ್‌ಎಂಎಸ್ ಸಂದೇಶ ಇರಬಹುದು ಅಂತ ನಿಮಗನ್ನಿಸಿದರೆ, ನೀವು ಮೊಬೈಲ್ ಎಕ್ಸ್ ಪರ್ಟ್ ಎಂದು ತಿಳಿಯಬಹುದು.
  • ಈ ವಾಕ್ಯಗಳು ‘ಟ್ವೀಟರ್ ಸಂಭಾಷಣೆ’ ಅಂತ ನಿಮಗನ್ನಿಸಿದರೆ -ವಾರೆ ವ್ಹಾ... ನಿಮಗೆ ೨೧ನೇ ಶತಮಾನದ ಸರ್ವಜ್ಞ ಅಂತ ಬಿರುದು ನೀಡಬಹುದು!
ಇಷ್ಟಕ್ಕೂ ಏನಿದು ಟ್ವೀಟರ್?...

ಟ್ವೀಟರ್ -ಸದ್ಯ ಜಗತ್ತಿಗೆ ಹುಚ್ಚು ಹಿಡಿಸಿರುವ ಇಂಟರ್‌ನೆಟ್ಟಿನ ಹೊಸ ಸೆನ್‌ಸೇಷನ್. ಜನರು-ಜನರೊಡನೆ ‘ಮಿನಿ-ಸಂದೇಶ’ಗಳನ್ನು ವಿನಿಮಯ ಮಾಡಿಕೊಳ್ಳುವ ಒಂದು ಇಂಟರ್‌ನೆಟ್ ತಾಣ. ಅಂತರ್ಜಾಲದ ಭಾಷೆಯಲ್ಲೇ ಹೇಳುವುದಾದರೆ, ‘ಮೈಕ್ರೋ ಬ್ಲಾಗಿಂಗ್’ ವೆಬ್‌ಸೈಟ್. ಒಬ್ಬರು ಇನ್ನೊಬ್ಬರೊಡನೆ ಅಥವಾ ಲಕ್ಷಾಂತರ ಜನರೊಜನೆ ಸಂಪರ್ಕ ಸಾಧಿಸಿ ಮಾಹಿತಿ ಹಂಚಿಕೊಳ್ಳುವ ಸೋಶಿಯಲ್ ನೆಟ್‌ವರ್ಕ್.

‘ನಾನು ಏನೂ ಮಾಡುತ್ತಿಲ್ಲ’ ಎಂಬ ಅತ್ಯಂತ ಸಿಲ್ಲಿ ಸಂದೇಶದಿಂದ ಹಿಡಿದು ‘ನ್ಯೂಯಾರ್ಕಿನ ಕಟ್ಟಡವೊಂದರಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಹುಚ್ಚುಚ್ಚಾಗಿ ಗುಂಡುಹಾರಿಸಿ ಹತ್ತಾರು ಜನರನ್ನು ಸಾಯಿಸುತ್ತಿದ್ದಾನೆ’ ಎಂಬ ಬ್ರೇಕಿಂಗ್ ನ್ಯೂಸ್‌ವರೆಗೆ... ಟ್ವೀಟರ್ ಸೈಟಿನಲ್ಲಿ ಕೋಟಿ ಕೋಟಿ ಸಂದೇಶಗಳು ಲಭ್ಯ.

ಟ್ವೀಟರ್ ಒಂದು ಇಂಟರ್‌ನೆಟ್ ತಾಣವಾದರೂ, ಇದಕ್ಕೆ ಮಾಹಿತಿಯನ್ನು ಮೊಬೈಲ್ ಫೋನಿನ ಮೂಲಕವೂ ಕಳಿಸಬಹುದು ಹಾಗೂ ತನಗೆ ಬಂದ ಮಾಹಿತಿಯನ್ನು ಮೊಬೈಲ್ ಫೋನಿನ ಎಸ್‌ಎಂಎಸ್ ರೂಪದಲ್ಲೂ ಪಡೆಯಬಹುದು. ಆದ್ದರಿಂದಲೇ, ಟ್ವೀಟರ್ ಸರ್ವಾಂತರ್ಮಯಿ.

