Tuesday, October 25, 2005

ಇಡೀ ರಾಜ್ಯ ದರಿದ್ರನಾರಾಯಣ ಮಯವಾಗಲಿ

ಗ್ಲೋಬಲ್‌ ವಿಲೇಜ್‌ನಿಂದ ಶ್ರೀಮನ್‌ ನಾರಾಯಣನಿಗೆ ಬಡ ಬೋರೇಗೌಡನ ಈ ಮೇಲ್‌

ಇನ್‌ಫೋಸಿಸ್‌ ಅಷ್ಟೇ ಏನು... ಭಾರತೀಯ ವಿಜ್ಞಾನ ಸಂಸ್ಥೆ, ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌, ಎಚ್‌ಎಎಲ್‌, ಇಂಟರ್‌ನ್ಯಾಶನಲ್‌ ಟೆಕ್‌ಪಾರ್ಕ್‌ ಮುಂತಾದ ಸಂಸ್ಥೆಗಳಿಂದಲೂ ಬಡಬೋರೇ ಗೌಡನಿಗೆ ನೇರವಾಗಿ ಯಾವಲಾಭವೂ ಇಲ್ಲ. ಅಮಗಳನ್ನೆಲ್ಲ ಕರ್ನಾಟಕದಿಂದ ಓಡಿಸಿ ಅಮಗಳ ಭೂಮಿಗಳನ್ನು ಸರ್ಕಾರ ವಶಪಡಿಸಿಕೊಂಡು ಬಡಜನರಿಗೆ ಹಂಚುವಂತಾಗಬೇಕು!

ಓಂ ನಮೋ ನಾರಾಯಣಾಯ,
ಹೀಗೆಂದಾಕ್ಷಣ ಕನ್‌ಫ್ಯೂಶನ್‌ ಬೇಡ ಹರಿಯೇ. ನಾರಾಯಣ ಅಂತ ನಾನು ಹೇಳಿದ್ದು ಇನ್‌ಫೋಸಿಸ್‌ ನಾರಾಯಣನೂ ಅಲ್ಲ ದರಿದ್ರನಾರಾಯಣನೂ ಅಲ್ಲ. ಅಸಲಿ ಭಗವಂತ ಶ್ರೀಮನ್‌ ನಾರಾಯಣನಾದ ನಿನಗೆ ನನ್ನ ಶಿರಸಾಷ್ಟಾಂಗ ನಮಸ್ಕಾರಗಳು.

ಯಾಕೆ ಈ ಸ್ಪಷ್ಟನೆಯನ್ನು ನೀಡುತ್ತಿದ್ದೇನೆ ಅಂದರೆ, ಕಳೆದ ಒಂದು ವಾರದಿಂದ, ಭೂಲೋಕದಲ್ಲಿ ನಮ್ಮಂಥ ಹುಲುಮಾನವರಿಗೆ ಎರಡೇ ನಾರಾಯಣ ಗೊತ್ತಿರುಮದು. ಒಂದು ಜೆಡಿಎಸ್‌ ದ್ಯಾವ್ರ ಪಂಥದ ದರಿದ್ರ ನಾರಾಯಣ ಹಾಗೂ ಇನ್ನೊಂದು ಶ್ರೀಕೃಷ್ಣ ಪಂಥದ ಇನ್‌ಫೋಸಿಸ್‌ ನಾರಾಯಣ. ನಾನೀಗ ನಮಸ್ಕಾರ ಹೇಳಿದ್ದು ಈ ಇಬ್ಬರು ನಾರಾಯಣರಿಗೂ ಅಲ್ಲ. ಭಗವಾನ್‌ ನಾರಾಯಣನಾದ ನಿನಗೆ.

ನೀನು ಅದೆಲ್ಲಿ ಇದ್ದೀಯೋ? ಅದು ಹ್ಯಾಗಿದ್ದೀಯೋ! ಗೊತ್ತಿಲ್ಲ. ಆದರೂ ಸರ್ವಾಂತರ್ಮಯಿಯಾದ ನೀನು ಎಲ್ಲೆಲ್ಲೂ ಇದ್ದೀಯಾ ಅಂತ ಭಕ್ತ ಪ್ರಹ್ಲಾದ ಬಹಳ ಹಿಂದೆಯೇ ಪ್ರೂವ್‌ ಮಾಡಿರುಮದರಿಂದ ನೀನು ಸೈಬರ್‌ಲೋಕದಲ್ಲೂ ಅದೆಲ್ಲೋ ಇದ್ದೇ ಇರುತ್ತೀಯಾ ಅಂತ ನಾನು ನಂಬುತ್ತೇನೆ. ಭಗವಂತಾ, ನಿನ್ನ ಈ-ಮೇಲ್‌ ವಿಳಾಸ ನನಗೆ ಗೊತ್ತಿಲ್ಲ. ಆದರೂ, ಈ-ಮೇಲ್‌ ಕಳಿಸುತ್ತಿದ್ದೇನೆ. ನನಗೆ ಗೊತ್ತು... ಪ್ರತಿನಿತ್ಯ ಅಂತರ್ಜಾಲದಲ್ಲಿ ಅನ್‌ಡೆಲಿವರ್ಡ್‌ ಆದ ಮತ್ತು ಡಿಲೀಟ್‌ ಆದ ಕೋಟ್ಯಂತರ ಮೆಸೇಜ್‌ಗಳೆಲ್ಲ ನಿನ್ನ ಪಾದವನ್ನೇ ಸೇರುತ್ತವೆ! ಏಕೆಂದರೆ ಒಮ್ಮೆ ಸೃಷ್ಟಿಯಾದದ್ದೆಲ್ಲ ಲಯವಾಗಲೇ ಬೇಕು. ಲಯವಾದಮೇಲೆ ಅಮ ಇನ್ನೆಲ್ಲಿ ಹೋಗಲು ಸಾಧ್ಯ? ರಿಸೈಕಲ್ಡ್‌ಬಿನ್‌ನಿಂದ ನೇರವಾಗಿ ನಿನ್ನಲ್ಲೇ ಮುಕ್ತಿಕಾಣಬೇಕು ಎಂಬುದು ಸಿಂಪಲ್‌ ಲಾಜಿಕ್ಕು. ಈ ಅಚಲ ಭಕ್ತಿ ವಿಶ್ವಾಸದಿಂದ ನಿನಗೆ ಈ ಮೇಲ್‌-ಅರ್ಚನೆ ಮಾಡುತ್ತಿದ್ದೇನೆ. ದಯವಿಟ್ಟು ಓದು. ಇಷ್ಟುದಿನ ನಾನು ಪತ್ರಬರೆಯುತ್ತಿದ್ದೆ. ಆದರೆ, ಈಗ ಈ ಮೇಲ್‌ ಸಿಸ್ಟಂ ಅಳವಡಿಸಿಕೊಂಡಿದ್ದೇನೆ. ಏಕೆಂದರೆ, ಒಂದೇ ಬಟನ್‌ ಒತ್ತಿದರೆ ಪತ್ರವನ್ನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಪ್ರಧಾನ ಮಂತ್ರಿ, ಸೋನಿಯಾಗಾಂಧಿ ಹಾಗೂ ಹಾಗೂ ದೇಶದ ಎಲ್ಲ ಪತ್ರಿಕೆ ಮತ್ತು ಟೀವಿ ಸಂಸ್ಥೆಗಳಿಗೂ ತಕ್ಷಣ ಕಳಿಸಬಹುದು. ಇದರಿಂದ ಪತ್ರ ಕಳಿಸಲು ತಗಲುತ್ತಿದ್ದ ವೆಚ್ಚ ಉಳಿತಾಯವಾಗುತ್ತದೆ!

ಇಷ್ಟಕ್ಕೂ ಮಹಾಮಹಿಮನಾದ ನಾರಾಯಣನೇ,
ದೇವಲೋಕ, ಭೂಲೋಕ, ಪಾತಾಳಲೋಕವೆಂಬ ತ್ರಿಲೋಕದ ನಿನ್ನ ಸೃಷ್ಟಿಕ್ರಿಯೆ ಅದ್ಬುತ ಎನ್ನುಮದರಲ್ಲಿ ಎರಡು ಮಾತಿಲ್ಲ. ಆದರೆ, ಮಾನವ ಸೃಷ್ಟಿಯ ಸೈಬರ್‌ಲೋಕವನ್ನು ಕಂಡು ನಿನಗೂ ತುಸು ಅಸೂಸೆಯಾಗಿರಬಹುದು ಅಂತ ನನಗೆ ಅನುಮಾನ. ಯಾಕೆಂದರೆ, ನೀನು ಸೃಷ್ಟಿಸಿದ ಎಲ್ಲ ಮೂರೂ ಲೋಕಗಳನ್ನೂ ಸೈಬರ್‌ಲೋಕವೊಂದರಲ್ಲೇ ಕಾಣಬಹುದು! ಹೂಂ ಅಂತೀಯಾ ಊಂಹೂ ಅಂತಿಯಾ?

ಇಲ್ಲಿ ಮೆಕ್ರೋಸಾಫ್ಟಿನ ಬಿಲ್ಸ್‌ಗೇಟ್ಸ್‌ ಎಂಬ ಕುಬೇರನಿದ್ದಾನೆ. ಐಬಿಎಂ ಕಂಪನಿಯ ವಜ್ರಾದಪಿ ಹಾರ್ಡ್‌ವೇರಿನ ಇಂದ್ರನಿದ್ದಾನೆ. ಅವನ ಆಸ್ಥಾನದಲ್ಲಿರುವ ರಂಭೆ, ಊರ್ವಶಿ, ತಿಲೋತ್ತಮೆ ಇತ್ಯಾದಿಗಳನ್ನೂ ಮೀರಿಸುವ ಅಪ್ಸರೆಯರಿದ್ದಾರೆ... ಪ್ರತಿದಿನವೂ ಹೊಸಸಾಫ್ಟವೇರ್‌ ಸೃಷ್ಟಿಸುವ ಭೃಹ್ಮ, ವೈರಸ್‌ ಹುಟ್ಟಿಸುವ ರಕ್ಕಸರು, ಕಂಪ್ಯೂಟರ್‌ ಮುಂದೆ ತಪಸ್ಸು ಮಾಡುವ ಋಷಿಗಳು, ಆನ್‌ಲೈನ್‌ ವಿದ್ಯೆ ನೀಡುವ ಸರಸ್ವತಿ, ಕ್ರೆಡಿಟ್‌ಕಾರ್ಡ್‌ ಮೂಲಕ ವ್ಯವಹರಿಸುವ ಲಕ್ಷ್ಮಿ, ಮಾಹಿತಿ ಹ್ಯಾಕ್‌ಮಾಡುವ ನಾರದ ಅಷ್ಟೇ ಏನು... ಬಗ್‌ನಂಥ ಕ್ರಿಮಿಯಿಂದ ಹಿಡಿದು, ಮೌಸು, ಟ್ರೋಜನ್‌ಹಾರ್ಸ್‌ನಂಥ ಪ್ರಾಣಿಸಂಕುಲದವರೆಗೆ ಇಲ್ಲಿ ಏನುಂಟು, ಏನಿಲ್ಲ? ನಾರಾಯಣನೇ... ಸ್ವತಃ ನಿನ್ನದೇ ವರ್ಚುವಲ್‌ ಅವತಾರ ಇಲ್ಲಿರುವಾಗ, ಅಂತರ್ಜಾಲದ ಮುಂದೆ ಯಾವಲೆಕ್ಕ ನಿನ್ನ ಮಾಯಾಜಾಲ!

