Showing posts with label States Affair. Show all posts
Showing posts with label States Affair. Show all posts

Wednesday, April 15, 2009

ಚುನಾವಣಾ ಸಮೀಕ್ಷೆ ಎಷ್ಟು ಸತ್ಯ? - ಒಂದು ಖಾಸ್ ಬಾತ್

ದೀಗ ಚುನಾವಣಾ ಸಮಯ ಎನ್ನುವುದಕ್ಕಿಂತಲೂ ಚುನಾವಣಾ ಸಮೀಕ್ಷೆಗಳ ಸಮಯ ಎಂದರೇ ಹೆಚ್ಚು ಸರಿ. ಎಲ್ಲಾ ಟೀವಿ ಚಾನಲ್ಲುಗಳೂ ಚುನಾವಣಾ ಸಮೀಕ್ಷೆ ನಡೆಸುತ್ತಿವೆ. ತೆರೆಯ ಮೇಲೆ ಗ್ರಾಫ್ ತೋರಿಸುವುದೂ, ಮೂರು ನಾಲ್ಕು ರಾಜಕಾರಣಿಗಳ ಜೊತೆ ಚರ್ಚೆ ನಡೆಸುವುದೂ ಮಾಮೂಲಿಯಾಗಿದೆ. ಆದರೆ, ದೊಡ್ಡ ವಿವಾದ ಮಾತ್ರ ಹಾಗೇ ಇದೆ. ಚುನಾವಣಾ ಸಮೀಕ್ಷೆಗಳು ಎಷ್ಟು ವಿಶ್ವಾಸಾರ್ಹ? ಹಿಂದಿನ ಚುನಾವಣಾ ಸಮೀಕ್ಷೆಗಳು ಹೇಳಿದ ಸೀಟುಗಳ ಸಂಖ್ಯೆಗಳೆಲ್ಲಾ ಸರಿಹೋಗಿಲ್ಲವಲ್ಲ? ಮಾಧ್ಯಮಗಳು ಇಂಥ ಬೋಗಸ್ ಪದ್ಧತಿಯನ್ನು ಬಳಸಿಕೊಳ್ಳಬೇಕೇ? ಮೂರು-ನಾಲ್ಕು ಚುನಾವಣಾ ಸಮೀಕ್ಷೆಯಲ್ಲಿ ಪಾಲ್ಗೊಂಡ ಅನುಭವದಲ್ಲಿ ನನ್ನ ಅಭಿಪ್ರಾಯವನ್ನು ಇಲ್ಲಿ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.

1. ಚುನಾವಣಾ ಪೂರ್ವ ಹಾಗೂ ಚುನಾವಣೋತ್ತರ ಸಮೀಕ್ಷೆಗಳು ಬೇಕೇ ಬೇಕು. (ಆದರೆ, Exit Poll - ಚುನಾವಣೋತ್ತರ ಸಮೀಕ್ಷೆಗಳ ಫಲಿತಾಂಶವನ್ನು ಮಾತ್ರ ಎಲ್ಲ ಹಂತದ ಮತದಾನ ಮುಗಿದ ನಂತರವೇ ಪ್ರಕಟಿಸಬೇಕು. ಅಭಿವೃದ್ಧಿಹೊಂದಿದ ದೇಶದಲ್ಲೂ ಇದೇ ವ್ಯವಸ್ಥೆಯಿದೆ. ಈ ವರ್ಷದಿಂದ ಭಾರತದಲ್ಲೂ ಈ ಷರತ್ತನ್ನು ಚುನಾವಣಾ ಆಯೋಗ ಜಾರಿಗೊಳಿಸಿದೆ.)

2. ಈ ಸಮೀಕ್ಷೆಗಳನ್ನು ರಾಜಕೀಯ ಪಕ್ಷಗಳು ಟೀಕಿಸುವುದು ಅಥವಾ ವಿರೋಧಿಸುವುದು ಸಹಜ. ಆದರೆ, ವಾಸ್ತವ ಏನೂ ಅಂದರೆ, ಚುನಾವಣೆಗೆ ಮೊದಲು ಬಹುತೇಕ ರಾಜಕೀಯ ಪಕ್ಷಗಳು ರಹಸ್ಯವಾಗಿ ತಮ್ಮದೇ ಸಮೀಕ್ಷೆ ನಡೆಸುತ್ತವೆ. ಆ ಸಮೀಕ್ಷೆಗಳಿಗೆ ಅನುಗುಣವಾಗಿ ತಮ್ಮ ಚುನಾವಣಾ ಯೋಜನೆಯನ್ನು ರೂಪಿಸುತ್ತವೆ. ಕಳೆದ ವರ್ಷದಂತೆ ಈ ವರ್ಷವೂ ಕಾಂಗ್ರೆಸ್ ಹಾಗೂ ಬಿಜೆಪಿ ತಮ್ಮದೇ ಸಮೀಕ್ಷೆ ನಡೆಸಿವೆ. ಬಹಿರಂಗವಾಗಿ ಏನೇ ಹೇಳಲಿ,ಅಂತರಂಗದಲ್ಲಿ ತಮ್ಮ ಸಮೀಕ್ಷೆಗಳ ಫಲಿತಾಂಶದ ಸತ್ಯ ಏನು ಎಂದು ಎರಡೂ ಪಕ್ಷದ ವರಿಷ್ಠರಿಗೆ ಗೊತ್ತು!

3. ಈಗ ಪತ್ರಿಕೋದ್ಯಮವನ್ನೇ ತೆಗೆದುಕೊಂಡರೆ, ನಮ್ಮ ವರದಿಗಾರರು ತಮ್ಮ ಕ್ಷೇತ್ರದಲ್ಲಿ ಸಂಚರಿಸಿ 25-30 ಜನರನ್ನು ಮಾತನಾಡಿಸಿ ಬರೆಯುವ ಕ್ಷೇತ್ರ ಸಮೀಕ್ಷೆಗಳಿಗಿಂತ Large Samples ಇರುವ ಸಮೀಕ್ಷೆಗಳೇ ಹೆಚ್ಚು ನಿಖರ ಹಾಗೂ ವಿಶ್ವಾಸಾರ್ಹ. ಆ ದೃಷ್ಟಿಯಲ್ಲಿ ಈ ಸಮೀಕ್ಷೆಗಳು ಆಧುನಿಕ ಪತ್ರಿಕೋದ್ಯಮಕ್ಕೆ ಒಂದು ವರ ಎಂದು ನನ್ನ ಅಭಿಪ್ರಾಯ.

4. ಈ ಸಮೀಕ್ಷೆಗಳು ಹಲವು ಬಾರಿ ವಿಫಲವಾಗುತ್ತವೆ. ಕೆಲವು ಬಾರಿ ಸಂಪೂರ್ಣ ಉಲ್ಟಾ ಆಗುತ್ತವೆ (ಕಳೆದ ವರ್ಷದ CNN-IBN ಸಮೀಕ್ಷೆ ಥರ). ಈ ಸಮೀಕ್ಷೆಗಳು ಯಶಸ್ವಿಯಾಗುವುದು ಬಿಡುವುದು ಆರು ಅಂಶಗಳನ್ನು ಅವಲಂಬಿಸಿವೆ:

a) ಉತ್ತಮ ಸಮೀಕ್ಷಾ ಗಣದ ಆಯ್ಕೆ
b) ಉತ್ತಮ ಸಮೀಕ್ಷಾ ಗಣದ ಗಾತ್ರ
c) ಸೂಕ್ತ ಪ್ರಶ್ನಾವಳಿ
d) ಸಮೀಕ್ಷೆ ನಡೆಸುವ ಸಮಯ
e) ಉತ್ತಮ ಹಾಗೂ ಪ್ರಾಮಾಣಿಕ ಕ್ಷೇತ್ರ ಕಾರ್ಯ ಹಾಗೂ
f) ಮಾಹಿತಿಯ ಉತ್ತಮ ಸಂಸ್ಕರಣೆ ಮತ್ತು ವಿಶ್ಲೇಷಣೆ

ಈ ಆರು ಹಂತಗಳಲ್ಲಿ ಒಂದರಲ್ಲಿ ಎಡವಿದರೂ ಸಮೀಕ್ಷೆ ದಾರಿ ತಪ್ಪುತ್ತದೆ.

5. ಇನ್ನೊಂದು ಪ್ರಮುಖ ಅಂಶವನ್ನು ಎಲ್ಲರೂ ಗಮನಿಸಲೇ ಬೇಕು. ಸಮೀಕ್ಷೆ ಅಂದರೆ, ಪ್ರತಿ ಪಕ್ಷ ಗೆಲ್ಲಬಹುದಾದ ಸಂಖ್ಯೆಯನ್ನು ನಿಖರವಾಗಿ ಹೇಳುವುದು ಎಂಬ ಅಭಿಪ್ರಾಯವಿದೆ. ಇದು ತಪ್ಪು. ಸಮೀಕ್ಷೆಗಳು ಎಂದರೆ ಒಟ್ಟಾರೆ ಟ್ರೆಂಡ್ ಸೂಚಿಸುವ ದಿಗ್ದರ್ಶಕಗಳು ಮಾತ್ರ. Numbersಗಿಂತ Inference ಮುಖ್ಯ.

ಉದಾಹರಣೆಗೆ ಕಳೆದ ಲೋಕಸಭಾ ಚುನಾವಣೆಯ ಸಮೀಕ್ಷೆಗಳನ್ನು ನೋಡಿ. ಕಳೆದ 4-5 ವರ್ಷಗಳವರೆಗೂ ಕನ್ನಡ ಪತ್ರಿಕೋದ್ಯಮದಲ್ಲಿ ಈ ಸಮೀಕ್ಷೆಗಳ ಭರಾಟೆ ಅಷ್ಟಾಗಿ ಇರಲಿಲ್ಲ. ಪ್ರಕಟಿಸಿದರೂ ಈ ಸಮೀಕ್ಷೆಗಳನ್ನು 2-3-4 ಕಾಲಮ್ಮಿನ ಒಂದು ಸುದ್ದಿಯಾಗಿ ಪ್ರಕಟಿಸುವ ವಾಡಿಕೆಯಿತ್ತು. ಈ ಹಂತದಲ್ಲಿ ಕನ್ನಡಪ್ರಭದಲ್ಲಿ NDTV Indian Express - AC Nielsen ಸಮೀಕ್ಷೆಯನ್ನು ವಿವರವಾಗಿ ಪ್ರಕಟಿಸುವ ಹಾಗೂ Over Play ಮಾಡುವ ನಿರ್ಧಾರ ಕೈಗೊಂಡಾಗ ನನಗೂ ಈ ಸಮೀಕ್ಷೆಗಳ ಕುರಿತು ಅಳುಕಿತ್ತು. ಆದರೆ, ಈ ಕಾರ್ಯದಲ್ಲಿ ನಾನು ನಿಕಟವಾಗಿ ತೊಡಗಿಸಿಕೊಂಡ ನಂತರ ನನಗೆ ಈ ಸಮೀಕ್ಷೆಗಳ ಕುರಿತು ಧೈರ್ಯ ಹಾಗೂ ನಂಬಿಕೆ ಬಂತು.

ನಮ್ಮ ಆರಂಭದ ಸುತ್ತಿನ ಸಮೀಕ್ಷೆಯಲ್ಲಿ "ಎನ್.ಡಿ.ಎ ಪ್ರಕಾಶಿಸುತ್ತಿದೆ - ಬಿಜೆಪಿ ಮೈತ್ರಿ ಕೂಟಕ್ಕೇ ಮತ್ತೆ ಅಧಿಕಾರ ಸಂಭವ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಅದನ್ನೇ ಕನ್ನಡಪ್ರಭದಲ್ಲಿ ಬ್ಯಾನರ್ ಶೀರ್ಷೀಕೆಯಾಗಿ ಪ್ರಕಟಿಸಿದೆವು. ಆದರೆ, ಎರಡು ಮತ್ತು ಮೂರನೇ ಸುತ್ತಿನ ಚುನಾವಣಾ ಪೂರ್ವ ಸಮೀಕ್ಷೆಗಳು ಮುಗಿಯುವ ಹೊತ್ತಿಗೆ ಕಾಂಗ್ರೆಸ್ ಮೈತ್ರಿ ಕೂಟದ ಅಲೆ ಹೆಚ್ಚು ಕಂಡುಬಂತು. ಬಿಜೆಪಿ ಮೈತ್ರಿಕೂಟಕ್ಕೆ ಅಧಿಕಾರ ಸಿಗುವುದು ಕಷ್ಟ ಎಂದು ಸಮೀಕ್ಷೆಗಳು ತಿಳಿಸಿದವು. ಆಗ ನಾವು "ಎನ್.ಡಿ.ಎ ಮಂಕಾಗುತ್ತಿದೆ" ಎಂದು ಬ್ಯಾನರ್ ಶೀರ್ಷಿಕೆಯಲ್ಲಿ ಸಮೀಕ್ಷಾ ಫಲಿತಾಂಶವನ್ನು ಪ್ರಕಟಿಸಿದ್ದೂ ಅಷ್ಟೇ ನಿಜ. Exit Poll ಸಮೀಕ್ಷೆಯ ನಂತರವಂತೂ ಬಿಜೆಪಿಗೆ ಅಧಿಕಾರ ದೂರದ ಮಾತು ಎಂಬ ಅಂಶ ಗೊತ್ತಾಯಿತು. ಸಮೀಕ್ಷೆಗಳು ಅಂದಾಜು ಮಾಡಿದ್ದ ಸಂಖ್ಯೆ ಸರಿ ಇಲ್ಲದಿದ್ದರೂ ಸಮೀಕ್ಷೆ ತೋರಿಸಿದ ಒಟ್ಟಾರೆ ದಿಕ್ಕು ಸರಿಯಾಗೇ ಇತ್ತು. ಎನ್.ಡಿ.ಎ. ಶೈನ್ ಆಗಲಿಲ್ಲ.

ಕರ್ನಾಟಕದಲ್ಲೂ ಅಷ್ಟೇ ಬಿಜೆಪಿಗೆ 15-19 ಸೀಟು ಬರುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಹೇಳಿದರೆ ಯಾರೂ ನಂಬಲಿಲ್ಲ. ಆಗ ಕನ್ನಡಪ್ರಭವನ್ನು ಟೀಕಿಸಿದವರು ಹಲವರು. ಈ ಟೀಕೆಗಳಿಂದ ನಾನು ತುಸು ಡಿಪ್ರೆಸ್ ಆದದ್ದು ನಿಜ. ಆದರೆ, ಫಲಿತಾಂಶ ಬಂದಾಗ ಬಿಜೆಪಿಗೆ 18 ಸೀಟು ಸಿಕ್ಕಿತ್ತು. ಅಂದರೆ, ಕರ್ನಾಟಕದಲ್ಲಿ ಬಿಜೆಪಿ ಬಲಗೊಂಡಿದ್ದನ್ನು ಸಮೀಕ್ಷೆ ಸರಿಯಾಗೇ ಪತ್ತೆ ಹಚ್ಚಿತ್ತು.

ಇದೇ ಸಂದರ್ಭದಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ಕುರಿತೂ ಸಮೀಕ್ಷೆ ನಡೆಸಿದ್ದೆವು. ಎಸ್. ಎಂ. ಕೃಷ್ಣ ನೇತೃತ್ವದ ಕಾಂಗ್ರೆಸ್ಸಿಗೆ ಮತ್ತೆ ಅಧಿಕಾರ ಕಷ್ಟ. ಬಿಜೆಪಿ ಹಾಗೂ ಜೆಡಿಎಸ್ ಬಲಗೊಂಡಿವೆ. ಆದರೆ, ಯಾವ ಪಕ್ಷಕ್ಕೆ ಅಧಿಕಾರ ಎಂದು ಹೇಳಲು ಆಗುತ್ತಿಲ್ಲ. Too Close to Call - ಎಂದು ಸಮೀಕ್ಷೆ ತಿಳಿಸಿತ್ತು. (That's the exact four-words the survey said.) ಕೊನೆಗೆ ಬಂದ ಫಲಿತಾಂಶ ಎಷ್ಟು Close ಆಗಿತ್ತು ಅಂದರೆ, ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಅದಿಕಾರಕ್ಕೆ ಕೂದಲೆಳೆ ಅಂತರದಲ್ಲಿ ಇದ್ದವು. ಜೆಡಿಎಸ್ ಅತ್ತ ಬಲ ಕೊಟ್ಟರೆ ಆ ಸರ್ಕಾರ ಇತ್ತ ಬಲ ಕೊಟ್ಟರೆ ಈ ಸರ್ಕಾರ ಎಂಬ ಪರಿಸ್ಥಿತಿ ನಿರ್ಮಾಣವಾಗಲಿಲ್ಲವೇ? ಅಷ್ಟೇ ಅಲ್ಲ, ಚಂದ್ರಬಾಬು ನಾಯ್ಡುಗೆ ಅಧಿಕಾರ ಗಗನಕುಸುಮ ಎಂದೂ ಸಮೀಕ್ಷೆ ತಿಳಿಸಿತ್ತು. ಸಂಖ್ಯೆ ಸರಿ ಇಲ್ಲದಿದ್ದರೂ ಸಮೀಕ್ಷೆ ತೋರಿಸಿದ್ದ ದಿಕ್ಕು ಸುಳ್ಳಾಗಲಿಲ್ಲವಲ್ಲ!

ಬಹಿರಂಗವಾಗಿ, ರಾಜಕೀಯ ಪಕ್ಷಗಳು ಈ ಸಮೀಕ್ಷೆಯೆಲ್ಲ ಬೋಗಸ್ ಎಂದೇ ಹೇಳಿದವು. ಆದರೆ, ಕಾಂಗ್ರೆಸ್ ಗಾಳಿ ಬಲವಾಗುತ್ತಿದೆ ಎಂದು ನಮ್ಮ ಸಮೀಕ್ಷೆ ಪ್ರಕಟವಾದಾಗ ಕಾಂಗ್ರೆಸ್ 1.5 ಲಕ್ಷ ಪ್ರತಿಗಳನ್ನು ಪ್ರೀಮಿಯಂ ಬೆಲೆಗೆ ಕೊಂಡುಕೊಂಡು ಮತಕ್ಷೇತ್ರಗಳಲ್ಲಿ ಹಂಚಿದರೆ, ಜೆಡಿಎಸ್ 2.5 ಲಕ್ಷ ಪ್ರತಿಗಳನ್ನು ಕೊಂಡುಕೊಂಡಿತು. ಜೆಡಿಎಸ್ ಸಂತೋಷಕ್ಕೆ ಕಾರಣವೆಂದರೆ, - ಆಗಿನ ಪರಿಸ್ಥಿತಿಯಲ್ಲಿ ಜನತಾದಳ ಸಂಪೂರ್ಣ ಅವಶೇಷವಾಗಿತ್ತು. ದೇವೇಗೌಡರು ಹೊಸತಾಗಿ ಜೆಡಿಎಸ್ ಪಕ್ಷ ಪಟ್ಟಿದ್ದರು. ಆದರೆ, ಯಾವ ಸಮೀಕ್ಷೆಯೂ ಜೆಡಿಎಸ್ ಇರುವನ್ನು ಗುರುತಿಸಿರಲಿಲ್ಲ. ಇತರೆ ಎಂಬ ಕಾಲಂ ಅಡಿ ಜೆಡಿಎಸ್ ಸ್ಥಾನಗಳನ್ನು ತೋರಿಸಲಾಗುತ್ತಿತ್ತು. ಆದರೆ, ನಮ್ಮ ಸಮೀಕ್ಷೆಯಲ್ಲಿ ಜೆಡಿಎಸ್ ಎಂದು ಪ್ರತ್ಯೇಕವಾಗಿ ಗುರುತಿಸಿ ಅದು ನಿರ್ಣಾಯಕ ಪಾತ್ರ ವಹಿಸಬಹುದು ಎಂದು ಹೇಳಿದ್ದೆವು.

ಇದನ್ನೆಲ್ಲ ಸಮೀಕ್ಷೆ ಸ್ಪಷ್ಟವಾಗಿ ಕಂಡುಕೊಂಡಿತ್ತು. ಇದನ್ನು ಬಿಟ್ಟು ಕೆಲವರು, ಕೇವಲ ಸಮೀಕ್ಷೆಯ ಸಂಖ್ಯೆಗೆ ಮಹತ್ವ ಕೊಟ್ಟು, ಸಮೀಕ್ಷೆಗಳೆಲ್ಲಾ ಬೋಗಸ್ ಎಂದು ಅಪಪ್ರಚಾರ ಮಾಡಿದರು.

2008ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲೂ ಅಷ್ಟೇ. ಸುವರ್ಣ ನ್ಯೂಸ್ - ಕನ್ನಡಪ್ರಭ - ಸಿಫೋರ್ ಸಮೀಕ್ಷೆ ಅದ್ಭುತ ಯಶಸ್ಸು ಕಂಡಿತು. ಕೇವಲ ಟ್ರೆಂಡ್ ಅಷ್ಟೇ ಅಲ್ಲ, ಸಂಖ್ಯೆ ಸಹ ಶೇ.98ರಷ್ಟು ನಿಖರವಾಗಿತ್ತು. This is the only survey that has hit the bulls-eye ಎಂದು Times of India ಮುಖಪುಟದಲ್ಲಿ ಬರೆದಿತ್ತು.

ಹಾಗಂತ ಎಲ್ಲ ಬಾರಿಯೂ ಸಮೀಕ್ಷೆಯ ಸಂಖ್ಯೆ ಇಷ್ಟೊಂದು ನಿಖರವಾಗಿರುತ್ತದೆ ಎಂದು ನಾನೇನೂ ಹೇಳುವುದಿಲ್ಲ. ಆದರೆ, ಸಮೀಕ್ಷೆಗಳಿಂದ ಮತದಾರರ ನಿಖರ ನಾಡಿ ಮಿಡಿತವಂತೂ ಖಂಡಿತವಾಗಿ ತಿಳಿಯುತ್ತದೆ.

In last October, I had a rare chance of being at the thick of the American Elections. ಇದು ನನ್ನ ಪತ್ರಿಕೋದ್ಯಮ ಜೀವನದ ಅತ್ಯದ್ಭುತ ಅನುಭವವೂ ಹೌದು. ಆಗ ಅಲ್ಲಿನ ಅನೇಕ ಪತ್ರಕರ್ತರ ಜೊತೆ ನಿಕಟವಾಗಿ ಒಡನಾಡುವ ಅವಕಾಶ ನನ್ನದಾಯಿತು. ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯ 'ಡೈರೆಕ್ಟರ್ ಆಫ್ ಪೋಲಿಂಗ್ ' ಜಾನ್ ಕೊಹೆನ್ ಅವರ ಜೊತೆ ನಾನು ಈ ಚುನಾವಣಾ ಪೂರ್ವ ಸಮೀಕ್ಷೆ ಹಾಗೂ ಚುನಾವಣೋತ್ತರ ಸಮೀಕ್ಷೆಯ ಕುರಿತು ಒಂದರ್ಧ ಗಂಟೆ ಮಾತನಾಡಿದ್ದೆ. ಅವರ ಅನುಭವದಲ್ಲಿ, ಸಮೀಕ್ಷೆಗಳು ಎಡವಿದರೆ ಅದಕ್ಕೆ ಆ ಸಮೀಕ್ಷೆ ನಡೆಸುವ ಸಂಸ್ಥೆ ಕಾರಣ. ಸಮೀಕ್ಷೆ ತಪ್ಪಾಯಿತು ಎಂಬ ಕಾರಣಕ್ಕೆ Psephology - ಸಮೀಕ್ಷಾ ವಿಜ್ಞಾನವೇ ಸುಳ್ಳು ಎನ್ನುವಂತಿಲ್ಲ. The methods and executions are very important ಎನ್ನುತ್ತಾರೆ ಅವರು.

ಶಿಕಾಗೋ ಟ್ರಿಬ್ಯೂನ್ನಿನ ಖ್ಯಾತ ರಾಜಕೀಯ ಅಂಕಣಕಾರ ಕ್ಲಾರೆನ್ಸ್ ಪೇಜ್ ಜೊತೆ ಚುನಾವಣಾ ಸಮೀಕ್ಷೆಗಳ ಕುರಿತು ಮಾತನಾಡಿದಾಗ ಅವರು ಹೇಳಿದ್ದೂ ಅದನ್ನೇ. "ಸಮೀಕ್ಷೆಯಲ್ಲಿ ಯಾವ ರೀತಿಯ ಪ್ರಶ್ನೆಗಳನ್ನು ರೂಪಿಸಲಾಗಿದೆ, ಯಾವ ರೀತಿಯ ಸಮೀಕ್ಷಾ ಗಣವನ್ನು ಆಯ್ದುಕೊಳ್ಳಲಾಗಿದೆ ಹಾಗೂ ಯಾವ ಸಂದರ್ಭದಲ್ಲಿ ಸಮೀಕ್ಷೆ ನಡೆಸಲಾಗುತ್ತಿದೆ ಎಂಬುದು ಬಹಳ ಮುಖ್ಯ. ಇದರಲ್ಲಿ ಎಡವಿದರೆ ಸಮೀಕ್ಷೆಯೂ ಎಡವುತ್ತದೆ. ಇಲ್ಲವಾದಲ್ಲಿ, ಸಮೀಕ್ಷೆ ಎಡವಲು ಅವಕಾಶವೇ ಇಲ್ಲ."

ಎಬಿಸಿ ನ್ಯೂಸಿನ ವೈಟ್ ಹೌಸ್ ವರದಿಗಾರ್ತಿ ಆನ್ ಕಾಂಪ್ಟನ್ ಹೇಳಿದ್ದು - "ಈ ಸಮೀಕ್ಷೆಗಳನ್ನು ಕೇವಲ ನಂಬರ್ ಗೇಮ್ ಅಂತ ತಿಳಿಯಬಾರದು. We should use the pre-poll and exit poll statistics to find the reasons for the results."

ಹಾಗಾಗಿ, ಸಮೀಕ್ಷೆಗಳು ಆದುನಿಕ ಪತ್ರಿಕೊದ್ಯಮಕ್ಕೆ ಬೇಕೇ ಬೇಕು. ಆದರೆ, ನಾವು ಸರಿಯಾಗಿ ಸಮೀಕ್ಷೆ ನಡೆಸಬೇಕು ಅಷ್ಟೇ.

Thursday, February 19, 2009

ಒಂದು ಫೋಟೋ ಹೊಡೆಯಲು ಎಂಥಾ ಕಸರತ್ತು ನೋಡಿ



ಸಾಮಾನ್ಯವಾಗಿ ಅಮೆರಿಕದ ಅಧ್ಯಕ್ಷ ಪ್ರಮಾಣ ವಚನ ಸ್ವೀಕರಿಸುವಾಗ ಆತನ ಪತ್ನಿ 'ಬೈಬಲ್' ಹಿಡಿದಿರುತ್ತಾಳೆ. ಅಧ್ಯಕ್ಷೀಯ ಅಭ್ಯರ್ಥಿ ತನ್ನ ಬಲಗೈಯನ್ನು ಮೇಲೆತ್ತಿ, ಎಡಗೈಯನ್ನು ಆ ಬೈಬಲ್ ಮೇಲಿಟ್ಟು ಪ್ರಮಾಣ ವಚನ ಸ್ವೀಕರಿಸುತ್ತಾನೆ. ಈ ಕಾರ್ಯಕ್ರಮ ಅಮೆರಿಕದ ಕ್ಯಾಪಿಟಾಲಿನ ಮುಂದೆ, ವಿಶಾಲ ವೇದಿಕೆಯಲ್ಲಿ ನಡೆಯುತ್ತದೆ. ಒಬಾಮಾ ಪ್ರಮಾಣ ವಚನ ಸ್ವೀಕರಿಸಿದ ಸುದ್ದಿಯನ್ನು ನಮ್ಮ ಪತ್ರಿಕೆಯಲ್ಲಿ ಪ್ರಕಟಿಸುವ ದಿನ, ಈ ಸಂದರ್ಭವನ್ನು ಚೆನ್ನಾಗಿ ಬಿಂಬಿಸುವ ಚಿತ್ರ ನನಗೆ ಬೇಕಿತ್ತು. ಅಂದು ನನಗದು ಸಿಕ್ಕಿರಲಿಲ್ಲ. ಆದರೆ, ಕಳೆದವಾರ ದಿಢೀರನೆ ಕಾಣಿಸಿತಲ್ಲಾ ಆ ಫೋಟೋ! ಬಿಲಿಯನ್ ಫೋಟೋಗಳ ನಡುವೆ ಒಂದೇ ಒಂದು ಅದ್ಭುತ ಫ್ರೇಮ್! ಹಾಗಾಗಿ, ಆ ಫೋಟೋ ಕುರಿತು ಈ ನಾಲ್ಕು ಮಾತು ಹೇಳಲೇ ಬೇಕು ಅನ್ನಿಸಿತು, ನಮ್ಮ ಅಕ್ಯಾಡೆಮಿಕ್ ಆಸಕ್ತಿಗೋಸ್ಕರ.

ಒಬಾಮಾ ಅಧಿಕಾರ ಸ್ವೀಕರಿಸುವಾಗ ಎಷ್ಟು ಸಾವಿರ ಕ್ಯಾಮರಾಗಳು ಎಷ್ಚು ಕೋಟಿ ಬಾರಿ ಕ್ಲಿಕ್ಕಿಸಿದವೋ ಗೊತ್ತಿಲ್ಲ. ಆದರೆ, ಈ ಫ್ರೇಮ್ ಸಿಕ್ಕಿದ್ದು ಮಾತ್ರ ಒಬ್ಬನೇ ಒಬ್ಬನಿಗೆ. ಆತ, McClatchy-Tribune ಪತ್ರಿಕೆಯ ಛಕ್ ಕೆನಡಿ. ವಾಷಿಂಗ್ಟನ್ ಡಿ.ಸಿ.ಯಲ್ಲಿ 20 ವರ್ಷಗಳಿಂದ ಮಾಧ್ಯಮ ಛಾಯಾಗ್ರಾಹಕ.

ಇಂಥ 'ಫ್ರೇಮ್'ಗಾಗಿ ಆತ ಪಟ್ಟ ಶ್ರಮ ಎಂಥದು ಎಂದು ತಿಳಿದರೆ, you can appreciate the photo much better.