ಇಂಟರ್‌ನೆಟ್ಟಿನಲ್ಲಿ ಇಂತಹ ಮಾಹಿತಿ ಮೊದಲೂ ದೊರೆಯುತ್ತಿತ್ತಲ್ಲ. ಈಗ ಟ್ವೀಟರಿನದೇನು ಮಹಾ?

ಟ್ವೀಟರ್ ಆರಂಭ ಆಗುವುದಕ್ಕಿಂತಲೂ ಮೊದಲೂ, ಇಂಟರ್‌ನೆಟ್‌ಲ್ಲಿ ಇಂತಹ ಮಾಹಿತಿ ದೊರೆಯುತ್ತಿದ್ದವು ಎನ್ನುವುದು ನಿಜ. ಆದರೆ, ಆ ಮಾಹಿತಿ ಟ್ವೀಟರ್ ಸಂದೇಶಗಳಷ್ಟು ‘ಲೈವ್’ (ನೇರ ಪ್ರಸಾರ) ಆಗಿರಲಿಲ್ಲ. ಜಗತ್ತಿನ ಯಾವುದೇ ಮಾಹಿತಿ ವ್ಯವಸ್ಥೆಗಿಂತಲೂ ಟ್ವೀಟರ್ ಹೆಚ್ಚು ಲೈವ್ ಎನ್ನೋದು ವಿಶೇಷ.
...ಒಂದು ಉದಾಹರಣೆ ನೋಡಿ:
ಕೆಲವು ತಿಂಗಳ ಹಿಂದೆ, ನ್ಯೂಯಾರ್ಕಿನ ಹಡ್ಸನ್ ನದಿಯಲ್ಲಿ ವಿಮಾನವೊಂದು ‘ಇಳಿದ’ ವಿಚಾರ ಗೊತ್ತಲ್ಲ. ಆ ಸುದ್ದಿಯನ್ನು ಮೊಟ್ಟ ಮೊದಲು ವಿಶ್ವಕ್ಕೆ ವರದಿ ಮಾಡಿದ್ದು, ಪತ್ರಿಕೆಯಲ್ಲ, ರೇಡಿಯೋ ಅಲ್ಲ, ಟೀವಿಯಲ್ಲ, ಇಂಟರ್‌ನೆಟ್ ಸೈಟುಗಳೂ ಅಲ್ಲ. ಅದೇ ನದಿಯಲ್ಲಿ ದೋಣಿ ವಿಹಾರ ಮಾಡುತ್ತಿದ್ದ ವ್ಯಕ್ತಿಯೊಬ್ಬ, ತನ್ನ ಕಣ್ಣೆದುರೇ ವಿಮಾನ ನದಿಗೆ ಇಳಿಯುತ್ತಿರುವುದನ್ನು ನೋಡಿದ. ಅರರೇ... ಇದೇನಿದು ನದಿಗೆ ವಿಮಾನ ಎಂದು ಅಚ್ಚರಿಗೊಂಡ. ತಕ್ಷಣ ಆ ಸಂದೇಶ ಹಾಗೂ ಚಿತ್ರವನ್ನು ಟ್ವೀಟರ್‌ಗೆ ಕಳಿಸಿದ. ಈ ಸುದ್ದಿಯನ್ನು ಅದೆಷ್ಟೋ ಸಾವಿರ ಜನರು ಟ್ವೀಟರಿನಲ್ಲಿ ನೋಡಿದ ಆನಂತರವಷ್ಟೇ, ರೇಡಿಯೋ, ಟೀವಿಗಳಲ್ಲಿ ಈ ಸುದ್ದಿ ಪ್ರಸಾರವಾಯಿತು. ಅದೇ ರೀತಿ, ಮುಂಬೈ ಮೇಲಿನ ಉಗ್ರರ ದಾಳಿ ಕೂಡ ಟ್ವೀಟರಿನ ಮೂಲಕ ಜಗತ್ತನ್ನು ತ್ವರಿತವಾಗಿ ತಲುಪಿತು.