ಹೇ ಪ್ರಭು...
ಈ-ಮೇಲ್‌ ಬರೆಯಲು ಕಾರಣವೇನೆಂದರೆ, ಭಾರತ ಹಳ್ಳಿಗಳ ದೇಶ. ರೈತರೇ ದೇಶದ ಬೆನ್ನೆಲುಬು. ಆದರೆ, ಇವರಲ್ಲಿ ಶೇ.೩೦ರಷ್ಟು ರೈತರು ಮಳೆಯ ಪ್ರವಾಹದಿಂದ ಬೆಳೆ ಕಳೆದುಕೊಂಡು ಲಾಸ್‌ ಅನುಭವಿಸುತ್ತಿದ್ದಾರೆ. ಇನ್ನು ಶೇ.೩೦ರಷ್ಟು ರೈತರು ಮಳೆಯೇ ಇಲ್ಲದೇ ಬೆಳೆ ಬಾರದೇ ನಷ್ಟಕ್ಕೊಳಗಾಗಿದ್ದಾರೆ. ಇನ್ನೂ ಶೇ.೩೦ರಷ್ಟು ರೈತರು ಉತ್ತಮ ಬೆಳೆಯಿಂದ ಸಂತಸಗೊಂಡರೂ ಬೆಲೆಕುಸಿತದಿಂದ ಸಂಪೂರ್ಣ ಅವಸಾನದ ಅಂಚು ತಲುಪಿದ್ದಾರೆ. ಅಂದರೆ, ಶೇ.೯೦ರಷ್ಟು ರೈತರು ಒಂದಲ್ಲಾ ಒಂದು ರೀತಿಯ ಲಾಸ್‌ನಲ್ಲಿದ್ದಾರೆ.

ಇದೆಂಥ ಅನ್ಯಾಯ ನೋಡು ಇನ್‌ಫೋಸಿನಂಥ ಕಂಪನಿ ಮಾತ್ರ ಪ್ರತಿವರ್ಷ ನೂರಾರು ಕೋಟಿ ರುಪಾಯಿ ಲಾಭ ಗಳಿಸುತ್ತಿದೆ. ನ್ಯಾಯಾನಾ ಭಗವಂತ? ರೈತರಿಗೆಲ್ಲ ನಷ್ಟವಾದರೆ ಇನ್‌ಫೋಸಿಸ್‌ಗೂ ನಷ್ಟವಾಗಬೇಕು. ಅದೇ ನ್ಯಾಯ ತಾನೇ?

ಈ ನಡುವೆ, ಶೇ.೫ರಷ್ಟು ರೈತರು ಅಲ್ಪ ಸ್ವಲ್ಪ ಲಾಭ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರೆ, ಇನ್ನುಳಿದ ಶೇ.೫ರಷ್ಟು ರೈತರು ತಮ್ಮ ಭೂಮಿಯನ್ನು ಸಾಫ್ಟ್‌ವೇರ್‌ ಕಂಪನಿಗಳು ಮತ್ತು ರಿಯಲ್‌ ಎಸ್ಟೇಟ್‌ ಕಂಪನಿಗಳಿಗೆ ಮಾರಿ ಹಣಗಳಿಸಿ ರೈತಾಪಿ ಕೆಲಸವನ್ನೇ ಬಿಡುತ್ತಿದ್ದಾರೆ.

ಆದರೆ, ಇನ್‌ಫೋಸಿಸ್‌ ಮಾತ್ರ ರೈತರ ಹೊಲಗದ್ದೆಗಳನ್ನು ಖರೀದಿಸಿ ದೇಶದಲ್ಲೇ ದೊಡ್ಡದಾದ ಸಾಫ್ಟ್‌ವೇರ್‌ ಕ್ಯಾಂಪಸ್‌, ವಿಶ್ವದಲ್ಲೇ ದೊಡ್ಡದಾದ ಶಿಕ್ಷಣ ಕ್ಯಾಂಪಸ್‌ ಸ್ಥಾಪಿಸಿ ಬಡವರ ಹೊಟ್ಟೆಕಿಚ್ಚಿಗೆ ಕಾರಣವಾಗಿದೆ.

ಇದು ಪರಮ ಅನ್ಯಾಯ. ಇದೇ ರಾಜ್ಯದಲ್ಲಿ ಐಬಿಎಂ, ಎಕ್ಸೆಂಚರ್‌, ಎಚ್‌ಪಿ, ವಿಪ್ರೋ ಮುಂತಾದ ಕಂಪನಿಗಳು ಬಾಡಿಗೆ ಕಟ್ಟಡದಲ್ಲಿ ಕೆಲಸಮಾಡುತ್ತಿಲ್ಲವೇ? ಹಾಗೇ ಇನ್ಫೋಸಿಸ್‌ ಕೂಡ ಬಾಡಿಗೆ ಕಟ್ಟಡದಲ್ಲೇ ಕೆಲಸ ಮಾಡಬೇಕು.

ರಾಜ್ಯದಲ್ಲಿ ಕೋಟ್ಯಂತರ ದರಿದ್ರ ನಾರಾಯಣರು ಸ್ಲಂಗಳಲ್ಲಿ, ಜೋಪಡಿಗಳಲ್ಲಿ ವಾಸಿಸುತ್ತಿರುವಾಗ ಇನ್‌ಫೋಸಿಸ್‌ ನಾರಾಯಣರಿಗೆ ಮಾತ್ರ ಹವಾನಿಯಂತ್ರಿತ ಪಂಚತಾರಾ ಕಟ್ಟಡದಲ್ಲಿ ವಾಸವಾಗಿರಲು ಹೇಗಾದರೂ ಮನಸ್ಸು ಬರುತ್ತದೋ? ಅವರೂ ಕೊಳಚೆ ಪ್ರದೇಶಗಳಲ್ಲಿ ಸಾಮಾನ್ಯ ನಾಗರಿಕರಂತೆ ಹಕ್ಕುಪತ್ರದ ಬದಲು ಸ್ವಾಧೀನ ಪತ್ರ ಇಟ್ಟುಕೊಂಡು ಜೀವನ ನಡೆಸಬೇಕು.

ಇಷ್ಟಕ್ಕೂ ಈ ಇನ್‌ಫೋಸಿಸ್‌ ಕಂಪನಿಯಿಂದ ದೇಶಕ್ಕೆ ಭಾರೀ ಹೆಸರು ಬಂದಿರಬಹುದು. ಜಿಡಿಪಿಗೆ ಸಾಕಷ್ಟು ಆದಾಯ ಆಗಿರಬಹುದು. ಇನ್‌ಫೋಸಿಸ್‌ ಷೇರುಗಳಿಂದ ದೇಶದಲ್ಲಿ ಕೋಟ್ಯಂತರ ಮಂದಿ ಶ್ರೀಮಂತರಾಗಿರಬಹುದು.

ಆದರೆ, ಅದರಿಂದೆಲ್ಲ ಬಡ ಬೋರೇಗೌಡನಿಗೆ ಏನು ಲಾಭವಾಯಿತು? ಇನ್‌ಫೋಸಿಸ್‌ ಅಷ್ಟೇ ಏನು... ಭಾರತೀಯ ವಿಜ್ಞಾನ ಸಂಸ್ಥೆ, ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌, ಹಿಂದೂಸ್ತಾನ್‌ ಏರೋನಾಟಿಕಲ್ಸ್‌, ಇಂಟರ್‌ನ್ಯಾಶನಲ್‌ ಟೆಕ್‌ಪಾರ್ಕ್‌ ಮುಂತಾದ ಸಂಸ್ಥೆಗಳಿಂದಲೂ ಬಡಬೋರೇ ಗೌಡನಿಗೆ ನೇರವಾಗಿ ಯಾವಲಾಭವೂ ಇಲ್ಲ. ಅಮಗಳನ್ನೆಲ್ಲ ಕರ್ನಾಟಕದಿಂದ ಓಡಿಸಿ ಅಮಗಳ ಭೂಮಿಗಳನ್ನು ಸರ್ಕಾರ ವಶಪಡಿಸಿಕೊಂಡು ಬಡಜನರಿಗೆ ಹಂಚುವಂತಾಗಬೇಕು.

ಪ್ರಜಾತಂತ್ರದ ಈ ದೇಶದಲ್ಲಿ ಬಹುಮತಕ್ಕೇ ಜಯ. ಈ ದೇಶದಲ್ಲಿ ಬಹುಮತ ಇರುಮದು ದರಿದ್ರನಾರಾಯಣರಿಗೆ. ಆದ್ದರಿಂದ ಇಡೀ ದೇಶದಲ್ಲಿ ದರಿದ್ರ ನಾರಾಯಣರ ಆಡಳಿತ ಬರಬೇಕು. ಇಡೀ ದೇಶ ದರಿದ್ರನಾರಾಯಣ ಮಯವಾಗ ಬೇಕು. ಇಡೀ ದೇಶ ಆಗದಿದ್ದರೆ ರಾಜ್ಯದಲ್ಲಂತೂ ಆಗಬೇಕು.

ಈ ಕೋರಿಕೆಯನ್ನು ಮನ್ನಿಸುತ್ತೀಯೆಂಬ ನಂಬಿಕೆಯಿದೆ. ಇಷ್ಟುದ್ದ ಈ-ಮೇಲ್‌ ಓದಿ, ತುಂಬಾ ಬೈಟ್ಸಾಯಿತು ಅಂತಿದಿಯೇನೋ. ಅದಕ್ಕೇ ಸದ್ಯಕ್ಕೆ ಲಾಗ್‌ಔಟ್‌ ಆಗುತ್ತೇನೆ. ಮತ್ತೆ ಯಾವಾಗಾದರೂ ಮೇಲ್‌ ಮಾಡುತ್ತೇನೆ.

ಇಂತಿ ನಿನ್ನ ಭಕ್ತೋತ್ತಮ
ಬೋರೇಗೌಡ

Kannada Prabha issue dated October 24, 2005
Let The Entier Karnataka Be Full of Narayanas.. Daridra Narayanas!

-

Tuesday, October 18, 2005

ಪ್ರಗತಿಪರ ಭ್ರಷ್ಟಾಚಾರದಿಂದಲೇ ದೇಶದ ಪ್ರಗತಿ!