2008ರಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮೊಟ್ಟ ಮೊದಲ ಬೀಜ ಬಿತ್ತನೆಯಾದಾಗ, ಈ ಛಾಯಾಗ್ರಾಹಕನ ಮನದಲ್ಲಿ ಮೊಳಕೆಯೊಡೆದ ಪ್ರಶ್ನೆ - "ಈ ಬಾರಿ ಅಧ್ಯಕ್ಷ ಪ್ರಮಾಣ ವಚನ ಸ್ವೀಕಾರಿಸುವ ದಿನ ಯಾವ ಕೋನದಲ್ಲಿ ಕ್ಲಿಕ್ಕಿಸಲಿ?"

ಅಂದಿನಿಂದಲೇ, ಆತ ಕ್ಯಾಮರಾ ಕೋನಕ್ಕಾಗಿ ಹುಡುಕಾಡತೊಡಗಿದ. ಪ್ರಮಾಣ ವಚನ ಸ್ವೀಕರಿಸುವ ಅಧ್ಯಕ್ಷ, ಅಧ್ಯಕ್ಷನ ಕುಟುಂಬ ಹಾಗೂ ಹಿನ್ನೆಲೆಯಲ್ಲಿ ಕ್ಯಾಪಿಟಾಲಿನ ದೊಡ್ಡ ಗುಮ್ಮಟ - ಇವಿಷ್ಟೂ ಫೋಟೋದ ಚೌಕಟ್ಟಿನಲ್ಲಿ ಕಾಣಿಸುವಂಥ ಕ್ಯಾಮರಾ ಕೋನ ಆತನಿಗೆ ಬೇಕಿತ್ತು. ಅದಕ್ಕೆ ಆತ ಕ್ಯಾಮರಾವನ್ನು ಪ್ರಮಾಣ ವಚನ ಸ್ವೀಕಾರ ಸಮಾರಂಭದ ವೇದಿಕೆಯಲ್ಲೇ, ಅಧ್ಯಕ್ಷನ ಪಾದಗಳಿಂದ ಸುಮಾರು 10-15 ಅಡಿ ದೂರದಲ್ಲಿ, ನೆಲ ಮಟ್ಟದಿಂದ 45 ಡಿಗ್ರಿ ಮೇಲ್ಮುಖವಾಗಿಡಬೇಕಿತ್ತು.

ಆದರೆ, ಅಧ್ಯಕ್ಷ ಪ್ರಮಾಣ ವಚನ ಸ್ವೀಕರಿಸುವ ವೇದಿಕೆಯಲ್ಲಿ ಯಾವ ಛಾಯಾಗ್ರಾಹಕನಿಗೂ ಪ್ರವೇಶ ಇರುವುದಿಲ್ಲವಲ್ಲ! ಏನು ಮಾಡುವುದು? ಅದಕ್ಕಾಗಿ ಆತ ರಿಮೋಟ್ ಕಂಟ್ರೋಲ್ ಚಾಲಿತ ಕ್ಯಾಮರಾವನ್ನು ವಿಶೇಷವಾಗಿ ವಿನ್ಯಾಸ ಮಾಡಿಸಿಕೊಂಡ. ಆ ಕ್ಯಾಮರಾವನ್ನು ವೇದಿಕೆಯಲ್ಲಿಟ್ಟು, ದೂರದ ಮಾನಿಟರ್ನಲ್ಲಿ ನೋಡಿ ರಿಮೋಟ್ ಮೂಲಕ ಕ್ಯಾಮರಾ ನಿಯಂತ್ರಿಸಿ, ಕ್ಲಿಕ್ಕಿಸುವ ಯೋಜನೆ ಹಾಕಿದ.

(ಪ್ರಮಾಣ ವಚನಕ್ಕೆ ಮುನ್ನ ಕ್ಯಾಮರಾ ಸ್ಥಾಪಿಸುತ್ತಿರುವ ಛಾಯಾಗ್ರಾಹಕ ಮತ್ತು ಭದ್ರತಾ ಸಿಬ್ಬಂದಿ.)

ಈ ಯೋಜನೆಯನ್ನು ವೈಟ್ ಹೌಸ್ ಅಧಿಕಾರಿಗಳಿಗೆ, ವೈಟ್ ಹೌಸ್ ಪೊಲೀಸ್ ಇಲಾಖೆಗೆ, ಎಫ್.ಬಿ.ಐ.ಗೆ ವಿವರಿಸಿ ಕಾಡಿ-ಬೇಡಿ ಅಧಿಕೃತವಾಗಿ ಒಪ್ಪಿಗೆ ಪಡೆದ. ಅಧ್ಯಕ್ಷ ಪ್ರಮಾಣ ವಚನ ಸ್ವೀಕರಿಸುವ ವೇದಿಕೆಯಲ್ಲಿ ಕ್ಯಾಮರಾ ಪರವಾನಿಗೆ ನೀಡಿದ್ದು ಇದೇ ಮೊದಲಬಾರಿಯಂತೆ. ಆದರೆ, ಅಧ್ಯಕ್ಷ ಪ್ರಮಾಣ ವಚನ ಸ್ವೀಕರಿಸುವಾಗ ವೇದಿಕೆಯಲ್ಲಿ ಕ್ಯಾಮರಾ ಸದ್ದು ಮಾಡಿ ಗೊಂದಲ ಉಂಟುಮಾಡಬಾರದು ಎಂದು ಭದ್ರತಾ ಅಧಿಕಾರಿಗಳು ಷರತ್ತು ಹಾಕಿದ್ದರಂತೆ. ಅದಕ್ಕಾಗಿ, ಕ್ಯಾಮರಾವನ್ನು Sound proof ಪೆಟ್ಟಿಗೆಯಲ್ಲಿ ಇಡಲಾಗಿತ್ತಂತೆ.

ಛಕ್ ಕೆನಡಿ ಇಷ್ಟೆಲ್ಲ ಶ್ರಮ ಪಟ್ಟಿದ್ದು ಫಲಿಸಿದೆ. ಈ ಚಿತ್ರವನ್ನು ಒಬಾಮಾ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಅತ್ಯುಕೃಷ್ಟ ಚಿತ್ರ ಎಂದು ಬಣ್ಣಿಸಲಾಗಿದೆ.

(2008ರ ಅಕ್ಟೋಬರಿನಲ್ಲಿ ನಾನು ಅಮೆರಿಕಕ್ಕೆ ಹೋಗಿದ್ದಾಗ ಕ್ಯಾಪಿಟಾಲ್ ಮುಂದಿನ ಅಂಗಳವನ್ನು ಅಧ್ಯಕ್ಷೀಯ ಪ್ರಮಾಣವಚನ ಸಮಾರಂಭದ ತಯಾರಿಗಾಗಿ ಕ್ಯಾಪಿಟಾಲ್ ಪೋಲೀಸರು ಮುಚ್ಚಿದ್ದರು. ಆಗಿನ್ನೂ ಚುನಾವಣೆಯೇ ನಡೆದಿರಲಿಲ್ಲ. ಪ್ರಮಾಣ ವಚನದ ತಯಾರಿ ನಡೆದಿತ್ತು!)

Sunday, January 18, 2009

ಇಂಗು ತಿಂದ ಮಾಂಗ್‌ ಹಾಗೂ ಐದು ಅಮೆರಿಕನ್ ತುಣುಕು


ಭಾಗ - 10

೧. ಹಲೋ... ೯೧೧?

What’s the number for 911?
America’s Whackiest 911 Calls.

ಡಿಸ್ನಿ ಲ್ಯಾಂಡ್‌ನಲ್ಲಿ ಮಜ ಉಡಾಯಿಸಿದ ನಂತರ, ಹಾಲಿವುಡ್ ನೋಡಲು ನಾನು ಎನಹ್ಯಾಮ್‌ನಿಂದ ಲಾಸ್ ಏಂಜಲೀಸ್‌ಗೆ ಹೊರಟಿದ್ದೆ. ಆಗ, ಟೂರಿಸ್ಟ್ ಬಸ್ಸಿನಲ್ಲಿ ನನ್ನ ಪಕ್ಕ ಕುಳಿತಿದ್ದವ ಓದುತ್ತಿದ್ದ ಪುಸ್ತಕ ಇದು. ಶೀರ್ಷಿಕೆ ವಿಚಿತ್ರವಾಗಿದೆಯಲ್ಲ... ಎನಿಸಿತು.
೯೧೧, ಅಮೆರಿಕದ ಎಮರ್ಜೆನ್ಸಿ ನಂಬರ್. ಭಾರತದಲ್ಲಿ ಪೊಲೀಸ್ ಸಂಪರ್ಕಿಸಲು, ತುರ್ತು ದೂರವಾಣಿ ಸಂಖ್ಯೆ ೧೦೦ ಹೇಗೋ, ಹಾಗೆ, ಅಮೆರಿಕದಲ್ಲಿ ೯೧೧ ಡಯಲ್ ಮಾಡಬಹುದು. ಜನರು ತುರ್ತು ಸಂದರ್ಭಗಳಲ್ಲಿ ೯೧೧ ಕಾಲ್ ಮಾಡಿದರೆ ಸಾಕು ನೆರವು ಸಿಗುತ್ತದೆ. ಆದರೆ, ಅಲ್ಲಿಗೆ ಬರುವ ಕರೆಗಳು ಒಮ್ಮೊಮ್ಮೆ ಎಷ್ಟು ತಮಾಷೆಯಾಗಿರುತ್ತವೆ ಎಂದರೆ, ಆ ಧ್ವನಿಮುದ್ರಿತ ಕರೆಗಳ ಒಂದು ದೊಡ್ಡ ಜೋಕು ಪುಸ್ತಕವೇ ಪ್ರಕಟವಾಗಿದೆ. ಒಂದು ಪ್ರಸಂಗ ನೋಡಿ:
ಕರೆಗಾರ : ಹಲೋ... ಇದು ೯೧೧?
ಆಪರೇಟರ್ : ಹೌದು. ಹೇಳಿ. ಹೇಗೆ ಸಹಾಯ ಮಾಡಲಿ?
ಕರೆಗಾರ : ನನ್ನ ಹೆಂಡತಿಯನ್ನು ನಾನಾ ರೀತಿಯಲ್ಲಿ ಕತ್ತು ಹಿಚುಕಿ ಸಾಯಿಸಲು ಪ್ರಯತ್ನಿಸುತ್ತಿದ್ದೇನೆ. ದರಿದ್ರದವಳು ಸಾಯುತ್ತಿಲ್ಲ. ಉಸಿರಾಡುತ್ತಿದ್ದಾಳೆ. ಏನು ಮಾಡಲಿ?
ಆಪರೇಟರ್ : ಪಾಪ. ಆಕೆಯನ್ನು ನೀವೇಕೆ ಸಾಯಿಸುತ್ತಿದ್ದೀರಿ?
ಕರೆಗಾರ : ನಂಗೆ ಆಕೆ ಇಷ್ಟವಿಲ್ಲ. ಅದಕ್ಕೆ.
ಆಪರೇಟರ್ : ಸಾಯಿಸುವ ಬದಲು ಆಕೆಗೆ ಡೈವೋರ್ಸ್ ನೀಡಬಹುದಲ್ಲ?
ಕರೆಗಾರ : ಡೈವೋರ್ಸ್ ಕೊಡುವುದು ರಗಳೆಯ ಕೆಲಸ. ಸಾಯಿಸುವುದು ಈಸಿ. ಅದಕ್ಕೆ!

ಇಂಥ ನೂರಾರು ವಿಚಿತ್ರ ಕರೆಗಳನ್ನು ಅಮೆರಿಕದಾದ್ಯಂತ ‘೯೧೧‘ ಆಪರೇಟರುಗಳು ಪ್ರತಿದಿನ ಸಹಿಸಿಕೊಳ್ಳುತ್ತಾರಂತೆ.
ಅಂದ ಹಾಗೆ, ಅಮೆರಿಕದ ಎಮರ್ಜೆನ್ಸಿ ಸಂಖ್ಯೆ ೯೧೧ಕ್ಕೂ ಅಲ್ಲಿನ ಅವಳಿ ಗೋಪುರ ಧ್ವಂಸಗೊಂಡ ಭಯೋತ್ಪಾದನೆಯ ೯-೧೧ಕ್ಕೂ ಏನಾದರೂ ಸಂಬಂಧವಿದೆಯೇ? ಅಂತ ಸರ್ಜ್ ಬ್ಲಡ್ಸ್ ಎಂಬ ಸಾಕ್ಷಚಿತ್ರ ನಿರ್ಮಾಪಕರನ್ನು ಕೇಳಿದೆ. ಈ ಪ್ರಶ್ನೆ ಕೇಳಿ ಆತ ಬೆಚ್ಚಿ ಬಿದ್ದ. ಅರೆ, ಹೌದಲ್ಲ. ನಮ್ಮ ಎಮರ್ಜನ್ಸಿ ನಂಬರ್ ನೈನ್-ಒನ್-ಒನ್ ಹಾಗೂ ಕರಾಳ ದಿನ ನೈನ್-ಇಲೆವನ್ ಒಂದೇ ಆಗಿದೆಯಲ್ಲ! ಇಷ್ಟು ದಿನ ಇದನ್ನು ಗಮನಿಸಿಯೇ ಇರಲಿಲ್ಲ! ಮೈ ಗಾಡ್... ಎಂಥಾ ಕಾಕತಾಳೀಯ ಅಂತ ಅತ ಆರಚಿದ. ಬಹುಶಃ ಲ್ಯಾಡೆನ್ ತನ್ನ ಭಯೋತ್ಪಾದನೆಗೆ ನಮ್ಮ ೯೧೧ ಸಂಖ್ಯೆಯನ್ನೇ ಉದ್ದೇಶಪೂರ್ವಕವಾಗಿ ಮುಹೂರ್ತ ಮಾಡಿಕೊಂಡಿರಬಹುದು ಅಂತ ಆತ ಚಕಿತಗೊಂಡು ಹಲುಬಿದ.

ಲಾಸ್ ವೇಗಾಸ್, ಡಿಸ್ನಿ ಲ್ಯಾಂಡ್, ಲಾಸ್ ಏಂಜಲೀಸ್‌ಗೆ ಬರುವ ಮೊದಲು ನಾನು, ನ್ಯೂಯಾರ್ಕಲ್ಲಿರುವ ೯-೧೧ ದುರ್ಘಟನಾ ಸ್ಥಳ ‘ಗ್ರೌಂಡ್ ಝೀರೋ’ಕ್ಕೆ ಭೇಟಿ ನೀಡಿದ್ದೆ.


ಅವಳಿ ಗೋಪುರಗಳು ಧ್ವಂಸಗೊಂಡ ಸ್ಥಳವೀಗ ಅಕ್ಷರಶಃ ಪ್ರವಾಸಿ ತಾಣವಾಗಿದೆ. ಅಂದು ಭಯೋತ್ಪಾದನೆಗೆ ಸಾಕ್ಷಿಯಾಗಿದ್ದ ವ್ಯಕ್ತಿಗಳು, ಘಟನೆಯಲ್ಲಿ ಪಾರಾದವರು ಹಾಗೂ ಮಡಿದವರ ಕುಟುಂಬದ ಸದಸ್ಯರು ಮುಂತಾದವರನ್ನೊಳಗೊಂಡ ಪ್ರವಾಸಿ ಗೈಡ್‌ಗಳ ತಂಡ ಅಲ್ಲಿದೆ. ಅವರು ಅಮೆರಿಕನ್ ಎಕ್ಸ್‌ಪ್ರೆಸ್ ಬ್ಯಾಂಕಿನ ಕೇಂದ್ರ ಕಚೇರಿಯ ಒಳಭಾಗವನ್ನೂ ಸೇರಿದಂತೆ, ಅವಘಡ ಸಂಭವಿಸಿದ ಪ್ರದೇಶದ ಸುತ್ತ ಪ್ರವಾಸಿಗಳನ್ನು ಕರೆದೊಯ್ದು ವಿವರಣೆ ನೀಡುತ್ತಾರೆ. ಘಟನೆಯ ಅವಶೇಷಗಳು, ಮೃತರ ಸ್ಮಾರಕಗಳು, ರಕ್ಷಣೆಗೆ ಬಳಕೆಯಾದ ಅಗ್ನಿ ಶಾಮಕ ವಾಹನ ಮತ್ತಿತರ ವಸ್ತುಗಳ ಮ್ಯೂಸಿಯಂ ತೋರಿಸುತ್ತಾರೆ.


ಈಗ ಗ್ರೌಂಡ್ ಝೀರೋದಲ್ಲಿ ೫ ಗೋಪುರಗಳನ್ನು ನಿರ್ಮಿಸುವ ಕಾರ್ಯ ಭರದಿಂದ ಸಾಗಿದೆ. ಈಗಿನ ಯೋಜನೆಯಂತೆ, ಮೊದಲು ಅವಳಿ ಗೋಪುರಗಳಿದ್ದ ಎರಡೂ ಅಡಿಪಾಯಗಳನ್ನು ಚೌಕಾಕಾರದ ದೊಡ್ಡ ಕೊಳಗಳನ್ನಾಗಿ ಪರಿವರ್ತಿಸಲಾಗುತ್ತದೆ. ಅಲ್ಲಿ, ನೀರಿನ ಕೃತಕ ಜಲಪಾತವನ್ನು ನಿರ್ಮಿಸಿ, ೯-೧೧ ಘಟನೆಯಲ್ಲಿ ಮೃತ ವ್ಯಕ್ತಿಗಳ ಹೆಸರುಗಳನ್ನು ಶಿಲೆಯಲ್ಲಿ ಕೆತ್ತಲಾಗುತ್ತದೆ. ಅಲ್ಲೊಂದು ಉದ್ಯಾನವೂ ಹುಟ್ಟಿಕೊಳ್ಳಲಿದೆ. ವಿವರಗಳಿಗೆ ನೋಡಿ www.tributewtc.org : www.national911memorial.org

2. ಅಮೆರಿಕದಲ್ಲಿಲ್ಲ ವಾಯ್ಸ್ ಆಫ್ ಅಮೆರಿಕ!

VOA -ಅಂದರೆ, ವಾಯ್ಸ್ ಆಫ್ ಅಮೆರಿಕ. ಹಾಗಂದರೆ, BBC - ಬ್ರಿಟಿಷ್ ಬ್ರಾಡ್ ಕಾಸ್ಟಿಂಗ್ ಕಾರ್ಪೋರೇಶನ್ ಹಾಗೂ
AIR -ಆಲ್ ಇಂಡಿಯಾ ರೇಡಿಯೋ ಥರ ಅಮೆರಿಕದ ಸುಪ್ರಸಿದ್ಧ ರೇಡಿಯೋ... ಅಂತ ನಾನು ಚಿಕ್ಕಂದಿನಿಂದಲೂ ತಿಳಿದಿದ್ದ ಜನರಲ್ ನಾಲೇಜ್. ಆದರೆ, ‘ವಾಯ್ಸ್ ಆಪ್ ಅಮೆರಿಕ’ ಅಮೆರಿಕದಲ್ಲಿ ಎಲ್ಲೂ ಕೇಳಿಸುವುದಿಲ್ಲ. ಬಿತ್ತರಗೊಳ್ಳುವುದಿಲ್ಲ! ಅಂತ ನನಗೆ ಗೊತ್ತಿರಲಿಲ್ಲ. ನನಗಿದು ಗೊತ್ತಾಗಿದ್ದು. ವಾಷಿಂಗ್‌ಟನ್ ಡಿ.ಸಿ.ಯಲ್ಲಿ ವಾಯ್ಸ್ ಆಪ್ ಅಮೆರಿಕಾದ ಕೇಂದ್ರ ಕಚೇರಿಗೆ ಭೇಟಿ ನೀಡಿದಾಗ.


ವೈಟ್ ಹೌಸ್ ಹಾಗೂ ಅಮೆರಿಕ ಸಂಸತ್ತಿನಿಂದ ಕೆಲ ಹೆಜ್ಜೆ ದೂರದಲ್ಲಿ ವಿಶಾಲ ಕಟ್ಟಡದಲ್ಲಿದೆ ‘ವಾಯ್ಸ್ ಆಫ್ ಅಮೆರಿಕ’ ಕೇಂದ್ರ ಕಚೇರಿ. ಇಲ್ಲಿ ನೂರಾರು ಬಾನುಲಿ ಪತ್ರಕರ್ತರು, ತಂತ್ರಜ್ಞರು ಗಡಿಬಿಡಿಯಲ್ಲಿ ಕೆಲಸ ಮಾಡುತ್ತಿರುತ್ತಾರೆ. ಆದರೆ, ಅವರ ರೇಡಿಯೋ ಪ್ರಸಾರ ಮಾತ್ರ ಅಮೆರಿಕದಲ್ಲಿ ಕೇಳಿಸದು. ಇದು ಅಲ್ಲಿನ ಶಾಸನ ವಿಧಿಸಿದ ನಿರ್ಬಂಧ.

ವಾಯ್ಸ್ ಆಫ್ ಅಮೆರಿಕ -ಸರ್ಕಾರದ ಬಾನುಲಿ. ಇದು ಸ್ಥಾಪನೆಯಾದದ್ದೇ, ಹೊರದೇಶಗಳಿಗೆ ಅಮೆರಿಕ ಸರ್ಕಾರದ ಮುಖವಾಣಿಯಾಗಿ ತುತ್ತೂರಿ ಊದುವ ಕೆಲಸಕ್ಕೆ. ಆದ್ದರಿಂದ, ಅಮೆರಿಕದ ಭೂವ್ಯಾಪ್ತಿಯಲ್ಲಿ ಈ ‘ತುತ್ತೂರಿ’ಯನ್ನು ಪ್ರಸಾರ ಮಾಡುವಂತಿಲ್ಲ. ಇದು ವಾಯ್ಸ್-ಆಫ್-ಅಮೆರಿಕಾ ಸ್ಥಾಪನೆಯ ಶಾಸನದಲ್ಲೇ ಸ್ಪಷ್ಟವಾಗಿದೆ.

ವಾಯ್ಸ್ ಆಫ್ ಅಮೆರಿಕ ಕೇಂದ್ರ ಕಚೇರಿ ಅಮೆರಿಕದಲ್ಲಿದ್ದರೂ ಅದರ ಪ್ರಸಾರ ಕೇಂದ್ರಗಳಿರುವುದೆಲ್ಲ ವಿದೇಶಗಳಲ್ಲಿ. ಹಿಂದಿಯೂ ಸೇರಿದಂತೆ ವಿಶ್ವದ ೪೩ ಭಾಷೆಗಳಲ್ಲಿ ವಾಯ್ಸ್ ಆಫ್ ಅಮೆರಿಕ ನಿತ್ಯವೂ ಪ್ರಸಾರವಾಗುತ್ತಿದೆ. ನೀವೆಂದಾದರೂ ಈ ಬಾನುಲಿ ಕೇಳಿದ್ದೀರಾ? ನಾನಂತೂ ಕೇಳಿಲ್ಲ. ಅಮೆರಿಕದ ಜನ ಕೇಳುತ್ತಾರೆ ಅಂದುಕೊಂಡಿದ್ದೆ. ಅವರೂ ಕೇಳುತ್ತಿಲ್ಲವಲ್ಲ!

3. ಗಗನದಲ್ಲಿ ವೃದ್ಧ ಸಖಿಯರು!

ಅದ್ಯಾಕೋ ಗೊತ್ತಿಲ್ಲ. ಚಿಕ್ಕಂದಿನಿಂದಲೂ ನನಗೆ, ಗಗನ ಸಖಿಯರೆಂದರೆ, ಸುಂದರ ಮುಖದ, ಅಂದದ ಮೈಮಾಟದ, ಸವಿ ಮಾತಿನ ಯುವತಿಯರ ಕಲ್ಪನೆ ಮೂಡುತ್ತದೆ. ಆದರೆ, ಕಳೆದ ಕೆಲವು ವರ್ಷಗಳಿಂದ ಇಂಡಿಯನ್ ಏರ್‌ಲೈನ್ಸ್ ಹಾಗೂ ಡೆಕ್ಕನ್ ವಿಮಾನಗಳಲ್ಲಿ ಪ್ರಯಾಣ ಮಾಡಿದ ಮೇಲೆ ಸುಂದರ ಗಗನ ಸಖಿಯರ ನನ್ನ ಕಲ್ಪನೆ ನುಚ್ಚು ನೂರಾಗಿದೆಯೆನ್ನಿ! ಅದರಲ್ಲೂ ಅಮೆರಿಕ ವಿಮಾನಗಳಲ್ಲಿ ಪ್ರಯಾಣಿಸಿ ಬಂದಮೇಲಂತೂ ಗಗನಸಖಿಯರೆಂದರೆ ಯುವತಿಯರು ಎಂಬ ಕಲ್ಪನೆಯೇ ಚಿಂದಿಯಾಯಿತು! ಅಮೆರಿಕದ ವಿಮಾನಗಳಲ್ಲಿ ಇರುವ ಬಹುತೇಕ ಗಗನಸಖಿಯರು ವೃದ್ಧೆಯರು ಅಥವಾ ಮಧ್ಯ ವಯಸ್ಸಿನವರು.
ಯಾಕೆ, ಹೀಗೆ?

ಅಮೆರಿಕದಲ್ಲಿ ಏರ್ ಹೋಸ್ಟೆಸ್ ವೃತ್ತಿಗೆ ಹೆಚ್ಚು ಸಂಬಳ ಸಿಗುತ್ತಿಲ್ಲ. ಅದರ ಬದಲು, ಉತ್ತಮ ಹೊಟೆಲ್‌ಗಳಲ್ಲಿ ವೇಟರ್ ವೃತ್ತಿಗೇ ಹೆಚ್ಚು ವೇತನ ಹಾಗೂ ಟಿಪ್ಸ್ ಸಿಗುತ್ತದೆ. ಆದ್ದರಿಂದ ಸುಂದರ ಯುವತಿಯರು ಆಗಸದ ವೇಟರ್ ಹುದ್ದೆಗಿಂತ ಭೂಮಿಯ ಮೇಲಿನ ಬಾರ್ ಆಂಡ್ ರೆಸ್ಟಾರೆಂಟ್ ಹುದ್ದೆಯನ್ನೇ ಹೆಚ್ಚಾಗಿ ಆರಿಸಿಕೊಂಡಿದ್ದಾರೆ. ಆದ್ದರಿಂದ, ಅಮೆರಿಕದ ವಿಮಾನದಲ್ಲಿ ‘ಕಿಂಗ್‌ಫಿಷರ್ ಚೆಲುವೆಯರು’ ಕಡಿಮೆ.


4. ಬಡವರು ಸಾರ್ ಬಡವರು

ಅಮೆರಿಕ ಎಂದರೆ ಶ್ರೀಮಂತ ರಾಷ್ಟ್ರ. ಅಲ್ಲಿ ಸಿಕ್ಕಾಪಟ್ಟೆ ಹಣ ಗಳಿಸಿ ಶ್ರೀಮಂತರಾಗಲು ಸಾಧ್ಯ ಎಂದು ಕನಸು ಕಾಣುವವರು ಬಹಳಷ್ಟು ಜನ. ಅದಕ್ಕೆ ‘ಅಮೆರಿಕನ್ ಡ್ರೀಮ್ಸ್’ ಎನ್ನೋ ನುಡಿಗಟ್ಟೂ ಇದೆ. ಸಾಲದು ಅನ್ನುವಂತೆ, ಅಮೆರಿಕದ ಚಿತ್ರಣ ಕೊಡುವಾಗ ಯಾರೂ ಅಲ್ಲಿನ ಭಿಕ್ಷುಕರ ಚಿತ್ರ ತೋರಿಸುವುದಿಲ್ಲ. ವಾಸ್ತವ ವೆಂದರೆ, ಅಲ್ಲಿ ಶೇ.೨೬ರಷ್ಟು ಬಡವರಿದ್ದಾರೆ. ಅದರಲ್ಲೂ ಈಗ ಆರ್ಥಿಕ ಹಿಂಜರಿತ. ಹಾಗಾಗಿ, ಕೆಲಸ -ಮನೆ ಕಳೆದುಕೊಂಡ ವರ ಸಂಖ್ಯೆ ಲೆಕ್ಕಕ್ಕೆ ಸಿಗುತ್ತಿಲ್ಲ. ೧೯೩೦ರ ದಶಕದಲ್ಲಿ ಅಮೆರಿಕದಲ್ಲಿ ಇದ್ದಂಥ ಬಡತನ ಈಗಲೂ ಕಾಡುವ ಆತಂಕ ಉಂಟಾಗಿದೆ. ಅಮೆರಿಕದಲ್ಲಿ ಭಾರತದಷ್ಟು ಭಿಕ್ಷಕರು ಹಾಗೂ ಕಡು ಬಡವರಿಲ್ಲ, ನಿಜ. ಆದರೆ, ಸಾಕಷ್ಟು ಭಿಕ್ಷುಕರಿದ್ದಾರೆ. ಸ್ಯಾಂಪಲ್‌ಗೆ ಈ ಚಿತ್ರಗಳನ್ನು ನೋಡಿ.



5. ಅಮೆರಿಕಾ ಗಾಂಧಿ

ಅಮೆರಿಕದ ಬಂಡವಾಳಶಾಹಿ ಸಿದ್ಧಾಂತಕ್ಕೂ ಮಹಾತ್ಮಾ ಗಾಂಧಿಯ ‘ಗಾಂಧಿಯನ್’ ಸಿದ್ಧಾಂತಕ್ಕೂ ಹಗಲು -ರಾತ್ರಿಗಿರುವಷ್ಟು ವ್ಯತ್ಯಾಸ. ಆದರೂ, ಮಹಾತ್ಮಾ ಗಾಂಧಿ ಅಮೆರಿಕದಲ್ಲಿ ಫೇಮಸ್. ಎಷ್ಟೆಂದರೆ, ಎನಹ್ಯಾಮ್‌ನ ಒಂದು ರಸ್ತೆಗೆ ಮಹಾತ್ಮಾ ಗಾಂಧಿ ರಸ್ತೆ ಎಂದೇ ಹೆಸರಿಡಲಾಗಿದೆ. ಅಲ್ಲದೇ, ಅಮೆರಿಕದಲ್ಲೂ ಒಂದಷ್ಟು ಗಾಂಧೀಜಿ ಪ್ರತಿಮೆಗಳಿವೆ. ವಾಷಿಂಗ್‌ಟನ್ ಡಿ.ಸಿ.ಯಲ್ಲಿ ಭಾರತೀಯ ರಾಯಭಾರಿ ಕಚೇರಿಯ ಮುಂದೆ ಒಂದು ಗಾಂಧಿ ಪ್ರತಿಮೆ ಹಾಗೂ ಸ್ಯಾನ್‌ಫ್ರಾನ್ಸಿಸ್ಕೋ ಬಂದರಿನಲ್ಲಿ ಒಂದು ಪ್ರತಿಮೆ ನನ್ನ ಕಣ್ಣಿಗೆ ಬಿತ್ತು.