ಅಂದರೆ ಇದೊಂದು ಸುದ್ದಿ ಮಾಧ್ಯಮವೇ?

ಇದನ್ನು ಖಂಡಿತ ಸುದ್ದಿ ಮಾಧ್ಯಮ ಎಂದು ಕರೆಯಬಹುದು. ಆದರೆ, ಇದು ಜನಿಸಿದಾಗ ಇದೊಂದು ಸುದ್ದಿ ಮಾಧ್ಯಮವಾಗಬಹುದು, ಕೋಟ್ಯಂತರ ಜನ ಈ ಸೇವೆಗೆ ಮುಗಿ ಬೀಳಬಹುದು ಎಂಬ ಕಲ್ಪನೆ ಇರಲಿಲ್ಲ.

ವ್ಯಕ್ತಿಯೊಬ್ಬ, ತನ್ನ ಕಚೇರಿಯಿಂದ, ಕಾರಿಂದ, ಸ್ವದೇಶದಿಂದ, ವಿದೇಶದಿಂದ, ಕಂಪ್ಯೂಟರಿಂದ, ಮೊಬೈಲ್ ಫೋನಿಂದ ಎಲ್ಲೆಂದರಲ್ಲಿಂದ ತನ್ನ ಹಾಲಿ ಸ್ಥಿತಿಯನ್ನು ಮಿತ್ರರಿಗೆ ತಿಳಿಸಲು ಅವಕಾಶ ಕಲ್ಪಿಸುವುದಷ್ಟೇ ಟ್ವೀಟರಿನ ಉದ್ದೇಶವಾಗಿತ್ತು. ‘ನಾನು ಈ ಕ್ಷಣದಲ್ಲಿ ಏನು ಮಾಡುತ್ತಿದ್ದೇನೆ? ಎಲ್ಲಿದ್ದೇನೆ? ಏನು ಚಿಂತಿಸುತ್ತಿದ್ದೇನೆ?’ -ಎಂಬ ಪುಟಾಣಿ ಮಾಹಿತಿಯನ್ನು ಗೆಳೆಯರ ಬಳಿ ಹಂಚಿಕೊಳ್ಳಲು ವೇದಿಕೆ ನೀಡುವುದಷ್ಟೇ ಟ್ವೀಟರಿನ ಯೋಜನೆಯಾಗಿತ್ತು. ಆದರೆ, ಇಂದು ಬಳಕೆದಾರರು, ತಾವೇ, ಹಲವಾರು ಉಪಯೋಗಗಳನ್ನು ಕಂಡುಕೊಂಡಿದ್ದಾರೆ.

ಟ್ವೀಟರಿನ ಉಪಯೋಗವೇನು?