ಭಾಂಜೆ ದುರ್ಯೋಧನನಿಗೆ ಮಾಮಾಶ್ರಿ ಶಕುನಿ ಕಳಿಸಿದ ಲೇಟೆಸ್ಟ್‌ ಈ-ಮೇಲ್‌

ಭ್ರಷ್ಟಾಚಾರದಲ್ಲಿ ಕರ್ನಾಟಕ ನಂಬರ್‌ ಒನ್‌ ಎಂಬುದು ಕರ್ನಾಟಕ ಎಷ್ಟು ಉದ್ಯಮ ಸ್ನೇಹಿ ಎಂಬುದಕ್ಕೆ ವಿಶ್ವಬ್ಯಾಂಕೇ ನೀಡಿದ ಪ್ರಶಸ್ತಿ ಪತ್ರ! ಇದರ ಯಶಸ್ಸಿನ ಪಾಲು ಯಾಮದೇ ಒಬ್ಬ ಸಿ.ಎಂ.ಗಾಗಲೀ, ಮಾಜಿ ಸಿ.ಎಂ.ಗಾಗಲೀ ಸಲ್ಲುಮದಿಲ್ಲ. ’ಇದು ಎಲ್ಲರ ಟೀಮ್‌ ಎಫರ್ಟ್‌’. ಯುದ್ಧಗೆಲ್ಲಲು ಕೇವಲ ರಾಜನಿಂದ ಮಾತ್ರ ಸಾಧ್ಯವಿಲ್ಲ... ಇಡೀ ಸೈನ್ಯವೇ ಹೋರಾಡಬೇಕು. ಅಂಡರ್‌ಸ್ಟಾಂಡ್‌....ಭಾಂಜೆ?

ಪ್ರಿಯ ಭಾಂಜೆ,
ನಿನಗೇನಾಗಿದೆ ಧಾಡಿ. ಶ್ರೀಯುತ ದೇವೇಗೌಡರನ್ನು ನೋಡು. ಈ ವಯಸ್ಸಿನಲ್ಲೂ ಎಷ್ಟು ಚುರುಕಾಗಿದ್ದಾರೆ. ಅವರ ಛಲವನ್ನು ನೋಡು. ಬಡಜನರಿಗಾಗಿ ಅವರು ಹೋರಾಡುವ ಪರಿಯನ್ನು ನೋಡು. ಅವರು ಎಷ್ಟು ಪತ್ರ ಬರೆಯುತ್ತಾರೆ. ಕಾಂಗ್ರೆಸ್ಸಿನ ಹೈ ಕಮಾಂಡಿನಿಂದ ಹಿಡಿದು ಜೆಡಿಎಸ್ಸಿನ ಲೋ ಕಮಾಂಡ್‌ವರೆಗೆ, ಕಾವೇರಿ ನದಿಯಿಂದ ಹಿಡಿದು ಮೆಟ್ರೋ ರೈಲಿನವರೆಗೆ, ಕೊಳಚೆ ಸೈಟಿನಿಂದ ಹಿಡಿದು ಹೈಟೆಕ್‌ ಕಾರಿಡಾರ್‌ವರೆಗೆ ಅವರ ಪತ್ರದ ಹರಮ ವಿಶಾಲವಾಗಿದೆ. ಕರ್ನಾಟಕದಲ್ಲಿ ಸದ್ಯ ನಂಬರ್‌ ಒನ್‌ ಪತ್ರ-ಕರ್ತ ಅಂದರೆ ಅವರೇ! ಪ್ರತಿ ಬಾರಿ ಅವರು ಪತ್ರ ಬರೆದಾಗಲೂ ಅದು ದೊಡ್ಡ ಸುದ್ದಿಯಾಗುತ್ತದೆ. ಯಾರ ಪತ್ರಕ್ಕೂ ಅಷ್ಟು ಪ್ರಚಾರ ಸಿಗುಮದಿಲ್ಲ.

ಭಾಂಜೆ...
ಈಗೀಗ ಎಲ್ಲರೂ ತಮ್ಮ ಜೀವನ ಜಂಜಡಲ್ಲಿ ಪತ್ರ ಬರೆಯುವ ಹವ್ಯಾಸವನ್ನೇ ಬಿಟ್ಟುಬಿಟ್ಟಿದ್ದಾರೆ. ಆದರೆ, ಅವರೆಲ್ಲರೂ ಶ್ರೀಯುತ ದೇವೇಗೌಡರಿಂದ ಸ್ಫೂರ್ತಿ ಪಡೆದು ಮತ್ತೆ ಪತ್ರ ಬರೆಯುವ ಹವ್ಯಾಸವನ್ನು ರೂಢಿ ಮಾಡಿಕೊಳ್ಳಬೇಕು ಅಂತ ನನ್ನ ಆಸೆ.

ಇಟ್ಸ್‌ ಓಕೆ ಭಾಂಜೆ,
ಆದರೆ, ನನ್ನ ಈ ಪತ್ರಕ್ಕೆ ಶ್ರೀಯುತ ದೇವೇಗೌಡರು ಸ್ಫೂರ್ತಿಯಲ್ಲ ಎಂದು ಮೊದಲೇ ಸ್ಪಷ್ಟಪಡಿಸಿಬಿಡುತ್ತೇನೆ. ಕಳೆದವಾರ ದಿಢೀರ್‌ ಆಗಿ ಪತ್ರಿಕೆಗಳಲ್ಲಿ ಕಾಣಿಸಿಕೊಂಡ ಒಂದು ವರದಿ ನನ್ನ ಈ ಪತ್ರಕ್ಕೆ ಕಾರಣ.

ಭ್ರಷ್ಟಾಚಾರದಲ್ಲಿ ಕರ್ನಾಟಕಕ್ಕೆ ನಂಬರ್‌ ಒನ್‌ ಸ್ಥಾನ ನೀಡಿದ ವಿಶ್ವಬ್ಯಾಂಕ್‌ ಸಮೀಕ್ಷೆ ಕುರಿತಾದ ವರದಿ ಅದು. ಕಳೆದ ವರ್ಷವೇ ನಿದ್ದೆಗೆ ಹೋಗಿದ್ದ ಈ ಸಮೀಕ್ಷೆ ಈಗ ದಿಢೀರ್‌ ಆಗಿ ಎದ್ದು ಬಂದದ್ದು ಹೇಗೆ ಎಂಬ ಕುತೂಹಲ ಉಂಟಾಯಿತು ನನಗೆ.
ಇಂಥ ನೂರಾರು ಸಮೀಕ್ಷೆಗಳೂ ವರದಿಗಳೂ ದಿನವೂ ಪ್ರಕಟವಾಗುತ್ತಿರುತ್ತವೆ. ಚಹ ಕುಡಿಯುವವರಲ್ಲಿ ಶೇ.೨೬ರಷ್ಟು ಜನರು ಕ್ಯಾನ್ಸರಿಗೆ ತುತ್ತಾಗುತ್ತಾರೆ ಎಂಬ ಸಮೀಕ್ಷೆಯಿಂದ ಹಿಡಿದು, ಕಾಫಿ ಕುಡಿಯದಿದ್ದರೆ ಹಾರ್ಟ್‌ ಅಟ್ಯಾಕ್‌ ಆಗುವ ಪ್ರಮಾಣ ಶೇ.೮೦ ರಷ್ಟು ಅಧಿಕ ಎಂಬ ಸಮೀಕ್ಷೆಯ ವರೆಗೆ, ಹೆಂಡತಿ ಊರಿಗೆ ಹೋದಾಗ ಸ್ನೇಹಿತೆಯ ಜೊತೆ ಶೇ.೪೫ರಷ್ಟು ಗಂಡಸರು ಮಲಗುತ್ತಾರೆ ಎಂಬ ಸಮೀಕ್ಷೆಯಿಂದ ಹಿಡಿದು ಟೀವಿ ಇರುವ ಶೇ.೭೩.೫ರಷ್ಟು ಮನೆಯ ಮಕ್ಕಳು ಪೋಲಿ ಆಗುತ್ತಾರೆ ಎಂಬ ಸಮೀಕ್ಷೆಯ ವರೆಗೆ ವೈವಿಧ್ಯ ಸಮೀಕ್ಷೆಗಳನ್ನು ಓದಿ ನಾನು ಆನಂದಿಸುತ್ತಿದ್ದೆ.

ಆದರೆ, ಕರ್ನಾಟಕದ ಭ್ರಷ್ಟಾಚಾರದ ಕುರಿತ ಎರಡು ಬೇರೆ ಬೇರೆ ಸಮೀಕ್ಷೆ ನನಗೆ ತುಸು ಕುತೂಹಲ ಮೂಡಿಸಿತು. ಮೊನ್ನೆ ಮೊನ್ನೆಯವರೆಗೆ ಭ್ರಷ್ಟಾಚಾರದಲ್ಲಿ ಕರ್ನಾಟಕ ೪ನೇ ರ್ಯಾಂಕು ಎಂದು ಭಾರತದ ಸಮೀಕ್ಷೆಯೊಂದರಲ್ಲಿ ಹೇಳಲಾಗುತ್ತಿತ್ತು. ಆಗೆಲ್ಲ... ಲೋಕಾಯುಕ್ತರು ಆ ವರದಿ ಸರಿಯಿಲ್ಲ. ಭ್ರಷ್ಟಾಚಾರದಲ್ಲಿ ಕರ್ನಾಟಕ ನಂಬರ್‌ ಫೋರ್‌ ಅಲ್ಲ. ನಂಬರ್‌ ಒನ್‌ ಅಂತ ಒತ್ತಿ ಒತ್ತಿ ಹೇಳಿದರು. ಆದರೆ, ಅವರ ಮಾತನ್ನು ಯಾರೂ ಸೀರಿಯಸ್ಸಾಗಿ ತಗೊಳ್ಳಲಿಲ್ಲ. ಆದರೆ, ಈಗ ನೋಡು. ವಿಶ್ವಬ್ಯಾಂಕಿನ ವರದಿಯ ಪ್ರಕಾರ ಕರ್ನಾಟಕ ನಂಬರ್‌ ಒನ್‌ ಭ್ರಷ್ಟಾಚಾರಿ ಅಂತ ಖಾತ್ರಿಯಾಗಿದೆ! ಲೋಕಾಯುಕ್ತರು ಹೇಳಿದ್ದು ಎರಡೇ ತಿಂಗಳಲ್ಲಿ ನಿಜವಾಗಿದೆ.