6. ಇಂಗು ತಿಂದ ಮಾಂಗ್‌ರು!

ಭಾರತದಲ್ಲಿ ಅಕ್ರಮ ಬಾಂಗ್ಲಾ ದೇಶೀಯರು, ಟಿಬೇಟಿಯನ್ನರು ಇದ್ದಾರೆ ಎಂಬ ಕೂಗು ಇಂದು ನಿನ್ನೆಯದಲ್ಲ. ಬಾಂಗ್ಲಾ ಯುದ್ಧ ಹಾಗೂ ಟಿಬೆಟ್ ಮೇಲೆ ಚೀನಾ ಆಕ್ರಮಣ ಸಂದರ್ಭದಲ್ಲಿ ಭಾರತ ನಿರಾಶ್ರಿತ ಟಿಬೆಟಿಯನ್ನರು ಹಾಗೂ ಬಾಂಗ್ಲಾ ದೇಶೀಯರಿಗೆ ಆಶ್ರಯ ನೀಡಿತು. ಅದಕ್ಕಾಗಿ ಬಾಂಗ್ಲಾ ಕ್ಯಾಂಪ್ ಹಾಗೂ ಟಿಬೆಟಿಯನ್ನರ ಕ್ಯಾಂಪ್‌ಗಳು ಭಾರತದಲ್ಲಿ ತಲೆ ಎತ್ತಿದವು. ಆದರೆ, ಅಲ್ಲಿ ಈಗಲೂ ಅನೇಕರು ಅಕ್ರಮ ವಲಸಿಗರಾಗೇ ಉಳಿದುಕೊಂಡಿರುವುದು ಸತ್ಯ.

ಜಗತ್ತಿನಲ್ಲೇ ಅತ್ಯಂತ ಬಿಗಿ ಇಮಿಗ್ರೇಶನ್ ವ್ಯವಸ್ಥೆ ಹಾಗೂ ವಿಸಾ ಪದ್ಧತಿಯನ್ನು ಹೊಂದಿರುವ ಅಮೆರಿಕದಲ್ಲೂ ಇಂತಹ ಅಕ್ರಮ ವಲಸಿಗರ ಸಮಸ್ಯೆ ಇದೆ ಎಂದರೆ ನಂಬುತ್ತೀರಾ?

ಒಂದು ಕಡೆ, ಲ್ಯಾಟಿನ್ ಅಮೆರಿಕನ್ ಬಡವರು ಹಾಗೂ ಕರಿಯರು ಅಮೆರಿಕದ ಬಿಗಿ ಭದ್ರತೆಯನ್ನೂ ಭೇದಿಸಿಕೊಂಡು ಸಮುದ್ರ ಹಾಗೂ ಮೆಕ್ಸಿಕೋ ಭೂಭಾಗದ ಮೂಲಕ ಅಮೆರಿಕದ ಒಳಗೆ ನುಸುಳಿ ಅಕ್ರಮ ವಲಸಿಗರಾಗಿ ನೆಲೆಸಿದ್ದರೆ, ಇನ್ನೊಂದೆಡೆ, ಅಮೆರಿಕವೇ ಈ ಹಿಂದೆ ಆಶ್ರಯ ನೀಡಿದ್ದ ಚೀನೀ ಹಾಗೂ ಮಾಂಗ್ ಜನರು ಈಗಲೂ ಅಕ್ರಮ ವಲಸಿಗರಾಗೇ ಉಳಿದುಕೊಂಡಿದ್ದಾರೆ. ಮಿಲ್‌ವಾಕಿಯಲ್ಲಿ ಸಿಕ್ಕ ಮಾಂಗ್ ಸಮುದಾಯದ ಹೋರಾಟಗಾರ ಕೆವಿನ್ ಹರ್ ತಮ್ಮ ಜನರ ತ್ರಿಶಂಕು ಸ್ಥಿತಿಯನ್ನು ಹೇಳಿಕೊಂಡು ಗೋಳಿಟ್ಟ.

ವಿಯೆಟ್ನಾಂ ಯುದ್ಧ ನಡೆದಾಗ ಅಲ್ಲಿನ ಮಾಂಗ್ ಜನಾಂಗ ಅಮೆರಿಕಕ್ಕೆ ನೆರವು ನೀಡಿತು. ಪರಿಣಾಮವಾಗಿ ಸ್ಥಳೀಯರಿಂದ ಮಾಂಗ್ ಜನಾಂಗ ತೀವ್ರ ಹಲ್ಲೆಗೊಳಗಾಯಿತು. ಆಗ, ಅಮೆರಿಕ, ಈ ಮಾಂಗ್ ನಿರಾಶ್ರಿತರನ್ನು ಅಮೆರಿಕಕ್ಕೆ ಕರೆತಂದು ವಸತಿ ಕ್ಯಾಂಪ್ ನಿರ್ಮಿಸಿಕೊಟ್ಟಿತು. ಆದರೆ, ಅವರಿಗೆ, ಪೌರತ್ವ ನೀಡಲೇ ಇಲ್ಲ. ಹಲ ದಶಕಗಳ ಬಳಿಕವೂ ಮಾಂಗ್‌ರು ಅಮೆರಿಕದಲ್ಲಿ ಅಕ್ರಮ ವಲಸಿಗರು ಎಂಬ ಪಟ್ಟ ಹೊತ್ತುಕೊಂಡೇ ಬದುಕುತ್ತಿದ್ದಾರೆ. ಈ ಮಾಂಗ್‌ರು ಇಂದೂ ಅಮೆರಿಕದಲ್ಲಿ ಯಾವುದೇ ಗೌರವಾನ್ವಿತ ಉದ್ಯೋಗಕ್ಕೆ ಸೇರಲು ಸಾಧ್ಯವಾಗುತ್ತಿಲ್ಲ. ಏಕೆಂದರೆ, ಅಮೆರಿಕದಲ್ಲಿ ಸೋಷಿಯಲ್ ಸೆಕ್ಯುರಿಟಿ ನಂಬರ್ ಇಲ್ಲದ ವ್ಯಕ್ತಿಗೆ ಕಾನೂನು ಬದ್ಧ ಉದ್ಯೋಗ ಸಿಗುವುದಿಲ್ಲ. ಹೀಗಾಗಿ, ಅಮೆರಿಕ ನಂಬಿ ಬಂದ ಮಾಂಗರು ಈಗ ಇಂಗು ತಿಂದ ಮಂಗನಂತಾಗಿದ್ದಾರೆ!

(ಇಲ್ಲಿಗೆ ‘ಸ್ಟೇಟ್ ಅಫೇರ್’ ಸರಣಿ ಮುಕ್ತಾಯ)

Tuesday, January 13, 2009

ದಿವಾಳಿ ಜಡ್ಜ್ !


ಭಾಗ - 9

ಅಮೆರಿಕದಲ್ಲಿ ಪೊಲೀಸ್ ಕಮಿಷನರ್ ಅಥವಾ ಕೋರ್ಟುಗಳ ನ್ಯಾಯಾಧೀಶರಾಗಲು ಸಾರ್ವಜನಿಕ ಚುನಾವಣೆಯಲ್ಲಿ ಗೆಲ್ಲಬೇಕು! ಇಂಥ ಪದ್ಧತಿ ಅಮೆರಿಕದಲ್ಲಿ ಮಾತ್ರ ಇದೆ. ಅದಕ್ಕಿಂತ ಅಲ್ಲಿ ‘ದಿವಾಳಿ ಜಡ್ಜ್’ ಇದ್ದಾರೆ. ಗೊತ್ತೇ?


ನ್ನ ಅಜ್ಞಾನವೋ ಅಥವಾ ನಿಮಗೂ ಇದೊಂದು ಹೊಸ ವಿಷಯವೋ ಗೊತ್ತಿಲ್ಲ. ನನಗಂತೂ ಇದು ಸೋಜಿಗವೆನಿಸಿತು.

ಅಮೆರಿಕದ ಜಿಲ್ಲಾ ವರಿಷ್ಠಾಧಿಕಾರಿ ಹುದ್ದೆ ಹಾಗೂ ಕೋರ್ಟುಗಳ ನ್ಯಾಯಾಧೀಶರ ಹುದ್ದೆ ಜಗತ್ತಿನಲ್ಲೇ ವಿಶಿಷ್ಟ. ಏಕೆಂದರೆ, ಈ ಹುದ್ದೆಗಳಿಗೆ ಚುನಾವಣೆ ನಡೆಯುತ್ತದೆ. ನ್ಯಾಯಾಧೀಶರಾಗಲು ಬಯಸುವವರು ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಆಗಲು ಇಚ್ಚಿಸುವವರು ರಾಜಕಾರಣಿಗಳ ರೀತಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಬೇಕು. ಸ್ವಲ್ಪ ಹೆಚ್ಚು ಕಡಿಮೆ ರಾಜಕಾರಣಿಗಳ ರೀತಿಯೇ ಪ್ರಚಾರ ಮಾಡಬೇಕು. ಹಲವಾರು ಮಿಲಿಯನ್ ಡಾಲರ್ ಹಣ ಖರ್ಚು ಮಾಡಬೇಕು. ಹಾಗೂ ತಮ್ಮ ಅಧಿಕಾರಾವಧಿ ಮುಗಿದ ತಕ್ಷಣ ಅಧಿಕಾರ ಬಿಟ್ಟಿಳಿಯಬೇಕು. ಒಂದು ವೇಳೆ ಆಯ್ಕೆಯಾದ ಪೊಲೀಸ್ ವರಿಷ್ಠಾಧಿಕಾರಿ ಅಥವಾ ನ್ಯಾಯಾಧೀಶ ಸರಿಯಾಗಿ ಕೆಲಸ ಮಾಡಲಿಲ್ಲ ಎಂದಾದರೆ ಆತನ್ನು ಜನರು ಮತ್ತೆ ‘ಕಾಲ್ ಬ್ಯಾಕ್’ ಮತದಾನ ಮಾಡಿ ಹುದ್ದೆಯಿಂದ ಕೆಳಗಿಳಿಸಬಹುದು. ಇಂಥದೊಂದು ಪದ್ಧತಿ ಅಮೆರಿಕದಲ್ಲಿ ಮಾತ್ರ ಇದೆ.

ಕಳೆದ ನವೆಂಬರ್ ೪ರಂದು ಅಧ್ಯಕ್ಷೀಯ ಚುನಾವಣೆಯ ಮತದಾನದ ಜೊತೆಯಲ್ಲೇ ಅಮೆರಿಕದ ಅನೇಕ ರಾಜ್ಯಗಳಲ್ಲಿ ಪೊಲೀಸ್ ವರಿಷ್ಠ ಹಾಗೂ ನ್ಯಾಯಾಧೀಶರ ಆಯ್ಕೆಗೂ ಜನ ಓಟು ಹಾಕಿದರು.

ಅಮೆರಿಕದ ಅಧ್ಯಕ್ಷೀಯ ಚುನಾವಣೆ ಎಂದರೆ ಜಗತ್ಪ್ರಸಿದ್ಧ. ಆದರೆ, ಅಲ್ಲಿ ಪ್ರತಿ ವರ್ಷ ನಡೆಯುವ ಇನ್ನಿತರ ಸಹಸ್ರಾರು ಚುನಾವಣೆಗಳ ಬಗ್ಗೆ ಬಹುಜನರಿಗೆ ಗೊತ್ತೇ ಆಗುವುದಿಲ್ಲ. ಅಮೆರಿಕಕ್ಕೆ ಹೋಗಿ ಬಂದ ಅನೇಕರು ವೈಟ್ ಹೌಸ್, ನಯಾಗರಾ ಫಾಲ್ಸು, ಡಿಸ್ನಿ ಲ್ಯಾಂಡು, ಹಾಲಿವುಡ್ಡು, ಲಾಸ್‌ವೇಗಾಸ್ ಅಂತೆಲ್ಲ ಸಾಕಷ್ಟು ಪ್ರವಾಸ ಕಥನ ಬರೆದಿದ್ದಾರೆ. ಆದರೆ, ಅಮೆರಿಕದ ನ್ಯಾಯಾಂಗ ಚುನಾವಣೆ ಅಥವಾ ಷರೀಫ್ ಚುನಾವಣೆ ಕುರಿತ ಬರಹವನ್ನು ನಾನಂತೂ ಓದಿರಲಿಲ್ಲ. ಅದಕ್ಕಾಗಿ, ಪೊಲೀಸ್ ವರಿಷ್ಠ ಹಾಗೂ ನ್ಯಾಯಾಧೀಶರ ಹುದ್ದೆಯ ಚುನಾವಣೆ ನನಗೆ ಸೋಜಿಗ ಎನಿಸಿತು.

ಇದ್ಯಾಕೆ ಹೀಗೆ? ಅಮೆರಿಕದಲ್ಲಿ ಮಾತ್ರ ಈ ವಿಶಿಷ್ಟ ಪದ್ಧತಿ ಯಾಕಿದೆ? ಎಂದು ವಾಷಿಂಗ್‌ಟನ್ ಡಿ.ಸಿ.ಯ ಕ್ಯಾಪಿಟಲ್ ಕಮ್ಯುನಿಕೇಶನ್ ಗ್ರೂಪ್‌ನ ನಿರ್ದೇಶಕರಲ್ಲೊಬ್ಬರಾದ ಅಕ್ರಂ ಎಲಿಯಾಸ್ ಅವರನ್ನು ಕೇಳಿದೆ.

That is the beauty of American Democracy ಎಂದರು ಅವರು.

ಅಮೆರಿಕದ ಜನತಂತ್ರ ಒಂದು ಸಂಪೂರ್ಣ ಪ್ರಜಾಪ್ರಭುತ್ವ ಮಾದರಿ. ಚೆಕ್ ಆಂಡ್ ಬ್ಯಾಲೆನ್ಸ್ ಹಾಗೂ ಎಲ್ಲಾ ಹಂತದಲ್ಲೂ ಪ್ರಜೆಗಳ ಅಭಿಪ್ರಾಯಕ್ಕೆ ಮಹತ್ವ ನೀಡುವುದು ಅಮೆರಿಕ ಪ್ರಜಾಪ್ರಭುತ್ವ ಪದ್ಧತಿಯ ಹೆಗ್ಗುರುತು. ಹಾಗಾಗಿ ಅಮೆರಿಕದಲ್ಲಿ ಜನಮತ ಗಣನೆಗಾಗಿ ನಡೆದಷ್ಟು ಚುನಾವಣೆಗಳು ಜಗತ್ತಿನ ಇನ್ಯಾವ ದೇಶದಲ್ಲೂ ನಡೆಯುವುದಿಲ್ಲ.

ಅಮೆರಿಕದಲ್ಲಿ, ತಮ್ಮ ಬಡಾವಣೆಯ ಮನೆಗಳಿಗೆ ನೀಲಿ ಬಣ್ಣದ ಬದಲು ಹಳದಿ ಬಣ್ಣ ಬಳಿಯೋಣವೇ ಎಂಬ ವಿಷಯದಿಂದ ಹಿಡಿದು ರಾಜ್ಯದ ಸುಪ್ರೀಂ ಕೋರ್ಟಿನ ಮುಖ್ಯನ್ಯಾಯಾಧೀಶರ ಆಯ್ಕೆಯವರೆಗೆ ವಿವಿಧ ವಿಷಯಗಳ ಕುರಿತು ಚುನಾವಣೆ ನಡೆಯುತ್ತದೆ.
ಹಾಗಾದರೆ, ಇರಾಕ್ ಮೇಲೆ ಯುದ್ಧ ಮಾಡಲು ಬುಷ್ ಯಾಕೆ ಜನಾಭಿಪ್ರಾಯ ಕೇಳಲಿಲ್ಲ ಎಂಬ ನನ್ನ ಪ್ರಶ್ನೆಗೆ ಎಲಿಯಾಸ್ ಉತ್ತರ ಒಂದು ದೊಡ್ಡ ನಗು!

ಕೌಂಟಿ ಷರೀಫ್

ನಮ್ಮ ಪೊಲೀಸ್ ಕಮಿಷನರ್ ಅಥವಾ ಎಸ್ಪಿ ಹುದ್ದೆಯ ಅಮೆರಿಕನ್ ಹೆಸರು ‘ಕೌಂಟಿ ಷರೀಫ್’. ಈತ ಆಯಾ ಜಿಲ್ಲೆಯ ಪೊಲೀಸ್ ವಿಭಾಗದ ಚುನಾಯಿತ ಮುಖ್ಯಸ್ಥ. ಈತನ ಅಡಿಯಲ್ಲಿ ಇಡೀ ಪೊಲೀಸ್ ಇಲಾಖೆ ಕೆಲಸ ಮಾಡುತ್ತದೆ. (ಈ ಹುದ್ದೆಗೆ ಸಮಾನಾಂತರವಾಗಿ ನನಗೆ ತಕ್ಷಣದ ಹೋಲಿಕೆ ಕಾಣಿಸಿದ್ದು ಬೆಂಗಳೂರಿನ ಮೇಯರ್ ಹುದ್ದೆ. ಮೇಯರ್ ಕೂಡ ಜನರಿಂದ ಆಯ್ಕೆಯಾದ ಪ್ರತಿನಿಧಿ ತಾನೇ? ಈತನ ಅಡಿಯಲ್ಲಿ ಇಡೀ ಮಹಾನಗರ ಪಾಲಿಕೆ ಕೆಲಸ ಮಾಡುತ್ತದೆ. ಅವಧಿ ಮುಗಿದ ನಂತರ ಆ ಹುದ್ದೆಗೆ ಮತ್ತೆ ಚುನಾವಣೆ ನಡೆಯುತ್ತದೆಯಷ್ಟೇ?)

ಷರೀಫ್‌ಗಳ ಅಧಿಕಾರ ರಾಜ್ಯದಿಂದ ರಾಜ್ಯಕ್ಕೆ, ಕೌಂಟಿಯಿಂದ ಕೌಂಟಿಗೆ ಬದಲಾಗುತ್ತದೆ. ಕೆಲವು ಪ್ರದೇಶಗಳಲ್ಲಿ ಷರೀಫ್‌ಗೆ ಪೂರ್ಣ ಅಧಿಕಾರವಿದ್ದರೆ ಇನ್ನು ಕೆಲವು ಪ್ರದೇಶಗಳಲ್ಲಿ ಷರೀಫ್‌ಗೆ ನಿಗದಿತ ಅಧಿಕಾರ ಮಾತ್ರ ಇದೆ. ಇನ್ನೂ ಕೆಲವೆಡೆ ಷರೀಫ್ ಅಂದರೆ ಭಾರತದ ರಾಷ್ಟ್ರಪತಿಯಂತೆ ಒಂದು ‘ರಬ್ಬರ್ ಸ್ಟಾಂಪ್’ ಮಾತ್ರ.

ನ್ಯಾಯಾಧೀಶರ ಚುನಾವಣೆ

ಷರೀಫ್ ಚುನಾವಣೆಗಿಂತ ನನಗೆ ವಿಚಿತ್ರ ಎನಿಸಿದ್ದು ನ್ಯಾಯಾಂಗ ಚುನಾವಣೆ. ಅಮೆರಿಕದಲ್ಲಿ ಇಡೀ ದೇಶಕ್ಕೆಲ್ಲಾ ಒಂದು ಫೆಡರಲ್ ಸುಪ್ರೀಂ ಕೋರ್ಟ್ ಇದ್ದರೆ, ಪ್ರತಿ ರಾಜ್ಯದಲ್ಲೂ ಒಂದೊಂದು ಸುಪ್ರೀಂ ಕೋರ್ಟ್ ಇದೆ. ರಾಜ್ಯ ಸುಪ್ರೀಂ ಕೋರ್ಟ್ ಸೇರಿದಂತೆ, ಕೆಳ ನ್ಯಾಯಾಲಯಗಳ ನ್ಯಾಯಾಧೀಶರು ಚುನಾವಣೆಯಲ್ಲಿ ಜನರಿಂದಲೇ ಆಯ್ಕೆಯಾಗುತ್ತಾರೆ.

ಈ ಚುನಾವಣೆಯಲ್ಲಿ ನ್ಯಾಯಾಧೀಶರು ತಮಗೇ ಓಟು ನೀಡಿ ಎಂದು ಮತಯಾಚಿಸಬೇಕು. ‘ನನಗೆ ಓಟು ನೀಡಿದರೆ ನಾನು ಉತ್ತಮ ಜಡ್ಜ್‌ಮೆಂಟ್ ನೀಡುತ್ತೇನೆ’ ಎಂದು ಪ್ರಚಾರ ಮಾಡಬೇಕು. ಇದಕ್ಕಾಗಿ ಕೆಲವು ಅಭ್ಯರ್ಥಿಗಳು ಹತ್ತಾರು ಮಿಲಿಯನ್ ಡಾಲರ್ ಹಣ ಖರ್ಚು ಮಾಡುತ್ತಾರೆ. ಅವರ ಅಧಿಕಾರಾವಧಿ ಕೆಲವು ರಾಜ್ಯಗಳಲ್ಲಿ ೧೦ ವರ್ಷ ಇನ್ನು ಕೆಲವು ರಾಜ್ಯಗಳಲ್ಲಿ ೧೫ ವರ್ಷ.

ಅಮೆರಿಕದ ಫೆಡರಲ್ ಕೋರ್ಟಿನ ನ್ಯಾಯಾಧೀಶರು ಮಾತ್ರ ಸರ್ಕಾರದಿಂದ ನೇಮಕಗೊಳ್ಳುತ್ತಾರೆ. ಆದರೆ, ಅವರಿಗೆ ನಿವೃತ್ತಿ ಎಂಬುದೇ ಇಲ್ಲ. ಸಾಯುವವರೆಗೂ ಅವರು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರು! ಇದೂ ಒಂದು ಅಮೆರಿಕ ನ್ಯಾಯಾಂಗ ವ್ಯವಸ್ಥೆಯ ವೈಶಿಷ್ಟ್ಯ.

ಒಂದು ವೇಳೇ, ಇದೇ ವ್ಯವಸ್ಥೆ ಭಾರತದಲ್ಲಿ ಬಂದರೆ ಹೇಗಿರುತ್ತದೆ? -ಎಂದು ಒಂದು ಕ್ಷಣ ಯೋಚಿಸಿದೆ. ನ್ಯಾಯಾಧೀಶರು ಹಾಗೂ ಪೊಲೀಸರ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಮುಂತಾದ ಪಕ್ಷಗಳ ಅಭ್ಯರ್ಥಿಗಳು ಸ್ಪರ್ಧಿಸುತ್ತಾರೆ. ಮುಂದೆ ಪೊಲೀಸ್ ಮುಖ್ಯಸ್ಥರಾಗುವವರು ಹಾಗೂ ನ್ಯಾಯಾಧೀಶರಾಗುವವರು ಸಿಕ್ಕಾಪಟ್ಟೆ ಹಣ, ಹೆಂಡ, ಸೀರೆ, ಪಂಚೆ ಮುಂತಾದವುಗಳನ್ನು ಹಂಚುತ್ತಾರೆ. ಆರಿಸಿ ಬಂದಮೇಲೆ, ಒಂದು ಪಕ್ಷದ ಪೊಲೀಸರು ಇನ್ನೊಂದು ಪಕ್ಷದ ಅನುಯಾಯಿಗಳನ್ನು ಹಿಗ್ಗಾಮುಗ್ಗಾ ಹಿಂಸಿಸಿ ಬಂಧಿಸಿ ಜೈಲಿಗೆ ನೂಕುತ್ತಾರೆ. ಅದೇ ಪಕ್ಷದ ನ್ಯಾಯಾಧೀಶ ಇದ್ದರೆ ಕೋರ್ಟಿನಲ್ಲಿ ಆ ಪ್ರಕರಣಕ್ಕೆ ಜಯವಾಗುತ್ತೆ. ಆದರೆ, ಬೇರೆ ಪಕ್ಷದ ನ್ಯಾಯಾಧೀಶ ಇದ್ದರೆ ಕೇಸ್ ಪುಸ್ ಆಗುತ್ತದೆ! ಓ ಗಾಡ್... ಸದ್ಯ ಭಾರತದಲ್ಲಿ ಇಷ್ಟೊಂದು ಕೆಟ್ಟ ವ್ಯವಸ್ಥೆಯಿಲ್ಲ ಎಂದು ಸಮಾಧಾನ.

ಹಾಗಾದರೆ, ಅಮೆರಿಕದಲ್ಲಿ ಮಾತ್ರ ಯಾಕೆ ಈ ವ್ಯವಸ್ಥೆ ವಿಫಲವಾಗಿಲ್ಲ?

ಏಕೆಂದರೆ, ಅಮೆರಿಕದ ಶೇ.೯೦ರಷ್ಟು ಮತದಾರರು ಪ್ರಜ್ಞಾವಂತ ಮತದಾರರು. ಅವರು ಹಣ, ಹೆಂಡಕ್ಕೆ ಮತ ಚಲಾಯಿಸುವುದಿಲ್ಲ. ಆದ್ದರಿಂದ, ಅಲ್ಲಿ ಭ್ರಷ್ಟಾಚಾರದಿಂದ ಆರಿಸಿಬರುವುದು ಕಷ್ಟ. ಅದಕ್ಕಾಗಿ, ಅಲ್ಲಿ ಷರೀಫ್ ಹಾಗೂ ನ್ಯಾಯಾಂಗ ಚುನಾವಣಾ ವ್ಯವಸ್ಥೆ ಯಶಸ್ವಿಯಾಗುತ್ತಿದೆ.

ದಿವಾಳಿ ಜಡ್ಜ್

ಕೊನೆಯಲ್ಲೊಂದು ಕಿರು ಮಾಹಿತಿ: ಅಮೆರಿಕದ ಜಿಲ್ಲಾ ನ್ಯಾಯಾಲಯಗಳಲ್ಲಿ ‘ದಿವಾಳಿ ನ್ಯಾಯಾಧೀಶ’ - Bankruptcy Judge ಎಂಬ ವಿಚಿತ್ರ ಹುದ್ದೆಯೊಂದಿದೆ. ಈ ನ್ಯಾಯಾಧೀಶರು ಅಮೆರಿಕದ ನ್ಯಾಯಾಲಯ ಹಾಗೂ ಸಂಸತ್ತಿನ ಶಿಫಾರಸುಗಳ ಮೂಲಕ ನೇಮಕೊಳ್ಳುತ್ತಾರೆ. ಅಮೆರಿಕದಲ್ಲಿ ದಿವಾಳಿಯಾಗುವವರ ಪ್ರಕರಣ ಅಧಿಕ. ಅಂಥ ದಿವಾಳಿ ಪ್ರಕರಣಗಳನ್ನು ಪರಿಶೀಲಿಸಿ ಅವರಿಗೆ ದಿವಾಳಿ ಪಟ್ಟ ಕರುಣಿಸುವುದು ಈ ನ್ಯಾಯಾಧೀಶರ ಕೆಲಸ!

ನಾನು ಕಳೆದ ಅಕ್ಟೋಬರ್‌ನಲ್ಲಿ ಅಮೆರಿಕದಲ್ಲಿದ್ದಾಗ ಅಮೆರಿಕದಲ್ಲಿ ಆರ್ಥಿಕ ಹಿಂಜರಿತದ ಪರಿಣಾಮವಾಗಿ ದಿವಾಳಿಯಾಗುವವರ ಸಂಖ್ಯೆ ಹೆಚ್ಚಾಗಿತ್ತು. ಅದಕ್ಕಾಗಿ ಅಮೆರಿಕದ ದಿವಾಳಿ ನ್ಯಾಯಾಧೀಶರಿಗೆಲ್ಲ ಬಿಡುವಿಲ್ಲದಷ್ಟು ಕೆಲಸವಿತ್ತು!

Sunday, January 04, 2009

ಕಾಡೊಂದು ಪಟ್ಟಣ - ರಾಸ್


ಭಾಗ - 8

ಇದು ಅಮೆರಿಕದ ಇನ್ನೊಂದು ಮಗ್ಗಲು



ಈ ಪಟ್ಟಣವನ್ನು ಅಂಡರ್ ಎಸ್ಟಿಮೇಟ್ ಮಾಡಬೇಡಿ. ಫೋರ್ಬ್ಸ್ ಪತ್ರಿಕೆ ಸಮೀಕ್ಷೆಯ ಪ್ರಕಾರ, ಇದು ಅಮೆರಿಕದ ಒಂಬತ್ತನೇ ಅತ್ಯಂತ ದುಬಾರಿ ವಾಸ ಪ್ರದೇಶ. ಅಮೆರಿಕದ ರಿಯಲ್ ಎಸ್ಟೇಟ್ ಭಾಷೆಯಲ್ಲೇ ಹೇಳುವುದಾದರೆ 9th Costliest Residential Zip Code!

ನಿಜ ಹೇಳಿ. ಅಮೆರಿಕದ ಪಟ್ಟಣ ಎಂದರೆ, ನಿಮ್ಮ ಕಲ್ಪನೆ ಹೇಗಿರುತ್ತದೆ? ಶೇ.೮೦ರಷ್ಟು ಭಾರತೀಯರ ಪ್ರಕಾರ ಅಮೆರಿಕ ಎಂದರೆ... ಹಾಲಿವುಡ್ ಸಿನೆಮಾಗಳಲ್ಲಿ ಕಾಣುವ ಎತ್ತರೆತ್ತರದ ಕಟ್ಟಡ, ನೆಲ-ಗಗನ ಕಾಣದಷ್ಟು ಗಗನ ಚುಂಬಿಗಳ ದಟ್ಟ ಕಾಂಕ್ರೀಟ್ ಕಾಡು, ಬ್ಯೂಸಿಯಾಗಿ ಓಡಾಡುವ ಜನ ಜಂಗುಳಿ, ಕಾರ್ ಕಾರ್ ಕಾರ್...