೧. ಒಬಾಮಾ ಮಾದರಿ : ಅಮೆರಿಕ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ, ಲಕ್ಷಾಂತರ ಯುವಕರ ಸೇನೆ ಕಟ್ಟಲು, ಅವರೊಡನೆ ಸದಾ ಸಂಪರ್ಕದಲ್ಲಿರಲು, ಬರಾಕ್ ಒಬಾಮಾ ಈ ಸೇವೆ ಬಳಸಿಕೊಂಡಾಗಿನಿಂದ ‘ಟ್ವೀಟರ್’ ಅಮೆರಿಕದಲ್ಲಿ ಮಾತ್ರವಲ್ಲ ಜಗತ್ತಿನ ಇತರೆಡೆಯೂ ಪ್ರಸಿದ್ಧವಾಗಿದೆ. ಅಂದರೆ, ಜನನಾಯಕನೊಬ್ಬ ತನ್ನ ಬೆಂಬಲಿಗರನ್ನು ಒಟ್ಟುಗೂಡಿಸಲು ಹಾಗೂ ಅವರೊಡನೆ ಸಂಪರ್ಕದಲ್ಲಿರಲು ಟ್ವೀಟರ್ ಉಪಯೋಗವಾಗುತ್ತಿದೆ. ಒಬಾಮಾ, ಈಗ ಅಧ್ಯಕ್ಷರಾದ ಮೇಲೂ ಟ್ವೀಟರನ್ನು ವ್ಯಾಪಕವಾಗಿ ಬಳಸುತ್ತಿದ್ದಾರೆ. ಅವರ ಸಂದೇಶ ಪಡೆಯಲು, ಅವರೊಡನೆ ಸಂಪರ್ಕದಲ್ಲಿ ಇರಲು ೭ ಲಕ್ಷ ಜನ ಸದಸ್ಯರಾಗಿದ್ದಾರೆ.
ಮೊನ್ನೆ ಮೊನ್ನೆ, ಕರ್ನಾಟಕದಲ್ಲಿ, ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಹಾಗೂ ರಾಜ್ಯ ಬಿಜೆಪಿ ಘಟಕದವರು, ಟ್ವೀಟರ್ ಬಳಕೆ ಆರಂಭಿಸಿದ್ದಾರೆ. ಇದಕ್ಕಿನ್ನೂ ಹೆಚ್ಚು ಸದಸ್ಯರಿಲ್ಲ ಎನ್ನಿ. ಸಿನಿಮಾ ತಾರೆಯರು, ತಮ್ಮ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರಲು ಟ್ವೀಟರ್‌ಗಿಂತ ಉತ್ತಮ ಮಾರ್ಗ ಬೇರೊಂದಿಲ್ಲ.

೨. ಪತ್ರಿಕೆಗಳ ಮಾದರಿ : ಪತ್ರಿಕೆ, ಟೀವಿ ಚಾನಲ್‌ಗಳು ಹಾಗೂ ಇಂಟರ್‌ನೆಟ್ ಸೈಟುಗಳು ಬ್ರೆಕಿಂಗ್ ಸುದ್ದಿಗಳನ್ನು ಟ್ವೀಟರ್ ಮೂಲಕ ನೀಡಲು ಆರಂಭಿಸಿವೆ. ಓದುಗರು ಈ ಸುದ್ದಿಯನ್ನು ಇಂಟರ್‌ನೆಟ್ ಮೂಲಕ ಅಥವಾ ಮೊಬೈಲ್ ಫೋನ್ ಮೂಲಕ ಉಚಿತವಾಗಿ ಪಡೆಯಬಹುದು. ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಉಚಿತ ಟ್ವೀಟರ್ ಸೇವೆಗೆ ೪.೫ ಲಕ್ಷ ಚಂದಾದಾರರಿದ್ದಾರೆ. ಅದೇ ರೀತಿ, ಭಾರತದಲ್ಲಿ ಸಿಎನ್‌ಎನ್ ಐಬಿಎನ್, ಡಿಎನ್‌ಎ, ಇಂಡಿಯಾ ಟುಡೇಯಂಥ ಅನೇಕ ಪತ್ರಿಕೆಗಳು ಟ್ವೀಟರ್ ಸೇವೆ ಆರಂಭಿಸಿವೆ. ಅಲ್ಲದೇ, ಅನೇಕ ಪತ್ರಿಕೆಗಳು ಹಾಗೂ ಚಾನೆಲ್‌ಗಳು ಟ್ವೀಟರಿನ ಮೂಲಕ ಸಿಗುವ ಮಾಹಿತಿಯನ್ನು ತಮ್ಮ ವರದಿಗೆ ಪೂರಕವಾಗಿ ಬಳಸಿಕೊಳ್ಳುತ್ತಿವೆ.