ಇಷ್ಟಕ್ಕೂ ಭಾಂಜೆ,
ಭ್ರಷ್ಟಾಚಾರದಲ್ಲಿ ಕರ್ನಾಟಕ ನಂಬರ್‌ ಒನ್‌ ಎಂದರೆ ಕನ್ನಡಿಗರು ಯಾಕೆ ಬೇಜಾರು ಮಾಡಿಕೊಳ್ಳಬೇಕು? ಈ ಭ್ರಷ್ಟಾಚಾರಕ್ಕೆ ಈ ಮುಖ್ಯಮಂತ್ರಿ ಕಾರಣ, ಆ ಮುಖ್ಯಮಂತ್ರಿ ಕಾರಣ ಅಂತ ಯಾಕೆ ಕೆಸರೆರಚಿಕೊಳ್ಳಬೇಕು? ಕನ್ನಡಿಗರು ತಮಗೆ ದೊರಕಿದ ರ್ಯಾಂಕಿನ ಬಗ್ಗೆ ಹೆಮ್ಮೆ ಪಡಬೇಕು. ನಿನಗೆ ಗೊತ್ತಿರಬೇಕಲ್ಲ. ೬೪ ವಿದ್ಯೆಗಳಲ್ಲಿ ಚೋರ ವಿದ್ಯೆಯೂ ಒಂದು ಅಂತ. ಈ ಭ್ರಷ್ಟಾಚಾರವೆಲ್ಲ ಆ ವಿದ್ಯೆಯ ಅಂಗವೇ ಆಗಿದೆ. ಇಂಥ ಎಜುಕೇಶನ್‌ ಫೀಲ್ಡಿನಲ್ಲಿ ಕರ್ನಾಟಕ ಒಂದನೇ ರ್ಯಾಂಕ್‌ ಗಳಿಸಿದೆ ಎಂದರೆ ಯಾಕೆ ಕನ್ನಡಿಗರು ತಲೆ ತಗ್ಗಿಸುತ್ತಾರೋ ನನಗಂತೂ ಅರ್ಥ ಆಗುಮದಿಲ್ಲ!

ಈ ಪ್ರಜೆಗಳಿಗೆ ಒಂದು ವಿಷಯ ಇನ್ನೂ ಗೊತ್ತಿಲ್ಲ. ಭ್ರಷ್ಟಾಚಾರದಲ್ಲೂ ಎರಡು ಬಗೆಯಿದೆ. ಒಂದು ಪ್ರಗತಿಪರ ಭ್ರಷ್ಟಾಚಾರ. ಇನ್ನೊಂದು ಮಾರಕ ಭ್ರಷ್ಟಾಚಾರ ಅಂತ.

ದೇಶದ ಕಾನೂನುಗಳನ್ನು ಸಡಿಲಗೊಳಿಸಿ ದೇಶದ ಪ್ರಗತಿಗೆ ನೆರವಾಗುವ ಭ್ರಷ್ಟಾಚಾರವೇ ಪ್ರಗತಿಪರ ಭ್ರಷ್ಟಾಚಾರ. ಕಾನೂನುಗಳನ್ನು ಕಾನೂನುಗಳಿಂದಲೇ ನಾಶಮಾಡುವ ಭ್ರಷ್ಟಾಚಾರವನ್ನು ಮಾರಕ ಭ್ರಷ್ಟಾಚಾರ ಅಂತ ಕರೆಯುತ್ತಾರೆ.
ಸಾಮಾನ್ಯವಾಗಿ ಕರ್ನಾಟಕದಲ್ಲಿ ಕಾಣುವಂಥದ್ದು ಪ್ರಗತಿಪರ ಭ್ರಷ್ಟಾಚಾರ. ಬಿಹಾರದಲ್ಲಿ ಕಾಣುವ ಭ್ರಷ್ಟಾಚಾರ ಎರಡನೇ ಬಗೆಯದು ಎಂದು ತಜ್ಞರ ಅಭಿಪ್ರಾಯ.

ಪ್ರಗತಿಪರ ಭ್ರಷ್ಟಾಚಾರವನ್ನು ಕೆಟ್ಟದ್ದು ಎಂದು ಕರೆಯಬಾರದು ಎಂದು ದೇಶದ ಖ್ಯಾತ ಉದ್ಯಮಿಗಳೆಲ್ಲ ಅಭಿಪ್ರಾಯ ಪಡುತ್ತಾರೆ. ಈ ದೇಶದ ಬಹುತೇಕ ಕೈಗಾರಿಕೆಗಳು, ಉದ್ದಿಮೆಗಳು ಈ ಅಡಿಪಾಯದಲ್ಲೇ ನಿರ್ಮಾಣ ಆಗಿವೆ ಹಾಗೂ ಆಗುತ್ತಿವೆ ಎಂದು ಅವರು ವಾದಿಸುತ್ತಾರೆ.

ಒಂದು ವೇಳೆ ಕಾನೂನುಗಳನ್ನೆಲ್ಲ ಪಾಲಿಸಿದರೆ ದೇಶದಲ್ಲಿ ಕೈಗಾರಿಕೆ ಸ್ಥಾಪಿಸುಮದು ಸಾಧ್ಯವೇ ಇಲ್ಲ. ವ್ಯವಹಾರ ನಡೆಸಲು ಆಗುಮದೇ ಇಲ್ಲ. ಲೈಸೆನ್ಸ್‌ ಪಡೆಯಲು ನೂರಾರು ಕಟ್ಟಳೆಗಳು, ಹಲವಾರು ವರ್ಷಗಳು ಬೇಕು. ಫೈಲುಗಳು ಸಾವಿರಾರು ಹಸ್ತಗಳನ್ನು ಬದಲಾಯಿಸಬೇಕು. ಇವೆಲ್ಲಾ ಆಗಿ ಕೈಗಾರಿಕೆಗೆ ಹಸಿರು ನಿಶಾನೆ ಸಿಗುವ ಹೊತ್ತಿಗೆ ಉದ್ಯಮಿಯ ಅರ್ಧ ಆಯುಸ್ಸೇ ಕಳೆದುಹೋಗಿರುತ್ತದೆ. ಆಮೇಲೆ ಕೈಗಾರಿಕೆ ಸ್ಥಾಪಿಸುಮದು ಯಾವಾಗ! ಬಿಸಿನೆಸ್‌ ಆಗುಮದು ಯಾವಾಗ? ದೇಶದ ಪ್ರಗತಿ ಆಗುಮದು ಯಾವಾಗ?...

ಬದಲಿಗೆ... ಕಾಸು ಕೊಟ್ಟ ಕೂಡಲೇ ಲೈಸೆನ್ಸು ಸಿಗುವ, ಕೈ ಬೆಚ್ಚಗೆ ಮಾಡಿದ ಕೂಡಲೇ ಹಸಿರು ನಿಶಾನೆ ತೋರಿಸುವ ವ್ಯವಸ್ಥೆ ಇದ್ದರೆ ಎಷ್ಟನುಕೂಲ ನೋಡಿ. ಅದರಲ್ಲೂ ಸಿಂಗಲ್‌ ವಿಂಡೋ ವ್ಯವಸ್ಥೆ ಬಂದ ಮೇಲೆ ಇಡೀ ಪ್ರಕ್ರಿಯೆ ಎಷ್ಟು ಸುಲಭವಾಗುತ್ತದೆ ಎಂದರೆ, ಒಂದೇ ವಿಂಡೋದಲ್ಲಿ ಕಾಸು ಹಾಕಿದರಾಯಿತು... ಲೈಸೆನ್ಸಿನ ಹಲವಾರು ಡೋರುಗಳು ಆಟೋಮ್ಯಾಟಿಕ್‌ ಆಗಿ ಓಪನ್‌ ಆಗತ್ತವೆ. ದಿಢೀರನೆ ಕೈಗಾರಿಕೆ ಸ್ಥಾಪಿಸಬಹುದು. ದಿಢೀರನೆ ವ್ಯವಹಾರ ನಡೆಸಬಹುದು. ದಿಢೀರನೆ ದೇಶದ ಪ್ರಗತಿಯಾಗುತ್ತದೆ. ಇದೆಲ್ಲಾ ಪ್ರಗತಿಪರ ಭ್ರಷ್ಟಾಚಾರದ ಲಾಭಗಳು.

ಆದ್ದರಿಂದ ಎಲ್ಲಿ ಪ್ರಗತಿಪರ ಭ್ರಷ್ಟಾಚಾರ ಹೆಚ್ಚಿರುತ್ತದೋ ಅಲ್ಲಿ ಕೈಗಾರಿಕಾ ಪ್ರಗತಿಯೂ ಹೆಚ್ಚು ಎನ್ನುಮದು ಉದ್ಯಮಿಗಳ ನಂಬಿಕೆ. ‘ಪ್ರಗತಿಪರ ಭ್ರಷ್ಟಾಚಾರ ಎಲ್ಲಿದೆಯೋ ಅಲ್ಲಿದೆ ಪ್ರಗತಿ’... ಅಂತ ಘೋಷಣೆಯನ್ನು ಕೂಗಬಹುದು.

ಈ ಹಿನ್ನೆಲೆಯಲ್ಲಿ ಕೈಗಾರಿಕೋದ್ಯಮಿಗಳಿಗೆ ಬಂಡವಾಳ ಹೂಡಲು ಕರ್ನಾಟಕ ಪ್ರಶಸ್ತ ರಾಜ್ಯ. ಏಕೆಂದರೆ, ಭ್ರಷ್ಟಾಚಾರದಲ್ಲಿ ಕರ್ನಾಟಕ ನಂಬರ್‌ ಒನ್‌ ಅಂತ ವಿಶ್ವಬ್ಯಾಂಕು ಮತ್ತು ಭಾರತೀಯ ಕೈಗಾರಿಕಾ ಒಕ್ಕೂಟದ ಜಂಟಿ ಸಮೀಕ್ಷೆಯಲ್ಲೇ ಹೇಳಲಾಗಿದೆ. ಇದು ಕರ್ನಾಟಕ ಎಷ್ಟು ಉದ್ಯಮ ಸ್ನೇಹಿ ಎಂಬುದಕ್ಕೆ ವಿಶ್ವಬ್ಯಾಂಕೇ ನೀಡಿದ ಪ್ರಶಸ್ತಿ ಪತ್ರ. ಇದರ ಯಶಸ್ಸಿನ ಪಾಲು ಯಾಮದೇ ಒಬ್ಬ ಮುಖ್ಯಮಂತ್ರಿಗಾಗಲೀ, ಮಾಜಿ ಮುಖ್ಯಮಂತ್ರಿಗಾಗಲೀ ಸಲ್ಲುಮದಿಲ್ಲ. ಇದು ಎಲ್ಲರ ಟೀಮ್‌ ಎಫರ್ಟ್‌. ಗ್ರಾಮ ಪಂಚಾಯ್ತಿಯ ಸದಸ್ಯನಿಂದ ಹಿಡಿದು ಮುಖ್ಯಮಂತ್ರಿಯ ವರೆಗೆ, ಜವಾನನಿಂದ ಹಿಡಿದು ಸರ್ಕಾರದ ಮಖ್ಯಕಾರ್ಯದರ್ಶಿಯವರೆಗೆ ಎಲ್ಲರನ್ನೂ ಒಳಗೊಂಡ ತಂಡಕ್ಕೆ ಈ ಪ್ರಶಸ್ತಿ ಸಲ್ಲಬೇಕು.