ಕ್ಷಮಿಸಿ. ನ್ಯೂಯಾರ್ಕ್ ಸಿಟಿ ಅಥವಾ ಷಿಕಾಗೋ ಶಹರದಂಥ ಅಮೆರಿಕದ ಕೆಲ ನಗರಗಳು ಮಾತ್ರ ಹಾಗಿವೆ. ಉದಾಹರಣೆಗೆ, ಅಮೆರಿಕದ ರಾಜಧಾನಿ ವಾಷಿಂಗ್‌ಟನ್ ಡಿ.ಸಿ.ಯೇ ಹಾಗಿಲ್ಲ. ೫೫೫ ಅಡಿ ಎತ್ತರದ ‘ವಾಷಿಂಗ್‌ಟನ್ ಸ್ಮಾರಕ’ ಸ್ತಂಭ ಈ ನಗರದ ಅತಿ ಎತ್ತರದ ಕಟ್ಟಡ. ಕಾನೂನಿನ ಪ್ರಕಾರ ವಾಷಿಂಗ್‌ಟನ್ ಡಿ.ಸಿ.ಯಲ್ಲಿ ಈ ಸ್ಮಾರಕಕ್ಕಿಂತ ಎತ್ತರದ ಕಟ್ಟಡವನ್ನು ನಿರ್‍ಮಿಸುವಂತಿಲ್ಲ. ಹಾಗಾಗಿ, ವಿಶ್ವದ ಹಿರಿಯಣ್ಣನ ರಾಜಧಾನಿಯಲ್ಲಿ ಗಗನಚುಂಬಿ ಕಟ್ಟಡಗಳೇ ಇಲ್ಲ! ಜಗತ್ಪ್ರಸಿದ್ಧ ಲಾಸ್‌ವೇಗಾಸ್ ಇನ್ನೊಂದು ಉದಾಹರಣೆ. ಪ್ರತಿ ೩ ನಿಮಿಷಕ್ಕೆ ಇಲ್ಲಿಗೆ ಒಂದು ವಿಮಾನದ ತುಂಬಾ ಜನರು ಬರುತ್ತಾರೆ. ಮತ್ತೆ ಮೂರು ನಿಮಿಷಕ್ಕೆ ಒಂದು ವಿಮಾನದಷ್ಟು ಜನರು ಹಾರಿ ಹೋಗುತ್ತಾರೆ. ಆದರೆ, ಇದೊಂದು ಬರೀ ಮರುಭೂಮಿಯಂಥ ಊರು! ಕೇವಲ ಒಂದು ರಸ್ತೆ ಮಾತ್ರ ಇಲ್ಲಿನ ಹೈಲೈಟ್. ಝಗಮಗಿಸುವ ನಿಯಾನ್ ದೀಪಗಳ, ಅಂದಕ್ಕಿಂತ ಅಂದದ ವಿನ್ಯಾಸದ, ಹಲಮಹಡಿ ಕಟ್ಟಡಗಳ ಜೂಜು ಅಡ್ಡೆಗಳು, ವಯಸ್ಕರ ಮನರಂಜನಾ ಕೇಂದ್ರಗಳು ಹಾಗೂ ಹೊಟೆಲ್‌ಗಳೇ ಇರುವ ರಸ್ತೆ ಇದು. ಇದನ್ನು ಬಿಟ್ಟರೆ ಇಡೀ ಊರು ಮಾಮೂಲಿ.

ಇನ್ನು ‘ರಾಸ್’ ಎಂಬೋ ಪಟ್ಟಣವಂತೂ ‘ಅಮೆರಿಕದ ಕಲ್ಪನಾ ನಗರಿಗೆ’ ತದ್ವಿರುದ್ಧ ಪ್ರಪಂಚ.

ಕಳೆದ ಅಕ್ಟೋಬರ್‌ನಲ್ಲಿ, ‘ರಾಸ್ ಟೌನ್’ಗೆ ಭೇಟಿ ನೀಡುವ ಅವಕಾಶ ನನಗೆ ಸಿಕ್ಕಿತ್ತು. ಸ್ಯಾನ್ ಫ್ರಾನ್ಸಿಸ್ಕೋದ ಮರೈನ್ ಕೌಂಟಿಯ ಒಂದು ಪಟ್ಟಣ ಇದು. ಗೋಲ್ಡನ್ ಗೇಟ್ ಬ್ರಿಜ್‌ನಿಂದ ೨೦ ನಿಮಿಷದ ಡ್ರೈವ್. ಸಮುದ್ರದ ಹಾದಿಯಲ್ಲಿ ಬಂದರೆ, ಸ್ಯಾನ್‌ಪ್ರಾನ್ಸಿಸ್ಕೋ ಪಿಯರ್-೧ ಬಂದರಿನಿಂದ ಮುಕ್ಕಾಲು ಗಂಟೆ ಅದ್ಭುತ ಜಲಯಾತ್ರೆ! ಗಾಡ್ ಫಾದರ್, ಜಾಕ್, ವಾಟ್ ಡ್ರೀಮ್ಸ್ ಮೇ ಕಮ್ ಮುಂತಾದ ಸುಪ್ರಸಿದ್ಧ ಚಿತ್ರಗಳು ಈ ಊರಿನಲ್ಲೇ ಚಿತ್ರೀಕರಣವಾಗಿದೆ.

ವಿಶೇಷವೆಂದರೆ, ಈ ಪಟ್ಟಣದ ತುಂಬಾ ದಟ್ಟ ಕಾಡು! ಎತ್ತರೆತ್ತರದ ಶತಾಯುಷಿ ರೆಡ್‌ವುಡ್ ಮರಗಳ ಕಾನನ. ಪಟ್ಟಣ ಎಂದರೆ ನಂಬಲು ಸಾಧ್ಯವೇ ಇಲ್ಲ. ಹಳ್ಳಿ ಎಂದಿದ್ದರೂ ಪರವಾಗಿರಲಿಲ್ಲ. ಆದರೆ, ನಿಜಕ್ಕೂ ಇದೊಂದು ಪಟ್ಟಣ. ಗುಂಡಿಗಳಿಲ್ಲದ ಟಾರ್ ರಸ್ತೆಗಳು, ಎಲ್ಲೆಡೆ ಟ್ರಾಫಿಕ್ ಸಿಗ್ನಲ್ ಬೋರ್‍ಡುಗಳು, ಸಿಗ್ನಲ್ ಲೈಟುಗಳು, ಒಂದು ಬಿಸಿನೆಸ್ ಬೀದಿ, ಅಲ್ಲಿ ಹತ್ತೋ ಹನ್ನೆರಡೋ ಅಂಗಡಿಗಳು, ಟೌನ್ ಅಂದರೆ ಅಷ್ಟೇ.

ಮಿಕ್ಕಂತೆ ಒಂದು ಟೌನ್ ಹಾಲ್, ಟೌನ್ ಮುನಿಸಿಪಾಲಿಟಿ, ಅಗ್ನಿಶಾಮಕ ಕೇಂದ್ರ, ಪೊಲೀಸ್ ಠಾಣೆ, ಒಂದು ದೊಡ್ಡ ಪೋಸ್ಟಾಫಿಸು, ಒಂದು ಗಾಲ್ಫ್ ಕ್ಲಬ್, ಎರಡು ಶಾಲೆಗಳು, ಗ್ರಂಥಾಲಯ, ಹಿಸ್ಟರಿ ಸೊಸೈಟಿ, ಸುಮಾರು ೮೦೦ ಮನೆಗಳು ಮತ್ತು ೨೫೦೦ ಜನರು.

ಹಾಗಂತ ಈ ಪಟ್ಟಣವನ್ನು ಅಂಡರ್ ಎಸ್ಟಿಮೇಟ್ ಮಾಡಬೇಡಿ. ಫೋರ್‍ಬ್ಸ್ ಪತ್ರಿಕೆ ಸಮೀಕ್ಷೆಯ ಪ್ರಕಾರ, ಇದು ಅಮೆರಿಕದ ಒಂಬತ್ತನೇ ಅತ್ಯಂತ ದುಬಾರಿ ವಾಸ ಪ್ರದೇಶ. ಅಮೆರಿಕದ ರಿಯಲ್ ಎಸ್ಟೇಟ್ ಭಾಷೆಯಲ್ಲೇ ಹೇಳುವುದಾದರೆ 9th Costliest Residential Zip Code!

ಕರಡಿ ಲಾಂಛನ:

ಅಮೆರಿಕ ಸರ್‍ಕಾರಿ ವ್ಯವಸ್ಥೆಯ ಒಂದು ವೈಶಿಷ್ಟ್ಯ ಬಹಳ ಜನರಿಗೆ ಗೊತ್ತಿಲ್ಲ. ಅಮೆರಿಕದಲ್ಲೂ ಭಾರತದಂತೆ ಬಹು ಹಂತದ ಸರ್‍ಕಾರವಿದೆ. ಕೇಂದ್ರ ಸರ್‍ಕಾರ, ರಾಜ್ಯ ಸರ್‍ಕಾರ, ಜಿಲ್ಲಾ ಪಂಚಾಯ್ತಿ, ಪಟ್ಟಣ ಪಂಚಾಯ್ತಿ, ಗ್ರಾಮ ಪಂಚಾಯ್ತಿ ಇದ್ದಂತೆ, ಅಲ್ಲಿ
ಫೆಡರಲ್, ಸ್ಟೇಟ್, ಕೌಂಟಿ, ಟೌನ್, ವಿಲೇಜ್ ಸರ್‍ಕಾರಗಳಿವೆ. ಅಮೆರಿಕ ದೇಶಕ್ಕೆ ಒಂದು ಧ್ವಜ ಮತ್ತು ಲಾಂಛನ ಇರುವಂತೆ ಅಲ್ಲಿ ಪ್ರತಿ ರಾಜ್ಯ, ಜಿಲ್ಲೆ, ಪಟ್ಟಣ, ಗ್ರಾಮಕ್ಕೂ ಒಂದೊಂದು ಧ್ವಜ ಮತ್ತು ಲಾಂಛನ ಇದೆ. ಆದ್ದರಿಂದ, ಅಮೆರಿಕ ಸರ್‍ಕಾರದ ಕಾರ್‍ಯಕ್ರಮಗಳಲ್ಲಿ ಬೇರೆ ಬೇರೆ ರೀತಿಯ ಅನೇಕ ಧ್ವಜಗಳನ್ನು ಕಾಣಬಹುದು. ಪ್ರತಿ ಹಂತದ ಸರ್‍ಕಾರವೂ ತನಗಿಂತ ಉನ್ನತ ಹಂತದ ಸರ್‍ಕಾರಕ್ಕೆ ಅಧೀನವಾಗಿದ್ದರೂ ಸ್ವತಂತ್ರ ‘ದೇಶದಂತೆ’ ಕಾರ್‍ಯನಿರ್‍ವಹಿಸುತ್ತದೆ. ಪ್ರತಿ ಹಂತದ ಸರ್‍ಕಾರವೂ ತನ್ನ ಉನ್ನತ ಹಂತದ ಸರ್‍ಕಾರದ ಕಾನೂನುಗಳನ್ನಲ್ಲದೇ ತನ್ನದೇ ಸಂವಿಧಾನವನ್ನೂ, ಕಾನೂನನ್ನೂ, ತೆರಿಗೆ ವ್ಯವಸ್ಥೆಯನ್ನೂ, ನ್ಯಾಯಾಂಗ ವ್ಯವಸ್ಥೆಯನ್ನೂ ಹೊಂದಿರುತ್ತದೆ.

ಈ ಹಿನ್ನೆಲೆಯಲ್ಲಿ ರಾಸ್ ಪಟ್ಟಣಕ್ಕೂ ತನ್ನದೆ ಆದ ಕಾನೂನು, ನೀತಿ ನಿಯಮಾವಳಿ, ಧ್ವಜ, ಲಾಂಛನ ಇದೆ. ಈ ಪಟ್ಟಣದ ಲಾಂಛನ ಕರಡಿ.

ಅಲ್ಲೊಂದು ಪಟ್ಟಣ ಪಂಚಾಯ್ತಿ

ಕಳೆದ ವರ್‍ಷವಷ್ಟೇ ಶತಮಾನೋತ್ಸವ ಆಚರಿಸಿರುವ ಈ ಪಟ್ಟಣದ ಆಡಳಿತ ನೋಡಿಕೊಳ್ಳಲು ಟೌನ್ ಕೌನ್ಸಿಲ್ ಇದೆ. ಇದು ನಮ್ಮ ಪಟ್ಟಣ ಪಂಚಾಯ್ತಿ ಇದ್ದಹಾಗೆ. ಆದರೆ, ನೋ ಪಾಲಿಟಿಕ್ಸ್!

ಈ ಪಂಚಾಯ್ತಿ ತನ್ನ ಊರನ್ನು ಹೇಗೆ ಅಭಿವೃದ್ಧಿ ಮಾಡುತ್ತದೆ, ಹೇಗೆ ರಕ್ಷಿಸಿಕೊಳ್ಳುತ್ತದೆ -ಎನ್ನುವುದಕ್ಕೆ ಕೆಲವು ಉದಾಹರಣೆ ನೋಡಿ.

ಊರೆಂದರೆ, ಮನೆ ಕಟ್ಟುವುದು, ಬೀಳಿಸುವುದು, ನವೀಕರಿಸುವುದು ಇದ್ದದ್ದೇ. ಕಟ್ಟಡ ಕಾಮಗಾರಿ ಎಂದರೆ, ಮಣ್ಣು, ಸಿಮೆಂಟು, ಜಲ್ಲಿ ಕಲ್ಲು ಸಾಗಣೆ, ಯಂತ್ರಗಳ ಕರ್‍ಕಶ ಹೊಗೆ, ಶಬ್ದ, ಧೂಳು, ಕಾಮಗಾರಿಯ ಸುತ್ತಲ ಪ್ರದೇಶ ಹಾಗೂ ರಸ್ತೆ ತುಂಬ ಗಲೀಜು... ಇವೆಲ್ಲಾ ನಮ್ಮೂರಿನಲ್ಲಿ ಸಾಮಾನ್ಯ ತಾನೇ? ಆದರೆ, ಈ ಪಟ್ಟಣದ ಪಂಚಾಯ್ತಿ ಇದಕ್ಕೆಲ್ಲಾ ಕಠಿಣ ಕಾನೂನು ರೂಪಿಸಿದೆ. ಮನೆ ಕಟ್ಟಲು ಕಾಲಾವಕಾಶವನ್ನು ನಿಗದಿಪಡಿಸುತ್ತದೆ. ನಮ್ಮೂರಿನಂತೆ ಹಲವಾರು ವರ್‍ಷ ಮನೆ ಕಟ್ಟುತ್ತಲೇ ಇರುವಂತಿಲ್ಲ. ನಿಗದಿತ ಅವಧಿಯೊಳಗೆ ಮನೆ ಕಟ್ಟಿ ಮುಗಿಸದಿದ್ದರೆ ಯದ್ವಾತದ್ವಾ ದಂಡ ವಿಧಿಸುತ್ತದೆ. ಬೇಕಾದರೆ ನಿರ್‍ಮಾಣ ಪರವಾನಗಿಯನ್ನೂ ರದ್ದು ಪಡಿಸುತ್ತದೆ. ಕಟ್ಟುವವರು ಊರು ಗಲೀಜು ಮಾಡಿದರೂ ವಿಪರೀತ ದಂಡ.

ಮನೆ ಕಟ್ಟುವವರು ಇಲ್ಲಿನ ಕಾಡಿನ ಅಂದಕ್ಕೆ ಸರಿಯಾದ ವಿನ್ಯಾಸದ ಮನೆಯನ್ನು ಮಾತ್ರ ಕಟ್ಟಬಹುದು. ಮನೆಗಳಿಗೆ ಯಾವ ಯಾವ ಬಣ್ಣ ಬಳಸಬಹುದು ಎಂಬುದನ್ನು ನಿರ್‍ಧರಿಸಲು ಈ ಪಟ್ಟಣ ಪಂಚಾಯ್ತಿ ಊರಿನಲ್ಲಿ ಚುನಾವಣೆ ನಡೆಸಿ ಜನಾಭಿಪ್ರಾಯ ಪಡೆಯುತ್ತದೆ.

ಇಲ್ಲಿ ಅತ್ಯಾಧುನಿಕ ಹಾಗೂ ದೊಡ್ಡ ಅಂಚೆ ಕಚೇರಿಯಿದೆ. ಆದರೆ, ಮನೆ ಮನೆಗೆ ಅಂಚೆಯನ್ನು ತಲುಪಿಸುವ ವ್ಯವಸ್ಥೆ ಮಾತ್ರ ಇಲ್ಲ! ಇದೇಕೆ ಹೀಗೆ?

ಒಮ್ಮೆ ಇಲ್ಲಿ ಚುನಾವಣೆ ನಡೆಯಿತು. ಅಂಚೆಯನ್ನು ಮನೆ ಮನೆಗೆ ತಲುಪಿಸಬೇಕೋ? ಅಥವಾ ಜನರೇ ಅಂಚೆ ಕಚೇರಿಗೆ ಬಂದು ತಮ್ಮ ತಮ್ಮ ಅಂಚೆಯನ್ನು ಪಡೆದುಕೊಂಡು ಹೋಗಬೇಕೋ ಎಂದು ನಿರ್‍ಧರಿಸುವ ಮತದಾನ ಇದಾಗಿತ್ತು. ಅಂಚೆಯನ್ನು ಮನೆ ಮನೆಗೆ ವಿತರಿಸುವುದು ಬೇಡ ಎಂಬ ಅಭಿಪ್ರಾಯಕ್ಕೇ ಬಹುಮತ ಲಭಿಸಿತ್ತು. ಹಾಗಾಗಿ, ರಾಸ್ ಪಟ್ಟಣದಲ್ಲಿ ಈಗಲೂ ಅಂಚೆ ವಿತರಣೆ ಇಲ್ಲ. ಇಂತಹ ವಿಚಿತ್ರ ನಿರ್‍ಧಾರ ಕೈಗೊಂಡ ಜಗತ್ತಿನ ಏಕೈಕ ಪಟ್ಟಣ ಇದಿರಬಹುದು!

ವಿದ್ಯಾಭ್ಯಾಸ ದುಬಾರಿ

ಕಾಡಿನಂಥ ಊರು ಎಂದ ಮಾತ್ರಕ್ಕೆ ಇಲ್ಲಿ ವಿಧ್ಯಾಭ್ಯಾಸ ಕಳಪೆ ಎಂದುಕೊಳ್ಳಬೇಡಿ. ಇಲ್ಲಿ ಶಿಕ್ಷಣ ಅತ್ಯುತ್ತಮ ವಾಗಿರಲೆಂದು ಹೆಚ್ಚು ಸಂಬಳ ನೀಡಿ ಉತ್ತಮ ಶಿಕ್ಷಕರನ್ನು ಇಲ್ಲಿನ ಆಡಳಿತ ನೇಮಿಸಿಕೊಂಡಿದೆ. ಅದಕ್ಕಾಗಿ ಜನರು ದುಬಾರಿ ಶಿಕ್ಷಣ ತೆರಿಗೆಯನ್ನು ಪಟ್ಟಣ ಪಂಚಾಯ್ತಿಗೆ ನೀಡುತ್ತಾರೆ. ಶಾಲಾ ಶುಲ್ಕವೂ ದುಬಾರಿ. ಪರಿಣಾಮವಾಗಿ ಇದು ಸಣ್ಣ ಪಟ್ಟಣವಾದರೂ ಇಲ್ಲಿನ ಶಿಕ್ಷಣ
ಸ್ಯಾನ್‌ಫ್ರಾನ್ಸಿಸ್ಕೋದ ಅನೇಕ ಶಾಲೆಗಳಿಗಿಂತ ದುಬಾರಿ.

ಇಲ್ಲಿನ ಪಟ್ಟಣ ಪಂಚಾಯ್ತಿಯಲ್ಲಿ ಕೈಗೊಳ್ಳುವ ಎಲ್ಲ ನಿರ್‍ಣಯಗಳನ್ನೂ ಪ್ರತಿ ಮನೆ ಮನೆಗೂ ತಲುಪಿಸಲಾಗುತ್ತದೆ. ಜನರು ಯಾವುದೇ ವಿವರಗಳನ್ನೂ ಕೇಳಬಹುದು. ಅಷ್ಟೊಂದು ಪಾರದರ್‍ಶಕ ಆಡಳಿತ ಇಲ್ಲಿದೆ. ಇಲ್ಲಿ ಆಡಳಿತ ನಡೆಸುವ ಯಾರೂ ರಾಜಕಾರಣಿಗಳಲ್ಲ. ಪಕ್ಷವಂತೂ ಯಾರಿಗೂ ಇಲ್ಲ.

ನಮ್ಮ ಪಂಚಾಯ್ತಿಗಳು ಹಾಗಲ್ಲ. ಪಂಚಾಯ್ತಿ ಮಟ್ಟದಲ್ಲಿ ಚುನಾವಣೆ ಪಕ್ಷಾತೀತ ಎಂಬುದು ಕಾದದ ಮೇಲೆ ಮಾತ್ರ ಇದೆ. ವಾಸ್ತವವಾಗಿ ಪ್ರತಿ ಪಂಚಾಯ್ತಿಯೂ ರಾಜಕೀಯ ಪಕ್ಷಗಳಿಂದ ಗಬ್ಬೆದ್ದುಹೋಗಿವೆ. ಮುಖ್ಯಮಂತ್ರಿ, ಪ್ರಧಾನ ಮಂತ್ರಿಯಾದರೂ ನಮ್ಮ ರಾಜಕಾರಣಿಗಳು ಇನ್ನೂ ಗ್ರಾಮ ಪಂಚಾಯ್ತಿ ಚುನಾವಣೆಯ ತಂತ್ರ ರೂಪಿಸುವುದರಲ್ಲಿ ನಿರತ.
ಇವನ್ನೆಲ್ಲ ಬಿಟ್ಟು, ಒಂದು ಪಂಚಾಯ್ತಿಯನ್ನು ಹೇಗೆ ನಡೆಸಬಹುದು ಎಂಬುದನ್ನು ‘ರಾಸ್’ ನೋಡಿ ನಾವು ಕಲಿಯಬೇಕು.
ವಿವರಗಳಿಗೆ ನೋಡಿ. www.townofross.org

Sunday, December 28, 2008

ಅಮೇರಿಕಾ - ಮೇಡ್ ಇನ್ ಚೈನಾ


ಭಾಗ - 7

ಚೀನಾ ಸರಕಿಲ್ಲದೇ ಅಮೆರಿಕದಲ್ಲಿ ಬದುಕಬಹುದು.
ಆದರೆ, ಅದು ಅತ್ಯಂತ ಕಷ್ಟದ ಬದುಕು!

ಒಂದು ಜೋಕಿದೆ.
ಅಮೆರಿಕದಲ್ಲಿ ಮೇಡ್-ಇನ್-ಅಮೆರಿಕಾ ಅಂತ ಏನಾದ್ರೂ ಇದ್ರೆ ಅದು ರಾಕೆಟ್ಟು, ಮಿಸೈಲು, ಸ್ಯಾಟಲೈಟು, ಅಣು ಬಾಂಬು ಮುಂತಾದ ಯುದ್ಧ ಸಾಮಗ್ರಿ ಮಾತ್ರ. ಉಳಿದಂತೆ ಅಮೆರಿಕದಲ್ಲಿ ಸಿಗೋದೆಲ್ಲಾ ಮೇಡ್-ಇನ್-ಚೈನಾ ಮಾಲು!
ಇದೊಂಥರಾ ಜೋಕಾದ್ರೂ, ವಾಸ್ತವ ಕೂಡ ಬೇರೆ ಅಲ್ಲ.

ಸಾರಾ ಬೊಂಜೋರ್ನಿ ಎಂಬ ಪತ್ರಕರ್ತೆ An Year Without -'Made In China' (ಮೇಡ್-ಇನ್-ಚೈನಾ ಇಲ್ಲದ ಒಂದು ವರುಷ) ಎಂಬ ಅಪರೂಪದ ಪುಸ್ತಕ ಬರೆದಿದ್ದಾಳೆ. ಚೀನಾದಲ್ಲಿ ತಯಾರಾದ ಯಾವುದೇ ವಸ್ತುವನ್ನೂ ಖರೀದಿಸದೇ ಅಮೆರಿಕದಲ್ಲಿ ಬದುಕಲು ಸಾಧ್ಯವಿಲ್ಲವೇ? ಎಂಬುದನ್ನು ಪರೀಕ್ಷಿಸಲು ಆಕೆ ಒಂದು ವರ್ಷ ಪ್ರಯೋಗ ಮಾಡುತ್ತಾಳೆ. ಹೊಸ ವರ್ಷದ ಆರಂಭದಲ್ಲಿ ಇದನ್ನೇ ‘ನ್ಯೂ ಇಯರ್ ರೆಸಲ್ಯೂಶನ್’ ಎಂದು ಶಪಥ ಮಾಡುತ್ತಾಳೆ. ಚೀನಾ ಮಾಲು ಬೇಡವೆಂದು, ಅಮೆರಿಕದಲ್ಲೇ ತಯಾರಾದ ಉತ್ಪನ್ನ ಬೇಕೆಂದು ಆಕೆ ಊರೆಲ್ಲ ಹುಡುಕುತ್ತಾಳೆ. ಕೆಲವು ಬಾರಿಯಂತೂ ಆಕೆಗೆ ಚೀನಾ ಮಾಲಿನ ಹೊರತಾಗಿ ಬೇರೆ ಉತ್ಪನ್ನವೇ ಸಿಗುವುದಿಲ್ಲ. ಕೆಲವೊಮ್ಮೆ ಸಿಕ್ಕರೂ ಉತ್ಪನ್ನಕ್ಕಿಂತ ಆಕೆ ಹುಡುಕಾಟಕ್ಕೇ ಹೆಚ್ಚು ವೆಚ್ಚಮಾಡಿರುತ್ತಾಳೆ. ತನ್ನ ಶಪಥಕ್ಕಾಗಿ ಆಕೆ ಒಂದು ವರ್ಷ ಪರದಾಡುತ್ತಾಳೆ. ಆಕೆ ತನ್ನ ಈ ನೈಜ ಅನುಭವ ಕಥನದಲ್ಲಿ ಹೇಳುತ್ತಾಳೆ -‘ಚೀನಾ ಸರಕಿಲ್ಲದೇ ಅಮೆರಿಕದಲ್ಲಿ ಬದುಕಬಹುದು. ಆದರೆ, ಅದು ಅತ್ಯಂತ ಕಷ್ಟದ ಬದುಕು‘ ಅಂತ.

ಕಳೆದ ಅಕ್ಟೋಬರ್‌ನಲ್ಲಿ ನಾನು ಅಮೆರಿಕದ ಬೇರೆ ಬೇರೆ ರಾಜ್ಯಗಳಲ್ಲಿ, ಸಣ್ಣ ದೊಡ್ಡ ಊರುಗಳಲ್ಲಿ ಅಲೆಯುತ್ತಿರುವಾಗ ನನಗಾದ ಅನುಭವವೂ ಇದೇ. ಅಮೆರಿಕದಲ್ಲಿ ಮಾರಾಟವಾಗುವ ಗ್ರಾಹಕ ಸರಕಿನಲ್ಲಿ ಚೀನಾದ್ದೇ ಸಿಂಹಪಾಲು. ಆಹಾರ ಪದಾರ್ಥ, ಇಲೆಕ್ಟ್ರಿಕ್ ಉಪಕರಣಗಳು, ಇಲೆಕ್ಟ್ರಾನಿಕ್ ಸರಕುಗಳಿಂದ ಹಿಡಿದು, ಪುಟಾಣಿ ಮಕ್ಕಳ ಆಟಿಕೆಗಳು, ದೊಡ್ಡವರ ವಿಡಿಯೋ ಗೇಮ್ ಸಲಕರಣೆಗಳವರೆಗೆ ಅಮೆರಿಕಾ ತುಂಬಾ ತುಂಬಿರೋದು ಚೀನಾ ಉತ್ಪನ್ನಗಳು. ಕೆಲವು ವರ್ಗದ ಸರಕಿನಲ್ಲಿ ಚೀನಾ ಮಾಲಲ್ಲದೇ ಬೇರೇ ಮೂಲದ ಉತ್ನನ್ನಗಳೇ ಇಲ್ಲ. ಅಷ್ಟರ ಮಟ್ಟಿಗೆ ಅಮೆರಿಕಾ ಈಸ್ ಮೇಡ್ ಇನ್ ಚೈನಾ!

ಚೀನಾ ಬಿಟ್ಟು ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ದಕ್ಷಿಣ ಕೊರಿಯಾ, ಥೈಲ್ಯಾಂಡ್‌ನಂಥ ಏಷ್ಯಾ ದೇಶಗಳಲ್ಲಿ ಹಾಗೂ ಬ್ರೆಝಿಲ್, ನಿಕಾರಾಗುವದಂಥ ಲ್ಯಾಟಿನ್ ಅಮೆರಿಕ ದೇಶಗಳಲ್ಲಿ ತಯಾರಾದ ಸರಕೂ ಅಮೆರಿಕದಲ್ಲಿ ಸಾಕಷ್ಟಿವೆ. ಆದರೆ, ಚೀನಾ ಉತ್ಪನ್ನಗಳೇ ಹೆಚ್ಚು. ಮೇಡ್-ಇನ್-ಅಮೆರಿಕ ಸರಕು ನಿಜಕ್ಕೂ ಅಪರೂಪ.

ಇದಕ್ಕೇನು ಕಾರಣ?

ಅದ್ಯಾಕೆ, ಅಮೆರಿಕದಲ್ಲಿ ಚೀನಾ ಮಾಲು ಇಷ್ಟೊಂದು ತುಂಬಿಹೋಗಿದೆ?

೧. ಒಂದು ಕಾಲದಲ್ಲಿ, ಅಮೆರಿಕದಲ್ಲಿ ಎಷ್ಟು ದುಬಾರಿಯಾದರೂ ಪರವಾಗಿಲ್ಲ, ಉನ್ನತ ಬ್ರಾಂಡಿನ ಸರಕು ಮಾತ್ರ ಬೇಕು ಎನ್ನುವ ಜನರಿದ್ದರು. ಈಗ ಚೀನಾ ಉತ್ಪನ್ನಗಳು ಅಷ್ಟೇನೂ ಉತ್ತಮ ಗುಣಮಟ್ಟದಲ್ಲ ಎನ್ನುವ ಅರಿವಿದ್ದರೂ ಹಣ ಉಳಿತಾಯಕ್ಕೆಂದು ಆ ಮಾಲುಗಳಿಗೇ ಮೊರೆ ಹೋಗಿರುವ ಮಧ್ಯಮವರ್ಗ ಹಾಗೂ ಬಡ ಜನರ ವರ್ಗ ಅಮೆರಿಕದಲ್ಲಿ ಸಾಕಷ್ಟಾಗಿದೆ. ಆದ್ದರಿಂದ ಚೀನಾ ಮಾಲಿಗೆ ಬೇಡಿಕೆ ಹೆಚ್ಚಿದೆ. ಅದರಲ್ಲೂ ಈಗ ಹಣಕಾಸು ಬಿಕ್ಕಟ್ಟು ಸೃಷ್ಟಿಯಾಗಿರುವುದರಿಂದ ದುಬಾರಿ ಬ್ರಾಂಡೆಡ್ ಸರಕಿಗಿಂತ ಅಗ್ಗದ ಚೀನಾ ಮಾಲಿಗೇ ಡಿಮಾಂಡು ಸಹಜ.