೩. ಕಂಪನಿ ಗ್ರಾಹಕ ಸಂಪರ್ಕ ಮಾದರಿ : ಒಂದು ಕಂಪನಿ, ತನ್ನ ಗ್ರಾಹಕರೊಡನೆ ಸಂಪರ್ಕದಲ್ಲಿರಲು ಟ್ವೀಟರನ್ನು ಬಳಸಿಕೊಳ್ಳುತ್ತಿದೆ. ಉದಾಹರಣೆಗೆ ಗ್ರಾಹಕರು ಟ್ವೀಟರ್ ಮೂಲಕ ನೋಕಿಯಾ ಕಂಪನಿಯನ್ನು ಸಂಪರ್ಕಿಸಿ ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಅಥವಾ ಮಾಹಿತಿ ತರಿಸಿಕೊಳ್ಳಬಹುದು. ಗೂಗಲ್ ಕಂಪನಿಯ ಟ್ವೀಟರ್ ಸೇವೆಗೆ ೩-೪ ಲಕ್ಷ ಜನ ಸದಸ್ಯರಿದ್ದಾರೆ.

೪. ಸುಮ್ಮನೆ ಹರಟೆ ಮಾದರಿ : ಇದಲ್ಲದೇ, ಶೇ.೭೦ರಷ್ಟು ಜನ, ಟ್ವೀಟರನ್ನು ಚಾಟ್ ರೂಮಿನಂತೆ ಸುಮ್ ಸುಮ್‌ನೇ ಹರಟೆಗೆ ಬಳಸಿಕೊಳ್ಳುತ್ತಾರೆ.

೫. ಮಾಹಿತಿ ಕೇಳುವ ಮಾದರಿ : ಲಂಡನ್‌ನಲ್ಲಿ ಲುಂಗಿ ಉಡುವವರು ಇದ್ದಾರಾ ಎಂಬ ಸಿಲ್ಲಿ ಪ್ರಶ್ನೆಯಿಂದ ಹಿಡಿದು ಅತ್ಯುತ್ತಮ ವಾಷಿಂಗ್ ಮಷಿನ್ ಯಾವುದು ಎಂಬ ಗ್ರಾಹಕ ಪ್ರಶ್ನೆಯ ತನಕ ಯಾವ ಪ್ರಶ್ನೆಯನ್ನು ಬೇಕಾದರೂ ಟ್ವೀಟರ್ ಮೂಲಕ ಕೇಳಬಹುದು. ನಿಮ್ಮ ಪ್ರಶ್ನೆ ನೋಡುವ ಟ್ವೀಟಿಗರು ಉತ್ತರ ನೀಡುತ್ತಾರೆ.

ನಾವೂ ಟ್ವೀಟರ್ ಬಳಸಬೇಕೆಂದರೆ... ಹೇಗೆ? ಎಲ್ಲಿ?

ಮೊದಲು http://www.twitter.com/ ಸೈಟಿಗೆ ಹೋಗಿ. ಅಲ್ಲಿ ಹೊಸ ಸದಸ್ಯರಾಗಿ. ನಿಮ್ಮದೊಂದು ಟ್ವೀಟರ್ ಪುಟ ತಯಾರಾಗುತ್ತದೆ. ಇಲ್ಲಿ ನೀವು ಟ್ವೀಟರ್ ಸಂದೇಶ ಬರೆದರೆ, ಅವು ಒಂದರ ಕೆಳಗೆ ಒಂದರಂತೆ ದಾಖಲಾಗುತ್ತಾ ಹೋಗುತ್ತವೆ. ಹಾಗೂ ನಿಮ್ಮ ಮಿತ್ರರ ಸಂದೇಶಗಳೂ ಇಲ್ಲಿ ಕಾಣಿಸುತ್ತವೆ. ನೀವಿಲ್ಲಿ, ಹೊಸ ಹೊಸ ಮಿತ್ರರನ್ನು ಹುಡುಕಿಕೊಳ್ಳಬಹುದು. ಅವರ ಸಂದೇಶಗಳನ್ನು ನೀವು ಪಡೆಯಬಹುದು ಅಥವಾ ಇತರರು ನಿಮ್ಮ ಸಂದೇಶಗಳಿಗೆ ಚಂದಾದಾರರಾಗಬಹುದು.