ಯುದ್ಧವನ್ನು ಗೆಲ್ಲಲು ರಾಜನಿಂದ ಮಾತ್ರ ಸಾಧ್ಯವಿಲ್ಲ ಭಾಂಜೆ... ಇಡೀ ಸೈನ್ಯವೇ ಹೋರಾಡಬೇಕು. ಅಂಡರ್‌ಸ್ಟಾಂಡ್‌?
ಆಯುಷ್ಮಾನ್‌ ಭವ
ಮಾಮಾಶ್ರೀ


Kannada Prabha issue Dated - October 17, 2005
"Developmental Corruption" for the Development of the Nation!

-

Tuesday, October 11, 2005

೧೫ಕ್ಕೆ ಮದುವೆ ಓಕೆ. ೧೬ಕ್ಕೆ ಸೆಕ್ಸ್‌ ಓಕೆ. ೧೮ಕ್ಕೆ ಕಾಯಬೇಕೆ?

ಕೋರ್ಟಿನ ಪರ್ಮಿಶನ್‌ ಇರುವಾಗ ನಿನ್ನದೇನು ಅಡ್ಡಿ ಪ್ರಿಯೆ!
- ಲೈಲಾಗೆ ಮಜನೂ ಇಮೇಲ್‌

ಗ್ಲೋಬಲ್‌ ಫಂಡಾ ಹೇಗಿದೆ ನೋಡು. ವಾಷಿಂಗ್‌ಟನ್‌ನಲ್ಲಿ ೧೬ ವರ್ಷದ ಹುಡುಗಿ ಮದುವೆಯಾಗಲು ಪಾಲಕರ ಒಪ್ಪಿಗೆ ಬೇಕು. ಹಾಗೂ ಪಾಲಕರ ಒಪ್ಪಿಗೆಯಿಲ್ಲದೇ ಮದುವೆಯಾಗಲು ಕನಿಷ್ಠ ೧೮ ವರ್ಷ ತುಂಬಿರಬೇಕು. ಆದರೆ, ಲೋಕಲ್‌ ಫಂಡಾ ಉಲ್ಟಾ! ಭಾರತದಲ್ಲಿ ೧೬ ವರ್ಷದ ಹುಡುಗಿ ತನ್ನ ಸ್ವಂತ ನಿರ್ಧಾರದಿಂದ ಪಾಲಕರ ಒಪ್ಪಿಗೆಯಿಲ್ಲದೇ ಮದುವೆಯಾಗಬಹುದು. ಪಾಲಕರೇ ಮಗಳ ಮದುವೆ ಮಾಡುಮದಾದರೆ ಆಕೆಗೆ ೧೮ ವರ್ಷ ತುಂಬಬೇಕು. ಇದ್ಯಾವ ನ್ಯಾಯ?

ಡಿಯರ್‌ ಲೈಲಾ,
ನಿಸ್ವಾರ್ಥ ಪ್ರೀತಿಗಾಗಿ ನಾಮ ಜೀವತ್ಯಾಗ ಮಾಡಿ ಎಷ್ಟು ವರ್ಷಗಳಾದವಲ್ಲ? ಆದರೂ ನೋಡು ನಮ್ಮ ಪ್ರೀತಿ ಹೇಗೆ ಅಮರವಾಗಿದೆ. ಈ ಕ್ಷಣ ಕೂಡ ನಿನ್ನನ್ನು ನಾನು ಎಷ್ಟು ಪ್ರೀತಿಸುತ್ತೇನೆ ಎಂದರೆ ರೋಮಿಯೋ -ಜೂಲಿಯಟ್‌ ಕೂಡ ಅಸೂಯೆ ಪಡಬೇಕು. ಐಶ್‌ ಮತ್ತು ವಿವೇಕ್‌ ಬಗ್ಗೆ ಸಲ್ಮಾನ್‌ ಅಸೂಯೆ ಪಡುಮದಿಲ್ಲವೇ ಹಾಗೆ!

ಒಮ್ಮೊಮ್ಮೆ ಅನಿಸುತ್ತದೆ... ನಮಗೆಲ್ಲ ಮದುವೆಯಾಗದಿರುಮದೇ ಒಳ್ಳೆಯದಾಯಿತು. ನಾಮ ಅಮರ ಪ್ರೇಮಿಗಳಾಗಿಯಾದರೂ ಉಳಿದೆಮ. ನಮಗೂ ಮದುವೆಯಾಗಿದ್ದರೆ ನಮ್ಮ ಪ್ರೀತಿ ಚಿರಾಯುವಾಗುತ್ತಿರಲಿಲ್ಲವೋ ಏನೋ! ಬಹುತೇಕ ಗಂಡ ಹೆಂಡಿರಂತೆ ನಾವೂ ಜಗಳವಾಡುತ್ತಿದ್ದೆವೋ ಏನೋ! ನಮ್ಮದೂ ಡೈವೋರ್ಸ್‌ ಆಗಿಬಿಡುತ್ತಿತ್ತೋ ಏನೋ!

ಇಷ್ಟಕ್ಕೂ ಭೂಮಿಯಲ್ಲಿ ಕೋರ್ಟುಗಳು ಇರುವವರೆಗೂ ಡೈವೋರ್ಸ್‌ಗಳು ತಪ್ಪಿದ್ದಲ್ಲ. ಈತ್ತೀಚೆಗಂತೂ ಮದುವೆಗಳಿಗಿಂತ ಡೈವೋರ್ಸ್‌ಗಳೇ ಹೆಚ್ಚಾಗಿರುವಂತೆ ತೋರುತ್ತದೆ. ಅದಕ್ಕೇ ಯಾರೋ ತಮಾಷೆ ಮಾಡುತ್ತಿದ್ದರು. ಸ್ವರ್ಗದಲ್ಲಿ ಮದುವೆಯಾಗುತ್ತದೆ. ನರಕದಲ್ಲಿ ದಾಂಪತ್ಯ ಸಾಗುತ್ತದೆ. ಕೋರ್ಟುಗಳಲ್ಲಿ ಪರ್ಯವಸಾನವಾಗುತ್ತದೆ ಅಂತ.
ಪ್ರಿಯ ಲೈಲಾ, ಇಲ್ಲೊಬ್ಬಳು ಬಾಲೆಯ ಮದುವೆಗೆ ಕೋರ್ಟೇ ಬೆಂಬಲ ನೀಡಿದ ಕಥೆ ಕೇಳು ಗೆಳತಿ.

ಆಕೆಗೆ ಇನ್ನೂ ೧೬ ವರ್ಷ. ಆತನಿಗೆ ೨೧ರ ಪ್ರಾಯ. ನನ್ನ ನಿನ್ನಂತೆ ಅವರಿಗೂ ಸ್ಕೂಲಿನಲ್ಲಿ ಪ್ರೇಮಾಂಕುರ. ನನ್ನ-ನಿನ್ನಪ್ಪನಂತೆ ಇವರ ಪ್ರೇಮಕ್ಕೂ ಪಾಲಕರ ಅಡ್ಡಗಾಲು. ಹುಡುಗಿ ನಿನ್ನಂತೆ ಪುಕ್ಕಲಲ್ಲ. ಪ್ರಿಯಕರನೊಡನೆ ಓಡಿ ಹೋಗಿ ಮದುವೆಯಾದಳು. ಆದರೆ, ಕಾನೂನು ಪ್ರಕಾರ ಆಕೆಗಿನ್ನೂ ಮದುವೆಯ ವಯಸ್ಸಾಗಿಲ್ಲ. ೧೮ ವರ್ಷವಾದರೆ ಮಾತ್ರ ಆಕೆ ಮದುವೆಗೆ ಪ್ರಾಪ್ತವಯಸ್ಕಳು ಅಂತ ’ಹಿಂದೂ ವಿವಾಹ ಕಾಯ್ದೆ -೧೯೫೫’ ಸ್ಪಷ್ಟವಾಗಿ ತಿಳಿಸುತ್ತದೆ. ಸರಿ, ಹುಡುಗಿಯ ಅಪ್ಪ ಈ ಎಳೆ ದಂಪತಿಗಳನ್ನು ದೆಹಲಿ ಹೈಕೋರ್ಟಿಗೆ ಎಳೆದರು. ಹುಡುಗಿ ಇನ್ನೂ ಅಪ್ರಾಪ್ತಳು. ಆದ್ದರಿಂದ ಮದುವೆಯನ್ನು ಕ್ಯಾನ್ಸಲ್‌ ಮಾಡಿಸಿ ಕೊಡಿ ಎಂದು ನ್ಯಾಯಾಧೀಶರನ್ನು ಕೋರಿದರು. ಮೊಕದ್ದಮೆ ತಿಂಗಳಾನುಗಟ್ಟಲೆ ನಡೆಯಿತು. ನ್ಯಾಯಾಧೀಶರು ಏನು ತೀರ್ಪು ಕೊಟ್ಟರು ಗೊತ್ತಾ?

ಈ ಮದುವೆ ಕಾನೂನು ಬಾಹಿರ ಅಲ್ಲ. ಯಾಕೆಂದರೆ ಹುಡುಗಿ ತನ್ನ ’ವಿವೇಚನಾ ಕೋಟಾದಲ್ಲಿ’ ಮದುವೆಯಾಗಿದ್ದಾಳೆ! ಯಾವ ಹುಡುಗಿ ಸ್ವಂತ ವಿವೇಚನೆಯ ವಯಸ್ಸನ್ನು ತಲುಪುತ್ತಾಳೋ ಆಕೆ ತನ್ನ ನಿರ್ಧಾರದ ಪ್ರಕಾರ ಮದುವೆಯಾಗಬಹುದು. ಭಾರತದಲ್ಲಿ ೧೫ನೇ ವಯಸ್ಸಿಗೆ ಹುಡುಗಿಯರು ಸ್ವಂತ ವಿವೇಚನೆಯುಳ್ಳವರಾಗುತ್ತಾರೆ. ಆದ್ದರಿಂದ ಆಕೆ ಗಂಡನೊಂದಿಗೆ ಇರಬಹುದು ಅಂತ ದೆಹಲಿ ಹೈಕೋರ್ಟು ನವದಂಪತಿಗಳ ಪರ ತೀರ್ಮಾನ ಪ್ರಕಟಿಸಿತು.

ಇದೂ ಒಂದು ವಿಚಿತ್ರವೇ! ೧೫ರ ವಯಸ್ಸಿಗಷ್ಟೇ ಏನು... ನಿನ್ನಂಥ ಹುಡುಗಿಯರಿಗೆ ಎಂದಿಗಾದರೂ ವಿವೇಚನೆ ಮೂಡುತ್ತದೆಯೇ? ವಿವೇಚನೆ ಇದ್ದರೆ ಪ್ರೀತಿಗೆ ಸಿಲುಕುತ್ತಾರಾ? ಮದುವೆ ಆಗುತ್ತಾರಾ? ಏನೋ... ಹೈಕೋರ್ಟು ಅದರ ವಿವೇಚನೆಗೆ ಬಂದದ್ದನ್ನು ಹೇಳಿದೆ. ಆದರೆ, ಹುಡುಗರ ವಿಷಯದಲ್ಲಿ ಕೋರ್ಟು ಯಾಕೆ ಅದನ್ನೂ ಹೇಳಿಲ್ಲ? ಹುಡುಗರಿಗೆ ಯಾವ ವಯಸ್ಸಿನಲ್ಲೂ ವಿವೇಚನೆ ಬರುಮದೇ ಇಲ್ಲವೇ?