೨. ಐತಿಹಾಸಿಕವಾಗಿ ನೋಡಿದರೆ, ರಷ್ಯಾ ಮತ್ತು ಚೀನಾ ಕಮ್ಯುನಿಷ್ಟ್ ದೇಶಗಳು. ತಾತ್ವಿಕವಾಗಿ ಅಮೆರಿಕಕ್ಕೆ ವೈರಿ ರಾಷ್ಟ್ರಗಳು. ಈಗಲೂ, ಈ ದೇಶಗಳ ನಡುವೆ ಶೀತಲ ಸಮರ ಇದೆ. ಆದರೆ, ಈ ವೈರತ್ವವನ್ನು ಬಿಟ್ಟು ಚೀನಾದಿಂದ ಅಮೆರಿಕ ಅಂದಾಜು ೨೯೦ ಬಿಲಿಯನ್ ಡಾಲರ್ ಸರಕನ್ನು ಆಮದು ಮಾಡಿಕೊಳ್ಳುತ್ತಿದೆ. ಇದೆಲ್ಲಾ ಜಾಗತೀಕರಣದ ಪ್ರಭಾವ. ೧೯೭೦ರ ಹೊತ್ತಿಗೆ ಅಮೆರಿಕದ ಅಧ್ಯಕ್ಷ ರಿಚರ್ಡ್ ನಿಕ್ಸನ್ ಚೀನಾದಿಂದ ಸರಕು ಆಮದಿಗೆ ಬಾಗಿಲು ತೆರೆದರು. ಚೀನಾ ಕೂಡ ೧೯೮೦ ಹಾಗೂ ೧೯೯೦ರ ದಶಕದಲ್ಲಿ ತನ್ನ ಬಿಗಿ ಕಮ್ಯುನಿಷ್ಟ್ ನೀತಿಯ ನಡುವೆಯೇ ಜಾಗತಿಕ ಆರ್ಥಿಕ ನೀತಿಯನ್ನು ಅಳವಡಿಸಿಕೊಂಡಿತು. ಪರಿಣಾಮವಾಗಿ ಜಗತ್ತಿಗೆ ಚೀನಾ ಬಹುದೊಡ್ಡ ಮಾರುಕಟ್ಟೆಯಾಯಿತು.

೩. ಅಮೆರಿಕದ ವಾಲ್‌ಮಾರ್ಟ್‌ನಂಥ ರಿಟೇಲ್ ದೈತ್ಯ ಕಂಪನಿಗಳಿಗೆ ಸೋವಿ ದರದಲ್ಲಿ ಚೀನಾದಲ್ಲಿ ಸರಕು ಸಿಗಲಾರಂಭಿಸಿತು. ಅಲ್ಲದೇ, ಸ್ವಂತ ಬ್ರಾಂಡ್ ಪದಾರ್ಥಗಳ ಉತ್ಪಾದನೆ ಅಮೆರಿಕಕ್ಕಿಂತ ಚೀನಾದಲ್ಲಿ ಅಗ್ಗವಾಗಿ ಕಂಡಿತು. ಏಕೆಂದರೆ, ಚೀನಾದಲ್ಲಿ ಕೂಲಿ ದರ ಹಾಗೂ ಉತ್ಪಾದನಾ ವೆಚ್ಚ ಕಮ್ಮಿ. ಅಲ್ಲದೇ, ಅಮೆರಿಕದ ಪಶ್ಚಿಮ ಕರಾವಳಿಗೆ ಚೀನಾದಿಂದ ಸರಕು ಸಾಗಣೆ ವೆಚ್ಚವೂ ದುಬಾರಿಯಲ್ಲ. ಈ ಆರ್ಥಿಕ ಕಾರಣದಿಂದ ಅಮೆರಿಕದ ತುಂಬಾ ಚೀನಾ ಚೀನಾ ಚೀನಾ ಮಾಲ್.

೪. ಇನ್ನು ಅಂತಾರಾಷ್ಟ್ರೀಯ ರಾಜನೀತಿಯನ್ನು ತುಸು ಗಮನಿಸಬೇಕು. ಚೀನಾ ಅರ್ಥವ್ಯವಸ್ಥೆ ಅಮೆರಿಕದ ಮೇಲೆ ಅವಲಂಬನೆಯಾದಷ್ಟೂ ಅಮೆರಿಕಕ್ಕೆ ಖುಷಿ! ಏಕೆಂದರೆ, ಚೀನಾ ಮುಂದೊಂದು ದಿನ ಶ್ರೀಮಂತ ಅಮೆರಿಕವನ್ನು ವಿರೋಧಿಸಿ ಬಡ ದೇಶವಾದ ರಷ್ಯಾದ ಪರ ನಿಲ್ಲುವ ಸಾಧ್ಯತೆ ಕಡಿಮೆಯಾಗುತ್ತದೆ. ಹಾಗೊಂದು ವೇಳೆ ಚೀನಾ ಅಮೆರಿಕವನ್ನು ಎದುರು ಹಾಕಿಕೊಂಡರೆ ಚೀನಾ ಬಹುದೊಡ್ಡ ರಫ್ತು ಮಾರುಕಟ್ಟೆಯನ್ನು ಕಳೆದುಕೊಂಡು ಕಂಗಾಲಾಗಬೇಕಾಗುತ್ತದೆ. ಅದರಲ್ಲೂ, ಅಮೆರಿಕ ಮತ್ತು ಅಮೆರಿಕದ ಮಿತ್ರ ರಾಷ್ಟ್ರಗಳು ಚೀನಾ ವಿರುದ್ಧ ಆರ್ಥಿಕ ದಿಗ್ಬಂಧನ ಹಾಕಿದರಂತೂ ಚೀನಾದ ಆರ್ಥಿಕ ವ್ಯವಸ್ಥೆ ತೀವ್ರ ಹದಗೆಡುತ್ತದೆ. ಈ ರೀತಿಯಲ್ಲಿ ಚೀನಾವನ್ನು ಆರ್ಥಿಕವಾಗಿ ನಿಯಂತ್ರಿಸುವುದು ಅಮೆರಿಕದ ಲೆಕ್ಕಾಚಾರ. ಆದ್ದರಿಂದ, ಚೀನಾ ಹೆಚ್ಚು ಹೆಚ್ಚು ಅಮೆರಿಕದ ಮಾರುಕಟ್ಟೆಯನ್ನು ಅವಲಂಬಿಸುವಂತೆ ಅಮೆರಿಕವೇ ಪ್ರಚೋದಿಸುತ್ತಿದೆ.


ಚೀನಾ ವಿರುದ್ಧ ಆಂದೋಲನ :

ಅಮೆರಿಕದಲ್ಲಿ ಚೀನಾ ಮಾಲ್ ಹಾವಳಿ ವಿರುದ್ಧ ಒಂದಷ್ಟು ಆಂದೋಲನಗಳೂ ನಡೆದಿವೆ. ‘ಚೀನಾ ಸಾಮಗ್ರಿ ಕೊಂಡರೆ ಚೀನಾ ಶ್ರೀಮಂತ ಆಗುತ್ತದೆ. ಹಾಗೆ ಶ್ರೀಮಂತವಾಗುವ ಚೀನಾ ಅಮೇರಿಕದತ್ತ ಅಣುಬಾಂಬ್ ತಿರುಗಿಸುತ್ತದೆ. ಆದ್ದರಿಂದ ಚೀನಾ ಸರಕನ್ನು ಕೊಳ್ಳಬೇಡಿ’ ಎಂದು ಕೆಲವು ಸ್ವಯಂ ಸೇವಾ ಸಂಸ್ಥೆಗಳು ಪ್ರಚಾರ ಮಾಡಿದವು. ಆದರೆ, ಆ ಪ್ರಚಾರಕ್ಕೆ ಫಲ ಸಿಕ್ಕಿಲ್ಲ. ಏಕೆಂದರೆ, ಚೀನಾ ಸರಕು ಕೊಳ್ಳದೇ ಅಮೆರಿಕದಲ್ಲಿ ಬದುಕುವುದು ಕಷ್ಟ!

-----------------

ಅಮೆರಿಕ ಶಾಲೆಯಲ್ಲಿ ಚೀನಿ ಭಾಷೆ ಕಲಿತಾವೆ ಇಂಗ್ಲೀಷ್ ಮಕ್ಕಳು!

ಚೀನೀಯರಿಗೆ ಇಂಗ್ಲೀಷ್ ಬರಲ್ಲ. ಅದಕ್ಕೇ ಐಟಿ ಕ್ಷೇತ್ರದಲ್ಲಿ ಚೀನಾ ಭಾರತಕ್ಕಿಂತ ಹಿಂದುಳಿದಿದೆ. ಚೀನೀ ಮಂದಿ ಇಂಗ್ಲೀಷ್ ಕಲಿಯೋವರೆಗೂ ಉದ್ದಾರ ಆಗೋಲ್ಲ - ಅನ್ನುವವರು ಈಗ ತುಸು ಯೋಚಿಸಬೇಕು.
ಜಾಗತಿಕವಾಗಿ ಚೀನಾ, ಭಾರತಕ್ಕಿಂತ ಎಷ್ಟು ಬಲವಾಗುತ್ತಿದೆ ಅಂದರೆ, ಇಂಗ್ಲೀಷ್ ಮಂದಿಯೇ ಈಗ ಚೀನೀ ಭಾಷೆ ಕಲಿಯಲು ಆರಂಭಿಸಿದ್ದಾರೆ! ಅಮೆರಿಕದಂಥ ಅಮೆರಿಕದ ಶಾಲೆಯಲ್ಲಿ ‘ಮ್ಯಾಂಡರಿನ್’ಕಲಿಸಲಾಗುತ್ತಿದೆ. ಭಾರತದಲ್ಲಿ, ಮಕ್ಕಳು ಇಂಗ್ಲೀಷ್ ಕಲಿಯಬೇಕೆಂದು ಪಾಲಕರು ಹಂಬಲಿಸುತ್ತಾರಷ್ಟೇ? ಅದೇ ರೀತಿ ಅಮೆರಿಕ ಹಾಗೂ ಲ್ಯಾಟಿನ್ ಅಮೆರಿಕದಲ್ಲಿ ಎರಡು ಅಥವಾ ಮೂರನೇ ಭಾಷೆಯಾಗಿ ‘ಮ್ಯಾಂಡರಿನ್’ ಕಲಿಯುವಂತೆ ಪೋಷಕರು ಮಕ್ಕಳನ್ನು ಹುರಿದುಂಬಿಸುತ್ತಿದ್ದಾರೆ.
‘ಈ ಮಕ್ಕಳು ದೊಡ್ಡವರಾಗುವ ಹೊತ್ತಿಗೆ ಈಗ ಫ್ರೆಂಚ್, ಸ್ಪಾನಿಷ್‌ಗೆ ಇರುವಂತೆ ಚೀನೀ ಭಾಷೆಗೂ ಬೇಡಿಕೆ ಇರುತ್ತದೆ’ ಎನ್ನುತ್ತಾರೆ ಅಂತಹ ಒಬ್ಬ ಪಾಲಕ ಮೈಕೆಲ್ ರೊಸೇನ್‌ಬಾಮ್. ನಮ್ಮ ಹಿಂದಿ ಭಾಷೆಯನ್ನು, ಚೀನಿ ಭಾಷೆಯಂತೆ ಜಗತ್ತು ಇನ್ನೂ ಗಂಭೀರವಾಗಿ ಪರಿಗಣಿಸಿಲ್ಲ ಯಾಕೆ? ಸ್ವಲ್ಪ ಯೋಚಿಸಿ.

--------------

ಒಳಚರಂಡಿ ಮೇಲೆ ಕಂಡೆಯಾ... ಮೇಡ್ ಇನ್ ಇಂಡಿಯಾ?

ವಾಲ್‌ಮಾರ್ಟ್, ಟಾರ್ಗೆಟ್, ವಾಲ್‌ಗ್ರೀನ್ಸ್ ಮುಂತಾದ ಅನೇಕ ರಿಟೇಲ್ ಮಳಿಗೆಗೆ ಹೋದಾಗ ನನಗೆ ಕಾಣಿಸುತ್ತಿದ್ದುದು ಬಹುತೇಕ ಮೇಡ್-ಇನ್-ಚೈನಾ ಉತ್ಪನ್ನ. ಹಾಗಾದರೆ, ಮೇಡ್ ಇನ್ ಇಂಡಿಯಾ ಏನೂ ಇಲ್ಲವೇ ಅಂತ ಬಹಳ ಹುಡುಕಿದೆ. ಕೊನೆಗೂ ನ್ಯೂಯಾರ್ಕ್ ಸಿಟಿ ಹಾಗೂ ಲಾಸ್ ವೇಗಾಸ್‌ನ ಒಳಚರಂಡಿ ಮುಚ್ಚಳದ ಮೇಲೆ ಕಂಡಿತು ಮೇಡ್ ಇನ್ ಇಂಡಿಯಾ! ತಮಾಷೆಯಲ್ಲ.

Sunday, December 21, 2008

ನ್ಯೂಸಿಯಂ : ಇಲ್ಲಿ ಸುದ್ದಿಗೆ ಸಾವಿಲ್ಲ...!


ಭಾಗ - 6

ಅಗ್ನಿಜ್ವಾಲೆಗೆ ಆಹುತಿಯಾಗುತ್ತಿರುವ ಹಡಗಿನ ಈ ‘ವರ್ಣ ಚಿತ್ರ’ ಆ ಪತ್ರಿಕೆಯ ಮುಖಪುಟದ ಮೇಲಿನರ್ಧಭಾಗದಲ್ಲಿ ಮುದ್ರಿತವಾಗಿತ್ತು! ಆಗಿನ ಕಾಲದಲ್ಲಿ, ಪತ್ರಿಕೆಗಳಲ್ಲಿ ಬಣ್ಣದ ಮುದ್ರಣ ತಂತ್ರಜ್ಞಾನವೇ ಇರಲಿಲ್ಲ. ಹಾಗಾದರೆ, ಆ ಪತ್ರಿಕೆ ೧೮೪೦ನೇ ಇಸವಿಯಲ್ಲೇ ಬಣ್ಣದ ಚಿತ್ರ ಪ್ರಕಟಿಸಿದ್ದು ಹೇಗೆ?



ಈಹಳೇ ಸುದ್ದಿ ಕೇಳಿ ನನ್ನಂತೆ ನಿಮಗೂ ಅಚ್ಚರಿ ಆಗಬಹುದು!

೧೮೪೦ರ ಜನವರಿ ತಿಂಗಳು. ಅಮೆರಿಕದ ಲೆಕ್ಸಿಂಗ್‌ಟನ್ ಎಂಬ ವಿಲಾಸೀ ಹಡಗಿನ ಗ್ರಹಚಾರ ಸರಿ ಇರಲಿಲ್ಲ. ನ್ಯೂಯಾರ್ಕ್ ಬಂದರಿನಿಂದ ಸುಮಾರು ೫೦ ಮೈಲು ದೂರದಲ್ಲಿ ಸಮುದ್ರದ ನಟ್ಟ ನಡುವೆ ಅದಕ್ಕೆ ಬೆಂಕಿ ಹೊತ್ತಿಕೊಂಡಿತು. ಕೆಲವೇ ಗಂಟೆಗಳಲ್ಲಿ ಧಗಧಗನೆ ಉರಿದು, ಅದು ಸಮುದ್ರದಲ್ಲಿ ಮುಳುಗಿಹೋಯಿತು. ಇದ್ದ ೧೬೦ ಜನರಲ್ಲಿ ಕೇವಲ ನಾಲ್ವರು ಬದುಕುಳಿದರು. ವಿಷಯ ಅದಲ್ಲ. ಆ ಸುದ್ದಿಯನ್ನು ಪ್ರಕಟಿಸಿದ ‘ನ್ಯೂಯಾರ್ಕ್ ಸನ್’ ಪತ್ರಿಕೆಯ ಸಾಹಸವನ್ನು ಸ್ವಲ್ಪ ಕೇಳಿ.

ಈ ದುರಂತದ ವರದಿಗಾಗಿ ‘ನ್ಯೂಯಾರ್ಕ್ ಸನ್’ ಪತ್ರಿಕೆ ವಿಶೇಷ ‘ಎಕ್ಸ್‌ಟ್ರಾ’ ಆವೃತ್ತಿಯನ್ನು ಹೊರತಂದಿತ್ತು. ನೀಲ ಸಮುದ್ರದ ನಡುವೆ ಅಗ್ನಿಜ್ವಾಲೆಗೆ ಆಹುತಿಯಾಗುತ್ತಿರುವ ಲೆಕ್ಸಿಂಗ್‌ಟನ್ ಹಡಗಿನ ದೊಡ್ಡ ‘ವರ್ಣ ಚಿತ್ರ’ ಆ ಸಂಚಿಕೆಯ ಮುಖಪುಟದ ಮೇಲಿನರ್ಧಭಾಗದಲ್ಲಿ ಮುದ್ರಿತವಾಗಿತ್ತು! ಆಗಿನ ಕಾಲದಲ್ಲಿ, ಪತ್ರಿಕೆಗಳಲ್ಲಿ ಬಣ್ಣದ ಮುದ್ರಣ ತಂತ್ರಜ್ಞಾನವೇ ಇರಲಿಲ್ಲ. ಹಾಗಾದರೆ, ‘ನ್ಯೂಯಾರ್ಕ್ ಸನ್’ ೧೮೪೦ನೇ ಇಸವಿಯಲ್ಲೇ ಬಣ್ಣದ ಚಿತ್ರ ಪ್ರಕಟಿಸಿದ್ದು ಹೇಗೆ?

ನಂಬಿದರೆ ನಂಬಿ. ಬಿಟ್ಟರೆ ಬಿಡಿ. ಕಪ್ಪು ಬಿಳುಪು ಚಿತ್ರದ ಆ ಪತ್ರಿಕೆಯನ್ನು ಮೊದಲು ಲಿಥೋಗ್ರಾಫ್‌ನಲ್ಲಿ ಮುದ್ರಿಸಿ, ನಂತರ ಎಷ್ಟೋ ಪ್ರತಿಗಳಿಗೆ ಕಲಾವಿದರು ತಮ್ಮ ಕೈಯಾರೆ ಬಣ್ಣ ಹಚ್ಚಿ ಮಾರುಕಟ್ಟೆಗೆ ಬಿಡುಗಡೆ ಮಾಡಿದರು! ೧೬೮ ವರ್ಷದ ಹಿಂದಿನ ಈ ಅಪೂರ್ವ ಪತ್ರಿಕೆಯನ್ನು ನ್ಯೂಸಿಯಂನಲ್ಲಿ ಸಾಕ್ಷಾತ್ ಕಂಡಾಗ ಅಂದಿನ ಪತ್ರಿಕಾ ಸಾಹಸಕ್ಕೆ ಯಾರಾದರೂ ನಮೋ ನಮಃ ಎನ್ನಲೇಬೇಕು.

ಜಗತ್ತಿನಲ್ಲಿ ಪತ್ರಿಕೆಗಳು ಆರಂಭವಾದಾಗ ಅವು ಈಗಿನಂತೆ ಪತ್ರಿಕಾ ರೂಪದಲ್ಲಿ ಇರಲಿಲ್ಲ. ಪುಸ್ತಕ ರೂಪದಲ್ಲಿ ಇದ್ದವು. ಅವುಗಳನ್ನು ‘ಸುದ್ದಿ ಪುಸ್ತಕ’ ಎಂದು ಕರೆಯಲಾಗುತ್ತಿತ್ತು. ನಂತರ ಅವು ‘ವಾರ್ತಾ ಪತ್ರ’ಗಳ ರೂಪ ಪಡೆದವು. ಕ್ರಮೇಣ ಈಗಿನಂತೆ ಪತ್ರಿಕೆಯ ಗಾತ್ರ ಹಾಗೂ ಲಕ್ಷಣ ಪಡೆದವು ಎಂಬುದನ್ನು ಪತ್ರಿಕೋದ್ಯಮ ಇತಿಹಾಸದಲ್ಲಿ ಓದಿರಬಹುದು. ಆದರೆ, ಅವುಗಳನ್ನು ನ್ಯೂಸಿಯಂನಲ್ಲಿ ಕಣ್ಣಾರೆ ನೋಡಬಹುದು. ಓದಬಹುದು. ಇಲ್ಲಿ ಅಮೆರಿಕದ ಮೊದಲ ಪತ್ರಿಕೆಯಿಂದ ಹಿಡಿದು ೬೫ ದೇಶಗಳ ಆಯ್ದ ೬೮೮ ಪತ್ರಿಕೆಗಳ ಈ ಕ್ಷಣದ ಮುಖಪುಟವನ್ನು ಇಲ್ಲಿ ಕಾಣಬಹುದು. ೬೮೯ನೇ ಪತ್ರಿಕೆಯಾಗಿ ‘ಕನ್ನಡಪ್ರಭ’ದ ಮುಖಪುಟ ಇದೀಗ ಸೇರಿಕೊಂಡಿದ್ದು, ಇಂದಿನಿಂದ ನ್ಯೂಸಿಯಂನಲ್ಲಿ ಪ್ರದರ್ಶನಗೊಳ್ಳುತ್ತಿದೆ. ಇಲ್ಲಿ ಕ್ಲಿಕ್ ಮಾಡಿ

೨ನೇ ಮಹಾಯುದ್ಧದ ೪-ಡಿ ಸಿನಿಮಾ

ಎಡ್ವರ್ಡ್ ಆರ್ ಮರ್ರೋ ಎಂಬ ಅಮೆರಿಕದ ಮಹಾನ್ ರೇಡಿಯೋ ವರದಿಗಾರ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ, ಲಂಡನ್‌ನ ಕಟ್ಟಡವೊಂದರ ತಾರಸಿಯ ಮೇಲೆ ನಿಂತುಕೊಂಡು, ಜರ್ಮನಿಯ ವಿಮಾನಗಳು ಬಾಂಬ್ ಹಾಕುತ್ತಿರುವ ಸುದ್ದಿಯನ್ನು ರೇಡಿಯೋದಲ್ಲಿ ನೇರ ವರದಿ ಮಾಡಿದ. ನೇರ ಪ್ರಸಾರ ವರದಿಗಾರಿಕೆಯ ಆರಂಭ ಎಂದು ಗುರುತಿಸಲ್ಪಡುವ ಈ ಘಟನೆ ಬಹುತೇಕ ಜನರಿಗೆ ಗೊತ್ತಿಲ್ಲ. ಆದರೆ, ಆ ಸಂದರ್ಭವನ್ನು ನ್ಯೂಸಿಯಂನ ‘೪-ಡಿ’ ಟಾಕೀಸಲ್ಲಿ ಅನುಭವಿಸಬಹುದು.



ಈ ಟಾಕೀಸ್ ‘೩-ಡಿ’ಗಿಂತ ಅದ್ಭುತ ಅನುಭವ ನೀಡುತ್ತದೆ. ದೂರದಿಂದ ರೋಯ್ಯನೆ ಬರುವ ಬಾಂಬರ್ ವಿಮಾನ ನಮ್ಮ ತಲೆಯ ಮೇಲೇ ಬಂದಂತಾಗಿ ತಲೆಗೂದಲೆಲ್ಲಾ ಗಾಳಿಗೆ ಹಾರಾಡುತ್ತದೆ. ಗುಡುಗು ಸಿಡಿಲು ಆರ್ಭಟಿಸಿ ಮಳೆ ಸುರಿಯುವ ಲಕ್ಷಣ ಕಾಣಿಸಿದಾಗ ನಮ್ಮ ಮೇಲೂ ನಿಜವಾದ ಹನಿಗಳು ಬಿದ್ದು ವಾಸ್ತವ ಬಯಲಿನ ಅನುಭವ ಆಗುತ್ತದೆ. ಜೈಲಿನೊಳಗೆ ಇಲಿಗಳು ಕಿಚಿಕಿಚ ಎನ್ನುತ್ತ ಓಡಾಡುವಾಗ ಅವು ನಮ್ಮ ಕಾಲಮೇಲೇ ಓಡಾಡಿದಂತೆ ಸ್ಪರ್ಷಾನುಭವವಾಗುತ್ತದೆ. ಹಾವು ಭುಸ್ಸನೆ ವಿಷ ಉಗುಳಿದಾಗ ಅಕ್ಷರಶಃ ಮುಖದ ಮೇಲೆ ಸಿಂಚನವಾಗುತ್ತದೆ! ಇಂಥ ಟಾಕೀಸಿನಲ್ಲಿ, ಮೂರು ಬೇರೆ ಬೇರೆ ವರದಿಗಾರರ ಕಿರುಚಿತ್ರ ನೋಡುವಾಗ ನಾವು ನ್ಯೂಸಿಯಂ ನಲ್ಲಿದ್ದೇವೋ... ಅಥವಾ ಆ ವರದಿಗಾರರ ಜೊತೆ, ಅವರ ಕಾಲದಲ್ಲೇ ಇದ್ದೇವೋ ಎಂದು ಗೊತ್ತಾಗದಷ್ಟು ಗಾಢ ಅನುಭವವಾಗುತ್ತದೆ.

ವಾಷಿಂಗ್‌ಟನ್‌ನ ಹೃದಯದಲ್ಲಿ

ಅಂದಹಾಗೆ, ನ್ಯೂಸಿಯಂ ಎಂದರೆ, ನ್ಯೂಸ್ ಮ್ಯೂಸಿಯಂ. ಸುದ್ದಿಯ ವಸ್ತು ಸಂಗ್ರಹಾಲಯ. ವಾಷಿಂಗ್‌ಟನ್ ಡಿ.ಸಿ.ಯ ಮುಖ್ಯ ಬೀದಿಯಲ್ಲಿ, ಯು.ಎಸ್. ಕ್ಯಾಪಿಟಾಲ್ ಹಾಗೂ ವೈಟ್‌ಹೌಸ್ ನಡುವೆ ಇದೆ. ೧೯೯೭ರಲ್ಲಿ ನ್ಯೂಸಿಯಂ ಆರಂಭಗೊಂಡಾಗ ಅಮೆರಿಕದ ಹೃದಯವೆಂದೇ ಬಣ್ಣಿಸಲಾಗುವ ಈ ಪ್ರದೇಶದಲ್ಲಿ ಇರಲಿಲ್ಲ. ರಾಜಧಾನಿಯಿಂದ ಹೊರಗೆ ಪೋಟೋಮ್ಯಾಕ್ ನದಿಯ ಇನ್ನೊಂದು ತಟದಲ್ಲಿ ಹಳೆಯ ಸಣ್ಣ ಕಟ್ಟಡದಲ್ಲಿತ್ತು. ಆದರೆ, ಜಗತ್ತಿನ ಗಮನ ಸೆಳೆಯಲೆಂದು ಇದು ಈಗಿನ ಸ್ಥಳಕ್ಕೆ ಸ್ಥಳಾಂತರಗೊಂಡಿದೆ.
ವಿಶೇಷವೆಂದರೆ, ಯುಎಸ್ ಕ್ಯಾಪಿಟಾಲ್ ಬಳಿ ಖಾಲಿಯಿದ್ದ ಏಕೈಕ ಸೈಟು ಇದಾಗಿತ್ತು. ಈ ನಿವೇಶನದಲ್ಲಿ ೪೫೦ ಮಿಲಿಯನ್ ಡಾಲರ್ ವೆಚ್ಚದಲ್ಲಿ ನಿರ್ಮಾಣವಾಗಿದೆ. ಈ ಬದಲಾವಣೆಯ ಹಿನ್ನೆಲೆಯಲ್ಲಿ ೨೦೦೨ರಲ್ಲಿ ಬಾಗಿಲು ಮುಚ್ಚಿದ್ದ ಹಳೆಯ ನ್ಯೂಸಿಯಂ ಈ ವರ್ಷ ಏಪ್ರಿಲ್‌ನಿಂದ ಹೊಸ ರೂಪದಲ್ಲಿ ಪುನಾರಂಭಗೊಂಡಿದೆ.

ಇದು ಸರ್ಕಾರಿ ಮ್ಯೂಸಿಯಂ ಅಲ್ಲ. ಫ್ರೀಡಂ ಫೋರಂ ಎಂಬ ಸ್ವಯಂ ಸೇವಾ ಸಂಸ್ಥೆ ಸ್ಥಾಪಿಸಿದ ಖಾಸಗಿ ಮ್ಯೂಸಿಯಂ. ಈ ನ್ಯೂಸಿಯಂ ಎದುರಿನ ಪ್ರದೇಶವೇ ‘ನ್ಯಾಷನಲ್ ಮಾಲ್’. ಇಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಅಮೆರಿಕದ ಹತ್ತಾರು ಮ್ಯೂಸಿಯಂಗಳು, ಜಾರ್ಜ್ ವಾಷಿಂಗ್‌ಟನ್, ಕೆನಡಿ, ಜಾಫರ್‌ಸನ್, ಲಿಂಕನ್ ಮುಂತಾದ ಗಣ್ಯರ ಸ್ಮಾರಕಗಳೂ ಇವೆ. ವಾಷಿಂಗ್‌ಟನ್ ಡಿ.ಸಿ.ಗೆ ಬಂದ ಪ್ರವಾಸಿಗರ್ಯಾರೂ ಈ ಪ್ರದೇಶ ನೋಡದೇ ವಾಪಸಾಗುವುದೇ ಇಲ್ಲ. ಇಂಥ ಅಪರೂಪದ ಸ್ಥಳಕ್ಕೆ ಹೊಂದಿಕೊಂಡತೆಯೇ ಇರುವುದರಿಂದ ನ್ಯೂಸಿಯಂಗೆ ಇನ್ನಷ್ಟು ಕಳೆ ಹಾಗೂ ಮಹತ್ವ.