ಇದು ಪುಗಸಟ್ಟೆ ಸೇವೆ. ನಿಮಗೆ ಈ ಮೇಲ್ ವಿಳಾಸ ಇದ್ದರೆ ಸಾಕು. ಫಾರಂ ತುಂಬಿದ ೨ ನಿಮಿಷದ ಒಳಗಾಗಿ ನೀವು ಟ್ವೀಟರ್ ಬಳಸಲು ಆರಂಭಿಸಬಹುದು. ನಿಮ್ಮ ಮೊಬೈಲ್ ಫೋನಿನ ಮೂಲಕವೂ ನೀವು ಟ್ವೀಟರ್ ಬಳಸಬಹುದು. ಮೊಬೈಲ್ ಬಳಸಿದರೆ, ಮೊಬೈಲ್ ಸೇವಾ ಕಂಪನಿಯ ಶುಲ್ಕವನ್ನು ಮಾತ್ರ ನೀವು ತೆರಬೇಕಾಗುತ್ತದೆ.

ಆದರೆ, ನೆನಪಿರಲಿ. ಟ್ವೀಟರ್ ಸಂದೇಶ ಚಿಕ್ಕದಾಗಿರಬೇಕು. ಈ ಸಂದೇಶದಲ್ಲಿ ೧೪೦ ಅಕ್ಷರಗಳು ಮಾತ್ರ ಇರಬಹುದು. ಆದ್ದರಿಂದ ಗಾತ್ರದಲ್ಲಿ ಚಿಕ್ಕದಾದ ಟ್ವೀಟರ್ ಸಂದೇಶವನ್ನು ಇಂಟರ್‌ನೆಟ್ಟಿನ ಎಸ್‌ಎಂಎಸ್ ರೂಪ ಅಂತ ಬೇಕಾದರೂ ಬಣ್ಣಿಸಬಹುದು.
ಟ್ವೀಟರಿನ ಒಂದು ಸಂದೇಶಕ್ಕೆ ‘ಟ್ವೀಟ್’ ಎಂದು ಹೆಸರು. ಟ್ವೀಟರ್ ಸಂದೇಶ ಕಳಿಸುವ ಕ್ರಿಯೆಗೆ ‘ಟ್ವೀಟಿಂಗ್’, ‘ಟ್ವೀಟ್ ಮಾಡುವುದು’ ಎಂದು ಹೇಳುತ್ತಾರೆ.

ಇದೆಲ್ಲಾ ಕೇಳಿದ ಮೇಲೆ, ಟ್ವೀಟರಿನಲ್ಲಿ ಅದ್ಭುತವೇನೂ ಇಲ್ಲ. ಈಮೇಲ್, ಬ್ಲಾಗಿಂಗ್ ಥರ ಇದಿನ್ನೊಂದು ಇಂಟರ್‌ನೆಟ್ ಸೇವೆ ಅಷ್ಟೇ, ಅನ್ನಿಸುತ್ತದೆ. ಆದರೆ, ಯಾಕೆ ಜಗತ್ತಿಗೆ ಟ್ವೀಟರಿನ ಹುಚ್ಚು ಹಿಡಿದಿದೆ?