ಇಲ್ಲಿಯವರೆಗೆ ೧೮ ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರ ಮದುವೆ ಕಾನೂನುಬಾಹಿರ ಎನ್ನುತ್ತಿದ್ದ ಕಾನೂನು ಈಗ ದಿಢೀರ್‌ ಆಗಿ ೧೫ರ ಹೊಸ ರಾಗ ಹಾಡಿದೆ.

ಹಾಗೆ ನೋಡಿದರೆ, ಇದು ಹೊಸ ರಾಗವೇನೂ ಅಲ್ಲ ಅಂತ ಕೋರ್ಟು ಹೇಳಿದೆ. ಕೆಲಮ ವರ್ಷಗಳ ಹಿಂದೆಯೇ ಸುಪ್ರೀಂ ಕೋರ್ಟು, ಹಿಮಾಚಲ ಪ್ರದೇಶದ ಹೈಕೋರ್ಟು ಮತ್ತು ಚೆನ್ನೈ ಕೋರ್ಟುಗಳು ಇದೇ ರೀತಿಯ ತೀರ್ಪು ನೀಡಿವೆಯಂತೆ.

ಈ ತೀರ್ಪಿನ ವಿರುದ್ಧ ರೇಣುಕಾ ಚೌಧರಿ, ಬಂದಾ ಕಾರಟ್‌ ಮುಂತಾದ ಮಹಿಳಾ ಸುಧಾರಕ ಮಹಿಳೆಯರೆಲ್ಲ ಧ್ವನಿ ಎತ್ತಿದ್ದಾರೆ. ಈ ತೀರ್ಪಿನಿಂದ ಬಾಲ್ಯ ವಿವಾಹ ಪದ್ಧತಿಗೆ ಕುಮ್ಮಕ್ಕು ನೀಡಿದಂತಾಗುತ್ತದೆ. ಒಂದು ವೇಳೆ ೧೫ಕ್ಕೆ ಮದುವೆಯ ವಿವೇಚನೆಗೆ ಕಾನೂನು ಅಸ್ತು ಅನ್ನುಮದಾದರೆ ಮಹಿಳೆಯರಿಗೆ ೧೫ಕ್ಕೆ ಮತದಾನದ ಹಕ್ಕು , ಡ್ರೆೃವಿಂಗ್‌ ಲೈಸನ್ಸ್‌ ನೀಡಬೇಕು ಎಂದೆಲ್ಲಾ ಹುಯಿಲೆಬ್ಬಿಸಿದ್ದಾರೆ. ಅದೆಲ್ಲ ಹಾಗಿರಲಿ...

ಗ್ಲೋಬಲ್‌ ಫಂಡಾ ಹೇಗಿದೆ ನೋಡು. ವಾಷಿಂಗ್‌ಟನ್‌ನಲ್ಲಿ ೧೬ ವರ್ಷದ ಹುಡುಗಿ ಮದುವೆಯಾಗಲು ಪಾಲಕರ ಒಪ್ಪಿಗೆ ಬೇಕು. ಆದರೆ, ಪಾಲಕರ ಒಪ್ಪಿಗೆಯಿಲ್ಲದೇ ಮದುವೆಯಾಗಲು ಕನಿಷ್ಠ ೧೮ ವರ್ಷ ತುಂಬಿರಬೇಕು. ಆದರೆ, ಲೋಕಲ್‌ ಫಂಡಾ ಉಲ್ಟಾ! ಭಾರತದಲ್ಲಿ ೧೬ ವರ್ಷದ ಹುಡುಗಿ ತನ್ನ ಸ್ವಂತ ನಿರ್ಧಾರದಿಂದ ಪಾಲಕರ ಒಪ್ಪಿಗೆಯಿಲ್ಲದೇ ಮದುವೆಯಾಗಬಹುದು. ಪಾಲಕರು ಮಗಳ ಮದುವೆ ಮಾಡುಮದಾದರೆ ಆಕೆಗೆ ೧೮ ವರ್ಷ ತುಂಬಬೇಕು. ಇದ್ಯಾವ ನ್ಯಾಯ?

ಈ ನಡುವೆ ಪ್ರಾಪ್ತ ಮತ್ತು ಅಪ್ರಾಪ್ತ ವಯಸ್ಸಿನ ಕುರಿತು ಗೊಂದಲ ಉಂಟಾಗಿದೆ. ಇಂಡಿಯನ್‌ ಮೆಜಾರಿಟಿ ಆಕ್ಟ್‌ ೧೮೭೫ ಪ್ರಕಾರ ೧೮ಕ್ಕಿಂತ ಕಡಿಮೆ ವಯಸ್ಸಿನ ಹುಡುಗ ಅಥವಾ ಹುಡುಗಿಯರು ಅಪ್ರಾಪ್ತ ವಯಸ್ಕರು (Minors) ಆದರೆ, ಬಾಂಬೇ ಪ್ರಿವೆಂನ್‌ಶನ್‌ ಆಫ್‌ ಹಿಂದು ಬೈಗಮಸ್‌ ಮ್ಯಾರಿಯೇಜ್‌ ಆಕ್ಟ್‌ ೧೯೪೬ರ ಪ್ರಕಾರ ೧೬ ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಅಪ್ರಾಪ್ತರು. ಇದು ಹೇಗೆ ಸಾಧ್ಯ!

ಲೈಲಾ ಓ ಲೈಲಾ ಲೈಲಾ...
ಈ ಕಾನೂನು ಎಷ್ಟು ಮಜವಾಗಿದೆ ಅಂತೀಯಾ? ಇಲ್ಲಿವೆ ಕೆಲಮ ಸ್ಯಾಂಪಲ್‌ ನೋಡು.
ಎಳೆಯ ವಯಸ್ಸಿಗೇ ಪತ್ನಿಯಾಗುವ ಹಕ್ಕನ್ನುಇಂಡಿಯನ್‌ ಪೀನಲ್‌ ಕೋಡ್‌ನ ೩೭೫ನೇ ಸೆಕ್ಷನ್‌ ಕಿತ್ತುಕೊಳ್ಳುಮದಿಲ್ಲ. ಆದರೆ, ಸೆಕ್ಸ್‌ ವಿಚಾರದಲ್ಲಿ ಕಟ್ಟಳೆಯನ್ನು ಹೇರುತ್ತದೆ. ಈ ಸೆಕ್ಸ್‌-ನ್‌ ಪ್ರಕಾರ ಹೆಂಡತಿಗೆ ೧೫ ವರ್ಷಕ್ಕಿಂತ ಕಡಿಮೆ ವಯಸ್ಸಾಗಿದ್ದಲ್ಲಿ ಆಕೆ ಸಮ್ಮತಿಸಿದರೂ ಕೂಡ ಗಂಡ ಆಕೆಯೊಂದಿಗೆ ಸೆಕ್ಸಿಗೆ ಇಳಿಯುವಂತಿಲ್ಲ. ಹಾಗೇನಾದರೂ ಮಾಡಿದರೆ ಅದು ರೇಪ್‌ ಆಗುತ್ತದೆ. ಅಂದರೆ ಎಳೆಯ ವಯಸ್ಸಿಗೆ ಮದುವೆಯಾದರೂ ಪ್ರಸ್ತ ಮಾಡಬಾರದು ಎಂದರ್ಥ!

ಆದರೆ ಮಣಿಪುರದಲ್ಲಿ ಈ ಕಾನೂನನ್ನು ಸಡಿಲಗೊಳಿಸಲಾಗಿದ್ದು ಅಲ್ಲಿ ೧೩ನೇ ವಯಸ್ಸಿಗೇ ಪತ್ನಿಯೊಂದಿಗೆ ಸೆಕ್ಸ್‌ ಸಾಧ್ಯ.

ಅರೆ ಓ ಲೈಲಾ...
ಮದುವೆಯಾಗದಿದ್ದರೂ ೧೬ ವರ್ಷದ ಬಾಲಕಿ ಕಾನೂನು ಪ್ರಕಾರ ಲೈಂಗಿಕ ಕ್ರಿಯೆಗೆ ತಾನು ಇಚ್ಛಿಸಿದ ವ್ಯಕ್ತಿಗೆ ಸಮ್ಮತಿ ನೀಡಬಹುದು. ಐಪಿಸಿ ೩೭೫ರ ಪ್ರಕಾರ ೧೬ಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯ ಜೊತೆ, ಆಕೆ ಸಮ್ಮತಿಯಿದ್ದರೂ, ಲೈಂಗಿಕ ಕ್ರಿಯೆ ನಡೆಸುಮದು ಅಪರಾಧ. ಆದರೆ ಹುಡುಗರು ೨೧ ವರ್ಷಕ್ಕಿಂತ ಮೊದಲು ಇಂತಹ ಯಾಮದೇ ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳುಮದು ಅಪರಾಧ ಅಂತ ಕಾಣುತ್ತೆ!

ಈಗ ಹೇಳು ಪ್ರಿಯೆ... ಕಾನೂನು ಪ್ರಕಾರ ೧೫ಕ್ಕೆ ಮದುವೆ ಓಕೆ. ೧೬ಕ್ಕೆ ಸೆಕ್ಸಿಗೂ ಓಕೆ. ಹಾಗಾದರೆ ೧೮ ವರ್ಷಕ್ಕೆ ನೀನು ಪ್ರಾಪ್ತ ವಯಸ್ಕಳಾಗುವವರೆಗೂ ಕಾಯಬೇಕು ಯಾಕೆ? ಛೆ... ಈ ಕಾನೂನುಗಳೆಲ್ಲ ಬರೀ ಶಬ್ದಗಳ ವಾದ-ವಿವಾದ, ಬುದ್ಧಿವಂತಿಕೆಯ ಘರ್ಷಣೆ. ಲೈ...ಲಾ... ಲಾ is an ass! ಕಾನೂನು ಒಂದು ಕತ್ತೆ! ಆದರೆ, ಪ್ರೀತಿಗೆ ಕಾನೂನು ಕಟ್ಟಳೆಯಿಲ್ಲ. ವಯಸ್ಸಿನ ಹಂಗಂತೂ ಇಲ್ಲವೇ ಇಲ್ಲ. All is fair in love and war. ಹಾಗಂತ ಅಲಿಖಿತ ಶಾಸನವಿದೆ ನಿನಗೆ ಗೊತ್ತಲ್ಲ ಅಷ್ಟು ಸಾಕು. ನಾಮ ಮದುವೆಯ ಗೊಂದಲಕ್ಕೆ ಸಿಲುಕಿಕೊಳ್ಳುಮದು ಬೇಡ. ಪ್ರೇಮಿಗಳಾಗೇ ಅಮರವಾಗಿರೋಣ.