ಈ ಏಳು ಮಹಡಿಯ ೨,೫೦,೦೦೦ ಚದರಡಿ ಕಟ್ಟಡದ, ೧೪ ವಿಭಾಗ ಮತ್ತು ೧೫ ಥೇಟರಿನಲ್ಲಿ ಸುಮಾರು ೫೦೦ ವರ್ಷದ ಅಚ್ಚರಿಯ ಸುದ್ದಿಗಳು ಇಂದೂ ತಮ್ಮ ಐತಿಹಾಸಿಕ ಕಥೆ ಹೇಳುತ್ತಿವೆ. ‘ಸುದ್ದಿಯ ಆಯಸ್ಸು ಒಂದೇ ದಿನ. ನ್ಯೂಸ್ ಪೇಪರ್ ಬೆಳಿಗ್ಗೆ ಹುಟ್ಟಿ ಸಂಜೆ ಸಾಯುತ್ತದೆ’ ಎಂದು ಹೇಳುವವರು ಈ ನ್ಯೂಸಿಯಂ ನೋಡಿ ತಮ್ಮ ಅಭಿಪ್ರಾಯವನ್ನು ಬದಲಿಸಿಕೊಳ್ಳಬಹುದು.
ಹಿಸ್ಟರಿ ಆಫ್ ನ್ಯೂಸ್ ವಿಭಾಗ ನೋಡುತ್ತಾ ಹೋದಂತೆ, ಎರಡನೇ ಮಹಾಯುದ್ಧ ಆರಂಭವಾದ ಸುದ್ದಿ, ಮುಕ್ತಾಯವಾದ ಸುದ್ದಿ, ಹಿಟ್ಲರ್ ಹತಗೊಂಡ ಸಮಾಚಾರ, ಮಾನವ ಚಂದ್ರನ ಮೇಲೆ ಕಾಲಿಟ್ಟ ವರದಿ, ಕೆನಡಿ, ರೇಗನ್, ಲಿಂಕನ್ ಹತ್ಯೆಯಾದ ಘಟನೆ, ಟೈಟಾನಿಕ್ ಮುಳುಗಿದ ವಾರ್ತೆ... ಹೀಗೆ ಅನೇಕ ಐತಿಹಾಸಿಕ ಘಟನೆಗಳು ಪತ್ರಿಕೆಯ ಪುಟಗಳ ರೂಪದಲ್ಲಿ ಜೀವಂತಗೊಳ್ಳತೊಡಗುತ್ತವೆ.

ಬಾಸ್ಟರ್ಡ್ಸ್!

ಅಲ್ ಖೈದಾ ಉಗ್ರರು ಅವಳಿ ಗೋಪುರದ ಮೇಲೆ ವಿಮಾನ ದಾಳಿ ಮಾಡಿದ ೯/೧೧ ಘಟನೆ ಅಮೆರಿಕವನ್ನು ನಿದ್ದೆಯಲ್ಲೂ ಬೆಚ್ಚಿಬೀಳಿಸುವ ಸುದ್ದಿ. ಈ ವಾರ್ತೆಯನ್ನು ಯಾವ್ಯಾವ ಪತ್ರಿಕೆಗಳು ಹೇಗ್ಹೇಗೆ ವರದಿ ಮಾಡಿದ್ದವು? ೯/೧೧ ಗ್ಯಾಲರಿ ಈ ವಿಷಯಕ್ಕೆ ಮೀಸಲು. ಕ್ಯಾಲಿಫೋರ್ನಿಯಾ ಎಕ್ಸಾಮಿನರ್ ಪತ್ರಿಕೆ ಅಂದು ‘ಬಾಸ್ಟರ್ಡ್ಸ್‘ ಎಂಬ ಶೀರ್ಷಿಕೆ ನೀಡಿ ಉಗ್ರರನ್ನು ಬೈದ ಮುಖಪುಟ ನೋಡುಗನ ಗಮನ ಸೆಳೆಯುತ್ತದೆ. ಅಲ್ಲದೇ ಪತನಗೊಳ್ಳುವ ಮೊದಲು ವರ್ಲ್ಡ್ ಟ್ರೇಡ್ ಸೆಂಟರ್ ಮೇಲಿದ್ದ ಟೆಲಿಕಾಂ ಗೋಪುರದ ಅವಶೇಷ ಈಗಿಲ್ಲಿ ಪ್ರದರ್ಶನ ವಸ್ತು.

ಪತ್ರಿಕೋದ್ಯಮ ಹೂವ ಮೇಲಿನ ನಡಿಗೆಯಲ್ಲ. ಎಷ್ಟೋ ಪತ್ರಕರ್ತರು ಸುದ್ದಿಗಾಗಿ ಜೀವ ಕೊಟ್ಟಿದ್ದಾರೆ. ಅಂತಹ ಪತ್ರಕರ್ತರಿಗಾಗಿ ಇಲ್ಲಿ ಸ್ಮಾರಕವಿದೆ. ೧೮೦೦ ದಿವಂಗತ ಪತ್ರಕರ್ತರ ಚಿತ್ರವಿದೆ. ಈ ಚಿತ್ರಗಳ ಸಂಖ್ಯೆ ಹೆಚ್ಚುತ್ತಿದೆ ಎಂಬುದು ಕಳವಳಕಾರಿಯಾದರೂ ನಿಜ. ಇದೇ ವಿಭಾಗದಲ್ಲಿ ಬಿಳಿಯ ವ್ಯಾನೊಂದಿದೆ. ಇದು ಇರಾಕ್ ಯುದ್ಧದಲ್ಲಿ ವರದಿಗಾರರು ಬಳಸಿದ್ದ ವಾಹನ. ಇದರ ಮೇಲೆಲ್ಲಾ ಬುಲೆಟ್ ಬಡಿದ ಕುರುಹಾಗಿ ಅನೇಕ ರಂಧ್ರಗಳು. ಯುದ್ಧಭೂಮಿಯ ವರದಿಗಾರಿಕೆ ಎಷ್ಟು ಅಪಾಯಕಾರಿ ಎಂಬುದನ್ನಿದು ಪರಿಣಾಮಕಾರಿಯಾಗಿ ಬಿಂಬಿಸುತ್ತದೆ.

ಗುಟೆನ್‌ಬರ್ಗ್ ನಿರ್ಮಿಸಿದ ಜಗತ್ತಿನ ಮೊಟ್ಟ ಮೊದಲ ಮುದ್ರಣ ಯಂತ್ರದ ಮಾದರಿ, ಆತ ಮುದ್ರಿಸಿದ ಜಗತ್ತಿನ ಮೊಟ್ಟ ಮೊದಲ ಪುಸ್ತಕ ಗುಟೆನ್‌ಬರ್ಗ್ ಬೈಬಲ್‌ನಿಂದ ಹಿಡಿದು... ಸುದ್ದಿ ಸಂಗ್ರಹಕ್ಕೆ ಕೆಎಕ್ಸ್‌ಎಎಸ್ ಟೀವಿ ಬಳಸುತ್ತಿದ್ದ ನೈಜ ಸುದ್ದಿ-ಹೆಲಿಕಾಪ್ಟರ್‌ವರೆಗೆ ಇಲ್ಲಿ ೬೫೦೦ಕ್ಕಿಂತ ಹೆಚ್ಚು ಪ್ರದರ್ಶಕಗಳಿವೆ.



‘ಸ್ವಾತಂತ್ರ್ಯ ದಮನದ’ ದ್ಯೋತಕವಾಗಿದ್ದ ಬರ್ಲಿನ್ ಗೋಡೆಯನ್ನು ೧೯೮೯ರಲ್ಲಿ ಕೆಡವಲಾಯಿತು. ಆದರೆ ಅನೇಕ ವರ್ಣ ಚಿತ್ತಾರದ ಆ ಗೋಡೆ ಹೇಗಿತ್ತು ಗೊತ್ತೇ? ಇಲ್ಲಿ, ಬರ್ಲಿನ್ ಗೋಡೆಯ ಮೂರು ಟನ್ ತೂಕದ ಎಂಟು ವರ್ಣ ರಂಜಿತ ಅವಶೇಷಗಳಿವೆ. ಇವುಗಳನ್ನು ನೋಡಿದರೆ, ಬರ್ಲಿನ್ ಗೋಡೆಯ ವಾಸ್ತವ ತಿಳಿಯುತ್ತದೆ.

ಹೈಟೆಕ್ ಸ್ಟೂಡಿಯೋ


ಇಲ್ಲಿ ಹಳೆಯ ಕಾಲದ ತಗಡು, ವಸ್ತುಗಳು ಮಾತ್ರವಲ್ಲ, ಅತ್ಯಾಧುನಿಕ ಮಾಧ್ಯಮ ತಂತ್ರಜ್ಞಾನದ ಪ್ರದರ್ಶವೂ ಇದೆ. ಸುದ್ದಿಯ ಆಳ ಅರಿವು ನೀಡುವ ೧೨೫ ಗೇಮ್ ಸ್ಟೇಶನ್‌ಗಳು, ಜನಸಾಮಾನ್ಯರಿಗೆ ಟೀವಿ ವರದಿಗಾರರಾಗುವ ಅನುಭವ ನೀಡಲು ಇಂಟರ್ಯಾಕ್ಟಿವ್ ಸ್ಟೂಡಿಯೋಗಳು ಅಲ್ಲದೇ ಐತಿಹಾಸಿಕ ಸುದ್ದಿ ಡಾಕ್ಯುಮೆಂಟರಿಗಳು, ತುಣುಕುಗಳು, ಪತ್ರಿಕೋದ್ಯಮ ಕುರಿತ ಸಿನಿಮಾಗಳು ಇಲ್ಲಿನ ವಿವಿಧ ಥೇಟರ್‌ಗಳಲ್ಲಿ ಪ್ರದರ್ಶನವಾಗುತ್ತಿರುತ್ತವೆ. ಇವುಗಳಲ್ಲಿ ಒಂದು ಥೇಟರಿನ ತೆರೆಯ ಉದ್ದ ಬರೋಬ್ಬರಿ ೧೦೦ ಅಡಿ! ಇನ್ನೊಂದು ಮಾಧ್ಯಮ ತೆರೆಯ ಅಳತೆ ೪೦-೨೨ ಅಡಿ. ಎಬಿಸಿ ಟೀವಿಯ ಒಂದು ಲೈವ್ ಸ್ಟೂಡಿಯೋ ಇಲ್ಲಿದೆ. ಇಲ್ಲಿಂದಲೇ ‘ದಿ ವೀಕ್ ವಿಥ್ ಜಾರ್ಜ್ ಸ್ಟಿಫನೋಪಾಲಸ್’ ಕಾರ್ಯಕ್ರಮ ಪ್ರತಿ ಭಾನುವಾರ ನೇರ ಪ್ರಸಾರವಾಗುತ್ತದೆ.

ನ್ಯೂಸಿಯಂನಲ್ಲೊಂದು ಮನೆಯ ಮಾಡಿ...

ನ್ಯೂಸಿಯಂನ ಇನ್ನೊಂದು ವಿಶೇಷವೆಂದರೆ, ನ್ಯೂಸಿಯಂ ರೆಸಿಡೆಸ್ಸಿ. ಇದು ನ್ಯೂಸಿಯಂ ಕಟ್ಟಡದಲ್ಲೇ ಇರುವ ಅಪಾರ್ಟ್‌ಮೆಂಟು. ಬಾಡಿಗೆ ಹಾಗೂ ಲೀಸ್‌ಗೆ ಸಿಂಗಲ್ ಹಾಗೂ ಡಬಲ್ ಬೆಡ್ ರೂಮ್ ಮನೆಗಳು ಸಾರ್ವಜನಿಕರ ವಾಸಕ್ಕೆ ಲಭ್ಯ. ವಾವ್... ಎಂಥ ಲೊಕೇಶನ್‌ನಲ್ಲಿ ಮನೆ!



ನ್ಯೂಸಿಯಂ ಅಂದರೆ ಬರೀ ಮ್ಯೂಸಿಯಂ ಅಲ್ಲ. ಅಲ್ಲಿ ಸಾರ್ವಜನಿಕರು ಬರ್ತ್‌ಡೇ ಪಾರ್ಟಿ ಮಾಡಲು ಅಥವಾ ತರಬೇತಿ ಕಾರ್ಯಾಗಾರ ಮಾಡಲೂ ಅವಕಾಶವಿದೆ. ಇಲ್ಲಿ, ಸುದ್ದಿ ಹಾಗೂ ಪತ್ರಿಕೋದ್ಯಮ ಇತಿಹಾಸಕ್ಕೆ ಸಂಬಂಧಿಸಿದ ಪುಸ್ತಕ, ಕ್ಯಾಸೆಟ್, ಡೀವಿಡಿ ಹಾಗೂ ಇತರ ಸ್ಮರಣಿಕೆ ಮಾರುವ ಮಳಿಗೆಯೂ ಒಂದಿದೆ. ಅಲ್ಲದೇ, ನ್ಯೂಸಿಯಂ ಆಗಾಗ ವಿವಿಧ ಕಾರ್ಯಕ್ರಮಗಳನ್ನು ನಡೆಸಿ ಸಾರ್ವಜನಿಕರನ್ನು ಆಕರ್ಷಿಸುತ್ತಿರುತ್ತದೆ. ನ್ಯೂಸಿಯಂ ಪ್ರವೇಶಕ್ಕೆ ೧೮ ಡಾಲರ್ ಶುಲ್ಕ. ನ್ಯೂಸಿಯಂನಂಥ ಬೃಹತ್ ಯೋಜನೆಗೆ ಹಣ ಸಂಗ್ರಹಿಸಲು, ಫ್ರೀಡಂ ಫೋರಂ ಇವುಗಳನ್ನು ಆದಾಯ ಮೂಲವಾಗಿ ಬಳಸಿಕೊಳ್ಳುತ್ತದೆ. ಇಲ್ಲವಾದರೆ, ನ್ಯೂಸಿಯಂನಂಥ ಐರಾವತವನ್ನು ಸರ್ಕಾರಿ ನೆರವಿಲ್ಲದೇ ಸಲಹುವುದು ಹೇಗೆ?
ನ್ಯೂಸಿಯಂ ವೆಬ್ ಸೈಟ್ : http://www.newseum.org

--------------------------

ನ್ಯೂಯಾರ್ಕ್‌ನಲ್ಲೊಂದು ಸೆಕ್ಸ್ ಮ್ಯೂಸಿಯಂ!

ನಾನು ಟೈಮ್ಸ್ ಸ್ವೇರ್‌ನಿಂದ ನ್ಯೂಯಾರ್ಕ್ ಸ್ಟಾಕ್ ಎಕ್ಸ್‌ಚೇಂಜ್ ಕಡೆ ಹೊರಟಿದ್ದೆ. ಆಗ ಕಣ್ಣಿಗೆ ಬಿತ್ತು ‘ಮ್ಯೂಸಿಯಂ ಆಫ್ ಸೆಕ್ಸ್‘. ಅರರೆ.. ಹೀಗೂ ಒಂದು ಮ್ಯೂಸಿಯಂ ಇದೆಯಾ ಅಂದುಕೊಂಡೆ. ಮ್ಯೂಸಿಯಂ ಅಮೆರಿಕದ ಸಂಸ್ಕೃತಿಯಲ್ಲೇ ರಕ್ತಗತ. ಎಲ್ಲ ವಿಷಯಕ್ಕೂ ಒಂದೊಂದು ವಸ್ತು ಸಂಗ್ರಹಾಲಯ ಮಾಡಿ ಎಲ್ಲ ದಾಖಲೆಗಳನ್ನೂ ಸಂರಕ್ಷಿಸುವುದು ಅವರ ಜಾಯಮಾನ. ಹಾಗಾಗಿ, ಅಮೆರಿಕದಲ್ಲಿ ಲೆಕ್ಕವಿಲ್ಲದಷ್ಟು ಮ್ಯೂಸಿಯಂ.

ಅಂದಹಾಗೆ, ಸೆಕ್ಸ್ ಮ್ಯೂಸಿಯಂನಲ್ಲಿ ಮನುಷ್ಯ ಮತ್ತು ಪ್ರಾಣಿ ಲೈಂಗಿಕತೆ ಕುರಿತು ಅನೇಕ ಮಾದರಿಗಳು, ಚಿತ್ರಕಲೆ, ಛಾಯಾಚಿತ್ರಗಳು, ಮಾಹಿತಿ ಅಲ್ಲದೇ ಲೈಂಗಿಕ ಆಟಿಕೆಗಳೂ ಇವೆ. ಈ ಮ್ಯೂಸಿಯಂನ ಉದ್ದೇಶ ಲೈಂಗಿಕ ಸದಭಿರುಚಿ ಮೂಡಿಸುವುದು. ಅದರಿಂದ ಚರ್ಚ್ ಸನಿಹವಿದ್ದರೂ ನ್ಯೂಯಾರ್ಕ್‌ನ ಸ್ಥಳೀಯ ಆಡಳಿತ ಈ ಮ್ಯೂಸಿಯಂಗೆ ಪರವಾನಿಗೆ ನೀಡಿದೆ. ಮುಂಬೈನಲ್ಲೂ ಇಂತಹ ಒಂದು ಸೆಕ್ಸ್ ಮ್ಯೂಸಿಯಂ ಇತ್ತೀಚೆಗೆ ಆರಂಭವಾಗಿದೆಯಂತೆ.

Sunday, December 14, 2008

ಸೆಗ್‌ವೇ ಟೂರ್ : ವಂಡರ್ ವಾಹನದ ಮೇಲೆ ನಗರ ಪ್ರದಕ್ಷಿಣೆ


ಭಾಗ - 5

ಪೆಡಲ್ ಇಲ್ಲ. ಕ್ಲಚ್ಚು, ಗೇರು, ಎಕ್ಸಿಲೇಟರ್ ಇಲ್ಲ. ಬ್ರೇಕ್ ಇಲ್ಲ. ತುಳಿಯುವುದು ಬೇಕಿಲ್ಲ. ಪೆಟ್ರೋಲ್ ಬೇಡ. ಸುಮ್ಮನೆ ಸೆಗ್‌ವೇ ಮೇಲೆ ನಿಂತ ಮನುಷ್ಯ ಮುಂದೆ ಬಾಗಿದರೆ ಸೆಗ್‌ವೇ ಮುಂದೆ ಓಡುತ್ತದೆ. ಹಿಂದೆ ಬಾಗಿದರೆ ಹಿಂದೆ ಹೋಗುತ್ತದೆ. ಗಾಡಿ ನಿಲ್ಲಿಸಬೇಕೆ? ಸುಮ್ಮನೆ ಸೆಗ್‌ವೇ ಮೇಲೆ ನೆಟ್ಟಗೆ ನಿಂತರಾಯಿತು!





ರಾವಣನ ಪುಷ್ಪಕ ವಿಮಾನ, ಅಲ್ಲಾವುದ್ದೀನನ ಹಾರುವ ಚಾಪೆ, ಹ್ಯಾರಿ ಪಾಟರ್‌ನ ಹಾರುವ ಕಸಬರಿಗೆ, ಸೂಪರ್ ಮ್ಯಾನ್‌ನ ಹಾರುವ ಉಡುಪು ಹಾಗೂ ವಿಜ್ಞಾನ ಕೌತುಕದ ಹಾರುವ ತಟ್ಟೆ... ಇವೆಲ್ಲಾ ಎಷ್ಟು ಅದ್ಭುತವೋ, ನನಗೆ ಸೆಗ್‌ವೇ ಕೂಡ ಅಷ್ಟೇ ವಂಡರ್‌ಪುಲ್!

ಎರಡೇ ವ್ಯತ್ಯಾಸ. ಒಂದು- ಅವೆಲ್ಲ ಹಾರುತ್ತವೆ. ಸೆಗ್‌ವೇ ನೆಲದ ಮೇಲೆ ಓಡುತ್ತದೆ. ಎರಡು -ಅವೆಲ್ಲ ಬರೀ ಕಲ್ಪನೆ. ಸೆಗ್‌ವೇ ವಾಸ್ತವ!

ಸೆಗ್‌ವೇ ಅಂದರೆ ಎರಡು ಚಕ್ರದ ಪುಟ್ಟ ವಾಹನ. ಆದರೆ, ಜಗತ್ತಿನ ಇನ್ನೆಲ್ಲಾ ವಾಹನಗಳಿಗಿಂತ ಭಿನ್ನ. ಅದಕ್ಕೇ ಎಷ್ಟೋ ದೇಶಗಳು ಇದನ್ನು ಇನ್ನೂ ವಾಹನ ಎಂದು ಪರಿಗಣಿಸಿಯೇ ಇಲ್ಲ! ಆದರೆ, ಇದು ಚಕ್ರದ ಆಧಾರದಲ್ಲಿ ಊರ ತುಂಬಾ ಚಲಿಸುತ್ತದೆಯಲ್ಲ? ಆದ್ದರಿಂದ ಇದು ವಾಹನವಲ್ಲದೇ ಮತ್ತೇನೂ ಅಲ್ಲ.

ಒಬ್ಬ ವ್ಯಕ್ತಿ ನಿಲ್ಲಲು ಸಾಲುವಷ್ಟು ಒಂದು ಮಣೆ. ಅದಕ್ಕೆ ಎರಡು ಚಕ್ರಗಳು. ಮಣೆಯ ಮೇಲೆ ನಿಂತ ಚಾಲಕನಿಗೆ ಹಿಡಿದುಕೊಳ್ಳಲು ಒಂದು ಗೂಟ! ನೋಡಲು ಸೆಗ್‌ವೇ ಅಂದರೆ ಇಷ್ಟೇ.

ಪೆಡಲ್ ಇಲ್ಲ. ಕ್ಲಚ್ಚು, ಗೇರು, ಎಕ್ಸಿಲೇಟರ್ ಇಲ್ಲ. ಬ್ರೇಕ್ ಇಲ್ಲ. ತುಳಿಯುವುದು ಬೇಕಿಲ್ಲ. ಪೆಟ್ರೋಲ್ ಬೇಡ. ಸುಮ್ಮನೆ ಸೆಗ್‌ವೇ ಮೇಲೆ ನಿಂತ ಮನುಷ್ಯ ಮುಂದೆ ಬಾಗಿದರೆ ಸೆಗ್‌ವೇ ಮುಂದೆ ಓಡುತ್ತದೆ. ಹಿಂದೆ ಬಾಗಿದರೆ ಹಿಂದೆ ಹೋಗುತ್ತದೆ. ಕೈಲಿರುವ ಗೂಟವನ್ನು ತುಸು ಬಲಕ್ಕೆ ತಿರುಗಿಸಿದರೆ, ಸೆಗ್‌ವೇ ಬಲಕ್ಕೆ ಹೊರಳುತ್ತದೆ. ಎಡಕ್ಕೆ ತಿರುವಿದರೆ ಎಡಕ್ಕೆ ಹೊರಡುತ್ತದೆ. ಗಾಡಿ ನಿಲ್ಲಿಸಬೇಕೆ? ಸುಮ್ಮನೆ ಸೆಗ್‌ವೇ ಮೇಲೆ ನೆಟ್ಟಗೆ ನಿಂತರಾಯಿತು! ಸೈಕಲ್, ಬೈಕಿನಂತೆ ಬ್ಯಾಲೆನ್ಸ್ ಕೂಡ ಮಾಡಬೇಕಿಲ್ಲ. ತನ್ನ ಮೇಲೆ ನಿಂತ ಚಾಲಕ ಬೀಳದಂತೆ ಈ ವಾಹನದಲ್ಲಿರುವ ಕಂಪ್ಯೂಟರೇ ಎಲ್ಲಾ ಬ್ಯಾಲೆನ್ಸ್ ಮಾಡಿಕೊಳ್ಳುತ್ತದೆ!

ಹೇಳಿ... ಸ್ಟೀರಿಂಗ್ ಇಲ್ಲದ ಹ್ಯಾರಿ ಪಾಟರ್‌ನ ಹಾರುವ ಕಸಬರಿಗೆಗಿಂತ, ಪೆಟ್ರೋಲ್ ಬೇಡದ ಅಲ್ಲಾವುದ್ದೀನನ ಹಾರುವ ಚಾಪೆಗಿಂತ, ಇಂಜಿನ್ ಇಲ್ಲದ ರಾವಣನ ಪುಷ್ಪಕ ವಿಮಾನಕ್ಕಿಂತ ಸೆಗ್‌ವೇ ಏನು ಕಡಿಮೆ ಅದ್ಭುತ!

ನಿಜ ಹೇಳಬೇಕೆಂದರೆ, ಶತಮಾನಗಳ ಹಿಂದೆ ಸೈಕಲ್ ಸಂಶೋಧನೆ ಆದ ನಂತರ ನಡೆದ ಅತಿ ಮಹತ್ವದ ವಾಹನಾನ್ವೇಷಣೆ ಸೆಗ್‌ವೇ -ಎಂದು ತಜ್ಞರು ಇದನ್ನು ಬಣ್ಣಿಸಿದ್ದಾರೆ. ವಿಮಾನ, ರೈಲು, ಹಡಗು, ಬೈಕು, ಕಾರು, ಲಾರಿ, ಬಸ್ಸುಗಳಂತೆ ಸೆಗ್‌ವೇ ಜಗತ್ತಿನ ಸಾರಿಗೆ ವ್ಯವಸ್ಥೆಯಲ್ಲಿ ಕ್ರಾಂತಿ ಉಂಟುಮಾಡುವುದಿಲ್ಲ. ಚಕ್ಕಡಿಗಾಡಿ, ಕುದುರೆ ಟಾಂಗಾದಂತೆ ಊರಿಂದ ಊರಿಗೆ ಹೋಗಲೂ ಸೆಗ್‌ವೇಯಿಂದ ಸಾಧ್ಯವಿಲ್ಲ. ಆದರೂ, ಸೆಗ್‌ವೇ ೨೦ನೇ ಶತಮಾನದ ಮ್ಯಾಜಿಕ್ ವಾಹನ. ಇಂಥ ಮ್ಯಾಜಿಕ್ ವಾಹನದ ಮೇಲೆ ಅಮೆರಿಕದ ರಾಜಧಾನಿಯನ್ನು ಸುತ್ತುವ ಸಂಭ್ರಮ ನನ್ನದಾಯಿತು.

ನನ್ನ ಸೆಗ್‌ವೇ ಸಂಭ್ರಮ

ಕಳೆದ ಅಕ್ಟೋಬರ್‌ನಲ್ಲಿ ಒಂದು ವಾರ ನಾನು ವಾಷಿಂಗ್‌ಟನ್ ಡಿ.ಸಿ.ಯಲ್ಲಿದ್ದೆ. ವೈಟ್‌ಹೌಸ್‌ನ ಬೇಲಿಯ ಹೊರಗೆ ನಿಂತು ಫೋಟೋ ತೆಗೆಯುತ್ತಿದ್ದೆ. ಹತ್ತು ಜನರ ಒಂದು ತಂಡ ಸುಯ್ಯನೆ ಬಂದು ವೈಟ್ ಹೌಸ್‌ನ ಎದುರು ನಿಂತಿತು. ಅರೇ... ಅವರು ಬಂದಿದ್ದು ಯಾವ ವಾಹನದಲ್ಲಿ ಎಂದು ನೋಡಿದೆ. ಸೆಗ್‌ವೇ!

೨೦೦೧ರಲ್ಲಿ, ಜಗತ್ತಿಗೆ ಸೆಗ್‌ವೇ ಅನಾವರಣಗೊಂಡಾಗ, ಅದರ ಬಗ್ಗೆ ನಾನು ಇದೇ ಪತ್ರಿಕೆಯಲ್ಲಿ ಚಿಕ್ಕ ಬರಹ ಬರೆದಿದ್ದೆ. ಆನಂತರ, ಅದನ್ನು ನೆನಪಿಸಿಕೊಳ್ಳುವ ಅಥವಾ ನೋಡುವ ಅವಕಾಶವೇ ಬಂದಿರಲಿಲ್ಲ. ಆದರೀಗ, ನನ್ನ ಕಣ್ಣ ಮುಂದೆ ದಿಢೀರನೆ ಸೆಗ್‌ವೇ ಪ್ರತ್ಯಕ್ಷವಾಗಿತ್ತು. ನನಗಾಗ, ಮಕ್ಕಳಿಗೆ ಹೊಸ ಆಟಿಕೆ ಕಂಡಾಗ ಆಗುವಷ್ಟು ಸಂಭ್ರಮವಾದದ್ದು ಸುಳ್ಳಲ್ಲ.

ವಾಷಿಂಗ್ಟನ್ ಡಿಸಿ, ಶಿಕಾಗೋ, ಸ್ಯಾನ್‌ಪ್ರಾನ್ಸಿಸ್ಕೋ ಸೇರಿದಂತೆ ಅಮೆರಿಕದ ಕೆಲವು ನಗರಗಳಲ್ಲಿ ‘ಸಿಟಿ ಸೆಗ್‌ವೇ ಟೂರ್’ ಪ್ರವಾಸೀ ಸೌಕರ್ಯವಿದೆ. ಸುಮಾರು ೩ ಗಂಟೆಯ ಕಾಲ ನಗರದ ಪ್ರೇಕ್ಷಣೀಯ ಸ್ಥಳಗಳಿಗೆ ಸೆಗ್‌ವೇಯಲ್ಲಿ ಪ್ರವಾಸ ಕರೆದುಕೊಂಡು ಹೋಗುವ ಸಿಟಿ ಟೂರ್ ಪ್ಯಾಕೇಜ್ ಇದು. ಒಂದು ಸೆಗ್‌ವೇಯಲ್ಲಿ ಒಬ್ಬ ಟೂರ್ ಗೈಡ್ ಇರುತ್ತಾಳೆ. ಆ ಗೈಡನ್ನು ೮ರಿಂದ ೧೦ ಜನ ಪ್ರವಾಸಿಗಳು ಒಂದೊಂದು ಸೆಗ್‌ವೇಯಲ್ಲಿ ಹಿಂಬಾಲಿಸುತ್ತಾರೆ. ಪ್ರೇಕ್ಷಣೀಯ ಸ್ಥಳ ಬಂದಾಗ ಗೈಡ್ ಸೆಗ್‌ವೇ ನಿಲ್ಲಿಸಿ ಮಾಹಿತಿ ನೀಡುತ್ತಾಳೆ. ಅದಾದ ಬಳಿಕ ಈ ಸೆಗ್‌ವೇ ತಂಡ ಮುಂದಿನ ಪ್ರೇಕ್ಷಣೀಯ ಸ್ಥಳಕ್ಕೆ ಹೊರಡುತ್ತದೆ. ಈ ಮೂರು ಗಂಟೆಯ ಪ್ರವಾಸಕ್ಕೆ ೭೦ ಡಾಲರ್! ಸಾಮಾನ್ಯವಾಗಿ ಪ್ರತಿದಿನವೂ ಸೆಗ್‌ವೇ ಟೂರ್ ಪೂರ್ಣ ಬುಕ್ ಆಗಿರುತ್ತದೆ. ಆದ್ದರಿಂದ ತುಸು ಮುಂಗಡವಾಗಿ ಪ್ರವಾಸ ಬುಕ್ ಮಾಡಿಕೊಳ್ಳುವುದು ಒಳಿತು.