ಅದೇ ಯಾರಿಗೂ ಅರ್ಥವಾಗುತ್ತಿಲ್ಲ. ಟ್ವೀಟರ್ ಕಂಪನಿಯ ಸ್ಥಾಪಕರಿಗೂ ತಮ್ಮ ಕಂಪನಿ ಇಷ್ಟು ಪ್ರಮಾಣದಲ್ಲಿ ಬೆಳೆಯುತ್ತದೆ ಎಂದು ಗೊತ್ತಿರಲಿಲ್ಲ. ಕೇವಲ ೨ ವರ್ಷದಲ್ಲಿ ಟ್ವೀಟರಿಗೆ ೭೦-೮೦ ಲಕ್ಷ ಸದಸ್ಯರಾಗಿಬಿಟ್ಟಿದ್ದಾರೆ. ಎರಡು ವರ್ಷದಲ್ಲಿ ಕಂಪನಿ ಶೇ.೧೪೦೦ರಷ್ಟು ಬೆಳವಣಿಗೆ ಸಾಧಿಸಿದೆ. ಇಷ್ಟು ಕಡಿಮೆ ಅವಧಿಯಲ್ಲಿ, ಇಷ್ಟು ವೇಗದಲ್ಲಿ ಜನಪ್ರಿಯವಾದ ಇಂಟರ್‌ನೆಟ್ ಸೇವೆ ಬೇರೊಂದಿಲ್ಲ.
ಟ್ವೀಟರ್ ಯಶಸ್ಸಿನ ನಂತರ ಅಂತಹ ಇನ್ನೂ ಅನೇಕ ಮೈಕ್ರೋ ಬ್ಲಾಗಿಂಗ್ ಸೇವೆ ಆರಂಭವಾದವು. ಆದರೆ, ಯಾವುದೂ ಟ್ವೀಟರಂತೆ ಜನಪ್ರಿಯವಾಗಿಲ್ಲ. (ಚೀನಾದಲ್ಲಿ ಮಾತ್ರ ಅಸಲಿ ಟ್ವೀಟರ್‌ಗಿಂತ ಮೇಡ್-ಇನ್-ಚೈನಾ ಟ್ವೀಟರ್ರ್‍ಏ ಜನಪ್ರಿಯ. ಇದು ಅವರ ದೇಶಪ್ರೇಮಕ್ಕೆ ಸಾಕ್ಷಿ.)

ವಿಚಿತ್ರವೆಂದರೆ, ಟ್ವೀಟರಿಗೆ ಸದ್ಯ ಒಂದು ನಯಾಪೈಸೆ ಆದಾಯವೂ ಇಲ್ಲ. ಪ್ರತಿ ವರ್ಷ ಕೋಟ್ಯಂತರ ಡಾಲರ್ ಖರ್ಚಾಗುತ್ತಿದೆ. ಟ್ವೀಟರ್ ಇನ್ನು ಮುಂದಾದರೂ ಹೇಗೆ ಲಾಭ ಮಾಡುತ್ತದೆ ಎಂದು ಯಾರಿಗೂ ಅರ್ಥವಾಗುತ್ತಿಲ್ಲ.

ಈ ನಡುವೆ, ಜನಪ್ರಿಯತೆ ನೋಡಿ, ೫೦ ಕೋಟಿ ಡಾಲರಿಗೆ ಟ್ವೀಟರನ್ನು ಕೊಳ್ಳಲು ಫೇಸ್‌ಬುಕ್ ಕಂಪನಿ ಮುಂದಾಯಿತು. ಆದರೆ, ಟ್ವೀಟರ್ ಒಪ್ಪಲಿಲ್ಲ. ಬ್ಲಾಗರ್, ಗೂಗಲ್ ಅರ್ಥ್ (ಕೀಹೋಲ್), ಪಿಕಾಸಾ ಮುಂತಾದ ಕಂಪನಿಗಳನ್ನು ಈಗಾಗಲೇ ಗುಳುಂ ಮಾಡಿರುವ ದೈತ್ಯ ಕಂಪನಿ ಗೂಗಲ್, ಈಗ ಟ್ವೀಟರನ್ನು ಕೊಳ್ಳಲು ಆಸೆಪಟ್ಟಿದೆಯೆಂಬ ಸುದ್ದಿಯಿದೆ. ಆದರೆ, ಕಂಪನಿಯನ್ನು ಮಾರಲು ಟ್ವೀಟರ್ ಇನ್ನೂ ಮನಸ್ಸು ಮಾಡಿಲ್ಲ. ಆ ಬ್ರೇಕಿಂಗ್ ನ್ಯೂಸ್ ಬೇಕೆಂದರೆ ಟ್ವೀಟರಿಗೆ ಸದಸ್ಯರಾಗಿ.
ಹ್ಯಾಪಿ ಟ್ವೀಟಿಂಗ್.

Follow Me on www.Twitter.com/RaviHegde