ಇಂತಿ ನಿನ್ನ
ಮಜನೂ

Kannada Prabha Issue Dated - October 10, 2005
Marriage at 15: Ok, Sex at 16: Ok. Why wait till 18?
On the Minimum Age for Marriage and Sex

-

Tuesday, October 04, 2005

ಇನ್ನಷ್ಟು ಗಾಂಧಿ ಪ್ರತಿಮೆಗಳಿಗೆ ಆಗ್ರಹಿಸಿ ಧರಣಿ!

ಈ ದೇಶದಲ್ಲಿ ಗಾಂಧಿ ಜಯಂತಿ ಬಿಟ್ಟರೆ ನಂತರದ ಅತ್ಯಂತ ಫೇಮಸ್‌ ಜಯಂತಿ ಅಂಬೇಡ್ಕರ್‌ ಜಯಂತಿ ಮಾತ್ರ. ನೆಹರೂಗೆ ಅಂತ ಒಂದು ರಸ್ತೆಯಿಲ್ಲ. ಅಂಥ ರಸ್ತೆ ಇದ್ದರೂ ಗಾಂಧಿ ರಸ್ತೆಯಷ್ಟು ಫೇಮಸ್ಸಂತೂ ಅಲ್ಲವೇ ಅಲ್ಲ. ಶಿವಲಿಂಗ ಹಾಗೂ ಗಣೇಶ ವಿಗ್ರಹಗಳನ್ನು ಬಿಟ್ಟರೆ ಅತ್ಯಂತ ಹೆಚ್ಚು ಪ್ರತಿಮೆಗಳಿರುಮದು ನಿನ್ನದೆ! ಆದರೂ ಭಾರತಕ್ಕೆ ಇನ್ನಷ್ಟು ಗಾಂಧಿ ಪ್ರತಿಮೆಗಳು ಬೇಕು. ಯಾಕೆ ಗೊತ್ತಾ?

ಮುಷ್ಕರ್‌ ದಾಸ್‌ ಧರಣ್‌ಚಂದ್‌ ಗಾಂಧಿಯವರು ಮೋಹನದಾಸ್‌ ಕರಮಚಂದ್‌ ಗಾಂಧಿಗೆ ಬರೆದ ಈಮೇಲ್‌

ಪ್ರೀತಿಯ ಗಾಂಧಿ ತಾತಾ,
ನಿನ್ನೆ ತಾನೇ ನಿನ್ನ ಹುಟ್ಟುಹಬ್ಬ ಆಚರಿಸಿ ಮುಗಿಸಿದ್ದೇವೆ. ನೀನು ಕಲಿಸಿದ ಮೌಲ್ಯಗಳ ಪ್ರಕಾರವೇ ನಿನ್ನ ಬರ್ತ್‌ಡೇಯನ್ನು ಸರಳವಾಗಿ ಆಚರಿಸಿದ್ದೇವೆ. ಯಾರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದರೂ ನಿನ್ನ ಬರ್ತ್‌ಡೇಯನ್ನು ಮಾತ್ರ ವಿಜೃಂಭಣೆಯಿಂದ ನಡೆಸಿ ನಿನಗೆ ಅವಮಾನ ಮಾಡುಮದಿಲ್ಲ!

ಅದ್ಧೂರಿ ಬರ್ತ್‌ಡೇಗಳನ್ನು ಏನಿದ್ದರೂ, ಈಗಿನ ರಾಜಕಾರಣಿಗಳಿಗೆ ಮತ್ತು ಮರಿ ಪುಡಾರಿಗಳಿಗೇ ಮೀಸಲಿಟ್ಟಿದ್ದೇವೆ. ಅವರ ಬರ್ತ್‌ಡೇ, ಒಂಥರಾ ದರಿದ್ರನಾರಾಯಣ ಸಮಾವೇಶದಷ್ಟು ದೊಡ್ಡದೂ ಅಹಿಂದಾ ಸಮಾವೇಶದಷ್ಟೂ ವಿಶಾಲವೂ ಆಗಿರುತ್ತದೆ. ರಸ್ತೆಗಳ ತುಂಬಾ ಅವರ ಕಟೌಟು, ಊರತುಂಬಾ ಶುಭಾಶಯ ಕೋರುವ ಪೋಸ್ಟರುಗಳು, ಬ್ಯಾನರುಗಳು, ಪತ್ರಿಕೆಗಳಲ್ಲಿ ಜಾಹೀರಾತುಗಳು, ದೊಡ್ಡ ಸಾರ್ವಜನಿಕ ಸಮಾರಂಭ, ಕ್ವಿಂಟಾಲ್‌ ಭಾರದ ಹೂವಿನ ಹಾರ, ಕೇಕ್‌ ಕಟಿಂಗ್‌, ಗಿಫ್ಟ್‌ ಗಿವಿಂಗ್‌, ಹೊಗಳಿ ಹೊಗಳಿ, ಭಾಷಣಗಳು, ಓಟು-ಸೀಟಿಗೆ ಪೀಠಿಕೆಗಳು... ಆಸ್ಪತ್ರೆಯಲ್ಲಿ ಹಾಲು, ಬ್ರೆಡ್ಡು, ಬನ್ನು, ಹಣ್ಣು ವಿತರಣೆ... ವಿಶೇಷ ಅತಿಥಿಗಳಿಗೆ ಅಬಕಾರಿ ಸಚಿವ ಚೆನ್ನಿಗಪ್ಪ ಸರ್ಟಿಫೈಡ್‌ ಕ್ವಾಲಿಟಿ ಡ್ರಿಂಕ್‌... ಹೀಗೆ ನಡೆಯುತ್ತೆ ಅವರ ಬರ್ತ್‌ಡೇ ರ್ಯಾಲಿ.

ಆದರೆ, ನಿನ್ನ ಹುಟ್ಟುಹಬ್ಬ ವೆರಿ ಸಿಂಪಲ್‌. ನಿನ್ನ ಪ್ರತಿಮೆ ಅಥವಾ ಫೋಟೊ ಮುಂದೆ ಕೆಲವೇ ಕೆಲಮ ವೃದ್ಧರು ಸೇರಿ, ರಘುಪತಿ ರಾಘವ ರಾಜಾರಾಂ, ಪತಿತ ಪಾವನ ಸೀತಾರಾಂ ಅಂತ... ನಾಕು ಸಾಲು ಗುನುಗಿ ಮನೆಗೆ ಹೋಗುತ್ತಾರೆ. ಇಷ್ಟೇ ಸಿಂಪಲ್‌ ಸಾಕಾ. ಇಲ್ಲಾ ಇನ್ನೂ ಸಿಂಪಲ್‌ ಬೇಕಾ?

ಅಂದಹಾಗೆ, ಈ ದೇಶದಲ್ಲಿ ಗಾಂಧಿ ಜಯಂತಿ ಬಿಟ್ಟರೆ ನಂತರದ ಅತ್ಯಂತ ಫೇಮಸ್‌ ಜಯಂತಿ ಅಂಬೇಡ್ಕರ್‌ ಜಯಂತಿ ಮಾತ್ರ. ಚಾಚಾ ನೆಹರೂ ದಿನವನ್ನು ಮಕ್ಕಳ ದಿನಾಚರಣೆ ಅಂತ ಕರೆದಿರುಮದರಿಂದ ನೆಹರೂ ಜಯಂತಿ ಅಂತ ಯಾವ ಕ್ಯಾಲೆಂಡರ್‌ನಲ್ಲೂ ನಾಮ ಪ್ರಕಟಿಸುಮದಿಲ್ಲ. ಹಾಗಾಗಿ, ನೀನು ನಂಬಿದರೆ ನಂಬು ಬಿಟ್ಟರೆ ಬಿಡು... ನೆಹರೂ ಚಾಚಾನನ್ನು ಹೆಚ್ಚು ಕಡಿಮೆ ನಾಮ ಮರೆತೇ ಬಿಡುತ್ತಿದ್ದೇವೆ.

ನಿನ್ನನ್ನು ಮಾತ್ರ ನಾಮ ಮರೆಯುವ ಹಾಗೇ ಇಲ್ಲ. ಏಕೆಂದರೆ, ನೀನು ಮಹಾತ್ಮ. ಎಷ್ಟು ಮಹಾತ್ಮ ಎಂದರೆ, ನೆಹರೂ ಈ ದೇಶವನ್ನು ಅಷ್ಟು ವರ್ಷ ಆಳಿದರೂ, ’ನೆಹರೂ ವಂಶ’ಕ್ಕಿಂತ ’ಗಾಂಧಿ ಸಂತಾನ’ವೇ ದೇಶಾದ್ಯಂತ ಫೇಮಸ್ಸು. ಇಂದಿರಾಗಾಂಧಿ, ರಾಜೀವ ಗಾಂಧಿ ಈಗಲೂ ದೇಶಕ್ಕೆ ನಾಯಕರು. ಅವರ ಕೃಪಾಕಟಾಕ್ಷದಲ್ಲೇ ಈ ದೇಶದ ಸೊಸೆ ಸೋನಿಯಾ ಗಾಂಧಿ, ರಾಹುಲ್‌ಗಾಂಧಿ, ಪ್ರಿಯಾಂಕಾ ಗಾಂಧಿ ದೇಶವನ್ನು ಮುನ್ನಡೆಸುತ್ತಿದ್ದಾರೆ. ಗಾಂಧಿ ಹೆಸರನ್ನು ಚಿರಾಯುಗೊಳಿಸುತ್ತಿದ್ದಾರೆ. ಈ ದಿಸೆಯಲ್ಲಿ ಸಂಜಯಗಾಂಧಿ ಪತ್ನಿ ಮೇನಕಾ ಗಾಂಧಿ ಅಳಿಲು ಸೇವೆ ಸಲ್ಲಿಸಿದರೆ, ಮೇನಕಾ ಪುತ್ರ ವರುಣ್‌ ಗಾಂಧಿ ಇದೀಗ ತಾನೇ ರಂಗಕ್ಕೆ ಇಳಿದಿದ್ದಾರೆ. ಈ ನಡುವೆ ನಿನ್ನ ಸ್ವಂತ ಮಕ್ಕಳಾದ ಹರಿಲಾಲ್‌ ಗಾಂಧಿ, ಮಣಿಲಾಲ್‌ ಗಾಂಧಿ, ರಾಮದಾಸ್‌ ಗಾಂಧಿ ಮತ್ತು ದೇವದಾಸ್‌ ಗಾಂಧಿ ಮಾತ್ರ ನಾಪತ್ತೆ... ಈಗಲೂ ಜೀವಂತ ಇರುವ ನಿನ್ನ ಮೊಮ್ಮೊಗ ವರುಣ್‌ ಗಾಂಧಿ ಎಂದರೆ ಯಾರಾತ ಅಂತ ಕೇಳುತ್ತಾರೆ ಜನ. ಹಾಗಾಗಿ ನಿನ್ನ ಮನೆಮಂದಿಗಿಂತ ಸೋನಿಯಾ ಗಾಂಧಿ ಎಷ್ಟೋ ವಾಸಿ!