ಟೂರ್ ಆರಂಭಿಸುವ ಮೊದಲು, ಸೆಗ್‌ವೇ ಚಾಲನೆ ಮಾಡುವುದು ಹೇಗೆ ಎಂದು ಆರೇಳು ನಿಮಿಷ ಪ್ರಾತ್ಯಕ್ಷಿಕೆ ನೀಡುತ್ತಾರೆ. ಆಮೇಲೆ ಹತ್ತಿಪ್ಪತ್ತು ನಿಮಿಷ ಪ್ರವಾಸಿಗರಿಂದ ಸೆಗ್‌ವೇ ಚಾಲನೆಯ ತಾಲೀಮು ಮಾಡಿಸುತ್ತಾರೆ. ಅಷ್ಟು ಬೇಗ ಸೆಗ್‌ವೇ ಚಾಲನೆ ಕಲಿಯಬಹುದೇ ಎಂಬ ಸಂಶಯ ನನಗೂ ಇತ್ತು. ಆದರೆ, ನನಗೆ ಕೇವಲ ಐದು ನಿಮಿಷದಲ್ಲಿ ಸೆಗ್‌ವೇ ಮೇಲೆ ಹಿಡಿತ ಸಿಕ್ಕಿತು. ಅಂದರೆ, ಊಹಿಸಿ. ಸೆಗ್‌ವೇ ಚಾಲನೆ ಎಷ್ಟು ಸಲೀಸು ಎಂದು. ನಾನು ಚಿಕ್ಕವನಿರುವಾಗ ಅಪ್ಪ ನನಗೆ ಸೈಕಲ್ ಕಲಿಸಲು ವಾರಗಟ್ಟಲೆ ಕಷ್ಟಪಟ್ಟಿದ್ದನ್ನು, ಕಲಿತ ಹೊಸತರಲ್ಲಿ ನಾನು ಬಿದ್ದು ಗಾಯ ಮಾಡಿಕೊಂಡಿದ್ದನ್ನು ನೆನಪಿಸಿಕೊಂಡು ಮನಸ್ಸಿನಲ್ಲೇ ನಕ್ಕೆ.

ಆಟೋಮ್ಯಾಟಿಕ್ ಬ್ಯಾಲೆನ್ಸ್

ಸೆಗ್‌ವೇ ಮೇಲೆ ನಿಂತುಕೊಳ್ಳುವುದು ಸರ್ಕಸ್ ಅಲ್ಲವೇ ಅಲ್ಲ. ಸೆಗ್‌ವೇಯಲ್ಲಿ ಗೈರೋಸ್ಕೋಪ್, ಮೋಟರ್ ಮುಂತಾದ ಯಾಂತ್ರಿಕ ಭಾಗಗಳಿವೆ. ಆದರೆ ಅವೆಲ್ಲ ಹೊರಗಡೆಯಿಂದ ಕಾಣಲ್ಲ ಬಿಡಿ. ಸೆಗ್‌ವೇಯ ಮಣೆಯಲ್ಲಿ ಒಂದು ಕಂಪ್ಯೂಟರ್ ಇರುತ್ತದೆ. ಇದು ಸೆಗ್‌ವೇಯ ಸಮತೋಲನವನ್ನು ಸದಾ ಕಾಯ್ದುಕೊಳ್ಳುತ್ತದೆ. ಸೆಗ್‌ವೇ ಮೇಲೆ ನಿಂತ ವ್ಯಕ್ತಿಯ ಬ್ಯಾಲೆನ್ಸನ್ನೂ ಸೆಗ್‌ವೇ ಕಂಪ್ಯೂಟರೇ ಗಮನಿಸುತ್ತಿರುತ್ತದೆ. ವ್ಯಕ್ತಿ ಮುಂದೆ ಬಾಗಿದಾಗ ಸೆಗ್‌ವೇಯ ಗುರುತ್ವ (ಸೆಂಟರ್ ಆಫ್ ಗ್ರಾವಿಟಿ) ಮುಂದಕ್ಕೆ ಚಲಿಸುತ್ತದೆ. ಆಗ, ಬ್ಯಾಲೆನ್ಸ್ ಕಾಯ್ದುಕೊಳ್ಳಲು ಸೆಗ್‌ವೇ ಕೂಡ ಮುಂದೆ ಚಲಿಸುತ್ತದೆ. ವ್ಯಕ್ತಿ ಮುಂದೆ ಬಾಗಿದಷ್ಟೂ ವೇಗ ಹೆಚ್ಚುತ್ತದೆ. ಅದೇ ರೀತಿ ಬಾಡಿ ಹಿಂದೆ ಬಾಗಿದರೆ ಗಾಡಿ ರಿವರ್‍ಸ್ ಚಲಿಸುತ್ತದೆ.

ಇದರ ಗರಿಷ್ಠ ವೇಗ ಗಂಟೆಗೆ ೨೦ ಕಿಮೀ. ಇದು ರೀಚಾರ್ಜೆಬಲ್ ಬ್ಯಾಟರಿ ಚಾಲಿತ, ಮಾಲಿನ್ಯ ರಹಿತ ವಾಹನ. ಇದರ ತೂಕ ಸುಮಾರು ೪೫ ಕೆಜಿ. ಇದರ ಮೇಲೆ ಸುಮಾರು ೧೦೦ ಕೆಜಿ ಭಾರದ ವ್ಯಕ್ತಿ ನಿಲ್ಲಬಹುದು. ಒಮ್ಮೆ ಚಾರ್ಜ್ ಮಾಡಿದರೆ, ೨೦-೨೫ ಕಿ.ಮೀ. ದೂರ ಕ್ರಮಿಸಬಹುದು. ಆದ್ದರಿಂದ, ಇದು ನಗರದ ಒಳಗೆ ಸಂಚರಿಸಲು ಮಾತ್ರ ಯೋಗ್ಯ.

‘ಸಿಟಿ ಟೂರ್’ ಕಂಪನಿಗಳ ಹೊರತಾಗಿ ಪೊಲೀಸರು, ಮುನಿಸಿಪಾಲಿಟಿ ಸಿಬ್ಬಂದಿ, ಪೋಸ್ಟ್‌ಮನ್ ಮುಂತಾದವರೂ ಇದನ್ನು ತಮ್ಮ ವಾಹನವಾಗಿ ಬಳಸುತ್ತಿದ್ದಾರೆ. ಕಾರ್ಪೋರೇಟ್ ಕ್ಯಾಂಪಸ್‌ಗಳಲ್ಲಿ, ವಾಲ್‌ಮಾರ್ಟ್‌ನಂಥ ದೊಡ್ಡ ಮಳಿಗೆಗಳಲ್ಲಿ, ವಿಮಾನ ನಿಲ್ದಾಣಗಳಲ್ಲೂ ಸೆಗ್‌ವೇಯನ್ನು ಕಾಣಬಹುದು. ಈಗೀಗ ಸೆಗ್‌ವೇ ಪೋಲೋ ಪಂದ್ಯವೂ ಆರಂಭವಾಗಿದೆ. ರೋಮ್, ಲಂಡನ್, ಫ್ರಾನ್ಸ್‌ನಂಥ ನಗರಗಳಲ್ಲೂ ಸೆಗ್ ಟೂರ್ ಇವೆಯಂತೆ. ಆದರೆ, ಭಾರತದಲ್ಲಿ ಎಲ್ಲೂ ಸೆಗ್‌ವೇ ಟೂರ್ ಇರುವ ಬಗ್ಗೆ ಮಾಹಿತಿಯಿಲ್ಲ.
ಟಿ ೩ ಲಕ್ಷ ರೂ ಬೆಲೆ: ಸೆಗ್‌ವೇಯಂಥ ಸರಳ, ಉಪಯುಕ್ತ ವಾಹನ ಏಕೆ ಇನ್ನೂ ಪ್ರಸಿದ್ಧವಾಗಿಲ್ಲ? ೨೦೦೧ರಲ್ಲಿ ಸೆಗ್‌ವೇ ಮೊಟ್ಟ ಮೊದಲು ಅನಾವರಣಗೊಂಡಾಗ ಇದು ಸಾರಿಗೆ ಕ್ರಾಂತಿ ಮಾಡುತ್ತದೆ ಎಂದೇ ಬಿಂಬಿಸಲಾಗಿತ್ತು. ಇನ್ನೂ ಈ ಪರ್ಸನಲ್ ಟ್ರಾನ್ಸ್ ಪೋರ್ಟರ್ ‘ಆಟಿಕೆ’ ಎಂಬ ಹಣೆಪಟ್ಟಿ ಅಂಟಿಸಿಕೊಂಡಿದೆ. ಜಗತ್ತಿನಾದ್ಯಂತ ಇದು ಸೈಕಲ್‌ನಂತೆ ಜನಪ್ರಿಯವಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಹಾಗಾಗಲಿಲ್ಲ. ಏಕೆಂದರೆ, ಇದರ ಬೆಲೆ ದುಬಾರಿ. ಅಮೆರಿಕದಲ್ಲಿ ಸುಮಾರು ೫-೬ ಸಾವಿರ ಡಾಲರ್. ಅಂದರೆ, ಭಾರತೀಯ ಲೆಕ್ಕದಲ್ಲಿ ಕನಿಷ್ಠ ೩ ಲಕ್ಷ ರುಪಾಯಿ. ಈ ಬೆಲೆಗೆ ಒಂದು ಕಾರು ಅಥವಾ ಬೈಕೇ ಸಿಗುತ್ತದೆ. ಅದರಿಂದಾಗಿ ಸೆಗ್‌ವೇ ಇನ್ನೂ ವೈಯಕ್ತಿಕ ವಾಹನವಾಗಿ ಬಳಕೆಗೆ ಬಂದಿಲ್ಲ.

ನಾನು ಸೆಗ್‌ವೇ ಸವಾರಿ ಮಾಡಿದ್ದು ಕೇವಲ ಮೂರು ಗಂಟೆ ಕಾಲ. ಆದರೆ, ಆ ಸೆಗ್‌ವೇ ಮೇಲೆ ವಾಷಿಂಗ್‌ಟನ್ ಡಿ.ಸಿ. ನೋಡಿದ ನೆನಪು ಚಿರಕಾಲ. ಅಮೆರಿಕದ ನಗರಗಳನ್ನು ನೋಡಲು ಅನೇಕ ಹವಾನಿಯಂತ್ರಿತ ಪ್ರವಾಸಿ ಬಸ್ಸುಗಳು, ರೂಫ್‌ಟಾಪ್ ವಾಹನಗಳೂ, ಸುಖಾಸೀನದ ಲಿಮೋಸಿನ್‌ಗಳೂ, ಪ್ರತಿಷ್ಠಿತ ಕಾರುಗಳೂ ಇವೆ. ಆದರೆ, ಸೆಗ್‌ವೇ ಟೂರ್ ಅನುಭವದ ಮುಂದೆ ಉಳಿದೆಲ್ಲ ವಾಹನಗಳ ನಗರ ಪ್ರವಾಸವೂ ತೀರಾ ಸಪ್ಪೆ.


---------------------------

ಮೈಸೂರು, ಹಂಪಿಗೆ ಬಂದ್ರೆ ಹಿಟ್

ಸೆಗ್‌ವೇ ಟೂರ್ ಭಾರತದಲ್ಲಿ ಎಲ್ಲೂ ಇರುವ ಬಗ್ಗೆ ಮಾಹಿತಿಯಿಲ್ಲ. ಬೆಂಗಳೂರು, ದೆಹಲಿ, ಕೊಲ್ಕತಾದ ದಟ್ಟ ಟ್ರಾಫಿಕ್‌ನಗರಿಗಿಂತ ಗೋವಾ, ಹಂಪಿ, ಮೈಸೂರಿನಂಥ ಊರಿನಲ್ಲಿ ‘ಸೆಗ್‌ವೇ ಸಿಟಿ ಸವಾರಿ’ ಹಿಟ್ ಆಗಬಹುದು.
- ಭಾರತದ ಸೆಗ್‌ವೇ ವಾಹನದ ಅಧಿಕೃತ ಡೀಲರ್
ಸ್ಟಾರ್ ಪರ್ಸನಲ್ ಟ್ರಾನ್ಸ್ ಪೋರ್ಟ್ ಪ್ರೈ. ಲಿ,
ನಂ.೨೮, ಫ್ರೆಂಡ್ಸ್ ಕಾಲೋನಿ (ವೆಸ್ಟ್),
ನವದೆಹಲಿ, ೧೧೦೦೬೫.

-ಸೆಗ್‌ವೇ ವೆಬ್‌ಸೈಟ್: http://www.segway.com

Sunday, December 07, 2008

2009 - ಫಿದಾಯೀ ಭಯೋತ್ಪಾದನಾ ವರ್ಷ?

ನ್ಯೂಯಾರ್ಕ್ ಸಬ್ ವೇ ಉಗ್ರರ ಮುಂದಿನ ಟಾರ್ಗೆಟ್


ಭಾಗ - 4

ಅಮೆರಿಕಕ್ಕೆ ಈಗ ಹೊಸ ನಮೂನಿ ಭಯೋತ್ಪಾದನಾ ಸಮಸ್ಯೆ ಎದುರಾಗಿದೆ. ಅದು Home Grown Terrorism ಸಮಸ್ಯೆ. ನ್ಯೂಯಾರ್ಕಿನ ’ಫಾರಿನ್ ಪಾಲಿಸಿ ಅಸೋಸಿಯೇಶನ್’ ಬಾತ್ಮೀದಾರ ಹಾಗೂ ’ಟೆರರಿಸಂ ತಜ್ಞ’ ಜೋಶ್ ಹ್ಯಾಮರ್ ಪ್ರಕಾರ ೯/೧೧ ಮಾದರಿ ಕೃತ್ಯಗಳಿಗಿಂತ ಇನ್ನು ’ಫಿದಾಯೀ’ ಮಾದರೀ ಭಯೋತ್ಪಾದನಾ ಪ್ರಕರಣಗಳು ಹೆಚ್ಚಲಿವೆ. ೨೦೦೯ ಬಹುಶಃ ಫಿದಾಯೀ ಮಾದರಿ ಭಯೋತ್ಪಾದನೆಯ ವರ್ಷವಾದರೂ ಆಗಬಹುದು.






ಳೆದ ಅಕ್ಟೋಬರ್ ಕೊನೆಯ ವಾರ ನಾನು ನ್ಯೂಯಾರ್ಕ್ ಸಿಟಿಯಲ್ಲಿದ್ದೆ. ಉಳಿದ ಅಮೆರಿಕದ ಶಹರಗಳಂತಲ್ಲ ಇದು. ಸದಾ ಜನ ಗಿಜಿಬಿಜಿ. ಗಡಿಬಿಡಿ. ಟ್ರಾಫಿಕ್ ಸಿಗ್ನಲ್‌ಗೆ ಕವಡೆ ಕಿಮ್ಮತ್ತು. ಯಾಕೋ ಮುಂಬೈನಲ್ಲಿರುವಂತೇ ಅನಿಸಿತು. ಅಮೆರಿಕದ ಅತ್ಯಂತ ಜನನಿಬಿಡ ಶಹರ ಇದು.

ಅಮೆರಿಕದ ಅಧ್ಯಕ್ಷ ಹುದ್ದೆಯನ್ನು ಬಿಟ್ಟರೆ, ನ್ಯೂಯಾರ್ಕ್ ಸಿಟಿಯ ಮೇಯರ್ ಹುದ್ದೆಯೇ ಅತ್ಯಂತ ಕಷ್ಟದ ಪದವಿ! - ಎನ್ನೋ ಮಾತಿದೆ. ಈ ಸಿಟಿಯ ನಿರ್ವಹಣೆ, ಭದ್ರತೆ ಅಷ್ಟು ಕಷ್ಟ.

ಅಲ್ಲಿ ನೆಲದಡಿ ಹಲವು ಸುರಂಗ ರೇಲ್ವೇಗಳಿವೆ. ಈ ಮೆಟ್ರೋ ರೇಲ್ವೆ ವ್ಯವಸ್ಥೆಗೆ ಸಬ್‌ವೇ ಅಂತ ಹೆಸರು. ಈ ಸಬ್‌ವೇಗಳಲ್ಲಿ 'ಟೈಮ್ಸ್ ಸ್ಕ್ವೇರ್ ಟರ್ಮಿನಲ್ ' ಅಮೆರಿಕದ ಅತ್ಯಂತ ಬಿಝಿ ರೇಲ್ವೆ ನಿಲ್ದಾಣ. ನಾನಿದ್ದ ಹೊಟೆಲ್, ಟೈಮ್ಸ್ ಸ್ಕ್ವೇರ್‌ನಿಂದ ಕೇವಲ ೨ ನಿಮಿಷದ ನಡಿಗೆ. ಹಾಗಾಗಿ, ಆರೆಂಟು ಸಲ ಈ ನಿಲ್ದಾಣಕ್ಕೆ ಹೋಗಿದ್ದೆ.

ನೆಲದಡಿ ಇರುವ ನಾಲ್ಕು ಮಹಡಿಗಳ ಈ ರೈಲು ನಿಲ್ದಾಣ ಪ್ರವೇಶಿಸುತ್ತಿದ್ದಂತೆ, ಕಿವಿಗಡಚಿಕ್ಕುವ ಸಂಗೀತ ಕೇಳಿಸಲು ಆರಂಭಿಸುತ್ತದೆ. ಗಿಟಾರ್ ನುಡಿಸುವವರು, ಡ್ರಮ್ ಬಾರಿಸುವವರು, ಟೇಪ್ ರೆಕಾರ್ಡ್‌ರ್ ಹಾಕಿಕೊಂಡು ಡಾನ್ಸ್ ಮಾಡುವವರು, ಹಲವು ವಾದ್ಯಗಳ ಆರ್‍ಕೆಸ್ಟ್ರಾ ನಡೆಸುವವರು... ಹೀಗೆ ಬಹುರೂಪಿ ಕಲಾವಿದರು ಮತ್ತು ಭಿಕ್ಷುಕರು ರೇಲ್ವೆ ಸ್ಟೇಷನ್‌ನ ಪ್ರವಾಸೀ ಆಕರ್ಷಣೆ. ಪೀಕ್ ಅವರ್‌ನಲ್ಲಿ ಇಲ್ಲಿ ಕಾಲಿಡಲೂ ಆಗದಷ್ಟು ಜನಸಂದಣಿ.

ಈ ಸ್ಟೇಷನ್ ಪ್ರವೇಶಿಸಿದಾಗೆಲ್ಲ ನನಗೆ ಅನಿಸಿದ್ದಿದೆ. ’ಇದೇನಿದು, ಇಲ್ಲಿ ಸ್ವಲ್ಪವೂ ಭದ್ರತಾ ವ್ಯವಸ್ಥೆಯೇ ಕಾಣುವುದಿಲ್ಲವಲ್ಲ. ಎಲ್ಲಾ ಕಡೆ ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದಾರೆ, ನಿಜ. ಆದರೆ, ಇಷ್ಟು ಬಿಝಿ ನಿಲ್ದಾಣಕ್ಕೆ ಇಷ್ಟೇ ಸಾಕೆ ಭದ್ರತೆ? ಒಂದು ವೇಳೆ ಇಲ್ಲಿ ಉಗ್ರರು ದಾಳಿ ಮಾಡಿದರೆ ಏನು ಗತಿ!’

ಸುಮ್ಮನೆ ಕೆಟ್ಟ ಕಲ್ಪನೆಯೊಂದು ಬಂತು -"ಐದಾರು ಜನ ಉಗ್ರರ ತಂಡ... ಸಾಧಾರಣ ಮೆಷಿನ್ ಗನ್ ಹಿಡಿದು ಏಕಾಏಕಿ ದಾಳಿಮಾಡಿ... ೧೦ ನಿಮಿಷದಲ್ಲಿ ನೂರಿನ್ನೂರು ಜನರನ್ನು ಕೊಂದು... ರೈಲೊಂದನ್ನು ಹೈಜಾಕ್ ಮಾಡಿ... ಕಡಿಮೆ ಜನಸಂದಣಿಯ ಸಣ್ಣ ಸ್ಟೇಷನ್‌ಗೆ ಹೋಗಿಳಿದು... ಪರಾರಿಯಾಗುವುದು ಎಷ್ಟು ಸುಲಭ!"

ಅಮೆರಿಕದ ವಿಮಾನ ನಿಲ್ದಾಣದಲ್ಲಾದರೋ, ಜಗತ್ತಿನಲ್ಲಿ ಎಲ್ಲೂ ಇಲ್ಲದಷ್ಟು ಬಿಗಿ ಭದ್ರತೆ. ತಪಾಸಣೆಗಾಗಿ ಬೆಲ್ಟು, ಶೂಗಳನ್ನೂ ಬಿಚ್ಚಿ ಎಕ್ಸ್‌ರೇ ಮಷಿನ್ನಿನೊಳಗೆ ತೂರಿಸಬೇಕು. ಆದರೆ, ಸಬ್‌ವೇಯಂಥ ಜನನಿಬಿಡ ಪ್ರದೇಶದಲ್ಲಿ ಮಾತ್ರ ಯಾವ ಭದ್ರತೆಯೂ ಇಲ್ಲ. ತಪಾಸಣೆಯಂತೂ ಇಲ್ಲವೇ ಇಲ್ಲ.

... ಇಂಥ 'ನ್ಯೂಯಾರ್ಕ್ ಸಬ್‌ವೇ' ಉಗ್ರರ ಮುಂದಿನ ಗುರಿ ಎಂದು ಕಳೆದ ವಾರ ಅಮೆರಿಕದ ರಾಷ್ಟ್ರೀಯ ತನಿಖಾ ದಳ - ಎಫ್‌ಬಿಐ ಎಚ್ಚರಿಕೆ ನೀಡಿದೆ.

ಹಾಗಾದರೆ, ನ್ಯೂಯಾರ್ಕ್ ಸಬ್‌ವೇ ಮೇಲೆ ನಡೆಯುವ ಭಯೋತ್ಪಾದನಾ ದಾಳಿ ಹೇಗಿರುತ್ತದೆ? ವಿಮಾನ ಡಿಕ್ಕಿ ಹೊಡೆಸುವಂಥ, ೯/೧೧, ಅಲ್‌ಖೈದಾ ಮಾದರಿಯ ಅದ್ಧೂರಿ ಭಯೋತ್ಪಾದನೆಯೋ? ಅಥವಾ ಮುಂಬೈಯಲ್ಲಿ ಕಳೆದವಾರ ನಡೆದಂಥ ಲಷ್ಕರ್-ಎ-ತಯ್ಯಬಾದ ’ಫಿದಾಯೀ’ ಮಾದರಿ ’ಚೀಪ್ ಆಂಡ್ ಬೆಸ್ಟ್’ ಭಯೋತ್ಪಾದನೆಯೋ?

ನ್ಯೂಯಾರ್ಕಿನ ’ಫಾರಿನ್ ಪಾಲಿಸಿ ಅಸೋಸಿಯೇಶನ್’ ಬಾತ್ಮೀದಾರ ಹಾಗೂ ’ಟೆರರಿಸಂ ತಜ್ಞ’ ಜೋಶ್ ಹ್ಯಾಮರ್ ಪ್ರಕಾರ ೯/೧೧ ಮಾದರಿ ಕೃತ್ಯಗಳಿಗಿಂತ ಇನ್ನು ’ಫಿದಾಯೀ’ ಮಾದರೀ ಭಯೋತ್ಪಾದನಾ ಪ್ರಕರಣಗಳು ಹೆಚ್ಚಲಿವೆ. ೨೦೦೯ ಬಹುಶಃ ಫಿದಾಯೀ ಮಾದರಿ ಭಯೋತ್ಪಾದನೆಯ ವರ್‍ಷವಾದರೂ ಆಗಬಹುದು ಎನ್ನುತ್ತಾರೆ ಅವರು!

ಯಾಕೆಂದರೆ, ಫಿದಾಯೀ ಮಾದರಿ ಭಯೋತ್ಪಾದನೆ ಸರಳ, ಸೋವಿ ಮತ್ತು ಅತ್ಯಂತ ಪ್ರಭಾವೀ ಎನ್ನುತ್ತಾರೆ ಜೋಶ್ ಹ್ಯಾಮರ್.
ಫಿದಾಯೀ ದಾಳಿ ಅಂದರೆ ಆತ್ಮಹತ್ಯಾ ದಾಳಿಯಲ್ಲ. ಉಗ್ರರ ಒಂದು ತಂಡ ಯಾವುದೋ ಒಂದು ಕಟ್ಟಡ, ಕಚೇರಿ ಅಥವಾ ಹೆಗ್ಗುರುತಿನ ಮೇಲೆ ಏಕಾ ಏಕಿ ಬಂದೂಕು ಮತ್ತು ಗ್ರೆನೇಡಿನ ದಾಳಿ ಮಾಡಿ ಅದನ್ನು ಆಕ್ರಮಿಸಿಕೊಳ್ಳುತ್ತದೆ. ಕೆಲವೊಮ್ಮೆ ಅಲ್ಲಿರುವ ಜನರನ್ನು ಒತ್ತೆ ಇಟ್ಟುಕೊಳ್ಳುತ್ತದೆ. ಎಷ್ಟು ದೀರ್ಘ ಕಾಲ ದಾಳಿ ನಡೆಸಲು ಸಾಧ್ಯವೋ ಅಷ್ಟು ನಡೆಸಿ, ತಮ್ಮ ವಿಧ್ವಂಸಕ ಕೃತ್ಯಕ್ಕೆ ಹೆಚ್ಚು ಪ್ರಚಾರ ಸಿಗುವಂತೆ ಮಾಡುತ್ತದೆ. ತಮ್ಮಲ್ಲಿರುವ ಮದ್ದು ಗುಂಡು ಖಾಲಿಯಾಗುವವರೆಗೂ ದಾಳಿ ನಡೆಸುತ್ತದೆ. ನಂತರ, ಅವಕಾಶ ಸಿಕ್ಕರೆ ಆ ಉಗ್ರರ ತಂಡ ಸ್ಥಳದಿಂದ ಪಲಾಯನಗೈಯುತ್ತದೆ ಅಥವಾ ಭದ್ರತಾ ಸಿಬ್ಬಂದಿಯಿಂದ ಹತಗೊಳ್ಳುತ್ತದೆ. ಲಷ್ಕರ್-ಎ-ತಯ್ಯಬಾ ಸಂಘಟನೆಯ ಭಯೋತ್ಪಾದನಾ ಮಾದರಿ ಇದು.


ಬರುವ ದಿನಗಳಲ್ಲಿ ಫಿದಾಯೀ ಮಾದರಿ ಭಯೋತ್ಪಾದನೆ ಯಾಕೆ ಹೆಚ್ಚಾಗಬಹುದು ಎನ್ನಲು ಜೋಶ್ ಹ್ಯಾಮರ್ ಐದು ಕಾರಣಗಳನ್ನು ನೀಡುತ್ತಾರೆ.

ಉಗ್ರರ ನೇಮಕ ಸುಲಭ : ಆತ್ಮಹತ್ಯಾ ದಾಳಿಗೆ ಉಗ್ರರನ್ನು ನೇಮಕ ಮಾಡಿಕೊಳ್ಳಲು ಉಗ್ರ ಸಂಘಟನೆಗಳಿಗೆ ಕಷ್ಟವಾಗುತ್ತಿದೆ. ಏಕೆಂದರೆ, ಆತ್ಮಹತ್ಯಾ ದಾಳಿಯಲ್ಲಿ ಬಾಂಬರ್ ಸ್ಫೋಟಗೊಂಡು ಛಿದ್ರವಾಗುವುದು ಖಚಿತ. ಆದರೆ, ಫಿದಾಯೀ ದಾಳಿಯಲ್ಲಿ ಉಗ್ರನಿಗೆ ಬದುಕುಳಿಯುವ ಅವಕಾಶವಿದೆ. ಹಾಗಾಗಿ, ಫಿದಾಯೀಗಳಾಗಲು ಉಗ್ರರು ಬೇಗನೆ ಒಪ್ಪಿಕೊಳ್ಳುತ್ತಿದ್ದಾರೆ.

ಕಡಿಮೆ ಖರ್ಚು, ಹೆಚ್ಚು ಹಾನಿ : ೯/೧೧ ದಾಳಿ ಮಾಡಲು ಅಲ್‌ಖೈದಾ ಪ್ರತಿ ವಿಮಾನ ಅಪಹರಣಕಾರರಿಗೆ ೨೬೦೦೦ ಡಾಲರ್ (೧೩ ಲಕ್ಷ ರು.) ನೀಡಿತ್ತಂತೆ. ಆದರೆ, ಫಿದಾಯಿ ಉಗ್ರರಿಗೆ ತಲಾ ೨೦೦೦ ಡಾಲರ್ (೧ ಲಕ್ಷ ರು.) ಸಾಕು. ಈ ಹಿನ್ನೆಲೆಯಲ್ಲಿ, ಫಿದಾಯೀ ಭಯೋತ್ಪಾದನೆ ಅತ್ಯಂತ ಸೋವಿ. ಒಂದಷ್ಟು ಉಗ್ರರು, ಅವರಿಗೆ ಒಂದೊಂದು ಎಕೆ-೪೭, ಒಂದಷ್ಟು ಗ್ರೆನೇಡ್, ಒಂದಷ್ಟು ಆರ್‌ಡಿಎಕ್ಸ್, ಖರ್ಚಿಗೆ ಒಂದಷ್ಟು ದುಡ್ಡು... ಸೋ ಚೀಪ್! ಆದರೆ, ಈ ದಾಳಿಯಿಂದಾಗುವ ಹಾನಿ ಅಪಾರ. ಉದಾಹರಣೆಗೆ ಕಳೆದ ವಾರದ ಮುಂಬೈ ಪ್ರಕರಣವನ್ನೇ ನೋಡಿ. ಕೇವಲ ೧೦ ಉಗ್ರರು ೨೦೦ ಜನರನ್ನು ಕೊಲ್ಲುವುದರ ಜೊತೆಗೆ ಉಂಟು ಮಾಡಿದ ಆರ್‍ಥಿಕ ನಷ್ಟ ಕನಿಷ್ಠ ೫೦೦೦ ಕೋಟಿಗೂ ಅಧಿಕ! ಹತ್ತಾರು ಬಾಂಬ್ ಸಿಡಿಸಿದ್ದರೂ ಇಷ್ಟೊಂದು ಹಾನಿ ಸಂಭವಿಸುತ್ತಿರಲಿಲ್ಲ.