ದೇಶದಲ್ಲಿ ಜನರು ಈಗಲೂ ನಿನ್ನ ದಾರಿಯಲ್ಲಿ ತಪ್ಪದೇ ನಡೆಯುತ್ತಿದ್ದಾರೆ. ದೇಶದ ಯಾಮದೇ ಪಟ್ಟಣವನ್ನು ಬೇಕಾದರೂ ನೋಡು... ಕನಿಷ್ಠ ಒಂದಾದರೂ ಮಹಾತ್ಮಾ ಗಾಂಧಿ ರಸ್ತೆಯಿರುತ್ತದೆ. ಅಲ್ಲಿ ಜನ ಬಹಳ ಬ್ಯೂಸಿಯಾಗಿ ನಡೆದಾಡುತ್ತಿರುತ್ತಾರೆ! ಅದನ್ನು ನೋಡಿದಾಗಲೆಲ್ಲ, ಜನ ಈಗಲೂ ಗಾಂಧಿ ಮಾರ್ಗ ಬಿಟ್ಟಿಲ್ಲ ಅಂತ ನಿನ್ನ ಹೃದಯ ತುಂಬಿಬರುತ್ತಿರಬೇಕಲ್ಲವೇ? ಇಷ್ಟಕ್ಕೂ ನೆಹರು ರಸ್ತೆ ಅಂತ ನೀನು ಎಲ್ಲಾದರೂ ಕೇಳಿದ್ದು ನೆನಪಿದೆಯೇ? ಅಂಥ ರಸ್ತೆ ಇದ್ದರೂ ಎಲ್ಲೋ ಇದ್ದಿರಬಹುದು. ಆದರೆ ಆ ರಸ್ತೆ ಗಾಂಧಿ ರಸ್ತೆಯಷ್ಟು ಫೇಮಸ್ಸಂತೂ ಅಲ್ಲವೇ ಅಲ್ಲ. ಇದು ವಿಚಿತ್ರವಾದರೂ ಸತ್ಯ.

ಅಷ್ಟೇ ಅಲ್ಲ, ಭಾರತದಲ್ಲಿ ಶಿವಲಿಂಗ ಹಾಗೂ ಗಣೇಶ ವಿಗ್ರಹಗಳನ್ನು ಬಿಟ್ಟರೆ ಅತ್ಯಂತ ಹೆಚ್ಚು ಪ್ರತಿಮೆಗಳಿರುಮದು ನಿನ್ನದೆ! ಹಳ್ಳಿ ಹಳ್ಳಿ, ಪೇಟೆ ಪಟ್ಟಣ, ನಗರ ಮಹಾನಗರಗಳನ್ನು ನೋಡು... ಕನಿಷ್ಠ ಒಂದಾದರೂ ಗಾಂಧಿ ಪ್ರತಿಮೆ ಇದ್ದೇ ಇರುತ್ತದೆ. ಪ್ರತಿ ಊರಿಗೆ ಅಂಬೇಡ್ಕರ್‌ ಬಡಾವಣೆಯ ಕಿರುತಿ ಹೇಗೋ ನಿನ್ನ ಮೂರುತಿ ಹಾಗೆ! ಒಂದು ಗಾಂಧಿ ಪಾರ್ಕು, ಒಂದು ಗಾಂಧಿ ಸರ್ಕಲ್ಲು, ಒಂದು ಗಾಂಧಿ ಭವನ, ಒಂದು ಗಾಂಧಿ ರಸ್ತೆ ಮತ್ತು ಒಂದು ಗಾಂಧಿ ಪ್ರತಿಮೆ ಪ್ರತಿ ಊರಿಗೂ ಕಡ್ಡಾಯ. ಊರಿನಲ್ಲಿ ಕುಡಿಯಲು ನೀರಿಲ್ಲದಿದ್ದರೂ, ಓಡಾಡಲು ರಸ್ತೆಯಿಲ್ಲದಿದ್ದರೂ ಇವೆಲ್ಲ ಇದ್ದೇ ಇರುವಂತೆ ನಮ್ಮ ಘನ ಸರ್ಕಾರ ವ್ಯವಸ್ಥೆ ಮಾಡಿದೆ.

ದೇಶದಲ್ಲಿ ಬೇರೆ ಬೇರೆ ನಾಯಕರ ಎಷ್ಟೋ ಪ್ರತಿಮೆಗಳಿವೆ. ಆದರೆ ಅವೆಲ್ಲಕ್ಕಿಂತ ಹೆಚ್ಚಿನ ಡಿಮಾಂಡು ನಿನ್ನ ಪ್ರತಿಮೆಗಳಿಗೆ ಇದೆ. ನೀನು ಕಲಿಸಿಕೊಟ್ಟ ಸತ್ಯಾಗ್ರಹ, ಧರಣಿ, ಮುಷ್ಕರ, ಚಳವಳಿ ನಡೆಸಲು ಗಾಂಧಿ ಪ್ರತಿಮೆ ಬೇಕೇ ಬೇಕಲ್ಲ. ಹಾಗಾಗಿ ನಿನ್ನ ಪ್ರತಿಮೆ ಧರಣಿ, ಸತ್ಯಾಗ್ರಹದ ಹೆಗ್ಗುರುತೇ ಆಗಿದೆ!

ಗಾಂಧಿ ತಾತಾ,
ನೀನೂ ಗಮನಿಸಿರಬಹುದು. ಕೆಲವರು ದಾರಿಯಲ್ಲಿ ಹೋಗುವಾಗ ಅಕಸ್ಮಾತ್‌ ದೇವಾಲಯ ಕಂಡರೆ, ಒಂದು ಕ್ಷಣ ನಿಂತು ನಮಸ್ಕಾರ ಮಾಡಿ ಮುಂದೆ ಹೋಗುತ್ತಾರಲ್ಲ. ಅದೇ ರೀತಿ, ಕೆಲವರು ನಿನ್ನ ಪ್ರತಿಮೆ ಕಂಡರೆ ಸಾಕು ಒಂದು ಕ್ಷಣ ಧರಣಿ ಕುಳಿತು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಮುನ್ನಡೆಯುತ್ತಾರೆ! ಕೆಲವರು ಅಷ್ಟರ ಮಟ್ಟಿಗೆ ನೀನು ಕಲಿಸಿದ ಸತ್ಯಾಗ್ರಹ ಪಾಠವನ್ನು ಪಾಲಿಸುತ್ತಾರೆ.

ಧರಣಿ ಸತ್ಯಾಗ್ರಹ ತತ್ವವನ್ನು ಜನರು ಎಷ್ಟು ಪಾಲಿಸುತ್ತಾರೆ ಅಂದರೆ, ಮಾತೆತ್ತಿದರೆ ಧರಣಿ ಎನ್ನುತ್ತಾ ನಿನ್ನ ಪ್ರತಿಮೆ ಹುಡುಕಿಕೊಂಡು ಹೋಗುತ್ತಿದ್ದಾರೆ. ಗಂಡನ ವಿರುದ್ಧ ಹೆಂಡತಿಯೇ ಧರಣಿ ಕುಳಿತ ಸುದ್ದಿ ಪತ್ರಿಕೆಯಲ್ಲಿ ಬಂದಿತ್ತು. ಗಾಂಧಿ ಪ್ರತಿಮೆಯೆದುರು ಆಮರಣಾಂತ ಉಪವಾಸ, ಗಾಂಧಿ ಪ್ರತಿಮೆಯಿಂದ ತಾಲೂಕಾ ಕಚೇರಿವರೆಗೆ ಮೆರವಣಿಗೆ ಇತ್ಯಾದಿ ಸುದ್ದಿಗಳನ್ನು ಪ್ರತಿದಿನವೂ ನಾಮ ಓದುತ್ತಲೇ ಇರುತ್ತೇವೆ.

ಈಗೀಗ ಒಂದೇ ದಿನ ೬-೮ ಧರಣಿ ಸತ್ಯಾಗ್ರಹಗಳು ನಡೆಯುವ ಕಾಲ ಬಂದಿದೆ. ಒಂದು ಗುಂಪು ಗಾಂಧಿ ಪ್ರತಿಮೆಯ ಎದರೂ, ಇನ್ನೊಂದು ಗುಂಪು ಗಾಂಧಿ ಮೈದಾನದಲ್ಲೂ, ಮತ್ತೊಂದು ಗುಂಪು ಗಾಂಧಿ ಪಾರ್ಕಿನಲ್ಲೂ... ಹೀಗೆ ವಿವಿಧ ಗಾಂಧಿ ಕ್ಷೇತ್ರಗಳನ್ನು ಆ ಗುಂಪುಗಳು ಪಾಲುಮಾಡಿಕೊಂಡಿವೆ. ಆದರೂ, ಇನ್ನಷ್ಟು ಧರಣಿ, ಸತ್ಯಾಗ್ರಹಕ್ಕೆ ಜಾಗ ಸಾಲುತ್ತಿಲ್ಲ. ಅದಕ್ಕೇ ಮತ್ತಷ್ಟು ಗಾಂಧಿ ಕ್ಷೇತ್ರಗಳನ್ನು ಸ್ಥಾಪಿಸಬೇಕಾಗಿದೆ. ಪಾರ್ಕು, ಭವನ, ಮೈದಾನ ನಿರ್ಮಾಣಮಾಡುಮದು ಕಷ್ಟದ ಕೆಲಸ. ಪ್ರತಿಮೆ ಸ್ಥಾಪಿಸುಮದು ಇದ್ದುದರಲ್ಲಿ ಸುಲಭ. ಹೀಗಾಗಿ ದೇಶದಲ್ಲಿ ಇನ್ನಷ್ಟು ಗಾಂಧಿಪ್ರತಿಮೆಗಳನ್ನಾದರೂ ಸರ್ಕಾರ ಪ್ರತಿಷ್ಠಾಪಸಲೇ ಬೇಕಾಗಿದೆ. ಆದ್ದರಿಂದ, ಆದಷ್ಟು ಬೇಗ ಹೆಚ್ಚಿನ ಗಾಂಧಿ ಪ್ರತಿಮೆಗಳನ್ನು ಸ್ಥಾಪಿಸುವಂತೆ ಸರ್ಕಾರವನ್ನು ಆಗ್ರಹಿಸಿ ನಾನು ಧರಣಿ ಕೂರಲು ತೀರ್ಮಾನಿಸಿದ್ದೇನೆ. ಇದಕ್ಕೆ ನಿನ್ನ ಆಶೀರ್ವಾದ ಇದೆ ಎಂದು ನಂಬಿದ್ದೇನೆ.

ಇಂತಿ ವಿಧೇಯ
ಮುಷ್ಕರದಾಸ್‌ ಧರಣ್‌ಚಂದ್‌ ಗಾಂಧಿ


Kannada Prabha Issue Dated - October 3, 2005
An Odd (not ode) to Mahatma Gandhi on his Jayanthi

-