ಸುಲಭ ಲಭ್ಯ ಆಯುಧ : ಫಿದಾಯೀ ದಾಳಿಗೆ ಬೇಕಾದ ಬಂದೂಕು, ಗ್ರೆನೇಡ್‌ನಂಥ ಆಯುಧಗಳು ಸುಲಭಕ್ಕೆ ಸಿಗುತ್ತವೆ. ಅಮೆರಿಕದಂಥ ಕೆಲವು ದೇಶಗಳಲ್ಲಂತೂ ಬಂದೂಕು ಕೊಳ್ಳುವುದು ಕಷ್ಟವೇ ಅಲ್ಲ. ಅವುಗಳ ಸಾಗಾಟ ಕೂಡ ಸುಲಭ. ೯/೧೧ನಂಥ ದಾಳಿಗೆ ವಿಮಾನಗಳಂಥ ದೊಡ್ಡ ಸಾಧನಗಳು ಬೇಕು. ಅವುಗಳ ಸಂಪಾದನೆ ಕಷ್ಟ.

ವಿಫಲಗೊಳ್ಳುವ ಸಾಧ್ಯತೆ ಕಡಮೆ : ೯/೧೧ ಮಾದರಿ ದಾಳಿಯಲ್ಲಿ ಅತ್ಯಂತ ಕೂಲಂಕಷ ಯೋಜನೆ ಬೇಕಾಗುತ್ತದೆ. ಯೋಜನೆಯಲ್ಲಿ ಯಾರು ಸ್ವಲ್ಪ ಏಮಾರಿದರೂ ಇಡೀ ಯೋಜನೆ ವಿಫಲವಾಗುತ್ತದೆ. ಆದರೆ, ಫಿದಾಯೀ ದಾಳಿ ವಿಫಲಗೊಳ್ಳುವ ಸಾಧ್ಯತೆ ಅತ್ಯಂತ ಕಡಿಮೆ. ಅಲ್ಲದೇ, ಸಮಯಕ್ಕೆ ತಕ್ಕಂತೆ ಫಿದಾಯೀ ಉಗ್ರರು ತಮ್ಮ ಯೋಜನೆಗಳನ್ನು ಬದಲಿಸಿಕೊಂಡು ವಿಧ್ವಂಸಕ ಕೃತ್ಯ ನಡೆಸಬಹುದು.

೫. ದೀರ್ಘ ಹಾಗೂ ಅತಿ ಪರಿಣಾಮಕಾರಿ : ೯/೧೧ ಘಟನೆಯಲ್ಲಿ ಎರಡು ವಿಮಾನಗಳು ಡಿಕ್ಕಿ ಹೊಡೆದು ಅವಳಿ ಕಟ್ಟಡಗಳನ್ನು ಉರುಳಿಸಲು ತೆಗೆದುಕೊಂಡ ಅವಧಿ ಕೆಲವು ಗಂಟೆಗಳು ಮಾತ್ರ. ಟೀವಿಯಲ್ಲಿ ನಂತರ ಪ್ರಸಾರವಾದದ್ದೆಲ್ಲ ರಿಪೀಟ್ ಷೋ. ಆದರೆ, ಮೊನ್ನೆಯ ಮುಂಬೈ ಘಟನೆಯನ್ನು ತೆಗೆದುಕೊಳ್ಳಿ. ನಿರಂತರ ಮೂರು ದಿನ ಭಯೋತ್ಪಾದನೆಯ ನೇರ ಪ್ರಸಾರವನ್ನು ಭಾರತದ ಜನ ವೀಕ್ಷಿಸಿದರು. ಟಿಆರ್‌ಪಿ (ವೀಕ್ಷಣೆಯ ಒಂದು ಮಾಪನ) ಕ್ರಿಕೆಟ್ ಪ್ರಸಾರಕ್ಕಿಂತ ಹೆಚ್ಚಿತು. ೨೪ ಗಂಟೆ ಇಂಗ್ಲಿಷ್ ಸುದ್ದಿ ವಾಹಿನಗಳ ಟಿಆರ್‌ಪಿ ೩-೪ ಪಟ್ಟು ಹೆಚ್ಚಾದರೆ, ಹಿಂದಿ ಚಾನಲ್‌ಗಳ ಟಿಆರ್‌ಪಿ ೯ ಪಟ್ಟು ಹೆಚ್ಚಾಯಿತು. ಅಲ್ಲದೇ, ವಿಶ್ವಾದ್ಯಂತ ಜನರು ಈ ಭಯೋತ್ಪಾನೆಯನ್ನು ಗಮನಿಸಿದರು. ಪತ್ರಿಕೆಗಳಲ್ಲಿ ಪುಟಗಟ್ಟಲೆ ಓದಿದರು. ಎಷ್ಟು ಕಡಿಮೆ ಖರ್ಚಿನಲ್ಲಿ ಭಯೋತ್ಪಾದಕರು ಎಷ್ಟು ಪ್ರಚಾರ ಗಿಟ್ಟಿಸಿದರು ನೋಡಿ!

ಈ ಕಾರಣಗಳಿಂದ, ೯/೧೧ ಮಾದರಿ ಭಯೋತ್ಪಾದನೆಗಿಂತ ಫಿದಾಯೀ ಮಾದರಿ ದಾಳಿ ಇನ್ನು ಉಗ್ರರಿಗೆ ಅಚ್ಚುಮೆಚ್ಚಾಗಲಿದೆ ಎಂಬುದು ಜೋಶ್ ಹ್ಯಾಮರ್ ವಾದ.

ಲೋಕಲ್ ಉಗ್ರರ ಸಮಸ್ಯೆ

ಅಮೆರಿಕಕ್ಕೆ ಈಗ ಹೊಸ ಭಯೋತ್ಪಾದನಾ ಸಮಸ್ಯೆ ಎದುರಾಗಿದೆ. ಅದು Home Grown Terrorism ಸಮಸ್ಯೆ. ಅಂದರೆ ಒಂದು ದೇಶದಲ್ಲಿ ಆಂತರಿಕವಾಗಿ ಮೊಳಕೆಯೊಡೆಯುವ ಭಯೋತ್ಪಾದನೆ ಇದು. ಲೋಕಲ್ ಭಯೋತ್ಪಾದಕರ ಕೃತ್ಯ ಎಂದು ಸರಳವಾಗಿ ಹೇಳಬಹುದು. ಈ ವರೆಗೂ, ಭಾರತದಲ್ಲಿ ಈ ಸಮಸ್ಯೆ ತೀವ್ರವಾಗಿತ್ತು. ಅಮೆರಿಕದಲ್ಲಿ ಲೋಕಲ್ ಉಗ್ರರ ಸಮಸ್ಯೆ ಎಷ್ಟಿದೆ ಎಂದು ಪೊಲೀಸ್ ಅಧಿಕಾರಿ ಮಾರ್ಕ್ ವಿಲ್ಬರ್ಟ್ ಅವರನ್ನು ಕೇಳಿದೆ.

’೯/೧೧ ಘಟನೆ ನಂತರ ಅಮೆರಿಕದ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆ Home Grown Terrorism ಸಮಸ್ಯೆ ಕುರಿತು ತೀವ್ರ ಗಮನ ಹರಿಸಿದೆ. ಇಷ್ಟು ವರ್ಷ ಅಮೆರಿಕದ ನೆಲದಲ್ಲೇ ಮೊಳಕೆಯೊಡದ ಆಂತರಿಕ ಭಯೋತ್ಪಾದನೆಯ ಚಿಂತೆ ಇರಲಿಲ್ಲ. ಹಾಗಾಗಿ, ನಮ್ಮ ಗಮನ ಹೊರದೇಶಗಳಿಂದ ಅಮೆರಿಕಕ್ಕೆ ಬರಬಹುದಾದ ಉಗ್ರರ ಬಗ್ಗೆ ಮಾತ್ರ ಹೆಚ್ಚಾಗಿತ್ತು. ಈಗ ಹಾಗಿಲ್ಲ. ಸ್ಥಳೀಯೋತ್ಪಾದಿತ ಉಗ್ರ ಚಟುವಟಿಕೆ ಅಮೆರಿಕದಲ್ಲೂ ಸುಪ್ತವಾಗಿದೆ.’

’೯/೧೧ ನಂತರ ಅಮೆರಿಕದಲ್ಲಿ ಯಾವುದೇ ಗಂಭೀರ ಉಗ್ರಗಾಮಿ ವಿಧ್ವಂಸಕ ಕೃತ್ಯ ನಡೆದಿಲ್ಲ. ಏಕೆಂದರೆ, ಭಾರತದಂತೆ ಅಮೆರಿಕದಲ್ಲಿ ಸ್ಧಳೀಯೋತ್ಪಾದಿತ ಉಗ್ರರು ಹೆಚ್ಚು ಇರಲಿಲ್ಲ. ಭಾರತದ ಸಮಸ್ಯೆ ಎಂದರೆ, ಅಲ್ಲಿ ಲೋಕಲ್ ಉಗ್ರರು ಸಾಕಷ್ಟಿದ್ದಾರೆ. ಸಾಲದು ಎಂಬಂತೆ ಅವರಿಗೆ ಹೊರಗಿನಿಂದ ಪ್ರಚೋದನೆ, ಬೆಂಬಲವೂ ಸಿಗುತ್ತಿದೆ. ಅಲ್ಲದೇ, ಹೊರಗಿನಿಂದ ಭಾರತಕ್ಕೆ ನುಸುಳುವ ಉಗ್ರರ ಸಮಸ್ಯೆಯೂ ಇದೆ. ಹೀಗೆ ದ್ವಿಮುಖ ಸಮಸ್ಯೆಯಲ್ಲಿ ಭಾರತ ಸಿಲುಕಿದೆ.’ ಎನ್ನುತ್ತಾರೆ ಅವರು.

ಬ್ರಿಟನ್, ಫ್ರಾನ್ಸ್, ಭಾರತದಲ್ಲಿ ಲೋಕಲ್ ಉಗ್ರರು

’ಲೋಕಲ್ ಉಗ್ರರ ಸಮಸ್ಯೆ ಬ್ರಿಟನ್, ಫ್ರಾನ್ಸ್ ಸೇರಿದಂತೆ ಯೂರೋಪಿನ ಕೆಲವು ದೇಶಗಳಲ್ಲೂ ಇದೆ. ಹಲವಾರು ವರ್ಷಗಳಿಂದ ಬ್ರಿಟನ್‌ನಲ್ಲಿ ಇಸ್ಲಾಮಿಕ್ ಕಾಲೋನಿಗಳು ಬೀಡುಬಿಟ್ಟಿವೆ. ಅಲ್ಲಿ, ಭಯೋತ್ಪಾದನಾ ಚಟುವಟಿಕೆಗಳು ಮೊಳಕೆಯೊಡೆದವು. ಕೊನೆಗೆ ಈ ಚಟುವಟಿಕೆಗಳು ಎಷ್ಟು ಹೆಚ್ಚಿದವೆಂದರೆ, ಅವರು ಲಂಡನ್‌ನ ಟ್ಯೂಬ್ ರೈಲುಗಳ ಮೇಲೆ ದಾಳಿ ಮಾಡಿದರು. ಈ ಮೊದಲು, ಮ್ಯಾಡ್ರಿಡ್ ರೈಲಿನ ಮೇಲೆ ದಾಳಿ ಮಾಡಿದ್ದೂ ಸ್ಥಳೀಯ ಉಗ್ರರೇ. ಆದ್ದರಿಂದ, ದೇಶದ ಭದ್ರತೆಗೆ ಲೋಕಲ್ ಉಗ್ರರ ಚಟುವಟಿಕೆ ಭಾರೀ ಅಪಾಯಕಾರಿ.’ ಎನ್ನುತ್ತಾರೆ ಕೌನ್ಸಿಲ್ ಆನ್ ಫಾರಿನ್ ರಿಲೇಶನ್ಸ್ ವೆಬ್‌ಸೈಟಿನ ಸಹ ಸಂಪಾದಕ ಎಬೆನ್ ಕಪ್ಲಾನ್.

’ಭಾರತ, ಯೂರೋಪ್‌ನಲ್ಲಿ ಕಂಡ ಅಪಾಯಕಾರಿ ಲೋಕಲ್ ಉಗ್ರಗಾಮಿ ಚಟುವಟಿಕೆ ಈಗ ಅಮೆರಿಕದಲ್ಲೂ ಸ್ವಲ್ಪ ಸ್ವಲ್ಪವಾಗಿ ಕಾಣಿಸುತ್ತಿದೆ. ಇದನ್ನು ನಿಗ್ರಹಿಸುವುದು ನಮ್ಮ ಮುಂದಿರುವ ಸವಾಲು’ ಎನ್ನುತ್ತಾರೆ ಅವರು.

ಇದರ ನಿಗ್ರಹಕ್ಕಾಗಿ ಭಾರತದ ಪೋಟಾ ಕಾಯಿದೆ ಹೋಲುವ Violent Radicalization and Homegrown Terrorism Prevention Bill ಅಮೆರಿಕ ಸಂಸತ್ತಿನಲ್ಲಿ ಕಳೆದ ವರ್ಷ ಮಂಡನೆಯಾಗಿದೆ. ಕೆಳಮನೆಯಲ್ಲಿ ೪೦೪-೬ ಮತಗಳಿಂದ ಅಂಗೀಕಾರವಾಗಿದೆ. ಸೆನೆಟ್‌ನಲ್ಲಿ ಇನ್ನೂ ಅಂಗೀಕಾರ ಅಗಬೇಕಷ್ಟೇ.

ಉಗ್ರ ಚಟುವಟಿಕೆಗೆ ಪ್ರಶಸ್ತ ತಾಣ ಯಾವುದು?

ಯೂರೋಪ್ ಹಾಗೂ ಭಾರತಕ್ಕೆ ಹೋಲಿಸಿದರೆ ಅಮೆರಿಕದಲ್ಲಿ ಮುಸ್ಲಿಂ ಜನಸಂಖ್ಯೆ ಕಡಿಮೆ. ಅದರಲ್ಲೂ ಅಮೆರಿಕದ ಮುಸ್ಲಿಮರು ತಮ್ಮದೇ ಪ್ರತ್ಯೇಕ ಗಲ್ಲಿ, ಕಾಲೋನಿ ಮಾಡಿಕೊಂಡಿಲ್ಲ ಎನ್ನುವುದು ದೊಡ್ಡ ಸಮಾದಾನ. ಈ ಮುಸ್ಲಿಮರು ಸಮಾಜದ ಮುಖ್ಯವಾಹಿನಿಯಲ್ಲಿ ಸೇರಿಹೋಗಿದ್ದಾರೆ. ಆದರೆ, ಲಂಡನ್, ಭಾರತ ಮೊದಲಾದ ಕಡೆ ಮುಸ್ಲಿಮರು ಪ್ರತ್ಯೇಕ ಸಮುದಾಯ ಮಾಡಿಕೊಂಡು ವಾಸಿಸುತ್ತಾರೆ. ಇದು ಭಯೋತ್ಪಾದನೆ ನಿಗ್ರಹದ ದೃಷ್ಟಿಯಿಂದ ಅಪಾಯಕಾರಿ. ಭಯೋತ್ಪಾದನೆಯ ಬೀಜ ಬಿತ್ತುವವರು ಮುಸ್ಲಿಂ ಸಮುದಾಯ ಸಾಕಷ್ಟು ಇರುವ ಗಲ್ಲಿ, ಬಡಾವಣೆಗಳಲ್ಲಿ ಕಾರ್‍ಯಾಚರಣೆ ಮಾಡುತ್ತಾರೆ. ಅಲ್ಲಿ ಉಗ್ರವಾದಿಗಳನ್ನು ಗುರುತಿಸಲು, ಅವರ ಮೇಲೆ ನಿಗಾ ಇಡಲು ಕಷ್ಟ ಅಲ್ಲದೇ, ಅವು ಉಗ್ರರಿಗೆ ಅಡಗಲು ಪ್ರಶಸ್ತ ಸ್ಥಳ. ಇಂತಹ ಪ್ರತ್ಯೇಕ ಮುಸ್ಲಿಂ ಕಾಲೋನಿಗಳು ತಲೆಎತ್ತದಂತೆ ಅಮೆರಿಕ ಎಚ್ಚರಿಕೆ ವಹಿಸುತ್ತಿದೆ ಎನ್ನುತ್ತಾರೆ ಎಬೆನ್.

ಜೈಲು, ಕಾಲೇಜು, ವಿಶ್ವವಿದ್ಯಾಲಯದಲ್ಲಿ ಉಗ್ರರು:

ಹೆಸರು ಹೇಳಲಿಚ್ಚಿಸದ ನ್ಯೂಯಾರ್ಕ್ ಸಿಟಿ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ ಅಮೆರಿಕದಲ್ಲಿ ಈಗಾಗಲೇ ಇಸ್ಲಾಮಿಕ್ ಉಗ್ರರ ಸ್ಥಳೀಯೋತ್ಪಾದನೆ ಆರಂಭವಾಗಿದೆ. ಮುಖ್ಯವಾಗಿ, ಜೈಲು, ಕಾಲೇಜು, ವಿಶ್ವವಿದ್ಯಾಲಯಗಳ ಕ್ಯಾಂಪಸ್‌ಗಳಲ್ಲಿ ಹಾಗೂ ಧಾರ್ಮಿಕ ಕೇಂದ್ರಗಳಲ್ಲಿ ಹೆಚ್ಚಾಗಿ ಇಂತಹ ಸುಳಿವು ಸಿಗುತ್ತಿದೆ ಎಂದು ಎಚ್ಚರಿಸುತ್ತಾರೆ ಅವರು.

ಹಾಗೆಂದು, ಅಮೆರಿಕದಲ್ಲಿರುವ ಮುಸ್ಲಿಮರೆಲ್ಲ ಉಗ್ರರು ಎಂದಲ್ಲ. ಅಮೆರಿಕದ ಅನೇಕ ಮುಸ್ಲಿಮರೇ, ಶಂಕಿತ ಉಗ್ರರ ಮಾಹಿತಿಯನ್ನು ಪೊಲೀಸರಿಗೆ ಒದಗಿಸುತ್ತಾರೆ. ಉದಾಹರಣೆಗೆ: ಒಂದು ವರ್ಷದ ಹಿಂದೆ, ಪಾಕ್ ಮೂಲದ ಅಮೆರಿಕ ಪ್ರಜೆಯೊಬ್ಬ ಅಫಘಾನಿಸ್ತಾನಕ್ಕೆ ಹೋಗಿ ಭಯೋತ್ಪಾದನೆಯ ತರಬೇತಿ ಪಡೆದು ಬಂದಿದ್ದ. ಇದನ್ನು ಇಸ್ಲಾಂ ಸಮುದಾಯದ ವ್ಯಕ್ತಿಯೊಬ್ಬರು ಸ್ಥಳೀಯ ಪೊಲೀಸರ ಗಮನಕ್ಕೆ ತಂದರು ಎಂದು ಅವರು ಹೇಳುತ್ತಾರೆ.

ಮುಂದಿನ ದಾಳಿ ಲೋಕಲ್ ಉಗ್ರರಿಂದ:

ನ್ಯೂಯಾರ್ಕಿನ ಉಗ್ರನಿಗ್ರಹ ವಿಭಾಗದ ನಿವೃತ್ತ ಪೊಲೀಸ್ ಉಪ-ಆಯುಕ್ತ ರಿಚರ್ಡ್ ಫಾಲ್ಕನ್‌ರ್ಯಾಥ್ ಪ್ರಕಾರ -ಅಮೆರಿಕದ ನೆಲದಲ್ಲೇ ಮೊಳಕೆಯೊಡೆದ ಭಯೋತ್ಪಾದನಾ ಕೃತ್ಯಗಳು ಇನ್ನೂ ಹೆಚ್ಚುವ ಸಾಧ್ಯತೆ ಇದೆ. ಅಮೆರಿಕದ ಯಾವುದೇ ನಗರದ ಮೇಲೆ ’ಫಾರಿನ್ ಉಗ್ರರಿಗಿಂತ’ ’ಸ್ಥಳೀಯ ಉಗ್ರರಿಂದ’ ದಾಳಿ ನಡೆಯುವ ಸಾಧ್ಯತೆಯೇ ಅಧಿಕವಾಗಿದೆ. ದಿನ ಕಳೆದಂತೆ ಈ ಆತಂಕ ಹೆಚ್ಚುತ್ತಿದೆ.

ಅಮೆರಿಕ ಈ ಉಗ್ರರನ್ನು ಹೇಗೆ ನಿಗ್ರಹಿಸುತ್ತದೆ?

ಲೋಕಲ್ ಉಗ್ರರನ್ನು ನಿಗ್ರಹಿಸಲು ಅಮೆರಿಕದ ಹೋಮ್ ಲ್ಯಾಂಡ್ ಸೆಕ್ಯುರಿಟಿ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ತನ್ನ ವೀಸಾ ನೀತಿಯನ್ನು ಬಲಗೊಳಿಸಿದೆ. ತನ್ನ ಎಲ್ಲಾ ಗಡಿಗಳಲ್ಲೂ ಭದ್ರತೆ ಹೆಚ್ಚಿಸಿದೆ. ಸಾಗರದ ಮೂಲಕ ಬರುವ ಸರಕನ್ನೂ ವಿಮಾನ ನಿಲ್ದಾಣದ ಮಾದರಿಯಲ್ಲಿ ಪಕ್ಕಾ ಪರಿಶೀಲನೆಗೆ ಒಳಪಡಿಸುತ್ತಿದೆ. ತಂತ್ರಜ್ಞಾನವನ್ನು ಸಾಕಷ್ಟು ಬಳಸಿಕೊಳ್ಳುತ್ತಿದೆ. ಇಸ್ಲಾಮೇತರ ಉಗ್ರರ ಬಗ್ಗು ಎಚ್ಚರ ವಹಿಸಿದೆ. ಎಲ್ಲಕ್ಕಿಂತ ಮುಖ್ಯವಾಗಿ ಅಲ್ಲಿ, ಭದ್ರತಾ ವ್ಯವಸ್ಥೆಯಲ್ಲಿ ರಾಜಕೀಯ ಹಸ್ತಕ್ಷೇಪ ಇಲ್ಲವೇ ಇಲ್ಲ ಮತ್ತು ಭ್ರಷ್ಟಾಚಾರ ಪ್ರಮಾಣ ಅತ್ಯತ್ಪ.

ದಾಳಿಗೆ ೩೦ ನಿಮಿಷದಲ್ಲಿ ಪ್ರತಿದಾಳಿ ನಡೆಸದಿದ್ದರೆ ಅಪಾಯ:

ಅಮೆರಿಕದ ಭದ್ರತಾ ವ್ಯವಸ್ಥೆಗೂ, ಭಾರತದ ಭದ್ರತಾ ವ್ಯವಸ್ಥೆಗೂ ಇರುವ ಬಹುಮುಖ್ಯ ವ್ಯತ್ಯಾಸ ಅಂದರೆ, ಉಗ್ರರ ದಾಳಿಗೆ ಪ್ರತಿದಾಳಿ ನಡೆಸಲು ಭದ್ರತಾ ಪಡೆಗಳು ತೆಗೆದು ಕೊಳ್ಳುವ ಸಮಯ. ಮೊನ್ನೆ ಮುಂಬೈ ದಾಳಿಯ ವೇಳೆ ಉಗ್ರರ ದಾಳಿಗೆ ಪ್ರತಿಯಾಗಿ ಎನ್‌ಎಸ್‌ಜಿ ಕಮಾಂಡೋಗಳು ಪ್ರತಿದಾಳಿ ನಡೆಸಿದ್ದು ಬರೋಬ್ಬರಿ ೧೦ ಗಂಟೆಗಳ ನಂತರ. ಭದ್ರತಾ ತಜ್ಞರ ಪ್ರಕಾರ ಫಿದಾಯೀ ಉಗ್ರರು ದಾಳಿ ನಡೆಸಿದ ೩೦ ನಿಮಿಷದಲ್ಲಿ ಭದ್ರತಾ ಪಡೆಗಳು ಪ್ರತಿದಾಳಿ ನಡೆಸಲು ವಿಫಲವಾದರೆ, ಉಗ್ರರು ಆಯಕಟ್ಟಿನ ಸ್ಥಳದಲ್ಲಿ ಸೇರಿಕೊಂಡು ಮೇಲುಗೈ ಸಾಧಿಸುತ್ತಾರೆ. ಮುಂಬೈ ಫಿದಾಯೀ ಉಗ್ರರ ದಾಳಿಯಲ್ಲಿ ಆದದ್ದು ಇದೇ. ಆದ್ದರಿಂದ ದಾಳಿ ನಡೆದ ಕೇವಲ ೨೦ ನಿಮಿಷದ ಒಳಗಾಗಿ ವಾಯು ದಾಳಿಯೂ ಸೇರಿದಂತೆ ಯಾವುದೇ ದಾಳಿ ನಡೆಸಲು ಅಮೆರಿಕ ಭದ್ರತಾ ಪಡೆಗಳು, ನಗರ ಪೊಲೀಸರು ಸಜ್ಜಾಗಿದ್ದಾರೆ. ಆದರೆ, ಇಷ್ಟು ವೇಗವಾಗಿ ಪ್ರತಿದಾಳಿ ನಡೆಸಲು ಭಾರತದಲ್ಲಿ ಇನ್ನೂ ಸಿದ್ಧತೆ ಸಾಲದು. ಭಾರತದ ಭದ್ರತಾ ವ್ಯವಸ್ಥಾಪಕರು ಅಮೆರಿಕ ಭದ್ರತಾ ತಜ್ಞರಿಂದ ಕಲಿಯ ಬೇಕಾದದ್ದು ಇದನ್ನೇ.



--------------------------------------

ವೈಟ್‌ಹೌಸ್, ಕ್ಯಾಪಿಟಾಲ್ ಒಳಗಡೆ ಪುಕ್ಕಟೆ ಪ್ರವಾಸ!


ವೈಟ್ ಹೌಸ್ ಬೇಲಿಯ ಮುಂದೆ ಪ್ರವಾಸಿಗರ ಸ್ವಚ್ಛಂದ ಓಡಾಟ


ವೈಟ್ ಹೌಸ್ ವಿಸಿಟರ್ ಸೆಂಟರ್ ಮೂಲಕ ಒಳಗಡೆ ಪ್ರವಾಸ

ದೆಹಲಿಯಲ್ಲಿರುವ ನಮ್ಮ ಸಂಸದ್ ಭವನದ ಒಳಗಾಗಲೀ, ರಾಷ್ಟ್ರಪತಿ ಭವನವದ ಒಳಗಾಗಲೀ ಹೋಗುವ, ನೋಡುವ ಭಾಗ್ಯ ನಿಮಗೆ ಸಿಕ್ಕಿಲ್ಲವೇ? ಪರವಾಗಿಲ್ಲ, ಅಮೆರಿಕಕ್ಕೆ ಹೋದರೆ, ಅಲ್ಲಿನ ರಾಷ್ಟ್ರಪತಿ ಭವನ ’ವೈಟ್‌ಹೌಸ್’ ಹಾಗೂ ಸಂಸದ್ ಭವನ ’ಕ್ಯಾಪಿಟಾಲ್’ ಒಳಗೆ ನೀವು ಪುಕ್ಕಟೆ ಪ್ರವಾಸ ಮಾಡಿ ಬರಬಹುದು! ನಮ್ಮ ಸಂಸದ್ ಭವನದ ಸುತ್ತ ಕಾಲು ಮೈಲಿಯಿಂದಲೇ ಭದ್ರತೆ ಶುರು. ಯುದ್ಧ ಭೂಮಿಯಂಥ ಬಂಕರ್‌ಗಳನ್ನು ಸಂಸದ್ ಭವನದ ಮುಂದೆ ಕಾಣಬಹುದು. ಸಂಸದರಿಂದ ಪಾಸ್ ಪಡೆದಿದ್ದರೂ ಒಳಗೆ ಪ್ರವೇಶ ಕಠಿಣ. ಉಳಿದ ಮಾಮೂಲಿ ಪ್ರಜೆಗಳಿಗಂತೂ ಪ್ರವೇಶವೇ ಸಿಗದು. ಪಾಸ್ ಪಡೆದು ಗ್ಯಾಲರಿಗೆ ಹೋದ ವಿಐಪಿಯೂ, ಸಂಸದ್ ಭವನದ ಒಳಗೆಲ್ಲಾ ಸುತ್ತು ಹಾಕಿ ಅಲ್ಲಿನ ಅಂದ ಚೆಂದ ನೋಡಲು ಸಾಧ್ಯವಿಲ್ಲ. ಆದರೆ, ಅಮೆರಿಕದಲ್ಲಿ ವೈಟ್‌ಹೌಸ್ ಹಾಗೂ ಕ್ಯಾಪಿಟಾಲ್‌ಗೆ ಪ್ರತಿದಿನವೂ ಸಾವಿರಾರು ಪ್ರವಾಸಿಗಳಿಗೆ ಉಚಿತ ಪ್ರವೇಶವಿದೆ. ಮೈಸೂರು ಅರಮನೆಯನ್ನೋ, ಹೈದರಾಬಾದಿನ ಸಲಾರ್ ಜಂಗ್ ಮ್ಯೂಜಿಯಮ್ಮನ್ನೋ ನೋಡಿದಷ್ಟು ಸುಲಭವಾಗಿ ವೈಟ್‌ಹೌಸನ್ನೂ, ಕ್ಯಾಪಿಟಾಲನ್ನೂ ನೋಡಬಹುದು. ಅಮೆರಿಕ ರಾಜ್ಯಗಳ ಕ್ಯಾಪಿಟಾಲ್ ನೋಡುವುದಂತೂ ಇನ್ನೂ ಸುಲಭ. ನಾನಂತೂ ಮ್ಯಾಡಿಸನ್ ಕ್ಯಾಪಿಟಾಲ್‌ಗೆ ಹೋಗಿ ಸೆನೆಟರ್‌ಗಳ ಆಸನದಲ್ಲಿ ಕುಳಿತು ಹರಟೆ ಹೊಡೆದು ಬಂದೆ. ನನ್ನನ್ನು ಕ್ಯಾರೆ ಎಂದು ಕೇಳುವವರು ಅಲ್ಲಿ ಯಾರೂ ಇರಲಿಲ್ಲ!